ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗಿನಲ್ಲಿ ಪ್ರಕ್ಷುಬ್ಧ ದಿನ

Last Updated 18 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನನ್ನ ಗ್ರಹಿಕೆಯ ಅಲಾಸ್ಕ ಭಾಗ 10

ಪ್ರವಾಸ ಎಂದರೆ ಬರಿಯ ನಯನ ಮನೋಹರ ದೃಶ್ಯಾವಳಿಗಳ ಹರಿಕಥೆಯಲ್ಲ. ಅದು ಸಹಜವಾಗಿ ಅನಾವರಣಗೊಳ್ಳುವ ಮನುಷ್ಯಲೋಕದ ಬಗೆಬಗೆಯ ಚಿತ್ರಗಳ ಹೃದಯಂಗಮ ಅಧ್ಯಾಯಗಳ ಕಥೆ. ಆ ದಿನವೆಲ್ಲ ಬರಿಯ ನೆಗೆಟಿವ್ ಎನರ್ಜಿಯದೇ ದೆವ್ವಗುಣಿತ. ತಮಾಷೆಯ ಯಾವುದಾದರೂ ಸಿನಿಮಾ ನೋಡೋಣ ಅಂತ ಮೂವೀಸ್ ಅಂಡರ್ ದಿ ಸ್ಟಾರ್‍ಸ್ ಚಿತ್ರಮಂದಿರದ ಎದುರು ಕುಳಿತರೆ ಭಾರೀ ಗೋಳಿನ ಕತೆ ಶುರುವಾಗಿತ್ತು. ಅವಮಾನ ತಾಳಲಾರದೆ ತನ್ನ ರೀಲುಗಳಿಗೆ ಬೆಂಕಿ ಹಚ್ಚಿ ಸಾಯಲು ಪ್ರಯತ್ನಿಸುವ, ಬೇಡಿಕೆ ಕಳೆದುಕೊಂಡ ಹೀರೊ ಒಬ್ಬನನ್ನು ಕಾಪಾಡಲು ಅವನ ತ್ಯಾಗಮಯಿ ಪ್ರಿಯತಮೆ ಪರದಾಡುತ್ತಿದ್ದಳು. ಅವಳೋ ಬೇಡಿಕೆಯ ತಾರೆ. ಒಂದು ಕಾಲಕ್ಕೆ ಅವಳನ್ನು ಉದ್ಯಮಕ್ಕೆ ಪರಿಚಯಿಸಿದ್ದವನು ಇವನೇ. ಅವಳಿಗೆ ಅನುಕಂಪದ ರೋಗ, ಇವನಿಗೆ ಸ್ವಾಭಿಮಾನದ ರೋಗ. ಗುಂಡು ಹಾರಿಸಿಕೊಂಡು ಮತ್ತೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ನಿಯತ್ತಿನ ನಾಯಿ ಅವಳಿಗೆ ಸುದ್ದಿ ಮುಟ್ಟಿಸುತ್ತದೆ. ಓಡೋಡಿ ಬರುವಾಗ ಅವಳ ಕಾರು ಅಪಘಾತಕ್ಕೊಳಗಾಗುತ್ತದೆ... ಆ ಸಿನಿಮಾ ಹೆಸರನ್ನು ತಿಳಿಯುವ ಕುತೂಹಲವೂ ಇಲ್ಲವಾಗಿ ತಲೆ ಕೆಟ್ಟು ಮೇಲೆದ್ದೆ.

