ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಜಮಾನ ಸಂಸ್ಕೃತಿ’ಯ ಮಿಥ್ಯೆಯೊಳಗೆ

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಆಧುನಿಕೋತ್ತರ ಕಾಲದ ಇಂದಿನ ಮಹಿಳೆಯ  ಬದುಕು ಬದಲಾಗಿದೆ. ಸಾಂಪ್ರ­ದಾಯಿಕ ಸರಹದ್ದುಗಳನ್ನು ಮೀರಿ ತನ್ನ ಅಸ್ಮಿತೆಯನ್ನು ಆಕೆ ಕಂಡುಕೊಳ್ಳುತ್ತಿದ್ದಾಳೆ. ಈ ಪ್ರಕ್ರಿಯೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ನೆಲೆ­ಗ­ಳಲ್ಲಿ ಬದಲಾವಣೆಗಳಿಗೆ ಮಹಿಳೆ ತೆರೆದುಕೊಳ್ಳುತ್ತಿ­ದ್ದಾಳೆ. ಹೊಸ ಅನುಭವಗಳನ್ನು ಅನ್ವೇಷಿಸುತ್ತಿ­ದ್ದಾಳೆ. ಆದರೆ ಈ ಹೊಸ ಮಹಿಳೆಯ ಜೊತೆಗೆ ಹೆಜ್ಜೆ ಹಾಕುವಲ್ಲಿ ಪುರುಷ ಹಿಂದೆ ಬೀಳುತ್ತಿದ್ದಾ­ನೆಯೆ? ದುರಭಿಮಾನ ಅಥವಾ ಕೀಳರಿಮೆಗಳ ಕೋಟೆಯೊಳಗೆ ಸಿಲುಕಿ ಆತ ಹೆಚ್ಚು ಆಕ್ರಮಣ­ಕಾರಿ­ಯಾಗುತ್ತಿದ್ದಾನೆಯೆ? ನಮ್ಮ ಸುತ್ತಮುತ್ತ ಹೆಚ್ಚುತ್ತಿರುವ ಮಹಿಳೆ ಮೇಲಿನ ಹಿಂಸೆಗಳಿಗೆ ಕಾರಣಗಳೇನು? ಈ ಹಿಂಸೆಗಳು ಹೆಣ್ಣನ್ನು ನಿಯಂತ್ರಿ­ಸುವ ಹೊಸ ಹೊಸ ವಿಧಾನಗಳಾಗಿ­ರು­ತ್ತವೆಯೆ? ಎಂಬಂತಹ ಪ್ರಶ್ನೆಗಳು ಕಾಡುತ್ತಿರುವ ಕಾಲ ಇದು.

ಹೆಣ್ಣುಮಕ್ಕಳು ಬದಲಾವಣೆಯ ಹಾದಿ ತುಳಿದಿದ್ದಾರೆ. ಆದರೆ  ಈ ಬದಲಾವಣೆಗಳಿಗೆ ಸಂವಾ­ದಿಯಾಗಿ ಪುರುಷ ಮನಸ್ಸುಗಳಲ್ಲಿ, ಮನೋ­ಭಾವಗಳಲ್ಲಿ ಬದಲಾವಣೆ ಮೂಡಲಿಲ್ಲ. ತೀರಾ ಸರಳೀಕೃತ  ನೆಲೆಯಲ್ಲಿ ಹೇಳುವುದಾದರೆ ಮಹಿಳೆಯರನ್ನು ಕುರಿತಂತೆ ಅವವೇ ಹಳಸಲು ಜೋಕುಗಳ ಚಲಾವಣೆಯೂ ತಪ್ಪಲಿಲ್ಲ. ದಿನ­ನಿತ್ಯದ ಆಗುಹೋಗುಗಳಲ್ಲಿ ‘ಯಜಮಾನ ಸಂಸ್ಕೃತಿ’­ಯ ವಿಜೃಂಭಣೆ ಎಂದಿನಂತೆ  ಮುಂದುವ­ರಿ­ಯುತ್ತಲೇ ಇದೆ.  ಇವನ್ನು ಮೀರುತ್ತಾ ನಿಜದ ನೆಲೆಯನ್ನು  ಅರಿಯಲು ಮಹಿಳೆ ಯತ್ನಿಸುತ್ತಿ­ದ್ದಾಳೆ. ಯಶಸ್ವಿಯೂ ಆಗುತ್ತಿದ್ದಾಳೆ. ಆದರೆ  ಈ ಹಾದಿಯಲ್ಲಿ ಬರುವ ಅಡ್ಡಿ ಆತಂಕಗಳನ್ನು ಮೆಟ್ಟಿನಿಲ್ಲಲು ಹೆಚ್ಚಿನ ಆತ್ಮಬಲ ಆಕೆಗಿರ­ಬೇಕಾ­ಗುತ್ತದೆ. ಇಂತಹ ಸನ್ನಿವೇಶ  ಬದಲಾಗುವುದು ಹೇಗೆ?

