ಮದುವೆಗೆ ಮುನ್ನ ಹೊಂದಿರಬೇಕಾದ ಫಿಟ್ನೆಸ್ ಗುರಿಗಳು

ಮದುವೆಗೆ ಮುನ್ನ ಹೊಂದಿರಬೇಕಾದ ಫಿಟ್ನೆಸ್ ಗುರಿಗಳು

Published on

ಬಾಳ ಪಯಣದಲ್ಲಿ ಮದುವೆ ಎಂಬುದು ಒಂದು ಸುಂದರ ಹಾಗೂ ಮಹತ್ವದ ಘಟ್ಟವಾಗಿದೆ. ಮದುವೆಯ ವಯಸ್ಸಿಗೆ ಬಂದ ಯುವಕ ಯುವತಿಯರು ತಮ್ಮ ಬಾಳ ಸಂಗಾತಿಯ ಜೊತೆ ಜೀವನ ನಡೆಸಲು ಕಾತುರರಾಗಿ ಕಾಯುತ್ತಿರುತ್ತಾರೆ. ಮದುವೆಯ ವಿವಿಧ ಕಾಯಕ್ರಮಗಳಿಗಾಗಿ ಪ್ರತಿಯೊಬ್ಬರೂ ತಮ್ಮದೇ ಆದ ತಯಾರಿ ನಡೆಸುತ್ತಾರೆ. ಬಟ್ಟೆಬರೆ, ಆಭರಣ, ಸಮಾರಂಭದ ಸಿದ್ಧತೆಗಳು ಇತ್ಯಾದಿ. ಇವೆಲ್ಲದರ ಮಧ್ಯದಲ್ಲಿ ಅವರು ಹೆಚ್ಚಾಗಿ ಮರೆಯುವುದು ಆರೋಗ್ಯ ಮತ್ತು ಫಿಟ್ನೆಸ್. ಮದುವೆಗೆ ಮುನ್ನ ಫಿಟ್ನೆಸ್‌ ಬಗ್ಗೆ ಗಮನ ಹರಿಸುವುದು ಕೇವಲ ಸುಂದರವಾಗಿ ಕಾಣುವುದಕ್ಕಷ್ಟೇ ಅಲ್ಲ, ದೇಹವನ್ನು ಸಧೃಡವಾಗಿಡಲೂ ಸಹಾಯಕವಾಗಿದೆ. ಆದ್ದರಿಂದ ಮದುವೆಗೆ ಮುನ್ನ ಕೆಲವು ಸ್ಪಷ್ಟವಾದ ಫಿಟ್ನೆಸ್ ಗುರಿಗಳನ್ನು ಹೊಂದಿರುವುದು ಅತ್ಯಂತ ಉಪಯುಕ್ತವಾಗಿದೆ.

ಸಾಮಾನ್ಯ ದೈಹಿಕ ಆರೋಗ್ಯವನ್ನು ಸುಧಾರಿಸುವುದು ಮುಖ್ಯ ಗುರಿಯಾಗಿರಬೇಕು. ಅನೇಕರು ಮದುವೆಗೆ ಮುಂಚಿನ ಸಮಯದಲ್ಲಿ ತೂಕ ಇಳಿಸಬೇಕು ಅಥವಾ ದೇಹವನ್ನು ಆಕರ್ಷಕವಾಗಿ ರೂಪಿಸಬೇಕು ಎಂಬ ಒತ್ತಡದಲ್ಲಿರುತ್ತಾರೆ ಅದನ್ನೇ ಫಿಟ್ನೆಸ್ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ತೂಕ ಕಡಿಮೆ ಮಾಡುವುದಕ್ಕಿಂತಲೂ ಹೃದಯದ ಆರೋಗ್ಯ, ಶ್ವಾಸಕೋಶಗಳ ಸಾಮರ್ಥ್ಯ, ಮತ್ತು ದೇಹದ ಸಹನಶೀಲತೆಯನ್ನು ಹೆಚ್ಚಿಸುವುದು ಮುಖ್ಯ. ಆದರೆ, ಕಠಿಣ ಡಯಟ್ ಮಾಡಿ ಸುಸ್ತಾಗುವ ಬದಲು, ಆರೋಗ್ಯಕರ ತೂಕವನ್ನು ಹೊಂದುವ ಗುರಿ ಇಟ್ಟುಕೊಳ್ಳಬೇಕು. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ದೇಹವನ್ನು ಹುರಿಗೊಳಿಸುವುದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಮದುವೆಯ ಉಡುಪಿನಲ್ಲಿ ನೀವು ಫಿಟ್ ಆಗಿ ಕಾಣುವಂತೆ ಮಾಡುತ್ತದೆ. ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡುವುದನನ್ನು ಮರೆಯಬಾರದು. ಉದಾಹರಣೆಗೆ ನಡಿಗೆ, ಜಾಗಿಂಗ್, ಸೈಕ್ಲಿಂಗ್ ಅಥವಾ ಈಜು ಇತ್ಯಾದಿಗಳನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು.

ಶಕ್ತಿಯುಳ್ಳ ಮತ್ತು ಚುರುಕು ದೇಹವನ್ನು ನಿರ್ಮಿಸುವುದು ಮುಖ್ಯ ಉದ್ದೇಶವಾಗಿರಬೇಕು. ಮದುವೆಯ ಮುನ್ನ ಮತ್ತು ನಂತರ ಹಲವಾರು ಕಾರ್ಯಕ್ರಮಗಳು, ಪ್ರಯಾಣ, ಹೊಸ ಜವಾಬ್ದಾರಿಗಳು ಎದುರಾಗುತ್ತವೆ. ಈ ಎಲ್ಲವನ್ನು ಸುಲಭವಾಗಿ ನಿಭಾಯಿಸಲು ದೇಹದಲ್ಲಿ ಶಕ್ತಿ ಅಗತ್ಯ. ಯೋಗ, ಸ್ಟ್ರೆಂಥ್ ಟ್ರೈನಿಂಗ್, ಅಥವಾ ಬಾಡಿವೇಟ್ ವ್ಯಾಯಾಮಗಳ ಮೂಲಕ ಸ್ನಾಯುಗಳನ್ನು ಬಲಪಡಿಸಬಹುದು. ಇದರಿಂದ ದಣಿವು ಕಡಿಮೆಯಾಗುತ್ತದೆ ಮತ್ತು ದಿನನಿತ್ಯದ ಕೆಲಸಗಳಲ್ಲಿ ಉತ್ಸಾಹ ಹೆಚ್ಚುತ್ತದೆ.

ಮದುವೆಯ ಕಾರ್ಯಕ್ರಮಗಳು ದೀರ್ಘಕಾಲದವರೆಗೆ ನಡೆಯುತ್ತವೆ. ನಿರಂತರ ಓಡಾಟ, ಗಂಟೆಗಟ್ಟಲೆ ನಿಲ್ಲುವುದು ಮತ್ತು ನೃತ್ಯದಂತಹ ಚಟುವಟಿಕೆಗಳಿಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಇದನ್ನು ನಿಭಾಯಿಸಲು ಕಾರ್ಡಿಯೋ ವ್ಯಾಯಾಮಗಳಾದ ಓಟ, ಈಜು ಅಥವಾ ಸೈಕ್ಲಿಂಗ್ ಅಭ್ಯಾಸ ಮಾಡಬಹುದು. ಇದು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವುದಲ್ಲದೆ, ದಿನವಿಡೀ ನಿಮ್ಮನ್ನು ಉತ್ಸಾಹದಿಂದ ಇರಿಸುತ್ತದೆ.

ಕೊನೆಯದಾಗಿ, ಲವಚಿಕತೆ ಮತ್ತು ದೇಹದ ಸಮತೋಲನವೂ ಮಹತ್ವದ್ದಾಗಿದೆ. ಸ್ಟ್ರೆಚಿಂಗ್ ಮತ್ತು ಯೋಗಾಸನಗಳು ದೇಹವನ್ನು ನಮ್ಯವಾಗಿಡುತ್ತವೆ, ಬೆನ್ನು ನೋವು ಮತ್ತು ಕೀಲು ಸಮಸ್ಯೆಗಳನ್ನು ತಡೆಯುತ್ತವೆ. ವಿಶೇಷವಾಗಿ ಮದುವೆಯ ಸಮಯದಲ್ಲಿ ದೀರ್ಘಕಾಲ ನಿಂತುಕೊಳ್ಳುವುದು ಅಥವಾ ಕುಳಿತಿರುವುದು ಸಾಮಾನ್ಯ, ಅದಕ್ಕೆ ದೇಹ ಸಿದ್ಧವಾಗಿರಬೇಕು.

