ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಫ್‌ಐಐ’ ಒತ್ತಡ

Last Updated 30 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಷೇರುಪೇಟೆ ವಹಿವಾಟಿನ ಹೆಗ್ಗುರು­ತಾದ ಸಂವೇದಿ ಸೂಚ್ಯಂಕ ಶುಕ್ರವಾರ (ಮಾ. 28) ಸಾರ್ವಕಾಲೀನ ದಾಖಲೆಯ 22,363.97 ಅಂಶ ತಲುಪಿತು. ಇದು ದಿನದ ಮಧ್ಯಾಂತರ­ದಲ್ಲಿನ ಹಂತ­ವಾ­ದರೆ ಕೊನೆಯಲ್ಲಿ ಸಂವೇದಿ ಸೂಚ್ಯಂಕವು 22,339.97 ಅಂಶಗಳಲ್ಲಿ ಕೊನೆಗೊಂಡಿತು. ಅಲ್ಲದೆ ಇತರೆ ವಲಯಾಧಾರಿತ ಸೂಚ್ಯಂಕಗಳಾದ ಬ್ಯಾಂಕೆಕ್‌್ಸ, ಮೆಟಲ್‌ ಇಂಡೆಕ್‌್ಸ, ಮಧ್ಯಮ ಶ್ರೇಣಿ ಸೂಚ್ಯಂಕ ಸಾರ್ವಜನಿಕ ವಲಯದ ಸೂಚ್ಯಂಕಗಳು ಸಹ ಸಕಾರಾತ್ಮಕವಾಗಿದ್ದುದು ವಿಶೇಷ.

ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿದಿನ ಸಂವೇದಿ ಸೂಚ್ಯಂಕವು ದಾಖಲೆಯ ಏರಿಕೆ ಕಂಡು ವಿಜೃಂಭಿಸಿದೆ. ಈ ಏರಿಕೆಯೊಂದಿಗೆ ಶುಕ್ರವಾರ ಪೇಟೆಯ ಬಂಡವಾಳ ಮೌಲ್ಯ ರೂ73.72 ಲಕ್ಷ ಕೋಟಿಗೆ ತಲುಪಿ ಮತ್ತೊಂದು ದಾಖಲೆ ನಿರ್ಮಿಸಿದೆ. ಈ ರೀತಿಯ ಸಾಮೂಹಿಕ ದಾಖಲೆಗಳತ್ತ ಷೇರುಪೇಟೆ­ಯನ್ನು ಕೊಂಡೊಯ್ಯುತ್ತಿರುವ ಅಂಶವೆಂದರೆ ವಿದೇಶಿ ವಿತ್ತೀಯ ಸಂಸ್ಥೆಗಳಿಂದ ಬರುತ್ತಿರುವ ಹೂಡಿಕೆಯ ಒಳಹರಿವು!

ಈ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್‌, ಜಾಗತಿಕ ಮಟ್ಟದ ಬಂಡವಾಳ ನಿಯಮ ಬಾಸೆಲ್‌–3  ಜಾರಿಗೊಳಿಸುವುದನ್ನು ಒಂದು ವರ್ಷ (2019ರ ಮಾರ್ಚ್‌ವರೆಗೆ) ಮುಂದೂಡಿದ ಕಾರಣ ಬ್ಯಾಂಕಿಂಗ್‌ ಷೇರುಗಳಲ್ಲಿ ಮಿಂಚು ಸಂಚರಿಸಿದಂತಾಗಿದೆ. ಶುಕ್ರವಾರದ ವಹಿವಾಟಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ (ಎಸ್‌ಬಿಐ) ಷೇರು ಶೇ 4.6 ರಷ್ಟು, ಬ್ಯಾಂಕ್‌ ಆಫ್‌ ಬರೋಡಾ ಶೇ 3.3ರಷ್ಟು, ಬ್ಯಾಂಕ್‌ ಆಫ್‌ ಪಂಜಾಬ್‌ ಷೇರುಗಳ ಮೌಲ್ಯ ಶೇ 4ರಷ್ಟು ಹೆಚ್ಚಿದೆ. ಹಾಗೆಯೇ ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್ ಬ್ಯಾಂಕ್‌ ಷೇರುಗಳೂ ಸಹ ಆಕರ್ಷಕ ಏರಿಕೆ ದಾಖಲಿಸಿವೆ.

ಈ ಮಧ್ಯೆ ಅಂತರರಾಷ್ಟ್ರೀಯ ವಿತ್ತೀಯ ಸಂಸ್ಥೆ ‘ಗೋಲ್‌್ಡಮನ್‌ ಸ್ಯಾಚ್‌’, ಭಾರತೀಯ ಸ್ಟೇಟ್‌ ಬ್ಯಾಂಕ್‌ ಷೇರನ್ನು ತಟಸ್ಥ ಮಟ್ಟದಿಂದ ಕೊಳ್ಳುವ ದರ್ಜೆಗೆ ಏರಿಸಿದುದು ಈ ಏರಿಕೆಯ ಹಿಂದಿನ ಕಾರಣವಾಗಿದೆ ಎನ್ನಲಾಗಿದ್ದರೂ ಪ್ರಮುಖವಾಗಿ ಬ್ಯಾಂಕಿಂಗ್‌ ವಲಯದ ಪ್ರಮುಖ ಷೇರುಗಳು ‘ಎನ್‌ಪಿಎ’ ಎಂಬ ಗುಮ್ಮನ ಪ್ರಭಾವದಿಂದ ಹೆಚ್ಚಿನ ಅಪಮೌಲ್ಯಕ್ಕೊಳಪಟ್ಟು ನಂತರ ಮೌಲ್ಯಾಧಾರಿತ ಕೊಳ್ಳುವಿಕೆಗೆ ಮುಂದಾಗಿವೆ.

‘ಎನ್‌ಪಿಎ’ಗಳಲ್ಲಿ ವ್ಯತ್ಯಾಸವಿಲ್ಲದೇ ಇದ್ದರೂ ಇತರೆ ಪ್ರಭಾವಿ ಅಂಶಗಳಿಗೆ ಒತ್ತು ನೀಡಿ ಏರಿಕೆ ತೋರುವಂತಾಗಿರುವುದು ವಿಸ್ಮಯಕಾರಿ ಅಂಶವಾಗಿದೆ. ಇದೇ ರೀತಿ ಸಾರ್ವಜನಿಕ ವಲಯದ ಪ್ರಮುಖ ಕಂಪೆನಿಗಳಾದ ಒಎನ್‌ಜಿಸಿ, ಭಾರತ್‌ ಪೆಟ್ರೋಲಿಯಂ ಮೊದಲಾದ ಕಂಪೆನಿಗಳ ಷೇರುಗಳು ಸಾರಾಸಗಟಾಗಿ ತಿರಸ್ಕಾರಕ್ಕೊಳಗಾಗಿದ್ದು, ಈಚಿನ ದಿನಗಳಲ್ಲಿ ಆ ವಲಯದ ಕಂಪೆನಿಗಳಲ್ಲಿ ಅಡಕವಾಗಿರುವ ಮೌಲ್ಯಗಳಿಗೆ ಮಾನ್ಯತೆ ದೊರಕಿ ಏರಿಕೆ ಕಾಣುತ್ತಿವೆ.

ಒಟ್ಟಾರೆ ಸಂವೇದಿ ಸೂಚ್ಯಂಕವು ಈ ವಾರ 584 ಅಂಶಗಳ ಏರಿಕೆ ದಾಖಲಿಸಿದರೆ ಮಧ್ಯಮ ಶ್ರೇಣಿ ಸೂಚ್ಯಂಕವು 218 ಅಂಶಗಳ ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 167 ಅಂಶಗಳ ಏರಿಕೆಯಿಂದ ಜೊತೆಗೂಡಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ಈ ವಾರ  ರೂ7,248 ಕೋಟಿ ಹೂಡಿಕೆ ಮಾಡಿವೆ. ಎಂದಿನಂತೆ ಭಾರತೀಯ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಹಾದಿ ಹಿಡಿದು, ಒಟ್ಟು 2471 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯ ರೂ73.72 ಲಕ್ಷ ಕೋಟಿಗೆ ಹೆಚ್ಚಾಗಿದೆ.

ಬೋನಸ್‌ ಷೇರು
*ಕೊಥಾರಿ ಪ್ರಾಡಕ್‌್ಟ್ಸ  2:1ರ ಬೋನಸ್‌ ಷೇರು ವಿತರಣೆಗೆ ಏ. 2 ನಿಗದಿತ ದಿನ.
*ಮಯೂರ್‌ ಯೂನಿಕೋಟ್‌್ಸ ಕಂಪೆನಿಯ 1:1ರ ಅನುಪಾತದ  ಬೋನಸ್‌ ಷೇರು ವಿತರಣೆಗೆ ಏಪ್ರಿಲ್‌ 2 ನಿಗದಿತ ದಿನವಾಗಿದೆ. 4ಜಿ.ಎಂ.ಬ್ರುವರೀಸ್‌ ಏ.3ರಂದು ಬೋನಸ್‌ ಷೇರು ಪರಿಶೀಲಿಸಲಿದೆ.

ವಾರದ ವಿಶೇಷ
ಷೇರುಪೇಟೆಗಳು ಚುರುಕಾದ ಏರಿಕೆ ಕಾಣುತ್ತಿದ್ದು, ಸೂಚ್ಯಂಕ ವಿಜೃಂಭಣೆಯ ಹಂತ ತಲುಪಿ ಗರಿಷ್ಠ ದಾಖಲೆ ನಿರ್ಮಿಸುತ್ತಿವೆ. ಸಣ್ಣ ಹೂಡಿಕೆದಾರರು ಈಗಲೂ ಕಂಪೆನಿಗಳ ಬಗ್ಗೆ ಭಾವುಕರಾಗಿ ಅವಕಾಶ ವಂಚಿತರಾಗುವುದನ್ನು ಕಾಣಬಹುದಾಗಿದೆ. ಇದು ಈಗಿನ ದಿನಗಳಿಗೆ ಹಿತಕರ ಚಿಂತನೆಯಲ್ಲ. ಪೇಟೆಯಲ್ಲಿನ ದರಗಳು ವೈವಿಧ್ಯಮಯ ಕಾರಣಗಳಿಂದ ಏರಿಳಿತ ಕಾಣುತ್ತವೆ ಎಂಬುದಕ್ಕೆ ಈಗಿನ ಬ್ಯಾಂಕಿಂಗ್‌, ಪಿ.ಎಸ್‌.ಯು ವಲಯದ ಷೇರುಗಳಲ್ಲಿನ ತೇಜಿ ಹಾಗೂ ಐ.ಟಿ, ಫಾರ್ಮಾ ವಲಯಗಳಲ್ಲಿನ ಕುಸಿತಗಳು ಸಾಕ್ಷಿಯಾಗಿವೆ.

ಲಭ್ಯವಿರುವ ಅವಕಾಶಗಳನ್ನು  ಉಪಯೋಗಿಸಿಕೊಳ್ಳುವ ಪದ್ಧತಿಯನ್ನು ರೂಢಿಸಿಕೊಂಡಲ್ಲಿ ಮಾತ್ರ ಬಂಡವಾಳ ಸುರಕ್ಷತೆಯಿಂದ ಲಾಭ ಗಳಿಸುವುದು ಸಾಧ್ಯ. ಕಳೆದ ಒಂದು ತಿಂಗಳಲ್ಲಿ ಗ್ರಾಹಕ ಬಳಕೆ ವಲಯದ ಕಂಪೆನಿ ಐಟಿಸಿ ರೂ318 ರಿಂದ ರೂ365ರವರೆಗೂ ಏರಿಳಿತ ಕಂಡಿದೆ. ಈ ಹಂತದಲ್ಲಿ ಕಂಪೆನಿಯ ಅಧ್ಯಕ್ಷರು, ತಮ್ಮಲ್ಲಿರುವ ಭಾಗಿತ್ವದಲ್ಲಿ ಎಂಟು ಲಕ್ಷ ಷೇರುಗಳನ್ನು ಮಾರಾಟ ಮಾಡಿ ರೂ28.50 ಕೋಟಿ ಹಣವನ್ನು ಸಂಗ್ರಹಿಸಿ  ಕೊಂಡಿದ್ದಾರೆ. ಸುಮಾರು ರೂ355 ಹಂತದಲ್ಲಿ ಮಾರಾಟ ಮಾಡಿ ಪೇಟೆಯ ಪರಿಸ್ಥಿತಿಯ ಲಾಭ ಪಡೆದು ಕೊಂಡಿದ್ದಾರೆ.

ಕಳೆದ ನವೆಂಬರ್‌ ತಿಂಗಳಲ್ಲಿ ಭಾರತಿ ಏರ್‌ಟೆಲ್‌ ಕಂಪೆನಿಯ ಮುಖ್ಯಸ್ಥರು 50 ಸಾವಿರ ಷೇರುಗಳನ್ನು ಮಾರಾಟ ಮಾಡಿ ರೂ1.80 ಕೋಟಿ ಹಣ ಸಂಗ್ರಹಿಸಿದರೆ, ಇನ್ಫೊಸಿಸ್‌ ಆಡಳಿತ ಮಂಡಳಿಯ ಸದಸ್ಯರು ಒಂದು ಲಕ್ಷ ಷೇರುಗಳನ್ನು ರೂ33 ಕೋಟಿಗೆ ಮಾರಾಟ ಮಾಡಿ ಪೇಟೆಯ ತೇಜೀ ವಾತಾವರಣದ ಲಾಭ ಪಡೆದುಕೊಂಡಿದ್ದಾರೆ. ಅಂದರೆ ಪೇಟೆ ಒದಗಿಸಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.

ತಾತ್ಕಾಲಿಕ ಪರಿಣಾಮ
ಹೀಗಿರುವಾಗ ಪೇಟೆಯಲ್ಲಿ ಲಾಭ ಗಳಿಕೆಯ ದೃಷ್ಟಿಯಿಂದ ಹೂಡಿಕೆ ಮಾಡುವವರಿಗೆ ಕಂಪೆನಿ ಬಗ್ಗೆ ಭಾವುಕತೆ ಬೆಳೆಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಇತ್ತೀಚೆಗೆ  ಐ.ಟಿ, ಫಾರ್ಮಾ ಕಂಪೆನಿಗಳಲ್ಲಿ ಉಂಟಾದ ಕುಸಿತ, ಎಲ್‌ ಅಂಡ್‌ ಟಿ ಫೈನಾನ್‌್ಸ ಹೋಲ್ಡಿಂಗ್‌ನಲ್ಲಿ ಕಂಡುಬಂದ ಭಾರಿ ಕುಸಿತದ ಹಿಂದೆ ರೂಪಾಯಿಯ ಮೌಲ್ಯ ಹೆಚ್ಚಳ, ಆಫರ್‌ ಫಾರ್‌ ಸೇಲ್‌ ಮುಂತಾದ ಕಾರಣಗಳಿದ್ದುವಾದರೂ, ವಲಯದಿಂದ ವಲಯಕ್ಕೆ ವಹಿವಾಟುದಾರ ವೃಂದ, ವಿತ್ತೀಯ ಸಂಸ್ಥೆಗಳು, ಜಿಗಿಯುವುದರಿಂದ ಅವಕಾಶ ಆಪತ್ತುಗಳೆಲ್ಲಾ ತಾತ್ಕಾಲಿಕ.

ಆದರೆ ಈಗಿನ ಸಂದರ್ಭದಲ್ಲಿ ಬೃಹತ್‌ ಬಂಡವಾಳ ಕಂಪೆನಿಗಳತ್ತ ಚಟುವಟಿಕೆ ಕೇಂದ್ರೀಕೃತವಾದರೆ ಸುರಕ್ಷಿತ ವರ್ಷಾಂತ್ಯದ ಕಾರಣ ಹಲವಾರು ನಿಧಿಗಳು, ಮ್ಯುಚುಯಲ್‌ ಫಂಡ್‌ಗಳು ತಮ್ಮ ವಿವಿಧ ಯೋಜನೆಗಳಲ್ಲಿನ ಷೇರುಗಳನ್ನು ಒಂದು ಯೋಜನೆಯಿಂದ ಮತ್ತೊಂದು ಯೋಜನೆಗೆ  ವರ್ಗಾಯಿಸಿಕೊಳ್ಳುವುದೂ ಸಹ ಪೇಟೆಯ ವಹಿವಾಟಿನ ಗಾತ್ರ ಹೆಚ್ಚಿಸುವುದು ಪ್ರಭಾವಿ ಅಂಶವಾಗಿರುತ್ತದೆ. ಕೇವಲ ವಿಶ್ಲೇಷಣೆಗಳಿಗೆ ಮಾರುಹೋಗದೆ ಆಂತರಿಕ ಅಂಶಗಳು, ವರ್ತಮಾನದ ಬೆಳವಣಿಗೆಳನ್ನಾಧರಿಸಿ ಅರಿತು ಚಟುವಟಿಕೆ ನಡೆಸುವುದು ಉತ್ತಮ.

ಇ–ಹೂಡಿಕೆದಾರರಿಗೆ ಸಿಹಿ ಸುದ್ದಿ
ಹಗರಣಗ್ರಸ್ತ ನ್ಯಾಷನಲ್‌ ಸ್ಪಾಟ್‌ ಎಕ್‌್ಸಚೇಂಜ್‌ ಲಿ.ನ (ಎನ್‌ಎಸ್‌ಇಎಲ್‌) ಇ–ಸೀರೀಸ್‌ನ ಲೋಹಗಳಾದ ಇ– ಸಿಲ್ವರ್‌, ಇ–ಗೋಲ್ಡ್ ಮುಂತಾದ ಯೋಜನೆಗಳಲ್ಲಿ ಹಣ ಮಾಡಿರುವ ಸುಮಾರು 33 ಸಾವಿರ ಹೂಡಿಕೆದಾರರ ಹೋಲ್ಡಿಂಗನ್ನು ಭೌತಿಕ ರೂಪಕ್ಕೆ ಅಥವಾ ನಗದು ಮೂಲಕ ಚುಕ್ತಾ ಮಾಡಲು ಫಾರ್ವರ್ಡ್‌ ಮಾರ್ಕೆಟ್‌್ಸ ಕಮಿಷನ್‌ ತನ್ನ ಅಭ್ಯಂತರ ಇಲ್ಲ ಎಂದು ತಿಳಿಸಿದೆ. 2013ರ ಆಗಸ್‌್ಟನಿಂದ ನಿಷ್ಕ್ರಿಯಗೊಂಡಿರುವ ಇ–ಲೋಹಗಳಿಗೆ  ಪುನರ್ಜೀವ ದೊರೆ­ತಿರುವುದು ಸಣ್ಣ ಹೂಡಿಕೆದಾರರಿಗೆ ಸಂತಸದ ಸುದ್ದಿಯಾಗಿದೆ.

 98863-13380
(ಮಧ್ಯಾಹ್ನ 4.30ರ ನಂತರ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT