ವಧುವಿನ ಕೇಶವಿನ್ಯಾಸ
ಹೆಂಗಳೆಯರ ಸೌಂದರ್ಯಕ್ಕೆ ಮುಕುಟದಂತಿರುವ ಹೆರಳನ್ನು ಸಿಂಗರಿಸಿಕೊಳ್ಳುವುದೇ ಸವಾಲು. ಅದರಲ್ಲೂ ಮದುವೆಯಲ್ಲಿ ಅಂದದ ಉಡುಗೆ, ಚೆಂದದ ಮೇಕಪ್‌ಗೆ ಒಪ್ಪುವಂತೆ ಮುಡಿಯನ್ನು ಸಿಂಗರಿಸಿಕೊಳ್ಳುವುದು ತುಸು ಹೆಚ್ಚೇ ತ್ರಾಸದಾಯಕ. ಕೇಶ ವಿನ್ಯಾಸದತ್ತ ತುಸು ಒಲವು, ಸ್ವಲ್ಪ ಅರಿವು ಇದ್ದರೆ ಈ ತ್ರಾಸವೂ ಆಪ್ತವೆನಿಸುತ್ತದೆ.
ಮದುವೆ ಮೂಹರ್ತದಲ್ಲಿ ಸಾಂಪ್ರದಾಯಿಕ ಕೇಶವಿನ್ಯಾಸದ ಮೊರೆ ಹೋಗುವ ಮದುಮಗಳಿಗೆ ಆರತಕ್ಷತೆಯಲ್ಲಿ ತಮ್ಮಿಷ್ಟದಂತೆ ಟ್ರೆಂಡಿಯಾದ ವಿನ್ಯಾಸಗಳನ್ನು ಮಾಡಿಕೊಳ್ಳಲು ವಿಫುಲ ಅವಕಾಶಗಳಿರುತ್ತವೆ. ದೇಹ ವರ್ಣ ಹಾಗೂ ಮುಖದ ಆಕಾರಕ್ಕೆ ತಕ್ಕುದಾದ ಕೇಶ ವಿನ್ಯಾಸ ಆಯ್ಕೆ ಮಾಡಿಕೊಳ್ಳುವುದು ಜಾಣ ನಡೆ.
ಹೇರ್ ಟ್ರೆಂಡ್ ಮರೆಯದಿರಿ: ಟ್ರೆಂಡ್‌ಗೆ ಸರಿಯಾಗಿ ಕೇಶ ವಿನ್ಯಾಸ ಮಾಡಿಕೊಂಡರೆ ಮನಸ್ಸಿಗೆ ಮುದ ನೀಡುತ್ತದೆ. ನನ್ನ ಕೇಶವಿನ್ಯಾಸ ಸುಂದರವಾಗಿದೆ ಅಥವಾ ಟ್ರೆಂಡಿಯಾಗಿದೆ ಎನ್ನುವ ವಿಶ್ವಾಸ ಮೂಡಿಸುತ್ತದೆ. ಈ ಅತ್ಮವಿಶ್ವಾಸ ಮದುವೆ ವೇದಿಕೆಯಲ್ಲಿ ಚಂದದ ನಗೆಯೊಂದಿಗೆ ಫೋಟೊಗೆ ಫೋಸ್ ಕೊಡಲು ನೆರವಾಗುತ್ತದೆ.
ಕೇಶ ಕಿರೀಟಗಳ ಬಳಕೆ: ಆರತಾಕ್ಷತೆಯಲ್ಲಿ ಕೇಶ ವಿನ್ಯಾಸವನ್ನು ಮತ್ತಷ್ಟು ಆಕರ್ಷಕವಾಗಿಸಲು ಆಕ್ಸಸರೀಸ್‌ಗಳ ಬಳಕೆ ಅನಿವಾರ್ಯ. ಹೆರಳಿನ ಸೌಂದರ್ಯ ವರ್ಧನೆಗೆ ಸಹಜ ಹೂವುಗಳ ಬಳಕೆ ಸಾಮಾನ್ಯ. ಸಾಂಪ್ರದಾಯಿಕ ಉಡುಗೆ ತೊಟ್ಟಾಗ ಅಥವಾ ಮದುವೆ ಮುಹೂರ್ತದಲ್ಲಿ ಸಹಜ ಹೂವುಗಳಿಂದಲೇ ಶೃಂಗರಿಸಿಕೊಳ್ಳಬಹುದು. ರಿಸೆಷ್ಷನ್‌ನಲ್ಲಿ ಗೌನ್ ತೊಟ್ಟಾಗ ಕೇಶ ಕಿರೀಟ (ಟಿಯಾರಾ) ಬಳಸಿ ಹೆರಳನ್ನು ಸಿಂಗರಿಸಿದರೆ ಮತ್ತಷ್ಟು ಆಕರ್ಷವಾಗಿ ಕಾಣುತ್ತದೆ. ಕೃತಕ ಹೂವುಗಳು, ಮೊಗ್ಗಿನ ಜಡೆಗಳು, ಗೊಂಡೆಗಳು, ಬಹುಬಗೆಯ ಸ್ಟೋನ್‌ಗಳನ್ನು ಬಳಸುವಾಗ ಅವುಗಳನ್ನು ಹೇರ್‌ಪಿನ್ ಕಾಣದಂತೆ ಜಾಗರೂಕತೆಯಿಂದ ತೊಟ್ಟುಕೊಳ್ಳಬೇಕು ಅಥವಾ ಕೇಶ ವಿನ್ಯಾಸಕರ ನೆರವು ಪಡೆಯುವುದು ಉತ್ತಮ.
ಮೆಸ್ಸಿ ಬನ್: ಆರತಕ್ಷತೆಯಲ್ಲಿ ಬಹುತೇಕರು ಮೊರೆ ಹೋಗುವ ವಿನ್ಯಾಸವಿದು. ಎಲ್ಲ ಬಗೆಯ ಕೇಶರಾಶಿಯವರಿಗೂ ಇದು ಹೊಂದಿಕೆಯಾಗುತ್ತದೆ. ದುಂಡಾಕಾರದ ಮುಖದವರಿಗೆ ಹೇಳಿಮಾಡಿಸಿದಂತಿದೆ. ಪಾಶ್ಚಾತ್ಯ ದಿರಿಸಿರಲಿ, ಸಂಪ್ರದಾಯಿಕ ಉಡುಗೆಯೇ ಇರಲಿ ಎರಡಕ್ಕೂ ಒಗ್ಗಿಕೊಳ್ಳುವ ಸಾರ್ವಕಾಲಿಕ ವಿನ್ಯಾಸವಿದು. ಹೆಚ್ಚು ಸಮಯ ವೇದಿಕೆಯಲ್ಲಿ ನಿಂತುಕೊಳ್ಳುವ ಮಧುಮಗಳಿಗೆ ಯಾವುದೇ ಕಿರಿಕಿರಿಯನ್ನೂ ಇದು ನೀಡುವುದಿಲ್ಲ.
ಫ್ರಂಟ್ ಬಂಪ್: ಇದು ಹಳೆಯ ವಿನ್ಯಾಸವಾಗಿದ್ದರೂ ಇಂದಿಗೂ ಜನಪ್ರಿಯ. ಫ್ರಂಟ್ ಬಂಪ್ ಮಾಡಿ ಕೂದಲನ್ನು ಫ್ರೀ ಬಿಡಬಹುದು ಅಥವಾ ಜುಟ್ಟನ್ನು ಹಾಕಿಕೊಳ್ಳಬಹುದು. ದುಂಡಾಕಾರದ ಮುಖದವರಿಗೆ ಈ ವಿನ್ಯಾಸ ಹೆಚ್ಚು ಸೂಕ್ತ.
ಪೋನಿ ಟೇಲ್: ಕೃಶವಾದ ಕೂದಲಿರುವವರು ಇತ್ತೀಚಿನ ದಿನಗಳಲ್ಲಿ ರಿಸೆಪ್ಷನ್‌ನಲ್ಲಿ ಗೌನ್ ತೊಟ್ಟಾಗ ಪೋನಿ ಟೇಲ್ ಹಾಕಿಕೊಳ್ಳುತ್ತಾರೆ. ಈ ವಿನ್ಯಾಸದಲ್ಲಿ ಕೂದಲು ದಪ್ಪವಾಗಿ, ಆಕರ್ಷಕವಾಗಿ ಕಾಣುತ್ತದೆ. ಹೇರ್ ಎಕ್ಸ್‌ಟೆನ್ಷನ್ ಹಾಗೂ ಏಕ್ಸಸರೀಸ್ ಬಳಸಿದರೆ ರಿಸೆಪ್ಷನ್ ಲುಕ್ ರೆಡಿ.
ಅಪ್–ಡು: ಎಲ್ಲ ಬಗೆಯ ಮುಖದ ಆಕಾರಕ್ಕೂ ಹೊಂದಿಕೆಯಾಗುವ ಇದು ಮದುವೆ ಆರತಕ್ಷತೆ ಹಾಗೂ ರಾತ್ರಿ ಪಾರ್ಟಿಗಳಿಗೆ ಹೆಚ್ಚು ಸೂಕ್ತ. ಗುಂಗುರು ಕೂದಲಿಗೆ ಹೊಂದಿಕೆಯಾಗುವ ಈ ವಿನ್ಯಾಸ ಪಾಶ್ಚಾತ್ಯ ನೋಟವನ್ನು ನೀಡುತ್ತದೆ.
ಸೈಡ್ ಬ್ರೈಡ್: ಗಿಡ್ಡದಾದ ಹಾಗೂ ಪದರಗಳುಳ್ಳ ಕೂದಲಿಗೆ ಈ ವಿನ್ಯಾಸ ಒಪ್ಪುತ್ತದೆ. ಮೆಸ್ಸಿ ಸೈಡ್ ಬ್ರೈಡ್ ವಿನ್ಯಾಸ ಮದುವೆಗಳಲ್ಲಿ ಟ್ರೆಂಡ್ ಆಗಿದೆ. ಹೃದಯಾಕಾರದ ಮುಖದ ಮದುಮಗಳಾದರೆ ಈ ಕೇಶ ವಿನ್ಯಾಸದಲ್ಲಿ ಮತ್ತಷ್ಟು ಮುದ್ದಾಗಿ ಕಾಣುತ್ತಾರೆ.
ಹಾಫ್ ಅಫ್ ಹಾಫ್ ಡೌನ್: ಗೌನ್ ತೊಟ್ಟಾಗ ಈ ಕೇಶ ವಿನ್ಯಾಸ ಮಾಡಿಕೊಳ್ಳುವುದು ಉತ್ತಮ. ಪಾಶ್ಚಾತ್ಯ ಹಾಗೂ ಆಧುನಿಕ ದಿರಿಸುಗಳಿಗೂ ಇದು ಸೂಕ್ತ.
ಕೂದಲಿಗೆ ಬಣ್ಣ: ಇತ್ತೀಚೆಗೆ ಮದುಮಗಳು ಹೆರಳಿಗೆ ರಂಗನ್ನು ಬಳಸಿ ಸಿಂಗರಿಸಿಕೊಳ್ಳುತ್ತಾರೆ. ಆದರೆ ಬಣ್ಣದ ಆಯ್ಕೆಯಲ್ಲಿ ಜಾಗರೂಕತೆ ಇರಬೇಕು ಎನ್ನವುದು ಕೇಶ ವಿನ್ಯಾಸಕರ ಸಲಹೆ. ಮೈಬಣ್ಣ ಹಾಗೂ ಚರ್ಮದ ಗುಣಧರ್ಮಕ್ಕೆ ಅನುಸಾರ ಹೆರಳಿಗೆ ಬಣ್ಣಹಾಕಿಕೊಳ್ಳಬೇಕು. ಬರ್ಗಂಡಿ ಬಣ್ಣವು ಎಲ್ಲ ಬಣ್ಣದ ಚರ್ಮದವರಿಗೆ ಹೊಂದಿಕೆಯಾಗತ್ತದೆ. ಬಂಗಾರ ಬಣ್ಣ, ಬೂದು ಬಣ್ಣ, ಚಾಕೊಲೇಟ್ ಬಣ್ಣಗಳು ಹೆಚ್ಚು ಜನಪ್ರಿಯ. ಸಾಗರ ನೀಲಿ, ತಿಳಿ ಹಸಿರು, ಕಿತ್ತಳೆ ಬಣ್ಣ ಅಪರೂಪವಾದರೂ ಇತ್ತೀಚೆಗೆ ಬಳಕೆಯಾಗುತ್ತಿವೆ.