ಮೇಕಪ್ ಸೆಟಪ್ ವರನಿಗೆ ಗೆಟಪ್ / ಮದುಮಗನ ಮೆಕಪ್
ಮದುವೆಯೆಂದರೆ ಚಿತ್ತಭಿತ್ತಿಯಲ್ಲಿ ಮಡಚಿಟ್ಟ ನೂರೆಂಟು ಕನಸುಗಳಿಗೆ ರೆಕ್ಕೆ ಕಟ್ಟುವ ಕಾಲ. ಎರಡು ಜೀವಗಳು ಒಂದಾಗಿ ಬಾಳ ಬಂಡಿಯ ನೊಗ ಹಿಡಿಯಲು ತವಕಿಸುವ ಕ್ಷಣ, ಭಾವಗಳು ಶ್ರುತಿಗೊಂಡು ಹಾಡಾಗುವ ಹೊತ್ತು. ಈ ಹೃದ್ಯ ಗಳಿಗೆಗೆ ಅಣಿಯಾಗುವುದೆಂದರೆ ವಧು– ವರರಿಬ್ಬರಿಗೂ ಪುಳಕವಾಗದಿರಲು ಸಾಧ್ಯವೇ?
ಶೃಂಗಾರವೆಂದರೆ ಅದು ವಧುವಿಗಷ್ಟೇ ಸೀಮಿತವಾದ ಕಾಲವೊಂದಿತ್ತು. ಆದರೆ, ಈಗ ಟ್ರೆಂಡ್ ಬದಲಾಗಿದೆ. ಸ್ವರ್ಗವೇ ಧರೆಗಿಳಿದು ಬಂದಂತೆ ಸೃಷ್ಟಿಸುವ ವೈಭವದ ಮಂಟಪದಲ್ಲಿ ವಧುವಿನಷ್ಟೇ ವರನೂ ಮಿಂಚಬೇಕು, ಮಸೂರದಲ್ಲಿ ಸೆರೆಯಾಗುವ ಪಟಗಳು ಕಣ್ಣರಳಿಸಿ ನೋಡುವಂತಿರಬೇಕು, ಚಿತ್ತಪಟಲದಲ್ಲಿ ಅಚ್ಚೊತ್ತಿ ನಿಲ್ಲಬೇಕು ಎಂದು ಹಂಬಲಿಸುವ ಮದುಮಗಳು– ಮದುಮಗ ಅದಕ್ಕಾಗಿ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಾರೆ. ಹೀಗಾಗಿ, ಬ್ರೈಡಲ್ ಮೇಕಪ್‌ನಷ್ಟೇ ಬ್ರೈಡ್‌ಗ್ರೂಮ್ ಮೇಕಪ್ ಕೂಡ ಜನಪ್ರಿಯವಾಗಿದೆ.
‘ಮೊದಲೆಲ್ಲ ಮದುವೆಯಲ್ಲಿ ವಧುವಿಗೆ ಮಾತ್ರ ಮೇಕಪ್ ಮಾಡುವ ಕ್ರಮವಿತ್ತು. ಮದುವಣಗಿತ್ತಿ ಮೇಕಪ್‌ನಲ್ಲಿ ಗೊಂಬೆಯಂತೆ ಕಂಗೊಳಿಸಿದರೆ, ಮೇಕಪ್ ಇಲ್ಲದ ವರ ಸಪ್ಪಗೆ ಕಾಣುತ್ತಿದ್ದ, ಕಣ್ಣ ಸುತ್ತಲಿನ ಕಪ್ಪು ವೃತ್ತ, ಕೆನ್ನೆ ಮೇಲಿನ ಕಲೆಗಳು ಮದುವೆ ಫೋಟೊಗಳಲ್ಲಿ ಗಾಢವಾಗಿ ಮೂಡುತ್ತಿದ್ದವು. ಮಧುರ ಕ್ಷಣಗಳ ನೆನಪಿಗಾಗಿ ಕಾಪಿಟ್ಟುಕೊಳ್ಳುವ ಅಲ್ಬಮ್‌ಗಳಲ್ಲೂ ಇವೇ ಫೋಟೊಗಳು ಇರುತ್ತಿದ್ದವು. ಈಗಿನ ಹುಡುಗರಿಗೆ ಮೇಕಪ್‌ನ ಮಹತ್ವದ ಅರಿವಾಗಿದೆ. ಅದರಲ್ಲೂ ಫೋಟೊ ಆಲ್ಬಮ್‌ಗಳು, ಫೋಟೊಶೂಟ್ ಟ್ರೆಂಡಿಂಗ್ ಆದ ಮೇಲೆ ಮದುವೆಯಾಗುವ ಯುವಕರಲ್ಲಿ ಸೌಂದರ್ಯ ಪ್ರಜ್ಞೆ ಜಾಗೃತಗೊಂಡಿದೆ. ಈ ಶ್ರೇಯಸ್ಸು ಎಚ್‌ಡಿ ಕ್ಯಾಮೆರಾಗಳಿಗೆ ಸಲ್ಲಬೇಕು. ಇತ್ತೀಚಿನ ವರ್ಷಗಳಲ್ಲಿ ಮದುವೆ ಮುಂಚೆ ಪಾರ್ಲರ್‌ಗೆ ಬರುವ ಯುವಕರ ಸಂಖ್ಯೆ ಹೆಚ್ಚಾಗಿದೆ’ ಎನ್ನುತ್ತಾರೆ ಮೈಸೂರಿನ ಕಾಸ್ಮೋಸ್ ಬ್ಯೂಟಿ ಪಾರ್ಲರ್‌ನ ಉಮಾ ಜಾಧವ್.
‘ಮದುವೆಯಾಗುವ ಹುಡುಗರು ವಾರದ ಮುಂಚೆ ಪಾರ್ಲರ್‌ಗೆ ಬಂದು ಟ್ರಯಲ್ ತಗೋತಾರೆ. ಹುಡುಗಿಯರಂತೆ ಹುಡುಗರಿಗೂ ಲಿಪ್ ಸ್ಟಿಕ್, ಬ್ಲಷ್ ಬಳಿಯುತ್ತಾರೆ ಎಂದು ಕೆಲವರಲ್ಲಿ ತಪ್ಪು ಕಲ್ಪನೆಗಳಿವೆ. ಸ್ತ್ರೀ ಮತ್ತು ಪುರುಷರ ಮೇಕಪ್ ಎರಡೂ ಸಂಪೂರ್ಣ ಭಿನ್ನವಾಗಿವೆ. ಟ್ರಯಲ್ ಗೆ ಬಂದರೆ ಸ್ತ್ರೀ ಹಾಗೂ ಪುರುಷರ ಮೇಕಪ್‌ನಲ್ಲಿರುವ ಭಿನ್ನತೆಯ ಅರಿವು ಮದುವೆಗೆ ಸಿದ್ಧನಾಗುವ ಯುವಕನಲ್ಲಿ ವಿಶ್ವಾಸ ಮೂಡಿಸುತ್ತದೆ. ಲಿಕ್ವಿಡ್ ಮೇಕಪ್‌ಗಳು ಚರ್ಮಕ್ಕೆ ತಾಜಾತನ ಕೊಡುತ್ತವೆ. ಕನ್ನಡಿಯ ಹೊಳಪು ನಾಚುವಷ್ಟು ನಾಜೂಕಾಗಿ ಮುಖದ ಚರ್ಮ ಕಂಗೊಳಿಸುತ್ತದೆ. ಜೊತೆಗೆ, ಸ್ಕಿನ್ ಕೇರ್, ಫೇಷಿಯಲ್, ಕಪ್ಪು ಕಲೆಗಳನ್ನು ತೆಗೆಯುವ ಥೆರಪಿಗಳು ಸಹ ಸಹಕಾರಿಯಾಗಬಲ್ಲವು. ಆಯ್ಲಿ ಮೇಕಪ್, ನ್ಯಾಚುರಲ್, ಡ್ರೈ ಸ್ಕಿನ್, ಫೋಟೊಜೆನಿಕ್ ಮೇಕಪ್ ಹೀಗೆ ನಾನಾ ತರಹದ ಮೇಕಪ್‌ಗಳು, ಹೇರ್‌ಸ್ಟೈಲ್, ಗಡ್ಡಧಾರಿಯಾಗಿದ್ದರೆ ಅದನ್ನೂ ವಿನ್ಯಾಸಗೊಳಿಸುತ್ತೇವೆ’ ಎಂದು 25 ವರ್ಷಗಳಿಂದ ಮೇಕಪ್‌ನಲ್ಲಿ ಛಾಪು ಮೂಡಿಸಿರುವ ಅವರು ಹೇಳುತ್ತಾರೆ.
ಸದ್ಯ ಎಚ್‌ಡಿ (ಹೈ ಡೆಫಿನೇಷನ್) ಮೇಕಪ್, ಏರ್‌ಬ್ರಷ್ ಮೇಕಪ್ ಟ್ರೆಂಡಿಂಗ್‌ನಲ್ಲಿವೆ. ಬೆವರ ಹನಿಗಳು ಮೂಡಿದರೂ, ಸೌಂದರ್ಯ ಕೆಡದಂತೆ ತಡೆಯುವ ಶಕ್ತಿ ಈ ಮೇಕಪ್‌ಗೆ ಇದೆ ಎನ್ನುತ್ತಾರೆ ಉಮಾ.
ಸೂಟು–ಬೂಟು: ಉತ್ತರ ಕರ್ನಾಟಕ ಭಾಗದಲ್ಲಿ ಮದುವೆಯ ಗಂಡು ಹೆಚ್ಚಾಗಿ ಸೂಟು–ಬೂಟು ಧರಿಸುತ್ತಾರೆ. ಕಾರ್ಪೊರೇಟ್ ಮದುವೆಗಳಲ್ಲಿ ಶೇರ್ವಾನಿ ಹೆಚ್ಚು ಪ್ರಚಲಿತ. ಈ ನಡುವೆ ಗ್ರಾಮೀಣ ಪ್ರದೇಶದಲ್ಲಿ ಈಗಲೂ ಧಾರೆಯ ವೇಳೆ ವರ ಪಂಚೆ, ಶರ್ಟು, ಶಲ್ಯ ಧರಿಸುವ ಸಂಪ್ರದಾಯವಿದೆ.
ಹಳದಿ, ಮೆಹಂದಿ ಮೊದಲೆಲ್ಲ ಶಾಸ್ತ್ರವಾಗಿ ನಡೆಯುತ್ತಿದ್ದವು. ಈಗ ಅವು ಸಂಭ್ರಮವಾಗಿ ಪರಿವರ್ತನೆಯಾಗಿವೆ. ವಧುವಿನ ಮನೆಯಷ್ಟೇ ಅದ್ಧೂರಿಯಾಗಿ ವರನ ಮನೆಯಲ್ಲಿ ನಡೆಯುವ ಹಳದಿ, ಮೆಹಂದಿ ಶಾಸ್ತ್ರಗಳು ಖುಷಿಯ ಬುಗ್ಗೆಯನ್ನೇ ಚಿಮ್ಮಿಸುತ್ತವೆ. ವರ ಧರಿಸುವ ಹಳದಿ ಕುರ್ತಾ, ಸಹೋದರಿಯರ ಲೆಹಂಗಾ, ಪುಟಾಣಿಗಳ ಫ್ರಾಕ್, ಅಮ್ಮಂದಿರ ಸೀರೆ ಹೀಗೆ ಈ ಹಳದಿ ಲೋಕವು ಡ್ಯಾಫ್‌ಡಿಲ್ ಹೂದೂಟದ ಸುಖವುಣಿಸುತ್ತದೆ.
ಹಳದಿ ಶಾಸ್ತ್ರ ಮುಗಿಸಿದ ಮೇಲೆ ಪಾರ್ಲರ್ ಹೋಗಿ ಫೇಷಿಯಲ್ ಹಾಗೂ ಸ್ಕಿನ್ ಕೇರ್ ಮಾಡಿಸಿಕೊಂಡು ಬಂದೆ. ಮದುವೆಯ ಲೈಟಾಗಿ ಮೇಕಪ್ ಮಾಡಿಕೊಂಡಿದ್ದು, ಫೋಟೊಗಳು ಸುಂದರವಾಗಿ ಬರಲು ಸಹಕಾರಿಯಾಯಿತು. ನಮ್ಮಲ್ಲಿ ವರನಿಗೆ ಮೇಕಪ್ ಮಾಡುವ ಕ್ರಮ ಈ ಮುಂಚೆ ಇರಲಿಲ್ಲ. ಈಗೆಲ್ಲ ಟ್ರೆಂಡ್ ಸೃಷ್ಟಿಯ ಕಾಲ. ಮದುವೆಯಾಗುವ ಹುಡುಗಿಯೂ ಅದನ್ನೇ ಇಷ್ಟಪಡುವಾಗ ಅದನ್ನು ತಿರಸ್ಕರಿಸಲೂ ಆಗದು ಎಂದರು ಇತ್ತೀಚೆಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿರುವ ಮಂಗಳೂರಿನ ಅನುಪ್‌ರಾಜ್.
ಮಧ್ಯಮ ವರ್ಗದವರಿಗೆ ಮದುವೆ ವೆಚ್ಚದ ಜೊತೆಗೆ ಬ್ರ್ಯಾಂಡೆಡ್ ಉಡುಗೆ–ತೊಡುಗೆ ಖರೀದಿಸುವುದು ಕೊಂಚ ಹೊರೆಯೇ. ಹೀಗಾಗಿ, ಅನೇಕರು ಬಾಡಿಗೆಗೆ ಸಿಗುವ ವಸ್ತ್ರಾಭರಣಗಳಿಗೆ ಮೊರೆ ಹೋಗುತ್ತಾರೆ ಎನ್ನುತ್ತಾರೆ ಮಂಗಳೂರಿನ ಸತ್ಯವತಿ.
‘ಬ್ಯೂಟಿ ಅನ್ನೋದು ಹುಡುಗಿಯರಿಗೆ ಮಾತ್ರ ಸೀಮಿತವಾ? ಬಾಳಸಂಗಾತಿ ಮಾಡರ್ನ್ ಇರಬೇಕು, ವಧುವಿಗೆ ಪೈಪೋಟಿ ನೀಡುವಂತೆ ರೆಡಿಯಾಗಬೇಕು ಎಂದು ಬಯಸುವುದು ತಪ್ಪಾ? ಕೊರಿಯನ್ ವೆಬ್ ಸೀರಿಸ್‌ಗಳು ನವ ಯುವತಿಯರಲ್ಲಿ ನೂರೆಂಟು ನಿರೀಕ್ಷೆಗಳನ್ನು ಬಿತ್ತಿವೆ. ವಿಚಾರಗಳಷ್ಟೇ ಅಲ್ಲ, ಎಲ್ಲ ಕ್ರಿಯೆಯಲ್ಲೂ ನಾವಿಬ್ಬರೂ ಸಮಾನರಾಗಬೇಕು ಎಂದು ನವ ಯುವತಿಯರು ಕನಸು ಹೆಣೆಯುತ್ತಾರೆ. ಸಮಾನತೆಯ ಗಟ್ಟಿ ಧ್ವನಿಗೆ ಸಮಾಜವೇ ಬಲತುಂಬಿರುವಾಗ ನಾವು ಹೀಗೆ ನಿರೀಕ್ಷಿಸುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸುತ್ತಾರೆ ಎಂಜಿನಿಯರಿಂಗ್ ಓದುತ್ತಿರುವ ಯುವತಿ ಶ್ರಾವ್ಯಾ ಶೆಟ್ಟಿ.