ಇಬ್ಬರು ಅವಿವೇಕಿಗಳು ವಿನಾಕಾರಣ ಜಗಳಕ್ಕೆ ಬಿದ್ದರು. ಓಪನ್ ಡೆಕ್‌ನಲ್ಲಿ ಬೆಂಚಿನ ಮೇಲೆ ಒಬ್ಬ ಕುಳಿತು ಸಮುದ್ರದ ಫೋಟೊ ತೆಗೆಯುತ್ತಿದ್ದ. ಅವನ ಬದಿಗೆ ಬಂದ ಇನ್ನೊಬ್ಬ ಅನುಮತಿ ಕೇಳದೆ ಕುಳಿತ. ‘ನಾನು ನನ್ನವರಿಗೆ ಕಾದಿರಿಸಿದ್ದೇನೆ; ಅನುಮತಿ ಇಲ್ಲದೆ ಕೂರುವುದು ಅನಾಗರಿಕ ನಡವಳಿಕೆ; ಎದ್ದು ಹೋಗು’ ಎಂದು ಈತ ಒರಟಾಗಿ ಹೇಳಿದ. ಅದಕ್ಕೆ ಅವನು ‘ಇದೇನು ಕಾಯ್ದಿರಿಸುವ ಜಾಗ ಅಲ್ಲ ; ನೀನು ವಿನಯದಿಂದ ಕೇಳಿದ್ದರೆ ಬಿಟ್ಟುಕೊಡುತ್ತಿದ್ದೆ. ನನ್ನಿಷ್ಟ. ನಾನಿಲ್ಲೇ ಕೂರುತ್ತೇನೆ’ ಎಂದ. ಇಬ್ಬರೂ ಸಣ್ಣಕಣ್ಣಿನ ಚೀನೀ ಸಂಜಾತರು. ಅವರ ಭಾಷೆಯ ಒಂದಕ್ಷರವೂ ತಿಳಿಯಲಿಲ್ಲ. ಆದರೆ ಅವರ ಆಂಗಿಕ ಚಲನೆ ಮತ್ತು ಮಾತಿನ ಬಿರುಸನ್ನು ಆಧರಿಸಿ ಅವರ ಜಗಳದ ಆರೋಹಣವನ್ನು ಊಹಿಸತೊಡಗಿದೆ. ಸಿನಿಮಾದಲ್ಲಿ ಪಾತ್ರಧಾರಿಯ ತುಟಿಚಲನೆಗೆ ತಕ್ಕಂತೆ ಪರಿಣಾಮಕಾರಿಯಾಗಿ ಮಾತುಗಳನ್ನು ಜೋಡಿಸುವುದಕ್ಕೆ ಡಬ್ಬಿಂಗ್ ಅನ್ನುತ್ತೇವೆ. ಆ ಇಬ್ಬರು ಜಗಳಗಂಟರ ತುಟಿ ಚಲನೆಗೆ ಕನ್ನಡದ ಬೈಗುಳಗಳನ್ನು ಕಲ್ಪಿಸಿಕೊಂಡು ಡಬ್ ಮಾಡಿಕೊಳ್ಳತೊಡಗಿದೆ. ಇದರ ಬದಲು ಜಗಳ ಬಿಡಿಸಬಹುದಿತ್ತು. ನೀನ್ಯಾವನಯ್ಯಾ ಕೇಳೋದಿಕ್ಕೆ ಅಂತ ಇಬ್ಬರೂ ನನ್ನತ್ತ ತಿರುಗುವ ಸಾಧ್ಯತೆಯೂ ಇತ್ತು. ಅದಕ್ಕಿಂತ ಅವರು ಯಾವ ರೇಂಜ್‌ನಲ್ಲಿ ಜಗಳವಾಡುತ್ತಾರೆ ಎಂದು ನೋಡುವ ಕುತೂಹಲವಿತ್ತು.

ಒಬ್ಬ ಸಣಕಲ, ಇನ್ನೊಬ್ಬ ದಡಿಯ. ಸಣಕಲನ ಹಾರಾಟವೇ ಜೋರಿತ್ತು. ದಡಿಯ ಒಂದು ಮಡಗಿದರೆ ಅಪ್ಪಚ್ಚಿಯಾಗುವಂತಿದ್ದ. ಯುದ್ಧಕ್ಕೆ ರೆಡಿಯಾಗಿ ಬಂದಿದ್ದವನಂತೆ ಸಣಕಲ ಚಾಕು ತೆಗೆದ. ತಾಕತ್ತಿದ್ದರೆ ಚುಚ್ಚು ಎಂದು ದಡಿಯ ಎದೆ ಒಡ್ಡಿದ. ಹಡಗಿನ ಭದ್ರತಾ ಸಿಬ್ಬಂದಿ ಬಂದರು. ಇಬ್ಬರನ್ನೂ ಕರೆದುಕೊಂಡು ಹೋದರು. ಒಣಪ್ರತಿಷ್ಠೆಯ ಕೋಳಿ ಜಗಳ. ಬೆಂಗಳೂರಿನ ಇಕ್ಕಟ್ಟಾದ ರಸ್ತೆಯ ಟ್ರಾಫಿಕ್‌ನಲ್ಲಿ ಜಗಳವಾಡುವವರಿಗೆ ಜಾಗದ ಕೊರತೆ ಎಂಬ ಒಂದು ಬಲವಾದ ಕಾರಣವಾದರೂ ಇರುತ್ತದೆ. ಆಗ ಅಲ್ಲಿ ಇಂಗ್ಲಿಷ್ ಸಭ್ಯರೆಲ್ಲ, ಕೋಪಗೊಂಡೊಡನೆ ಮಾತೃಭಾಷೆಗೆ ಮರಳಿ, ಅಮೃತವಾಕ್ಕುಗಳನ್ನು ಉದುರಿಸುತ್ತಾರೆ. ಕೊರತೆ ಇದ್ದಾಗ ಕಾದಾಟ, ಸ್ಪರ್ಧೆ ಸಹಜ. ಅಲ್ಲಿ ಬೇಕಾದಷ್ಟು ಬೆಂಚುಗಳು ಖಾಲಿ ಇದ್ದವು. ಅದುವರೆಗೆ ಹಡಗಿನಲ್ಲಿ ಮುಗುಳ್ನಗೆಲೇಪಿತ ಪ್ಲೀಸ್, ಸಾರಿ, ಎಕ್ಸ್‌ಕ್ಯೂಸ್‌ಮಿಗಳನ್ನೇ ಕೇಳುತ್ತಿದ್ದವನಿಗೆ ಮನುಷ್ಯನ ವ್ಯಕ್ತಿತ್ವದ ನಿಜಾವಸ್ಥೆಯನ್ನು ಕಂಡು ಖೇದವೆನಿಸಿತು. ಮನುಷ್ಯ ಎಂಥ ಸಂಕೀರ್ಣ ಪ್ರಾಣಿ ಎಂದರೆ, ನಾಗರಿಕತೆ, ಶಿಷ್ಟತೆಗಳ ಹೊದಿಕೆ ಎಷ್ಟು ಹೊದ್ದರೂ ತಟಕ್ಕನೆ ಮೃಗೀಯತೆ ಜಾಗೃತವಾಗಿಬಿಡುತ್ತದೆ. ಅಪರಿಚಿತರೊಂದಿಗೆ ಅಕಾರಣವಾಗಿ ಭುಗಿಲೆನ್ನುವ ಅತಾರ್ಕಿಕ ಮತ್ತು ಸಂಯಮಾತೀತ ನಡವಳಿಕೆಗಳು ಇದಕ್ಕೆ ಉದಾಹರಣೆ.

ತನ್ಮಯವಾಗಿ ಫೋಟೊ ಕ್ಲಿಕ್ಕಿಸುವಾಗ ಶಾಂತಸ್ವರೂಪಿ ಕಲಾಕಾರನಂತಿದ್ದವನು ಮರುಕ್ಷಣ ಕೋಪ ಉಗುಳತೊಡಗಿದ್ದು ಹೇಗೆ ?
ಉಗುರುಬೆಚ್ಚಗಿನ ನೀರು ತುಂಬಿದ್ದ ಈಜುಕೊಳಕ್ಕೆ ಬಿದ್ದೆ. ಕಡಲು ಎಷ್ಟು ಮುನಿದಿತ್ತು ಎಂದರೆ ಈಜುಕೊಳದ ನಡುವಿನಿಂದ ನನ್ನನ್ನು ದಂಡೆಗೆ ಎಸೆದಂತಾಗುತಿತ್ತು. ಚೆಲ್ಲಿದ ನೀರು ಮತ್ತೆ ಕೊಳಕ್ಕೆ ತುಂಬಿಕೊಳ್ಳುತ್ತಿತ್ತು. ನೀರ ತೂಗುಯ್ಯಾಲೆಯಲ್ಲಿ ತೂಗಿ ಬಸವಳಿದೆ. ಈಜಿನ ರಿದಂ ಸರಿಬರಲಿಲ್ಲ. ಮುನಿದ ಕಡಲ ತೀರದಲ್ಲಿ ಈಜಿದ ಅನುಭವ. ಇಂಥ ಹೊತ್ತಲ್ಲಿ ಈಜುತ್ತಿರುವ ಹುಚ್ಚ ಇವನ್ಯಾರು ಎಂಬಂತೆ ಕೆಲವರು ನೋಡುತ್ತಿದ್ದಾರೆ ಎನಿಸಿತು. ಮಿಂಚು. ಗುಡುಗು. ಡೈಮಂಡ್ ಪ್ರಿನ್ಸೆಸ್ ಸಾಹಸದಿಂದ ಮುನ್ನಡೆಯುತ್ತಿದ್ದಳು. ಪ್ರವಾಸಿಗರಲ್ಲಿ ಏನೋ ಒಂದು ಬಗೆಯ ಮಂಕು ಕವಿದಂತೆ ಕಾಣಿಸುತ್ತಿತ್ತು. ದೈನಂದಿನ ವಾರ್ತಾಪತ್ರ ಪ್ರಿನ್ಸೆಸ್ ಪ್ಯಾಟರ್‌ನಲ್ಲಿ ಹಡಗು ಈ ರಾತ್ರಿ ಸ್ಟೀಫನ್ ಪ್ಯಾಸೇಜ್ ಮೂಲಕ ಹಾದು ಉತ್ತರಕ್ಕೆ ಹೋಗಿ ಗಾಸ್ಟಿನೋ ಚಾನೆಲ್ ದಾಟುತ್ತದೆಂದು ಪ್ರಕಟಿಸಿತ್ತು. ಇನ್ನು ಮುಂದೆ ಅಸಂಖ್ಯ ಗ್ಲೇಸಿಯರ್‌ಗಳು ಎದುರಾಗಲಿದ್ದವು. ಅವುಗಳ ದರ್ಶನವೇ ಈ ಯಾತ್ರೆಯ ನಿಜವಾದ ಕ್ಲೈಮ್ಯಾಕ್ಸ್ ಎಂದು ಬಿಂಬಿಸಲಾಗುತ್ತದೆ. ಆದರೆ ಇತರ ಅನೇಕ ರೋಚಕಗಳಂತೆ ಗ್ಲೇಸಿಯರ್ ದರ್ಶನವೂ ಒಂದು. ಕಾರಣ ಗ್ಲೇಸಿಯರ್‌ಗೂ ನದಿಗೂ, ನದಿಗೂ ಕಡಲಿಗೂ, ಕಡಲಿಗೂ ಮಳೆಗೂ, ಮಳೆಗೂ ಕಾಡಿಗೂ, ಕಾಡಿಗೂ ಪ್ರಾಣಿಗಳಿಗೂ, ಪ್ರಾಣಿಗಳಿಗೂ ಮನುಷ್ಯನಿಗೂ ಬಿಡಿಸಲಾಗದ ನಂಟಿದೆ. ಒಂದನ್ನೇ ಪ್ರತ್ಯೇಕವಾಗಿ ಪರಿಗಣಿಸುವಂತಿಲ್ಲ. ಅದರಿಂದ ಪೂರ್ಣಾನುಭವ ದಕ್ಕಲಾರದು.

ಊಟಕ್ಕೆ ಕುಳಿತಿದ್ದಾಗ ಹೊಸ ಗುಟ್ಟು ಹೇಳುವವನಂತೆ ಒಬ್ಬ ಚೀನಿ ಹತ್ತಿರ ಬಂದು ‘ನಿನಗೊಂದು ವಿಷ್ಯ ಗೊತ್ತಾ?’ ಎಂದ. ನಾನು ಉತ್ತರಿಸುವ ಮುನ್ನವೇ ‘ನಿಮ್ಮ ದೇಶದಲ್ಲಿದ್ದಾಗ ಬುದ್ಧ ಹೆಣ್ಣಾಗಿದ್ದ; ನಮ್ಮ ದೇಶಕ್ಕೆ ಬಂದ ಮೇಲೆ ಗಂಡಾಗಿ ಪರಿವರ್ತನೆಗೊಂಡ’ ಎಂದ. ಈ ವ್ಯಾಖ್ಯಾನ ನಾನು ಕೇಳಿರಲೇ ಇಲ್ಲ. ಇಂಥ ಕತೆಯೊಂದು ಚೀನಾದಲ್ಲಿ ಪ್ರಚಲಿತವಿದೆಯಂತೆ. ನನಗೆ ಅಚ್ಚರಿಯಾಯಿತು. ಚರಿತ್ರೆ ಮತ್ತು ಪುರಾಣಗಳನ್ನು ತಮಗೆ ಬೇಕಾದ ಬಿಂದುವಿನಲ್ಲಿ ಬೆರೆಸಿಕೊಳ್ಳುವುದರಲ್ಲಿ ಜನರು ನಿಷ್ಣಾತರು. ನಾನು ಅವನ ವ್ಯಾಖ್ಯಾನವನ್ನು ಒಪ್ಪದೆ ನಿರಾಕರಿಸಿದರೆ ಅವನು ಅಹೋರಾತ್ರಿ ನನ್ನನ್ನು ನಂಬಿಸಲು ಕತೆಗಳನ್ನು ತಯಾರು ಮಾಡಿಕೊಂಡು