ಆಪದ್ಧನವಿದು ಬಂಗಾರದ ಬಳೆ
ಹೆಣ್ಣುಮಕ್ಕಳಿಗೆ ಮದುವೆಯ ಸಂದರ್ಭದಲ್ಲಿ ಬಳೆ ನೀಡುವುದು ಕೇವಲ ಅಲಂಕಾರಕ್ಕಾಗಿ ಅಲ್ಲ. ಆಪದ್ಧನವಾಗಿಯೂ ನೀಡಲಾಗುತ್ತದೆ. ಕೈಯೊಳಗಿರುವ ಬಳೆ, ಆಪತ್ಕಾಲದಲ್ಲಿ ಕೈ ಬಿಚ್ಚಿ ಕೊಡಲೆಂದೇ ಮಾಡಿಸಿ ನೀಡಲಾಗುತ್ತದೆ. ಮನೆ ಕಟ್ಟುವಾಗ, ಆಸ್ತಿ ಕೊಳ್ಳುವಾಗ, ಆಸ್ತಿ ಉಳಿಸಿಕೊಳ್ಳಲು, ಮಕ್ಕಳ ಓದಿಗೆ ಇಂಥ ಸಕಾರಾತ್ಮಕ ಯೋಜನೆಗಳಿಗಾಗಿ ಮಗಳಿಗೆ ಬಳೆ ನೀಡಲಾಗುತ್ತದೆ. ಸೊಸೆಗೂ ಕೊಟ್ಟ ಮನೆಯ ಉದ್ಧಾರಕ್ಕಾಗಿ ಕಂಕಣ ಬದ್ಧಳಾಗು ಎಂದೇ ಬಂಗಾರದ ಬಳೆಗಳನ್ನು ಧರಿಸಲು ನೀಡಲಾಗುತ್ತದೆ.
ಉತ್ತರ ಕರ್ನಾಟಕದಲ್ಲಿ ಗಾಜಿನ ಬಳೆಗಿಂತಲೂ ಮೊದಲು ಪಾಟ್ಲಿ ಎಂಬ ಚೊಕ್ಕ ಬಂಗಾರದ ಬಳೆ ನೀಡುತ್ತಾರೆ. ಇದರಲ್ಲಿ ಅತ್ಯಲ್ಪ ಪ್ರಮಾಣದ ಕಲಬೆರಕೆ ಇದ್ದು, ಕೈಯಿಂದಲೇ ಬಡಿಸಿ, ಮಣಿಸಿ, ಬಳೆ ಮಾಡಿ ಕೊಟ್ಟಿರುತ್ತಾರೆ. ನಂತರದ ಸರದಿ ಎರಡೂ ಕೈಗಳಿಗೆ ಎರಡೆರಡು ಬಿಲ್ವಾರ ಎಂದು ಕರೆಯಲಾಗುವ ವಜ್ರದಾಕಾರದಲ್ಲಿ ಕೆತ್ತಿರುವ ತೆಳು ಬಳೆ ನೀಡಲಾಗುತ್ತದೆ. ಗಾಜಿನ ಬಳೆಗಳ ನಡುವೆ ಹೊಂಬಣ್ಣದ ಕಿರಣಗಳನ್ನು ಸೂಸಿಸುವ ಈ ಬಿಲ್ವಾರಗಳ ಮಾಟಕ್ಕೆ ಮೈಮರೆಯದವರೇ ಇಲ್ಲ.
ಇನ್ನು ಮುಂಗೈ ಮಣಿಕಟ್ಟಿಗೆ ತೋಡೆಗಳೆಂದು ಕರೆಯಲಾಗುವ ಕಡಗದಾಕಾರದ, ಗೋದಿ ವಿನ್ಯಾಸದ ಅಥವಾ ಮುರುಗಿ ವಿನ್ಯಾಸದ ಬಳೆಗಳನ್ನು ಧರಿಸಲಾಗುತ್ತದೆ. ಈ ಬಳೆಗಳ ನಂತರ ಮತ್ತೇನೂ ತೊಡುವುದಿಲ್ಲ. ಈ ಎಂಟು ಬಳೆಗಳಿದ್ದರೆ ಎಂಟೆಂಟು ದಿಕ್ಕುಗಳಿಂದ ಕಷ್ಟಗಳು ಬಂದರೂ ನಿವಾರಿಸಬಹುದು ಎಂಬ ಧೈರ್ಯವನ್ನು ನೀಡಲಾಗಿರುತ್ತದೆ.
ಿವಲ್ಲದೇ ಈಗೀಗ ಹಲವಾರು ವಿನ್ಯಾಸಗಳ ಬಳೆಗಳು ಬಂದಿವೆ. ಒಳಗೆ ಟೊಳ್ಳಿರುವ ಅಥವಾ ಹರಳಿರುವ, ಮುತ್ತಿನಲಂಕಾರದ ಬಳೆಗಳೂ ಸಾಕಷ್ಟಿವೆ. ಆದರೆ ಕಷ್ಟದ ಕಾಲಕ್ಕೆ ಹೆಚ್ಚು ನಷ್ಟವಿಲ್ಲದೆ ಮರುಮಾರಾಟವಾಗುವ ಈ ಎಂಟು ಬಗೆಯ ಬಳೆಗಳಿಗೆ ಎಂದಿಗೂ ಮಾಸದ ಬೇಡಿಕೆ ಇವೆ.
ಮನೆ ಕಟ್ಟಲೆಂದೇ ತೋಡೆ ಮುರಿಸಿದೆವು... ಮಕ್ಕಳ ಓದಿಗೆ ಬಿಲ್ವಾರ ಬಳಸಿದೆವು ಎನ್ನುವವರ ಮಾತಲ್ಲಿ, ಬದುಕು ಬಂಗಾರವಾಯಿತು ಎಂಬ ವಿಶ್ವಾಸ ಇರುತ್ತದೆ. ಬದುಕಿಗಾಗಿಯೇ ಬಂಗಾರ ಎಂಬ ನಂಬಿಕೆಯಲ್ಲಿ ಬಾಂಧವ್ಯ ಬಲಪಡಿಸಿಕೊಂಡಿರುತ್ತಾರೆ.