ನೇಲ್ ಆರ್ಟ್ ನ್ಯೂ ಟ್ರೆಂಡ್/ ನಖದ ಬೆನ್ನೇರಿ ಬಂತು ಕಲ್ಪನಾವಿಲಾಸ

ನೇಲ್ ಆರ್ಟ್ ನ್ಯೂ ಟ್ರೆಂಡ್/ ನಖದ ಬೆನ್ನೇರಿ ಬಂತು ಕಲ್ಪನಾವಿಲಾಸ

Published on

ಚೆಲುವೆಯ ಅಂದದ ಕೈಗೆ ಉಗುರೇ ಭೂಷಣ. ಬಗೆಬಗೆಯ ಉಂಗುರ ಸುತ್ತುವರಿದ ಕೋಮಲವಾದ ಬೆರಳುಗಳಿಗೆ ಚೂಪಾಗಿ ಬಾಗಿದ ಉಗುರು, ಅದರ ಮೇಲೆ ನವಿರು ಚಿತ್ತಾರದ ನೇಲ್ ಆರ್ಟ್ ಇದ್ದರೆ ‘ವಾವ್ಹ್..’ ಎಂಬ ಉದ್ಘಾರ ಬರದೆ ಇರದು. ಮಾಡೆಲಿಂಗ್‌ಗಳು, ಸೆಲಿಬ್ರಿಟಿಗಳಿಗೆ ಸೀಮಿತ ಎಂಬಂತಿದ್ದ ನೇಲ್‌ ಆರ್ಟ್, ಈಗ ಫ್ಯಾಷನ್ ಪ್ರಿಯ ಯುವತಿಯರು, ಆಧುನಿಕ ಮನೋಭಾವದ ಮಹಿಳೆಯರನ್ನು ಬರ ಸೆಳೆಯುತ್ತಿದೆ.

ಮದುವೆ, ಶುಭ ಸಮಾರಂಭಗಳಲ್ಲಿ ಅಡಿಯಿಂದ ಮುಡಿಯವರೆಗೆ ಮ್ಯಾಚಿಂಗ್ ಮಾಡಿಕೊಳ್ಳುವ ಜಮಾನಾದಲ್ಲಿ ನೇಲ್‌ ಆರ್ಟ್‌ ಹೆಚ್ಚು ಟ್ರೆಂಡಿಂಗ್‌ನಲ್ಲಿ ಫ್ಯಾಷನ್‌. ಪ್ರಿ ವೆಡ್ಡಿಂಗ್ ಶೂಟಿಂಗ್, ಮೆಹಂದಿ ಶಾಸ್ತ್ರ, ಮದುವೆ, ರಿಸೆಪ್ಶನ್‌ಗಳಲ್ಲಿ ಉಡುಗೆಗೆ ಹೊಂದಿಕೆಯಾಗುವ ನೇಲ್‌ ಆರ್ಟ್‌ಗಳನ್ನು  ಮೇಕಪ್ ಕಲಾವಿದರು ಸೃಷ್ಟಿಸುತ್ತಾರೆ.

ತೋಳಿನಿಂದ ಬೆರಳಂಚಿನವರೆಗೆ ಕಡುಗೆಂಪಿನ ಮೆಹಂದಿಯ ಕುಸುರಿ, ಉಗುರ ಮೇಲಿನ ‘ನೇಲ್ ಆರ್ಟ್‌’ ನರ್ತನವು ಪರಿಪೂರ್ಣವಾಗಿ ಮೇಕಪ್ ಮಾಡಿಕೊಂಡ ವಧುವಿಗೆ ಶೃಂಗಾರ ಗೀತೆಯ ಪಲ್ಲವಿಯಂತೆ ಕಂಗೊಳಿಸುತ್ತದೆ. ನಾನಾ ಬಗೆಯ ನೇಲ್‌ ಆರ್ಟ್‌ಗಳು ಪ್ರಚಲಿತದಲ್ಲಿವೆ.

ಹೂವಿನ ಸೊಗಸು: ಉಗುರಿನ ಮೇಲೆ ತೆಳುವಾಗಿ ನೇಲ್‌ ಪಾಲಿಷ್ ಹಚ್ಚಿ ಅದರ ಮೇಲೆ ಕಾಂಟ್ರಾಸ್ಟ್‌ ಬಣ್ಣದ ಸೂಕ್ಷ್ಮ ಕುಸುರಿ, ಸಣ್ಣ ಗುಲಾಬಿ, ಮಲ್ಲಿಗೆ ಮೊಗ್ಗಿನ ವಿನ್ಯಾಸ ತುಂಬಾ ಆಕರ್ಷಕ. ತಿಳಿ ಬಣ್ಣದ ನೇಲ್ ಪಾಲಿಷ್ ಮೇಲೆ ಕಪ್ಪು, ಕೆಂಪು, ಹಸಿರು ಗಾಢ ವರ್ಣದ ಬಳುಕುವ ಬಳ್ಳಿಗಳು ಹಸ್ತದ ನೋಟವನ್ನೇ ಬದಲಿಸುತ್ತವೆ.

ಬಂಗಾರದ ಬಣ್ಣ: ಲೈಟ್ ಕಲರ್ ನೇಲ್‌ ಪಾಲಿಷ್ ಮೇಲೆ ಬಂಗಾರದ ಚಿತ್ತಾರ ಕೈಗೆ ಹೊಸ ಲುಕ್ ಕೊಡುತ್ತದೆ.

ಗ್ಲಿಟರ್ ಮಿನುಗು: ತಿಳಿ ಬಣ್ಣದ ನೇಲ್‌ ಪಾಲಿಷ್ ಮೇಲೆ ಹೊಳೆಯುವ ಗ್ಲಿಟರ್‌ಗಳು ವಿಶೇಷ ಪಾರ್ಟಿ, ರಿಸೆಪ್ಶನ್‌ಗಳಿಗೆ ಹೆಚ್ಚು ಸೂಕ್ತ.

ಲೇಸ್ ಎಳೆ: ಲೆಹಂಗಾ ಧರಿಸಿದಾಗ ಲೇಸ್ ಮಾದರಿಯ ನೇಲ್ ಆರ್ಟ್‌ ಬೆರಳಿಗೆ ಹೊಸ ಲುಕ್ ಕೊಡಬಲ್ಲದು. ನೇಲ್ ಪಾಲಿಷ್ ಲೇಪಿಸಿ ಅದರ ಮೇಲೆ ಮಾಡುವ ಲೇಸ್ ರೀತಿಯ ವಿನ್ಯಾಸ ಇದು.

ಮುತ್ತಿನ ಹಾರ: ಉಗುರಿನ ಮೇಲೆ ಮುತ್ತಿನ ತುಣುಕುಗಳನ್ನು ಜೋಡಿಸುವ ನೇಲ್ ಆರ್ಟ್‌ ಸಮ್ಮೋಹಕಗೊಳಿಸುತ್ತದೆ. ಮುತ್ತಿನ ಜೊತೆಗೆ ಚಿಕ್ಕ ಆಭರಣಗಳನ್ನೂ ಸೇರಿಸಿ ವಿನ್ಯಾಸಗೊಳಿಸುವುದು ಸದ್ಯ ಹೆಚ್ಚು ಚಾಲ್ತಿಯಲ್ಲಿದೆ.

ಮೆಟಾಲಿಕ್ ಮ್ಯಾಜಿಕ್: ಗೋಲ್ಡನ್, ಸಿಲ್ವರ್ ಅಥವಾ ರೋಸ್ ಗೋಲ್ಡ್ ಮೆಟಾಲಿಕ್ ನೇಲ್ ಪಾಲಿಷ್ ನವ ವಧುವಿನ ರೂಪ‌ಕ್ಕೆ ಕಳಶವಿಟ್ಟಂತೆ. ಗಾಢ ವರ್ಣ ಇಷ್ಟಪಡುವವರಿಗೆ ಈ ಮಾದರಿ ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಆರ್ಕ್ಯಾಲಿಕ್ ನೇಲ್ ಆರ್ಟ್, ಅಮೂರ್ತ ಕಲ್ಪನೆಯ ಚಿತ್ರಗಳು (ಅಬ್‌ಸ್ಟ್ರಾಕ್ಟ್‌ ಆರ್ಟ್), ಜೆಲ್, ಶೆಲ್ಲಾಕ್, ಫ್ರೆಂಚ್ ಡಿಸೈನ್‌, 3ಡಿ ಫ್ಲೋರಲ್, ಮಾರ್ಬಲ್ ನೇಲ್ಸ್ ಹೀಗೆ ಪಟ್ಟಿ ಮಾಡುತ್ತ ಹೋದರೆ, ಮುಗಿಯದಷ್ಟು ಬಗೆಯಲ್ಲಿ ಉಗುರಿನ್ನು ಶೃಂಗಾರಗೊಳಿಸಬಹುದು.

ಮದುವೆಯ ಥೀಮ್‌ಗೆ ಅನುಗುಣವಾಗಿ ನೇಲ್ ಆರ್ಟ್ ವಿನ್ಯಾಸ ಬದಲಾಗುತ್ತದೆ. ಗ್ರಾಮೀಣ ಶೈಲಿಯ ಬಾಳೆದಿಂಡಿನ ಮಂಟಪದ ಮದುವೆ, ಬೀಚ್ ಥೀಮ್, ಡೆಸ್ಟಿನೇಷನ್ ವೆಡ್ಡಿಂಗ್, ಕಾರ್ಪೊರೇಟ್ ವೆಡ್ಡಿಂಗ್ ಹೀಗೆ ವಿವಾಹದ ಥೀಮ್ ಆಧರಿಸಿ ನೇಲ್ ಆರ್ಟ್ ಅನ್ನು ಮಾಡಲಾಗುತ್ತದೆ. ನೇಲ್‌ ಆರ್ಟ್‌ ವಿನ್ಯಾಸಗಳಿಗೆ ಮಿತಿ ಯೆಂಬುದಿಲ್ಲ. ಕಲಾವಿದನ ಕಲಾತ್ಮಕತೆ ಅರಳಿದಂತೆ ನೂರಾರು ಬಗೆಯಲ್ಲಿ ವರ್ಣರಂಜಿತಗೊಳಿಸಬಹುದು. ನೇಲ್ ಆರ್ಟ್ ಸ್ಟಿಕ್ಕರ್‌ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿವೆ ಎನ್ನುತ್ತಾರೆ ನೇಲ್ ಆರ್ಟ್ ವಿನ್ಯಾಸಗೊಳಿಸುವ ಸುಷ್ಮಾ.

ನೇಲ್ ಆರ್ಟ್‌ ಪೂರ್ವದಲ್ಲಿ ಈ ಟಿಪ್ಸ್ ಅನುಸರಿಸಿ: ಉಗುರು ತುಂಬಾ ಚಿಕ್ಕದಾಗಿ ಇರಬಾರದು ಅಥವಾ ಉದ್ದವಾಗಿರಬಾರದು. ಉದ್ದವಾಗಿದ್ದರೆ ಮುರಿಯುವ ಸಾಧ್ಯತೆಗಳು ಇರುತ್ತವೆ. ಹಳೆಯ ನೇಲ್‌ ಪಾಲಿಷ್ ಇದ್ದರೆ ಅದನ್ನು ನೀಟಾಗಿ ರಿಮೂವರ್ ಮೂಲಕ ಸ್ವಚ್ಛಗೊಳಿಸಬೇಕು. ನೇಲ್ ಆರ್ಟ್ ಮಾಡುವ ಮೊದಲು ಕೆಲವು ನಿಮಿಷ ಆ್ಯಪಲ್ ಸೈಡರ್ ವಿನೆಗರ್‌ನಲ್ಲಿ ಉಗುರು ಅದ್ದಿಟ್ಟುಕೊಂಡರೆ, ನೇಲ್ ಆರ್ಟ್ ಬಾಳಿಕೆ ಹೆಚ್ಚು ಅವಧಿ ಇರುತ್ತದೆ. ಉಗುರು ಬೆಚ್ಚಗಿನ ನೀರು ಅಥವಾ ಲಿಂಬೆ ಹಣ್ಣಿನ ರಸದಲ್ಲಿ ಕೆಲ ಹೊತ್ತು ಉಗುರು ನೆನೆಸಿಟ್ಟುಕೊಂಡರೆ, ಉಗುರುಗಳಿಗೆ ಹೊಳಪು ಬರುತ್ತದೆ. ಬೇಸ್ ಕೋಟ್ ಹಚ್ಚಿದ ನಂತರ ನೇಲ್ ಪಾಲಿಷ್ ಹಚ್ಚಿದರೆ, ಉಗುರು ಹಾಳಾಗುವುದಿಲ್ಲ.

ನೇಲ್‌ ಪಾಲಿಷ್ ಆಯ್ಕೆ ಬಹುಮುಖ್ಯ. ಕಳಪೆ ಗುಣಮಟ್ಟದ ನೇಲ್ ಪಾಲಿಷ್‌ನಿಂದ ಉಗುರಿನ ಬಣ್ಣ ಮಾಸುತ್ತದೆ. ಹೀಗಾಗಿ, ನೇಲ್ ಪಾಲಿಷ್ ಆಯ್ಕೆ ಮಾಡುವಾಗ ಎಚ್ಚರವಹಿಸಬೇಕು.

Maduve Habba
www.prajavani.net