ಮದುವೆ ತಯಾರಿ ಹೇಗಿರಬೇಕು? ನವವಧುವಿನ ಅನುಭವ ಕಥನ

ಮದುವೆ ತಯಾರಿ ಹೇಗಿರಬೇಕು? ನವವಧುವಿನ ಅನುಭವ ಕಥನ

Published on

ಸಂಧ್ಯಾ ಹೆಗಡೆ

ಮದುವೆಯೆಂದರೆ ಕನಸಿನ ರಂಗೋಲಿಗೆ ಬಣ್ಣ ಹಚ್ಚುವ ಸಮಯ. ಮನದ ಭಾವಗಳು ಹಾಡಾಗುವ ಹೊತ್ತು. ಎರಡು ಜೀವಗಳು ಕೂಡಿ ಬಾಳಲು ಅಧಿಕೃತ ಮುದ್ರೆಯೊತ್ತುವ ಅಪೂರ್ವ ಕ್ಷಣ.

ಜೀವನದ ಮಹತ್ತರ ಘಟ್ಟವೊಂದು ಚಿತ್ತಭಿತ್ತಿಯಲ್ಲಿ ಅಚ್ಚಾಗುವ ದಿನ ವಧು ತಾನು ಹೇಗೆ ಕಾಣಬೇಕು, ಫ್ಯಾಷನ್ ಜಗತ್ತಿನ ಲೇಟೆಸ್ಟ್ ಟ್ರೆಂಡ್‌ನೊಂದಿಗೆ ಹೇಗೆ ಹೆಜ್ಜೆ ಹಾಕಬೇಕು, ವರನ ಕಡೆಯವರು, ಅತಿಥಿಗಳ ಮುಂದೆ ರಾಜಕುವರಿಯಂತೆ ಮಿನುಗುವ ಮೇಕಪ್ ಇರಬೇಕು, ಫೋಟೊ ಅಲ್ಬಮ್‌ಗಳ ಪುಟ ತಿರುವಿದಾಗೆಲ್ಲ ಎದೆಯ ಗೂಡಲ್ಲಿ ತಂಗಾಳಿ ಸೂಸಬೇಕು ಎಂದೆಲ್ಲ ಕನಸು ಕಂಡವಳು ಅಪೂರ್ವ.

ನಿಶ್ಚಿತಾರ್ಥ ನಡೆದು ಸರಿಯಾಗಿ ಎರಡು ತಿಂಗಳಿಗೆ ಮದುವೆ. 60 ದಿನಗಳಲ್ಲಿ ಆಫೀಸ್‌, ಮೀಟಿಂಗ್, ಪ್ರಾಜೆಕ್ಟ್‌ ಡೆಡ್‌ಲೈನ್, ಗೆಳತಿಯರು, ಆಪ್ತರ ಮನೆಗೆ ಮದುವೆ ಕರೆಯಕ್ಕೆ ಭೇಟಿ, ನಡುನಡುವೆ ಊರಿಗೆ ಬಂದು ಹೋಗುವ ತಾಪತ್ರಯ. ಇವುಗಳ ಮಧ್ಯೆಯೇ ಪ್ರಿ ವೆಡ್ಡಿಂಗ್ ಶೂಟ್, ಬ್ಯಾಚುಲರೇಟ್ ಪಾರ್ಟಿ, ಜವಳಿ, ಒಡವೆ ಖರೀದಿ, ಹಳದಿ, ಮೆಹಂದಿ, ಸಂಗೀತ ಇವೆಲ್ಲವನ್ನೂ ಹೇಗೆ ಹೊಂದಿಸಿಕೊಳ್ಳಬಹುದು ಎಂದು ಅಪೂರ್ವ ವಿವರಿಸಿದ್ದಾರೆ.

ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಅಪೂರ್ವ ವರಿಸಿದ್ದು ಸಾಫ್ಟ್‌ವೇರ್ ಎಂಜಿನಿಯರ್ ಅರವಿಂದ ಅವರನ್ನು. ಮದುವೆ ನಿಕ್ಕಿಯಾಗಿದ್ದೇ, ಇಬ್ಬರೂ ಕುಳಿತು ವ್ಯವಸ್ಥಿತವಾಗಿ ಯೋಜನೆ ರೂಪಿಸಿದೆವು. ನಮ್ಮಿಬ್ಬರದೂ ವಾರಕ್ಕೆ ಐದು ದಿನ ಕೆಲಸ ಮಾಡುವ ವೃತ್ತಿ ಆಗಿದ್ದರಿಂದ ವಾರಾಂತ್ಯದ ಎರಡು ದಿನಗಳ ರಜೆ ಗರಿಷ್ಠ ಸದ್ಬಳಕೆ ಆಗುವಂತೆ ನೋಡಿಕೊಂಡೆವು. ನಮ್ಮದು ಸಾಂಪ್ರದಾಯಿಕ ಕುಟುಂಬ. ಅದಕ್ಕೆ ತಕ್ಕುದಾಗಿ ಕುಟುಂಬದವರೆಲ್ಲ ಮೆಚ್ಚಬಹುದಾದ ಮದುವೆ ಥೀಮ್, ಸ್ಟೈಲ್, ಮಂಟಪದ ಅಲಂಕಾರ, ಉಡುಪು, ಆಭರಣಗಳ ಆಯ್ಕೆ, ಫೋಟೊಶೂಟ್‌ಗೆ ಸ್ಥಳ ಗುರುತಿಸುವಿಕೆ ಇವೆಲ್ಲವನ್ನು ನಾವು ನೋಡಿಕೊಂಡೆವು. ಬಾಕಿ ಸಿದ್ಧತೆಗೆ ಅಪ್ಪ–ಅಮ್ಮ ಹೆಗಲುಕೊಟ್ಟರು ಎನ್ನುತ್ತಾರೆ ಅಪೂರ್ವ.

‘ಶುಭ ಕಾರ್ಯಗಳು ಹೆಚ್ಚಿರುವ ದಿನಗಳಲ್ಲಿ ನಿಶ್ಚಿತಾರ್ಥದ ದಿನ ಮದುವೆಯ ದಿನಾಂಕ ನಿಗದಿಯಾದರೆ ಅದೇ ದಿನ ಮೇಕಪ್ ಆರ್ಟಿಸ್ಟ್  ಬುಕ್ ಮಾಡಿಕೊಳ್ಳಬೇಕು. ಹಿಂದೆಲ್ಲ ಸಿನಿತಾರೆಯರು ಮಾತ್ರ ಹೈಡೆಫಿನಿಷನ್‌ ಮೇಕಪ್‌ ಮಾಡಿಕೊಳ್ಳುತ್ತಿದ್ದರು. ಇದರ ಜನಪ್ರಿಯತೆ  ಹೆಚ್ಚಾದ ಮೇಲೆ ಯುವತಿಯರು ಈ ಎಚ್‌ಡಿ ಮೇಕಪ್‌ ಅನ್ನೇ ಬಯಸುತ್ತಾರೆ. ಆದರೆ, ಸಾಮಾನ್ಯ ದಿನಗಳಲ್ಲಿ ಅಷ್ಟಾಗಿ ಮೇಕಪ್‌ ಮಾಡಿಕೊಳ್ಳದ ನಾನು, ನನ್ನ ಮುಖಕ್ಕೆ ಒಪ್ಪುವಂತಹ ಸ್ಕಿನ್ ಟೋನ್ ಮೇಕಪ್‌ ಅನ್ನೇ ಆಯ್ದುಕೊಂಡೆ’ ಎನ್ನುತ್ತ ಕ್ಲೆನ್ಸ್, ಮಾಸ್ಕ್‌ನೊಂದಿಗೆ ಮುಖದ ಚರ್ಮವನ್ನು ಹದಗೊಳಿಸಿಕೊಂಡು ಟೋನರ್, ಲೈಟ್ ಮಾಯ್ಚುರೈಸರ್, ಫೌಂಡೇಷನ್, ಕನ್ಸೀಲರ್‌, ಸೆಟಿಂಗ್ ಸ್ಪ್ರೇ, ಕಾಂಟರ್‌, ಬ್ಲಷ್‌ ಆನ್, ಐ ಮೇಕಪ್‌, ಲಿಪ್‌ಸ್ಟಿಕ್ ಮುಂತಾದವುಗಳನ್ನು ಬಳಸಿ ಎರಡು ತಾಸಿನಲ್ಲಿ ಮೇಕಪ್ ಪೂರ್ಣಗೊಳಿಸಿದ್ದನ್ನು ಅವರು ವಿವರಿಸಿದರು.