ಈ ಸನ್ನಿವೇಶ ಬದಲಾಗಬೇಕಾದರೆ ಪುರುಷ ಮನಸ್ಸುಗಳಲ್ಲಿ ಲಿಂಗತ್ವ ಸೂಕ್ಷ್ಮತೆ ಮೊಳೆಯ­ಬೇಕು. ಮಹಿಳಾ ಹಕ್ಕುಗಳು ಹಾಗೂ ಲಿಂಗ ಸಮಾನತೆಯ ಪರವಾದ ಹೋರಾಟಗಳಲ್ಲಿ ಪುರುಷರ ಪಾಲ್ಗೊಳ್ಳುವಿಕೆಯೂ ಅಗತ್ಯ ಎಂಬುದು ಸದ್ಯದ ಚಿಂತನೆ.  ಇದಕ್ಕೆಂದೇ ವಿಶ್ವ­ಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುಎನ್ ವಿಮೆನ್, ಭಾರತದಲ್ಲಿ ಈ ಕುರಿತಾದ ಪ್ರಚಾ­ರಾಂದೋಲನಕ್ಕೆ ಕಳೆದ  ಶನಿವಾರ ದೆಹಲಿಯಲ್ಲಿ   ಚಾಲನೆ ನೀಡಿದೆ. ಭಾರತದಲ್ಲಿ ‘ಅವಳಿಗಾಗಿ­ಅವನು’ (HeForShe) ಪ್ರಚಾರಾಂದೋಲನ­ವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಉದ್ಘಾಟಿಸಿದ್ದಾರೆ. 

2030ರೊಳಗೆ ಲಿಂಗ ಅಸಮಾನತೆಯನ್ನು ಅಂತ್ಯ­ಗೊಳಿಸುವ ಗುರಿ ಹೊಂದಿದ ಜಾಗತಿಕ ಆಂದೋ­ಲನ ಇದು. ಈ ಗುರಿ ಸಾಧನೆಗಾಗಿ ಬದಲಾ­ವ­ಣೆಯ ಹರಿಕಾರರಾಗಿ ಗಂಡುಹುಡುಗರು ಹಾಗೂ ಪುರುಷರು ಪಾಲ್ಗೊಳ್ಳಲಿದ್ದಾರೆ. ಮಹಿಳೆಯರು ಸಬಲರಾದಲ್ಲಿ ಇಡೀ ಮನುಕುಲಕ್ಕೆ ಲಾಭ­ದಾಯಕ ಎಂಬುದು ಯುಎನ್ ವಿಮೆನ್ ಚಿಂತನೆ. ಇದಕ್ಕಾಗಿ ವಿಶ್ವದಾದ್ಯಂತ ಪುರುಷರು ಹಾಗೂ ಗಂಡು ಮಕ್ಕಳನ್ನು ಸಂಘಟಿಸುತ್ತಿರುವ ಅಂತರ­ರಾಷ್ಟ್ರೀಯ ವೇದಿಕೆ  ‘ಮೆನ್ಎಂಗೇಜ್’ ಜತೆಗೆ ಯುಎನ್ ವಿಮೆನ್ ಸಹಭಾಗಿತ್ವ ಹೊಂದಿದೆ.  ಇದು,  ನವೆಂಬರ್ 10ರಿಂದ 13 ರವರೆಗೆ ನವ­ದೆಹಲಿಯಲ್ಲಿ  ‘ಲಿಂಗ ನ್ಯಾಯಕ್ಕಾಗಿ ಪುರುಷರು ಹಾಗೂ ಗಂಡುಮಕ್ಕಳು’ ಎಂಬಂಥ ಜಾಗತಿಕ ವಿಚಾರಗೋಷ್ಠಿಯನ್ನೂ ಏರ್ಪಡಿಸಿದೆ.

ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಯ­ರೊಂದಿಗೆ ಸಂವಾದ, ಜಾಗತೀಕರಣ ಹಾಗೂ ಲಿಂಗ ಅನ್ಯಾಯ, ಹಿಂಸಾಚಾರದ ಲಿಂಗತ್ವ ಬೇರು­ಗಳನ್ನು ಅರಿಯುವುದು ಹಾಗೂ ಸ್ಪಂದಿಸುವುದು, ಕೈರೊ ಹಾಗೂ ಬೀಜಿಂಗ್ ಸಮ್ಮೇಳನಗಳ  ನಂತ­ರದ  ಎರಡು ದಶಕಗಳಲ್ಲಿ ಏನೇನು ಪರಿವರ್ತನೆ­ಗಳಾಗಿವೆ? ಜಾಗತೀಕರಣ, ಲಿಂಗ ನ್ಯಾಯ ಹಾಗೂ ಸಾಮಾಜಿಕ ಚಳವಳಿಗಳು, ತಂದೆತನ ಹಾಗೂ ಆರೈಕೆ ಮಾಡುವುದು, ಪುರುಷತ್ವ, ಅಪರಾಧ  ಹಾಗೂ ನ್ಯಾಯ, ಮಾಧ್ಯಮಗಳಲ್ಲಿ ಪುರುಷತ್ವದ ಪ್ರತಿನಿಧೀಕರಣ ಹಾಗೂ ಪುರುಷತ್ವ ಮತ್ತು ಸಂಸ್ಕೃತಿ ಮುಂತಾದ ವಿಷಯಗಳ ಸುತ್ತ ಗೋಷ್ಠಿ­ಗಳು ನಡೆಯುತ್ತಿದ್ದು  ತಜ್ಞರು ವಿಚಾರಗಳನ್ನು ಮಂಡಿಸುತ್ತಿದ್ದಾರೆ.     

