ಮದುವೆ ಶಾಪಿಂಗ್ ಖರ್ಚು ತಗ್ಗಿಸಬೇಕೆ? ಹೀಗೆ ಮಾಡಿ

ಮದುವೆ ಶಾಪಿಂಗ್ ಖರ್ಚು ತಗ್ಗಿಸಬೇಕೆ? ಹೀಗೆ ಮಾಡಿ

Published on

ರಜನಿ.ಎಂ

ಒಂದು ಮದುವೆ ಅಂದಾಕ್ಷಣ ಎಷ್ಟೆಲ್ಲ ಖರ್ಚು ಅಂತ ತಲೆಮೇಲೆ ಕೈಇಟ್ಟು ಕುಳಿತುಕೊಳ್ಳುವವರೇ ಹೆಚ್ಚು. ಮದುವೆ ಅಂದ್ರೆ ಬರೀ ಖರ್ಚಿನಲ್ಲೇ ನಡೆಯುವ ಸಮಾರಂಭ ಎನ್ನುವುದನ್ನ ನಾವೆಲ್ಲ ಒಪ್ಪಿಕೊಳ್ಳಲೇಬೇಕು. ಇನ್ನು ಶಾಪಿಂಗ್‌ ಮುಗಿದರೆ ಮದುವೆ ಮುಗಿದಂತೆ ಎನ್ನುವ ಮಾತು ಕೂಡ ಇದೆ. ಏಕೆಂದರೆ ಇದು ಒಂದೆರಡು ದಿನಕ್ಕೆ ಮುಗಿಯುವ ಕಥೆಯಲ್ಲ. ಹತ್ತಾರು ಮಂದಿಗೆ ಒಪ್ಪುವ ಬಟ್ಟೆ, ಆಭರಣ ಖರೀದಿಗೆ ತಿಂಗಳಗಟ್ಟಲೆ ಸಮಯ ಕೂಡ ಹಿಡಿಯುತ್ತೆ. ಶಾಪಿಂಗ್‌ ಎಲ್ಲಿ ಮಾಡಬೇಕು, ಎಲ್ಲಿ ಕೈಗೆಟುಕುವ ದರಕ್ಕೆ ಬಟ್ಟೆ ಖರೀದಿ ಮಾಡಬಹುದು ಎಂಬ ಗೊಂದಲದಲ್ಲೇ ಮದುವೆ ಮನೆಯವರು ಇರುತ್ತಾರೆ. ಮದುವೆ ಶಾಪಿಂಗ್ ಸುಲಭ ಮತ್ತು ಸರಳವಾಗಿ ಮಾಡಲು ಇಲ್ಲಿದೆ ನೋಡಿ ಕೆಲ ಟಿಪ್ಸ್.. 

ಮದುವೆ ಶಾಪಿಂಗ್ ಸುಲಭ ಮತ್ತು ಸರಳವಾಗಿ ಮಾಡಲು ಬೆಂಗಳೂರಿನ ಚಿಕ್ಕಪೇಟೆ ಒಂದು ಪ್ರಮುಖ ಸ್ಥಳ. ಇಲ್ಲಿ ಮದುವೆಗೆ ಬೇಕಾದ ಸೀರೆ, ಆಭರಣ, ಬಟ್ಟೆ ಸೇರಿದಂತೆ ಎಲ್ಲ ರೀತಿಯ ಟ್ರೆಂಡಿಂಗ್‌ ವಸ್ತ್ರಗಳು ಒಂದೇ ಸೂರಿನಡಿ ಸಿಗುತ್ತವೆ. ಹೀಗಾಗಿ ಮನೆಯಲ್ಲಿ ಮದುವೆ ನಿಶ್ಚಯವಾದವರು ಒಮ್ಮೆಯಾದರೂ ಚಿಕ್ಕಪೇಟೆಗೆ ಹೋಗಿ ಬರುತ್ತಾರೆ. ನಿಮ್ಮ ಬಜೆಟ್‌ಗೆ ತಕ್ಕಂತೆ ತರಹೇವಾರಿ ಬಟ್ಟೆಗಳು ಕೈಗೆಟುಕುವ ದರಕ್ಕೆ ಇಲ್ಲಿ ಖರೀದಿಸಬಹುದು. ಮಲ್ಲೇಶ್ವರಂ, ಬಸವನಗುಡಿ, ಕಮರ್ಷಿಯಲ್‌ ಸ್ಟ್ರೀಟ್‌, ಜೆ.ಪಿ.ನಗರ, ಜಯನಗರ ಕೂಡ ಮದುವೆ ಶಾಪಿಂಗ್‌ಗೆ ಹೇಳಿಮಾಡಿಸಿದ ಜಾಗಗಳು. ಇಲ್ಲಿ ಗ್ರಾಹಕರಿಗೆ ಖರೀದಿ ಹಾಗೂ ಬಾಡಿಗೆ ಆಯ್ಕೆಯೂ ಇದೆ. 

