ಮದುಮಗನಿಗೂ ಒಪ್ಪುವ ಆಭರಣವಿರಲಿ…
ಬದುಕಿನ ವಿಶೇಷ ಸಂದರ್ಭಗಳ ಪೈಕಿ ಮದುವೆ ಬಹುಮುಖ್ಯವಾದುದು. ಜೀವನದ ಪ್ರಮುಖ ಘಟ್ಟದಲ್ಲಿ ವಿಶೇಷವಾಗಿ ತಯಾರಾಗುವುದು ಸಹಜ. ಅಲಂಕಾರ ಮಾಡಿಕೊಳ್ಳುವುದು ಅದರ ಒಂದು ಭಾಗ. ವಧುವಿನಷ್ಟೇ ಪ್ರಾಮುಖ್ಯತೆ ವರನ ಅಲಂಕಾರಕ್ಕೂ ಇದೆ. ವಿಭಿನ್ನ ವಿನ್ಯಾಸಗಳ ಉಡುಗೆ ತೊಟ್ಟಾಗ ಅದಕ್ಕೊಪ್ಪುವ ಆಭರಣ ಧರಿಸುವುದು ಗಂಡಿಗೂ ಅನ್ವಯ. ಅದು ಈಗಿನ ಫ್ಯಾಷನ್ ಲೋಕದ ಟ್ರೆಂಡ್ ಕೂಡ ಹೌದು. ಹಾಗಿದ್ದರೆ ಮದುವೆ ಗಂಡು ಯಾವೆಲ್ಲ ರೀತಿಯ ಆಭರಣ ಧರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.
ಬ್ರೆಸ್‌ಲೆಟ್
ಮೊಣಕೈಗೆ ಧರಿಸುವ ಬ್ರೆಸ್‌ಲೆಟ್ ಗಂಡುಮಕ್ಕಳಿಗೆ ವಿಶೇಷ ಮೆರುಗು ನೀಡುತ್ತದೆ. ಅದರಲ್ಲೂ ಚೈನ್ ಬ್ರೆಸ್‌ಲೆಟ್, ಕಡಗ, ಬಳೆಯಂತಹ ಬ್ರೆಸ್‌ಲೆಟ್‌ಗಳು ಈಗ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಬಂಗಾರ, ಬೆಳ್ಳಿ, ವಜ್ರದ ಬ್ರೆಸ್‌ಲೆಟ್‌ಗಳು ಮದುಮಗ ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ.
ಪದಕ ಅಥವಾ ಬ್ರೂಚ್
ಕೋಟ್ ಅಥವಾ ಶೆರ್ವಾನಿಯ ಎಡಭಾಗದಲ್ಲಿ ಜೇಬಿನ ಬಳಿ ಧರಿಸುವ ಪದಕ ಅಥವಾ ಬ್ರೂಚ್‌ಗಳು ಸಖತ್ ಟ್ರೆಂಡಿಯಾಗಿ ಕಾಣಿಸುತ್ತವೆ. ಅದರಲ್ಲೂ ಹವಳ, ಮುತ್ತಿನ ಪದಕಕ್ಕೆ ಚೈನ್ ರೀತಿಯಲ್ಲಿ ಇರುವ ಬ್ರೂಚ್‌ಗಳು ಅಂದವಾಗಿ ಕಾಣಿಸುತ್ತವೆ. ಹೂವು, ಚಿಟ್ಟೆ, ವೃತ್ತಾಕಾರ ಹೀಗೆ ಹಲವು ಬಗೆಯ ವಿನ್ಯಾಸಗಳಲ್ಲಿ ದೊರೆಯುತ್ತವೆ.
ಮುತ್ತಿನ ಸರಗಳು
ಶೆರ್ವಾನಿಯ ಜತೆಗೆ ಮುತ್ತಿನ ಸರ ಧರಿಸಿದಾಗ ಆಕರ್ಷಕವಾಗಿ ಕಾಣುತ್ತದೆ. ಅದರಲ್ಲೂ ಕಲರ್ ಕಾಂಬಿನೇಷನ್ ಮಾಡಿಕೊಂಡು ಶೆರ್ವಾನಿಗೆ ಒಪ್ಪುವಂತಹ ಮುತ್ತಿನ ಸರವನ್ನು ಧರಿಸಿದರೆ ಮದುಮಗನ ಅಂದ ಇನ್ನಷ್ಟು ಹೆಚ್ಚಲಿದೆ. ಉದಾಹರಣೆ ಬಿಳಿಯ ಬಣ್ಣದ ಶೆರ್ವಾನಿ ಮೇಲೆ ಕೆಂಪು, ಹಸಿರು ಅಥವಾ ಗಾಢ ಗುಲಾಬಿ ಬಣ್ಣದ ಮುತ್ತುಗಳಿರುವ ಸರವನ್ನು ಧರಿಸಿದರೆ ಮೆರುಗು ಇಮ್ಮಡಿಯಾಗಲಿದೆ.
ಕಫ್‌ಲಿಂಕ್‌ಗಳು
ಶರ್ಟ್‌ನ ಬಟನ್, ತೋಳಿನ ಬಟನ್‌ಗಳನ್ನು ಬಿಗಿಯಾಗಿಸಲು ಬಳಸುವ ಈ ಕಪ್‌ಲಿಂಕ್‌ಗಳು ಉಡುಪನ್ನು ಭಿನ್ನವಾಗಿ ಕಾಣವಂತೆ ಮಾಡುತ್ತವೆ. ಗಾಜು, ಕಲ್ಲು, ಚರ್ಮ, ಲೋಹಗಳು ಸೇರಿದಂತೆ ವಿವಿಧ ವಸ್ತುಗಳಿಂದ ಕಫ್‌ಲಿಂಕ್‌ಗಳು ದೊರೆಯುತ್ತವೆ.
ಪಾಕೆಟ್ ಸ್ಕ್ವೇರ್
ಬ್ಲೇಜರ್ ಅಥವಾ ಕೋಟ್‌ಗಳ ಜೇಬಿಗೆ ಹಾಕಿಕೊಳ್ಳುವ ಪಾಕೆಟ್ ಸ್ಕ್ವೇರ್‌ಗಳು ಫಾರ್ಮಲ್ ಲುಕ್ ನೀಡುತ್ತವೆ. ರಿಸೆಪ್ಶನ್, ಫೋಟೊಶೂಟ್‌ಗಳಿಗೆ ಇವನ್ನು ಧರಿಸಬಹುದು. ಗಾಢ ಬಣ್ಣದ ಸೂಟ್‌ಗಳಿಗೆ ತಿಳಿ ಬಣ್ಣದ ಪಾಕೆಟ್ ಸ್ಕ್ವೇರ್‌ಗಳು ಅದ್ಭುತವಾಗಿ ಕಾಣಿಸುತ್ತವೆ. ಮದುವೆಯಲ್ಲಿ ತಿಳಿನೀಲಿ ಅಥವಾ ಕಂದುಬಣ್ಣದ ಪಾಕೆಟ್ ಸ್ಕ್ವೇರ್‌ಗಳು ಹೆಚ್ಚು ಸೂಕ್ತ ಎನ್ನುವುದು ಫ್ಯಾಷನ್ ತಜ್ಞರ ಮಾತು.
ಸರಗಳು
ಬಂಗಾರ ಅಥವಾ ಹವಳದ ಸರಗಳು ಮದುಮಗನಿಗೆ ಅಂದವನ್ನು ಹೆಚ್ಚಿಸುತ್ತವೆ. ಬಂಗಾರದ ಎರಡು ಎಳೆಯ ಸರ, ಬಿಳಿ ಅಥವಾ ಕೆಂಪು ಹವಳದ ಸರಗಳು ಶೆರ್ವಾನಿ ಮೇಲೆ ಧರಿಸಿದರೆ ಒಪ್ಪವಾಗಿ ಕಾಣುವಂತೆ ಮಾಡಬಲ್ಲದು. ಬಂಗಾರದ ಸರಗಳು ಪಂಚೆ-ಶಲ್ಯದಂತಹ ಉಡುಗೆಗೂ ಹೊಂದಾಣಿಕೆಯಾಗುತ್ತದೆ. ಹೀಗಾಗಿ ಮದುಮಗ ಯಾವ ರೀತಿಯ ಬಟ್ಟೆ ಧರಿಸುತ್ತಾನೆ ಎನ್ನುವುದರ ಆಧಾರದ ಮೇಲೆ ಸರಗಳನ್ನು ಆಯ್ಕೆ ಮಾಡುವುದು ಉತ್ತಮ.
ಶೂಗಳು
ಮದುಮಗ ಧರಿಸುವ ಉಡುಗೆಗಳಲ್ಲಿ ಸಣ್ಣ ಸಣ್ಣ ವಸ್ತುಗಳೂ ಒಂದೊಂದು ರೀತಿಯ ಲುಕ್ ನೀಡುತ್ತದೆ. ಅವುಗಳಲ್ಲಿ ಶೂಗಳು ಸೇರಿವೆ. ಉಡುಪಿಗೆ ತಕ್ಕ ಹಾಗೆ ಶೂಗಳನ್ನು ಧರಿಸುವುದು ಒಳ್ಳೆಯದು.
ಲೋಫರ್ಸ್‌ಗಳು, ಸ್ಯಾಂಡಲ್ಸ್‌ಗಳು ಹೆಚ್ಚು ಜನಪ್ರಿಯವಾಗಿವೆ. ಶೆರ್ವಾನಿ, ಸೂಟ್‌ಗಳಿಗೆ ಲೋಫರ್ಸ್‌ಗಳು ಉತ್ತಮವಾಗಿ ಹೊಂದಿಕೊಳ್ಳುತ್ತವೆ. ವಿವಿಧ ಬಣ್ಣ, ವಿನ್ಯಾಸದಲ್ಲಿ ಲೋಫೆರ್ಸ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ.
ವಾಚ್‌ಗಳು
ಸಮಯ ನೋಡಲು ಧರಿಸುವ ವಾಚ್‌ಗಳು ಟ್ರೆಂಡಿಯಾಗಿಯೂ ಕಾಣಿಸುತ್ತವೆ. ಹೀಗಾಗಿ ಮದುಮಗನಿಗೆ ವಾಚ್‌ಗಳು ಹೊಸ ಲುಕ್ ನೀಡುವುದರಲ್ಲಿ ಎರಡು ಮಾತಿಲ್ಲ. ಚೈನ್‌ವಾಚ್, ಬೆಲ್ಟ್ ವಾಚ್, ಸ್ಮಾರ್ಟ್ ವಾಚ್ ಹೀಗೆ ತರಹೇವಾರಿ ವಾಚ್‌ಗಳು ಹುಡುಗರ ಕೈಗಳಿಗೆ ಅಂದವಾಗಿ ಕಾಣುತ್ತವೆ.