ಬಂದಿರುವಂತೆ ತೋರಿತು. ಅಪಾಯವನ್ನರಿತವನು ಇರಬಹುದು ಎಂದೆ. ಕಾರಣ ಅಂಥದ್ದೊಂದು ಗಹನ ಚರ್ಚೆಗೆ ಬೇಕಾದ ಮನಸ್ಥಿತಿ ನನ್ನಲ್ಲಿ ಇರಲಿಲ್ಲ. ಅವನ ಕೈಯ್ಯಲ್ಲಿ ಗ್ಲಾಸ್ ಬೇರೆ ಇತ್ತು. ನನಗೆ ಬುದ್ಧ ಗಂಡೋ ಹೆಣ್ಣೋ ಎನ್ನುವುದಕ್ಕಿಂತ ಅವನು ಏನು ಹೇಳಿದ್ದಾನೆ ಎನ್ನುವುದಷ್ಟೇ ಮುಖ್ಯ ಎಂದು ಹೇಳಿ ಚರ್ಚೆಯನ್ನು ಮೊಟಕುಗೊಳಿಸಲು ಯತ್ನಿಸಿದೆ. ಆದರೆ ಅವನಿಗೆ ನನ್ನನ್ನು ಬಿಟ್ಟು ಹೋಗುವ ಔದಾರ್ಯವಿದ್ದಂತಿರಲಿಲ್ಲ. ತನ್ನ ವೈಯಕ್ತಿಕ ಪ್ರವರ ಬಿಚ್ಚಿದ.

ಅವನು ಚೀನಾದಿಂದ ವಲಸೆ ಬಂದು ಈಗ ಅಮೆರಿಕನ್ ಪೌರತ್ವ ಪಡೆದು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದಾಗಿ, ಸ್ಯಾನ್ ಫ್ರಾನ್ಸಿಸ್‌ಕೋ ನಗರದಲ್ಲಿರುವುದಾಗಿ, ಸ್ವಂತ ಮನೆ ಹೊಂದಿರುವುದಾಗಿ, ಅಮೆರಿಕನ್ ಹುಡುಗಿಯನ್ನು ಮದುವೆಯಾಗಿರುವುದಾಗಿ ಕೇಳದಿದ್ದರೂ ವಿವರಿಸತೊಡಗಿದ. ‘ಭಾರತಕ್ಕೆ ಸಂಬಂಧಿಸಿದ ಒಂದು ಪ್ರಶ್ನೆ ಕೇಳಲೆ’ ಎಂದ. ನಾನು ಸಮ್ಮತಿಸುವ ಮೊದಲೇ ಭಾರತ ಹೇಗಿದೆ? ಎಲ್ಲಿದೆ ? ನಾನು ಅಮೆರಿಕಾ, ಚೀನಾ ಬಿಟ್ಟು ಆಚೆ ಹೋದವನೇ ಅಲ್ಲ. ಪಾಕಿಸ್ತಾನ ಎಂಬ ನಗರ, ಭಾರತ ದೇಶದ ಯಾವ ಭಾಗದಲ್ಲಿದೆ? ಆ ನಗರವನ್ನು ಭಾರತ ಏಕೆ ವಶಪಡಿಸಿಕೊಂಡಿದೆ? ಚೀನಾ ದೇಶವು ಹಾಂಗ್‌ಕಾಂಗ್ ನೋಡಿಕೊಳ್ಳುತ್ತಿರುವಂತೆ, ಭಾರತ ದೇಶವು ಪಾಕಿಸ್ತಾನವೆಂಬ ನಗರವನ್ನು ನೋಡಿಕೊಳ್ಳುತ್ತಿದೆಯೆ ?... ಇಂಥ ಮೂರ್ಖಾತಿಮೂರ್ಖ ಅಸಂಬದ್ಧ ಪ್ರಶ್ನೆಗಳು. ಅದೂ ಅಮೆರಿಕಾದ ಪೊಲೀಸ್ ಒಬ್ಬನಿಂದ ! ಆತನಿಗೆ ಭಾರೀ ಕ್ಲಾಸು ತೆಗೆದುಕೊಂಡು ಜ್ಞಾನೋದಯವನ್ನುಂಟುಮಾಡುವ ತಾಳ್ಮೆ ನನಗಿರಲಿಲ್ಲ. ವಾಸ್ತವಗಳನ್ನು ಒಂದೆರಡು ಮಾತಿನಲ್ಲಿ ವಿವರಿಸಿ ಸಾಗಹಾಕಿದೆ.

