ಮದುಮಗನಿಗೂ ಈಗ ವೈವಿಧ್ಯಮಯ ಧಿರಿಸು
ಮದುವೆಯಲ್ಲಿ ಹೆಣ್ಣಿನಂತೆ ಗಂಡಿಗೂ ವಿಭಿನ್ನ ರೀತಿಯ ಉಡುಗೆಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಮದುವೆಗಳಲ್ಲಿ ಮೊದಲೆಲ್ಲ ಪಂಚೆ-ಶಲ್ಯಗಳಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ಪುರುಷರು ಅಥವಾ ಮದುಮಗ ಈಗ ವಿವಿಧ ವಿನ್ಯಾಸದ ಉಡುಗೆಗಳನ್ನು ಧರಿಸುವುದು ಸಾಮಾನ್ಯವಾಗಿದೆ. ರಿಸೆಪ್ಶನ್, ಮುಹೂರ್ತ ಎಂದು ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಯ ಉಡುಪುಗಳನ್ನು ಗಂಡುಮಕ್ಕಳೂ ಧರಿಸುತ್ತಾರೆ. ಹಾಗಾದರೆ ಸಾಂಪ್ರದಾಯಿಕವಾಗಿ ಯಾವೆಲ್ಲ ರೀತಿಯ ಉಡುಗೆಗಳನ್ನು ಧರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ
ಅನಾರ್ಕಲಿ ಶೆರ್‌ವಾನಿ
ಭಾರತೀಯ ಮದುವೆಗಳಲ್ಲಿ ಉಡುಪು ವಿಶೇಷವಾಗಿರುತ್ತವೆ. ಅನಾರ್ಕಲಿ ಶೆರ್‌ವಾನಿ ಮೊಘಲರ ಕಾಲದ ಉಡುಗೆಯನ್ನು ನೆನಪಿಸುತ್ತದೆ. ಉದ್ದವಾದ ಕುರ್ತಾ, ಅದಕ್ಕೆ ತಕ್ಕ ದುಪಟ್ಟಾ ಧರಿಸಿದರೆ ಮದುಮಗನ ಲುಕ್ ವಿಭಿನ್ನವಾಗಿರುತ್ತದೆ. ಈ ಅನಾರ್ಕಲಿ ಶೆರ್‌ವಾನಿಗೆ ಆಭರಣಗಳನ್ನು ಧರಿಸಿದರೆ ವಿಶೇಷವಾಗಿ ಕಾಣುತ್ತದೆ.
ಸ್ಟ್ರೈಟ್ ಶೆರ್‌ವಾನಿ
ಸ್ಟ್ರೈಟ್ ಶೆರ್‌ವಾನಿ ಅದರ ನಯವಾದ ಸಿಲೂಯೆಟ್ ಮತ್ತು ಸೊಗಸಾದ ವಿನ್ಯಾಸಕ್ಕೆ ಹೆಸರುವಾಸಿಯಾದ ಭಾರತೀಯ ವರನ ಉಡುಗೆಯಾಗಿದೆ. ರೇಷ್ಮೆ ಅಥವಾ ವೆಲ್ವೆಟ್‌ನಂತಹ ಐಷಾರಾಮಿ ಬಟ್ಟೆಗಳಿಂದ ರಚಿಸಲಾದ ಇದು ಕಸೂತಿ ಮತ್ತು ಅಲಂಕಾರಗಳನ್ನು ಹೊಂದಿರುತ್ತದೆ. ಮುತ್ತು ಅಥವಾ ಪಚ್ಚೆ ನೆಕ್‌ಪೀಸ್‌ಗಳಂತಹ ಅಲಂಕಾರಿಕ ವಸ್ತುಗಳು ಶೆರ್‌ವಾನಿಗೆ ರಿಚ್ ಲುಕ್ ನೀಡಬಲ್ಲದು.
ರೇಷ್ಮೆ ಧೋತಿ ಮತ್ತು ಅಂಗಿ
ರೇಷ್ಮೆ ಶರ್ಟ್‌ನೊಂದಿಗೆ ಧೋತಿ ಧರಿಸುವುದು ದಕ್ಷಿಣ ಭಾರತದ ವರನ ಸಾಂಪ್ರದಾಯಿಕ ಉಡುಗೆಯಾಗಿದೆ. ಇದು ದಕ್ಷಿಣ ಭಾರತೀಯ ವಿವಾಹಗಳ ಶ್ರೀಮಂತ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ರೇಷ್ಮೆ ಧೋತಿಯ ಮೇಲೆ ನಿಮಗಿಷ್ಟವಾದ ಬಣ್ಣದ, ವಿನ್ಯಾಸದ ಶರ್ಟ್‌ಗಳನ್ನು ಧರಿಸಬಹುದು. ಮುಹೂರ್ತದ ಸಮಯದಲ್ಲಿ ಈ ಉಡುಗೆ ಹೆಚ್ಚು ಸೂಕ್ತ.
ಜಾಕೆಟ್ ಜತೆ ಕುರ್ತಾ ಪೈಜಾಮ
ಸಾಮಾನ್ಯವಾಗಿ ಬಾಲಿವುಡ್ ತಾರೆಯರು ಸಾಂಪ್ರದಾಯಿಕ ಉಡುಗೆಯಾಗಿ ಜಾಕೆಟ್ ಜತೆಗೆ ಕುರ್ತಾ ಪೈಜಾಮವನ್ನು ಧರಿಸುತ್ತಾರೆ. ಸೂಕ್ತವಾದ ಪ್ಯಾಂಟ್‌ನೊಂದಿಗೆ ಕುರ್ತಾ ಧರಿಸುವುದರಿಂದ ಆರಾಮವನ್ನು ನೀಡುತ್ತದೆ. ಅಲ್ಲದೆ ಮದುವೆಯ ಸಂದರ್ಭದಲ್ಲಿ ರಿಚ್ ಲುಕ್ ನೀಡುತ್ತದೆ. ವಧುವಿನ ಉಡುಗೆಯೊಂದಿಗೆ ಮಿಕ್ಸ್‌ಮ್ಯಾಚ್ ಮಾಡಿ ಧರಿಸಿದರೆ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.
ಇಂಡೊ ವೆಸ್ಟರ್ನ್ ಶೆರ್‌ವಾನಿ
ಆಧುನಿಕತೆಯ ಜತೆಗೆ ಸಾಂಪ್ರದಾಯಿಕ ಲುಕ್ ನೀಡುವಲ್ಲಿ ಇಂಡೋ ವೆಸ್ಟರ್ನ್ ಶೆರ್‌ವಾನಿ ಪ್ರಮುಖ ಪಾತ್ರ ವಹಿಸುತ್ತದೆ.
ಇಂಡೋ-ವೆಸ್ಟರ್ನ್ ಶೆರ್‌ವಾನಿ ಲ್ಯಾಪಲ್ಸ್, ಬಟನ್‌ಗಳು ಮತ್ತು ಪಾಕೆಟ್‌ಗಳನ್ನು ಒಳಗೊಂಡಿರುವ ಕುರ್ತಾ ಮದುವೆ ಸಂದರ್ಭಕ್ಕೆ ಹೇಳಿ ಮಾಡಿಸಿದ ಉಡುಗೆಯಾಗಿದೆ. ಟರ್ಬನ್ ಆಭರಣ, ಬ್ರೂಚ್ ಅಥವಾ ಸ್ಟೇಟ್‌ಮೆಂಟ್ ನೆಕ್ಲೇಸ್‌ನಂತಹ ಸಾಂಪ್ರದಾಯಿಕ ಆಭರಣಗಳೊಂದಿಗೆ ಸೇರಿಸುವುದರಿಂದ ಇನ್ನಷ್ಟು ಲುಕ್ ನೀಡಬಹುದು.
ಆಂಗ್ರಾಖಾ ಶೆರ್‌ವಾನಿ
ಆಂಗ್ರಾಖಾ ಶೈಲಿಯ ಶೆರ್‌ವಾನಿ ಆಧುನಿಕ ವಿನ್ಯಾಸದ ಸಾಂಪ್ರದಾಯಿಕ ಆಕರ್ಷಣೆಯುಳ್ಳ ಉಡುಪಾಗಿದೆ. ಮೊಘಲ್ ಯುಗದಲ್ಲಿ ಧರಿಸಿದ್ದ ಐತಿಹಾಸಿಕ ಅಂಗ್ರಾಖಾ ವಸ್ತ್ರದಿಂದ ಸ್ಫೂರ್ತಿ ಪಡೆದ ಈ ಶೆರ್‌ವಾನಿ ಶೈಲಿಯು ವಿಶಿಷ್ಟವಾದ ಲುಕ್ ನೀಡವಲ್ಲಿ ಎರಡು ಮಾತಿಲ್ಲ. ರಿಸೆಪ್ಶನ್, ಫೋಟೊಶೂಟ್‌ನಂತಹ ಸಮಯದಲ್ಲಿ ಈ ಆಂಗ್ರಾಖಾ ಶೆರ್‌ವಾನಿ ಧರಿಸಬಹುದು.