ಅಂದ ಹೆಚ್ಚಿಸುವ ವಿಟೆಂಜ್‌ ಲುಕ್‌

ಅಂದ ಹೆಚ್ಚಿಸುವ ವಿಟೆಂಜ್‌ ಲುಕ್‌

Published on

ಓಲ್ಡ್‌ ಈಸ್‌ ಗೋಲ್ಡ್‌ ಎಂಬ ಮಾತಿನಂತೆ ವಿಂಟೇಜ್ ಫ್ಯಾಷನ್ ಎಂದಿಗೂ ಮಾಸುವುದಿಲ್ಲ, ಮತ್ತು ಸೀರೆಗಳೂ ಇದಕ್ಕೆ ಹೊರತಾಗಿಲ್ಲ.

ಸೀರೆಯ ಕ್ಲಾಸಿಕ್ ಸೌಂದರ್ಯವನ್ನು ವಿಂಟೇಜ್ ಸ್ಪರ್ಶದಿಂದ ವಿನ್ಯಾಸಗೊಳಿಸಿದಾಗ, ಅದು ಕಾಲಾತೀತ ಸೊಬಗು ಮತ್ತು ಅತ್ಯಾಧುನಿಕತೆಯನ್ನು ಪ್ರತಿಬಿಂಬಿಸುತ್ತದೆ. ಇತ್ತೀಚಿನ ದಿನಗಳಲ್ಲಿ ವಿಂಟೇಜ್‌ ಕಲರ್‌ ಸೀರೆಗಳು, ಆಭರಣಗಳು ಟ್ರೆಂಡ್ ಆಗುತ್ತಿವೆ.

ಮದುವೆ ಕಾರ್ಯಕ್ರಮಗಳಲ್ಲಿ ವಿಂಟೇಜ್ ಲುಕ್‌ನಲ್ಲಿ ಕಾಣಿಸಿಕೊಂಡರೆ ಸೆಂಟರ್‌ ಆಫ್‌ ದಿ ಅಟ್ರ್ಯಾಕ್ಷನ್‌ ನೀವೇ ಆಗುವಿರಿ.

ವಿಂಟೇಜ್ ವೈಬ್ ಇರುವ ಬಟ್ಟೆಗಳನ್ನು ಆರಿಸಿ: ನಿಜವಾದ ವಿಂಟೇಜ್ ಲುಕ್ ಸೃಷ್ಟಿಸುವಲ್ಲಿ ಬಟ್ಟೆಯ ಆಯ್ಕೆಯು ನಿರ್ಣಾಯಕವಾಗಿದೆ. ಹಿಂದಿನ ಕಾಲದಲ್ಲಿ ಜನಪ್ರಿಯವಾಗಿದ್ದ ರೇಷ್ಮೆ, ವೆಲ್ವೆಟ್ ಅಥವಾ ಶಿಫಾನ್‌ನಂತಹ ಬಟ್ಟೆಗಳನ್ನು ಆರಿಸಿಕೊಳ್ಳಿ.

ವಿಂಟೇಜ್ ಸೀರೆಗಳು ಸಾಮಾನ್ಯವಾಗಿ ಮಣ್ಣಿನ ಬಣ್ಣ, ಮ್ಯೂಟ್ ನೀಲಿಬಣ್ಣ ಅಥವಾ ಗಾಢ ಬಣ್ಣಗಳನ್ನು ಒಳಗೊಂಡಿರುತ್ತವೆ. ಆಲಿವ್ ಗ್ರೀನ್‌, ಮೆರೂನ್ ಮತ್ತು ಡಸ್ಟಿ ಗುಲಾಬಿಯಂತಹ ಲುಕ್‌ ಆಧುನಿಕ ಆಕರ್ಷಣೆಯನ್ನು ನೀಡುತ್ತದೆ.

ಕಸೂತಿ ಮತ್ತು ಪೈಸ್ಲಿ, ಹೂವಿನ ವಿನ್ಯಾಸಗಳು ಮತ್ತು ಬ್ರೊಕೇಡ್ ಮಾದರಿಯ ಸಾಂಪ್ರದಾಯಿಕ ಲಕ್ಷಣಗಳು ವಿಂಟೇಜ್ ಸೀರೆಗಳ ವಿಶಿಷ್ಟ ಅಂಶಗಳಾಗಿವೆ. ವಿಂಟೇಜ್ ವೈಬ್‌ ಸೃಷ್ಟಿಸಲು ಕಸೂತಿ ಅಥವಾ ಜರಿ ವರ್ಕ್‌ ಹೊಂದಿರುವ ಸೀರೆಗಳನ್ನು ಆರಿಸಿ. 

ಟ್ರೆಂಡಿಂಗ್ ವಿಂಟೇಜ್ ಸೀರೆಗಳು...

ರಸ್ಟ್‌ ಆರೇಂಜ್‌, ಗ್ರೀಗ್‌, ಬ್ಲ್ಯೂ, ರೆಡ್‌ ಬಣ್ಣದ ಸೀರೆಗಳು  ಸದ್ಯ ಹೆಚ್ಚು ಟ್ರೆಂಡಿಂಗ್‌ನಲ್ಲಿವೆ.

ಕಾಂಚೀಪುರಂ ರೇಷ್ಮೆ ಸೀರೆ: ಶ್ರೀಮಂತ ಪರಂಪರೆ ಮತ್ತು ಶುದ್ಧ ಜರಿ ವರ್ಕ್‌ಗಳಿಗೆ ಈ ಸೀರೆ ಹೆಸರುವಾಸಿಯಾಗಿದೆ. ಹಳೇ ಶೈಲಿಯ ಸಾಂಪ್ರದಾಯಿಕ ವಿನ್ಯಾಸಗಳು, ವಿಶೇಷವಾಗಿ ದೊಡ್ಡ ಬಾರ್ಡರ್‌ಗಳು ಮತ್ತು ಸಾಂಪ್ರದಾಯಿಕ ಮೋಟಿಫ್‌ಗಳು (ನವಿಲುಗಳು, ಚೆಕ್ಸ್‌ಗಳು) ಪ್ರಸ್ತುತ ಟ್ರೆಂಡಿಂಗ್‌ನಲ್ಲಿವೆ.

ಬನಾರಸಿ ಸೀರೆ: ವಿಶಿಷ್ಟವಾದ ನೇಯ್ಗೆ ಮತ್ತು ಸಂಕೀರ್ಣವಾದ ವಿನ್ಯಾಸಗಳಿಗೆ ಈ ಸೀರೆ ಹೆಸರುವಾಸಿ. ಬನಾರಸಿ ಶಿಫಾನ್ ಮತ್ತು ರೇಷ್ಮೆ ಸೀರೆಗಳು ಮದುವೆ ಸಂದರ್ಭಗಳಿಗೆ ಮತ್ತು ನಂತರದ ಪಾರ್ಟಿಗಳಿಗೆ ಸೂಕ್ತ ಎನಿಸುತ್ತವೆ.

ಪೋಲ್ಕಾ ಡಾಟ್ಸ್ ಮತ್ತು ಅಮೂರ್ತ ವಿನ್ಯಾಸಗಳು: 50 ರಿಂದ 90ರ ದಶಕದ ಫ್ಯಾಷನ್‌ನಿಂದ ಪ್ರೇರಿತವಾದ ಬೋಲ್ಡ್ ಪ್ರಿಂಟ್‌ಗಳು ಮತ್ತು ಪ್ಯಾಟರ್ನ್‌ಗಳು (ಪೋಲ್ಕಾ ಡಾಟ್ಸ್, ಚೆಕ್‌ಗಳು, ಹೂವಿನ ವಿನ್ಯಾಸಗಳು) ಈಗ ಮತ್ತೆ ಟ್ರೆಂಡ್‌ ಆಗುತ್ತಿವೆ.

ಶುದ್ಧ ರೇಷ್ಮೆ, ಜಾರ್ಜೆಟ್: ಶುದ್ಧ ರೇಷ್ಮೆ, ಕ್ರೇಪ್ ಮತ್ತು ಜಾರ್ಜೆಟ್‌ನಂತಹ ಹಗುರವಾದ ಬಟ್ಟೆಗಳಲ್ಲಿ ಲಭ್ಯವಿರುವ ವಿಂಟೇಜ್ ಶೈಲಿಯ ಸೀರೆಗಳು ಧರಿಸಲು ಆರಾಮದಾಯಕ ಮತ್ತು ಸೊಗಸಾಗಿ ಕಾಣುತ್ತವೆ.

ಮೈಸೂರು ರೇಷ್ಮೆ ಸೀರೆ: ಮಹಿಳೆಯರ ಪಾಲಿಗೆ ಎಂದೆಂದಿಗೂ  ಅಚ್ಚುಮೆಚ್ಚಾಗಿರುವ ಸೀರೆ ಇದು. ಶುದ್ಧ ರೇಷ್ಮೆ ಸೀರೆಗಳು ಉಟ್ಟುಕೊಳ್ಳಲು ಸುಲಭವಾಗಿ ಮತ್ತು ಆರಾಮದಾಯಕ ಎನಿಸುವಂಥವು. ಇವುಗಳಲ್ಲಿ ವಿಂಜೇಟ್‌ ಮಾದರಿಯ ವಿನ್ಯಾಸವುಳ್ಳ ಸೀರೆಗಳನ್ನು ಧರಿಸಬಹುದು.

ನೀವು ಆಯ್ಕೆ ಮಾಡುವ ಬ್ಲೌಸ್ ವಿನ್ಯಾಸ ನಿಮ್ಮ ವಿಂಟೇಜ್ ಸೀರೆಯ ಲುಕ್ ಅನ್ನು ಇನ್ನಷ್ಟು ಸುಂದರಗೊಳಿಸಬಹುದು. ಪಫ್ಡ್ ಸ್ಲೀವ್‌ಗಳು, ಹೈ ನೆಕ್‌ಲೈನ್‌ಗಳು ಅಥವಾ ಬೋಟ್ ನೆಕ್‌, ಸ್ಲಿವ್‌ಲೆಸ್‌ ನಂತಹ ರೆಟ್ರೊ ಮಾದರಿಯ ವಿನ್ಯಾಸವುಳ್ಳ ಬ್ಲೌಸ್ ಅನ್ನು ಆರಿಸಿಕೊಳ್ಳಿ. ಇದಕ್ಕಾಗಿ ಸೂಕ್ಷ್ಮವಾದ ಲೇಸ್ ಅಥವಾ ಬ್ರೊಕೇಡ್ ಬಟ್ಟೆಗಳಲ್ಲಿ ಬ್ಲೌಜ್‌ ಸಿದ್ಧಪಡಿಸಿಕೊಳ್ಳಬಹುದು. 

ಟ್ರೆಂಡಿಂಗ್ ವಿಂಟೇಜ್ ಆಭರಣಗಳು...

ಆ್ಯಂಟಿಕ್ ಅಥವಾ ರೆಟ್ರೋ ಆಭರಣಗಳಿಲ್ಲದೇ ವಿಂಟೇಜ್ ಲುಕ್ ಪೂರ್ಣಗೊಳ್ಳುವುದಿಲ್ಲ. ಆ್ಯಂಟಿಕ್ ಚಿನ್ನದ ಆಭರಣಗಳು, ಪೋಲ್ಕಿ ಅಥವಾ ಕುಂದನ್ ಸೆಟ್‌ಗಳು ಹೆಚ್ಚು ಸೂಕ್ತ. ರಾಯಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವಿರಾದರೆ ಮುತ್ತಿನ ಹಾರಗಳು ಅಥವಾ ಸಾಂಪ್ರದಾಯಿಕ ಶೈಲಿಯ ಒಡವೆ, ಬಳೆಗಳನ್ನು ಬಳಸಬಹುದು.

ಪೋಲ್ಕಿ ಆಭರಣಗಳು: ಇವು ಕತ್ತರಿಸದ ವಜ್ರಗಳಿಂದ ತಯಾರಿಸಲ್ಪಟ್ಟಿರುತ್ತವೆ ಮತ್ತು ರಾಜಮನೆತನದ ನೋಟವನ್ನು ನೀಡುತ್ತವೆ. ಮದುವೆ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಲುಕ್‌ಗಾಗಿ ಪೋಲ್ಕಿ ನೆಕ್ಲೇಸ್‌ಗಳು, ಕಿವಿಯೋಲೆಗಳು ಮತ್ತು ಬಳೆಗಳು ಹೆಚ್ಚು ಸೂಕ್ತವೆನಿಸುತ್ತವೆ.

ಆರ್ಟ್ ಡೆಕೊ ವಿನ್ಯಾಸಗಳು: 1920 ರ ದಶಕದ ವಿಶಿಷ್ಟವಾದ ವೈಬ್ ಹೊಂದಿರುವ ಆರ್ಟ್ ಡೆಕೊ ಶೈಲಿಯ ಆಭರಣಗಳು ಹೆಚ್ಚು ಜನಪ್ರಿಯವಾಗಿವೆ. ಚಿನ್ನ, ವಜ್ರಗಳು, ಮತ್ತು ದಪ್ಪ ಆಕಾರಗಳನ್ನು ಹೊಂದಿರುವ ವಿನ್ಯಾಸದ ಆಭರಣಗಳು ಇಂದಿನ ಫ್ಯಾಷನ್‌ಗೆ ಸೂಕ್ತವಾಗಿವೆ.

ದಪ್ಪ ಮುತ್ತಿನ ಹಾರಗಳು ಮತ್ತು ಕಿವಿಯೋಲೆಗಳು: ಮುತ್ತಿನ ಹಾರಗಳು ಮತ್ತು ದೊಡ್ಡ ಕಿವಿಯೋಲೆಗಳು ವಿಂಟೇಜ್ ಲುಕ್‌ ನೀಡುತ್ತವೆ. ಇವುಗಳನ್ನು ಆಧುನಿಕ ಉಡುಪುಗಳೊಂದಿಗೆ ಅಥವಾ ಸೀರೆಗಳೊಂದಿಗೆ ಸುಲಭವಾಗಿ ಹೊಂದಿಸಬಹುದು.

ಝುಮುಕಿಗಳು: ಜುಮ್ಕಿಗಳು ಎಲ್ಲಾ ರೀತಿಯ ಸಾಂಪ್ರದಾಯಿಕ ಕೇಶವಿನ್ಯಾಸ ಮತ್ತು ಉಡುಗೆಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ.

ಕ್ಯಾಮಿಯೊ ಬ್ರೂಚೆಸ್ ಮತ್ತು ಕಾಕ್ಟೈಲ್ ರಿಂಗ್‌ಗಳು: ದೊಡ್ಡ ಕಾಕ್ಟೈಲ್ ಉಂಗುರಗಳು ಮತ್ತು ಕ್ಯಾಮಿಯೊ ಬ್ರೂಚೆಸ್‌ಗಳು ಸಹ ಸದ್ಯ ಟ್ರೆಂಡಿಂಗ್‌ನಲ್ಲಿವೆ. 

ಮೇಕಪ್ ಹೀಗಿರಲಿ...

ವಿಂಟೇಜ್ ಲುಕ್‌ಗಾಗಿ, ಕಡಿಮೆ ಮೇಕಪ್ ಮಾಡಿಕೊಳ್ಳುವ ಮೂಲಕ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು.

ಐ –ಲೈನರ್ ಲೈಟಾಗಿ ಅಪ್ಲೈ ಮಾಡಿ, ಐಶ್ಯಾಡೋ ಗಾಢವಾಗಿರದಂತೆ ನೋಡಿಕೊಳ್ಳಿ. ಕೆಂಪು ಅಥವಾ ಗಾಢ ಬಣ್ಣದ ಲಿಪ್‌ಸ್ಟಿಕ್‌ ಬಳಸಬಹುದು. ಹುಬ್ಬುಗಳು ಸ್ಪಲ್ಪ ದಟ್ಟವಾಗಿ ಕಾಣುವಂತೆ ಮಾಡಿ, ಕಾಡಿಗೆಯೂ ಸ್ವಲ್ಪ ದಪ್ಪದಾಗಿ ಅಲ್ಪೈ ಮಾಡಿ. ಕೆನ್ನೆಗಳು ಸ್ವಲ್ಪ ಕೆಂಪಾಗಿರುವಂತೆ ಮೇಕ್ ಅಪ್‌ ಮಾಡಿಕೊಂಡರೆ ನಿಮ್ಮ ಲುಕ್‌ ಪೂರ್ಣಗೊಳ್ಳುವುದು.

ರೆಟ್ರೊ ಕೇಶವಿನ್ಯಾಸ...

ಮುಂಗುರುಳು ಅಥವಾ ಕರ್ಲ್ಡ್‌ ಹೇರ್‌ ಕೆನ್ನೆಯ ಅಕ್ಕಪಕ್ಕ ಓಡಾಡುತ್ತಿರುವಂತೆ, ಹೂವಿನ ಅಲಂಕಾರಗಳೊಂದಿಗೆ ಅಚ್ಚುಕಟ್ಟಾದ ಬನ್‌ಗಳನ್ನು ಅಥವಾ ಜಡೆ ಹಾಕಿಕೊಳ್ಳಬಹುದು.

Maduve Habba
www.prajavani.net