ಕರ್ನಾಟಕದ ಕನಸಿನ ವಿವಾಹ ಸ್ಥಳಗಳು

ಕರ್ನಾಟಕದ ಕನಸಿನ ವಿವಾಹ ಸ್ಥಳಗಳು

Published on

ವಿವಾಹವೆಂಬುದು ಮೊದಲೆಲ್ಲ ಮನೆಯ ಎದುರು ಹಾಕಿದ ಛಪ್ಪರದಲ್ಲಿ, ಬಂಧು ಬಾಂಧವರು ಸಾಂಪ್ರದಾಯಿಕವಾಗಿ ಸಿದ್ಧಪಡಿಸಿದ ಮಂಟಪದಲ್ಲಿ ನಡೆಯುತ್ತಿತ್ತು. ಕುಟುಂಬ ಸಣ್ಣದಾದಂತೆಲ್ಲ, ಮನೆಯೂ ಸಣ್ಣಗಾಗುತ್ತ ಸಾಗಿತು, ಜೊತೆಗೆ ಮನೆಯ ಮುಂದಿನ ಅಂಗಳವೂ. ಹೀಗಾಗಿ ಮದುವೆಗಳನ್ನು ಛತ್ರಗಳಲ್ಲಿ ನಡೆಸುವುದು ಸಾಮಾನ್ಯವಾಯಿತು. ಈಚಿನ ದಿನಗಳಲ್ಲಂತೂ ಡೆಸ್ಟಿನೇಷನ್ ವೆಡ್ಡಿಂಗ್ ಎಂಬ ಪರಿಕಲ್ಪನೆ ಹೆಚ್ಚು ಜನಪ್ರಿಯವಾಗುತ್ತಿದೆ.

ಮದುವೆ ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಒಂದು ಅನುಭವ. ಹೀಗಾಗಿ ಊರವರನ್ನೆಲ್ಲಾ ಕರೆದು ಮದುವೆ ಮಾಡಿಕೊಳ್ಳುವ ಬದಲು ಆಪ್ತ ಬಂಧು ಬಾಂಧವರು- ಜೀವದ ಸ್ನೇಹಿತ ಮಧ್ಯೆ ಆಹ್ಲಾದಕರ ಸ್ಥಳಗಳಲ್ಲಿ ಮದುವೆ ಮಾಡಿಕೊಳ್ಳುವತ್ತ ಯುವಜನತೆ ಒಲವು ತೋರುತ್ತಿದ್ದಾರೆ. ಇದೇ ಕಾರಣದಿಂದ ಡೆಸ್ಟಿನೇಷನ್ ಮದುವೆಗಳು ಯುವಜನರಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ.

ಸುಂದರ ಪ್ರವಾಸಿ ಸ್ಥಳಗಳಲ್ಲಿ, ಪ್ರಕೃತಿ ಸೌಂದರ್ಯ ಅಥವಾ ಐತಿಹಾಸಿಕ ಹಿನ್ನೆಲೆಯ ಸ್ಥಳಗಳಲ್ಲಿ ನಡೆಯುವ ಮದುವೆಗಳಿಗೆ ವಿಶೇಷ ಆಕರ್ಷಣೆ ಇದೆ. ಕರ್ನಾಟಕದ ಹತ್ತು ಹಲವು ಸ್ಥಳಗಳು ನೈಸರ್ಗಿಕ ಸೌಂದರ್ಯ, ಐತಿಹಾಸಿಕ ಪರಂಪರೆ, ಆಧುನಿಕ ಸೌಲಭ್ಯಗಳು ಹಾಗೂ ಆತಿಥ್ಯ ಸಂಸ್ಕೃತಿಯಿಂದ ಕನಸಿನ ವಿವಾಹ ಸ್ಥಳಗಳಾಗಿ ಹೊರ ಹೊಮ್ಮಿವೆ.

ರಾಜಧಾನಿ ಬೆಂಗಳೂರು....

