ಡಾಲಿ ಧನಂಜಯ ಡಾ. ಧನ್ಯತಾ ನಿಶ್ಚಿತಾರ್ಥ- ಸರಳತೆಯ ಅರ್ಥ
ಚಿತ್ರಗಳಲ್ಲಿ ನಾಯಕ ಹಾಗೂ ಖಳ ನಾಯಕ ಪಾತ್ರಗಳನ್ನು ವಿಭಿನ್ನ ಶೈಲಿಯಲ್ಲೇ ನಿರೂಪಿಸುವ ಮೂಲಕ ಹೆಸರುವಾಸಿಯಾದ ಡಾಲಿ ಧನಂಜಯ ಅವರು ಚಿತ್ರರಂಗದ ಯಾವ ನಟಿಯನ್ನು ವರಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ವೈದ್ಯೆ ಡಾ. ಧನ್ಯತಾ ಅವರನ್ನು ವರಿಸುತ್ತಿರುವ ಹೇಳಿಕೆ ಹೊರಬಿದ್ದಮೇಲೆಯೇ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡಿಯೊ ಹಂಚಿಕೊಳ್ಳುವ ಮೂಲಕ ಡಾಲಿ ಅವರು ತಾವು ಹಸೆಮಣೆ ಏರುತ್ತಿರುವುದಾಗಿ ಸರಳವಾಗಿ ಘೋಷಿಸಿಕೊಂಡರು.
ಮದುವೆ ವಿಷಯವನ್ನು ಡಾಲಿ ಹಂಚಿಕೊಂಡ ಪರಿಯೂ ಭಿನ್ನವಾಗಿತ್ತು. 'ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.
ನಟ, ನಿರ್ಮಾಪಕ, ಗೀತ ಬರಹಗಾರರಾಗಿರುವ ಡಾಲಿ ಧನಂಜಯ, ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದ ನಟ. ಹೀಗಾಗಿ ಅವರ ನಿಶ್ವಿತಾರ್ಥ ಅದ್ಧೂರಿಯಾಗಿರುತ್ತದೆ ಎಂಬ ನಿರೀಕ್ಷೆ ಹುಸಿಗೊಳಿಸಿದ ನಟ, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ಡಾ. ಧನ್ಯತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಈ ಸರಳ ಸಮಾರಂಭದಲ್ಲಿ ಕುಟುಂಬದ ಸದಸ್ಯರಷ್ಟೇ ಪಾಲ್ಗೊಂಡಿದ್ದರು. ಡಾಲಿ ಧನಂಜಯ್ ಅವರು ತಮ್ಮ ಭಾವಿ ಪತ್ನಿ ಡಾ.ಧನ್ಯತಾ ಅವರ ಬೆರಳಿಗೆ ಉಂಗುರ ತೊಡಿಸಿದರು. ಧನ್ಯತಾ ಅವರೂ ಡಾಲಿ ಬೆರಳಿಗೆ ಉಂಗುರ ತೊಡಿಸಿ ಪ್ರೇಮದ ನಗೆ ಬೀರಿದರು.
ಲಗ್ನ ಬರೆಸುವ ಶಾಸ್ತ್ರ ನಡೆಯಿತು. ಅದರಂತೆ 2025ರ ಫೆ. 16ರಂದು ಡಾಲಿ ಹಾಗೂ ಧನ್ಯತಾ ಅವರ ವಿವಾಹವು ಮೈಸೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.