ಸೋ ಎನ್ನಿರೆ... ಸೋಬಾನ ಎನ್ನಿರೆ...!

ಸೋ ಎನ್ನಿರೆ... ಸೋಬಾನ ಎನ್ನಿರೆ...!

Published on

’ಶೋಭಾನವೆನ್ನೀರೆ ಸುರರೊಳು ಸುಭಗನಿಗೆ

ಶೋಭಾನವೆನ್ನಿ ಸುಗುಣನಿಗೆ

ಶೋಭಾನವೆನ್ನೀರೆ ತ್ರಿವಿಕ್ರಮರಾಯಗೆ

ಶೋಭಾನವೆನ್ನಿ ಸುರಪ್ರಿಯಗೆ...’

ಶ್ರೀಮದ್‌ ವಾದಿರಾಜರು ಬರೆದ ಈ ಲಕ್ಷ್ಮೀ ಸೋಬಾನೆ ಹಾಡು ಮದುವೆ ಮನೆಗಳಲ್ಲಿ ಕೇಳಿದಾಗ ಮನಸ್ಸಿಗೆ ಆನಂದವಾಗುತ್ತದೆ. ಇದನ್ನು ಹಾಡಿದವರಿಗೆ, ಕೇಳಿದವರಿಗೆ ಲಕ್ಷ್ಮಿ ಸರ್ವಾಭಿಷ್ಟವನ್ನು ಕರುಣಿಸುತ್ತಾಳೆ ಎಂಬುದು ಹಲವರ ಧಾರ್ಮಿಕ ನಂಬಿಕೆ. 'ಲಕ್ಷೀ ಸೋಬಾನೆ' ಎಲ್ಲರೂ ಒಪ್ಪುವ, ಲಕ್ಷ್ಮೀಯನ್ನು ಒಲಿಸಿಕೊಡುವ ಕೃತಿಯಾಗಿದ್ದು, ಇದನ್ನು ಮದುವೆ ಮನೆಯಲ್ಲಿ ಹಾಡಿದರೆ ಮದುಮಕ್ಕಳಿಗೆ ಶುಭವಾಗುತ್ತದೆ, ದಾಂಪತ್ಯ ಜೀವನ ಸುಖಮಯವಾಗಿರುವಂತೆ ಎಂಬುದು ಆಸ್ತಿಕರ ಭಾವನೆ.

ಮದುವೆ ಮನೆ ಎಂದರೆ ಅಲ್ಲಿ ಸಂಭ್ರಮ, ಸಡಗರ ಇರುತ್ತದೆ. ಸಂತೋಷದ ಹೊನಲು ಹರಿಯುತ್ತದೆ, ಭಾವನೆಗಳ ಹಿತವಾದ ಮಿಡಿತವಿರುತ್ತದೆ. ಇಷ್ಟೆಲ್ಲ ಭಾವಲಹರಿಯ ಮಧ್ಯೆ ಸೋಬಾನೆ ಹಾಡುಗಳ ನಾದ ಲಹರಿಯೂ ಸೇರಿದಂತೆ ಅಲ್ಲಿ ಅದ್ಭುತ ರಸಪಾಕ ಸೃಷ್ಟಿಯಾಗುತ್ತದೆ.

‘ಲಕ್ಷ್ಮೀ ಸೋಬಾನೆ ಎಂಬುದು ವಾದಿರಾಜರ ಸಮಾಜಮುಖಿ ಕೃತಿ. ಸಂಗೀತ ಎಷ್ಟು ಶಕ್ತಿಯುತವಾದದ್ದು ಎಂಬುದನ್ನು ಈ ಕೃತಿಗಳು ಸಾರುತ್ತವೆ. ಮದುವೆ ಸಾಂಗವಾಗಿ ಸಾಗಲಿ ಎಂದು ಮದುವೆ ಮನೆಗಳಲ್ಲಿ ಇದನ್ನು ಹಾಡುವುದು ವಾಡಿಕೆ. ಇದನ್ನು ಹಾಡಿದವರಿಗೆ, ಕೇಳಿದವರಿಗೆ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ, ಶುಭ ಪ್ರಾಪ್ತಿಯಾಗುತ್ತದೆ ಎಂಬುದು ವಾದಿರಾಜರ ನಂಬಿಕೆ. ವಾದಿರಾಜರು ಬರೆದ ಲಕ್ಷ್ಮೀ ಸೋಬಾನೆಯಲ್ಲಿ ಒಟ್ಟು 110 ಪದ್ಯಗಳಿವೆ. ಇದನ್ನು ಶಾಸ್ತ್ರೀಯವಾಗಿಯೂ ಹಾಡಬಹುದು’ ಎಂದು ಹೇಳುತ್ತಾರೆ ಕರ್ನಾಟಕ ಸಂಗೀತದ ಮೇರು ಕಲಾವಿದ ವಿದ್ವಾನ್ ಆರ್.ಕೆ. ಪದ್ಮನಾಭ.

‘ವಾದಿರಾಜರು ಬರೆದ ಲಕ್ಷ್ಮೀ ಸೋಬಾನಕ್ಕೆ ಒಂದು ನಿರ್ದಿಷ್ಟ ಶಾಸ್ತ್ರೀಯ ಚೌಕಟ್ಟು ಇರಲಿಲ್ಲ. ಹೀಗಾಗಿ ಈ ಪದ್ಯಗಳನ್ನು ಸ್ವಲ್ಪ ಎಡಿಟ್ ಮಾಡಿ 45 ಪದ್ಯಗಳನ್ನು ರಾಗಮಾಲಿಕಾ ರೂಪದಲ್ಲಿ ಮಾರ್ಪಡಿಸಿ ಎಲ್ಲ ಮದುವೆ ಸಮಾರಂಭಗಳಲ್ಲಿ ಸಾಮೂಹಿಕವಾಗಿ ಹಾಡುತ್ತೇವೆ. ಮರಾಠಿಗರು, ಲಿಂಗಾಯಿತರು, ಒಕ್ಕಲಿಗರು ಸೇರಿದಂತೆ ಎಲ್ಲ ಸಮುದಾಯದವರ ಮದುವೆಗಳಲ್ಲಿ ಹಾಡಿದ್ದೇವೆ. ಇದನ್ನು ಗುಂಪಿನಲ್ಲಿ ಹಾಡಿದರೇ ಸೋಬಾನೆಗೆ ತೂಕ ಇರೋದು, ಕೇಳುಗರಿಗೆ ಮುದ ನೀಡುವುದು’ ಎಂದು ವಿವರ ನೀಡುತ್ತಾರೆ ಈ ಸಂಗೀತ ವಿದ್ವಾಂಸರು.

ಜನಪದದಲ್ಲೂ ಸೋಬಾನೆಯ ವೈಭವ!

PeopleImages

‘ಆರುತಿ ಹಿಡಲ್ಯಾಕ ಸೂರ್ಯ ಚಂದ್ರನ ಮಡದಿ ಮಾಡತ್ತಾಳ ಮಗನ ಮದುವೀಯ...

ಸೋ ಎನ್ನಿರೆ ಸೋಬಾನ ಎನ್ನಿರೆ...

ಎಂದು ಕೋರಸ್‌ನಲ್ಲಿ ಹಾಡಿದಾಗ ಶುಭ ಸಮಾರಂಭ ಮತ್ತಷ್ಟು ಕಳೆಕಟ್ಟುತ್ತದೆ. ಮದುವೆ, ಸೀಮಂತ, ನಿಶ್ಚಿತಾರ್ಥ, ಒಳಕಲ್ಲು ಪೂಜೆ, ಹಂದರಗಂಬದ ಪೂಜೆ, ನಾಮಕರಣ ಹೀಗೆ... ಹಲವು ಸಾಂಪ್ರದಾಯಿಕ ಸಂದರ್ಭಗಳಲ್ಲಿ ಜಾನಪದ ಸೋಬಾನೆ ಹಾಡುಗಳು ಹೆಂಗಳೆಯರ ಕಂಠದಲ್ಲಿ ಸುಶ್ರಾವ್ಯವಾಗಿ ಹೊಮ್ಮುತ್ತದೆ. ಸಂಸ್ಕೃತಿ, ಆಚರಣೆಗಳ ಸಮಾಗಮವಾಗುತ್ತದೆ. ಹೀಗಾಗಿ ಹಿಂದಿನವರು ಸೋಬಾನೆ ಹಾಡುಗಳನ್ನು ಅನೇಕ ಸಂದರ್ಭಗಳಲ್ಲಿ ಹಾಡುತ್ತಲೇ ಬಂದಿದ್ದಾರೆ. ಅದು, ಮದುವೆಯಲ್ಲಿ ಬೀಗರನ್ನು ಬರಮಾಡಿಕೊಳ್ಳುವುದರಿಂದ ಹಿಡಿದು, ಅರಿಶಿನ ಶಾಸ್ತ್ರ, ಮಾಂಗಲ್ಯಧಾರಣೆ ಸೇರಿದಂತೆ ಹಂತ ಹಂತವಾಗಿ ಸರಣಿಯಾಗಿ ಹಾಡುಗಳನ್ನು ಹಾಡುವುದು ರೂಢಿಯಾಗಿಬಿಟ್ಟಿದೆ.

ಜನಪದ ಸಂಸ್ಕೃತಿಯಲ್ಲಿ ಸೋಬಾನೆ ಪದಕ್ಕೆ ವಿಶಿಷ್ಟ ಸ್ಥಾನವಿದೆ. ಕೆಲವು ಹಳ್ಳಿಗಳಲ್ಲಿ ಇಂದಿಗೂ ಸೋಬಾನೆ ಹಾಡುವವರಿದ್ದು, ಈ ಹಾಡುಗಳಿಲ್ಲದಿದ್ದರೆ ಮದುವೆಯೇ ಅಪೂರ್ಣ ಎನ್ನುವಷ್ಟು ಹಾಸುಹೊಕ್ಕಾಗಿದೆ. ಮದುವೆ, ಬಳೆಶಾಸ್ತ್ರ, ತೊಟ್ಟಿಲು ಶಾಸ್ತ್ರ ಮುಂತಾದ ಸಂದರ್ಭಗಳಲ್ಲಿ ಹಾಡುವ ಸೋಬಾನೆ ಪದಗಳು ಕೇಳುಗರ ಮನತಣಿಸುತ್ತವೆ.

ಕಾಲದ ಓಘದಲ್ಲಿ ಕೆಲಕಾಲ ಮರೆಯಾಗಿದ್ದ ಸೋಬಾನೆ ಹಾಡುಗಳು ಸಾಂಪ್ರದಾಯಿಕ ನೆಲೆಯಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ. ನಮ್ಮ ಹಿರಿಯರು ಹಾಕಿಕೊಟ್ಟ ಸಾಂಸ್ಕೃತಿಕ ವಿಚಾರಗಳು ಇಂದಿನ ಹೈಟೆಕ್ ಯುಗದಲ್ಲಿಯೂ ಬಳಕೆಯಲ್ಲಿ ಇರುವುದು, ನಾವಿನ್ನೂ ನಮ್ಮತನವನ್ನು ಮರೆತಿಲ್ಲ ಎಂಬುದಕ್ಕೆ ಪುರಾವೆಯಾಗಿಯೂ ಇದೆ ಎನ್ನಬಹುದು. 

Maduve Habba
www.prajavani.net