ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ವಿವಾದ ಹೊಸ ಜನ್ಮ ಪಡೆದಾಗ

Last Updated 30 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಇಂಟರ್‌ನೆಟ್‌ನಲ್ಲೂ ಈಗ ಲೋಕ­ಸಭಾ ಚುನಾವಣೆಗಳದ್ದೇ ಚರ್ಚೆ. ಇತರ ಮಾಧ್ಯಮಗಳಂತೆ ಇಲ್ಲಿಯೂ ಚುನಾ­ವಣಾ ಕಾಲದ ವಿವಾದಗಳೇ ತುಂಬಿಕೊಂಡಿವೆ. ಇಂಥದ್ದೊಂದು ವಿವಾದ ಇತ್ತೀಚೆಗೆ ಪತ್ರಿಕೆ­ಗಳಲ್ಲಿಯೂ ಸುದ್ದಿ ಮಾಡಿತಾದರೂ ಅದರ ಸಂಪೂರ್ಣ ವಿವರಗಳನ್ನು ಅರಿಯಬೇಕಾದರೆ ನೀವು ಜಾಲಪೌರ (ನೆಟಿಝನ್) ಆಗಿರಲೇ­ಬೇಕು. ಭಾರೀ ಸಂಖ್ಯೆಯ ಅಂತರ್ಜಾಲಿಗರನ್ನು ಅಭಿಮಾನಿಗಳನ್ನಾಗಿ ಹೊಂದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಈ ವಿವಾದದ  ಕೇಂದ್ರಬಿಂದು.

ನರೇಂದ್ರ ಮೋದಿಯವರ ಪ್ರಚಾರ ಯಂತ್ರ ಉಳಿದೆಲ್ಲರ ಪ್ರಚಾರ ವ್ಯವಸ್ಥೆಗಿಂತಲೂ ಹೆಚ್ಚು ಕ್ರಿಯಾಶೀಲ. ಗುಜರಾತ್ ಅಭಿವೃದ್ಧಿ ಮಾದರಿ­ಯನ್ನು ‘ವಿಖ್ಯಾತ’ಗೊಳಿಸಿದ್ದೇ ಈ ಪ್ರಚಾರ ಯಂತ್ರ. ಲೋಕಸಭಾ ಚುನಾವಣೆಯ ಕಾಲಕ್ಕೆ ಬಹಳ ಸೂಕ್ತವಾದ ಮೀಮ್  (meme=­ಚಿತ್ರಸಂದೇಶ ) ಒಂದನ್ನು ಪ್ರಚಾರ ತಂತ್ರದ ಭಾಗವಾಗಿಯೇ ಸಿದ್ಧಪಡಿಸಲಾಗಿತ್ತು. ಅದರಲ್ಲಿ ವಿಕಿಲೀಕ್ಸ್‌ನ ಜ್ಯೂಲಿಯನ್ ಅಸಾಂಜ್ ಅವರ ಚಿತ್ರ ಮತ್ತು ಸಹಿಯೊಂದಿಗೆ ಆತನದ್ದೇ ಎನಿಸು­ವಂಥ ಹೇಳಿಕೆಯೊಂದಿತ್ತು ‘ಮೋದಿ ಎಂದರೆ ಅಮೆರಿಕಕ್ಕೆ ಭಯ. ಏಕೆಂದರೆ ಅವರನ್ನು ಭ್ರಷ್ಟಗೊಳಿಸಲು ಸಾಧ್ಯವಿಲ್ಲ ಎಂದು ಅದಕ್ಕೆ ಗೊತ್ತು’,

