ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಲ್ಪ ಮೋಸ

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ರಾಮರಾಯರು ನಗರದಲ್ಲಿ ಬಹಳ ಜನಪ್ರಿಯರಾಗಿದ್ದವರು. ಅವರು ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಮಾತಿಗೆ ಊರಿ­ನಲ್ಲಿ ಎಲ್ಲರೂ ಬೆಲೆಕೊಡು­ತ್ತಿ­ದ್ದರು. ಅವರು ನಡೆಸಿದಂತಹ ಮೌಲ್ಯದ ಜೀವನವೇ ಅಂತ­­ಹದು. ರಾಮ­ರಾಯರು ಒಂದು ಬಾರಿಯಾದರೂ ತಪ್ಪು ಮಾತನ್ನಾಡಿ­ದ­ವ­ರಲ್ಲ. ತಪ್ಪು ಕೆಲಸ ಮಾಡಿದವರಲ್ಲ, ಮಾತಿನಲ್ಲಿ, ನಡೆ­ಯಲ್ಲಿ ಸದಾ ವಿನಯ, ಪ್ರೀತಿ. ರಾಮರಾಯರಿಗೆ ಇಬ್ಬರು ಮಕ್ಕಳು. ಇಬ್ಬರೂ ಬುದ್ಧಿವಂತರು.

ಚೆನ್ನಾಗಿ ಓದಿ ಉತ್ತಮ ಶಿಕ್ಷಣ ಪಡೆದರು. ಒಬ್ಬ ಮಗ ಎಂಜಿನೀಯರ್ ಆದ, ಮತ್ತೊಬ್ಬ ಮ್ಯಾನೇ­ಜ್‌ಮೆಂಟ್ ಪದವಿ ಪಡೆದ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಪಡೆ­ದರು. ಐದಾರು ವರ್ಷಗಳ ನಂತರ ಇಬ್ಬರೂ ಮಕ್ಕಳು ಕೂಡಿ ಚಿಂತಿಸಿದರು. ತಮಗೀಗ ತಕ್ಕಷ್ಟು ಅನುಭವ ಬಂದಿದೆ. ಇನ್ನು ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡಿ­ಕೊಂಡು ಕೂಡುವ ಬದಲು ತಾವೇ ಒಂದು ಉದ್ಯೋಗವನ್ನು ಪ್ರಾರಂಭಿಸಬೇಕು. ಹೇಗಿ­ದ್ದರೂ ಒಬ್ಬನಿಗೆ ತಂತ್ರಜ್ಞಾನದ ತಿಳಿವಳಿಕೆ ಇದ್ದರೆ ಮತ್ತೊಬ್ಬನಿಗೆ ವ್ಯವಹಾರಿಕ ಕುಶ­ಲತೆ ಇದೆ. ತಂದೆಯ ಹತ್ತಿರ ಈ ವಿಷಯ ತಿಳಿಸಿದರು. ತಂದೆ ಹೇಳಿದರು, ಇದು­ ಒಳ್ಳೆಯದೇ. ನಮ್ಮ ಬುದ್ಧಿವಂತ ತರುಣ ತರುಣಿಯರು ಕೇವಲ ನೌಕರಿ­ಗಾಗಿ ಕೈಚಾಚಿ ಕುಳಿತುಕೊಳ್ಳುವುದಕ್ಕಿಂತ ತಾವೇ ನೌಕರಿ ಸೃಷ್ಟಿಸುವಂತಾದರೆ ತುಂಬ ಒಳ್ಳೆಯದು. ಆದರೆ ಮಕ್ಕಳೇ ಒಂದು ಎಚ್ಚರಿಕೆ. ಚೆನ್ನಾಗಿ ವ್ಯಾಪಾರ ಮಾಡಿ, ಪ್ರಾಮಾಣಿಕವಾಗಿ ಗಳಿಸಿ. ದುಡ್ಡಿನ ಆಸೆಗಾಗಿ ಮೋಸ ಮಾತ್ರ ಎಂದಿಗೂ ಮಾಡ­ಬೇಡಿ.