ಕರ್ನಾಟಕದ ರಾಜಧಾನಿ ಬೆಂಗಳೂರು ಐಷಾರಾಮಿ ವಿವಾಹಗಳಿಗೆ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿರುವ ಫೈವ್ ಸ್ಟಾರ್ - ಸೆವೆನ್ಸ್ಟಾ ರ್ ಹೋಟೆಲ್‌ಗಳು, ಸುಂದರ ರೆಸಾರ್ಟ್‍ಗಳು, ತರಹೇವಾರಿ ಅಡುಗೆಯ ಆಯ್ಕೆ ಅವಕಾಶ ಹಾಗೂ ಆಧುನಿಕ ಸೌಲಭ್ಯಗಳು ಇದನ್ನು ಅತ್ಯಂತ ಜನಪ್ರಿಯ ಮದುವೆ ತಾಣವನ್ನಾಗಿಸಿದೆ. ಪ್ಯಾಲೇಸ್ ಗ್ರೌಂಡ್ಸ್, ಗಾಲ್ಫ್ ಕೋರ್ಸ್‍ಗಳಂತೂ ವೈಭವೋಪೇತ ಮದುವೆಗಳ ನಂ.1 ಸ್ಥಳವಾಗಿ ಹೊರಹೊಮ್ಮಿದೆ. ನಗರ ಜೀವನದ ಸೌಕರ್ಯಗಳ ಜೊತೆಗೆ ಹಸಿರು ಪರಿಸರವು ಮದುವೆಗೆ ವಿಶಿಷ್ಟ ಮೆರುಗು ನೀಡುತ್ತದೆ.

ವಿದೇಶಿ ಶೈಲಿಯ ವಿವಾಹವನ್ನು ಬಯಸುವವರಿಗೂ ಬೆಂಗಳೂರು ಸೂಕ್ತ ಆಯ್ಕೆ.

ಸಾಂಸ್ಕೃತಿಕ ರಾಜಧಾನಿ ಮೈಸೂರು....

ಭಾರತದ ಸಾಂಸ್ಕೃತಿಕ ರಾಜಧಾನಿಗಳಲ್ಲಿ ಒಂದಾದ ಮೈಸೂರು, ತನ್ನ ವೈಭವ, ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯದಿಂದ ವಿವಾಹಗಳಿಗೆ ಅತ್ಯುತ್ತಮ ಡೆಸ್ಟಿನೇಷನ್ ಆಗಿ ಹೊರಹೊಮ್ಮುತ್ತಿದೆ. ಮೈಸೂರು ಎಂದರೆ ಮೊದಲು ನೆನಪಿಗೆ ಬರುವುದೇ ಮೈಸೂರು ಅರಮನೆಯ ವಾಸ್ತುಶಿಲ್ಪ, ಬೆಳಕಿನ ಅಲಂಕಾರ ಮತ್ತು ಐತಿಹಾಸಿಕ ಮಹತ್ವ. ಅರಮನೆ ಶೈಲಿಯ ಮಂಟಪಗಳು, ಪಾರಂಪರಿಕ ಸಂಗೀತ, ವೀಣೆ ಮತ್ತು ಶಾಸ್ತ್ರೀಯ ನೃತ್ಯಗಳೊಂದಿಗೆ ನಡೆಯುವ ವಿವಾಹ ಸಮಾರಂಭಗಳು ಮೈಸೂರಿನ ವೈಶಿಷ್ಟ್ಯ.

ಮೈಸೂರು ನಗರವು ಗದ್ದಲದಿಂದ ದೂರವಿದ್ದು, ಹಸಿರು ತೋಟಗಳು, ಸರೋವರಗಳು ಮತ್ತು ಬೆಟ್ಟಗಳಿಂದ ಆವೃತ್ತವಾಗಿದೆ. ಕುಕ್ಕರಹಳ್ಳಿ ಕೆರೆ, ಕರಂಜಿ ಕೆರೆ, ಚಾಮುಂಡಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳು ಔಟ್‌ಡೋರ್ ವಿವಾಹಗಳು ಹಾಗೂ ಫೋಟೋಗ್ರಫಿಗೆ ಅತ್ಯುತ್ತಮ ಹಿನ್ನೆಲೆಯನ್ನು ಒದಗಿಸುತ್ತವೆ.

ಮೈಸೂರಿನಲ್ಲಿ ಐಷಾರಾಮಿ ಹೋಟೆಲ್‌ಗಳು, ರೆಸಾರ್ಟ್ಗಳು ಮತ್ತು ಕನ್ವೆನ್ಶನ್ ಹಾಲ್‌ಗಳು ಲಭ್ಯವಿದ್ದು, ವಿವಾಹಕ್ಕೆ ಬೇಕಾದ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒದಗಿಸುತ್ತವೆ. ಡೆಸ್ಟಿನೇಷನ್ ವೆಡ್ಡಿಂಗ್‌ಗಳಿಗೆ ಸೂಕ್ತವಾದ ಪ್ಯಾಕೇಜ್‌ಗಳು, ವೃತ್ತಿಪರ ಈವೆಂಟ್ ಪ್ಲ್ಯಾನರ್‌ಗಳು ಮತ್ತು ಅನುಭವಿ ಸೇವಾ ಸಿಬ್ಬಂದಿ ಮೈಸೂರಿನ ಮತ್ತೊಂದು ಆಕರ್ಷಣೆ.

