ಬ್ಯಾಡ್ಮಿಂಟನ್ ಕೋರ್ಟ್‌ನ ವೆಂಕಟ ಸಿಂಧು ದಾಂಪತ್ಯ ಜೀವನಕ್ಕೆ ಪದಾರ್ಪಣೆ
ಬ್ಯಾಡ್ಮಿಂಟನ್ ಕೋರ್ಟ್‌ನ ಮಿಂಚಿನ ಹುಡುಗಿ, ಭಾರತದ ಕ್ರೀಡಾಪ್ರೇಮಿಗಳ ಕಣ್ಮಣಿ ಪುಸರ್ಲಾ ವೆಂಕಟ ಸಿಂಧು ಈಗ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ವೆಂಕಟ ದತ್ತ ಸಾಯಿ ಅವರನ್ನು ಸಿಂಧು ಈಚೆಗೆ ಮದುವೆಯಾದರು.
ರಾಜಸ್ಥಾನದ ಉದಯಪುರದಲ್ಲಿ ‘ಜೋಧಪುರ ಸಂಪ್ರದಾಯ’ದಲ್ಲಿ ಮದುವೆ ನೆರವೇರಿತು. ವೆಂಕಟ ಸಾಯಿ ದತ್ತ ಅವರು ಪಾಸಿಡೆಕ್ಸ್ ಡೇಟಾ ಮೈನಿಂಗ್ ಕಂಪೆನಿಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಬಿಬಿಎ ಪದವಿಯನ್ನು ಫ್ಲೇಮ್ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ವೆಂಕಟ್ ಅವರು ಡೇಟಾ ಸೈನ್ಸ್ ಮತ್ತು ಮಷಿನ್ ಲರ್ನಿಂಗ್ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನ ಐಐಎಫ್‌ಟಿಯಿಂದ ಗಳಿಸಿದ್ದಾರೆ. ಜೆಎಸ್‌ಡಬ್ಲ್ಯು ಸಂಸ್ಥೆಯ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ ವೆಂಕಟ್ ಅವರು ಕ್ರೀಡಾಪ್ರೇಮಿ. ಅದರಲ್ಲೂ ಬ್ಯಾಡ್ಮಿಂಟನ್ ಬಗ್ಗೆ ಹೆಚ್ಚು ಒಲವು. ಇದೀಗ ‘ಡಬಲ್ ಒಲಿಂಪಿಕ್ ಮೆಡಲ್’ ವಿಜಯೀ ಸಿಂಧು ಅವರ ಕೈಹಿಡಿದಿದ್ದಾರೆ.
‘ವೆಂಕಟ್ ಕುಟುಂಬ ಹಾಗೂ ನಮ್ಮ ಕುಟುಂಬದ ಪರಿಚಯ ಬಹಳ ವರ್ಷಗಳಿಂದ ಇತ್ತು. ಆದರೆ ಮದುವೆ ಕುರಿತ ಮಾತುಕತೆ ನಡೆದಿದ್ದು ಇತ್ತೀಚೆಗಷ್ಟೇ. ಒಂದು ತಿಂಗಳಿನಲ್ಲಿ ಎಲ್ಲ ಸಿದ್ಧತೆಗಳೂ ನಡೆದಿವೆ’ ಎಂದು ಸಿಂಧು ಅವರ ತಂದೆ ಪಿ.ವಿ. ರಮಣ ಸಂದರ್ಶನವೊಂದರಲ್ಲಿ ಈಚೆಗೆ ಹೇಳಿದ್ದರು.
ಸಿಂಧು –ವೆಂಕಟ ಸಾಯಿದತ್ತ ಅವರ ಮದುವೆಯು ಮೂರು ದಿನಗಳ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳ ಗುಚ್ಛವಾಗಿತ್ತು. ಉದಯಪುರದ ಗ್ರೇಟ್ ಹಾಲ್ ಆಫ್ ರಾಫಲ್ಸ್‌ನಲ್ಲಿ ಆಯೋಜಿಸಲಾಗಿದ್ದ ಮದುವೆಯು ರಾಜವೈಭವವನ್ನು ನೆನಪಿಗೆ ತಂದಿತ್ತು.
ಮದುವೆ ನಡೆದ ಭವನದ ಪ್ರತಿಯೊಂದು ಕಂಬವನ್ನು ವಿವಿಧ ಡಿಸೈನ್‌ಗಳಿಂದ ಸಿಂಗರಿಸಲಾಗಿತ್ತು. ಆಕರ್ಷಕ ನೆಲಹಾಸುಗಳು ವೈಭವದ ಹೊಳಪನ್ನು ಇಮ್ಮಡಿಗೊಳಿಸಿದ್ದವು.
ಆ ಭವನದ ಅಂದ, ಚೆಂದಕ್ಕೆ ಸಾಟಿಯಾಗುವಂತಹ ಉಡುಗೆ ಗಳನ್ನು ವಧು, ವರನಿಗೆ ತೊಡಿಸಲಾಗಿತ್ತು. ಸಿಂಧು, ಆನೆದಂತದ ಬಣ್ಣ (ಐವರಿ)ದ ಸೀರೆ ಮತ್ತು ಅದೇ ಬಣ್ಣದ ಶೇರ್ವಾನಿಯಲ್ಲಿ ದತ್ತಾ ಅವರು ಗಮನ ಸೆಳೆದರು. ದತ್ತಾ ಕೊರಳಿನಲ್ಲಿದ್ದ ಪಚ್ಚೆ ಹಾರವೂ ಗಮನ ಸೆಳೆಯಿತು.
ಸಿಂಧು ಹಾಗೂ ವೆಂಕಟ್ ಅವರ ಉಡುಗೆಗಳನ್ನು ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರಾ ಅವರು ವಿನ್ಯಾಸಗೊಳಿಸಿದ್ದರು. ಜಮುನಾ, ಗಂಗಾ ಥ್ರೆಡ್‌ವರ್ಕ್ ಅನ್ನು ಚಿನ್ನ ಮತ್ತು ಬೆಳ್ಳಿಯ ಎಳೆ ಬಳಸಿ ವಿನ್ಯಾಸಗೊಳಿಸಿದ ಸೀರೆಯನ್ನು ಸಿಂಧು ಧರಿಸಿದ್ದರು.
ಎಲ್ಲಕ್ಕಿಂತ ಮುಖ್ಯವಾಗಿ ‘ಮುತ್ತಿನ ನಗರಿ’ಯ ಹುಡುಗಿ ಸಿಂಧು ಅವರ ನಗುಮುಖವೇ ಅಲ್ಲಿ ಎಲ್ಲ ಆಭರಣಗಳನ್ನು ಮೀರಿಸಿ ಹೊಳೆದಿದ್ದು ಸುಳ್ಳಲ್ಲ.
ವರಮಾಲಾ ಸಂದರ್ಭದಲ್ಲಿ ಸಿಂಧು ಅವರು ಕೆಂಪು ಡಿಸೈನರ್ ಲೆಹಂಗಾ ಧರಿಸಿದ್ದರು. ಅದನ್ನು ಸಭ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದರು.
ಮದುವೆಗೂ ಮುನ್ನ ನಡೆದಿದ್ದ ಅರಿಶಿಣ, ನೃತ್ಯ ಕಾರ್ಯಕ್ರಮ, ಪೂಜೆ ಮತ್ತಿತರ ಕಾರ್ಯಕ್ರಮಗಳಿಗೂ ವೈವಿಧ್ಯಮಯವಾದ ಮತ್ತು ಸಾಂಪ್ರದಾಯಿಕವಾದ ಪೋಷಾಕುಗಳನ್ನು ಸಿಂಧು ಧರಿಸಿದ್ದರು.
ಸಂಗೀತ ಕಾರ್ಯಕ್ರಮಕ್ಕಾಗಿ ಮೊಘಲ್ ಎ ಆಜಂ ಮಾದರಿಯ ಸೆಟ್ ರಚನೆಯಾಗಿತ್ತು.
ಹೈದರಾಬಾದಿನಲ್ಲಿ (ಡಿ 24) ನಡೆದ ಅರತಕ್ಷತೆ ಕಾರ್ಯಕ್ರಮವು ಅದ್ದೂರಿಯಾಗಿತ್ತು. ಶ್ವೇತವರ್ಣದ ಮಿರಿ ಮಿಂಚುವ ಪೋಷಾಕಿನಲ್ಲಿ ಸಿಂಧು ಮತ್ತು ಗಾಢ ಕಾಫಿ ಬಣ್ಣದ ಡಿಸೈನರ್ ಪೋಷಾಕಿನಲ್ಲಿ ದತ್ತಾ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ತೆಲಂಗಾಣ ಮುಖ್ಯ ಮಂತ್ರಿ ಎ. ರೇವಂತರೆಡ್ಡಿ, ದಕ್ಷಿಣ ಭಾರತದ ಖ್ಯಾತ ಸಿನಿತಾರೆಯರಾದ ಅಜಿತ್, ರೋಜಾ, ಚಿರಂಜೀವಿ, ನಾಗಾರ್ಜುನ, ಮೃಣಾಲ್ ಠಾಕೂರ್ ಸೇರಿದಂತೆ ಹಲವರು ಹಾಜರಿದ್ದು ನವ ವಧು–ವರರಿಗೆ ಶುಭ ಕೋರಿದರು. ಕ್ರೀಡಾಲೋಕದ ಗಣ್ಯರೂ ಮತ್ತು ಸಿಂಧು ಅವರ ಬಹುಕಾಲದ ಸ್ನೇಹಿತರೆಲ್ಲರೂ ಸೇರಿದ್ದರು.
ಆಂಧ್ರಶೈಲಿಯೂ ಸೇರಿದಂತೆ ಹಲವಾರು ಬಗೆಬಗೆಯ ತಿಂಡಿ, ತಿನಿಸು, ಭೋಜನದ ಆತಿಥ್ಯವೂ ಭರ್ಜರಿಯಾಗಿ ನಡೆಯಿತು.
ಬ್ಯಾಡ್ಮಿಂಟನ್ ಅಂಗಣದಲ್ಲಿ ಸಿಂಧು ಅವರ ಸಾಧನೆಗಳು ಹತ್ತು ಹಲವು. ಸುಮಾರು 15 ವರ್ಷಗಳಿಂದ ಅವರು ಭಾರತದ ಬ್ಯಾಡ್ಮಿಂಟನ್ ಕ್ರೀಡೆಯನ್ನು ವಿಶ್ವದರ್ಜೆಯ ಎತ್ತರಕ್ಕೆ ಏರಿಸಿದವರು. ವಿಶ್ವ ಚಾಂಪಿಯನ್‌ಷಿಪ್ ಚಿನ್ನ, ಕಂಚು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ, 2016 ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದವರು. ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ದಾಂಪತ್ಯ ಜೀವನದಲ್ಲಿಯೂ ಅವರು ಚಿನ್ನದ ಹಾದಿಯಲ್ಲಿ ನಡೆಯುವಂತಾಗಲಿ ಎಂದು ಸಿಂಧು ಅವರ ಲಕ್ಷಾಂತರ ಅಭಿಮಾನಿಗಳು ಹಾರೈಸುತ್ತಿದ್ದಾರೆ.