ಇಲ್ಲಿ ರೇಷ್ಮೆ, ಸೀರೆಗಳು, ಜವಳಿ ಹಾಗೂ ಮದುವೆಯ ಅಗತ್ಯವಿರುವ ಎಲ್ಲ ವಸ್ತುಗಳ ಒಂದುಗೂಡಿದ ಶಾಪಿಂಗ್ ಅನುಭವ ಸಿಗುತ್ತದೆ. ಚಿಕ್ಕಪೇಟೆ‌ನಲ್ಲಿ ವಿವಿಧ ಎಂಪೋರಿಯಮ್‌ಗಳು ಇದ್ದು, ಕಡಿಮೆ ಬಜೆಟ್ ಮತ್ತು ಉತ್ತಮ ಗುಣಮಟ್ಟದ ಆಯ್ಕೆಗಳು ಲಭ್ಯವಾಗುತ್ತವೆ. ಇಂತಹ ಸ್ಥಳಗಳಲ್ಲಿ ಶಾಪಿಂಗ್ ಮಾಡುವುದರಿಂದ, ವಧು-ವರರು ಮತ್ತು ಕುಟುಂಬಸ್ಥರು ಬೇರೆ ಬೇರೆ ಅಂಗಡಿಗಳಿಗೆ ಭೇಟಿ ನೀಡದೆ, ಸರಳವಾಗಿ ಎಲ್ಲ ವಸ್ತುಗಳನ್ನು ಒಂದೇ ಸ್ಥಳದಲ್ಲಿ ಖರೀದಿ ಮಾಡಬಹುದು. ಇದರಿಂದ ಸಮಯ ಉಳಿತಾಯ ಮತ್ತು ಒಳ್ಳೆಯ ಶಾಪಿಂಗ್ ಅನುಭವ ಸಿಗುತ್ತದೆ. 

ಬೆಳಿಗ್ಗೆ ಅಥವಾ ಮಧ್ಯಾಹ್ನದ ವೇಳೆಗೆ ಚಿಕ್ಕಪೇಟೆ ಮಾರುಕಟ್ಟೆ ಹೆಚ್ಚಿನ ಜನಸಂದಣಿಯಿಂದ ತುಂಬಿರುತ್ತದೆ. ವಾರಾಂತ್ಯದಲ್ಲಿ ಈ ಜಾಗಕ್ಕೆ ಭೇಟಿ ನೀಡಿದರೆ ಆ ಜನಸಾಗರದಲ್ಲಿ ಖರೀದಿ ತಡವಾಗಬಹುದು. ಇಂತಹ ಖರೀದಿ ಸ್ಥಳಗಳು ಮದುವೆಗೆ ಮೊದಲು ಎಲ್ಲ ಅಗತ್ಯ ವಸ್ತುಗಳನ್ನು ಖರೀದಿಸಿ, ಮದುವೆಗೆ ಕೆಲವೇ ದಿನ ಹತ್ತಿರದಲ್ಲಿದ್ದಾಗ ಈ ಸಾಹಸಕ್ಕೆ ಕೈಹಾಕಬೇಡಿ. 

ಬ್ಯುಸಿ ಇದ್ದರೆ ಆನ್‌ಲೈನ್‌ ಶಾಪಿಂಗ್‌

ಇದಲ್ಲದೆ ಈಗೆಲ್ಲ ಆನ್‌ಲೈನ್‌ ಶಾಪಿಂಗ್‌ ಕೂಡ ನೆಚ್ಚಿನ ಆಯ್ಕೆಯಾಗಿದೆ. ಎಲ್ಲೂ ಹೋಗದೆ ಮನೆಯಿಂದಲೇ ನಿಮಗೆ ಬೇಕಾದ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ನೀವಿರುವಲ್ಲಿಗೇ ತರಿಸಿಕೊಳ್ಳಬಹುದು. ಇದಕ್ಕಾಗಿ ಹಲವಾರು ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ ಹಾಗೂ ಅಪ್ಲಿಕೇಷನ್‌ಗಳಿವೆ. ಕೆಲ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಡಿಮೆ ಬೆಲೆಗೆ ಟ್ರೆಂಡಿ ಸೀರೆಗಳು, ಬ್ಯಾಂಗಲ್ ಸೆಟ್‌ಗಳು, ವಧು ಲೆಹಂಗಾ, ಮೇಕಪ್ ವಸ್ತುಗಳು ಲಭ್ಯವಿದ್ದು, ಬೆಲೆ ಹೋಲಿಕೆ ಮಾಡಿ ನಿಮಗೆ ಬೇಕಾದ್ದನ್ನು ಬುಕ್ ಮಾಡಿ. 

ಮದುವೆ ಹೆಣ್ಣುಗಳಿಗೆ ಸೀರೆ, ಪುರುಷರಿಗೆ ಧೋತಿ, ಶರ್ಟ್, ಸಾಮಾನ್ಯ ಬಟ್ಟೆಗಳಿಗೂ ಈ ಜಾಗಗಳು ಸೂಕ್ತ. ಚಿಕ್ಕಪೇಟೆ ಪಕ್ಕದಲ್ಲೇ ಇರುವ ಬಳೇಪೇಟೆ ಭಾಗದಲ್ಲಿ ಮದುವೆ ಆಮಂತ್ರಣ ಕಾರ್ಡುಗಳು ಕಡಿಮೆ ಹಾಗೂ ರಿಯಾಯಿತಿ ಬೆಲೆಯಲ್ಲಿ ಸಿಗುತ್ತವೆ. ನಿಮ್ಮ ಮದುವೆ ವಿವರ ಹಾಗೂ ವಿನ್ಯಾಸ ಆಯ್ಕೆ ಮಾಡಿದರೆ ಸಾಕು, ಒಂದೆರಡು ದಿನಗಳಲ್ಲಿ ಅದು ನಿಮ್ಮ ಬಾಗಿಲಿಗೆ ತಲುಪುತ್ತದೆ. ಈ ರೀತಿ ಶಾಪಿಂಗ್ ಮಾಡಿದರೆ ಸಮಯ ಉಳಿಯುತ್ತದೆ ಮತ್ತು ಬಜೆಟ್‌ನಲ್ಲಿ ಉಳಿತಾಯವಾಗುತ್ತದೆ. ಆನ್‌ಲೈನ್‌ನಲ್ಲಿ ರಿವ್ಯೂಗಳನ್ನು ಪರಿಶೀಲಿಸಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಖರೀದಿ ಮಾಡಿ. 

ಚಿಕ್ಕ ಕುಟುಂಬದ ಮದುವೆಗಾಗಿ ಶಾಪಿಂಗ್ ಪಟ್ಟಿ ಸರಳವಾಗಿ ತಯಾರಿಸಿ. ಬಜೆಟ್‌ಗೆ ಒಗ್ಗುವಂತೆ ಆಯ್ಕೆ ಮಾಡಿ. ಮುಖ್ಯವಾಗಿ ವಧು-ವರ, ಕುಟುಂಬಸ್ಥರ ಉಡುಪು, ಆಭರಣ, ಅಲಂಕಾರ ಮತ್ತು ಊಟದ ಸಾಮಗ್ರಿಗಳನ್ನು ಒಳಗೊಂಡಿರುವ ಪಟ್ಟಿ ಸಿದ್ಧಪಡಿಸಿ. ವಧು ಮತ್ತು ವರ ತಮ್ಮ ಉಡುಪು ಮತ್ತು ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸೀರೆ ಅಥವಾ ಲೆಹಂಗಾದಲ್ಲಿ 2-3 ರೀತಿಯ ಸೆಟ್‌ಗಳು ಹಾಗೂ ಆಭರಣದ ಸೆಟ್‌ಗಳನ್ನು ಒಳಗೊಂಡಿರಬೇಕು. ಕುಟುಂಬಸ್ಥರು ಮತ್ತು ಅತಿಥಿಗಳಿಗೆ ಸರಳ ಉಡುಪುಗಳ ಶಾಪಿಂಗ್ ಮಾಡಿಕೊಳ್ಳಿಮಾಡಿ.

Maduve Habba
www.prajavani.net