ಕೊಡಗಿನ ಕಾವೇರಿ....

ಪಶ್ಚಿಮ ಘಟ್ಟಗಳ ಹಸಿರು ಮಡಿಲಲ್ಲಿ ನೆಲೆಸಿರುವ ಕೊಡಗು (ಕೂರ್ಗ್), ತನ್ನ ಮನಮೋಹಕ ಪ್ರಕೃತಿ, ಮಂಜಿನ ಬೆಟ್ಟಗಳು ಮತ್ತು ಶಾಂತ ವಾತಾವರಣದಿಂದ ಡೆಸ್ಟಿನೇಷನ್ ವೆಡ್ಡಿಂಗ್‌ಗಳಿಗೆ ಅತ್ಯಂತ ಜನಪ್ರಿಯ ಸ್ಥಳವಾಗಿ ಬೆಳೆಯುತ್ತಿದೆ. ನಗರಗಳ ಗದ್ದಲದಿಂದ ದೂರವಾಗಿ, ಪ್ರಕೃತಿಯ ಸಾನ್ನಿಧ್ಯದಲ್ಲಿ ವಿವಾಹವನ್ನು ಆಚರಿಸಲು ಬಯಸುವ ದಂಪತಿಗಳಿಗೆ ಕೊಡಗು ಪರಿಪೂರ್ಣ ಆಯ್ಕೆ.

ಕೊಡಗಿನ ಪ್ರಮುಖ ಆಕರ್ಷಣೆ ಎಂದರೆ ಅದರ ಕಾಫಿ ತೋಟಗಳು, ದಟ್ಟ ಅರಣ್ಯಗಳು ಮತ್ತು ಹರಿಯುವ ನದಿಗಳು. ಕಾಫಿ ತೋಟಗಳ ನಡುವೆ ಅಥವಾ ಬೆಟ್ಟಗಳ ಮೇಲಿರುವ ರೆಸಾರ್ಟ್ಗಳಲ್ಲಿ ನಡೆಯುವ ವಿವಾಹ ಸಮಾರಂಭಗಳು ಕನಸಿನ ಲೋಕದಂತಿರುತ್ತವೆ. ಮಂಜಿನ ಮುಸುಕು, ತಂಪಾದ ಹವಾಮಾನ ಮತ್ತು ನೈಸರ್ಗಿಕ ಬೆಳಕು ವಿವಾಹ ಛಾಯಾಗ್ರಹಣಕ್ಕೆ ಅದ್ಭುತ ಹಿನ್ನೆಲೆಯನ್ನು ನೀಡುತ್ತದೆ.

ಕೊಡಗಿನಲ್ಲಿ ಅನೇಕ ಐಷಾರಾಮಿ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳು ಲಭ್ಯವಿದ್ದು, ಡೆಸ್ಟಿನೇಷನ್ ವೆಡ್ಡಿಂಗ್‌ಗಳಿಗೆ ವಿಶೇಷ ಪ್ಯಾಕೇಜ್‌ಗಳನ್ನು ಒದಗಿಸುತ್ತವೆ. ಓಪನ್ ಲಾನ್ ಮಂಟಪಗಳು, ಔಟ್‌ಡೋರ್ ಡೆಕೋರೇಷನ್, ವೃತ್ತಿಪರ ವೆಡ್ಡಿಂಗ್ ಪ್ಲ್ಯಾನರ್‌ಗಳು ಮತ್ತು ಆಧುನಿಕ ಸೌಲಭ್ಯಗಳು ಇಲ್ಲಿ ಸುಲಭವಾಗಿ ದೊರೆಯುತ್ತವೆ.

ಕೊಡವ ಪಾರಂಪರಿಕ ಉಡುಗೆಗಳು, ಜಾನಪದ ಸಂಗೀತ, ಸಂಸ್ಕೃತಿ ಮತ್ತು ಸ್ಥಳೀಯ ಆಚರಣೆಗಳನ್ನು ವಿವಾಹದಲ್ಲಿ ಸೇರಿಸುವುದರಿಂದ ಸಮಾರಂಭಕ್ಕೆ ವಿಭಿನ್ನ ಕಳೆ ಬರುತ್ತದೆ. ಜತೆಗೆ ಕೊಡಗಿನ ವಿಶಿಷ್ಟ ವ್ಯಂಜನಗಳನ್ನಂತೂ ಮರೆಯುವಂತಿಲ್ಲ.

ಕಡಲ ತೀರದ ಸೊಬಗು....

ಉಡುಪಿ ಮತ್ತು ಮಂಗಳೂರು ಕರಾವಳಿ ಪ್ರದೇಶಗಳು ಕಡಲ ತೀರದ ವಿವಾಹಕ್ಕೆ ಜನಪ್ರಿಯವಾಗಿವೆ. ಈಚಿನ ದಿನಗಳಲ್ಲಿ ಉತ್ತರ ಕನ್ನಡದ ಗೋಕರ್ಣ, ಹೊನ್ನಾವರ, ಮುರ್ಡೇಶ್ವರದ ಪರಿಸದರ ಸುತ್ತಮುತ್ತಲಿನ ಬೀಚ್ ರೆಸಾರ್ಟ್‌ಗಳು ಬೀಚ್ ವೆಡ್ಡಿಂಗ್‌ನ ಡೆಸ್ಟಿನೇಶನ್ ಆಗಿ ಹೊರಹೊಮ್ಮಿವೆ. ಸಮುದ್ರದ ಅಲೆಗಳ ಸದ್ದು, ಸೂರ್ಯಾಸ್ತದ ಸೌಂದರ್ಯ ಮತ್ತು ತೆಂಗಿನ ಮರಗಳ ನೋಟ ಮದುವೆಗೆ ರೋಮ್ಯಾಂಟಿಕ್ ಸ್ಪರ್ಶ ನೀಡುತ್ತದೆ. ಇಲ್ಲಿ ಲಭ್ಯವಿರುವ ಕರಾವಳಿ ಆಹಾರ ಅತಿಥಿಗಳಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ.

ಐತಿಹಾಸಿಕ ಹಂಪಿ...

ಐತಿಹಾಸಿಕ ಮಹತ್ವ ಹೊಂದಿರುವ ಹಂಪಿ ಮತ್ತೊಂದು ವಿಭಿನ್ನ ವಿವಾಹ ಡೆಸ್ಟಿನೇಶನ್ ಆಗಿದೆ. ಪುರಾತನ ದೇವಸ್ಥಾನಗಳು, ಶಿಲ್ಪಕಲೆ ಮತ್ತು ತುಂಗಭದ್ರಾ ನದಿಯ ಸೌಂದರ್ಯ ಮದುವೆಗೆ ಐತಿಹಾಸಿಕ ಛಾಯೆಯನ್ನು ನೀಡುತ್ತದೆ. ಜತೆಗೆ ಗಂಗಾವತಿ- ಕೊಪ್ಪಳಗಳಲ್ಲಿರುವ ವಿಶ್ವದರ್ಜೆಯ ರೆಸಾರ್ಟ್‌ಗಳು ಡೆಸ್ಟಿನೇಶನ್ ಮದುವೆಯ ಅಗ್ರ ಆಯ್ಕೆಯಾಗುತ್ತಿದೆ. ಪರಂಪರೆ ಮತ್ತು ಸಂಸ್ಕೃತಿಯನ್ನು ಮೆಚ್ಚುವ ದಂಪತಿಗಳಿಗೆ ಹಂಪಿ ಅತ್ಯುತ್ತಮ ಆಯ್ಕೆ.

ಇದರ ಜೊತೆಗೆ ಚಿಕ್ಕಮಗಳೂರು, ಶಿವಮೊಗ್ಗ, ಬಂಡೀಪುರ ಮೊದಲಾದ ಸ್ಥಳಗಳು ಕೂಡ ನೈಸರ್ಗಿಕ ಸೌಂದರ್ಯದಿಂದಾಗಿ ಮದುವಣಿಗರನ್ನು ಆಕರ್ಷಿಸುತ್ತಿದೆ. ಇಲ್ಲಿನ ಪರ್ವತಗಳು, ಜಲಪಾತಗಳು ಮತ್ತು ಅರಣ್ಯ ಪ್ರದೇಶಗಳು ಮದುವೆಯನ್ನು ಇನ್ನಷ್ಟು ವಿಶಿಷ್ಟವಾಗಿಸುತ್ತಿವೆ.

ಅರಮನೆಯ ವೈಭವದಿಂದ ಹಿಡಿದು ಕಡಲ ತೀರದ ಸೌಂದರ್ಯವರೆಗೆ, ಪರ್ವತ ಶ್ರೇಣಿಗಳಿಂದ ಆಧುನಿಕ ನಗರಗಳ ಐಷಾರಾಮದವರೆಗೆ ಪ್ರತಿ ಕನಸಿನ ಮದುವೆಗೆ ಕರ್ನಾಟಕದಲ್ಲಿ ಒಂದು ಪರಿಪೂರ್ಣ ವಿವಾಹ ಸ್ಥಳ ದೊರೆಯುವುದು ಗ್ಯಾರಂಟಿ. 

Maduve Habba
www.prajavani.net