ವಧುವಿನ ಅಂದಕ್ಕೆ ಬೇಕು ಸಿಂಧೂರ...
ದುಬಾರಿ ಬೆಲೆಯ ರೇಷ್ಮೆ ಸೀರೆ, ಎತ್ತಿ ಕಟ್ಟಿದ ತುರುಬಿಗೆ ಮಲ್ಲಿಗೆ ದಂಡೆ, ಕತ್ತಿಗೆ ಕುಂದನ್, ಮೀನಾಕ್ಷಿ ಆಭರಣ, ಕೈ ತುಂಬಾ ಗಾಜಿನ ಬಳೆ, ಮಧ್ಯೆ ಮುತ್ತಿನ ಬಳೆಗಳ ಸಿಂಗಾರ, ವಜ್ರದ ಮೂಗುತಿ, ಹರಳುಗಳಿಂದ ಕೂಡಿದ ಬೈತಲೆ ಬೊಟ್ಟು, ಅತ್ತಿಂದಿತ್ತ ಓಲಾಡುತ್ತಿದ್ದ ಜುಮುಕಿಯ ಒನಪು...
ಮದುಮಗಳ ಸಿಂಗಾರಕ್ಕೆ, ಅಂದ ಚಂದಕ್ಕೆ ಇನ್ನೇನು ಬೇಕು... ಆದರೂ ಮುಖದ ಸೌಂದರ್ಯ ಕಳೆಗುಂದಿತ್ತು. ಬ್ಯೂಟಿಷಿಯನ್ ಮಧುಮಗಳ ಮೇಕಪ್ ಪೂರ್ತಿ ಮುಗಿದ ಬಳಿಕ ಕಡೆಯದಾಗಿ ಹಣೆಗೆ ಸಿಂಧೂರ ಇಟ್ಟಳು. ಆಗ ಎಲ್ಲರ ಮುಖದಲ್ಲೂ ಹೊಳಪು. ‘ಇದುವರೆಗೂ ಕಾಣೆಯಾಗಿದ್ದ ಮುಖದ ಕಳೆ ಈಗ ಬಂದಿತು’ ಎಂದು ಅಲ್ಲೇ ಇದ್ದ ಅಜ್ಜಿಯೊಬ್ಬರು ಮುಗುಳ್ನಕ್ಕರು... ಸಿಂಧೂರದ ಮಹಿಮೆಯೇ ಅಂತದ್ದಲ್ಲವೇ...
ಕುಂಕುಮ, ಹಣೆಬೊಟ್ಟು, ಬಿಂದಿ, ಸ್ಟಿಕ್ಕರ್ ಹೀಗೆ ವಿವಿಧ ನಾಮಾವಳಿ ಅಂಟಿಸಿಕೊಂಡಿರುವ ಸಿಂಧೂರದ ‘ಪ್ರಭಾವಳಿ’ ಅಷ್ಟಿಷ್ಟಲ್ಲ. ಸಕಲ ವಸ್ತ್ರಾಭರಣಧಾರಿ ಹೆಣ್ಣುಮಗಳ ಮುಖದ ಕಳೆ ತುಂಬುವುದು ಪುಟ್ಟ ಕುಂಕುಮದಿಂದಲೇ. ಹಾಗೇ ನಿರಾಭರಣ ಸುಂದರಿಯ ಸೌಂದರ್ಯ ಹೆಚ್ಚಿಸಲೂ ಸಿಂಧೂರದ ನಂಟು ಬೇಕು. ಮದುಮಗಳು ಸೀರೆ, ಘಾಗ್ರಾ ಚೋಲಿ, ಲೆಹೆಂಗಾ ಹೀಗೆ ಅದ್ದೂರಿತನದ ಉಡುಗೆಗೆ ಚಿಕ್ಕ ಬಿಂದಿ ಇಟ್ಟರೆ ಮುಖದ ಅಂದ ಇಮ್ಮಡಿಗೊಳ್ಳುತ್ತದೆ. ಸಾಂಪ್ರದಾಯಿಕ, ಆಧುನಿಕ, ಪಾಶ್ಚಿಮಾತ್ಯ ಯಾವುದೇ ಉಡುಪಿರಲಿ ಹಣೆಗೆ ಸಿಂಧೂರದ ನಂಟು ಬೇಕೇ ಬೇಕು. ಈಗಂತೂ ಮುಖದ ಗಾತ್ರ, ಆಕಾರ, ಉಡುಪು, ವಿನ್ಯಾಸಗಳಿಗೆ ತಕ್ಕಂತೆ ವೈವಿಧ್ಯಮಯ ಬಿಂದಿಗಳು ಲಭ್ಯ. ಚಿಕ್ಕ ಬಿಂದುವಿನಿಂದ ಹಿಡಿದು ದೊಡ್ಡದಾದ ಸ್ಟಿಕ್ಕರ್‌ಗಳು ಇವೆ. ನಮಗ್ಯಾವುದಿಷ್ಟವೋ, ಮುಖಕ್ಕೆ ಯಾವುದು ಹೊಂದಿಕೆಯಾಗುತ್ತದೋ ಅದನ್ನು ಧರಿಸಿ ಬೀಗಬಹುದು.
ಹೀಗಿರಲಿ ಬಿಂದಿ:
ಮದುಮಗಳ ಅಂದ ಹೆಚ್ಚಿಸಲು ಈಗ ವೈವಿಧ್ಯಮಯ ಬಿಂದಿಗಳು ಲಭ್ಯ. ಹರಳು, ವಜ್ರದ ಸ್ಟಿಕ್ಕರ್‌ಗಳು ಮುಖಕ್ಕೆ ಅದ್ದೂರಿತನ ನೀಡುತ್ತವೆ. ಉದ್ದ ಮುಖ ಇರುವವರು ಚಿಕ್ಕ ಸ್ಟೋನ್ ಸ್ಟಿಕ್ಕರ್ ಇಟ್ಟರೆ ಅಂದ ಇಮ್ಮಡಿಗೊಳ್ಳುತ್ತದೆ. ದುಂಡು ಮುಖ ಇರುವವರಿಗೆ ಮೊಟ್ಟೆಯಾಕಾರದ ಅಥವಾ ದುಂಡನೆ ಸಿಕ್ಕರ್ ಹೆಚ್ಚು ಹೊಂದುತ್ತದೆ. ಹೃದಯಾಕಾರದ ಮುಖದವರಿಗೆ ಚಿಕ್ಕ ಬಿಂದಿ, ಉದ್ದ ಅಥವಾ ನಾಮದಂತಹ ಬೊಟ್ಟು ಹಾಗೂ ಡಿಸೈನರ್ ಸ್ಟಿಕ್ಕರ್‌ಗಳು ಹೆಚ್ಚು ಹೊಂದುತ್ತವೆ.
ಮೊಟ್ಟೆಯಾಕಾರದ ಮುಖ ಉಳ್ಳವರಿಗೆ ದೊಡ್ಡ ಬೊಟ್ಟು ಹೆಚ್ಚು ಚೆನ್ನ. ಶ್ಯಾಮಲ ವರ್ಣದವರು ಗಾಢ ಬಣ್ಣದ, ಮರೂನ್, ಬಿಳಿ ಬಣ್ಣದ ಹಾಗೂ ಶೈನಿ ಸ್ಟಿಕ್ಕರ್, ರೇಡಿಯಂ ಸ್ಟಿಕ್ಕರ್ ಇಟ್ಟರೆ ಚೆನ್ನ. ಬೆಳ್ಳಗಿರುವವರು ಕಲರ್‌ಫುಲ್ ಸ್ಟಿಕ್ಕರ್, ಆಯಾ ಉಡುಪಿಗೆ ತಕ್ಕಂತೆ ಮ್ಯಾಚಿಂಗ್ ಬಿಂದಿಗಳನ್ನು ಇಡಬಹುದು. ಕೆಂಪು ಬಣ್ಣದ ಬಿಂದಿಗೆ ಬಿಳಿ ಬಣ್ಣದ ಕಾಂಬಿನೇಷನ್ ಹೆಚ್ಚು ಒಪ್ಪುತ್ತದೆ. ಮಧ್ಯಕ್ಕೆ ಕಡುಗೆಂಪು ಸ್ಟಿಕ್ಕರ್ ಹಾಗೂ ಸುತ್ತಲೂ ಬಿಳಿ ಬಣ್ಣದ ಚುಕ್ಕೆಗಳನ್ನಿಟ್ಟರೆ ಮುಖದ ಅಂದ ಇಮ್ಮಡಿಗೊಳ್ಳುತ್ತದೆ.
ಕೆಂಪಷ್ಟೇ ಕುಂಕುಮವಲ್ಲ:
ಕುಂಕುಮವೆಂದ ಕೂಡಲೇ ಥಟ್ಟನೆ ಸ್ಮೃತಿಪಟಲದಲ್ಲಿ ಸುಳಿಯುವ ಬಣ್ಣ ಕೆಂಪು. ಫ್ಯಾಷನ್ ಜಗತ್ತಿನಲ್ಲಿ ಕೆಂಪಷ್ಟೇ ಈಗ ಕುಂಕುಮವಾಗಿ ಉಳಿದಿಲ್ಲ. ನಾನಾ ಬಣ್ಣ ಪೂಸಿಕೊಂಡು, ಹೊಳಪು ಹೆಚ್ಚಿಸಿಕೊಂಡು ಲಲನೆಯರ ಹಣೆಯ ಮೇಲೆ ನಲಿದಾಡುತ್ತಿದೆ ಸಿಂಧೂರ. ಬೆರಳಿನಷ್ಟು ಅಗಲದ ಬೊಟ್ಟಲ್ಲದಿದ್ದರೂ ಸೂಜಿಯಷ್ಟು ತೆಳ್ಳನೆಯ ಐಲೈನರ್ ಎಳೆದರೂ ಸಾಕು ಮುಖದ ಅಂದವೇ ಬದಲಾಗುತ್ತದೆ.
ಈಗಿನ ಬಹುತೇಕ ಯುವತಿಯರು ಚಿಕ್ಕದಾದ, ತೆಳ್ಳನೆಯ, ಉದ್ದನೆ ಬೊಟ್ಟನ್ನು ಅಪ್ಪಿಕೊಳ್ಳುತ್ತಾರೆ. ಕಚೇರಿಗೆ ಹೊಗುವ ವನಿತೆಯರು, ಕಾಲೇಜಿಗೆ ಹೋಗುವ ಯುವತಿಯರಿಗೆ ಐ–ಲೈನರ್‌ನ ನಂಟೇ ಹೆಚ್ಚು. ಉದ್ದನೆ ಗೆರೆ ಎಳೆದುಕೊಂಡು ಕೆಳಭಾಗದಲ್ಲಿ ಸಣ್ಣ ಬಿಳಿ ಚುಕ್ಕೆ ಇಟ್ಟುಕೊಂಡರೆ ಬೊಟ್ಟಿನ ಸೌಂದರ್ಯವೂ ಇಮ್ಮಡಿಯಾಗುತ್ತದೆ. ಇದೇ ಮಾದರಿಯ ಸ್ಟಿಕ್ಕರ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಕಡುಗೆಂಪು, ಸುತ್ತಲೂ ಕಪ್ಪು ಬಣ್ಣದ ಗೆರೆ ಇರುವ ಉದ್ದನೆ, ದುಂಡನೆ, ಮೊಟ್ಟೆಯಾಕಾರದ ಸ್ಟಿಕ್ಕರ್‌ಗಳು ಮಹಿಳೆಯರನ್ನು ಆಕರ್ಷಿಸಿವೆ.
ಹರಳು, ಕುಂದನ್ ನಂಟು:
‘ಹಿಂದೆ ಒಣ ಕುಂಕುಮವನ್ನು ಹಣೆಗೆ ಇಟ್ಟುಕೊಳ್ಳಲಾಗುತ್ತಿತ್ತು. ಇದು ಮುತ್ತೈದೆಯ ಸೂಚಕವಾಗಿಯೂ ಬಳಸಲಾಗುತ್ತಿತ್ತು. ಈ ಜಾಗದಲ್ಲಿ ಈಗ ವೈವಿಧ್ಯಮಯ ಸ್ಟಿಕ್ಕರ್‌ಗಳು ರೂಪು ತಳೆದಿವೆ. ಫ್ಯಾಷನ್ ಜಗತ್ತಿನ ಓಗಕ್ಕೆ ತಕ್ಕಂತೆ ನಿತ್ಯ ಹೊಸತನಕ್ಕೆ ತೆರೆದುಕೊಳ್ಳುತ್ತ ವನಿತೆಯರ ಅಂದ ಹೆಚ್ಚಿಸುತ್ತಿರುವ ಬಿಂದಿಗಳು ತಮ್ಮ ಪ್ರಭಾವಳಿಯನ್ನೂ ಇಮ್ಮಡಿಗೊಳಿಸಿಕೊಂಡಿವೆ. ಕೆಂಪು, ಕಪ್ಪು, ನೀಲಿ, ಬಿಳಿ, ಹಳದಿ ಹೀಗೆ ವಿವಿಧ ಬಣ್ಣದ ಸ್ಟಿಕ್ಕರ್‌ಗಳು ಫ್ಯಾಷನ್ ಪ್ರಿಯರ ಬರಸೆಳೆದಿವೆ. ಡ್ರೆಸ್ ಮ್ಯಾಚಿಂಗ್ ಸ್ಟಿಕ್ಕರ್ ಇಟ್ಟುಕೊಳ್ಳುವುದು ಈಗಿನ ಟ್ರೆಂಡ್. ವೆಲ್ವೆಟ್, ರೇಡಿಯಂ, ತ್ರೀಡಿ (ಒಂದೇ ಸ್ಟಿಕ್ಕರ್‌ನಲ್ಲಿ ಮೂರು ಬಣ್ಣ), ಗ್ಲಾಸೀ ಸ್ಟಿಕ್ಕರ್ ಫ್ಯಾಷನ್ ಪ್ರಿಯರ ಮನಕದ್ದಿವೆ. ಇವು ಮದುಮಗಳ ಅಂದಕ್ಕೆ ಇಂಬುಕೊಡುತ್ತವೆ’ ಎನ್ನುವುದು ಹಾಸನದ ಬ್ಯೂಟೀಷಿಯನ್ ಲತಾ ರವೀಶ್ ಅವರ ಮಾತು.
ಸ್ಟಿಕ್ಕರ್‌ಗಳಿಗೆ ಹರಳು, ಮುತ್ತು, ಕುಂದನ್‌ಗಳ ನಂಟು ಢಾಳವಾಗೇ ಇದೆ. ಇವು ಸ್ಟಿಕ್ಕರ್‌ಗಳಿಗೆ ಅದ್ದೂರಿತನವನ್ನು ತಂದುಕೊಡುತ್ತವೆ. ವಿವಾಹ ಸಮಾರಂಭ, ಹಬ್ಬ, ಕಿಟ್ಟಿಪಾರ್ಟಿ, ಕಚೇರಿಯಲ್ಲಿ ಸಣ್ಣ ಸಮಾರಂಭ, ನಿಶ್ಚಿತಾರ್ಥ, ನಾಮಕರಣ ಹೀಗೆ ವಿವಿಧ ಸಮಾರಂಭಗಳಿಗಳಿಗೆ ಅದ್ದೂರಿ ಸ್ಟಿಕ್ಕರ್‌ಗಳ ನಂಟು ಬೆಳೆಸುತ್ತಾರೆ ಫ್ಯಾಷನ್ ಪ್ರಿಯರು. ಇವು ಮುಖಕ್ಕೆ ದೇಸೀತನದ ಲುಕ್ ನೀಡುವ ಜತೆಗೆ, ಅಂದವನ್ನೂ ಇಮ್ಮಡಿಗೊಳಿಸುತ್ತವೆ. ಆಭರಣ, ಉಡುಪಿಗೆ ಹೊಂದುವಂತ ಸ್ಟಿಕ್ಕರ್ ಹಚ್ಚಿಕೊಳ್ಳುವುದೂ ಈಗಿನ ಟ್ರೆಂಡ್.
ಹಣೆಯ ಮಧ್ಯಕ್ಕೆ ಬಂತು ಕುಂಕುಮ:
ಹಿಂದೂ ಸಂಪ್ರದಾಯದಂತೆ ಎರಡು ಹುಬ್ಬುಗಳ ನಡುವೆ ಕುಂಕುಮ ಇಡುವುದು ಪದ್ಧತಿ. ಆದರೆ ಈಗದು ಹಣೆಯ ಮಧ್ಯ ಭಾಗಕ್ಕೆ ಬಂದು ಕುಳಿತಿದೆ. ಕೆಲವರು ನಡುಹಣೆಯಲ್ಲಿ ಕುಂಕುಮ ಅಥವಾ ಸ್ಟಿಕ್ಕರ್ ಇರಿಸಿಕೊಳ್ಳುತ್ತಾರೆ. ಅದು ಹೊಸ ಟ್ರೆಂಡ್ ಸೃಷ್ಟಿಸಿದೆ. ಇನ್ನು ಕೆಲವರು ಹುಬ್ಬುಗಳ ನಡುವೆ ಒಂದು ಬೊಟ್ಟು, ನಡುಹಣೆಯಲ್ಲಿ ಒಣ ಕುಂಕುಂಮ ಹಚ್ಚಿಕೊಳ್ಳುತ್ತಾರೆ. ಅವರಿಷ್ಟಕ್ಕೆ, ಅವರವರ ಭಾವಕ್ಕೆ ತಕ್ಕಂತೆ ಕುಂಕುಮ ಹಣೆಯನ್ನು ಅಲಂಕರಿಸುತ್ತದೆ. ಇನ್ನು ಕೆಲ ಸಮುದಾಯಗಳಲ್ಲಿ ಬೈತಲೆ ಮಧ್ಯೆ ಕುಂಕುಮ ಇಟ್ಟುಕೊಳ್ಳುವ ಪದ್ಧತಿ ರೂಢಿಗತವಾಗಿದೆ. ಇದು ಸಹ ಅನೇಕ ಮಹಿಳೆಯರನ್ನು ಆಕರ್ಷಿಸಿದೆ. ಕೆಲವರು ಹುಬ್ಬುಗಳ ನಡುವೆ ಅದ್ದೂರಿ ಸ್ಟಿಕ್ಕರ್ ಇಟ್ಟು ಬೈತಲೆ ಕೆಳಗೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಅದೂ ಈಗ ಟ್ರೆಂಡ್ ಆಗಿದೆ.
ಭಾರತೀಯ ಹಿಂದೂ ಸಂಸ್ಕೃತಿಯ ಭಾಗವೇ ಆಗಿರುವ ಕುಂಕುಮವನ್ನು ಅನೇಕ ವಿದೇಶಿಗರೂ ಇಷ್ಟಪಟ್ಟು ಅಪ್ಪಿಕೊಂಡಿದ್ದಾರೆ. ಭಾರತದ ಪ್ರವಾಸ ಕೈಗೊಂಡ ಅನೇಕ ಮಹಿಳೆಯರು ಹಣೆಗೆ ಕುಂಕುಮ ಇಟ್ಟುಕೊಂಡು ಬೀಗಿದ್ದಾರೆ. ಪಾಶ್ಚಿಮಾತ್ಯ ಗಾಯಕಿಯರು, ನಟಿಯರು, ಗಣ್ಯರ ಪತ್ನಿಯರು ಕುಂಕುಮ ಇಟ್ಟು ಪುಳಕಗೊಂಡಿದ್ದಾರೆ.