ಇದು ಅಂತರ್ಜಾಲದಲ್ಲಿ ಭಾರೀ ವೇಗದಲ್ಲಿ ಹರಡುತ್ತಾ ಹೋದಾಗ ವಿಕಿಲೀಕ್ಸ್‌ನಿಂದ ಅಧಿಕೃತ ಪ್ರತಿಕ್ರಿಯೆ ಹೊರಬಂತು. ‘ಜ್ಯೂಲಿಯನ್ ಅಸಾಂಜ್ ಈ ತನಕ ಮೋದಿಯ ಕುರಿತಂತೆ ಯಾವ ಮಾತನ್ನೂ ಆಡಿಲ್ಲ. ವಿಕಿಲೀಕ್ಸ್ ಬಹಿರಂಗ ಪಡಿಸಿರುವ ದಾಖಲೆಗಳು ಮೋದಿ ಬಗ್ಗೆ ಒಳ್ಳೆಯದು ಮತ್ತು ಕೆಟ್ಟದ್ದೆರಡನ್ನೂ ಹೇಳು­ತ್ತವೆ’. ವಿವಾದ ಆರಂಭವಾದದ್ದು ಇಲ್ಲಿಂದ. ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ರಾಜ­ಕೀಯ ಪಕ್ಷಗಳು ಮಾಡುವಂತೆ ಬಿಜೆಪಿ ಕೂಡಾ ‘ಜ್ಯೂಲಿಯನ್ ಅಸಾಂಜ್ ಚಿತ್ರವಿರುವ ಮೀಮ್ ಸೃಷ್ಟಿಸಿದ್ದು ನಮ್ಮ ಅಧಿಕೃತ ಪ್ರಚಾರ ವಿಭಾಗವಲ್ಲ’ ಎಂದು ಹೇಳಿತು. ಇಂಥದ್ದೊಂದು ಹೇಳಿಕೆ ಹಳೆಯ ಮಾಧ್ಯಮಗಳನ್ನು ನಿರ್ವಹಿಸಲು ಸಾಕಾಗುತ್ತಿತ್ತು. ಆದರೆ ನವ ಮಾಧ್ಯಮ ಇಂಥ ಸ್ಪಷ್ಟೀಕರಣಗಳನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ.

ರಾಜಕೀಯ ವಿಡಂಬನೆಗಳ ಬ್ಲಾಗ್ http://fakle.in ಇದನ್ನು ಮೊದಲಿಗೆ ಪ್ರಕಟಿ­ಸಿತ್ತು. ಇದನ್ನು ಈಗ ಬಿಜೆಪಿಯ ವಿರುದ್ಧ ಬಳಸಿ­ಕೊಳ್ಳ­ಲಾಗುತ್ತಿದೆ ಎಂದು ಬಿಜೆಪಿ ಅಭಿಮಾನಿ­ಯೊಬ್ಬರು ಹಲವು ಆಧಾರಗಳನ್ನು ಉಲ್ಲೇಖಿಸಿ ಸುದೀರ್ಘ ಸಮರ್ಥನೆಯೊಂದನ್ನು ರೆಡ್ಇಟ್‌­ನಲ್ಲಿ ಪ್ರಕಟಿಸಿದ್ದಾರೆ. ಇದೂ ಸುಳ್ಳು ಎಂದು ಕಂಡುಕೊಳ್ಳುವುದಕ್ಕೆ ಹೆಚ್ಚು ಕಷ್ಟಪಡುವ ಅಗತ್ಯವೇನೂ ಇಲ್ಲ. ಸ್ವಲ್ಪ ಗೂಗಲ್ ಮಾಡಿದರೆ ಈ ವಿವಾದಕ್ಕೆ ಕಾರಣವಾದ ಚಿತ್ರದ ಮೂಲವೂ ತಿಳಿಯುತ್ತದೆ. ಈ ಚಿತ್ರವನ್ನು ಹಂಚಿಕೊಂಡವ­ರಲ್ಲಿ ಬಿಜೆಪಿಯ ‘ಮಿಶನ್ 272’ ತಂಡ ರಾಷ್ಟ್ರೀಯ ಡಿಜಿಟಲ್ ಆಪರೇಷನ್ಸ್ ತಂಡದ ಕಾರ್ಯನಿರ್ವಾಹಕ ಪ್ರಸನ್ನ ಕಾರ್ತಿಕ್ ಕೂಡಾ ಸೇರಿದ್ದಾರೆ. ಇವರ ಟ್ವಿಟರ್ ಅನುಯಾಯಿ­ಗಳಲ್ಲಿ ಸ್ವತಃ ನರೇಂದ್ರಮೋದಿ ಕೂಡಾ ಇದ್ದಾರೆ ಎಂಬುದನ್ನು ಹಲವು ಜಾಲತಾಣಗಳು ಸಾಕ್ಷ್ಯ ಸಮೇತ ತೋರಿಸಿಕೊಟ್ಟಿವೆ.

ಹಾಗೆ ನೋಡಿದರೆ ಈ ವಿವಾದ ಇನ್ನೂ ಹಳೆಯದು. ಅಮೆರಿಕನ್ನರು ನನ್ನನ್ನು ಭ್ರಷ್ಟನಾ­ಗಲೊ­ಲ್ಲದವನು ಎದು ಒಪ್ಪಿಕೊಂಡಿರುವುದು ಸಂತೋಷ ತಂದಿದೆ ಎಂದು ಎರಡು ವರ್ಷಗಳ ಹಿಂದೆ ಸ್ವತಃ ನರೇಂದ್ರಮೋದಿಯವರೇ ಹೇಳಿ­ಕೊಂಡಿ­ದ್ದರು. ಇದು ಮಾಧ್ಯಮಗಳಲ್ಲಿ ವರದಿ­ಯಾ­ಗಿತ್ತು. ಹಾಗೆಯೇ ಅವರದೇ ವೆಬ್‌­ಸೈಟ್‌ನಲ್ಲಿ ಈ ಮಾಹಿತಿ ಈಗಲೂ ಇದೆ (http://goo.gl/TPkkhT). ಆ ದಿನಗಳಲ್ಲಿ ವಿಕಿಲೀಕ್ಸ್‌ಬಹಿರಂಗ ಪಡಿಸಿದ ಮಾಹಿತಿಯಲ್ಲಿ ಏನಿತ್ತು ಎಂಬುದನ್ನು ನೋಡಿ ‘ಭ್ರಷ್ಟನಾಗ­ಲೊಲ್ಲದ ಮೋದಿ’ ಹೇಳಿಕೆಯ ನಿಜಾಂಶವನ್ನು ಹಲವರು ಬಯಲು ಮಾಡಿದ್ದರು. ರಾಜ್‌­ಕೋಟ್‌ನ ಕಾಂಗ್ರೆಸ್ ನಾಯಕ ಮನೋಹರ್‌­ಸಿಂಹ ಜಡೇಜಾ ಮೋದಿ ಭ್ರಷ್ಟನಾಗಲೊಲ್ಲದ ವ್ಯಕ್ತಿ ಎಂದಿದ್ದನ್ನು ಅಮೆರಿಕದ ರಾಯಭಾರ ಕಚೇರಿಯ ಕೇಬಲ್ ಉಲ್ಲೇಖಿಸಿತ್ತೇ ಹೊರತು. ಅಮೆರಿಕದ ರಾಯಭಾರಿಯಾಗಲೀ ಅಥವಾ ಅಮೆರಿಕವನ್ನು ಅಧಿಕೃತವಾಗಿ ಪ್ರತಿನಿಧಿಸುವ ಯಾರೂ ಮೋದಿಯನ್ನು ‘ಭ್ರಷ್ಟನಾಗಲೊಲ್ಲ­ದವರು’ ಎಂದಿರಲಿಲ್ಲ.

ಇಂಟರ್‌ನೆಟ್ ‘ಮೀಮ್’ ಒಂದು ಮರೆತಿದ್ದ ವಿವಾದಕ್ಕೆ ಮತ್ತೆ ಜೀವಕೊಟ್ಟಿದೆ. ಇದರೊಂದಿಗೆ ಮರೆತು ಹೋದ ಮತ್ತಷ್ಟು ವಿಚಾರಗಳು ಮತ್ತೆ ಪ್ರಚಾ­ರಕ್ಕೆ ಬಂದಿವೆ. ಇದರಲ್ಲಿ ಬಹು­ಮುಖ್ಯವಾ­ದುದು ಅರುಣ್ ಜೇಟ್ಲಿ ಅವರು ‘ಬಿಜೆಪಿಗೆ ಹಿಂದುತ್ವ ಎಂಬುದು ಅವಕಾಶವಾದಿ ವಿಷಯ’ ಎಂದದ್ದು. 2005ರ ಮೇ 6ರ ಕೇಬಲ್‌ನಲ್ಲಿ ದಾಖಲಾಗಿತ್ತು (http://goo.gl/ESNsR3). ಇದರಂತೆ ಜೇಟ್ಲಿ ‘ಹಿಂದುತ್ವವನ್ನು ಅವಕಾಶಕ್ಕೆ ತಕ್ಕಂತೆ ಬಿಜೆಪಿ ಬಳಸಿಕೊಳ್ಳುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಬಾಂಗ್ಲಾದೇಶದ ಅನಧಿಕೃತ ವಲಸಿಗರ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿ ಹಿಂದುತ್ವದ ಮಾತು ನಡೆಯುತ್ತದೆ. ದೆಹಲಿ­ಯಲ್ಲಿ ಸದ್ಯಕ್ಕೆ ಅದು ಬಳಕೆಗೆ ಬರುವುದಿಲ್ಲ. ಆದರೆ ಒಂದು ಭಯೋತ್ಪಾದಕ ದಾಳಿ ಈ ಸ್ಥಿತಿಯನ್ನು ಬದಲಾಯಿಸಬಹುದು’ ಎಂದಿದ್ದ­ರಂತೆ. ಈ ಮಾತುಗಳನ್ನು ಜೇಟ್ಲಿ ಅಲ್ಲಗಳೆ­ದಿ­ದ್ದರು. ಹಾಗೆಯೇ ಮೋದಿ ಗಲಭೆಯ ಸಂದರ್ಭ­ದಲ್ಲಿ ಅದನ್ನು ನಿಯಂತ್ರಿಸದೇ ಇರುವಂತೆ ಅಧಿಕಾರಿ­ಗಳಿಗೆ ಆದೇಶಿಸಿದ್ದರು ಎಂಬ ವಿಚಾರ ಕೂಡಾ ವಿಕಿಲೀಕ್ಸ್ ಬಹಿರಂಗ ಪಡಿಸಿದ ಅಮೆರಿಕದ ರಾಜತಾಂತ್ರಿಕ ಸಂದೇಶಗಳಲ್ಲಿದ್ದವು.

ಕೇವಲ ವೃತ್ತಪತ್ರಿಕೆಗಳನ್ನು ಓದುವವರ ಮಟ್ಟಿಗೆ ಈ ವಿವಾದ ಕೇವಲ ಒಂದು ‘ಮೀಮ್’ಗೆ ಸಂಬಂಧಪಟ್ಟದ್ದು. ಆದರೆ ಇಂಟರ್‌ನೆಟ್‌ನಲ್ಲಿ ಸುದ್ದಿ ಓದುತ್ತಿರುವವರಿಗೆ ಈ ವಿವಾದ ಕೇವಲ ಒಂದು ‘ಮೀಮ್’ಗೆ ಸಂಬಂಧಪಟ್ಟದ್ದು ಮಾತ್ರ ಅಲ್ಲ. ಬಹುಶಃ ಈ ವಿವಾದದ ಸಂಪೂರ್ಣ ಚಿತ್ರಣ ದೊರೆಯುವುದೇ ಇಂಟರ್‌ನೆಟ್‌ನಲ್ಲಿ ಎನಿಸುತ್ತದೆ. ಏಕೆಂದರೆ ಇಲ್ಲಿ ವಿಕಿಲೀಕ್ಸ್‌ನ ಕೇಬಲ್‌ಗಳಿಂದ ಆರಂಭಿಸಿ ಈ ವಿವಾದಕ್ಕೆ ಕಾಲಕಾಲಕ್ಕೆ ವಿಕಿಲೀಕ್ಸ್ ಹೇಗೆ ಪ್ರತಿಕ್ರಿಯಿಸಿದೆ ಎಂಬುದೂ ಸಿಗುತ್ತದೆ. ಇವೆಲ್ಲನ್ನೂ ಇಟ್ಟುಕೊಂಡು ಹೆಣೆದಿರುವ ಬರಹಗಳೂ ಬೇಕಾದಷ್ಟು ಸಿಗುತ್ತವೆ. ಅಂದರೆ ವಿವಾದವನ್ನು ಎಲ್ಲಾ ಕೋನಗಳಿಂದಲೂ ನೋಡಲು ಸಾಧ್ಯವಿದೆ. ಆದರೆ ವಿವಾದವನ್ನು ಹೀಗೆ ನೋಡುವುದಕ್ಕೆ ಎಲ್ಲಾ ಜಾಲಿಗರಿಗೆ ಸಾಧ್ಯವಿಲ್ಲ ಎಂಬುದು ಮತ್ತೊಂದು ವಾಸ್ತವ.