ಲಿಂಗ ಸಮಾನ ಸಮಾಜದ ನಿರ್ಮಾಣಕ್ಕಾಗಿ  ಪುರುಷತ್ವ ಕುರಿತಾದ ವಾಗ್ವಾದಗಳನ್ನು ಬೆಳೆಸ­ಬೇಕಾಗಿರುವುದು  ಇಂದಿನ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ.  ಪುರುಷತ್ವದ ಪರಿಕಲ್ಪನೆ ಎಷ್ಟ­ರಮಟ್ಟಿಗೆ ಸಹಜವಾದದ್ದು? ಹೆಣ್ಣೆಂದರೆ ಹೀಗಿ­ರಬೇಕು, ಗಂಡೆಂದರೆ ಹಾಗಿರಬೇಕು ಎಂಬಂತಹ ಸಾಮಾಜೀಕರಣ ಪ್ರಕ್ರಿಯೆಯ ಹಿಂದಿನ ರಾಜ­ಕಾ­ರ­ಣಗಳೇನು? ಪಿತೃಪ್ರಧಾನ ಮೌಲ್ಯಗಳನ್ನು ಬಿತ್ತುವ ಯಜಮಾನ ಸಂಸ್ಕೃತಿಯ ಮಿಥ್ಯೆಯನ್ನು ಒಡೆಯುವುದು ಹೇಗೆ? ‘ನಾನು ಮೀಸೆ ಹೊತ್ತ ಗಂಡು’ ಎಂದು ಹೇಳುವಾಗಲೇ  ಧ್ವನಿತವಾಗು­ವಂತಹ ‘ಹೆಣ್ಣೆಂದರೆ ಎರಡನೇ ದರ್ಜೆ’ ಎಂಬಂ­ತಹ ಭಾವನೆಗಳನ್ನು ಅಳಿಸಿಹಾಕುವುದು  ಅಷ್ಟು ಸುಲಭವೆ? ಮಹಿಳಾ ಸಬಲೀಕರಣ ಎಂದಾಕ್ಷಣ ಪುರುಷನ ದುರಭಿಮಾನ ಛಿದ್ರವಾಗುವುದೂ ಮುಖ್ಯ­ವಲ್ಲವೆ? ಶತಶತಮಾನಗಳಿಂದ ರೂಢಿಸಿ­ಕೊಂಡು ಬಂದಿರುವ  ಈ ಮನೋಭಾವಗಳನ್ನು ಕಳಚಿಹಾಕಲು ಪುರುಷ ಹೊಣೆಗಾರಿಕೆಯ ಮರು­ವ್ಯಾಖ್ಯಾನಗಳು ಇಂದು  ಎಂದಿಗಿಂತ ಹೆಚ್ಚು ಅಗತ್ಯವಾಗಿವೆ.

ಇಂತಹ  ಮಹಿಳಾ ಪರ ಚಿಂತನೆಗಳನ್ನು ಸಮಾಜದಲ್ಲಿ ಆರಂಭದಲ್ಲಿ ರೂಢಿಸಿದವರಲ್ಲಿ ಪುರುಷರ ಪಾತ್ರವೂ ಮಹತ್ವದ್ದಾಗಿತ್ತು ಎಂಬು­ದನ್ನು  ನಾವು ಅರಿತುಕೊಳ್ಳಬೇಕು.  ಈ ಮಹಾ­ಪುರುಷರ ಕಾಣ್ಕೆಗಳು, ಮುನ್ನೋಟಗಳು  ಇಂದಿಗೂ ಪ್ರಸ್ತುತ.  ಈ ಸಂದರ್ಭದಲ್ಲಿ ಬ್ರಿಟಿಷ್ ತತ್ವಜ್ಞಾನಿ ಹಾಗೂ ರಾಜಕೀಯ, ಸಾಮಾಜಿಕ ಚಿಂತಕ ಜಾನ್ ಸ್ಟುವರ್ಟ್ ಮಿಲ್ ಅವರನ್ನು ಇಲ್ಲಿ ನೆನೆಯಲೇಬೇಕು.  1869ರಷ್ಟು ಹಿಂದೆಯೇ ‘ದಾಸ್ಯದ ಬೇಡಿಗಳಲ್ಲಿ ಹೆಣ್ಣು’ (ದಿ ಸಬ್ಜೆಕ್ಷನ್ ಆಫ್ ವಿಮೆನ್) ಎಂಬ ಪ್ರಬಂಧವನ್ನು ಪ್ರಕಟಿಸಿದ್ದ ಮಿಲ್ ಅವರು  ಮಹಿಳಾಕೋನದಿಂದ  ಬದುಕನ್ನು ಗ್ರಹಿಸಿದ್ದರು.  ಆ ಕಾಲಕ್ಕೇ ಮಿಲ್ ಪ್ರತಿ­ಪಾದಿಸಿದ ವಿಚಾರಗಳು ಅವರ ಲಿಂಗಪಕ್ಷಪಾತ ರಹಿತ ಮನಸ್ಸನ್ನು  ಅನಾವರಣಗೊಳಿಸುತ್ತದೆ. 

ಅವರು ಬರೆಯುತ್ತಾರೆ:  ‘ಇತರ ಎಲ್ಲಾ ಅಧೀನ­ಕ್ಕೊಳಪಟ್ಟ ವರ್ಗಗಳಿಗಿಂತ ತೀರಾ ಭಿನ್ನವಾದ  ಸ್ಥಾನ ಮಹಿಳೆಯರದ್ದು.  ಇವರ ಒಡೆಯರಿಗೆ ಬರೀ ಸೇವೆಗಿಂತಲೂ ಹೆಚ್ಚಿನದಾದದ್ದು  ಬೇಕಾ­ಗಿದೆ. ಮಹಿಳೆಯರ ವಿಧೇಯತೆಯನ್ನಷ್ಟೇ ಪುರು­ಷರು ಬಯಸುವುದಿಲ್ಲ.  ಅವರಿಗೆ ಅವರ ಅಂತಃ­ಕರಣ, ಭಾವನೆಗಳೂ ಬೇಕು. ತೀರಾ ಮೃಗೀಯ­ವಾದ ಕೆಲವರನ್ನು ಬಿಟ್ಟರೆ ಎಲ್ಲಾ ಪುರುಷರು ತಮ್ಮೊಡನೆ ಹೆಚ್ಚು ನಿಕಟ ಸಂಪರ್ಕವುಳ್ಳ ಮಹಿಳೆ­ಯಲ್ಲಿ ಬಲವಂತದಿಂದಾದ ದಾಸಿಯನ್ನು ಇಷ್ಟ­ಪಡುವುದಿಲ್ಲ. ತಾನೇ ಬಯಸಿ  ಆಕೆ ದಾಸಿಯಾಗು­ವು­ದನ್ನು ಬಯಸುತ್ತಾರೆ. ಬರೇ ದಾಸಿ ಮಾತ್ರ­ವಲ್ಲ. ಅಚ್ಚುಮೆಚ್ಚಿನವಳೂ ಆಗಬೇಕು. ಹೀಗಾಗಿ ಮಹಿಳೆಯ  ಮನಸ್ಸನ್ನು ದಾಸ್ಯಕ್ಕೊಳಪಡಿಸು­ವಂತಹ ಎಲ್ಲವನ್ನೂ ಆಚರಣೆಗೆ ತರಲಾಗಿದೆ. ....ಬರೇ ಸರಳ ವಿಧೇಯತೆಗಿಂತ ಹೆಚ್ಚಿನದು ಮಹಿಳೆಯರ ಒಡೆಯರಿಗೆ ಬೇಕಾಗಿತ್ತು.  ಈ ಉದ್ದೇಶ ಸಾಧನೆಗಾಗಿ ಇಡೀ ಶಿಕ್ಷಣದ ಒತ್ತನ್ನೇ ಇದಕ್ಕೆ ತಕ್ಕಂತೆ ತಿರುಗಿಸಿದರು. ಬಾಲ್ಯದಿಂದಲೇ ಎಲ್ಲಾ ಮಹಿಳೆಯರಿಗೆ ಪುರುಷರಿಗಿಂತ ತೀರಾ ಭಿನ್ನ­ವಾದ ಸ್ವಭಾವದ ಆದರ್ಶ ಪರಿಕಲ್ಪನೆಯನ್ನು ತುಂಬಲಾಗುತ್ತದೆ. ಸ್ವಂತಿಕೆಯನ್ನಲ್ಲ, ಸ್ವನಿಯಂತ್ರ­ಣ­ವನ್ನಲ್ಲ, ಆದರೆ ಶರಣಾಗತಿ. ಇತರರ ನಿಯಂತ್ರ­ಣಕ್ಕೆ ತನ್ನನ್ನೇ ತಲೆಬಾಗಿಸಿಕೊಳ್ಳುವುದು. ಬೇರೆ­ಯ­ವರಿಗಾಗಿ ಬದುಕುವುದು ಹೆಣ್ಣಿನ ಕರ್ತವ್ಯವೆಂದು ಎಲ್ಲಾ ನೀತಿಗಳೂ ಹೇಳುತ್ತವೆ.’

ಭಾರತದಲ್ಲೂ ಅನೇಕ ಮಹಾನ್ ಪುರುಷರು ಮಹಿಳಾ ಪರ  ಚಿಂತನೆಗಳಿಗೆ ಪ್ರೇರಕ ಶಕ್ತಿಯಾಗಿ­ದ್ದಾರೆ.  ರಾಜಾ ರಾಮ್ ಮೋಹನ ರಾಯ್ ಅವರು ಆಧುನಿಕ ಭಾರತದ ಪಿತಾಮಹ. 1829ರಲ್ಲಿ ಬ್ರಿಟಿಷ್ ಆಡಳಿತ, ಸತಿ ಪದ್ಧತಿ  ನಿಷೇಧಿಸಿದ್ದರ ಹಿಂದೆ ಅವರ ನಿರಂತರ ಹೋರಾಟ­ವಿತ್ತು ಎಂಬು­ದನ್ನು ಮರೆಯಲಾಗದು. ಇನ್ನು ಗಾಂಧೀಜಿ­ಯವರ ಸ್ತ್ರೀನಿಷ್ಠ ಧೋರಣೆಗಳಂತೂ ಸ್ವಾತಂತ್ರ್ಯ ಚಳವಳಿಗೆ ಮಹಿಳೆಯರನ್ನು ಅಧಿಕ ಸಂಖ್ಯೆಯಲ್ಲಿ ಸೆಳೆದುಕೊಂಡಿದ್ದನ್ನು ಮರೆಯು­ವಂತಿಲ್ಲ.  ಭಾರತ­ದಲ್ಲಿ ಮಹಿಳಾ ಶಿಕ್ಷಣ ಹಾಗೂ ವಿಧವೆಯರ ಉದ್ಧಾರಕ್ಕಾಗಿ  ತಮ್ಮ ಪತ್ನಿ ಸಾವಿತ್ರಿ­ಬಾಯಿ ಫುಲೆ ಜೊತೆ ಮಹಾತ್ಮ ಜ್ಯೋತಿಬಾ ಫುಲೆ ಅವರು 19ನೇ ಶತಮಾನದಲ್ಲಿಯೇ ಅರಿವಿನ ಜ್ಯೋತಿ ಹೊತ್ತಿಸಿದವರು. ಈ ಪರಂಪರೆಯ ಮುಂದುವ­ರಿಕೆ­ಯಾಗಿ ಸಮಾಜದಲ್ಲಿ  ಬೇರೂರಿ­ರು­­ವಂತಹ ಪುರುಷತ್ವ ಪ್ರಜ್ಞೆ ಬದಲಾಗ­ಬೇಕಾಗಿದೆ.

ಸರ್ಕಾರದ ನೀತಿನಿರೂಪಣೆಗಳಲ್ಲಿ ಒಂದಷ್ಟು ಮಟ್ಟಿಗಿನ ಸಂವೇದನಾಶೀಲತೆ ವ್ಯಕ್ತವಾದರೂ ಲಿಂಗತ್ವ ಅಸೂಕ್ಷ್ಮತೆ ವಿವಿಧ ರೀತಿಗಳಲ್ಲಿ ಹೊರ­ಹೊಮ್ಮುತ್ತಿರುತ್ತವೆ.  ರಾಜಕೀಯ ನಾಯಕರು ಅಸೂಕ್ಷ್ಮವಾದ ಹೇಳಿಕೆಗಳನ್ನು ನೀಡುವುದೂ ಮಾಮೂಲು. ಈ ಬಗ್ಗೆ  ನಾಗರಿಕ ಸಮಾಜದ ಎಚ್ಚೆತ್ತ ಪ್ರಜ್ಞೆ ಸದಾ ಕಾವಲು ಕಾಯಬೇಕು.  ಇಂತಹ ಅಸೂಕ್ಷ್ಮ  ಪ್ರಜ್ಞೆ ನಮ್ಮೊಳಗೂ ಅಂತರ್ಗ­ತ­ವಾಗಿರಬಹುದು.  ಈ ವಿಚಾರದಲ್ಲಿ ನಿರಂತರ ಕಲಿಕೆ ಮುಖ್ಯ.

ಪಿತೃಪ್ರಧಾನ ವ್ಯವಸ್ಥೆ ಬದಲಾಗಬೇಕಾದಲ್ಲಿ ಪುರುಷರ ಮನೋಭಾವಗಳಲ್ಲಿ ಬದಲಾವಣೆ ಆಗಬೇಕಾದುದು ಅಗತ್ಯ. ಇದಕ್ಕೆ ಸದ್ಯದ ಮಾದರಿ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಪತಿ ಓನ್ಲರ್ ಕೋಮ್.  ಐದು ಬಾರಿ ವಿಶ್ವಚಾಂಪಿ­ಯನ್  ಎಂಸಿ ಮೇರಿ ಕೋಮ್ ಅವರ ಜೀವನ ಸಂಗಾತಿ ಎಂದು ಅವರು ತಮ್ಮನ್ನು ತಾವು  ಹೆಮ್ಮೆ­ಯಿಂದ ಪರಿಚಯಿಸಿಕೊಳ್ಳುತ್ತಾರೆ. ಜೀವನ ಸಂಗಾ­ತಿಯ ಭಾವನೆಗಳಿಗೆ ಸ್ಪಂದಿಸುವುದು ಇಬ್ಬರ ಬದು­ಕನ್ನೂ ಶ್ರೀಮಂತಗೊಳಿಸುತ್ತದೆ ಎನ್ನುವ ಅವರ ಅಭಿ­ಪ್ರಾಯ  ಸರಿಯಾದುದು.

‘ಶತಶತಮಾನ­ಗ­ಳಿಂದ ನಾವು ಗಟ್ಟಿಯಾಗಿ, ದೊಡ್ಡದಾಗಿ ಬೆಳೆ­ಯಲು ಮಹಿಳೆಯರು ನಮಗೆ ನೆರವಾಗಿದ್ದಾರೆ.  ಪತ್ನಿ ಅಥವಾ ಸಂಗಾತಿ ಮಟ್ಟದಲ್ಲಷ್ಟೇ ಮಹಿಳೆ­ಯರ ಪಾತ್ರವನ್ನು  ಕುಗ್ಗಿಸುವುದನ್ನು ನಿಲ್ಲಿಸ­ಬೇಕು. ಮಹಿಳೆ ತನ್ನ ಪೂರ್ಣ ಸಾಮರ್ಥ್ಯ ಬಳಸಿ­ಕೊಳ್ಳಲು ಹಾಗೂ ತನ್ನದೇ ಸ್ವಂತ ವ್ಯಕ್ತಿತ್ವದ ಘನತೆಯ ವ್ಯಕ್ತಿಯಾಗಲು   ಜೀವನ ಸಂಗಾತಿಗೆ ನೆರ­ವಾಗುವ ನಮ್ಮ ಕರ್ತವ್ಯವನ್ನು ನಾವು ಮಾಡ­ಬೇಕು. ಅವರಿಗೆ ಒತ್ತಾಸೆಯಾಗಿರಬೇಕು’ ಎಂದೂ ಅವರು ಹೇಳಿದ್ದಾರೆ. ಮಹಿಳೆಯರ ಸಮಾನತೆ ಸಾಧ್ಯವಾಗಲು, ಮಹಿಳೆಯರ ಸಮಸ್ಯೆಗಳು ಪರಿಹಾರವಾಗಲು    ಪುರುಷರೂ ಪರಿಹಾರದ ಭಾಗವಾಗಬೇಕಾ­ದುದು ಅಗತ್ಯ ಎಂಬುದು ಇಲ್ಲಿ ಸುವ್ಯಕ್ತ.

ಹೆಣ್ಣುಮಕ್ಕಳಂತೆಯೇ ಗಂಡುಮಕ್ಕಳಿಗೂ ಸಮಸ್ಯೆ­ಗಳಿವೆ. ಪಡಿಯಚ್ಚಿನ  ಸಿದ್ಧಪಾತ್ರಗಳಿಗೆ ತಕ್ಕಂತೆಯೇ ಗಂಡುಹುಡುಗರು ವರ್ತಿಸಬೇಕೆಂಬ ನಿಯಮಗಳಿವೆ. ಗಂಡುಹುಡುಗರು ಅಳಕೂ­ಡದು, ಭಾವುಕತೆ ಪ್ರದರ್ಶಿಸಬಾರದು ಎಂಬುದು ಸಮಾಜದ ಅಲಿಖಿತ ನಿಯಮಗಳು. ಕೃತಕವಾದ ಇಂತಹ ಕಟ್ಟುಪಾಡುಗಳು ವ್ಯಕ್ತಿತ್ವಗಳನ್ನು ತಿರು­ಚುವಂತಹದ್ದು. ನಮ್ಮ ಪುರಾಣಗಳ  ‘ಅರ್ಧ­ನಾರೀಶ್ವರ’ ಕಲ್ಪನೆಯ ಆದರ್ಶ ನಮ್ಮದಾದಲ್ಲಿ   ಇಂತಹ ಕೃತಕ ಸಾಮಾಜಿಕ ನಡಾವಳಿಗಳ ಬಂಧನಗಳಿಂದ ಮುಕ್ತವಾಗುವುದು ಸಾಧ್ಯ.
ಪುರುಷಪ್ರಾಧಾನ್ಯವನ್ನು ಪ್ರತಿಪಾದಿಸುವ ನಮ್ಮ ಅನೇಕ ಸಾಮಾಜಿಕ, ಸಾಂಸ್ಕೃತಿಕ ನಡಾ­ವಳಿಗಳು ಸಮಾನತೆಯನ್ನು ಬೋಧಿಸುವ ಸಂವಿ­ಧಾನದ ಆಶಯಗಳಿಗೆ ವಿರೋಧಿಯಾಗಿವೆ ಎಂಬು­ದನ್ನು ಸಮಾಜ ಅರಿಯಬೇಕು. ಸಂವಿಧಾನಕ್ಕೆ ಗೌರವ ಸಲ್ಲಿಸುವುದಕ್ಕಾದರೂ ಹೆಣ್ಣುಮಕ್ಕಳನ್ನು ಕ್ಷುಲ್ಲಕೀಕರಿಸುವ ಸಂಸ್ಕೃತಿಗೆ ವಿದಾಯ ಹೇಳ­ಬೇಕಾ­ಗಿದೆ. ಇಂತಹದೊಂದು ಬದಲಾ­ವಣೆಗೆ  ಸಹ­­ಜೀವಿ­­ಗಳಾಗಿರುವ ಪುರುಷರ ಸ್ಪಂದನೆ, ಸಹ­ಭಾಗಿತ್ವ ಮುಖ್ಯ. ಗಂಡು, ಹೆಣ್ಣಿನ ಮಧ್ಯೆ ಪರಸ್ಪರ ಅನು­ಮಾನಗಳು ಹಾಗೂ ಸಂಘರ್ಷ ತಪ್ಪಿಸಲೂ ಇದು  ಅನಿವಾರ್ಯ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT