ಸೀರೆಗೆ ಮೆರುಗು ನೀಡುವ ಕುಚ್ಚು- ವಧುವಿನ ಅಲಂಕಾರ ವಿಭಾಗ
Author - ಕಲಾವತಿ ಬೈಚಬಾಳ
ಸೊಬಗು, ಸಂಪ್ರದಾಯ ಮತ್ತು ಕಾಲಾತೀತ ಸೌಂದರ್ಯದ ಸಂಕೇತವಾದ ಸೀರೆಯು ಹಲವು ವರ್ಷಗಳಿಂದಲೂ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಾಕಾರಗೊಳಿಸುತ್ತಲೇ ಬಂದಿದೆ.
ಸೀರೆ, ರವಿಕೆಯನ್ನಷ್ಟೇ ಸುಂದರಗೊಳಿಸಿ ಉಟ್ಟರೆ ಸಾಕೇ, ಸೀರೆಯ ಸೆರಗಿನ ಅಂದಕ್ಕೂ ಆದ್ಯತೆ ನೀಡುವುದು ಬೇಡವೇ ಎಂಬ ಮನೋಭಿಲಾಷೆ ಬಹಳಷ್ಟು ಹೆಣ್ಣುಮಕ್ಕಳದ್ದು.
ಸೀರೆಯ ಸೆರಗಿಗೆ ಕುಚ್ಚು/ ಗೊಂಡೆ ಕಟ್ಟಿ ವಿನ್ಯಾಸಗೊಳಿಸುವುದು ಬಹಳ ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಮದುವೆ, ಶುಭ ಸಮಾರಂಭಗಳಲ್ಲಿ ಮಹಿಳೆಯರು ಹೆಚ್ಚಾಗಿ ಸೀರೆಯನ್ನೇ ನೆಚ್ಚಿನ ಉಡುಗೆಯಾಗಿ ಆಯ್ದುಕೊಳ್ಳುವುದರಿಂದ ಸೀರೆಯ ಕುಚ್ಚು ಸಹ ತನ್ನ ಪ್ರಾಧಾನ್ಯತೆಯನ್ನು ಹೆಚ್ಚಿಸಿಕೊಂಡು ಬಂದಿದೆ.
ವಧು ಅಷ್ಟೇ ಅಲ್ಲದೇ ಮದುವೆ ಮನೆಯ ಹೆಂಗಳೆಯರೆಲ್ಲ ವಿಭಿನ್ನ ರೀತಿಯ ಸೀರೆ ಕುಚ್ಚು ಮಾಡಿಸಿಕೊಂಡು, ಸೀರೆ ಧರಿಸಿ ಗಮನಸೆಳೆಯಬಹುದು. ಕಾಟನ್ ಸೀರೆಯಿಂದ ಹಿಡಿದು ದುಬಾರಿ ರೇಷ್ಮೆ ಸೀರೆಯ ತನಕ ಸೆರಗಿಗೆ ಹಾಕುವ ಕುಚ್ಚು ಹಲವು ರೀತಿಯಲ್ಲಿ ವಿನ್ಯಾಸಗೊಳ್ಳುತ್ತ ಬಂದಿದೆ. ವಧುವಿನ ಸೀರೆ ಕುಚ್ಚು ವಿನ್ಯಾಸಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ ಮತ್ತು ಸರಳವಾದ ಟಸೆಲ್ (ಕುಚ್ಚು) ಗಳಿಂದ ಹಿಡಿದು ಮಣಿ, ಮುತ್ತು, ಕನ್ನಡಿಗಳು, ನೇತಾಡುವ ಅಲಂಕಾರಿಕ ವಸ್ತುಗಳು, ಆರಿವರ್ಕ್, ಕುಂದನ್ ವರ್ಕ್ ಸಹಿತ ಸಂಕೀರ್ಣವಾದ ಡಿಸೈನ್‌ಗಳು ಸೇರಿದಂತೆ ವಿವಿಧ ರೀತಿಯ ಕುಚ್ಚು ವಿನ್ಯಾಸಗಳನ್ನು ಮಾಡಬಹುದು.
1. ಸಾಂಪ್ರದಾಯಿಕ ಟಸೆಲ್ಸ್: ಸಾಂಪ್ರದಾಯಿಕ ಟಸೆಲ್‌ಗಳಲ್ಲಿ, ಸೀರೆ ಸೆರಗಿನ ನೂಲುಗಳನ್ನೇ ಕುಚ್ಚು ಮಾಡಲು ಬಳಸಲಾಗುತ್ತದೆ. ಸೆರಗಿನ ತುದಿಯಲ್ಲಿನ ನೂಲುಗಳನ್ನು ಗಂಟು ಹಾಕಿ, ಸರಿಯಾಗಿ ಹೊಂದುವ ರೀತಿಯಲ್ಲಿ ಮತ್ತು ಒಂದೇ ಸಾಲಿನಲ್ಲಿ ಒಂದೇ ರೀತಿಯ ಮಾದರಿ/ ವಿನ್ಯಾಸವನ್ನು ರೂಪಿಸುವ ರೀತಿಯಲ್ಲಿ ಕಟ್ಟಲಾಗುತ್ತದೆ ಮತ್ತು ಕೊನೆಯಲ್ಲಿ ನೂಲುಗಳನ್ನು ನೇತಾಡುವಂತೆ ಬಿಡಲಾಗುತ್ತದೆ.
2. ರೇಷ್ಮೆ ದಾರದ ಟಸೆಲ್ಸ್: ಸೀರೆ ಸೆರಗಿನಂಚಿನ ದಾರಗಳಷ್ಟೇ ಅಲ್ಲದೆ, ಹೊಳೆಯುವ ರೇಷ್ಮೆ ದಾರಗಳನ್ನು ಬಳಸಲಾಗುತ್ತದೆ. ಸೀರೆಯ ಬಣ್ಣಕ್ಕೆ ಹೊಂದುವಂತೆ, ಬಣ್ಣದ ರೇಷ್ಮೆ ದಾರಗಳನ್ನು ಬಳಸಿಕೊಂಡು ಕುಚ್ಚುಗಳನ್ನು ಕಟ್ಟಬಹುದು. ಅಥವಾ ಸೀರೆ, ಸೆರಗಿನ ಬಣ್ಣವಲ್ಲದೇ ವಿಭಿನ್ನ ಬಣ್ಣಗಳನ್ನೂ ನೀವು ಆಯ್ಕೆ ಮಾಡಬಹುದು.
3. ಆರಿ ವರ್ಕ್ ಕುಚ್ಚು: ಸೆರಗಿನ ಅಂಚಿನುದ್ದಕ್ಕೂ ಬೀಟ್ಸ್, ಕುಂದನ್ ಮುಂತಾದವುಗಳನ್ನು ಬಳಸಿ ಅತ್ಯಾಕರ್ಷಕ ಡಿಸೈನ್ ಮಾಡಿಸಬಹುದು. ಮದುವೆಯ ದಿನಾಂಕ, ವಧು, ವರರ ಚಿತ್ರ ಮತ್ತು ಹೆಸರುಗಳನ್ನು ಕುಚ್ಚನಲ್ಲಿ ಮೂಡಿಸುವುದು ಸಹ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ಓಪನ್ ಪಲ್ಲು ಸೀರೆ ಧರಿಸಿದಾಗ ಈ ವಿನ್ಯಾಸ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
4. ಕಸೂತಿ ಟಸೆಲ್ಸ್: ವಧುವಿನ ಸೀರೆಗಳಲ್ಲಿ ಕಸೂತಿ ಟಸೆಲ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಟಸೆಲ್‌ಗಳು ವಧುವಿನ ಸೀರೆಗೆ ಭವ್ಯವಾದ ನೋಟವನ್ನು ನೀಡುತ್ತವೆ. ಈ ಟಸೆಲ್‌ಗಳನ್ನು ಮಾಡಿಸಲು ₹1,500 ರಿಂದ ₹5000 ವರೆಗೆ ಹಣ ವ್ಯಯಿಸಬೇಕಾಗಬಹುದು.
5. ನೆಟ್ ಟಸೆಲ್ಸ್: ನೆಟ್ ಟಸೆಲ್‌ಗಳನ್ನು ಸೀರೆ ಸೆರಗಿನಂಚಿನ ದಾರಗಳು ಅಥವಾ ಜೋಡಿಸಲಾದ ರೇಷ್ಮೆ ದಾರಗಳು ಎರಡರಿಂದಲೂ ತಯಾರಿಸಲಾಗುತ್ತದೆ. ಕುಚ್ಚಿನ ವಿನ್ಯಾಸ ಉತ್ತಮವಾಗಿ ಕಾಣಲು ನೀವು ಪ್ರತಿ ಗಂಟಿನಲ್ಲಿ ಮಣಿಗಳು ಅಥವಾ ಮುತ್ತುಗಳನ್ನು ಸಹ ಸೇರಿಸಬಹುದು.
6. ಹೆಣಿಗೆಯಿಂದ ಕೂಡಿದ ಟಸೆಲ್ಸ್: ಈ ಟಸೆಲ್ಸ್ ಮಾದರಿಯಲ್ಲಿ ದಾರಗಳನ್ನು ಕೂದಲಿನ ಹೆರಳಿನ ಶೈಲಿಯಂತೆ ಹೆಣೆಯಲಾಗುತ್ತದೆ. ಇಲ್ಲಿ ಸೀರೆ ನೇಯ್ಗೆ ದಾರವನ್ನು ಬಳಸಬಹುದು ಅಥವಾ ಈ ಬ್ರಿಯಾಡ್ ಮಾದರಿಯ ಟಸೆಲ್‌ಗಳನ್ನು ಮಾಡಲು ರೇಷ್ಮೆ ದಾರಗಳನ್ನೂ ಬಳಸಬಹುದು.
7. ನಾಣ್ಯದ ಟಸೆಲ್ಸ್: ನಾಣ್ಯಗಳನ್ನು, ಆಭರಣಗಳನ್ನು ಕುಚ್ಚು ಕಟ್ಟುವಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ನೂಲುಗಳ ಕೊನೆಯಲ್ಲಿ ನಾಣ್ಯಗಳನ್ನು ನೇತಾಡುವಂತೆ ವಿನ್ಯಾಸಗೊಳಿಸಲಾಗುತ್ತದೆ.
8. ಬಟ್ಟೆಯ ಟಸೆಲ್ಸ್: ಹೆಸರೇ ಸೂಚಿಸುವಂತೆ ಬಟ್ಟೆಯ ಟಸೆಲ್‌ಗಳನ್ನು ಬಟ್ಟೆಯಿಂದ ತಯಾರಿಸಲಾಗುತ್ತದೆ. ಬಟ್ಟೆಯನ್ನು ಸಣ್ಣ ವೃತ್ತದ ಆಕಾರದಲ್ಲಿ ಕತ್ತರಿಸಿ, ಅವುಗಳನ್ನು ಮಡಿಚಿ, ನೋಬ್ ಹೋಲ್ಡರ್‌ಗೆ ಜೋಡಿಸಿ ಟಸೆಲ್ ತಯಾರಿಸಲಾಗುತ್ತದೆ. ಇಲ್ಲಿ ಮಣಿಗಳನ್ನು ಸಹ ಬಳಸಬಹುದು.
9. ಜ್ಯಾಮಿತೀಯ ಆಕಾರದ ಟಸೆಲ್ಸ್: ಟಸೆಲ್‌ಗಳನ್ನು ವೃತ್ತಗಳು, ಚೌಕಗಳು, ತ್ರಿಕೋನಗಳು, ವಜ್ರದಾಕಾರ ಮತ್ತು ಇನ್ನೂ ಅನೇಕ ಜ್ಯಾಮಿತೀಯ ಆಕಾರಗಳಲ್ಲಿ ಸಿದ್ಧಪಡಿಸಬಹುದು. ನೀವು ಕಸೂತಿ ಟಸೆಲ್‌ಗಳು ಅಥವಾ ಹತ್ತಿ ಸ್ಟಫ್ಡ್ ಟಸೆಲ್ ಮಾದರಿಗಳನ್ನು ಆಯ್ಕೆ ಮಾಡಬಹುದು.
10. ಮಣಿಗಳ ಟಸೆಲ್ಸ್: ಸೀರೆಯ ಸೆರಗಿನ ಅಂಚಿನಲ್ಲಿ ಮಣಿಗಳನ್ನು ಒಂದೇ ಸಾಲಿನಲ್ಲಿ ಜೋಡಿಸಿ, ಲೋಹದ ಹ್ಯಾಂಗಿಂಗ್‌ಗಳನ್ನು, ಕಸೂತಿ ವರ್ಕ್ ಸಹಿತ ಬಳಸಬಹುದು. ಅಲ್ಲದೆ, ಪೊಟ್ಲಿ ಮಾದರಿಯಂತಹ ಸ್ಟಫ್ಡ್ ಟಸೆಲ್‌ಗಳಿಗೆ ರೇಷ್ಮೆ ಎಳೆಗಳೊಂದಿಗೆ ಸಣ್ಣ ಸಣ್ಣ ಮಣಿಗಳನ್ನು ಜೋಡಿಸುವುದರಿಂದ ಅದ್ಭುತ ನೋಟ ಸಿಗುತ್ತದೆ.
11. ಮುತ್ತಿನ ಟಸೆಲ್ಸ್: ಸೀರೆಯ ಸೆರಗಿನ ಅಂಚಿನಲ್ಲಿ ಮುತ್ತುಗಳನ್ನು ಜೋಡಿಸಿ, ಕುಚ್ಚು ಕಟ್ಟಿದರೆ ಸೊಗಸಾಗಿ ಕಾಣುತ್ತವೆ. ಯಾವುದೇ ರೀತಿಯ ಸೀರೆಗೂ ಮುತ್ತಿನ ಹ್ಯಾಂಗಿಂಗ್‌ಗಳು ಉತ್ತಮವಾಗಿ ಕಾಣುತ್ತವೆ.
12. ಪ್ರಾಣಿ, ಪಕ್ಷಿಗಳ ಚಿತ್ರ ಮಾದರಿಯ ಟಸೆಲ್ಸ್: ರೇಷ್ಮೆ ದಾರಗಳ ಜೊತೆಗೆ ಕಟ್ಟಿಗೆಯಿಂದ ಮಾಡಿರುವ ಪಕ್ಷಿಗಳು ಅಥವಾ ಪ್ರಾಣಿಗಳನ್ನು ಕುಚ್ಚಿನಲ್ಲಿ ಜೋಡಿಸಲಾಗುತ್ತದೆ. ಅಥವಾ ಆನೆ, ಜಿಂಕೆ, ಗಿಳಿ, ಹಂಸದ ಚಿತ್ರಗಳನ್ನು ದಾರದ ಎಳೆಗಳಲ್ಲಿ ಬಿಡಸಲಾಗುತ್ತದೆ.
13. ಪೊಟ್ಲಿ ಶೈಲಿಯ ಟಸೆಲ್ಸ್: ಪೊಟ್ಲಿ ಟಸೆಲ್‌ಗಳನ್ನು ಸುಲಭವಾಗಿ ತಯಾರಿಸಬಹುದು ಮತ್ತು ಸೀರೆಯ ಸೆರಗಿಗೂ ಬಳಸಬಹುದು. ಪೊಟ್ಲಿಯ ಉದ್ದಕ್ಕೂ ಸಣ್ಣ ಮಣಿಗಳನ್ನು ಜೋಡಿಸುವ ಮೂಲಕ ಅದನ್ನು ಸುಂದರವಾಗಿ ಕಾಣುವಂತೆ ಮಾಡಬಹುದು.
14. ಜಿಗ್‌ಜಾಗ್ ಟಸೆಲ್ಸ್: ಸೀರೆಯ ಸೆರಗಿನಂಚಿನ ನೂಲುಗಳನ್ನು ಜಿಗ್‌ಜಾಗ್ ಮಾದರಿಯಲ್ಲಿ ಹೆಣೆದು, ಮಧ್ಯದಲ್ಲಿ ಮಣಿಗಳನ್ನು ಬಳಸಿದರೆ ಚೆಂದದ ಲುಕ್ ಸಿಗುವುದು.
15. ಕ್ರೋಚೆಟ್ ಟಸೆಲ್ಸ್: ಸೃಜನಶೀಲತೆಯನ್ನು ಪ್ರತಿನಿಧಿಸುವ ಕ್ರೋceಟ್ ಟಸೆಲ್‌ಗಳು ಅತ್ಯಂತ ಆಕರ್ಷಕವಾಗಿ ಕಾಣುತ್ತವೆ.
ಮುನ್ನೆಚ್ಚರಿಕೆ ಕ್ರಮಗಳು...
*ಕುಚ್ಚು ಕಟ್ಟಿರುವ ಸೀರೆಗಳ ಬಗ್ಗೆ ತುಸು ಹೆಚ್ಚಾಗಿಯೇ ಕಾಳಜಿ ಮಾಡಬೇಕಾಗುತ್ತದೆ. ಓಡಾಡುವಾಗ ಕಾಲಿಕೆ, ಚಪ್ಪಲಿಗೆ, ಇನ್ನಿತರ ವಸ್ತುಗಳಿಗೆ ಸಿಕ್ಕಿ ಹಾಕಿಕೊಳ್ಳಬಹುದು. ಇದರಿಂದ ಸೀರೆಯ ಅಂಚು ಹರಿದು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
*ಬಳೆ, ಓಲೆಗಳಿಗೂ ಸೀರೆ ಸೆರಗಿನ ನೂಲುಗಳು ತಾಗುವ ಸಾಧ್ಯತೆ ಇರುತ್ತವೆ. ಹಾಗಾಗಿ ಹೆಚ್ಚು ಜಾಗ್ರತೆಯಿಂದ ಇದ್ದಷ್ಟು ಸೀರೆಯ ಅಂದ ಕಾಯ್ದುಕೊಳ್ಳಬಹುದು.
* ಕುಚ್ಚು ಕಟ್ಟುವಿಕೆಯಲ್ಲಿ ಗುಣಮಟ್ಟದ ನೂಲುಗಳನ್ನು, ಪರಿಕರಗಳನ್ನು ಬಳಸದಿದ್ದರೆ ನೂಲಿನ ಬಣ್ಣ ಬಿಟ್ಟು ಹೋಗುವ ಅಥವಾ ಸೀರೆಯ ಬಣ್ಣಕ್ಕೆ ಮೆತ್ತಿಕೊಳ್ಳುವ, ಪರಿಕರಗಳು ಹಾಳಾಗುವ ಸಾಧ್ಯತೆಗಳಿರುತ್ತವೆ.
