ತವರಿನ ಶ್ರೇಷ್ಠತೆ ಹೆಚ್ಚಿಸುವ ಬಳುವಳಿ

ತವರಿನ ಶ್ರೇಷ್ಠತೆ ಹೆಚ್ಚಿಸುವ ಬಳುವಳಿ

Published on

ಮದುವೆಯೆಂಬ ಸುಂದರ ಸಂಬಂಧ ಬೆಸುಗೆಯ ಸಮಯದಲ್ಲಿ ನಮ್ಮ ಮಗಳು ನೂರ್ಕಾಲ ಚೆನ್ನಾಗಿರಲಿ ಎಂದು ಪೋಷಕರು ಮನದುಂಬಿ ಹಾರೈಸುತ್ತಾರೆ. ಅಂತೆಯೇ ತಮ್ಮ ಕೈಲಾದಷ್ಟು ಉಡುಗೊರೆಗಳನ್ನೂ ನೀಡುತ್ತಾರೆ. ಹಿಂದಿನ ಕಾಲದಲ್ಲಿ ಒಡವೆ, ಬೆಳ್ಳಿ ಸಾಮಗ್ರಿಗಳನ್ನು ಹೆಣ್ಣುಮಕ್ಕಳಿಗೆ ಉಡುಗೊರೆಯಾಗಿ ನೀಡುವುದು ಸಹಜವಾಗಿತ್ತು. ಮಗಳ ಸಂಸಾರ ಎಲ್ಲಾದರೂ ಸಂಕಷ್ಟಕ್ಕೆ ಸಿಲುಕಿದಾಗ ಆಪದ್ಧನವಾಗಿ ವಿನಿಯೋಗವಾಗಲಿ ಎನ್ನುವ ಸದುದ್ದೇಶವೂ ಅದರ ಹಿಂದಿತ್ತು. ಈಗ ಪ್ರತಿಷ್ಠೆಯಾಗಿ ಬೆಲೆಬಾಳುವ ಉಡುಗೊರೆಗಳನ್ನು ನೀಡುವುದನ್ನು ಸಾಮಾನ್ಯವಾಗಿದೆ. ಏನೇ ಆದರೂ ತವರಿನ ಉಡುಗೊರೆ ಹೆಣ್ಣುಮಕ್ಕಳ ಪಾಲಿಗೆ ಸ್ವರ್ಗಕ್ಕೆ ಸಮಾನ.
ಪ್ರತಿದಿನ ಬಳಸುವ ಪೂಜಾ ಸಾಮಗ್ರಿಯಂತಹ ವಸ್ತುಗಳನ್ನು ಬೆಳ್ಳಿ, ತಾಮ್ರ, ಹಿತ್ತಾಳೆ ಲೋಹಗಳಲ್ಲಿ ಉಡುಗೊರೆಯಾಗಿ ನೀಡಬಹುದು.

ಘಂಟೆ: ಪ್ರತಿದಿನ ಪೂಜೆ ಮಾಡುವಾಗ ಘಂಟೆ ಬಾರಿಸುವುದು ಹಿಂದೂ ಸಂಪ್ರದಾಯದ ಭಾಗ ಎಂದೇ ಹೇಳಬಹುದು. ಅದರಲ್ಲೂ ಹಿತ್ತಾಳೆಯ ಘಂಟೆಗಳು ಶ್ರೇಷ್ಠ ಎನ್ನಲಾಗುತ್ತದೆ. ಹೀಗಾಗಿ ಮದುವೆಯ ಸಂದರ್ಭದಲ್ಲಿ ಘಂಟೆಯನ್ನು ಉಡುಗೊರೆಯಾಗಿ ಕೊಡಬಹುದು.


ಅರಿಶಿನ ಕುಂಕುಮದ ಡಬ್ಬಿ: ಹೆಣ್ಣಿಗೆ ಅರಿಶಿನ -ಕುಂಕುಮವೇ ಸೌಭಾಗ್ಯ. ಪ್ರತಿದಿನ ಬಳಸುವ ಅರಿಶಿನ ಕುಂಕುಮ ಹಾಕಿಡಲು ಬೆಳ್ಳಿಯ ಡಬ್ಬಿಯನ್ನು ಉಡುಗೊರೆಯಾಗಿ ನೀಡಬಹುದು. ತವರಿನಿಂದ ಉಡುಗೊರೆಯೆಂದು ಆಕೆ ನಿತ್ಯವೂ ಸ್ಮರಿಸುತ್ತಾಳೆ.


ದೀಪಗಳು: ಹೆಣ್ಣು ಮನೆಯ ನಂದಾದೀಪ. ಕೊಟ್ಟ ಮನೆಯನ್ನು ಬೆಳಗಲೆಂದು ತಾಯಿ ತಂದೆಯರು ಬಯಸುತ್ತಾರೆ. ಪ್ರತಿದಿನ ದೀಪ ಬೆಳಗುವಾಗ ತವರು ಮನೆಯ ಉಡುಗೊರೆ ಎಂದು ನೆನೆದರೆ ಆಕೆಯ ಮನಕ್ಕಷ್ಟು ಆಹ್ಲಾದ ಭಾವ. ಹೀಗಾಗಿ ಬೆಳ್ಳಿ ದೀಪಗಳ ಜೋಡಿಯನ್ನು ಉಡುಗೊರೆಯಾಗಿ ಮದುವೆಯ ಸಂದರ್ಭದಲ್ಲಿ ವಧುವಿಗೆ ನೀಡಬಹುದು.


ಬೆಳ್ಳಿಯ ಪಂಚಪಾತ್ರೆ: ಪ್ರತಿ ಪೂಜೆಯಲ್ಲೂ ಪಂಚಪಾತ್ರೆ ಅತಿ ಅಗತ್ಯವಾದದ್ದು. ಭೂಮಿ, ಕುಳಿತುಕೊಂಡ ಆಸನವನ್ನು ಪೂಜೆ ಮಾಡುವಂತೆ ಪಂಚಪತ್ರೆಗೂ(ತುಳಸಿ, ಬಿಲ್ವ, ಬೇವು,‌ಬನ್ನಿ, ಗರಿಕೆ) ಪೂಜೆ ಮಾಡುವ ವಿಧಾನ ಹಿಂದೂ ಸಂಪ್ರದಾಯದಲ್ಲಿದೆ. ಐದು ಪತ್ರೆಯನ್ನು ನೀರಿನೊಂದಿಗೆ ಹಾಕಿ ಇಡುವ ಐದು ಪಾತ್ರೆ ಇದಾಗಿದ್ದು, ಪವಿತ್ರವಾದ ವಸ್ತು ಎಂದೇ ಹೇಳಲಾಗುತ್ತದೆ. ಇದನ್ನು ಮದುವೆಯಲ್ಲಿ ಉಡುಗೊರೆಯಾಗಿ ಕೊಡಬಹುದು.


ಅಕ್ಷತೆ ಪಾತ್ರೆ: ಪ್ರತಿ ಪೂಜೆಯಲ್ಲೂ ಅಕ್ಷತೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಅಕ್ಕಿಗೆ ಅರಿಶಿನ ಮತ್ತು ಕುಂಕುಮ ಸೇರಿಸಿ ಮಿಶ್ರಣ ಮಾಡಿರುವುದನ್ನು ಅಕ್ಷತೆ ಎನ್ನುತ್ತಾರೆ. ಪೂಜೆಯ ಸಮಯದಲ್ಲಿ ಇದನ್ನು ಬೆಳ್ಳಿ ಪಾತ್ರೆಯಲ್ಲಿ ಇಟ್ಟುಕೊಂಡರೆ ಶಿಸ್ತೂ ಹೌದು, ಶೇಷ್ಠವೂ ಹೌದು ಎನ್ನುತ್ತಾರೆ ಜ್ಞಾನಿಗಳು. ಮದುವೆಯಲ್ಲಿ ಹೆಣ್ಣಿಗೆ ಅಕ್ಷತೆ ತಟ್ಟೆ ಅಥವಾ ಪಾತ್ರೆಯನ್ನು ಉಡುಗೊರೆಯಾಗಿ ನೀಡಿದರೆ ಆಕೆಗೆ ಉಪಯುಕ್ತ ಉಡುಗೊರೆಯಾಗುವುದರಲ್ಲಿ ಎರಡು ಮಾತಿಲ್ಲ.


ಕಲಶದ ಸಾಮಗ್ರಿ: ಅನೇಕ ರೀತಿಯ ಪೂಜೆಗಳಲ್ಲಿ ಕಲಶವಿಟ್ಟು ಸಂಕಲ್ಪ ಮಾಡಲಾಗುತ್ತದೆ. ಅದಕ್ಕೆ ಬೆಳ್ಳಿ ಅಥವಾ ತಾಮ್ರದ ತಂಬಿಗೆ ಶೇಷ್ಠ. ಮದುವೆಯಲ್ಲಿ ಬೆಳ್ಳಿ ತಂಬಿಗೆ ಜತೆಗೆ ಲೋಟ, ಚಮಚವನ್ನು ಸೇರಿಸಿ ನೀಡುವುದರಿಂದ ಪೂಜೆಗಳಲ್ಲಿ ತವರಿನ ಉಡುಗೊರೆಯೆಂದು ಪ್ರೀತಿಯಿಂದ ಬಳಸುತ್ತಾಳೆ.


ಬೆಳ್ಳಿ ಬಟ್ಟಲು: ಬೆಳ್ಳಿ ಬಟ್ಟಲಿನಲ್ಲಿ ಊಟ ಮಾಡಿದರೆ ದೇಹಕ್ಕೆ ಬೇಕಾದ ಕೆಲವು ಅಗತ್ಯ ಪೋಷಕಾಂಶಗಳು ಸಿಗುತ್ತವೆ ಎನ್ನುವುದು ನಂಬಿಕೆ. ಅಲ್ಲದೆ ಹಲವು ಸಂದರ್ಭಗಳಲ್ಲಿ ಬೆಳ್ಳಿ ಬಟ್ಟಲು ಉಪಯುಕ್ತವಾಗಿರುತ್ತದೆ. ಹೀಗಾಗಿ ಮದುವೆಯ ಸಮಯದಲ್ಲಿ ಬೆಳ್ಳಿ ಬಟ್ಟಲು ನೀಡುವುದು ಬಳಕೆಗೆ ಸಿಗುವ ಉಡುಗೊರೆಯಾಗಿರುತ್ತದೆ.


ಸೊಂಟದ ಕೀ ಚೈನ್‌: ಹಿಂದಿನ ಕಾಲದಲ್ಲಿ ಮನೆಯ ಕೀಗಳು ಹೆಣ್ಣುಮಕ್ಕಳ ಬಳಿಯೇ ಇರುತ್ತಿತ್ತು. ಅದನ್ನು ಜೋಪಾನ ಮಾಡಬೇಕೆಂದು ಸದಾ ಸೊಂಟಕ್ಕೆ ಕಟ್ಟಿಕೊಳ್ಳುತ್ತಿದ್ದರು. ಅದಕ್ಕಾಗಿಯೇ ಬಳೆಕಯಾಗುತ್ತಿದ್ದುದು ಕೇ ಚೈನ್‌ಗಳು. ಹೀಗೆಲ್ಲ ಅಂದವಾಗಿ ಕಾಣಲು ಹಾಕಿಕೊಳ್ಳುತ್ತಾರೆ. ವಿವಿಧ ವಿನ್ಯಾಸ, ಗೆಜ್ಜೆ ಇರುವ ಕೀ ಚೈನ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇದನ್ನು ಮದುಮಗಳಿಗೆ ಉಡುಗೊರೆಯಾಗಿ ನೀಡಿದರೆ ಪ್ಯಾಷನ್‌ಗೆ ತಕ್ಕಹಾಗೆಯೂ ಆಗುತ್ತದೆ. ಜತೆಗೆ ಆಕೆಯ ಇಷ್ಟದ ವಸ್ತುವೂ ಆಗುತ್ತದೆ.

Maduve Habba
www.prajavani.net