ಚರ್ಮ ಮತ್ತು ಕೂದಲಿನ ಆರೋಗ್ಯ ಫಿಟ್ನೆಸ್ ಎಂದರೆ ಕೇವಲ ಜಿಮ್‌ಗೆ ಹೋಗುವುದು ಎಂದು ಭಾವಿಸಬಾರದು. ನೀವು ಸೇವಿಸುವ ಆಹಾರ ನಿಮ್ಮ ಮುಖದ ಮೇಲೆ ಪ್ರತಿಫಲಿಸುತ್ತದೆ. ಸಾಕಷ್ಟು ನೀರು ಕುಡಿಯುವುದು, ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಮದುವೆಗೆ ಕೆಲವು ತಿಂಗಳುಗಳ ಮುಂಚಿತವಾಗಿಯೇ ಸಂಸ್ಕರಿಸಿದ ಸಕ್ಕರೆ ಮತ್ತು ಎಣ್ಣೆಯುಕ್ತ ಆಹಾರದಿಂದ ದೂರವಿದ್ದರೆ, ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳನ್ನು ತಡೆಯಬಹುದು. ದಿನಕ್ಕೆ ಎಷ್ಟು ಬಾರಿ ಆಹಾರ ಸೇವಿಸುತ್ತೀರೋ ಅಷ್ಟುಬಾರಿ ಆಹಾರದಲ್ಲಿ ಪ್ರೋಟೀನ್‍ಅನ್ನು ಕೂಡ ಸೇವಿಸಬೇಕು.

ಇನ್ನೊಂದು ಮಹತ್ವದ ಗುರಿ ಮಾನಸಿಕ ಫಿಟ್ನೆಸ್. ಮದುವೆ ಸಿದ್ಧತೆಗಳು ಕೆಲವೊಮ್ಮೆ ಒತ್ತಡ ಮತ್ತು ಆತಂಕವನ್ನುಂಟುಮಾಡಬಹುದು. ಧ್ಯಾನ, ಪ್ರಾಣಾಯಾಮ, ಮತ್ತು ಸಮರ್ಪಕ ನಿದ್ರೆ ಮಾನಸಿಕ ಸಮತೋಲನವನ್ನು ಕಾಪಾಡಲು ಸಹಾಯಕ. ಮನಸ್ಸು ಶಾಂತವಾಗಿದ್ದರೆ ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ.

ಮಾನಸಿಕ ಶಾಂತಿ ಮತ್ತು ಒತ್ತಡ ನಿರ್ವಹಣೆ ಮದುವೆಯ ಸಿದ್ಧತೆಗಳು ಒತ್ತಡಕ್ಕೆ ಕಾರಣವಾಗಬಹುದು. ಈ ಒತ್ತಡವು ನಿಮ್ಮ ನಿದ್ರೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಯೋಗ ಮತ್ತು ಧ್ಯಾನವನ್ನು ರೂಢಿಸಿಕೊಳ್ಳಿ. ಮಾನಸಿಕ ನೆಮ್ಮದಿಯು ನಿಮ್ಮ ಮುಖದಲ್ಲಿ ನಗು ಮತ್ತು ಪ್ರಸನ್ನತೆಯನ್ನು ತರುತ್ತದೆ, ಇದು ಯಾವುದೇ ಮೇಕ್ಅಪ್‌ಗಿಂತ ಹೆಚ್ಚಿನ ಸೌಂದರ್ಯ ನೀಡುತ್ತದೆ.

ನಿಯಮಿತ ನಿದ್ರೆಯ ಕ್ರಮ

ಫಿಟ್ನೆಸ್ ಗುರಿಗಳಲ್ಲಿ ನಿದ್ರೆಯೂ ಒಂದು ಪ್ರಮುಖ ಭಾಗ. ಪ್ರತಿ ರಾತ್ರಿ 7-8 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಮಾಡುವುದರಿಂದ ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳು ಕಡಿಮೆಯಾಗುತ್ತವೆ ಮತ್ತು ಮೆದುಳು ಚುರುಕಾಗಿರುತ್ತದೆ. ಇನ್ನೂ ಮಹತ್ವದ ಅಂಶವೆಂದರೆ, ಆಹಾರ ಪದ್ಧತಿಯ ಸುಧಾರಣೆ ಫಿಟ್ನೆಸ್ ಗುರಿಗಳ ಅವಿಭಾಜ್ಯ ಭಾಗ. ಜಂಕ್ ಫುಡ್ ಕಡಿಮೆ ಮಾಡಿ, ಹಣ್ಣುಗಳು, ತರಕಾರಿಗಳು, ಪ್ರೋಟೀನ್ ಸಮೃದ್ಧ ಆಹಾರವನ್ನು ಹೆಚ್ಚಿಸುವುದು ಅಗತ್ಯ. ಸಾಕಷ್ಟು ನೀರು ಕುಡಿಯುವ ಅಭ್ಯಾಸವೂ ದೇಹದ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.

ಕೊನೆಗೆ, ಮದುವೆಗೆ ಮುನ್ನ ಫಿಟ್ನೆಸ್ ಗುರಿಗಳನ್ನು ಕೇವಲ ಕೆಲ ತಿಂಗಳ ಪ್ರಾಜೆಕ್ಟ್ ಎಂದು ನೋಡದೆ, ಜೀವನಪೂರ್ತಿ ಅನುಸರಿಸಬಹುದಾದ ಅಭ್ಯಾಸಗಳಾಗಿ ಪರಿಗಣಿಸಬೇಕು. ಆರೋಗ್ಯಕರ ದೇಹ ಮತ್ತು ಶಾಂತ ಮನಸ್ಸು ಸಂತೋಷಕರ ದಾಂಪತ್ಯ ಜೀವನಕ್ಕೆ ಬಲವಾದ ಅಡಿಪಾಯವಾಗುತ್ತದೆ. ಮದುವೆ ಒಂದು ದಿನದ ಆಚರಣೆ, ಆದರೆ ಆರೋಗ್ಯ ಒಂದು ಜೀವನದ ಸಂಪತ್ತು.

ಮದುವೆ ಹತ್ತಿರ ಬಂದಾಗ ತರಾತುರಿಯಾಗಿ ಕಠಿಣ ವ್ಯಾಯಾಮ ಮಾಡುವುದಾಗಲಿ, ಉಪವಾಸ ಮಾಡಿ ತೂಕ ಇಳಿಸುವ ಪ್ರಯತ್ನವಾಗಲಿ ಮಾಡದಿರಿ. ಫಿಟ್ನೆಸ್‍ನ ತಯಾರಿ ಕನಿಷ್ಠಪಕ್ಷ 3- 4 ತಿಂಗಳು ಮುಂಚೆಯಾದರೂ ಮಾಡಲೇಬೇಕು.

ಯಾವ ರೀತಿಯಾಗಿ ಆಹಾರ ಸೇವನೆ ಮಾಡಬೇಕು ಅಥವಾ ನಿಮ್ಮ ದೇಹಕ್ಕೆ ಯಾವರೀತಿಯ ವ್ಯಾಯಾಮ ಸೂಕ್ತ ಎಂದು ತಿಳಿಯಲು ನ್ಯೂಟ್ರಿಶನಿಸ್ಟ್ ಮತ್ತು ಟ್ರೇನರ‍್ನ ಸಲಹೆ ಪಡೆಯಿರಿ. ಆಹಾರ ಮತ್ತು ವ್ಯಾಯಾಮದಂತೆ ನೀರಿನ ಸೇವನೆಯೂ ಅತಿ ಮುಖ್ಯ. ದಿನಕ್ಕೆ 3- 4 ಲೀಟರ್ ನೀರು ಕುಡಿಯಬೇಕು.

Maduve Habba
www.prajavani.net