ನೂರಾರು ಬಗೆಯ ಸೌಂದರ್ಯವರ್ಧಕ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಉತ್ಪನ್ನದ ಗುಣಮಟ್ಟ, ಕಂಪನಿ ಆಧರಿಸಿ ಮೇಕಪ್ ದರಗಳು ವ್ಯತ್ಯಾಸವಾಗುತ್ತವೆ. ಜೊತೆಗೆ, ಮ್ಯಾಟ್‌ ಲುಕ್, ಗ್ಲಾಸಿ ಲುಕ್, ಎಚ್‌ಡಿ ಹೀಗೆ ಚರ್ಮದ ಕಾಂತಿ, ಸುಂದರ ನೋಟದ ಮೇಲೆ ದರಗಳು ನಿರ್ಧರಿತವಾಗುತ್ತವೆ. ₹5 ಸಾವಿರದಿಂದ ಆರಂಭಿಸಿ ₹1 ಲಕ್ಷ ವೆಚ್ಚದವರೆಗೆ ಮದುವಣಗಿತ್ತಿಯ ಮೇಕಪ್‌ ಪ್ಯಾಕೇಜ್‌ಗಳು ಇವೆ.

ಮೆಹಂದಿ, ಸಂಗೀತ, ಹಳದಿ, ಮದುವೆ, ಆರತಕ್ಷತೆ ಎಲ್ಲವನ್ನೂ ಒಳಗೊಂಡ ಮೇಕಪ್‌ಗೆ ಬೇರೆ ಬೇರೆ ಪ್ಯಾಕೇಜ್‌ ಇರುತ್ತವೆ. ನಾನು ಸಿಂಪಲ್ ಮೇಕಪ್‌ ಮಾಡಿಸಿಕೊಂಡ ಕಾರಣ ಮದುವೆಯ ದಿನದ ಮೇಕಪ್‌ ವೆಚ್ಚ ₹15 ಸಾವಿರ. ಹಳದಿ, ಸಂಗೀತ, ರಿಸೆಪ್ಶನ್ ಸೇರಿ ಮೇಕಪ್‌ಗೆ ಆಗಿರುವ ವೆಚ್ಚ ₹30 ಸಾವಿರ. ಇದರೊಂದಿಗೆ ವೇಟಿಂಗ್ ಟೈಮ್, ಟಚ್‌ಅಪ್ ಎಲ್ಲವೂ ಒಳಗೊಂಡಿದೆ.

ಇರಲಿ ಎಚ್ಚರಿಕೆ: ಕಡಿಮೆ ಖರ್ಚಿನಲ್ಲಿ ಕಳಪೆ ಗುಣಮಟ್ಟದ ಸೌಂದರ್ಯವರ್ಧಕ ಬಳಸಿ ಮೇಕಪ್‌ ಮಾಡಿಸಿಕೊಂಡರೆ ಚರ್ಮಕ್ಕೆ ಹಾನಿಯಾಗುವ ಸಂಭವ ಇರುತ್ತದೆ. ಹೀಗಾಗಿ, ಮೇಕಪ್ ಮಾಡಿಸಿಕೊಳ್ಳುವಾಗ ಎಚ್ಚರಿಕೆವಹಿಸುವುದು ಅಗತ್ಯ.