ಅತಿಯಾದ ಲಾಭಕ್ಕೆ ಆಸೆಪಟ್ಟು ನಿಮ್ಮ ಆತ್ಮಪ್ರಜ್ಞೆಯನ್ನು ಮಾರಿ­ಕೊಳ್ಳ­ಬೇಡಿ. ಮಕ್ಕಳು ಒಪ್ಪಿ ಉದ್ಯೋಗ ಪ್ರಾರಂಭಿಸಿದರು. ಮುಂದಿನ ಎರಡು ವರ್ಷ ಪ್ರಗತಿ ಚೆನ್ನಾಗಿತ್ತು. ಆದರೆ ಒಂದು ದಿನ ರಾಮ­ರಾಯರ ಸ್ನೇಹಿತ­ರೊ­ಬ್ಬರು ಇವರನ್ನು ಭೆಟ್ಟಿಯಾಗಿ ಒಂದು ವಿಷಯ ತಿಳಿಸಿದಾಗ ರಾಮ­ರಾಯರಿಗೆ ಬಹಳ ಕಸಿವಿಸಿಯಾ­ಯಿತು. ಅವರು ತಿಳಿಸಿದಂತೆ ರಾಮ­ರಾಯರ ಮಕ್ಕಳು ಪ್ರಾಮಾ­­ಣಿಕವಾಗಿ ವ್ಯವಹಾರ ಮಾಡುತ್ತಿಲ್ಲ. ಅಲ್ಲಲ್ಲಿ ಅವರ ಬಗ್ಗೆ, ಅವರ ವ್ಯವ­ಹಾ­ರದ ಬಗ್ಗೆ ಕೆಟ್ಟ ಮಾತು ಕೇಳಿಬರುತ್ತಿದೆ. ರಾಮರಾ­ಯರು ಮಕ್ಕ­ಳನ್ನು ಕರೆದು ಈ ಬಗ್ಗೆ ಕೇಳಿದಾಗ ಅವರು ಹೇಳಿದರು, ‘ಅಂತಹ ಭಾರಿ ಮೋಸ ಏನಲ್ಲಪ್ಪ. ವ್ಯಾಪಾರ ಎಂದರೆ ಸಣ್ಣಪುಟ್ಟ ಇದ್ದದ್ದೇ. ನೀವೇನೂ ತಲೆಕೆಡಿಸಿಕೊಳ್ಳ­ಬೇಡಿ. ಅಷ್ಟು ಮೌಲ್ಯ­ಗಳನ್ನು ಇಟ್ಟು­ಕೊಂಡರೆ ವ್ಯವಹಾರ ಮಾಡುವುದು ಹೇಗೆ? ಈ ಸಣ್ಣಪುಟ್ಟ ಮೋಸಗಳು ನಡೆದೇ ನಡೆಯುತ್ತವೆ’. ರಾಮ­ರಾಯರು ಸುಮ್ಮನಾದರು.

ಮರುದಿನ ಮನೆಯಲ್ಲಿ ಯಾವುದೋ ಹಬ್ಬ. ರಾಮರಾಯರು ಬೇಗ ಎದ್ದು ಹೆಂಡ­ತಿಗೆ ಹೇಳಿ ಶ್ಯಾವಿಗೆ ಪಾಯಸ ಮಾಡಿಸಿದರು. ಊಟಕ್ಕೆ ಕೂಡುವ ಮೊದಲು ಮಕ್ಕ­ಳನ್ನು ಮುಂದೆ ಕೂಡ್ರಿಸಿಕೊಂಡು ಹೇಳಿದರು, ‘ಮಕ್ಕಳೇ ಇಂದು ಹಬ್ಬ. ನಾನೇ ವಿಶೇಷ­ವಾಗಿ ಈ ಪಾಯಸ ಮಾಡಿಸಿದ್ದೇನೆ. ಅತ್ಯಂತ ಉತ್ಕೃಷ್ಟವಾದ ಶ್ಯಾವಿಗೆ ತಂದು, ಹಸುವಿನ ತುಪ್ಪದಲ್ಲೇ ಕರಿದು, ದೇಸಿ ಹಸುವಿನ ಹಾಲಿನಲ್ಲೇ ಬೇಯಿಸಿದೆ. ಅದ­ರಲ್ಲಿ ಒಂದು ಚಮಚೆಗೆ ನಾಲ್ಕು ನಾಲ್ಕು ಬರುವಂತೆ ಗೋಡಂಬಿ, ದ್ರಾಕ್ಷಿ ಹಾಕಿ­ದ್ದೇನೆ. ಏಲಕ್ಕಿ ಬೇಕಾದಷ್ಟು ಬಿದ್ದಿದೆ. ಕೇಸರಿಯನ್ನು ಹಾಕಿದ್ದೇನೆ. ನೋಡಿ, ಹೇಗೆ ಘಮ, ಘಮ ವಾಸನೆ ಬರುತ್ತಿದೆ. ದಯವಿಟ್ಟು ಸಂತೋಷವಾಗಿ ತಿನ್ನಿ. ಆದರೆ ಒಂದು ವಿಷಯ, ಇವೆಲ್ಲದರ ಜೊತೆಗೆ ಇನ್ನೊಂದನ್ನೂ ಬೆರೆಸಿದ್ದೇನೆ. ನಮ್ಮ ನಾಯಿ ಮನೆಯ ಮುಂದೆ ಹೊಲಸು ಮಾಡಿತ್ತಲ್ಲ ಅದರಲ್ಲೇ ಒಂದು ಚೂರನ್ನು, ಬಹ­ಳ­ವಲ್ಲ ಸ್ವಲ್ಪನ್ನೇ ಬೆರೆಸಿಬಿಟ್ಟಿದ್ದೇನೆ. ಅದರ ವಾಸನೆ ಏನೂ ಬರುವುದಿಲ್ಲ. ಅದು ಸ್ವಲ್ಪ ತಾನೇ ಇದ್ದದ್ದು. ದಯವಿಟ್ಟು ತಿನ್ನಿ’. ಹುಡು­ಗರು ಮುಖ ಹುಳ್ಳಗೆ ಮಾಡಿ­ದರು.

