ಮದುಮಗನ ಅಂದ ಹೆಚ್ಚಿಸುವ ಧೋತಿ...
ಮದುವೆ ಎಲ್ಲರ ಜೀವನದಲ್ಲೂ ಸುಂದರ ಕ್ಷಣ. ಅದರ ಬಗ್ಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸುಗಳಿರುತ್ತವೆ. ಮದುವೆ ನಿಶ್ಚಯದಿಂದ ಹಿಡಿದು ಮದುವೆ ನಂತರದ ಧಾರ್ಮಿಕ ಕಾರ್ಯಗಳಾಗುವವರೆಗೂ ಯಾವ ರೀತಿ ಉಡುಪು ಧರಿಸಿದರೆ ಚೆನ್ನಾಗಿ ಕಾಣಬಹುದು ಅಥವಾ ಮದುವೆಗೆ ಸಂಬಂಧಿಸಿದಂತೆ ಇತ್ತೀಚಿನ ಟ್ರೆಂಡಿಂಗ್ ಉಡುಪು ಯಾವ್ದು ಎಂದು ಹುಡುಕಿ ಪಟ್ಟಿ ಮಾಡಿಟ್ಟುಕೊಳ್ಳುವವರು ಇದ್ದಾರೆ. ಎಷ್ಟೆ ಸುಂದರ ವಿನ್ಯಾಸದ ಉಡುಪುಗಳು ಬಂದರೂ ಮದುವೆ ಕಾರ್ಯಗಳಿಗೆ ಮದುಮಗ ಧೋತಿ ತೊಟ್ಟರೇನೆ ಚಂದ.
ಅವರವರ ಧರ್ಮ ಹಾಗೂ ಸಂಪ್ರದಾಯದಂತೆ ಮದುವೆಗೂ ಮುಂಚೆ ಮೂರು ಅಥವಾ ವಾರಕ್ಕೂ ಮೊದಲೇ ಮದುವೆ ಕಾರ್ಯಕ್ರಮಗಳು ಶುರುವಾಗುತ್ತವೆ. ವರನ ಮನೆ ಮುಂದೆ ಹಾಲುಗಂಬ ಪೂಜೆ ಮಾಡುವುದು, ಚಪ್ಪರ ಹಾಕಿಸೋದು, ಲಗ್ನಕ್ಕಿ ಗಂಟು ಕಟ್ಟುವುದು, ಮೆಹೆಂದಿ ಶಾಸ್ತ್ರ, ಹಳದಿ ಶಾಸ್ತ್ರ, ಸುರಗಿ ಸುತ್ತುವುದು, ಮಾಂಗಲ್ಯ ಕಟ್ಟುವ ಶಾಸ್ತ್ರ ನಂತರ ದೇವರ ಕಾರ್ಯಗಳು..ಹೀಗೆ ಹಲವು ಶಾಸ್ತ್ರಗಳು ಇರುತ್ತವೆ. ಈ ಎಲ್ಲ ಕಾರ್ಯದಲ್ಲೂ ಮದುಮಗ ಧೋತಿ ಧರಿಸುವುದು ವಾಡಿಕೆ. ಧೋತಿ ತೊಟ್ಟಾಗಲೇ ಮದುಮಗನಿಗೆ ಮದುವೆ ಕಳೆ ಬಂತು ಎಂದು ತಮಾಷೆ ಮಾಡುವುದು ರೂಢಿಯಲ್ಲಿದೆ.
ಭಾರತೀಯ ಪಾರಂಪರಿಕ ವೇಷಭೂಷಣಗಳಲ್ಲಿ ಧೋತಿಗೆ ಇಂದಿಗೂ ವಿಶೇಷ ಸ್ಥಾನವಿದೆ.ಸಾತ್ವಿಕ ಉಡುಪಾಗಿ ಗುರುತಿಸುವ ಧೋತಿಯನ್ನು ಹಿಂದೆ ಪ್ರತಿದಿನ ಉಡುತ್ತಿದ್ದರು, ಇಂದು ಕೇವಲ ಪೂಜಾ ಸಮಯ ಹಾಗೂ ಹಬ್ಬ ಹಾಗೂ ಮದುವೆಗಳಲ್ಲಿ ಧರಿಸುತ್ತಾರೆ.ಧೋತಿ ತೊಡುವ ಪರಂಪರೆ ಪ್ರಾಚೀನ ಕಾಲದಿಂದಲೂ ಇದೆ. ರಾಜರು, ಆಡಳಿತಗಾರರು ಧೋತಿ ಧರಿಸುತ್ತಿದ್ದರು. ಇದು ರಾಜಮನೆತನದ ಸಂಕೇತವೂ ಆಗಿತ್ತು. ನಂತರ ಮದುವೆ ಕಾರ್ಯಗಳಲ್ಲಿ ಮದುಮಗನ ಉಡುಪು ಆಗಿತ್ತು. ಅದು ಇಂದಿಗೂ ಮುಂದುವರೆದಿದೆ.
ಕಾಲ ಬದಲಾಗಿದೆ, ಆಧುನಿಕತೆ ನಮ್ಮ ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಅಂತೆಯೇ ಮದುವೆ ಉಡುಪುಗಳಲ್ಲೂ ವೈವಿಧ್ಯಮಯ ವಿನ್ಯಾಸ ಕಾಣಬಹುದು. ಮುಖ್ಯವಾಗಿ ಧೋತಿಗಳಲ್ಲಿ ಹಲವು ವಿನ್ಯಾಸಗಳು ಲಭ್ಯವಿದ್ದು, ಅವರವರ ಸಂಪ್ರದಾಯ ಹಾಗೂ ಆರ್ಥಿಕತೆಗನುಗುಣವಾದ ಧೋತಿಯನ್ನು ಮದುಮಗ ಧರಿಸುತ್ತಾನೆ.
ಪ್ರಾಚೀನ ಕಾಲದಲ್ಲಿ ಹತ್ತಿ ಹಾಗೂ ರೇಷ್ಮೆಯ ಧೋತಿಗಳು ಮಾತ್ರ ಬಳಕೆಯಲ್ಲಿದ್ದವು.ಕಾಲಕ್ರಮೇಣ ಬಟ್ಟೆ ಹಾಗೂ ಬಳಕೆಯ ವಿನ್ಯಾಸದಲ್ಲಿನ ಬದಲಾವಣೆಗೆ ತಕ್ಕಂತೆ, ಇಂದು ವಿವಿಧ ಮಾದರಿಯ ಧೋತಿಗಳು ಲಭ್ಯ. ಧೋತಿ ಹಾಗೂ ಲುಂಗಿ ಎರಡೂ ವಿಭಿನ್ನ ಧಿರಿಸು. ಧೋತಿ ಲುಂಗಿಗಿಂತ ವಿಭಿನ್ನ. ಧೋತಿಗಳು ಸಾಮಾನ್ಯವಾಗಿ ಬಿಳಿಬಣ್ಣದಲ್ಲಿ, ಬಂಗಾರದ ಬಣ್ಣದ ಜರಿಯೊಂದಿಗೆ ಕಾಣಸಿಗುತ್ತವೆ.
ಧೋತಿಯಲ್ಲಿ ಸದ್ಯ ಎರಡು ವಿಧಗಳಿವೆ. ಸಿಂಗಲ್ ಧೋತಿ - (1.7 ಮೀ. ಉದ್ದ) ಹಾಗೂ ಡಬಲ್ ಧೋತಿ ( 4ಮೀ ಉದ್ದ). ಮದುವೆಯಲ್ಲಿ ಬಳಸುವುದು ಡಬಲ್ ಧೋತಿ.
ಮೊದಲೆಲ್ಲ ಮದುವೆಗಳಲ್ಲಿ ಬಟ್ಟೆಯೊಂದನ್ನು ಧೋತಿಯ ರೀತಿಯಲ್ಲಿ ತೊಡಬೇಕಿತ್ತು. ಅದರ ನಿರ್ವಹಣೆ ಕಷ್ಟವೂ ಆಗಿತ್ತು. ಆದರೆ ಈಗ ಆಕಷ್ಟವನ್ನು ರೆಡಿಮೇಟ್ ಧೋತಿಗಳು ನಿವಾರಿಸಿವೆ. ಜೊತೆಗೆ ಅವುಗಳಿಗೆ ಪಾಕೆಟ್‌ಗಳೂ(ಕಿಸೆ) ಇರುವುದರಿಂದ ಮೊಬೈಲ್, ಪರ್ಸ್ ಅನ್ನು ಇಟ್ಟುಕೊಳ್ಳಲು ಅನುಕೂಲವಾಗಿವೆ.
ಗಂಟು ಹಾಕುವ ಗೋಳು ಇಲ್ಲ, ಇಲಾಸ್ಟಿಕ್ ಅಥವಾ ಸ್ಟ್ರಿಪ್ ಮೂಲಕ ಸರಳವಾಗಿ ಅಂಟಿಸಿ, ತೊಡಬಹುದು. ಬಟ್ಟೆಯ ಗುಣಮಟ್ಟ ಹಾಗೂ ವಿನ್ಯಾಸಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸಲಾಗಿದೆ.
ಸಾಮಾನ್ಯವಾಗಿ ಮದುವೆ ಸಂದರ್ಭಗಳಲ್ಲಿ ರೇಷ್ಮೆ ಬಟ್ಟೆಯ ಬಿಳಿ ಅಥವಾ ಕ್ರೀಂ ಬಣ್ಣದ ಹಾಗೂ ಬಂಗಾರ ಅಥವಾ ಬೆಳ್ಳಿ ಜರಿ ಇರುವ ಧೋತಿ ಧರಿಸುವುದು ವಾಡಿಕೆ. ಇದು ವರನ ಗೌರವವನ್ನೂ ಹೆಚ್ಚಿಸುವುದರ ಜೊತೆಗೆ ನೆರೆದಿರುವ ಜನರ ಗಮನವನ್ನೂ ಸೆಳೆಯುತ್ತದೆ.
ಸಿಲ್ಕ್ ಧೋತಿ, ಕೋರಾ ಧೋತಿ, ಟಿಶ್ಶೂ ಜರಿ ಧೋತಿ, ಕಾಟನ್ ಧೋತಿ, ಪ್ರೀಮಿಯಂ ಧೋತಿ, ಲೈನಿನ್ ಧೋತಿ, ಹ್ಯಾಂಡಲೂಮ್ ಧೋತಿ, ರೆಡಿಮೇಡ್ ಪಾಕೆಟ್ ಧೋತಿ ಹಾಗೂ ಎಂಬ್ರಾಯಿಡರಿ ಧೋತಿ..ಹೀಗೆ ವಿವಿಧ ವಿನ್ಯಾಸದ ಧೋತಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.
ರಿಸಪ್ಶನ್ , ಪ್ರಿ ವೆಡ್ಡಿಂಗ್ ಶೂಟ್‌ಗೂ ಈಗ ಧೋತಿ ಬಳಸುವುದು ಈಗಿನ ಟ್ರೆಂಡ್ ಆಗಿದೆ. ನೇರಿಗೆ ಹಾಗೂ ಪಾಕೆಟ್‌ಗಳಿದ್ದು ಪ್ಯಾಂಟ್ ರೀತಿ ಸುಲಭವಾಗಿ ಇವುಗಳನ್ನು ಸುಲಭವಾಗಿ ಧರಿಸಬಹುದು. ವಿವಿಧ ವಿನ್ಯಾಸ ಹಾಗೂ ಬಣ್ಣದ ಧೋತಿಗಳು ಹಾಗೂ ಅವುಗಳಿಗೆ ಹೊಂದುವಂತ ಶರ್ಟ್, ಶಲ್ಯ, ಕುರ್ತಾ ಸಹ ಮಾರುಕಟ್ಟೆಯಲ್ಲಿ ಲಭ್ಯ ಇವೆ. ₹2,500– ₹30,000 ವರೆಗಿನ ಧೋತಿಗಳು ಲಭ್ಯ ಇವೆ.