ಕಾಂಚಿಪುರಂ ಸೀರೆ: ಸಾಂಪ್ರದಾಯಿಕ ಕುಟುಂಬದ ಅಪೂರ್ವ ಮದುವೆ, ವಧು ಪ್ರವೇಶ, ಆರತಕ್ಷತೆ ಈ ಮೂರು ಮುಖ್ಯ ಸಮಾರಂಭಗಳಿಗೆ ಆಯ್ದುಕೊಂಡಿದ್ದು ಕಾಂಚಿಪುರಂ ರೇಷ್ಮೆ ಸೀರೆ. ₹20 ಸಾವಿರದಿಂದ ₹30 ಸಾವಿರದ ರೇಂಜ್‌ ಸೀರೆ ಖರೀದಿಸಿ, ಅದಕ್ಕೆ ಹೆವ್ವಿ ವರ್ಕ್ ಇರುವ ರವಿಕೆಯನ್ನು ತೊಟ್ಟಿದ್ದರು. ಇದು, ಮದುವೆಗೆ ಬಂದ ಅತಿಥಿಗಳೆಲ್ಲ ದೃಷ್ಟಿ ನಿವಾಳಿಸಿ ಬಿಡುವಂತಹ ಅಪ್ಸರೆಯ ನೋಟವನ್ನು ಕೊಟ್ಟಿತ್ತು.

ರಿಸೆಪ್ಶನ್‌ಗೆ ಲೆಹಂಗಾವೇ ಹೆಚ್ಚು ಸೂಕ್ತ. ಇದು ರಾಯಲ್ ಲುಕ್ ಕೊಡುತ್ತದೆ.

ಕೇಶ ವಿನ್ಯಾಸಕ್ಕೆ ಅಪೂರ್ವ ಇಷ್ಟಪಟ್ಟಿದ್ದು ಹೂವಿನ ಜಡೆ. ಬಿಲ್ಲೆ ಜಡೆ, ಮೆಸ್ಸಿ ಜಡೆ ಈಗ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ. ಮೇಕಪ್‌ಗೆ ತಕ್ಕಂತೆ ಕೇಶಶೈಲಿ ಮಾಡಿಸಿಕೊಳ್ಳಬಹುದು. ಇನ್ನು, ಸಾಮಾನ್ಯವಾಗಿ ಮದುಮಗಳು ಮೊಣಕೈವರೆಗೆ ಮೆಹಂದಿ ಹಾಕಿಕೊಂಡು ಕೆಂಬಣ್ಣದಲ್ಲಿ ಮಿನುಗುತ್ತಾಳೆ. ಆದರೆ, ಅಪೂರ್ವ ಸಿಂಪಲ್‌ ಆಗಿ ಮೆಹಂದಿ ಹಾಕಿದ್ದರು. ಹಸ್ತದಲ್ಲಿ ಚಕ್ರ, ಹಿಂಭಾಗದಲ್ಲಿ ಕಮಲದ ಹೂ ಅರಳಿಸಿದ್ದರು. ಕೈ ಹಿಡಿಯುವ ಅರವಿಂದನ ಹೆಸರು ಪ್ರತಿನಿಧಿಸುವ ಕಾರಣಕ್ಕೆ ‘ಕಮಲದ ಹೂ’ ಅವರ ಏಕೈಕ ಆಯ್ಕೆಯಾಗಿತ್ತು.

ವರನ ಮೇಕಪ್‌: ಮದುಮಗಳು ಚೆಲುವೆಯಂತೆ ಕಂಗೊಳಿಸುವಾಗ ಮದುಮಗನಿಗೂ ಮೇಕಪ್‌ ಬೇಕೇ ಬೇಕು. ಇಲ್ಲವಾದರೆ ಮದುವೆಯ ಅತಿಥಿಗಳ ಕಾಮೆಂಟ್‌ ಅನ್ನೂ ಸಹಿಸಿಕೊಳ್ಳಬೇಕಾಗುತ್ತದೆ! ಸಿಂಪಲ್ ಮೇಕಪ್ ಮಾಡಿಕೊಂಡಿದ್ದ ಅರವಿಂದ್, ಮದುವೆಯ ದಿನ ಬಿಳಿ ಶರ್ಟ್ ಮತ್ತು ಬಿಳಿಪಂಚೆ ಧರಿಸಿದ್ದರೆ, ರಿಸೆಪ್ಶನ್‌ನಿಂದ ರಿಚ್ ಲುಕ್ ಕೊಡುವ ಶೇರ್ವಾನಿ ಧರಿಸಿದ್ದರು. ಈ ಮಾದರಿಯ ವಸ್ತ್ರವಿನ್ಯಾಸ ಫೋಟೊಶೂಟ್‌ನಲ್ಲೂ ಶ್ರೀಮಂತ ನೋಟ ಬೀರುತ್ತದೆ.

ಮದುವೆ ಎನ್ನುವುದು ಜೀವನದುದ್ದಕ್ಕೂ ಆಹ್ಲಾದ ನೀಡುವ ನೆನಪು. ಮಸೂರದಲ್ಲಿ ಅಚ್ಚಾಗಿರುವ ಕ್ಷಣಗಳು ಆಲ್ಬಮ್‌ನಲ್ಲಿ ತಣ್ಣಗೆ ಕುಳಿತಿರುತ್ತವೆ. ಪ್ರತಿ ಬಾರಿ ಆಲ್ಬಮ್‌ ತೆರೆದಾಗಲೂ ಅಲ್ಲಿ ಮಂದಹಾಸದ ಅಲೆಯೊಂದು ತೇಲಬೇಕು. ಈ ಖುಷಿ ಅನುಭವಿಸಬೇಕೆಂದರೆ ಒಂದಿಷ್ಟು ಪೂರ್ವ ಸಿದ್ಧತೆ ಅಗತ್ಯ.

ಮದುವೆ ಸಿದ್ಧತೆಯ ಟಿಪ್ಸ್‌ಗಳು‌

* ಉತ್ತಮ ಹಾಲ್ ಆಯ್ದುಕೊಳ್ಳಬೇಕು

* ಉಡುಪುಗಳ ಆಯ್ಕೆ ಚರ್ಮದ ಬಣ್ಣಕ್ಕೆ ಹೊಂದುವಂತಿರಬೇಕು

* ಕೇಶ ವಿನ್ಯಾಸ, ಮೇಕಪ್, ಆಭರಣ, ಹೇರ್‌ಸ್ಟೈಲ್‌ ಬಗ್ಗೆ ಸ್ಪಷ್ಟತೆ ಇರಬೇಕು

* ಫೋಟೊಶೂಟ್‌ ಸ್ಥಳಗಳನ್ನು ಮೊದಲೇ ನಿಗದಿಪಡಿಸಿಕೊಳ್ಳಬೇಕು

* ಫೋಟೊ ಸ್ಟೈಲ್‌ಗಳನ್ನು ಪ್ರ್ಯಾಕ್ಟೀಸ್ ಮಾಡಿಕೊಂಡರೆ ಒಳಿತು

* ನಿಯಮಿತವಾಗಿ ನಿದ್ರೆ, ನೀರು, ವ್ಯಾಯಾಮ ಇದ್ದರೆ, ಚರ್ಮದ ಕಾಂತಿ ಕಾಪಾಡಿಕೊಳ್ಳಬಹುದು

*  ಮೇಕಪ್ ಆರ್ಟಿಸ್ಟ್, ಫೋಟೊಗ್ರಾಫರ್, ವಿಡಿಯೊಗ್ರಫಿ, ಫ್ಲವರ್ ಡೆಕೊರೇಷನ್ ಮೊದಲೇ ಬುಕ್ ಮಾಡಿಕೊಳ್ಳಿ

* ಮಂಟಪದ ಅಲಂಕಾರದ ಹಲವಾರು ಮಾದರಿಗಳನ್ನು ನೋಡಿಕೊಂಡು, ಮದುವೆಯ ಹಾಲ್‌ಗೆ ಹೊಂದಿಕೆಯಾಗುವ ಮಾದರಿ ಆಯ್ದುಕೊಳ್ಳಬೇಕು

* ಕಲರ್ ಥೀಮ್ ಅನ್ನು ಮೊದಲೇ ನಿರ್ಧರಿಸಬೇಕು

Maduve Habba
www.prajavani.net