ಹೊಟ್ಟೆ ತೊಳಸಿ ಬಂದಂತಾಯಿತು. ಅಪ್ಪ ಹೇಳಿದರು, ‘ಯಾಕಪ್ಪ ಬೇಜಾರು? ಪಾಯಸದಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ. ಸ್ವಲ್ಪ ಸೆಗಣಿ ಇದ್ದರೇ­ನಾ­ಯಿತು?’ ಒಬ್ಬ ಮಗ ಕೇಳಿದ ‘ಏನಪ್ಪ ಅಸಹ್ಯ ಇದು? ಸ್ವಲ್ಪ ಏನು, ಹೆಚ್ಚೇನು? ಸೆಗಣಿ, ಸೆಗಣಿಯೇ ಅಲ್ಲವೇ? ಅದನ್ನು ತಿನ್ನಲಾಗುತ್ತದೆಯೇ?’ ತಕ್ಷಣ ರಾಮ­ರಾಯರು ಕೇಳಿದರು, ‘ಮಕ್ಕಳೇ, ಹೀಗೆಯೇ ಸ್ವಲ್ಪ ಅನ್ಯಾಯ, ದೊಡ್ಡ ಅನ್ಯಾಯ ಎಂದು ಇದೆಯೇ? ಅನ್ಯಾಯ ಅನ್ಯಾಯವೇ ಅಲ್ಲವೇ? ಮೋಸ ಮೋಸವೇ ಅಲ್ಲವೇ?’ ಹುಡುಗರಿಗೆ ತಂದೆ ಕಲಿಸಿದ ಪಾಠ ಅರ್ಥವಾಯಿತು.  ಸ್ವಲ್ಪ ತಿಂದರೂ ಅಷ್ಟೇ, ಹೆಚ್ಚು ತಿಂದರೂ ಅಷ್ಟೇ. ಒಟ್ಟು ಮೋಸದ ವ್ಯಾಪಾರ­ವೆಂದರೆ ಅದು ಸೆಗಣಿ ತಿನ್ನುವ ವ್ಯವಹಾರ. ನಾನು ಬಾವಿಯಲ್ಲಿ ಸ್ವಲ್ಪವೇ ಹಾರಿಕೊಂಡಿದ್ದೇನೆ ಎಂದರೆ ಏನರ್ಥ? ಹಾರಿದರೆ ತಳವನ್ನೇ ತಲುಪಬೇಕು. ಒಂದು ಬಾರಿ ಸ್ವಲ್ಪ ಮೋಸಕ್ಕೆ ಮನ ಮಾಡಿದರೆ ಅದು ಜಾರುತ್ತಲೇ ಹೋಗು­ತ್ತದೆ. ಮನಸ್ಸು ಅದಕ್ಕೇ ಹೊಂದಾ­ಣಿಕೆ ಮಾಡಿಕೊಳ್ಳುತ್ತಾ ಹೋಗಿ ಪ್ರಪಾತವನ್ನೇ ತಲುಪಿಸುತ್ತದೆ. ಸದಾ ಜಾಗ್ರತೆ ಬಹಳ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT