ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಕ್ ದೇ ಇಂಡಿಯಾ...’

Last Updated 16 ಜೂನ್ 2018, 9:22 IST
ಅಕ್ಷರ ಗಾತ್ರ

ಭಾರತದ ಕಾರ್ಮಿಕ ಶಕ್ತಿಯಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯ ಪ್ರಮಾಣ ಕಡಿಮೆ ಇದೆ. ಏಕೆ ಹೀಗೆ?

ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಸೇರಿದೆ. ಈ ವರ್ಷ ರಾಷ್ಟ್ರದಲ್ಲಿ ಶೇ 7.25ರಷ್ಟು ಆರ್ಥಿಕ ವೃದ್ಧಿಯನ್ನು ನಿರೀಕ್ಷಿಸಲಾಗಿದೆ. ಕಳೆದ ವಾರ  ಅಂತರರಾಷ್ಟ್ರೀಯ ಹಣಕಾಸು ನಿಧಿ  (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟೀನ್ ಲಗಾರ್ಡ್  ಎರಡು ದಿನ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತವಾದ  ಭರವಸೆ ಇದು.  ‘ಚಕ್ ದೇ ಇಂಡಿಯಾ’ ಎಂಬ ನುಡಿಗಟ್ಟು ಬಳಸಿ  ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಹುರಿದುಂಬಿಸುವ ಮಾತುಗಳನ್ನಾಡಿದರು ಅವರು.  ಇಂತಹ ಭರವಸೆಯ ಮಾತುಗಳ ಮಧ್ಯೆ, ಕಳವಳಕ್ಕೆ ಕಾರಣವಾಗುವ ಅಂಶಗಳೂ ಇದೇ ಸಂದರ್ಭದಲ್ಲೇ ಚರ್ಚೆಗೆ ಒಳಗಾಯಿತು.

ಐಎಂಎಫ್ ಮುಖ್ಯಸ್ಥೆಯ ಭಾರತ ಭೇಟಿ ಸಂದರ್ಭದಲ್ಲೇ ಐಎಂಎಫ್ ಅಧ್ಯಯನ ವರದಿಯೊಂದು ಬಿಡುಗಡೆಯಾಯಿತು. ಈ ವರದಿಯ ಶೀರ್ಷಿಕೆ  ‘ಭಾರತದಲ್ಲಿ ಮಹಿಳಾ ಕಾರ್ಮಿಕರು: ಏಕೆ ಇಷ್ಟು ಕಡಿಮೆ?’. ಭಾರತದಲ್ಲಿ  ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿ ಮಹಿಳಾ  ಪಾಲ್ಗೊಳ್ಳುವಿಕೆಯ ರೂಪುರೇಷೆಗಳನ್ನು  ಈ ವರದಿ ಮುಂದಿಡುತ್ತದೆ. ಭಾರತದ ಆರ್ಥಿಕತೆಯ ವಾರ್ಷಿಕ ಪರಾಮರ್ಶೆಯ ಭಾಗವಾಗಿ ಇದು ಪ್ರಕಟವಾಗಿದೆ.

ಈ ವರದಿಯ ಪ್ರಕಾರ, ಭಾರತದ ಕಾರ್ಮಿಕ ಶಕ್ತಿಯಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯ ಪ್ರಮಾಣ ಕಡಿಮೆ ಇದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ಆರ್ಥಿಕ ಶಕ್ತಿಗಳಿಗೆ ಹೋಲಿಸಿದಲ್ಲಿ ಇದು ಕಡಿಮೆ. ಈ ಕ್ಷೇತ್ರದಲ್ಲಿ ಕಡಿಮೆ ಇರುವ ಗಂಡು– ಹೆಣ್ಣು ಅನುಪಾತದ ಅಂತರವನ್ನು ತುಂಬಬೇಕಿದೆ. ಭಾರತದ ಮಹಿಳಾ ಕಾರ್ಮಿಕ ಶಕ್ತಿ ಪಾಲ್ಗೊಳ್ಳುವಿಕೆಯ ಪ್ರಮಾಣ ಶೇ 33. ಇದು ಜಾಗತಿಕ ಸರಾಸರಿ ಪ್ರಮಾಣ ಶೇ 50ಕ್ಕಿಂತ ಕಡಿಮೆ ಇದೆ. ಹಾಗೆಯೇ ಪೂರ್ವ ಏಷ್ಯಾದ ಸರಾಸರಿ ಶೇ 63ಕ್ಕಿಂತ ಅರ್ಧದಷ್ಟು ಕಡಿಮೆ ಇದೆ.  ಆದರೆ ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಪಾಲ್ಗೊಂಡಷ್ಟು ಆರ್ಥಿಕ ಬೆಳವಣಿಗೆ ಚೇತರಿಕೆ ಕಾಣುತ್ತದೆ ಎಂಬುದನ್ನು ಮರೆಯಲಾಗದು.

‘ಮಹಿಳೆಯರ ಸಾಮರ್ಥ್ಯದ ಸರಿಯಾದ ಬಳಕೆ ಅನೇಕ ರಾಷ್ಟ್ರಗಳಲ್ಲಿ ಭಾರಿ ಬದಲಾವಣೆಗೆ ಕಾರಣವಾಗಬಹುದು.  ಭಾರತವೂ ಇದಕ್ಕೆ ಹೊರತಲ್ಲ’ ಎಂದು ಲಗಾರ್ಡ್ ಅವರು ಭಾರತ ಭೇಟಿ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಶಿಕ್ಷಣದಲ್ಲಿ ಹೂಡಿಕೆ ಸೇರಿದಂತೆ ಸಾಮಾಜಿಕ ವೆಚ್ಚ ಹೆಚ್ಚಾದಲ್ಲಿ, ಕಾರ್ಮಿಕ ಶಕ್ತಿಯೂ  ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಹೆಣ್ಣುಮಕ್ಕಳನ್ನು ಉಳಿಸಿ, ಶಿಕ್ಷಣ ನೀಡುವ (‘ಬೇಟಿ ಬಚಾವೊ, ಬೇಟಿ ಪಡಾವೊ’) ಮೋದಿಯವರ ಪ್ರಚಾರಾಂದೋಲನ ಐಎಂಎಫ್ ಮುಖ್ಯಸ್ಥೆ ಪ್ರಶಂಸೆಗೆ ಪಾತ್ರವಾಗಿದೆ.

ಲಗಾರ್ಡ್ ಸ್ವತಃ ಮಹಿಳಾ ಹಕ್ಕುಗಳ ಪ್ರತಿಪಾದಕರು. ‘ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ನೀಡುವುದು ನೈತಿಕವಾಗಿ ಸರಿ. ಅಷ್ಟೇ ಅಲ್ಲ, ಆರ್ಥಿಕವಾಗಿಯೂ ಸರಿಯಾದುದು’ ಎಂಬುದು ಅವರ ಪ್ರತಿಪಾದನೆ. ಕೆಲಸ ಮಾಡುವ ವಯಸ್ಸಿನ ಭಾರತೀಯ ಪುರುಷ, ಕೆಲಸ ಮಾಡುವ ವಯಸ್ಸಿನ ಭಾರತೀಯ ಮಹಿಳೆಗಿಂತ ವೇತನ ದೊರೆಯುವ ಉದ್ಯೋಗ ಹೊಂದಿರುವ ಅವಕಾಶ ಮೂರರಷ್ಟಿರುತ್ತದೆ. ಈ ಅಂತರ ನಗರ ಪ್ರದೇಶಗಳಲ್ಲಿ ಹೆಚ್ಚು.

2005ರ ನಂತರ, ಕಾರ್ಮಿಕ ವಲಯದಿಂದ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಾ ಸಾಗಿತು. ಇದಕ್ಕೆ ಕಾರಣವೇನು ಎಂಬುದು ಸ್ಪಷ್ಟವಿಲ್ಲ. ಆದರೆ, ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ರಾಷ್ಟ್ರಗಳಲ್ಲಿ ಇತ್ತೀಚಿನ ದಶಕಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ಬಹುಶಃ 2005ರ ನಂತರ ಭಾರತದಲ್ಲಿ ಗ್ರಾಮೀಣ ಕೂಲಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಹಜವಾಗಿಯೇ ಕುಟುಂಬದ ಆದಾಯದಲ್ಲಾದ ಹೆಚ್ಚಳ, ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಲು ಕಾರಣವಾಗಿರಬಹುದು ಎಂಬುದು ಒಂದು ವಿಶ್ಲೇಷಣೆ. ಹಾಗೆಯೇ ‘ಉದ್ಯೋಗಂ ಪುರುಷ ಲಕ್ಷಣಂ’ ಎಂಬುದು ಸಮಾಜದಲ್ಲಿ ಪ್ರಚಲಿತವಿರುವ ನಾಣ್ಣುಡಿ. 

ಹೆಣ್ಣುಮಕ್ಕಳು ಹೊರಗೆ ದುಡಿಯುವುದನ್ನು ಭಾರತೀಯ ಸಂಸ್ಕೃತಿ ಉತ್ತೇಜಿಸುವುದಿಲ್ಲ. ಇದರಿಂದ ಔಪಚಾರಿಕ ಕಾರ್ಮಿಕ ವಲಯದಲ್ಲಿ ಪಾಲ್ಗೊಳ್ಳಲು ಅವರು ಪುರುಷರಷ್ಟು ಈಗಲೂ ಸ್ವತಂತ್ರರಲ್ಲ. ಹೀಗಾಗಿ ಶೇ 90ಕ್ಕೂ ಹೆಚ್ಚಿನ  ಮಹಿಳಾ ಕಾರ್ಮಿಕ ಶಕ್ತಿ  ಅಸಂಘಟಿತ ವಲಯದಲ್ಲೇ ಇದೆ. ಭಾರತದ ಅಸಂಘಟಿತ ವಲಯದಲ್ಲಿ ಗಂಡಾಳು, ಹೆಣ್ಣಾಳು ಎಂಬಂತಹ ಪ್ರತ್ಯೇಕ ವಿಭಜನೆ ಬೇರೆ ಇದೆ. ಗಂಡಾಳು  ದೈಹಿಕವಾಗಿ ಗಟ್ಟಿ, ಹೆಚ್ಚು ಶ್ರಮ ವಹಿಸುವವನು ಎಂದು ಅವನಿಗೆ ಹೆಚ್ಚಿನ ಕೂಲಿ. ಹೆಣ್ಣಾಳಿಗೆ ಕಡಿಮೆ ಕೂಲಿ. ಸಮಾನ ದುಡಿಮೆಗೆ ಸಮಾನ ವೇತನ ಎಂಬ ಮಾತು ಚಾಲ್ತಿಯಲ್ಲಿದ್ದರೂ ಕೂಲಿಯ ತಾರತಮ್ಯ ಉಳಿದುಕೊಂಡೇ ಬಂದಿದೆ. ಮಹಿಳೆಯ ಶ್ರಮಕ್ಕೆ ತಕ್ಕದಾದ ಕೂಲಿ ನೀಡದೆ ವಂಚಿಸುವ ಈ ವಿಷ ವರ್ತುಲ ಈ ದಿನಗಳಲ್ಲೂ ಉಳಿದಿದೆ. ಪಿತೃಪ್ರಧಾನ ಸಂಸ್ಕೃತಿಯ ಬೇರುಗಳು, ಜಾತಿ ಹಾಗೂ ವರ್ಗಗಳು ಮಹಿಳೆಯರನ್ನು ಮತ್ತಷ್ಟು ಅಂಚಿಗೆ ದೂಡುತ್ತವೆ  ಎಂಬುದು ಕಟು ವಾಸ್ತವ.

1980ರ ದಶಕದಲ್ಲಿ ಮಹಿಳಾಮಯ ಶ್ರಮಲೋಕ (ಫೆಮಿನೈಸೇಷನ್ ಆಫ್ ಲೇಬರ್)  ಎಂಬ ಪರಿಕಲ್ಪನೆ ಸೃಷ್ಟಿಯಾಗಿತ್ತು.  ಶ್ರಮ ಮಾರುಕಟ್ಟೆಯಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಸ್ಥೂಲವಾಗಿ ಸೆರೆ ಹಿಡಿಯುವ ಯತ್ನವಾಗಿತ್ತು ಇದು.  ಆಗ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ರಫ್ತು ತಯಾರಿಕಾ ಕೇಂದ್ರಗಳಾಗಿ ಗುರುತಿಸಿಕೊಂಡವು. ರಫ್ತು ಕೇಂದ್ರಿತ ಗಾರ್ಮೆಂಟ್ ಹಾಗೂ ಎಲೆಕ್ಟ್ರಾನಿಕ್ಸ್ ಉದ್ಯಮಗಳಲ್ಲಿ ಮಹಿಳಾ ಕಾರ್ಮಿಕರ ಪ್ರಮಾಣ ಹೆಚ್ಚಾದಂತೆ ಅವು ಮಹಿಳಾಮಯವಾಗುತ್ತಿವೆ ಎಂಬ ಪರಿಕಲ್ಪನೆ ದಟ್ಟವಾಯಿತು. ಕ್ರಮೇಣ, 1990ರ ದಶಕದ ಮಧ್ಯಭಾಗದಿಂದ ಮಹಿಳಾ ಉದ್ಯೋಗದ ಏರಿಕೆಯ ಪ್ರವೃತ್ತಿ ಕಡಿಮೆಯಾಗಿದೆ ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಕೌಶಲದ ಮಟ್ಟ ಹಾಗೂ ತಂತ್ರಜ್ಞಾನ ಬದಲಾವಣೆಗಳು. 

ಕೃಷಿಯೇತರ ಅನೌಪಚಾರಿಕ ವಲಯದಲ್ಲೂ ಮಹಿಳೆಯ ಉದ್ಯೋಗದ ಪಾಲು, ಕುಸಿತದ ಸೂಚನೆಗಳನ್ನು ತೋರಿದೆ. ಸರ್ಕಾರಿ ಪ್ರಾಯೋಜಿತ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಜಾಗತಿಕ ಟೆಂಡರ್ ಗಳನ್ನು ಕರೆಯುವ ಪರಿಪಾಠದಿಂದಾಗಿ ಕಟ್ಟಡ ನಿರ್ಮಾಣ ವಲಯಕ್ಕೆ ಬಹು ರಾಷ್ಟ್ರೀಯ ಕಂಪೆನಿಗಳನ್ನು ದೊಡ್ಡ ರೀತಿಯಲ್ಲಿ ಕರೆತರಲಾಗಿದೆ. ಜೊತೆಗೆ ಯಂತ್ರೋಪಕರಣಗಳು ದಂಡಿಯಾಗಿ ಬಂದಿವೆ. ಈ ಪ್ರಕ್ರಿಯೆಯಲ್ಲಿ ಪಾರಂಪರಿಕವಾಗಿ ಮಹಿಳೆಯರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ನಿರ್ವಹಿಸುತ್ತಿದ್ದ ಕಾರ್ಯಗಳಿಗೆ ಕುತ್ತು ಬಂದಿದೆ. ಹೀಗಾಗಿ  ನಮ್ಮ ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ನಡೆಯುವ ಮೆಟ್ರೊ ಸಂಚಾರ ವ್ಯವಸ್ಥೆ ನಿರ್ಮಾಣದಂತಹ ಬೃಹತ್ ಕಾಮಗಾರಿಗಳಲ್ಲಿ ಮಹಿಳೆಯರು ಕಾಣಸಿಗುವುದಿಲ್ಲ.

ಕೌಶಲ ತರಬೇತಿ ಪಡೆದ ಮಹಿಳೆಯರಿಗೂ ಇಂತಹ ಬೃಹತ್ ನಿರ್ಮಾಣ ಘಟಕಗಳಲ್ಲಿ ಕೆಲಸ ಸಿಗುವುದು ಕಷ್ಟ.
ಆದರೆ ವಿಶ್ವದಾದ್ಯಂತ ಇಂದು ಅನಿಯಮಿತ ಸ್ವರೂಪದ ಉದ್ಯೋಗಗಳ ವಿಸ್ತರಣೆಯಿಂದಾಗಿ ಅನೌಪಚಾರಿಕ ಆರ್ಥಿಕತೆಯೂ ಸಾಕಷ್ಟು ಪ್ರಭಾವಶಾಲಿಯಾಗಿದೆ. ಉದ್ಯೋಗ ಸಂಬಂಧಗಳನ್ನು ‘ಬೇಕಾದಂತೆ ರೂಪಿಸಿಕೊಳ್ಳಬಹುದಾದ ವ್ಯವಸ್ಥೆ’ಯಿಂದಾಗಿ (ಫ್ಲೆಕ್ಸಿಬಲೈಸೇಷನ್) ಸಂಘಟಿತವಾದ ಔಪಚಾರಿಕ ವ್ಯವಸ್ಥೆಯಲ್ಲೂ ಅನಿಯಮಿತ ನೌಕರರನ್ನು ಬಳಸಿಕೊಳ್ಳುವ ವ್ಯವಸ್ಥೆ ಜಾರಿಗೆ ಬಂದಿದೆ. ಶಾಸನಬದ್ಧ ನಿಯಮಾವಳಿಗಳಿಗಿಂತ ಮಾರುಕಟ್ಟೆ ನಿಯಂತ್ರಿತ ನಿಯಮಾವಳಿಗಳೇ ಮುಖ್ಯವಾಗತೊಡಗಿವೆ.  ಕಾಯಂ ನೌಕರರ ಸಂಖ್ಯೆಕಡಿಮೆ ಮಾಡುವುದು ಈ ನೀತಿಯಲ್ಲಿ ಅಂತರ್ಗತವಾಗಿದೆ. ಗುತ್ತಿಗೆ ಕಾರ್ಮಿಕರು, ಹೊರಗುತ್ತಿಗೆ ವಿಧಾನಗಳ ಕೆಲಸಗಳು ಹೆಚ್ಚಾಗತೊಡಗಿದ್ದು ಹೊಸ ಬೆಳವಣಿಗೆಯಾಗಿದೆ.  ಇಂತಹ ವ್ಯವಸ್ಥೆಯಲ್ಲಿ ಅನೇಕ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಉತ್ಪಾದನಾ ಜಾಲಗಳ ತಳಮಟ್ಟದ ಅನೇಕ ಅನೌಪಚಾರಿಕ ವಲಯಗಳು ಮಹಿಳೆಗೆ ಉದ್ಯೋಗ ಸಿಗುವ ತಾಣಗಳಾಗಿವೆ.

ಹೆಚ್ಚು ವಿದ್ಯಾವಂತರಾದಷ್ಟೂ ಮಹಿಳೆಯರು ಹೊರಗೆ ಬಂದು ಕೆಲಸ ಮಾಡುವುದು ಹೆಚ್ಚಾಗುತ್ತದೆ ಎಂಬುದನ್ನು ಐಎಂಎಫ್ ವರದಿಯಲ್ಲಿ ಗುರುತಿಸಲಾಗಿದೆ. ಹಾಗೆಯೇ ರಸ್ತೆ ಸಂಪರ್ಕ ಚೆನ್ನಾಗಿರುವ ರಾಜ್ಯಗಳಲ್ಲಿನ ಮಹಿಳೆಯರೂ ಮನೆಗಳಿಂದ ಹೊರ ಬಂದು ಉದ್ಯೋಗಗಳಲ್ಲಿ ಪಾಲ್ಗೊಳ್ಳುವುದು ಹೆಚ್ಚಾಗುತ್ತದೆ. ನಿಜ ಹೇಳಬೇಕೆಂದರೆ, ಕಾರ್ಮಿಕ ಶಕ್ತಿಯ ಗಾತ್ರವೇ ಆರ್ಥಿಕ ಚೇತರಿಕೆಗೆ ಚಾಲಕ ಶಕ್ತಿ. ಕಾರ್ಮಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಮಹಿಳೆಯರನ್ನು ಹೊಂದುವುದು ಭಾರತಕ್ಕೆ ಅಗತ್ಯ. ಹಾಗಾದಾಗ ಮಾತ್ರವೇ ಭಾರತದಲ್ಲಿರುವ ಹೆಚ್ಚಿನ ಜನಸಂಖ್ಯೆಯ ಲಾಭವನ್ನು ಪಡೆದುಕೊಳ್ಳುವುದು ಸಾಧ್ಯ ಎಂಬುದನ್ನು ಐಎಂಎಫ್ ಅಧ್ಯಯನ ವರದಿಯಲ್ಲಿ ಪ್ರತಿಪಾದಿಸಲಾಗಿದೆ. ಅನೇಕ ನೀತಿ ಉಪಕ್ರಮಗಳು, ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಬಹುದು. ಮೂಲಸೌಕರ್ಯಗಳಲ್ಲಿ ಹಣಹೂಡಿಕೆ, ಹೆಚ್ಚಿನ ಸಾಮಾಜಿಕ ವೆಚ್ಚ  ಹಾಗೂ ಕಾರ್ಮಿಕ ಮಾರುಕಟ್ಟೆ ಹೆಚ್ಚಳದಿಂದ  ಇದನ್ನು ಸಾಧ್ಯವಾಗಿಸಬಹುದು.

ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಬೆಳವಣಿಗೆಗೆ ಮೊದಲು ಬೇಕಾದದ್ದು  ಮಹಿಳೆಯರಿಗೆ ಸಮಾನ ನೆಲೆಯ ಅವಕಾಶಗಳು. ಹಾಗಾದಾಗ  ಭಾರತದ ಹೆಣ್ಣುಮಕ್ಕಳೂ ಸುರಕ್ಷಿತ ಭಾವನೆ ಹೊಂದುವುದು ಸಾಧ್ಯವಾಗುತ್ತದೆ. ‘ಎಲ್ಲರನ್ನೂ ಒಳಗೊಳ್ಳುವುದು ಎಂದರೆ ಜನಾಂಗ ಅಥವಾ ಧರ್ಮದ ಆಧಾರದ ಮೇಲೆ ಯಾರನ್ನೂ ಹೊರಗಿಡದಂತೆ  ಮಾಡುವುದು. ಅಲ್ಲಿ ಮಹಿಳೆಯರು ಸೇರಿದಂತೆ ಎಲ್ಲರೂ ಇರುತ್ತಾರೆ’ ಎಂಬುದು ಕ್ರಿಸ್ಟೀನ್ ಲಗಾರ್ಡ್ ಮಾತು.

ಸದ್ಯದ ಸಂದರ್ಭದಲ್ಲಿ, ಭಾರತ ಅನೇಕ ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದೆ. ಒಂದೆಡೆ ಸಮಾಜದಲ್ಲಿ ಮಹಿಳೆಯರು ಪ್ರಗತಿಯತ್ತ ದಾಪುಗಾಲು ಹಾಕಿದ್ದಾರೆ. ಮತ್ತೊಂದೆಡೆ ಹೆಣ್ಣುಮಕ್ಕಳಿಗೆ ಸಮಾನ ನೆಲೆಯ ಅವಕಾಶಗಳನ್ನು ನೀಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕಾದ ವೈರುಧ್ಯವೂ ಇದೆ. ಕೆಲಸದ ಸ್ಥಳದಲ್ಲಿ ಸಮಾನತೆ ಎಂಬುದು ವಾಸ್ತವವಾಗಿ ಆರ್ಥಿಕ ಅರ್ಥವನ್ನು ಸ್ಫುರಿಸುವಂತಹದ್ದು ಎಂಬುದು ಲಗಾರ್ಡ್ ಅಭಿಮತ. ಹೀಗಾಗಿ ಸಮಾನ
ನೆಲೆಯ ಅವಕಾಶ ಹೆಚ್ಚಿನ ಬೆಳವಣಿಗೆಗೆ ಕಾರಣವಾಗುವುದಲ್ಲದೆ  ಬಹುತ್ವದ ಸಮಾಜ ಬೆಳವಣಿಗೆಗೂ ಕಾರಣವಾಗುತ್ತದೆ.

ಇನ್ನು ಆಡಳಿತ ಮಂಡಳಿಗಳಲ್ಲಿ ಮಹಿಳೆಯರನ್ನು ಹೊಂದಿರುವ ಕಂಪೆನಿಗಳ ಕಾರ್ಯನಿರ್ವಹಣೆ ಸಾಮಾನ್ಯವಾಗಿ ಚೆನ್ನಾಗಿರುತ್ತದೆ ಎಂಬಂಥ ಅಭಿಪ್ರಾಯವೂ ಐಎಂಎಫ್ ಮುಖ್ಯಸ್ಥೆಯಿಂದ ಇದೇ ಭಾರತ ಭೇಟಿ ಸಂದರ್ಭದಲ್ಲಿ ವ್ಯಕ್ತವಾಯಿತು. ಆದರೆ ಕಾರ್ಪೊರೆಟ್ ಇಂಡಿಯಾ ಇದಕ್ಕೆ ಇನ್ನೂ ಕಿವಿಗೊಟ್ಟಿಲ್ಲ. ಷೇರುಪೇಟೆಯಲ್ಲಿ ಪಟ್ಟಿಯಾಗಿರುವ ಪ್ರತಿ ಕಂಪೆನಿಯ ಆಡಳಿತ ಮಂಡಳಿಯಲ್ಲಿ ಕನಿಷ್ಠ ಒಬ್ಬರು ಮಹಿಳಾ ನಿರ್ದೇಶಕಿ ಇರಬೇಕು ಎಂದು ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲೇ  ಷೇರುಪೇಟೆ ನಿಯಂತ್ರಕ ಸಂಸ್ಥೆ ಭಾರತೀಯ ಷೇರು ಹಾಗೂ ವಿನಿಮಯ  ಮಂಡಳಿ (ಸೆಬಿ) ಸೂಚನೆ ನೀಡಿತ್ತು. ಇದಕ್ಕಾಗಿ  2014ರ ಅಕ್ಟೋಬರ್ 1ರ ಗಡುವನ್ನು ವಿಧಿಸಲಾಗಿತ್ತು. ನಂತರ ಇದನ್ನು ಈ ವರ್ಷ 2015ರ ಏಪ್ರಿಲ್ 1ರವರೆಗೆ ವಿಸ್ತರಿಸಲಾಗಿದೆ.  ಇನ್ನೇನು ಗಡುವು ಹತ್ತಿರ ಬರುತ್ತಿದೆ. ಆದರೆ 2013ರ ಕಂಪೆನಿ ಕಾಯ್ದೆಯ ಅನ್ವಯ ಅರ್ಹ ನಿರ್ದೇಶಕಿಯರನ್ನು ಹುಡುಕಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. 

ಅಂತರರಾಷ್ಟ್ರೀಯ ಮಟ್ಟದಲ್ಲೂ ಈ ಪರಿಸ್ಥಿತಿ ಭಿನ್ನವಾಗಿಲ್ಲ. ಅನೇಕ ರಾಷ್ಟ್ರಗಳಲ್ಲಿ ಮೀಸಲು ನೀತಿ ಜಾರಿಗೆ ತಂದಿರುವುದರಿಂದ, ಕಂಪೆನಿ ಆಡಳಿತ ಮಂಡಳಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವಿದೆ ಅಷ್ಟೆ. ಆಡಳಿತ ಮಂಡಳಿಗಳು ಪುರುಷಮಯವಾಗಬಾರದು, ಮಹಿಳೆಯರೂ ಇದ್ದರಷ್ಟೇ  ಅದು  ಒಳ್ಳೆಯ ಆಡಳಿತದ  ಲಕ್ಷಣ  ಎಂದು ಈಚಿನ ದಿನಗಳಲ್ಲಿ ಅರ್ಥೈಸಲಾಗುತ್ತಿದೆ. ಆದರೆ, ಉನ್ನತ ಸ್ಥಾನಗಳಿಗೇರಲು ಮಹಿಳೆಗೆ ಅವಕಾಶಗಳು ನಿರಾಕರಣೆಯಾಗುವ ‘ಗಾಜಿನ ಛಾವಣಿ’ಯನ್ನು ಭೇದಿಸುವುದು ಈಗಲೂ ಮಹಿಳೆಗೆ ಅನಿವಾರ್ಯ. ಲಗಾರ್ಡ್ ಅವರ ಭಾರತ ಭೇಟಿ ಇದನ್ನು ಮತ್ತೊಮ್ಮೆ ನಮಗೆ ನೆನಪಿಸಿದೆ.

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT