ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಹುಟ್ಟು ಬರುವುದಿಂದೇ...

Last Updated 23 ಮಾರ್ಚ್ 2016, 8:57 IST
ಅಕ್ಷರ ಗಾತ್ರ

As I was going up the stair
I met a man who wasn't there
He wasn't there again today
I wish to God he would go away

ಅಜ್ಞಾತ ಕವಿಯೊಬ್ಬಳ ಮೇಲಿನ ಕವಿತೆಯನ್ನು ಪುರುಷ ವಿರೋಧಿ ಎಂದು ಸರಳವಾಗಿ ಅರ್ಥೈಸಿಬಿಡುವ ಅಪಾಯವೂ ಇದೆ. ‘ದೇವರೆ ಅವನು ಕಾಣೆಯಾಗಿ ಬಿಡಲಿ’ ಎನ್ನುವುದು ಹೆಣ್ಣಿನ ಆಸೆಯೆಷ್ಟೋ ಕನಸೆಷ್ಟೋ ಅಷ್ಟೇ ಕಾಣದ ದೇವರ ಬಳಿ ಅವಳ ಪ್ರಾರ್ಥನೆಯೂ ಆಗಿರುವುದನ್ನು ಗಮನಿಸಿ. ಇದ್ದಾನೋ ಇಲ್ಲವೋ ಇದ್ದರೂ ಹೆಣ್ಣಿನ ಸಹಾಯಕ್ಕೆ ಅವನೂ ಬರುತ್ತಾನೋ ಇಲ್ಲವೋ. ಇಲ್ಲಿ ದೇವರನ್ನು ಗಂಡು ಎಂದೇ ಗ್ರಹೀತ ಹಿಡಿದು ಮಾತನಾಡಬೇಕಾದ ಅವಶ್ಯಕತೆಯೂ ಇಲ್ಲವೆಂದು ತೋರುತ್ತದೆ. ಹಾಗೆ ನೋಡಿದರೆ, ಈ ಕವಿತೆಯಲ್ಲಿನ ದೇವರು ಅಜ್ಞಾತ ಶಕ್ತಿಯೊಂದಿಗಿನ ಮೊರೆ ಎಷ್ಟೋ ತನ್ನ ಆಳದ ಅಳಲನ್ನು ತನಗೂ ಲೋಕಕ್ಕೂ ಏಕ ಕಾಲಕ್ಕೆ ಸ್ವಗತದ ಹಾಗೆ ಹೇಳಿಕೊಳ್ಳುತ್ತಿರುವ ಉದ್ಗಾರವೂ ಹೌದು ಎನಿಸುವಷ್ಟು ಈ ಕವಿತೆ ಆರ್ತವಾಗಿದೆ. ಆತ್ಮದ ಮೊರೆಯ ಹಾಗೆ ಕೇಳಿಸುವ ಈ ಸಾಲುಗಳು ಅಜ್ಞಾತ ಕವಯಿತ್ರಿಯದು ಎನ್ನುವುದೂ ಸಾಂಕೇತಿಕವೇ. ಯಾವ ಕಾಲದ ಯಾವ ದೇಶದ ಯಾವ ಹೆಣ್ಣಿನದೂ ಆಗಿ ಬಿಡಬಹುದಾದದ್ದು ಇದು ಎನ್ನುವುದು ಒಂದು ಕಾರಣವಾದರೆ, ಏನೆಲ್ಲವನ್ನು ಎಷ್ಟೆಲ್ಲವನ್ನು ನಿಭಾಯಿಸಿಯೂ ಅದಕ್ಕೆ ಅಧಿಕೃತತೆ ಇಲ್ಲದ ಅನಾಮಿಕ ವ್ಯಕ್ತಿತ್ವವೇ ಅವಳ ಅಸ್ಮಿತೆ ಎನ್ನುವ ವ್ಯವಸ್ಥೆಯ ಅನಾಗರಿಕತೆಗೆ ಈ ಕವಯಿತ್ರಿಯ ಅನಾಮಿಕತೆಯೊಂದು ವ್ಯಂಗ್ಯದ ಪ್ರತಿಕ್ರಿಯೆ ಎನ್ನುವುದು ಇನ್ನೊಂದು ಕಾರಣ.

ಕಾಣೆಯಾಗಬೇಕೆಂದು ಈ ಹೆಣ್ಣು ಹೇಳುತ್ತಿರುವ ಆ ‘ಪುರುಷ’ ಯಾರು? ಆ ಪುರುಷ ‘ಕಾಣಿಸುತ್ತಿಲ್ಲ’ ಎನ್ನುವುದೂ ತುಂಬ ಮುಖ್ಯ. ಕಾಣದೆಯೂ ಇವಳನ್ನು ಕಾಡುತ್ತಿರುವ ಪುರುಷ ಇವಳಿಗೆ ಆಪ್ಯಾಯಮಾನನಲ್ಲ ಎನ್ನುವುದು ಕವಿತೆಯಲ್ಲಿ ಸ್ಪಷ್ಟವಾಗಿದೆ. ಅವನ ಬಗೆಗೆ ಇವಳಿಗಿರುವುದು ಅನೂಹ್ಯ ಸ್ವರೂಪದ ಭೀತಿ. ಮೆಟ್ಟಿಲು ಹತ್ತುತ್ತಿರುವಾಗ ಕಾಣದೆಯೇ ಕಾಣಿಸುವ ಅವನು ಇವಳನ್ನು ಗಮನಿಸುತ್ತಿದ್ದಾನೆ, ಹಿಂಬಾಲಿಸುತ್ತಾನೆ ಮಾತ್ರವಲ್ಲ ಇವಳು ಅವನನ್ನು ಗಮನಿಸದೇ ಇರುವುದು ಅಸಾಧ್ಯ ಎನ್ನುವಷ್ಟು ಅವನ ಇರವು ಇವಳನ್ನು ಆವರಿಸಿದೆ. ಇಲ್ಲದ ಅವನು ಇರುವಂತೆ ಅವಳಿಗೆ ಭಾಸವಾಗುತ್ತಿರುವುದೇ ಅವಳಿಗೆ ಪರಮ ಹಿಂಸೆಯಾಗಿದೆ. ಅವನು ಪ್ರತ್ಯಕ್ಷವಾಗಿ ಕಂಡರೆ ಎಷ್ಟೋ ವಾಸಿ. ಟಿಪ್ಪು ಸುಲ್ತಾನನ ಮಂತ್ರಿಯೊಬ್ಬ ಬ್ರಿಟಿಷರು ಮತ್ತವರ ಆಕ್ರಮಣದ ಮೂರ್ತ ಅಮೂರ್ತ ಸ್ವರೂಪಗಳ ಬಗ್ಗೆ we are not affraid of what do we see but we are affraid of what we can not see ಎನ್ನುತ್ತಾನೆ. ಹೆಣ್ಣು ಮತ್ತು ಪಿತೃ ಸಂಸ್ಕೃತಿಯ ಸಂಬಂಧಕ್ಕೂ ಇದೊಂದು ಉಪಯುಕ್ತ ವ್ಯಾಖ್ಯಾನವೇ ಎನಿಸುತ್ತದೆ. ಕಾಣುವುದನ್ನು ಎದುರಿಸಲು ಬೇಕಾದ ಮನೋಬೌದ್ಧಿಕ ಪರಿಕರಗಳನ್ನು ಸಜ್ಜಾಗಿಸಿಕೊಳ್ಳುವ ಪರಿಗೂ ಕಾಣಿಸದೇ ಇರುವುದನ್ನು ಎದುರಿಸಲು ಬೇಕಾದ ಪರಿಕರಗಳಿಗೂ ವ್ಯತ್ಯಾಸವಿದೆಯಷ್ಟೇ.

ಸಾಮಾನ್ಯವಾಗಿ ಸ್ತ್ರೀವಾದಿ ಚಿಂತನೆಗಳ ಬಗ್ಗೆ ಇರುವ ಕೆಲವು ಆರೋಪಗಳಲ್ಲಿ ಒಂದು, ವಾಸ್ತವವನ್ನು ‘ಅತಿ’ ಎನ್ನುವ ನೆಲೆಯಲ್ಲಿ ವ್ಯಾಖ್ಯಾನಿಸುತ್ತಾರೆ ಎನ್ನುವುದು. ಇಂಥ ಮಾತುಗಳು ಬರುವುದು ಹೆಣ್ಣನ್ನು ಪಿತೃಸಂಸ್ಕೃತಿಯ ಹಿಡಿತ ಅವಳ ನಿದ್ದೆ ಎಚ್ಚರಗಳಲ್ಲಿಯೂ ಹೇಗೆ ನಿಯಂತ್ರಿಸುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದೇ ಇದ್ದಾಗ ಮಾತ್ರ. ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನ ವಿರಹವನ್ನು ಕುರಿತು ‘ಏರಿಲ್ಲದ ಗಾಯ, ಕಿಚ್ಚಿಲ್ಲದ ಬೇಗೆ’ ಎನ್ನುತ್ತಾಳಲ್ಲ, ಅದು ವಿರಹದ ಮನಸ್ಥಿತಿಗಿಂತ ಹೆಚ್ಚಾಗಿ ಹೆಣ್ಣಿನ ಭಾವಕೋಶ ಮತ್ತು ಜ್ಞಾನಕೋಶಗಳೆರಡನ್ನೂ ಪಿತೃಸಂಸ್ಕೃತಿಯು ಕಚ್ಚಿ ಹಿಡಿದಿರುವ ಬಗೆಯನ್ನೂ ಅದರಿಂದ ಹೊರಬರಲು ನಡೆಸುವ ಪ್ರಯತ್ನಗಳ ಹಿಂಸಾತ್ಮಕ ಪರಿಯನ್ನೂ ಧ್ವನಿಸುತ್ತದೆ.

I wish he would go away ಎನ್ನುತ್ತಿರುವಾಗ ಈಗಿರುವ ವ್ಯಕ್ತಿತ್ವದ ಮತ್ತು ದೃಷ್ಟಿಕೋನದ ಗಂಡು ಕಣ್ಮರೆಯಾಗಬೇಕು ಎಂದು ಈ ಕವಿತೆ ಒತ್ತಾಯಿಸುತ್ತಿದೆ. ಸದಾ ತನ್ನ ಕಣ್ಣಳತೆಯಲ್ಲಿ, ತನ್ನ ಆಳ್ವಿಕೆಯ ಪರಿಧಿಯಲ್ಲಿ ಹೆಣ್ಣು ಇರಬೇಕೆಂದು ಅವಳನ್ನು ಹದ್ದಿನ ಹಾಗೆ ಕಾಯುವ, ನಿರ್ಬಂಧಿಸುವ, ಬದುಕಿನ ಪ್ರತಿಗಳಿಗೆಯಲ್ಲೂ ತಾನು ಬಂಧಿ ಎನ್ನುವುದನ್ನು ಅವಳು ಪರಿಭಾವಿಸುತ್ತಲೇ ಇರಬೇಕು ಎನ್ನುವುದನ್ನು ಅನುಕ್ತ ಶಾಸನದ ಹಾಗೆ ಜಾರಿಗೆ ತರುವ ಗಂಡಿನ ಉಪಸ್ಥಿತಿಯನ್ನು ಈ ಕವಿತೆ ವಿರೋಧಿಸುತ್ತಿದೆ. ಬದಲಾದ ವ್ಯಕ್ತಿತ್ವದ ಗಂಡಿನ ಆಗಮನವನ್ನೂ ಈ ಕವಿತೆ ಕನಸುತ್ತಿದೆ. ಎಂದರೆ he would go ಮಾತ್ರವಲ್ಲ he should come, ಆದರೆ ಈಗಿನ ಆಳುವ ಗಂಡಾಗಿ ಅಲ್ಲ ಸಖನಾಗಿ. ಎಲ್ಲ ಕಾವ್ಯವನ್ನೂ ಅದರ ಅನುಕ್ತ ನೆಲೆಗಳಲ್ಲೂ ಓದಬೇಕು, ಓದಬಹುದು ಎಂದು ಕಾವ್ಯಮೀಮಾಂಸೆ ಹೇಳುತ್ತದೆ. ಹೆಣ್ಣಿನ ಬರವಣಿಗೆಯನ್ನಂತೂ ಅನುಕ್ತ ಮತ್ತು ಧ್ವನಿ ಪರಂಪರೆಯಲ್ಲಿ, ಸೂಚನಾ ಪರಂಪರೆಯಲ್ಲಿ  ನೋಡುವುದು ಅನಿವಾರ್ಯ. ‘ಮಾತಿಗೂ ಮೌನಕೂ ಏನು ಜತಿ’ ಎನ್ನುತ್ತಾರಲ್ಲ ಕವಿ ಬೇಂದ್ರೆ. ಗಂಡು ಹೆಣ್ಣಿನ ಸಂಬಂಧದ ವಿಲಕ್ಷಣ ವಿನ್ಯಾಸವನ್ನು ಈ ಮಾತುಗಳು ಹೇಳುತ್ತಿವೆ. ಹೆಣ್ಣಿನ ಅಭಿವ್ಯಕ್ತಿಯ ಮಟ್ಟಿಗೆ ಮಾತು ಮತ್ತು ಮೌನದ ಹೆಣಿಗೆ ಎನ್ನುವುದು ಅವಳ ಅಭಿವ್ಯಕ್ತಿಯ ವಿಶಿಷ್ಟ ವಿನ್ಯಾಸವೇ ಆಗಿದೆ. ಅವಳಲ್ಲಿ ಈ ಎರಡೂ ಒಂದಕ್ಕೊಂದು ಪೂರಕ ಮಾತ್ರವಲ್ಲ ಒಂದು ಇನ್ನೊಂದರ ಶಕ್ತಿಯನ್ನು ಹೆಚ್ಚಿಸುವಂಥದ್ದೂ ಹೌದು.
***
ಲೇಖಕಿಯರ ಒಟ್ಟೂ ಬರವಣಿಗೆಯಲ್ಲಿ ಹೆಣ್ಣಿನ ಸ್ಪಷ್ಟ ಚಹರೆಗಳು ಮೂಡುವ ಬಗೆಯನ್ನು ಕಳೆದ ಬಾರಿ ಪ್ರತಿಭಾರ ಕಾವ್ಯದಲ್ಲಿ ನೋಡಿದ್ದಕ್ಕೆ ಪೂರಕವಾಗಿ ಈ ಬಾರಿ ನೇಮಿಚಂದ್ರರ ಕತೆಗಳಲ್ಲಿ ಕಾಣಿಸುವ ಹೊಸ ಹೆಣ್ಣಿನ ಆಕಾರವನ್ನು ಗುರುತಿಸುವ ಪ್ರಯತ್ನ ಮಾಡಬಹುದು. ಪ್ರತಿಭಾ ಮತ್ತು ನೇಮಿಚಂದ್ರರ ಬರವಣಿಗೆಗಳಲ್ಲಿ ಕಾಣಿಸುವ ಹೆಣ್ಣಿನಲ್ಲಿ ಇರುವ ಒಂದು ಮುಖ್ಯವಾದ ಸಾಮ್ಯತೆಯಿದೆ. ಇವರಿಬ್ಬರನ್ನೂ ಪ್ರಾತಿನಿಧಿಕವಾಗಿ ಆರಿಸಿಕೊಳ್ಳಲು ಇದೂ ಒಂದು ಕಾರಣ. ತುಸು ನಾಟಕೀಯವಾಗಿ ಹೇಳುವುದಾದರೆ ಇವರಿಬ್ಬರೂ ಹೊಸ ಹೆಣ್ಣು ಎನ್ನುವವಳು ‘ಸ್ವಯಂಭು’ ಎಂದು ನಂಬಿದವರು. ತನಗೆ ಬೇಕಾಗಿ ಹೆಣ್ಣು ಬದಲಾಗಬೇಕು ಎನ್ನುವ ಕಟು ಸತ್ಯವನ್ನು ಎದುರಿಸಲು ಬೇಕಾಗುವ ಮನಸ್ಥಿತಿಯನ್ನು ಕಟ್ಟಿಕೊಳ್ಳುವ ದಾರಿಯ ಪಯಣಿಗರು ಇವರು. ಕಾಣುವ, ಕಾಣದ ಗಂಡಿನ ಎಲ್ಲ ಬಗೆಯ ದಮನಗಳಿಂದ ಮುಕ್ತರಾಗಲು ಇವರ ಬರವಣಿಗೆಯ ನಾಯಕಿ ಅಹರ್ನಿಶಿ ಹೋರಾಡುತ್ತಾಳೆ, ತನ್ನೊಳಗೂ ಹೊರಗೂ. ನೇಮಿಚಂದ್ರ ಸುಮಾರು ನಾಲ್ಕು ದಶಕಗಳಿಂದ ತಮ್ಮ ನಾಯಕಿಯನ್ನು, ಅವಳ ಚಹರೆಗಳನ್ನು ರೂಪಿಸುತ್ತಲೇ ಇದ್ದಾರೆ. ಈ ಚಹರೆಯನ್ನು ಕಟ್ಟಿಕೊಳ್ಳಲು ನಡೆಸಬೇಕಾದ ಪ್ರಯತ್ನ ಅನಂತಮುಖಿಯಾದದ್ದು ಎನ್ನುವುದನ್ನೂ ಅವಿರತವಾದುದು ಎನ್ನುವುದನ್ನೂ ಇದು ಸೂಚಿಸುತ್ತಿದೆ. ಹೆಣ್ಣಿನ ಸವಾಲುಗಳು ಅವಳು ಎದುರಿಸುತ್ತಾ ಹೋದಷ್ಟೂ ಹೆಚ್ಚಾಗುವ ಪರಿಯನ್ನು ಕುರಿತು ವ್ಯಗ್ರತೆ, ಸೋಲಬಾರದೆನ್ನುವ ಛಲ, ಈ ಹೋರಾಟ ಮುಗಿದೀತೋ ಇಲ್ಲವೋ ಎನ್ನುವ ಉತ್ತರವಿರದ ಪ್ರಶ್ನೆಗಳು ಇವರ ಕತೆಗಳ ಮುಖ್ಯ ಲಕ್ಷಣಗಳು.

ನೇಮಿಚಂದ್ರ ಅವರ ಬಹುಪಾಲು ಕತೆಗಳ ಒಂದು ಸಾಮಾನ್ಯ ಲಕ್ಷಣವೆಂದರೆ, ಅನಿರೀಕ್ಷಿತ ಎಂಬಂತೆ ಇವರ ಕತೆಗಳ ನಾಯಕಿಯರಿಗೆ ಬದುಕು ಆಘಾತಗಳ ಮೂಲಕ ಸವಾಲನ್ನು ಒಡ್ಡುತ್ತದೆ. ಡೈವೋರ್ಸ್, ಸಾವು ಹೀಗೆ ಎದುರಾಗುವ ದಿವ್ಯಗಳ ಎದುರಿಗೆ ಮೊದಲು ಕಂಗಾಲಾಗಿ ಮತ್ತೆ ಆತ್ಮಬಲದಿಂದಲೇ ಚೇತರಿಸಿಕೊಂಡು ಈ ಮಹಿಳೆಯರು ಹೊಸ ಬದುಕಿನ ಕಡೆಗೆ ನಡೆಯುತ್ತಾರೆ. ಇಲ್ಲಿ ಬದುಕು ಮಾತ್ರವಲ್ಲ ಆ ವ್ಯಕ್ತಿತ್ವಗಳೂ ಹೊಚ್ಚ ಹೊಸದಾಗಿ ಕಂಗೊಳಿಸುತ್ತವೆ. ಆತ್ಮಬಲ ಬದುಕು ಮತ್ತು ವ್ಯಕ್ತಿತ್ವಗಳಿಗೆ ತಂದುಕೊಡುವ ಆತ್ಮಸೌಂದರ್ಯವನ್ನು ಈ ಪಾತ್ರಗಳು ತಾವೂ ಅನುಭವಿಸುತ್ತವೆ. ಮಿಕ್ಕವರೂ ಬೇಕಾಗಿ ಬೇಡವಾಗಿ ಅದನ್ನು ಬೆರಗಿನಿಂದಲೋ ಅಸೂಯೆಯಿಂದಲೋ ಅನಿವಾರ್ಯವಾಗಿಯೋ ಒಪ್ಪುವ ಹಕ್ಕೊತ್ತಾಯವನ್ನು ಈ ಮಹಿಳೆಯರು ತರುತ್ತಾರೆ.

ನೇಮಿಚಂದ್ರ ಅವರ ಕತೆಗಳಲ್ಲಿನ ನಾಯಕಿಯ ಹೆಸರು ಸಾಮಾನ್ಯವಾಗಿ ಶಶಿ ಮತ್ತು ನಾಯಕನ ಪಾತ್ರದ ಹೆಸರು ರವಿ (ಈ ನಾಯಕ, ನಾಯಕಿ ಎನ್ನುವುದಕ್ಕೆ ಬದಲು ಇನ್ನೇನಾದರೂ ಪರಿಕಲ್ಪನೆಗಳನ್ನು ಕಟ್ಟಬೇಕು ಅನಿಸುತ್ತಿದೆ!). ಈ ಸೂರ್ಯ ಮತ್ತು ಚಂದ್ರರ ಹೆಸರುಗಳನ್ನು ತಮ್ಮ ಬರವಣಿಗೆಯುದ್ದಕ್ಕೂ ಬಳಸುವಲ್ಲಿ ನೇಮಿಚಂದ್ರ ಅವರಿಗೆ ನಿರ್ದಿಷ್ಟ ಉದ್ದೇಶಗಳಿವೆ. ತಮ್ಮ ಶೋಧದ ನಿರಂತರತೆಯನ್ನು ಕಾಪಾಡಿಕೊಳ್ಳಲು, ಪ್ರತಿಪಾದಿಸಲು ಇದು ಅವರಿಗೆ ಸಹಾಯಕವಾಗಿದೆ. ಸೂರ್ಯ ಚಂದ್ರರು ಮಾನವ ಸಮುದಾಯದ ಎರಡು ಮುಖ್ಯ ಭೌಗೋಳಿಕ ಸಂಗತಿಗಳು ಎನ್ನುವುದರ ಜೊತೆಗೇ ಅವು ಎರಡು ಆದಿಮ ರೂಪಕಗಳೂ ಹೌದು. ಪರಸ್ಪರ ವಿರುದ್ಧವೆಂಬಂತೆ ಕಂಡರೂ ಒಂದು ಇನ್ನೊಂದನ್ನು ಅನುಸರಿಸುತ್ತಲೇ ಇರುತ್ತದೆ, ಯಾವ ಶ್ರೇಣೀಕರಣಗಳ, ಸೋಲು ಗೆಲುವುಗಳ ಹಂಗಿಲ್ಲದೆ, ಭಾರವಿಲ್ಲದೆ. ಎರಡರ ಧಾತುಗಳು, ಸ್ವಭಾವಗಳು ಬೇರೆ, ಆದರೆ ಪ್ರಕೃತಿಗೂ, ಮನುಷ್ಯ ಪ್ರಕೃತಿಗೂ ಎರಡೂ ಬೇಕೇ ಬೇಕು. ಎರಡರ ಬಗೆಗೂ ಮನುಷ್ಯನಿಗೆ ಸಮಾನವಾದ ಪ್ರೀತಿ ಮತ್ತು ಅವಲಂಬನೆಯಿದೆ. ಎರಡರ ಅಸ್ತಿತ್ವವೂ ಮೂಲಭೂತ ಅಗತ್ಯ. ಸ್ತ್ರೀವಾದವನ್ನು seperate but equal ಎಂದು ವ್ಯಾಖ್ಯಾನಿಸುತ್ತೇವಲ್ಲ, ಸೂರ್ಯ ಚಂದ್ರರೂ ಅದನ್ನೇ ರೂಪಕಾತ್ಮಕವಾಗಿ ಸಂಕೇತಿಸುತ್ತಿದ್ದಾರೆ. (over reading ಅನಿಸುತ್ತಿದೆಯೆ? ಮಹಿಳೆಯರ ಬರವಣಿಗೆಯನ್ನು ಇಂಥ ಅತಿಕ್ರಮಿಸುವ ಓದಿಗೆ ಒಳಪಡಿಸುವ ಅಗತ್ಯ ಖಂಡಿತಕ್ಕೂ ಇದೆ).

ಉದಾಹರಣೆಗೆಂದು ಎರಡು ಕತೆಗಳನ್ನು ನೋಡೋಣ. ‘ಕಪ್ಪು ಮೋಡ ಬೆಳ್ಳಿ ಅಂಚು’ ಮತ್ತು ‘ಹೊಸ ಹುಟ್ಟು’. ಮಧ್ಯಮ ವರ್ಗದ ಹೆಣ್ಣೊಬ್ಬಳು ಡೈವೊರ್ಸ್ ನಂತರ ತನ್ನ ಬದುಕನ್ನು ಮೊದಲಿನಿಂದ ಶುರು ಮಾಡಿ ನಿಧಾನವಾಗಿ ಗೆಲ್ಲುವುದು ಮೊದಲ ಕತೆಯಾದರೆ, ಹೆಣ್ಣಿನ ಮೂಲ ಲಕ್ಷಣವೆಂದು ಒಪ್ಪಲಾಗಿರುವ, ಒಪ್ಪಿಸಲಾಗಿರುವ ತಾಯ್ತನದ ಸವಾಲನ್ನು ಭಿನ್ನವಾಗಿ ಎದುರಿಸಿ ಗೆಲ್ಲುವ ಹೆಣ್ಣಿನ ಕತೆ ಎರಡನೆಯದು.

