ವಧುವಿನ ಅಂದ ಹೆಚ್ಚಿಸುವ ಆಭರಣಗಳು

ವಧುವಿನ ಅಂದ ಹೆಚ್ಚಿಸುವ ಆಭರಣಗಳು

Published on

ಮದುವೆ ಎಂದರೆನೇ ಸಂಭ್ರಮದ ವಾತಾವರಣ. ಭಾರತದಲ್ಲಿ ಮದುವೆಗೆ ತನ್ನದೇಯಾದ ಹಿನ್ನೆಲೆ, ಮಹತ್ವವಿದೆ. ಗಂಡು– ಹೆಣ್ಣಿನ ಮನಸ್ಸುಗಳನ್ನು, ಕುಟುಂಬಗಳನ್ನು ಬೆಸೆಯುವ ಪವಿತ್ರ ಬಂಧ ವಿವಾಹ.

ಮದುವೆ ಸಮಾರಂಭಗಳು ಕಳೆಗಟ್ಟುವುದೇ ವಸ್ತ್ರಾಲಂಕಾರ, ಆಭರಣಗಳಿಂದ. ಕಾಲಕ್ಕೆ ತಕ್ಕಂತೆ ಇವುಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.

ಭಾರತೀಯರ ಆಭರಣಗಳು ಶ್ರೀಮಂತ ಇತಿಹಾಸವನ್ನು ಹೊಂದಿವೆ. ಮದುವೆ ಸಮಾರಂಭಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾಜ ಮಹಾರಾಜರ ಕಾಲದಲ್ಲಿದ್ದ ವಸ್ತ್ರಾಲಂಕಾರ ಹಾಗೂ ಇಂದಿನ ಆಧುನಿಕ ಶೈಲಿಯ ವಸ್ತ್ರಾಲಂಕಾರಕದಲ್ಲಿ ಸಾಕಷ್ಟು ಬದಲಾವಣೆ, ವಿಭಿನ್ನತೆ, ವೈಶಿಷ್ಟ್ಯತೆಗಳನ್ನು ಕಾಣಬಹುದು.

ಆಗೆಲ್ಲ ಚಿನ್ನಭರಣಗಳಲ್ಲಿ ಮುತ್ತು, ರತ್ನ, ವಜ್ರ, ಬಣ್ಣ ಬಣ್ಣದ ಹರಳುಗಳ ಪ್ರಾಧ್ಯಾನ್ಯತೆಯೇ ಎದ್ದು ಕಾಣುತ್ತಿತ್ತು. ಕೈಯಿಂದಲೇ ತಯಾರಿಸಿದ್ದ ಕುಸುರಿ ಕಲೆಯೊಳಗಂಡ ಚಿನ್ನಾಭರಣಗಳ ಡಿಸೈನ್‌ಗಳೇ ಹೆಚ್ಚಾಗಿರುತ್ತಿದ್ದವು.

ಆದರೆ ಇಂದಿನ ಆಧುನಿಕ ಯುಗದಲ್ಲಿ ಯಂತ್ರಗಳ ಸಹಾಯದಿಂದ ಸಿದ್ಧಗೊಂಡ ಚಿನ್ನಾಭರಣಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಚಿನ್ನಾಭರಣ ತಯಾರಕರ ಜಾಣ್ಮೆ ಹಾಗೂ ಕುಸುರಿ ಕಲೆಗೆ ಇಲ್ಲಿ ಅಧಿಕ ಬೆಲೆಇದೆ.

ತಮ್ಮ ಕನಸಿನ ಮದುವೆಯನ್ನು ಎಂದೂ ಮರೆಯಲಾಗದಂತೆ ಮಾಡಲು ಜನರು ಸದಾ ಉತ್ತಮವಾದುದರ ಹುಡುಕಾಟದಲ್ಲೇ ಇರುತ್ತಾರೆ. ಸದ್ಯ ಟ್ರೆಂಡಿಂಗ್‌ನಲ್ಲಿರುವ ಭಾರತೀಯ ಆಭರಣಗಳ ಬಗ್ಗೆ ಇಲ್ಲಿ ತಿಳಿಯೋಣ.

ಸ್ಟೇಟ್‌ಮೆಂಟ್‌ ಚೋಕರ್ ಸೆಟ್: ಚೋಕರ್‌ಗಳು ಸದಾ ಜನಪ್ರಿಯತೆ ಪಡೆದ ಆಭರಣಗಳು. ಸದ್ಯ ಅವು ವಿಭಿನ್ನ ವಿನ್ಯಾಸಗಳು, ರತ್ನದ ಹರಳುಗಳು ಮತ್ತು ವಿಶಿಷ್ಟ ಮಾದರಿಗಳೊಂದಿಗೆ ಜನರನ್ನು ಸೆಳೆಯುತ್ತಿವೆ. ಸಾಂಪ್ರದಾಯಿಕ ಕುಂದನ್ ಚೋಕರ್‌ಗಳು ಅಥವಾ ಸಮಕಾಲೀನ ವಿನ್ಯಾಸಗಳೊಂದಿಗೆ ಆಧುನಿಕ ಡಿಸೈನ್‌ಗಳನ್ನು ಆಯ್ಕೆ ಮಾಡಿಕೊಂಡರೆ ಮದುವೆಗೆ ರಾಯಲ್ ಸ್ಪರ್ಶ ಸಿಕ್ಕು ಪರಿಪೂರ್ಣವೆನಿಸುವುದು.

ವಿಂಟೇಜ್ ಲುಕ್‌ ನೀಡುವ ಪೋಲ್ಕಿ ಆಭರಣ: ಚಿನ್ನದಲ್ಲಿ ಹೊಂದಿಸಲಾದ ಕತ್ತರಿಸದ ವಜ್ರಗಳಿಗೆ ಹೆಸರುವಾಸಿಯಾದ ಪೋಲ್ಕಿ ಆಭರಣಗಳು ಒಂದು ಕಾಲದಲ್ಲಿ ಭಾರತೀಯರ ಮದುವೆ ಸಮಾರಂಭಗಳಿಗೆ ಬಹು ಬೇಡಿಕೆ ಪಡೆದಿದ್ದವು.

ಪೋಲ್ಕಿ ಆಭರಣಗಳಿಗೆ ಈಗಲೂ ಅಷ್ಟೇ ಬೇಡಿಕೆ ಇದ್ದು, ಜನಪ್ರಿಯತೆ ಹೆಚ್ಚಿಸಿಕೊಂಡಿವೆ. ವಿಂಟೇಜ್ ಮೋಡಿ ಮತ್ತು ರಾಜಮನೆತನದಂಥ ಮದುವೆಯ ಲುಕ್‌ಗಾಗಿ ಇವುಗಳನ್ನು ಆಯ್ಕೆಮಾಡಿಕೊಳ್ಳಬಹುದು. ಪೋಲ್ಕಿ ನೆಕ್ಲೇಸ್‌ಗಳು, ಕಿವಿಯೋಲೆಗಳು ಮತ್ತು ಬಳೆಗಳು ಸಾಂಪ್ರದಾಯಿಕ ವಧುವಿನ ಉಡುಗೆಗಳಾದ ಲೆಹೆಂಗಾ, ಸೀರೆ ಅಥವಾ ಆಧುನಿಕ ಉಡುಪುಗಳಿಗೆ ಪೂರಕವಾಗಿವೆ. ಆರ್ಟಿಫಿಷಲ್‌ ಜ್ಯುವೆಲ್ಲರಿಗಳಲ್ಲೂ ಇವು ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತವೆ.

ಲೇಯರ್ಡ್ ನೆಕ್ಲೇಸ್ ಸೆಟ್‌ಗಳು: ವಿವಿಧ ಲೇಯರ್‌ಗಳಿರುವ ನೆಕ್ಲೇಸ್‌ಗಳು 2024ರಲ್ಲಿ ಹೆಚ್ಚು ಜಯಪ್ರಿಯತೆ ಪಡೆದಿವೆ. ಸಾಂಪ್ರದಾಯಿಕತೆ ಮತ್ತು ಆಧುನಿಕ ಸ್ಪರ್ಶದೊಂದಿಗೆ ಸಿದ್ದಗೊಳ್ಳುವ ಇಂಥ ಆಭರಣಗಳು ಮಹಿಳೆಯರ ಮನ ಗೆದ್ದಿವೆ. ನಾಲ್ಕೈದು ನೆಕ್‌ಲೇಸ್‌ ಹಾಕುವ ಬದಲು ಇಂಥದೊಂದನ್ನು  ಲೆಹೆಂಗಾ, ಸೀರೆಯೊಂದಿಗೆ ಧರಿಸಿದರೆ ಮದುಮಗಳ ಅಲಂಕಾರ ಮತ್ತಷ್ಟು ಸುಂದರವಾಗಿ ಕಾಣುವುದು.

ಮುತ್ತಿನ ಆಭರಣಗಳು: ಮದುಮಗಳ ಆಭರಣದಲ್ಲಿ ಮುತ್ತು ಇಲ್ಲದಿದ್ದರೆ ಅದು ಪರಿಪೂರ್ಣ ಎನ್ನಿಸದು. ಸಾಂಪ್ರದಾಯಿಕ ಮತ್ತು ಆಧುನಿಕ ಉಡುಗೆಗಳೊಂದಿಗೆ ಇವು ಸುಲಭವಾಗಿ ಹೊಂದುತ್ತವೆ. ಚಿನ್ನದ ಆಭರಣಗಳಲ್ಲಿ ಮುತ್ತಿನ ಬಳಕೆ ಹೆಚ್ಚಾದಷ್ಟು ಆಭರಣದ ಅಂದ ದುಪ್ಪಟ್ಟಾಗುವುದು. ಆರ್ಟಿಫಿಷಿಯಲ್‌ ಜ್ಯುವೆಲ್ಲರಿಗಳಲ್ಲೂ ಮುತ್ತಿನ ಬಳೆಕ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುತ್ತವೆ.

ಡೈಮಂಡ್ ಕ್ಲಸ್ಟರ್ ಜುಮ್ಕಾಸ್: ಆಧುನಿಕ ಉಡುಗೆಗಳಿಗೆ ಸಾಂಪ್ರದಾಯಿಕ ಸ್ಪರ್ಶ ನೀಡಲು ಝುಮುಕಿಗಳನ್ನು ಧರಿಸಬಹುದು ಡೈಮಂಡ್ ಕ್ಲಸ್ಟರ್ ಜುಮ್ಕಾಸ್ ಕೂಡ ಸದ್ಯ ಹೆಚ್ಚು ಟ್ರೆಂಡಿಂಗ್‌ನಲ್ಲಿವೆ.

ಅಲ್ಲದೇ ಸ್ಟಾರ್ ಸ್ಪಾರ್ಕಲ್ ಡೈಮಂಡ್ ಸೆಟ್, ಬ್ಲೂಸಮ್ ಪರ್ಲ್ ಜುಮ್ಕಾಸ್ ಸಹ ಧರಿಸಬಹುದು. ಟೆಂಪಲ್ ಜ್ಯುವೆಲ್ಲರಿ, ಆ್ಯಂಟಿಕ್‌ ಜ್ಯವೆಲ್ಲರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

Maduve Habba
www.prajavani.net