ಅಮೆರಿಕಾದ ಹಲವು ಪೌರರು ತಮ್ಮ ದೇಶದಾಚೆಗೆ ಏನನ್ನೂ ಖಚಿತವಾಗಿ ತಿಳಿದಿರದ ದಡ್ಡಶಿಖಾಮಣಿಗಳಾಗಿರುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಇಂಥ ಅನೇಕ ಘಟನೆಗಳು ನನಗೆ ಎದುರಾಗಿವೆ. ಅಂಥವರಿಗೆ ಜಗತ್ತು ಎಂದರೆ ಅಮೆರಿಕಾ ಮಾತ್ರ. ಈ ಮಾತನ್ನು ಅನೇಕ ರೀತಿಗಳಲ್ಲಿ ಅರ್ಥೈಸಬಹುದು. ನನ್ನ ಮುನ್ನೂರ ಹದಿನೈದನೇ ನಂಬರಿನ ಕ್ಯಾಬಿನ್‌ಗೆ ಬಂದು ಕುಳಿತೆ. ಹೊರಗೆ ಸಿಡಿಲಿನ ಆರ್ಭಟ. ಹಿಮಬಂಡೆಗಳು ಕುಸಿದು ನೀರಿಗೆ ಬೀಳುವ ಭಾರೀ ಸದ್ದು. ಅಮ್ಮ ನೆನಪಾದಳು. ನಾಗತಿಹಳ್ಳಿಗೆ ಕರೆ ಮಾಡಿದೆ. ಹದಿಮೂರು ಗಂಟೆ ಹಿಂದಕ್ಕೆ ಲೆಕ್ಕ ಹಾಕಿದರೆ ಅಲ್ಲೀಗ ಬೆಳಗಿನ ಹತ್ತು ಗಂಟೆ. ಶತಪ್ರಯತ್ನ ಮಾಡಿದರೂ ಲೈನ್ ಸಿಗಲಿಲ್ಲ. ಒಮ್ಮೆ ರಿಂಗ್ ಆದರೂ ಅಮ್ಮ ಎತ್ತಿಕೊಳ್ಳಲಿಲ್ಲ. ಆತಂಕ ಹೆಚ್ಚಾಯಿತು. ಅಮ್ಮ ಹಿಮಬಂಡೆಯಂಥ ಜೀವ. ಅಷ್ಟೇ ಬೇಗ ಕರಗಬಲ್ಲವಳು. ಹೊರಡುವ ಮುನ್ನ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿಸಿ ಮಡಿಲ ತುಂಬಾ ಮಾತ್ರೆ, ಟಾನಿಕ್ಕು ಸುರಿದು ಬಂದಿದ್ದೆ. ಕಿವಿ ಮಂದವಾಗಿದೆ. ರಿಂಗ್ ಆದರೂ ಕೇಳಿಸುವುದಿಲ್ಲ. ಹಿಯರಿಂಗ್ ಏಡ್ ಕೊಡಿಸಿದ್ದೆ. ಅದರಲ್ಲೂ ಒಂದನ್ನು ಮುರಿದುಕೊಂಡಿದ್ದಾಳೆ. ಬ್ಯಾಟರಿ ಬದಲಿಸಲು ಗೊತ್ತಾಗುವುದಿಲ್ಲ. ವಯಸ್ಸಾದವರಿಗೆ ಅವರ ಅಂಗಾಂಗಗಳು ಅವಿಧೇಯವಾಗುವುದು ಮಾತ್ರವಲ್ಲ; ತಮ್ಮ ಸುತ್ತಣ ಪರಿಸರವೇ ಅಸಹಕಾರ ಚಳುವಳಿಗೆ ತೊಡಗುತ್ತವೆ.

ಹೊರಗೆ ದಡಬಡ ಸದ್ದಾಯಿತು. ಯಾರೋ ಗುಂಪುಗುಂಪಾಗಿ ಓಡುತ್ತಿರುವ ಸದ್ದು. ಅಂಬುಲೆನ್ಸ್‌ನ ಅಲಾರಂ. ಗಾಬರಿಯಾಗಿ ಬಾಗಿಲು ತೆಗೆದೆ. ಕ್ಯಾಬಿನ್ ಎದುರಿನ ಪ್ಯಾಸೇಜ್‌ನಲ್ಲಿ ವೈದ್ಯರು, ನರ್ಸುಗಳು, ಸ್ಟ್ರೆಚರು, ಆಕ್ಸಿಜನ್ ಸಿಲಿಂಡರ್ ಮುಂತಾದವನ್ನು ತಳ್ಳಿಕೊಂಡು ಓಡುತ್ತಿದ್ದರು. ಹೌಸ್ ಕೀಪಿಂಗ್ ಲೈಲಾಳಿಗೆ ಏನಾಯಿತೆಂದು ಕೇಳಿದೆ. ‘ಒಬ್ಬ ಪ್ರವಾಸಿಗೆ ಹೃದಯಾಘಾತವಾಗಿದೆಯಂತೆ’ ಎಂದಳು. ನಿದ್ರೆ ದೂರಾಯಿತು. ‘ದಿ ಮ್ಯೂಸಿಯಂ ಆಫ್ ಇನ್ನೋಸೆನ್ಸ್’ ತೆರೆದೆ. ನಾಯಕ ಕೇಮಲ್ ಬೇ, ಸಿಬಲ್‌ಳ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡ ಮೇಲೆ ಫುಸನ್‌ಳ ಪ್ರೀತಿಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ. ದೂರದ ಸಂಬಂಧಿಯಾದ ಬಡ ಹುಡುಗಿ ಫುಸನ್, ಶ್ರೀಮಂತನಾದ ಕೇಮಲ್ ಬೇನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದಳು. ಒಂದು ಕಡೆ ಅದ್ದೂರಿ ಮದುವೆಯ ಸಿದ್ಧತೆ, ಇನ್ನೊಂದು ಕಡೆ ಪ್ರೇಮದ ಉತ್ಕಟತೆ... ಮತ್ತೆ ಲೈಲಾ ಬಾಗಿಲು ತಟ್ಟಿದಳು. ‘ಹೇಗಿದ್ದಾರೆ ಪೇಶೆಂಟ್?’ ಎಂದೆ. ಏನೂ ಆಗಿಲ್ಲ. ಅವನು ಅಳತೆ ಮೀರಿ ತಿಂದಿದ್ದಾನೆ. ಗ್ಯಾಸ್‌ಗೆ ಎದೆ ಉರಿ ಕಾಣಿಸಿಕೊಂಡಿದೆ. ಅದನ್ನೇ ಹಾರ್ಟ್ ಅಟ್ಯಾಕು ಎಂದು ಗಾಬರಿಯಾಗಿ ಎಮರ್ಜೆನ್ಸಿ ಕರೆ ಮಾಡಿದ್ದಾನೆ. ಆರೋಗ್ಯವಾಗಿದ್ದರೂ ಕೆಲವರು ಹಾಗೆ ಸಿಂಪಥಿ ಗಿಟ್ಟಿಸುತ್ತಾರೆ ಎಂದಳು. ಹೊರಟವಳು ಮತ್ತೆ ಏನೋ ನೆನಪಾದವಳಂತೆ ‘ಈಗ ಜಕ್ಕೇನಹಳ್ಳಿ ಹೇಗಿದ್ದಾರೆ’ ಎಂದಳು. ಅವಳ ಉತ್ತರದ ಕೊನೆಯ ಸಾಲನ್ನೇ ಹೇಳಬೇಕೆನಿಸಿದರೂ ಹೇಳದೆ ಅವರೀಗ ಗುಣಮುಖರಾಗುತ್ತಿದ್ದಾರೆ ಎಂದೆ. ಹಡಗಿನ ಓಲಾಟ ಈಗ ತುಸು ಕಡಿಮೆಯಾಗಿತ್ತು.

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT