ವಾಚು
ಮದುವೆ ದಿರಿಸಿನಲ್ಲಿ ವಾಚ್ ಕೂಡ ಪ್ರಮುಖ ಅಂಗ. ಮದುಮಗನ ಸೌಂದರ್ಯ ಹೆಚ್ಚಿಸುವಲ್ಲಿ ವಾಚ್‌ನ ಪಾತ್ರ ಹಿರಿದು. ವಾಚ್ ವ್ಯಕ್ತಿತ್ವ ಹಾಗೂ ಆತ್ಮವಿಶ್ವಾದ ಪ್ರತೀಕವೂ ಹೌದು. ಪೋಷಾಕಿಗೆ ತಕ್ಕಂತೆ ವಾಚ್ ಧರಿಸುವುದೂ ಕೂಡ ಮುಖ್ಯ. ಅದಕ್ಕೆ ತಕ್ಕಂತೆ ವಾಚ್‌ಗಳ ಆಯ್ಕೆಯೂ ಮಾರುಕಟ್ಟೆಯಲ್ಲಿ ಹೇಳವಾಗಿ ಸಿಗುತ್ತದೆ. ಕಸ್ಟಮೈಸ್ ಆಯ್ಕೆ ಕಡಿಮೆ ಇದ್ದರೂ, ಅಂತಸ್ತಿಗೆ ತಕ್ಕಂಥ ಥರಹೇವಾರಿ ವಾಚುಗಳು ಲಭ್ಯ. ಹಳೆಯ ಮಾದರಿಯ ವಾಚುಗಳು ಮತ್ತೆ ಮುನ್ನಲೆಗೆ ಬಂದಿದ್ದು, ಜನ ಅವುಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಕಪಲ್ ವಾಚುಗಳು ಇದ್ದರೂ ಅವುಗಳಲ್ಲಿ ಆಯ್ಕೆ, ವಿನ್ಯಾಸದ ಕೊರತೆ ಇರುವುದರಿಂದ ಅವುಗಳ ಬಗ್ಗೆ ಜನರ ಒಲವು ಅಷ್ಟಿಲ್ಲ ಎನ್ನುವುದು ಗಾಂಧಿನಗರದ ಸುಖಸಾಗರ ಮಾಲ್‌ನಲ್ಲಿನ ಕೆಲ ವ್ಯಾಪಾರಿಗಳ ಅಭಿಪ್ರಾಯ. ಮದುವೆ ಖರೀದಿಗೆ ಜನ ಹೆಚ್ಚಾಗಿ ಲಕ್ಸುರಿ ವಾಚುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಅವರ ಅನುಭವದ ಮಾತು.
ಈಗ ಹೆಚ್ಚು ಟ್ರೆಂಡ್‌ನಲ್ಲಿರುವ ವಾಚುಗಳು ಇಲ್ಲಿವೆ
ಅನಲಾಗ್ ವಾಚ್
ಆರಂಭಿಕ ಹಂತದ ವಾಚು ಇದು. ಸಿಂಪಲ್ ಡಿಸೈನ್ ಪ್ರಿಯರಿಗೆ ಇದು ಸೂಕ್ತ. ದರ ಕೂಡ ಕಡಿಮೆ. ವಿವಿಧ ವಿನ್ಯಾಸಗಳಲ್ಲಿ ಇದು ಲಭ್ಯ. ಮದುವೆ ಪೋಷಾಕಿಗೆ ಸೂಕ್ತವಾಗುವಂಥ ಬಣ್ಣಗಳಲ್ಲಿ ಲಭ್ಯ. ಫಾರ್ಮಲ್ಸ್ ಉಡುಪಿಗೆ ಈ ವಾಚುಗಳು ಸೂಕ್ತ ಎನಿಸುತ್ತವೆ. ಇವುಗಳಲ್ಲಿ ಲಕ್ಸುರಿ ವಾಚುಗಳೂ ಸಿಗುತ್ತವೆ. ಮದುವೆಗೆ ಬಂಗಾರ ಹಾಗೂ ಬೆಳ್ಳಿ ಬಣ್ಣದ ವಾಚುಗಳಿಗೆ ಹೆಚ್ಚು ಬೇಡಿಕೆ. ಚಿನ್ನದಿಂದ ಹಾಗೂ ಬೆಳ್ಳಿಯಿಂದ ಮಾಡಿದ ವಾಚುಗಳೂ ಸಿಗುತ್ತವೆ.
ಡಿಜಿಟಲ್ ವಾಚ್
ಅಂಕೆಗಳಲ್ಲಿ ಸಮಯ ಸೂಚಿಸುವ ಈ ವಾಚುಗಳನ್ನೂ ಕೂಡ ಕೆಲವು ವರರು ಇಷ್ಟಪಡುತ್ತಾರೆ. ಈ ವಿಧದ ವಾಚುಗಳಲ್ಲಿ ಈಗ ಇರುವ ಬಹು ವಿನ್ಯಾಸಗಳು ಕೂಡ ಗಮನ ಸೆಳೆಯುತ್ತದೆ. ಫಾರ್ಮಲ್ಸ್ ಹಾಗೂ ಕ್ಯಾಶುವಲ್ಸ್ ಉಡುಪಿಗೆ ಈ ವಿಧದ ವಾಚು ಸೂಕ್ತ. ಬ್ರ್ಯಾಂಡ್‌ಗೆ ಅನುಗುಣವಾಗಿ ಇದರ ದರವೂ ಬದಲಾಗುತ್ತದೆ. ಅನಲಾಗ್ ವಾಚ್‌ಗೆ ಹೋಲಿಸಿದರೆ ಮದುವೆಯ ಅಲಂಕಾರಕ್ಕೆ ಇದಕ್ಕೆ ಬೇಡಿಕೆ ಕಡಿಮೆ ಎನ್ನುತ್ತಾರೆ ಬೆಂಗಳೂರಿನ ಗಾಂಧಿನಗರದ ವ್ಯಾಪಾರಿ ಜಲಾಲ್.
ಸ್ಮಾರ್ಟ್ ವಾಚ್
ಇದು ಈಗಿನ ತಲೆಮಾರಿನ ಟ್ರೆಂಡ್. ವಾಚನ್ನು ಮೊಬೈಲ್ ರೀತಿಯೇ ಬಳಸಬಹುದಾಗಿದ್ದರಿಂದಲೂ, ದೈನಂದಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವುದರಿಂದ ಈಗಿನವರಿಗೆ ಈ ವಾಚ್ ಅಚ್ಚುಮೆಚ್ಚು. ಮದುವೆಗೂ ಈ ವಾಚ್ ಬಳಸುವವರಿದ್ದಾರೆ. ಸೂಟ್ಸ್, ಫಾರ್ಮಲ್ಸ್ ಹಾಗೂ ಕ್ಯಾಶುವಲ್ ಧಿರಿಸಿಗೆ ಇದು ಹೆಚ್ಚು ಹೊಂದುತ್ತದೆ. ಬೆಲ್ಟ್ ಹಾಗೂ ಚೈನ್ ವಾಚುಗಳು ಇವೆಯಾದರೂ, ಬೆಲ್ಟ್ ವಾಚ್‌ಗಳಿಗೆ ಹೆಚ್ಚಿನ ಬೇಡಿಕೆ ಎನ್ನುವುದು ಕಮರ್ಷಿಯಲ್ ಸ್ಟ್ರೀಟ್‌ನ ವ್ಯಾಪಾರಿ ಮತೀನ್ ಅವರ ಅನುಭವದ ಮಾತುಗಳು.
ಸ್ಪೋರ್ಟ್ಸ್ ವಾಚ್
ದೊಡ್ಡ ಡಯಲ್, ಚೆಂದದ ಲುಕ್ ಇರುವ ಈ ವಾಚು ಹೊಸ ತಲೆಮಾರಿನವರ ಅಚ್ಚುಮೆಚ್ಚಿನ ವಾಚೂ ಹೌದು. ಅನಲಾಗ್, ಡಿಜಿಟಲ್ ಮಿಶ್ರಣ ಇರುವುದರಿಂದ ಹೆಚ್ಚಿನ ಯುವಕರಿಗೆ ಈ ವಾಚ್ ಪಸಂದು. ಮದುವೆಗೂ ಇದನ್ನು ಬಳಸುತ್ತಾರೆ. ಸೂಟ್ ಹಾಗೂ ಕೋಟ್ ಪೋಷಾಕುಗಳಿಗೆ ಈ ವಾಚು ಸೂಕ್ತ.
ಸ್ವಿಸ್ ವಾಚ್
ಶೆರ್ವಾನಿ, ಸೂಟ್ಸ್ ಧಿರಿಸಿಗೆ ಚೆನ್ನಾಗಿ ಒಪ್ಪುವ ವಾಚು ಇದು. ಬೆಲ್ಟ್ ಹಾಗೂ ಚೈನ್‌ನಲ್ಲಿಯೂ ಲಭ್ಯವಿದೆ. ಅವರವರ ಇಷ್ಟಾನುಸಾರ ಆಯ್ಕೆಯಲ್ಲಿ ವ್ಯತ್ಯಾಸವುಂಟಾಗುತ್ತದೆ. ಇದಕ್ಕೆ ದರ ಹೆಚ್ಚು. ಸ್ಟೈಲಿಶ್ ವಾಚುಗಳಿವು. ದುಂಡಗಿನ ಹಾಗೂ ಚೌಕಾಕಾರದಲ್ಲಿ ಕೂಡ ಲಭ್ಯ ಇರುವ ಈ ವಾಚ್‌ನಲ್ಲಿ ಹೇರಳ ಆಯ್ಕೆಗಳು ಲಭ್ಯ.
ಸೆರಾಮಿಕ್ ವಾಚ್
ಲೈಟ್ ವೇಟ್ ಹಾಗೂ ಆಕರ್ಷಕ ವಿನ್ಯಾಸ ಇದರ ಹೆಚ್ಚುಗಾರಿಕೆ. ಸೂಟ್ಸ್, ಕ್ಯಾಶುವಲ್ಸ್, ಫಾರ್ಮಲ್ಸ್‌ಗೆ ಇದು ಹೆಚ್ಚು ಹೊಂದುತ್ತದೆ. ಚಪ್ಪಟೆ ವಿನ್ಯಾಸ ಗಮನ ಸೆಳೆಯುತ್ತದೆ. ಸ್ವಿಸ್ ವಾಚ್‌ಗಳಿಗೆ ಹೋಲಿಕೆ ಮಾಡಿದರೆ ಇದರ ಕಡಿಮೆ. ಈಗ ಟ್ರೆಂಡ್‌ನಲ್ಲಿರುವ ವಾಚ್‌ಗಳ ಪೈಕಿ ಇದು ಒಂದು.