ಸಾಮಾಜಿಕ ಜಾಲತಾಣಗಳಲ್ಲಿ ಬಳಕೆಗೆ ಬರುವ ಒಂದು ಚಿತ್ರ ಸಂದೇಶ ಸೃಷ್ಟಿಯಾಯಿತೆಂದೆರೆ ಅದರ ಪೂರ್ವಾಪರ ವಿಚಾರಿಸದೆ ಲೈಕ್ ಮಾಡುವುದು ಅಥವಾ ಶೇರ್ ಮಾಡುವುದು ಮುಂದುವರಿಯುತ್ತದೆ. ಕೆಲಕಾಲದ ಹಿಂದೆ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದ್ದ ಸಂದೇಶವೊಂದು ‘ಯಾರಾ­ದರೂ ದರೋಡೆಕೋರರು ಎಟಿಎಂ­ನಿಂದ ಹಣ ತೆಗೆದುಕೊಡುವಂತೆ ಬೆದರಿಕೆ ಹಾಕಿದರೆ ಪಿನ್ ನಂಬರ್ ಅನ್ನು ತಿರುಗು­ಮುರುಗಾಗಿಸಿದರೆ ಪೊಲೀಸ್ ಠಾಣೆಗೆ ಸಂದೇಶ ಹೋಗುತ್ತದೆ’ ಎಂದು ಹೇಳುತ್ತಿತ್ತು. ಲಕ್ಷಾಂತರ ಮಂದಿ ಶೇರ್ ಮಾಡಿ ಹಲವರು ಇದನ್ನು ನಿಜ ಎಂದುಕೊಂಡಿದ್ದರು. ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಕಥೆಗಾರ ಬೊಳುವಾರು ಸೇರಿದಂತೆ ಹಲವರು ಈ ಸಂದೇಶ ಸುಳ್ಳು ಎಂದು ಹೇಳಲು ನಡೆಸಿದ ಪ್ರಯತ್ನ ಬಹಳ ದೊಡ್ಡ ಫಲ ಕೊಡಲಿಲ್ಲ. ಈಗಲೂ ಈ ಸಂದೇಶ ಹರಿದಾಡುತ್ತಲೇ ಇದೆ.

ನರೇಂದ್ರ ಮೋದಿ ಭ್ರಷ್ಟನಾಗಲೊಲ್ಲದ ವ್ಯಕ್ತಿ ಎಂದು ಜ್ಯೂಲಿಯನ್ ಅಸಾಂಜ್ ಹೊಗಳಿದ್ದಾನೆ ಎಂಬ ನಂಬಿಕೆಯಲ್ಲಿ ಈಗಲೂ ಆ ಮೀಮ್ ಅನ್ನು ಶೇರ್ ಮಾಡುವವರಿದ್ದಾರೆ. ಹಾಗೆಯೇ ಇದನ್ನು ಸುಳ್ಳು ಎಂಬ ಮಾಹಿತಿಯನ್ನು ಸತತವಾಗಿ ಹಂಚಿಕೊಳ್ಳುವವರೂ ಇಲ್ಲಿದ್ದಾರೆ. ಈ ಜಗತ್ತಿನಲ್ಲಿ ಇವರಿಬ್ಬರೂ ಪರಸ್ಪರ ಸಂಧಿಸುವ ಸಾಧ್ಯತೆಯೇನೋ ಬಹಳ ಹೆಚ್ಚು. ಆದರೆ ವಾಸ್ತವ ಇದಕ್ಕೆ ವಿರುದ್ಧವಾಗಿದೆ. ಪ್ರತಿಯೊಬ್ಬರೂ ತಮ್ಮ ಆಸಕ್ತಿಗಳಿಗೆ ಅನುಗು­ಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗೆಳೆಯ­ರನ್ನೂ ಅನುಯಾಯಿಗಳನ್ನೂ ಹೊಂದಿರುತ್ತಾರೆ. ಒಂದೇ ಬಗೆಯಲ್ಲಿ ಚಿಂತಿಸುವವರ ಗುಂಪುಗಳಲ್ಲಿ ಸಂಪೂರ್ಣ ಭಿನ್ನವಾದ ವಿಚಾರ ಪ್ರವೇಶ ಪಡೆಯುವುದು ಕಷ್ಟ. ಒಂದು ವೇಳೆ ಪ್ರವೇಶ ಪಡೆದರೂ ಅದರ ಸುತ್ತ ನಡೆಯುವ ಚರ್ಚೆಯೇ ಬೇರೆ ಬಗೆಯಲ್ಲಿ ಇರಬಹುದು. 2011ರಲ್ಲಿಯೇ ಮೋದಿ ಅಮೆರಿಕನ್ನರು ತಮ್ಮನ್ನು ಹೊಗಳಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ವಿಚಾರ ಅವರದೇ ಜಾಲತಾಣದಲ್ಲಿದೆ. ಆದರೂ ಇಡೀ ವಿವಾದವನ್ನು ಆಮ್ ಆದ್ಮಿ ಪಾರ್ಟಿ ಹುಟ್ಟು  ಹಾಕಿದೆ ಎಂದು ವಾದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ.

ಅಂತರ್ಜಾಲದಲ್ಲಿ ನಡೆಯುತ್ತಿರುವ ಚುನಾ­ವಣಾ ಕಾಲದ ವಿವಾದಗಳನ್ನು ಸೂಕ್ಷ್ಮ­ವಾಗಿ ನೋಡುತ್ತಾ ಹೋದರೆ ಒಂದು ವಿಚಾರ ಸ್ಪಷ್ಟವಾಗುತ್ತದೆ. ಭಾರತದಲ್ಲಿ ಚುನಾ­ವಣೆಗೆ ಮೂರು ಬಗೆಯ ಮಾಧ್ಯಮ ಪ್ರತಿಕ್ರಿಯೆಗಳಿವೆ. ಮೊದಲನೆಯದ್ದು ಮುದ್ರಣ ಮಾಧ್ಯಮದ ಪ್ರತಿಕ್ರಿಯೆ. ಎರಡನೆಯದ್ದು ದೃಶ್ಯ. ಮಾಧ್ಯಮದ ಪ್ರತಿಕ್ರಿಯೆ ಮತ್ತು ಮೂರನೆ­ಯದ್ದು ಅಂತರ್ಜಾಲದ ಪ್ರತಿಕ್ರಿಯೆ. ಈ ಮೂರೂ ಪ್ರತಿಕ್ರಿಯೆಗಳು ಸಂಪೂರ್ಣ ಭಿನ್ನ. ಒಂದರಲ್ಲಿ ನಡೆಯುವ ಚರ್ಚೆಗೆ ಮತ್ತೊಂದರಲ್ಲಿ ಅಂತಹಾ ಮಹತ್ವವೇನೂ ಇರುವುದಿಲ್ಲ. ಮೇಲೆ ವಿವರಿಸಿದ ವಿವಾದ ಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ಪಡೆದುಕೊಂಡ ಅವಕಾಶ ಬಹಳ ಕಡಿಮೆ. ಆದರೆ ಇಂಟರ್‌ನೆಟ್‌ನಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯ ರಾಶಿಯೇ ಇದೆ. ಬಹುಶಃ ಇಂಟರ್‌ನೆಟ್‌ಗೆ ಒಮ್ಮೆ ಸೇರಿದ ಮಾಹಿತಿ ಎಂದಿಗೂ ನಾಶವಾಗುವುದಿಲ್ಲ. ಅದರಿಂದಾ­ಗಿಯೇ ಇಲ್ಲಿ ಹಳೆಯ ವಿವಾದಗಳು ಮತ್ತೆ ಹೊಸಹೊಸದಾಗಿ ಜನ್ಮ ತಳೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT