ಭರ್ಜರಿ ಸೀರೆ ಉಡಲು ನೂರಾರು ವಿಧ
ವಿವಾಹದ ಸೀರೆಗಳು ಭರ್ಜರಿಯಾಗಿದ್ದರಷ್ಟೇ ಸಾಲದು. ಅದನ್ನು ಉಡುವ ರೀತಿಯಿಂದಲೂ ವಧುವಿನ ಸೊಬಗು ಇನ್ನಷ್ಟು ಹೆಚ್ಚುತ್ತದೆ.
ಈಚೆಗೆ ಬಹುಭಾಷಾ ನಟಿ ಕೀರ್ತಿ ಸುರೇಶ್ ವಿವಾಹದಲ್ಲಿ ಧರಿಸಿದ ಅರಿಸಿಣ ಹಾಗೂ ಹಸಿರು ಬಣ್ಣದ ಕಾಂಜೀವರಂ ರೇಷ್ಮೆ ಸೀರೆ ಹಾಗೂ ಅದನ್ನು ಮಡಿಸಾರು ರೀತಿಯಲ್ಲಿ (ತಮಿಳು ಸಾಂಪ್ರದಾಯಿಕ ವಿಧಾನ) ಉಟ್ಟಿದ್ದು ಎಲ್ಲರ ಗಮನ ಸೆಳೆಯಿತು. ಸೀರೆಯ ಕೆಳಗಿನ ಭಾಗವನ್ನು ಕಚ್ಚೆ ಹಾಕಿ ಉಡುವುದು. ಸೆರಗನ್ನು ಎಡ ಅಥವಾ ಬಲ ಭುಜದಿಂದ ಹಾಕಿ, ಅದನ್ನು ಮತ್ತೆ ಸೊಂಟದ ಬಳಿ ತಂದು ಸುತ್ತುವುದು. ಇದು ಸೀರೆಗೆ ಹೊಸ ಲುಕ್ ನೀಡುತ್ತದೆ.
ಕರ್ನಾಟಕದಲ್ಲಿ ಬಹುತೇಕ ವಿವಾಹಗಳಲ್ಲಿ ಸೀರೆ ಧರಿಸುವ ವಿಧಾನ ಒಂದೇ ರೀತಿ ಇದ್ದರೂ, ಕೆಲವು ಸಂಪ್ರದಾಯಗಳಲ್ಲಿ ಸೀರೆ ಉಡುವ ಪದ್ಧತಿ ಭಿನ್ನವಾಗಿವೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ವಿವಾಹಗಳಲ್ಲಿ 9 ಗಜಗಳ ಸೀರೆಯನ್ನು ಕಚ್ಚೆ ಹಾಕಿ ಉಡುವ ಪದ್ಧತಿ ಈಗಲೂ ಇದೆ. ಈ ಪದ್ಧತಿಯಲ್ಲೂ ಹತ್ತಾರು ವೈವಿಧ್ಯವಿದೆ. ಮರಾಠಿ, ಕೊಂಕಣಿ ಹಾಗೂ ಇನ್ನೂ ಕೆಲವು ಸಮುದಾಯಗಳಲ್ಲಿ ಸಾಂಪ್ರದಾಯಿಕ ವಿವಾಹಗಳಲ್ಲಿ ಈ ವಿಧಾನದ ಸೀರೆ ಧಾರಣೆ ಕಂಡು ಬರುತ್ತದೆ. ಮೊದಲು ಮಹಿಳೆಯರು ನಿತ್ಯವೂ ಸೀರೆಯನ್ನು ಕಚ್ಚೆ ಹಾಕಿ ಉಡುವ ರೂಢಿ ಇತ್ತು. ಈಗ ಇದು ಬಹುತೇಕ ಪ್ರದೇಶಗಳಲ್ಲಿ ಇಲ್ಲವಾಗುತ್ತಿದೆ. ಆದರೆ ವಿವಾಹಗಳಲ್ಲಿ ಈ ರೀತಿಯ ಸೀರೆ ಧಾರಣೆ ವಧುವಿಗೆ ವಿಶೇಷ ಮೆರುಗು ನೀಡುವುದು ಖಂಡಿತ.
ಕೊಡಗಿನ ವಿವಾಹಗಳಲ್ಲೂ ಅಲ್ಲಿಯದ್ದೇ ಆದ ಸೀರೆ ಉಡುವ ವಿಧಾನ ಜನಪ್ರಿಯ. ಅಲ್ಲಿ ಸೀರೆಯ ನೆರಿಗೆ ಹಿಂದಕ್ಕೆ ಬರುತ್ತದೆ. ಸೆರಗು ಭುಜವನ್ನು ಆವರಿಸಿ ಬಲಗಡೆಯಿಂದ ಮುಂದಕ್ಕೆ ತಂದು ಪಿನ್ ಮಾಡಲಾಗುತ್ತದೆ. ಈ ವಿಶಿಷ್ಟ ವಿಧಾನ ರಾಜ್ಯದ ಕೊಡವರಲ್ಲಿ ಮಾತ್ರ ಕಂಡು ಬರುತ್ತದೆ. ಇಲ್ಲಿ ವಧುವಷ್ಟೇ ಅಲ್ಲ ಹೆಚ್ಚಿನ ಮಹಿಳೆಯರೂ ಇದೇ ಮಾದರಿಯಲ್ಲಿ ಸೀರೆ ಧರಿಸುವುದು ವಿಶೇಷ.
ಗುಜರಾತಿ ಸೀರೆ ಧರಿಸುವ ವಿಧಾನದಲ್ಲಿ ಸೀರೆಯ ಸೆರಗನ್ನು ಬಲದಿಂದ ಮುಂದಕ್ಕೆ ತಂದು ನೆರಿಗೆ ಮಾಡಲಾಗುತ್ತದೆ. ಸೆರಗಿನ ವಿನ್ಯಾಸ ಇಲ್ಲಿ ಸುಂದರವಾಗಿ ಕಾಣುತ್ತದಷ್ಟೇ ಅಲ್ಲದೇ ವಧುವಿಗೆ ವಿಭಿನ್ನ ಲುಕ್ ನೀಡುತ್ತದೆ. ಈ ವಿಧಾನವನ್ನು ವಧುವಿನ ಸಹೋದರಿಯರೂ ಹಾಗೂ ಇತರ ಮಹಿಳೆಯರು ಧರಿಸಿ ಖುಷಿ ಪಡಬಹುದು.
ಬಂಗಾಲಿ ವಧುವಿನ ಸೀರೆ ಧರಿಸುವ ವಿಧಾನವೂ ಉಳಿದ ಕಡೆಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ಸೆರಗಿಗೆ ದೊಡ್ಡ ದೊಡ್ಡ ಮಡಿಕೆ ಮಾಡಿ ಸಾಮಾನ್ಯ ಸೀರೆಯಂತೆ ಎಡ ಭುಜಕ್ಕೆ ಪಿನ್ ಮಾಡಲಾಗುತ್ತದೆ. ಅದನ್ನು ಮತ್ತೆ ಬಲ ಭುಜದಿಂದ ಮುಂದಕ್ಕೆ ತಂದು ಉದ್ದಕ್ಕೆ ಬಿಡಲಾಗುತ್ತದೆ. ಕೆಂಪು ಹಾಗೂ ಬಿಳಿ ಬಣ್ಣದ ಸಂಯೋಜನೆಯ ಸೀರೆಗಳನ್ನು ಇಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಮದುವೆಯಲ್ಲಿ ಪಾಲ್ಗೊಳ್ಳುವ ವಧುವಿನ ಸ್ನೇಹಿತೆಯರು, ಸಂಬಂಧಿಕ ಯುವತಿಯರು ಹಾಗೂ ಮಹಿಳೆಯರು ಸೆರಗನ್ನು ಮಡಿಕೆ ಮಾಡದೇ ಎಡಭುಜದ ಮೇಲೆ ಹರವಿ ಹಾಕಿಕೊಳ್ಳುವ ವಿಧಾನ ಈಚೆಗೆ ಜನಪ್ರಿಯ. ಇದರಲ್ಲಿ ಸೆರಗಿನಲ್ಲಿರುವ ಸುಂದರ ವಿನ್ಯಾಸವೂ ಕಾಣುವುದರಿಂದ ಸೀರೆ ಧರಿಸಿದ ನಾರಿಯ ಅಂದಕ್ಕೆ ಗರಿ ಮೂಡಿದಂತಾಗುತ್ತದೆ.
ಎರಡು ಸೀರೆಗಳನ್ನು ಬಳಸಿಯೂ ಉಡುವ ಹೊಸ ವಿಧಾನ ಸೀರೆ ಲುಕ್ ಅನ್ನು ಇನ್ನಷ್ಟು ಗ್ರ್ಯಾಂಡ್ ಆಗಿ ಮಾಡುತ್ತದೆ. ಇದಕ್ಕೆ ಕಸೂತಿಯುಳ್ಳ ಸಾಂಪ್ರದಾಯಿಕ ಸೀರೆಗಳು ಸೂಕ್ತ. ಧೋತಿ ಸ್ಟೈಲ್ ಸೀರೆ ಉಡುವುದೂ ಸಹ ಈಚೆಗೆ ಒಂದು ಫ್ಯಾಷನ್ ಆಗಿದೆ. ಇದು ಸೀರೆಯನ್ನು ಕಚ್ಚೆ ಹಾಕಿ ಉಡುವ ವಿಧಾನಕ್ಕೆ ಹತ್ತಿರ.
ಫ್ಯಾಷನ್ ಪ್ರಿಯರು ಕೇಪ್ ಸ್ಟೈಲ್ ಅನ್ನೂ ಸಹ ಹುಟ್ಟು ಹಾಕಿದ್ದಾರೆ. ಸೆರಗನ್ನು ಎಡ ಹಾಗೂ ಬಲ ಭುಜಗಳ ಮೇಲೆ ತಂದು ಎದುರು ಪಿನ್ ಮಾಡುವುದು ಈ ವಿಧಾನ.
ಲಂಗದಂತೆ ಸೀರೆಯನ್ನು ಧರಿಸುವ ಬಗೆಯೂ ಈಚೆಗೆ ಮದುವೆಗಳಲ್ಲಿ ಮನ್ನಣೆ ಪಡೆಯುತ್ತಿದೆ. ಇಡೀ ಸೀರೆಯನ್ನು ಲಂಗದಂತೆ ಮಡಿಕೆ ಮಾಡುತ್ತ ಉಟ್ಟು ಸೆರಗನ್ನು ಮಾತ್ರ ಸಾಮಾನ್ಯ ಸೀರೆಯಂತೆ ಎಡ ಭುಜದ ಬಳಿ ಪಿನ್ ಮಾಡುವುದು ಅಥವಾ ಗುಜರಾತಿ ವಿಧಾನದಲ್ಲಿ ಬಲಭುಜದಿಂದ ಮುಂದಕ್ಕೆ ಹಾಕಿಕೊಳ್ಳುವುದು ಈ ವಿಧಾನ. ದಕ್ಷಿಣ ಭಾರತದಲ್ಲಿ ಯುವತಿಯರ ಮೆಚ್ಚಿನ ‘ಹಾಫ್ ಸಾರಿ’ ಧರಿಸಿದಂತೆ ಇದು ಕಂಡು ಬರುತ್ತದೆ.
ಅಪರೂಪಕ್ಕೆ ಸೀರೆ ಉಡುವವರಿಗೆ ಸೀರೆಯನ್ನು ಒಪ್ಪವಾಗಿ ಉಡುವುದು ಕಷ್ಟ. ಎನಿಸುತ್ತದೆ. ಸಮಯವೂ ಬಹಳ ಬೇಕು. ಮಾರುಕಟ್ಟೆಯಲ್ಲಿ ಇದಕ್ಕೂ ಸುಲಭ ಪರಿಹಾರ ಲಭ್ಯವಿದೆ. ರೆಡಿಮೇಡ್ ಸೀರೆಗಳೂ ಹಲವು ವಿನ್ಯಾಸಗಳಲ್ಲಿ ಲಭ್ಯವಿವೆ.
ದೇಶದಲ್ಲಿ ಸೀರೆಗಳ ವೈವಿಧ್ಯ ಇರುವಂತೆಯೇ ಅದನ್ನು ಧರಿಸಲೂ ನೂರಾರು ವಿಧಾನಗಳು ಚಾಲ್ತಿಯಲ್ಲಿವೆ. ಫ್ಯಾಷನ್ ಲೋಕದಲ್ಲಂತೂ ಸೀರೆ ಸುತ್ತುವ ಬಗೆ ಬದಲಾಗುತ್ತಲೇ ಇರುತ್ತದೆ.