ಮದುವೆ ಮತ್ತು ತಾಯ್ತನ ಎನ್ನುವ ಎರಡು ‘ಪರಮಪದ’ಗಳು ಸಿಕ್ಕಿ ಬಿಟ್ಟರೆ ಅಲ್ಲಿಗೆ ಬದುಕು ಸಾರ್ಥಕವಾಯಿತು ಎನ್ನುವ ನೆಲೆಗಳನ್ನು ಹೆಣ್ಣಿನಲ್ಲಿ ಹೇಗೆ ಬಿತ್ತಲಾಗಿದೆಯೆಂದರೆ ಬದುಕಿನ ಮಿಕ್ಕ ಆಯಾಮಗಳೂ ಇಷ್ಟೇ ಮುಖ್ಯವಾದವು ಎನ್ನುವ ಜ್ನಾನೋದಯ ಸ್ವತಃ ಹೆಣ್ಣಿಗೇ ಅಪಾರ ಕಷ್ಟದ್ದೂ ಮತ್ತು ಅನೇಕ ಬಾರಿ ಬೇಡವಾದದ್ದೂ ಆಗುವ ಮಟ್ಟಿಗೆ. ಇದಕ್ಕಿಂತ ಅಪಾಯದ ಸಂಗತಿಯೆಂದರೆ ಉಸಿರು ಕಟ್ಟಿಸುವ ದಾಂಪತ್ಯದಲ್ಲೂ ಹೆಣ್ಣು ‘ಇಟ್ಟಾಂಗೆ ಇರುವೆನೊ ಹರಿಯೆ’ ಎನ್ನುವ ವಿಧಿವಾದಿಯಾಗಿ ಬಿಡುವುದು. ಮೊದಲ ಕತೆಯ ನಾಯಕಿ ಮಧುವಿನ ಪ್ರಯಾಣ ಸೊನ್ನೆಯಿಂದ ಎಂಬಂತೆ ಪ್ರಾರಂಭವಾಗುವುದು ಇಂಥ ಮನಸ್ಥಿತಿಯಿಂದಲೇ. ಬದುಕು ಕೊಟ್ಟಷ್ಟು ಸಾಕು ಎಂದುಕೊಂಡವಳಿಗೆ, ಗಂಡ ಕೊಟ್ಟ ಡೈವೋರ್ಸ್‌ನಿಂದ ಇನ್ನು ಮುಂದೆ ಶಬ್ದವಿಲ್ಲ ಎನ್ನುವಂಥ ಆಘಾತವಾಗುತ್ತದೆ. ಆತ್ಮಹತ್ಯೆಗೂ ಈಕೆ ಪ್ರಯತ್ನಿಸುತ್ತಾಳೆ. ಗೆಳತಿಯೊಬ್ಬಳು ನೀಡುವ ಮಾರ್ಗದರ್ಶನದಲ್ಲಿ ಸತ್ಯವಿದೆ ಎಂದು ಅನಿಸಿದರೂ ಅದನ್ನು ಅನುಸರಿಸಿ ಬದುಕು ಕಟ್ಟಿಕೊಳ್ಳುವ ರಿಸ್ಕ್, ಶ್ರಮ ತೆಗೆದುಕೊಳ್ಳಬೇಕೇ ಬೇಡವೇ ಎನ್ನುವುದಕ್ಕಿಂತ ಹೆಚ್ಚಾಗಿ ತನಗೆ ಆ ಸಾಮರ್ಥ್ಯವೇ ಇಲ್ಲ ಎನ್ನುವ ಕೀಳರಿಮೆಯೂ ಸೇರಿ ಇವಳಿಗೆ ಬದುಕು ಭಾರ, ಜಡ ಎನಿಸಲು ಶುರುವಾಗುತ್ತದೆ.

ಗಂಡ ಕೊಡುವ ಸಾವಿರದೈನೂರು ರೂಪಾಯಿ ಭಿಕ್ಷೆ ಎನಿಸಿದರೂ ತೆಗೆದುಕೊಳ್ಳದೆ ವಿಧಿಯೂ ಇಲ್ಲ ಎನ್ನುವ ಅಂಶವೂ ಅವಳಲ್ಲಿ ಸ್ವಪ್ರಜ್ಞೆಯನ್ನು ಎಚ್ಚರಿಸುವಲ್ಲಿ ವಿಫಲವಾಗುತ್ತದೆ ಎನ್ನುವ ಅಂಶ ಅವಲಂಬಿತ ಸ್ಥಿತಿಯನ್ನು ಹೆಣ್ಣು ತನ್ನ ಅಸ್ತಿತ್ವದ ವಿನ್ಯಾಸ ಎಂದೇ ಒಪ್ಪಿಕೊಂಡಿರುವ ಸತ್ಯವನ್ನು ಹೇಳುತ್ತದೆ. ಆದರೆ ಇದರ ಜೊತೆಗೇ ಒಳಗೇ ಎಲ್ಲೋ ಮೂಲೆಯಲ್ಲಿ ಪ್ರಶ್ನೆಯೊಂದು ಏಳುತ್ತದೆ, ಆ ಪ್ರಶ್ನೆ ಅವಳಿಗೆ ಖಚಿತವಾದಾಗಲೇ ಅದು ಹೆಣ್ಣನ್ನು ನಿಜವಾದ ಅರ್ಥದಲ್ಲಿ ಜಾಗೃತಗೊಳಿಸುತ್ತದೆ. ಈ ಕತೆಯ ನಾಯಕಿಗೂ ಈ ಪ್ರಶ್ನೆ ಸ್ಪಷ್ಟವಾಗುವುದು, ಅಂಗಡಿಯೊಂದರಲ್ಲಿ ಅವಮಾನದ ಪ್ರಸಂಗವನ್ನು ಅನುಭವಿಸಿದಾಗ. ಈ ಪ್ರಸಂಗ ಅವಳಲ್ಲಿ ಚಿಮ್ಮುಹಲಗೆಯಂತೆ ಕೆಲಸ ಮಾಡುತ್ತದೆ. ನಿಧಾನವಾಗಿ ಆತ್ಮಗೌರವವನ್ನು ಪಡೆಯುವ ದಾರಿಯನ್ನು ಹುಡುಕಲು ಆರಂಭಿಸುತ್ತಾಳೆ. ಟೈಲರಿಂಗ್‌ನ ಮೂಲಕ ತನ್ನ ಆರ್ಥಿಕ, ಮಾನಸಿಕ , ಸಾಮಾಜಿಕ ಸ್ಥಿರತೆಯನ್ನು ಪಡೆದುಕೊಳ್ಳುತ್ತಾಳೆ. ತನ್ನ ಬದುಕು ಸೋತು ಹೋಯಿತು, ಮುಗಿದು ಹೋಯಿತು ಎಂದುಕೊಂಡಿದ್ದವಳಿಗೆ ಇಲ್ಲಿಯ ತನಕ ತನ್ನದು ಎನ್ನುವ ಬದುಕು ಶುರುವಾಗಿರಲೇ ಇಲ್ಲ, ತಾನು ನಿರ್ದೇಶಿತ ಬದುಕೊಂದನ್ನು ನಡೆಸುತ್ತಿದ್ದೆನಲ್ಲವೆ ಎನಿಸಿಬಿಡುತ್ತದೆ. ಯಶಸ್ವಿ ದಾಂಪತ್ಯ ಯಾರಿಗೆ ಬೇಡ? ಆದರೆ ಅದು ಸಾಧ್ಯವಾಗದಿದ್ದಾಗ ಸ್ವಾವಲಂಬಿಯಾಗಿ ಬದುಕುವ ಮಾರ್ಗವನ್ನು ಹುಡುಕಿಕೊಳ್ಳುವ ಮಧುವಿಗೆ ಅನಾವರಣ ವಾಗುವ ಹಲವು ಸತ್ಯಗಳಿವೆ. ದಾಂಪತ್ಯದ ಸೋಲು ಮತ್ತು ಯಶಸ್ಸಿನ ಆಚೆಗೆ ಹೆಣ್ಣು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳ ಬೇಕು, ಅದು ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಆರ್ಥಿಕ ಸ್ವಾವಲಂಬಿತನವು ಸ್ವಪ್ರಜ್ಞೆಯನ್ನು ಜಾಗೃತ ಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆತ್ಮಗೌರವವು ಬದುಕಿನ ಯಾವ ಬಿಕ್ಕಟ್ಟುಗಳನ್ನೂ ಎದುರಿಸಲು ಬೇಕಾಗುವ ಧೀರತೆಯನ್ನು ಕೊಡುತ್ತದೆ. ಈ ಎಲ್ಲವೂ ಸೇರಿದಾಗ ಯಾವ ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಗಳು ಪೆಡಂಭೂತ ವಾಗಿ, ಗೆಲ್ಲಲಾಗದ ಯುದ್ಧಗಳಾಗಿ ಕಾಣಿಸುತ್ತವೋ ಅವು ಗೆಲ್ಲಬಹುದಾದ ಸವಾಲುಗಳಾಗಿ ಕಾಣಿಸುತ್ತಾ ಹೋಗುತ್ತವೆ. ಈ ಸವಾಲುಗಳನ್ನು ಎದುರಿಸುವ ಪ್ರಕ್ರಿಯೆಯಲ್ಲಿಯೇ ಬದುಕಿನ ಚೇತೋಹಾರಿ ಗುಣಗಳು ಹಿಂದೆಂದಿಗಿಂತ ಹೆಚ್ಚು ತೀವ್ರವಾಗಿ ನಮ್ಮ ಅನುಭವಕ್ಕೆ ಬರುವುದನ್ನೂ ನೇಮಿಚಂದ್ರರ ಕತೆಗಳು ಶಕ್ತವಾಗಿ ತೋರಿಸಿಕೊಡುತ್ತವೆ.

‘ಹೊಸ ಹುಟ್ಟು’ ತಾಯ್ತನವನ್ನು ಪಡೆಯಲಾಗದ ಕಲಾವಿದೆಯೊಬ್ಬಳ ಕತೆ. ವೃತ್ತಿಪರತೆಯಲ್ಲಿ ನಂಬಿಕೆ ಇಟ್ಟ ಕಲಾವಿದೆಗೆ ಆರಂಭದಲ್ಲಿ ತಾಯ್ತನ ಒಂದು ತೊಡಕು ಎನಿಸಿದರೂ ಮುಂದುವರಿದ ಘಟ್ಟದಲ್ಲಿ ಮಗು ಬೇಕು ಎನಿಸಿದಾಗ ಜೈವಿಕವಾಗಿ ತಾನು ತಾಯಿಯಾಗಲು ಸಾಧ್ಯವಿಲ್ಲ ಎನಿಸಿ, ಕಂಗಾಲಾಗುತ್ತಾಳೆ. ಏನೆಲ್ಲ ಪ್ರಯತ್ನಗಳ ನಂತರವೂ ಇದು ಆಗದ್ದು ಎನಿಸಿದಾಗ, ಕುಸಿದವಳಿಗೆ ಸಹ ಕಲಾವಿದೆಯೊಬ್ಬಳು, ತಾಯ್ತನದ ವ್ಯಾಖ್ಯಾನವನ್ನೇ ವಿಸ್ತರಿಸಿ, ಮಾರ್ಪಡಿಸಿ ಇವಳೆದುರಿಗೆ ಮಂಡಿಸಿದಾಗ ತಾಯ್ತನವೇ ದೊರೆತ ನೆಮ್ಮದಿಯನ್ನು ಇವಳು ಅನುಭವಿಸುತ್ತಾಳೆ. ‘ತಾಯ್ತನವೆನ್ನುವುದು ಸೃಷ್ಟಿಕ್ರಿಯೆ ಎಂದಾದರೆ, ನೀನು ರಚಿಸುವ ಕಲಾಕೃತಿಗಳೆ ನಿನ್ನ ಮಕ್ಕಳಲ್ಲವೇ’ ಎನ್ನುವ ಗೆಳತಿಯ ದೃಷ್ಟಿಕೋನ ಶಂಕೆಯಿಲ್ಲದ ದೃಢ ನಂಬಿಕೆಯನ್ನು ಇವಳಲ್ಲಿ ಹುಟ್ಟಿಸುತ್ತದೆ. ತಾಯ್ತನದ ಕೊರತೆ ತನಗಿಲ್ಲ ಎನ್ನುವ ಆತ್ಮವಿಶ್ವಾಸವನ್ನು ಇದು ಅವಳಲ್ಲಿ ತುಂಬುತ್ತದೆ. ಈ ಕತೆಯ ಮಹತ್ವ ಇರುವುದು ತಾಯ್ತನದ ವ್ಯಾಖ್ಯಾನವನ್ನು ವಿಸ್ತರಿಸಿರುವುದರಲ್ಲಿ ಮತ್ತು ಈ ಮೂಲಕ ಹೆಣ್ಣಿನ ವ್ಯಕ್ತಿತ್ವದ ವ್ಯಾಖ್ಯಾನವನ್ನೂ ಭಿತ್ತಿಯನ್ನೂ ಇದು ಅದ್ಭುತವಾಗಿ ವಿಸ್ತರಿಸುತ್ತದೆ ಎನ್ನುವ ಕಾರಣಕ್ಕೆ.

ಈ ಎರಡಲ್ಲದ ಇನ್ನೂ ಅನೇಕ ಮಹತ್ವದ ಆಯಾಮಗಳನ್ನು ನೇಮಿಚಂದ್ರರ ಕತೆಗಳು ಶೋಧಿಸುತ್ತವೆ. ಆದರೆ ಈ ಎರಡನ್ನೇ ಪ್ರಾತಿನಿಧಿಕವಾಗಿ ಆರಿಸಿಕೊಳ್ಳಲು ನಿರ್ದಿಷ್ಟ ಕಾರಣಗಳಿವೆ. ಹೆಣ್ಣಿನ ವ್ಯಕ್ತಿತ್ವದ ಎರಡು ಮುಖ್ಯ ವೈಯಕ್ತಿಕವೂ ಸಾಮಾಜಿಕವೂ ಆದ ನೆಲೆಗಳೆಂದರೆ ದಾಂಪತ್ಯ ಮತ್ತು ತಾಯ್ತನ. ಈ ಎರಡರ ವ್ಯಾಖ್ಯಾನವನ್ನೂ ನೇಮಿಚಂದ್ರರ ಈ ಎರಡೂ ಕತೆಗಳು ಯಶಸ್ವಿಯಾಗಿ ಮುರಿದು ಕಟ್ಟುತ್ತವೆ. ಅಗೋಚರವೂ ಅಧೀನವೂ ಆಗಿದ್ದ ಹೆಣ್ಣಿನ ನೆಲೆಗಳನ್ನು ಸ್ವಾಯತ್ತ ನೆಲೆಗೂ ಆಯ್ಕೆಯ ನೆಲೆಗೂ ಈ ಕತೆಗಳು ಪಲ್ಲಟಿಸುತ್ತವೆ. ಅನಿವಾರ್ಯವಾದಾಗಲೂ ಅದನ್ನು ಹೆಣ್ಣು ತನ್ನಿಚ್ಛೆಯಂತೆ ರಚಿಸಿಕೊಳ್ಳುವ ಮೂಲಕ ಅಗತ್ಯವಾದ ಅವಕಾಶ(space)ವನ್ನು ಸೃಷ್ಟಿಸಿಕೊಳ್ಳುವ ವ್ಯಕ್ತಿ ಸ್ವಾತಂತ್ರ್ಯ ವನ್ನೂ ಇವು ಬಲವಾಗಿ ಪ್ರತಿಪಾದಿಸುತ್ತವೆ. ಪ್ರತಿಕೂಲ ಪರಿಸ್ಥಿತಿಯನ್ನೇ ತನ್ನತನದ ರಚನೆಗೆ ಬಳಸಿ ಗೆಲ್ಲುವ ಈ ನಾಯಕಿಯರು ನಮ್ಮ ನಡುವಿನ ಹೊಸಹೆಣ್ಣಿನ ಮಾದರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT