ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಜರದ ಗಿಳಿ’ಗೆ ಬಿಡುಗಡೆ ಇಲ್ಲವೆ?

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಅಮೃತ ಮಹೋತ್ಸವ’ ಸಂಭ್ರಮಕ್ಕೆ ಕಾಲಿಡುತ್ತಿರುವ ‘ಕೇಂದ್ರ ತನಿಖಾ ದಳ’ (ಸಿಬಿಐ) ಮತ್ತೊಮ್ಮೆ ವಿವಾದಕ್ಕೆ ಸಿಕ್ಕಿದೆ. ದೇಶದ ಮುಂಚೂಣಿ ತನಿಖಾ ಸಂಸ್ಥೆಗೆ ವಿವಾದ ಹೊಸ­ದೇನೂ ಅಲ್ಲದಿದ್ದರೂ, ತೀರಾ ಗಂಭೀರ­ವಾದ ಆರೋಪಗಳು ಬಂದಿರಲಿಲ್ಲ. ಸಿಬಿಐ ಮುಖ್ಯಸ್ಥರು ಇಷ್ಟೊಂದು ಕಟು ಟೀಕೆಗಳಿಗೆ ಒಳಗಾಗಿರಲಿಲ್ಲ. ಕಳೆದ ಕೆಲವು ದಿನಗಳ ಬೆಳವಣಿಗೆಗಳನ್ನು ಗಮನಿ­ಸಿದರೆ ದಕ್ಷತೆ, ಸಾಮರ್ಥ್ಯ ಹಾಗೂ ವೃತ್ತಿಪರತೆ ಮೆರೆಯಬೇಕಿದ್ದ ಸಿಬಿಐ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆಯೇ ಎನ್ನುವ ಅನುಮಾನ ಬರುತ್ತದೆ.

ಭ್ರಷ್ಟಾಚಾರ ಹಗರಣಗಳಲ್ಲಿ ಸತ್ಯವನ್ನು ಬಯಲಿ­ಗೆಳೆಯಬೇಕಾದ ತನಿಖಾ ಸಂಸ್ಥೆಯೇ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ಬಲಾಢ್ಯರ ರಕ್ಷಣೆಗೆ ಮುಂದಾಗಿದೆಯೇನೋ ಎಂಬ ಅಪನಂಬಿಕೆ ಮೂಡುತ್ತದೆ. ಏಳು ದಶಕಗಳಲ್ಲಿ ಸಿಬಿಐ ನೂರಾರು ಪ್ರಕರಣ­ಗಳ ತನಿಖೆ ಮಾಡಿದ್ದರೂ, ಪ್ರಖ್ಯಾತಿಗೆ ಬಂದಿದ್ದು ‘ಬೊಫೋರ್ಸ್‌ ಹಗರಣ’ ಕೈಗೆತ್ತಿ­ಕೊಂಡ ಬಳಿಕ. 1980ರ ದಶಕದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿ­ಸಿದ ಈ ಹಗರಣದ ಮಸಿ ರಾಜೀವ್‌ ಗಾಂಧಿ ಸರ್ಕಾರಕ್ಕೂ ಮೆತ್ತಿಕೊಂಡಿದೆ ಎಂಬ ಆರೋಪ ಬಂದಿತ್ತು.

ತನಿಖೆ ಫಲಶ್ರುತಿ ಏನಾಯಿತು ಎನ್ನು­ವುದು ಬೇರೆ ಮಾತು. ಆ ನಂತರದ ವರ್ಷಗಳಲ್ಲಿ ಚಂದ್ರಸ್ವಾಮಿ ಹಗರಣ, ಸೇಂಟ್‌ ಕಿಟ್ಸ್‌, ಹವಾಲ­ದಂಥ ಅತೀ ಸೂಕ್ಷ್ಮ ಪ್ರಕರಣಗಳು ತನಿಖಾ ದಳಕ್ಕೆ ಮುಂದೆ ಒಂದರ ಹಿಂದೆ ಒಂದರಂತೆ ಬಂದವು. ಇದು ರಾಜಕೀಯ ಭ್ರಷ್ಟಾಚಾರ ಹೆಚ್ಚುತ್ತಿರು­ವು­ದರ ಸಂಕೇತ ಎಂದು ಪ್ರತ್ಯೇಕವಾಗಿ ಹೇಳ­ಬೇಕಾಗಿಲ್ಲ. ಭ್ರಷ್ಟಾಚಾರ­ದಿಂದ ಕೈ ಹೊಲಸು ಮಾಡಿ­ಕೊಳ್ಳದ ಸರ್ಕಾರ ಮತ್ತು ಪಕ್ಷಗಳನ್ನು ಹುಡು­ಕು­ವುದು ಕಷ್ಟ. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ಒಂದು ದಶಕದ ಆಡಳಿತ­ದಲ್ಲೂ ಅನೇಕ ಹಗರಣಗಳು ದೊಡ್ಡ ಸುದ್ದಿ ಮಾಡಿ­­ದವು.

ರೇಡಿಯೊ ತರಂಗಾಂತರ, ಕಲ್ಲಿ­ದ್ದಲು ನಿಕ್ಷೇಪ ಹಂಚಿಕೆ ಹಗರಣ, ಕಾಮನ್‌ವೆಲ್ತ್‌ ಕ್ರೀಡಾಕೂಟದಂಥ ಹಗರಣಗಳಿಂದ ಚೇತರಿಸಿ­ಕೊಳ್ಳಲು ಕಾಂಗ್ರೆಸ್‌ಗೆ ಇನ್ನೂ ಸಾಧ್ಯವಾಗಿಲ್ಲ. ಹಗರಣಗಳು ಆ ಪಕ್ಷವನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸಿವೆ ಎಂದು ಮತ್ತೊಮ್ಮೆ ಪ್ರಸ್ತಾಪಿ­ಸುವ ಅವಶ್ಯಕತೆ ಇಲ್ಲ.  ‘ಅಪ್ಪಟ ಪ್ರಾಮಾಣಿಕ ಪ್ರಧಾನಿ’ ಎಂಬ ಡಾ.ಸಿಂಗ್‌ ಅವರ ಗೌರವವನ್ನೂ ಈ ಹಗರ­ಣಗಳು ಮಣ್ಣುಪಾಲು ಮಾಡಿವೆ. ಎಲ್ಲ ಟೀಕೆ­–ಟಿಪ್ಪಣಿಗಳನ್ನು ತಾಳ್ಮೆಯಿಂದ ಸಹಿಸಿ ಕೊಂಡಿರುವ ಮನಮೋಹನ್‌ ಸಿಂಗ್‌ ಮೌನಕ್ಕೆ ಶರಣಾಗಿ­ದ್ದಾರೆ. ಮೊನ್ನೆ ನಿವೃತ್ತ ಮಹಾಲೇಖಪಾಲ ವಿನೋದ್‌  ರಾಯ್‌ ಅವರು ಟೀಕೆ ಮಾಡಿದ ಬಳಿಕವೂ ಸಿಂಗ್‌ ಅವರು ಬಾಯಿ ಬಿಟ್ಟಿಲ್ಲ. ಮಾಜಿ ಪ್ರಧಾನಿ ತಮ್ಮ ದೀರ್ಘ ಕಾಲದ ಮೌನ ಮುರಿ­ಯಬೇಕಿತ್ತು. ದೇಶಕ್ಕೆ ಸತ್ಯವೇನೆಂದು ಹೇಳುವ ಪ್ರಯತ್ನ ಮಾಡಬೇಕಿತ್ತು.

ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದ ಹಗರಣಗಳೆಲ್ಲವೂ ಸಿಬಿಐ ತನಿಖೆಗೆ ಒಳಪಟ್ಟಿವೆ. 2012ರ ನವೆಂಬರ್‌ ತಿಂಗಳಲ್ಲಿ ಸಿಬಿಐ ನಿರ್ದೇಶಕ­ರಾಗಿ ನೇಮಕಗೊಂಡ ರಂಜಿತ್‌ ಸಿನ್ಹಾ ನೇತೃತ್ವದಲ್ಲೇ ಈ ಹಗರಣಗಳ ತನಿಖೆಯೂ ನಡೆಯುತ್ತಿದೆ. 1974ರ ಐಪಿಎಸ್‌ ಅಧಿಕಾರಿಗಳ ತಂಡಕ್ಕೆ ಸೇರಿರುವ ಸಿನ್ಹಾ, ಬಿಹಾರ ಕೇಡರ್‌ನ ಅಧಿಕಾರಿ. ಕೇಂದ್ರ ಜಾಗೃತದಳ ಕಮಿಷನರ್‌ ನೇತೃ­ತ್ವದ ಆಯ್ಕೆ ಸಮಿತಿ ಮೂರು ಹೆಸರುಗಳನ್ನು ಈ ಹುದ್ದೆಗೆ ಶಿಫಾರಸು ಮಾಡಿತ್ತು.

ಎನ್‌ಐಎ ಮಹಾನಿರ್ದೇಶಕ ಎಸ್‌.ಸಿ. ಸಿನ್ಹಾ, ಉತ್ತರ­ಪ್ರದೇಶ ಗೃಹ ರಕ್ಷಕ ದಳದ ಮಹಾನಿರ್ದೇಶಕ ಅತುಲ್‌ ಅವರ ಹೆಸರುಗಳೂ ಪಟ್ಟಿಯಲ್ಲಿದ್ದವು. ಪ್ರಧಾನಿ ನೇತೃತ್ವದ ಸಂಪುಟ ನೇಮಕಾತಿ ಸಮಿ­ತಿಯು ರಂಜಿತ್‌ ಸಿನ್ಹಾ ಅವರನ್ನೇ ನೇಮಕ ಮಾಡಿತು. ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಅವರಿಗೆ ಹತ್ತಿರದವರು ಎಂದೇ ಭಾವಿಸಲಾಗಿರುವ ಸಿನ್ಹಾ ಅವರನ್ನು ನೇಮಿಸಿದ್ದರ ಹಿಂದೆ ಲಾಭ–ನಷ್ಟದ ಲೆಕ್ಕಾಚಾರವಿತ್ತು ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸ­ಲಾಗು­ತ್ತಿದೆ. ಸಿನ್ಹಾ ಬಿಹಾರದಲ್ಲಿ ಸಿಬಿಐ ಡಿಐಜಿ ಆಗಿ ಕೆಲಸ ಮಾಡಿದ್ದಾರೆ. ಆ ಸಮಯದಲ್ಲೇ ‘ಮೇವು ಹಗರಣ’ದಲ್ಲಿ ಆರೋಪಿಯಾಗಿದ್ದ ಲಾಲು ಅವರ ರಕ್ಷಣೆಗೆ ಪ್ರಯತ್ನಿಸಿ  ಸುದ್ದಿಯಾದರು.

ಸಿನ್ಹಾ ನಿರ್ದೇಶಕರಾದ ಬಳಿಕ ಸುಪ್ರೀಂ ಕೋರ್ಟ್‌, ಸಿಬಿಐ ಅನ್ನು ತೀವ್ರವಾಗಿ ಟೀಕಿಸಿತ್ತು. ‘ಅದೊಂದು ಪಂಜರದ ಗಿಳಿ. ತನ್ನ ರಾಜಕೀಯ ನೇತಾರರು ಹೇಳಿದಂತೆ ಕೇಳುತ್ತದೆ’ ಎಂದು ಚಾಟಿ ಬೀಸಿತ್ತು. ಕಲ್ಲಿದ್ದಲು ಹಗರಣ ತನಿಖೆಗೆ ಸಂಬಂಧಿ­ಸಿದ ಪ್ರಮಾಣ ಪತ್ರವನ್ನು ಆಗಿನ ಕಾನೂನು ಸಚಿವರ ಮುಂದಿಟ್ಟು, ಅವರ ಇಚ್ಛೆಯಂತೆ ಬದ­ಲಾ­ಯಿಸಿದ  ಪ್ರಮಾದಕ್ಕೆ ಸಿಬಿಐ ಗುರಿಯಾ­ಯಿತು. ಈ ಪ್ರಕರಣದಲ್ಲಿ ಆಗಿನ ಕಾನೂನು ಸಚಿವ ಅಶ್ವನಿ ಕುಮಾರ್‌ ಅವರ ‘ತಲೆದಂಡ’ ಆಯಿತು. ಸಿಬಿಐ ರಾಜಕೀಯ ಒತ್ತಡಕ್ಕೆ ಮಣೆ ಹಾಕಿ­ರದಿದ್ದರೆ, ಕೋರ್ಟ್‌ನಿಂದ ಟೀಕೆಗೆ ಒಳಗಾಗ­ಬೇಕಾದ ಸಂದರ್ಭ ಸೃಷ್ಟಿಯಾಗುತ್ತಿರಲಿಲ್ಲ.

ರಂಜಿತ್‌ ಸಿನ್ಹಾ ಈಗ ಇನ್ನೊಂದು ಗಂಭೀರ­ವಾದ ಆರೋಪಕ್ಕೆ ಗುರಿಯಾಗಿದ್ದಾರೆ. ಕಲ್ಲಿದ್ದಲು ಹಾಗೂ ರೇಡಿಯೊ ತರಂಗಾಂತರ ಹಗರಣಗಳ ಪ್ರಮುಖ ಆರೋಪಿಗಳನ್ನು ಭೇಟಿಯಾಗಿದ್ದಾರೆ­ನ್ನುವ ಸುದ್ದಿ ಸ್ಫೋಟಗೊಂಡಿದೆ. ಈ ಹಗರಣ­ಗಳನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ನಡೆಸುತ್ತಿರುವ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಭೂಷಣ್‌ ಅವರು ಸಿಬಿಐ ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಿನ್ಹಾ ಯಾವ್ಯಾವ ಆರೋಪಿಗಳನ್ನು ಎಷ್ಟು ಸಲ ಭೇಟಿ ಮಾಡಿದ್ದಾರೆಂಬ ಮಾಹಿತಿ ಒಳಗೊಂಡಿರುವ ಪ್ರಮಾಣ ಪತ್ರವನ್ನು ಸರ್ವೋಚ್ಚ ನ್ಯಾಯಾಲ­ಯಕ್ಕೆ ಸಲ್ಲಿಸಿದ್ದಾರೆ.

ಈ ಆರೋಪ ಪುಷ್ಟೀಕರಿಸಲು ನಿರ್ದೇಶಕರ ಮನೆಯ ಸಂದರ್ಶಕರ ಪುಸ್ತಕದ ದಾಖಲೆ ನೀಡಿದ್ದಾರೆ. ಪ್ರಶಾಂತ್‌ ಭೂಷಣ್‌ ಒದ­ಗಿಸಿರುವ ದಾಖಲೆಯಲ್ಲಿ ರಿಲಯನ್ಸ್‌ ಗುಂಪಿನ ಅನಿಲ್‌ ಅಂಬಾನಿ ಮತ್ತು ಕರ್ನಾಟಕದ ಗಣಿ ಉದ್ಯಮಿಗಳ ಪ್ರತಿನಿಧಿಗಳ ಹೆಸರುಗಳೂ ಇವೆ.
ಪ್ರಶಾಂತ್‌ ಭೂಷಣ್‌ ಮಾಡಿರುವ ಆರೋ­ಪದ ಸತ್ಯಾಸತ್ಯತೆ ಬಗ್ಗೆ ಕೋರ್ಟ್‌ ವಿಚಾರಣೆ ನಡೆ­ಸುತ್ತಿದೆ. ಅದು ನಿಜವಾಗಿದ್ದರೆ ಸಿಬಿಐಗೆ ಇರುವ ಅಲ್ಪಸ್ವಲ್ಪ ಗೌರವವೂ ಬೀದಿ ಪಾಲಾಗುತ್ತದೆ.

ಈ ಅತ್ಯುನ್ನತ ತನಿಖಾ ಸಂಸ್ಥೆಯನ್ನು ಜನ ಸಂಶಯ­ದಿಂದ ನೋಡುತ್ತಾರೆ. ಬೇರೆ ತನಿಖೆಗಳ ಮೇಲೆ ವಿಶ್ವಾಸವಿಲ್ಲದ ಸಂದರ್ಭದಲ್ಲಿ ಜನ ಸಿಬಿಐ ಕಡೆ ನೋಡುವುದು ಸಾಮಾನ್ಯ. ಸಿಬಿಐ ನಿಷ್ಠೆ – ಪ್ರಮಾಣಿಕತೆ ಉಳಿಸಿಕೊಳ್ಳದಿದ್ದರೆ ಈ ಪ್ರತಿಷ್ಠಿತ ಸಂಸ್ಥೆಯ ಕಥೆಯೂ ಮುಗಿದಂತೆ. ಆಮೇಲೆ ಅದರ ಕಡೆ ಯಾರೂ ನೋಡುವುದಿಲ್ಲ. ಆ  ಪರಿ­ಸ್ಥಿತಿ ಬಂದರೆ ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು?
ಸಿಬಿಐ ಹಿಂದಿನ ಯಾವ ನಿರ್ದೇಶಕರ ಮೇಲೂ ಈ ರೀತಿಯ ಗಂಭೀರವಾದ ಆರೋಪಗಳು ಬಂದಿ­ರಲಿಲ್ಲ. ಹಗರಣದ ಮತ್ತೊಂದು ಮಗ್ಗುಲಿನ ಕಥೆ­ಗಳನ್ನು ಕೇಳಲು ಕೆಲವರನ್ನು ಭೇಟಿ ಆಗಿದ್ದು ನಿಜ.

ಆರೋಪಿಗಳನ್ನು ಭೇಟಿ ಆಗುವುದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಈ ಅವಕಾಶ ಬಳಸಿಕೊಂಡು ಕೆಲವರು ತಮ್ಮ ವಿರುದ್ಧ ಪಿತೂರಿ ಮಾಡಿದ್ದಾ­ರೆಂದು ಬೊಬ್ಬೆ ಹಾಕಿದ್ದಾರೆ. ಹೀಗೆ ಅವರು ಅಲ‌ ವ­ತ್ತುಕೊಳ್ಳುವ ಬದಲು ನೈತಿಕ ಹೊಣೆ ಹೊತ್ತು ಜಾಗ ಖಾಲಿ ಮಾಡಬೇಕಿತ್ತು. ಹಾಗೆ ಮಾಡಿದ್ದರೆ ಸಿಬಿಐ ನಿರ್ದೇಶಕರ ಮೇಲಿನ ಗೌರವವೂ ಹೆಚ್ಚಾ­ಗು­ತ್ತಿತ್ತು. ಏಳು ದಶಕಗಳ ಇತಿಹಾಸವಿರುವ ಪ್ರತಿ­ಷ್ಠಿತ ಸಂಸ್ಥೆಯ ಘನತೆಯೂ ಇಮ್ಮಡಿಯಾಗು­ತ್ತಿತ್ತು.

ರೇಡಿಯೊ ತರಂಗಾಂತರ ಹಗರಣ ಕುರಿತು ತನಿಖೆ ನಡೆಸುತ್ತಿರುವ ನ್ಯಾ. ಎಚ್‌.ಎಲ್‌. ದತ್ತು ನೇತೃತ್ವದ ಪೀಠವು ‘ಗಣ್ಯ ಆರೋಪಿ’ಗಳನ್ನು ಸಿಬಿಐ ನಿರ್ದೇಶಕರು ಭೇಟಿ ಆಗಿದ್ದು ಸಾಬೀತಾದರೆ ಪ್ರಕ­ರಣದ ವಿಚಾರಣೆ ವೇಳೆಯಲ್ಲಿ ಕೈಗೊಂಡಿ­ರುವ ನಿರ್ಧಾರಗಳನ್ನು ರದ್ದು ಮಾಡುವುದಾಗಿ ಎಚ್ಚರಿ­ಸಿದೆ. ಮಹತ್ವದ ಸ್ಥಾನಗಳಲ್ಲಿರುವ ಉನ್ನತ ಅಧಿ­ಕಾರಿ ತನ್ನ ಇತಿಮಿತಿ, ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು. ಹಗರಣಗಳ ತನಿ­ಖಾಧಿಕಾರಿಗಳು, ಮೇಲುಸ್ತುವಾರಿ ಅಧಿಕಾರಿ­ಗಳ ಸಮಕ್ಷಮದಲ್ಲಿ ಆರೋಪಿಗಳನ್ನು ಭೇಟಿ ಮಾಡ­ಬಹುದಿತ್ತು.

ಆರೋಪಿಗಳನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದರೂ ಆಕ್ಷೇಪಗಳು ಕೇಳುತ್ತಿರಲಿಲ್ಲ. ಅಕಸ್ಮಾತ್‌ ಮನೆಯಲ್ಲಿ ಭೇಟಿಯಾಗಿದ್ದರೆ ಅದು ನಿರೀಕ್ಷೆಗಿಂತಲೂ ದೊಡ್ಡ ವಿವಾದವಾಗಿ ಬೆಳೆಯಬಹುದು. ಸಿನ್ಹಾ ಅವರನ್ನು ವಜಾ ಮಾಡಿ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಬೇಕೆಂದು ಪ್ರಶಾಂತ್‌ ಭೂಷಣ್‌, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದಾರೆ. ಅನೇಕರಿಂದ ಇದೇ ಬೇಡಿಕೆ ಬಂದಿದೆ. ವಿನೀತ್‌ ನಾರಾಯಣ್‌ ಅವರ ಪ್ರಕ­ರಣದಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಕೇಂದ್ರ ತನಿಖಾ ದಳದ ನಿರ್ದೇಶಕರಿಗೆ ಕನಿಷ್ಠ ಎರಡು ವರ್ಷ ಸೇವಾವಧಿ ನಿಗದಿಪಡಿಸಿದೆ.

ಸಿಬಿಐ ನಿರ್ದೇಶಕರು ನೇಮಕವಾದ ದಿನಾಂಕ­ದಿಂದ ಅದು ಜಾರಿಗೆ ಬರಲಿದೆ. ಎರಡು ವರ್ಷದ ಅವಧಿ ಸಿಕ್ಕಾಗ ಮಾತ್ರ ಅವರು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಸಿಗುತ್ತದೆ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಎಲ್ಲ ವಿಧದಲ್ಲೂ ಸಿಬಿಐ ನಿರ್ದೇಶಕರಾಗಿ ನೇಮಕಗೊಳ್ಳಲು ಅರ್ಹವಾದ ಅಧಿಕಾರಿ ವಯ­ಸ್ಸಿನ ಕಾರಣಕ್ಕೆ ಅವಕಾಶದಿಂದ ವಂಚಿತವಾಗ­ಬಾರದು ಎಂದೂ ನ್ಯಾಯಾಲಯ ವಿನೀತ್‌ ನಾರಾಯಣ್‌ ಪ್ರಕರಣದಲ್ಲಿ ತಿಳಿಸಿದೆ. ತೀರಾ ಅಸಾಮಾನ್ಯವಾದ ಪರಿಸ್ಥಿತಿಯಲ್ಲಿ ಮಾತ್ರ ಸಿಬಿಐ ನಿರ್ದೇಶಕರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬಹುದಾಗಿದೆ. 

ಅದಕ್ಕೆ ಜಾಗೃತ ದಳದ ಕಮಿಷ­ನರ್‌ ನೇತೃತ್ವದ ಆಯ್ಕೆ ಸಮಿತಿ ಅನುಮತಿ ಪಡೆಯಬೇಕೆಂದು ಕೋರ್ಟ್‌ ಸೂಚಿಸಿದೆ. 1997­ರಲ್ಲಿ ಈ ತೀರ್ಪು ಬಂದಿದೆ. ಈ ಕೋರ್ಟ್‌ ತೀರ್ಪಿ­ನಂತೆ ರಂಜಿತ್‌ ಸಿನ್ಹಾ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲು ಅವಕಾಶವಿದೆ. ಅದಕ್ಕೆ ಆಯ್ಕೆ ಸಮಿತಿ ಒಪ್ಪಿಗೆ ಪಡೆಯಬೇಕು. ಇದು ಸುದೀರ್ಘ ಪ್ರಕ್ರಿಯೆ. ಸಾಕಷ್ಟು ಕಾಲಾವಕಾಶ ಹಿಡಿಯಲಿದೆ. ಸಿಬಿಐ ನಿರ್ದೇಶಕರು ಡಿಸೆಂಬರ್‌ ಐದರಂದು ನಿವೃತ್ತಿ ಆಗುತ್ತಿದ್ದಾರೆ.

ಈ ಕಾರಣಕ್ಕೆ ಮನಮೋಹನ್‌ ಸಿಂಗ್‌ ಸರ್ಕಾರ ಸಿಬಿಐ ನಿರ್ದೇಶಕರನ್ನು ಮಧ್ಯದಲ್ಲೇ ತೆಗೆದು ಹಾಕಲು ಅಧಿಕಾರ ಕೊಡುವ ನಿಯಮವನ್ನು ಜಾರಿಗೆ ತರಲು ಉದ್ದೇಶಿಸಿತ್ತು. ಆಗಿನ ಪ್ರಧಾನಿ ತಮ್ಮ ಕೊನೆಯ ಅಧಿಕೃತ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು. ಸಿಬಿಐಗೆ ಹೆಚ್ಚಿನ ಅಧಿಕಾರ ಕೊಡಲು ಈ ಕ್ರಮ ಅನಿವಾರ್ಯ­ವಾಗಿದೆ ಎಂದು ಹೇಳಿಕೊಂಡಿದ್ದರು. ಮೋದಿ ನೇತೃತ್ವದ ಸರ್ಕಾರ ಏನು ಮಾಡುತ್ತದೆ. ಯುಪಿಎ ಸರ್ಕಾರದ ದಾರಿಯನ್ನೇ ತುಳಿಯಲಿದೆಯೇ ಅಥವಾ ಬೇರೆ ಯಾವುದಾದರೂ ಹೊಸ ದಾರಿ ಹುಡುಕಲಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಕಲ್ಲಿದ್ದಲು ಹಗರಣದ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಮುಂದೆಯೂ ಪ್ರಶಾಂತ್‌ ಭೂಷಣ್‌ ಅವರು ಸಿಬಿಐ ನಿರ್ದೇಶಕರು ಪ್ರಮುಖ ಆರೋಪಿಗಳನ್ನು ಭೇಟಿ ಮಾಡಿ ಅಧಿ­ಕಾರ ದುರುಪಯೋಗ ಮಾಡಿ ಕೊಂಡಿದ್ದಾರೆಂದು ದೂರಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿ­ರುವ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧ ನೇತೃತ್ವದ ಪೀಠ ಈ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಸೂಚಿಸಿದೆ. ನ್ಯಾಯಾಲಯದ ಮುಂದೆ ಸರ್ಕಾರ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ತನ್ನ ಮುಂದಿನ ಹಾದಿ ಕುರಿತು ಮಾಹಿತಿ ನೀಡುವ ಸಾಧ್ಯತೆ ಇದೆ.

ಹಿಂದೆ ಸಿಬಿಐ ನಿರ್ದೇಶಕರಾಗಿದ್ದ ಕರ್ನಾಟಕ ಕೇಡರ್‌ ಐಪಿಎಸ್‌ ಅಧಿಕಾರಿ ಜೋಗಿಂದರ್‌ ಸಿಂಗ್‌ ಅವರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿತ್ತು. ಅವರನ್ನು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ಆಗಿ ವರ್ಗಾವಣೆ ಮಾಡ­ಲಾಗಿತ್ತು. ಪಂಜಾಬ್‌ ಕೇಡರ್ ಐಪಿಎಸ್‌ ಅಧಿ­ಕಾರಿ ಆಗಿದ್ದ ಆರ್‌.ಸಿ. ಶರ್ಮ ಅವರನ್ನು ಸಿಂಗ್‌ ಅವರ ಉತ್ತರಾಧಿಕಾರಿ ಆಗಿ ನೇಮಿಸಲಾಯಿತು. ಸಿಂಗ್‌ ಅವರ ಕಾರ್ಯವೈಖರಿ ಕುರಿತು ವ್ಯಾಪಕ ಟೀಕೆಗಳು ಬಂದಿದ್ದರಿಂದ ಈ ಕ್ರಮ ಕೈಗೊಳ್ಳ­ಲಾಗಿತ್ತು. 97ರ ಕೋರ್ಟ್‌ ತೀರ್ಪಿನ ಬಳಿಕ ಸಿಬಿಐ ನಿರ್ದೇಶಕರ ಬದಲಾವಣೆ ಕಷ್ಟವಾಗಿದೆ.

ಸಿಬಿಐ ಅತ್ಯಂತ ಪ್ರತಿಷ್ಠಿತ ತನಿಖಾ ಸಂಸ್ಥೆ. ಅದರ ಪಾವಿತ್ರ್ಯ ಕಾಪಾಡುವುದು ಅಧಿಕಾರಿಗಳ ಧರ್ಮ. ಶುದ್ಧ ಹಿನ್ನೆಲೆಯ ಅಧಿಕಾರಿಗಳನ್ನು ಮಾತ್ರ ಅಲ್ಲಿಗೆ ಹಾಕುವ ವ್ಯವಸ್ಥೆ ಜಾರಿಗೆ ಬರಬೇಕು. ಸಿಬಿಐ ಎಲ್ಲಿಯವರೆಗೂ ಸರ್ಕಾರದ ಅಧೀನದಲ್ಲಿ ಇರುವುದೋ ಅಲ್ಲಿವರೆಗೂ ಅದು ಕೈಗೊಂಬೆ­ಯಾ­ಗಿಯೇ ಇರುತ್ತದೆ. ಹಿಂದೆ ಅದನ್ನು ಯಾವ ಸರ್ಕಾರ ಹೇಗೆ ನಡೆಸಿಕೊಂಡಿದೆ ಎಂಬ ಸಂಗತಿ ಕಣ್ಣ ಮುಂದಿದೆ. ಇದೇ ಕಾರಣಕ್ಕೆ ಅದನ್ನು ಲೋಕಪಾಲದ ಅಧೀನಕ್ಕೆ ತರಬೇಕೆಂಬ ಬೇಡಿಕೆ ಕೇಳಿಬಂದಿದ್ದು. ಅದು ಸಂಪೂರ್ಣವಾಗಿ ಈಡೇರ­ಲಿಲ್ಲ. ಸಿಬಿಐಗೆ ಪೂರ್ಣ ಸ್ವಾತಂತ್ರ್ಯ ಸಿಗುವವರೆಗೂ ಅದು ಪಂಜರದ ಗಿಳಿಯಾಗಿಯೇ ಉಳಿಯಲಿದೆ.
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT