ಮದುವೆ ಹಬ್ಬ- ಬ್ಯಾರಿ ಮದುವೆ

ಮದುವೆ ಹಬ್ಬ- ಬ್ಯಾರಿ ಮದುವೆ

Published on

ಬ್ಯಾರಿ‌ಗಳ ಮದುವೆ ಸಂಪ್ರದಾಯಗಳು ಭಿನ್ನ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ವಾಸ ಇರುವ ಈ‌ ಜನಾಂಗದವರು ಮುಸ್ಲಿಂ ಧರ್ಮಕ್ಕೆ‌ ಸೇರಿದವರು. ಈ ಜನಾಂಗದ ಮದುವೆ ಇಸ್ಲಾಮಿನ ನಿಯಮದಂತೆ ನಡೆಯುತ್ತದೆ. ಪ್ರಾದೇಶಿಕವಾಗಿ ಹಲವು ಸಂಪ್ರದಾಯಗಳು ಇವೆ‌.

ನಿಶ್ಚಿತಾರ್ಥ (ವರಪ್ಪು)

ವಧು-ವರ ಜೋಡಿ ನಿಕ್ಕಿಯಾದ ಬಳಿಕ ನಡೆಯುವ ಮೊದಲ ಶಾಸ್ತ್ರ ನಿಶ್ಚಿತಾರ್ಥ. ಇದನ್ನು ಬ್ಯಾರಿಗಳು ವರಪ್ಪು ಎನ್ನುತ್ತಾರೆ. ಇಲ್ಲಿ ಉಂಗುರ ಬದಲಿಸಿಕೊಳ್ಳುವ ಪದ್ದತಿ ಇಲ್ಲ. ವಧುವಿನ ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ವರನ ಕಡೆಯುವರು ಬರುತ್ತಾರೆ. ವಧುವಿಗೆ ಆಭರಣ ಇಡುವುದು ನಿಶ್ಚಿತಾರ್ಥದ ಪ್ರಮುಖ ಭಾಗ. ಆ ದಿನ ವಧುವಿನ ಸಿಂಗಾರಕ್ಕೆ ಬೇಕಾದ ಬಟ್ಟೆ, ಹೂ, ಅಲಂಕಾರದ ವಸ್ತುಗಳು ವರನ ಕಡೆಯವರೇ ತೆಗೆದುಕೊಂಡು ಹೋಗುತ್ತಾರೆ. ಜೊತೆಗೆ ಮೊಬೈಲ್, ಚಾಕಲೇಟ್‌ಗಳನ್ನು ಉಡುಗೊರೆಯಾಗಿ ನೀಡುವ ಪರಿಪಾಠ ಈಗ ಶುರುವಾಗಿದೆ. ಕುರಾನ್, ನಮಾಜ್‌ ನ ಚಾದರ ಕೊಡುವುದೂ ಇದೆ. ವಧುವಿಗೆ ವರ ಹೂಗುಚ್ಚ ನೀಡಿ ಫೋಟೊ ತೆಗೆಸಿಕೊಳ್ಳುವುದು ಈಗಿನ‌ ಟ್ರೆಂಡ್.‌ ಮೊದಲೆಲ್ಲಾ ವಧುವಿಗೆ ಮಲ್ಲಿಗೆ ಹೂ ಇಟ್ಟರೆ ನಿಶ್ಚಿತಾರ್ಥ ಮುಗಿದಂಗೆ‌. ಜೊತೆಗೊಂದು ಕುರಾನ್ ಉಡುಗೊರೆಯಾಗಿ ಕೊಡುತ್ತಿದ್ದರು. ಇದೀಗ ಆ ಸಂಪ್ರದಾಯಗಳ ಜೊತೆಗೆ ಆಧುನಿಕತೆ ಸೇರಿಕೊಂಡಿವೆ.

ಅಂದು ವಧುವಿನ ಮನೆಯಲ್ಲಿ ನಾನಾ ತರದ ಮಾಂಸಹಾರದ ಭೋಜನಗಳು ಇರುತ್ತವೆ‌. ಆ ದಿನವೇ ಕೆಲವರು ಮದುವೆಯ ದಿನಾಂಕವನ್ನೂ ಗೊತ್ತುಪಡಿಸುತ್ತಾರೆ. ಇಲ್ಲದಿದ್ದರೆ ಇನ್ನೊಂದು ದಿನ ಉಭಯ ಕುಟುಂಬದ ಹಿರಿಯರು ಗಂಡಿನ ಮನೆಯಲ್ಲಿ ಸೇರಿ ಮದುವೆಯ ದಿನ ನಿಕ್ಕಿ ಮಾಡುತ್ತಾರೆ.

ಮದರಂಗಿ ಶಾಸ್ತ್ರ (ಮೊಯಿಲಾಂಜಿ)

ಮದುವೆಗಿಂತ ಒಂದು ಅಥವಾ ಎರಡು ದಿನ ಮುಂಚಿತವಾಗಿ ಮದರಂಗಿ ಶಾಸ್ತ್ರ ನಡೆಯುತ್ತದೆ. ಇದನ್ನು ಬ್ಯಾರಿಗಳು‌ ಮೊಯಿಲಾಂಜಿ ಎನ್ನುತ್ತಾರೆ. ಅಂದು ವಧುವಿಗೆ ಆಕೆಯ ಸ್ನೇಹಿತರೆಲ್ಲಾ ಸೇರಿ ಮೆಹೆಂದಿ ಹಚ್ಚುತ್ತಾರೆ. ಆಕೆಯ ಕೈ, ಕಾಲುಗಳಿಗೆ ಮೆಹೆಂದಿ ಹಚ್ಚಿ, ಮದುಮಗಳನ್ನು ಕುರ್ಚಿಯೊಂದರಲ್ಲಿ ಕೂರಿಸಿ, ಸ್ನೇಹಿತರು ಸುತ್ತಲೂ ತಿರುಗುತ್ತಾ ನೃತ್ಯ ಮಾಡುತ್ತಾ ಹಾಡುಗಳನ್ನು ಹಾಡುತ್ತಾರೆ. ಇದನ್ನು ಒಪ್ಪನೆ ಪಾಟ್, ಮೊಯಿಲಾಂಜಿ ಪಾಟ್ ಎಂದು ಕರೆಯುತ್ತಾರೆ. ಆದರೆ ಈ ಸಂಪ್ರದಾಯ ಈಗ ಕಾಣಸಿಗುವುದು ವಿರಳ. ಈಗೆಲ್ಲಾ ಮದರಂಗಿ ಶಾಸ್ತ್ರಕ್ಕೆ ಮುಂಚಿತವಾಗಿಯೇ ಮೆಹೆಂದಿ ಹಚ್ಚುತ್ತಾರೆ. ಈ ಕಾರ್ಯಕ್ರಮವನ್ನು ಮಧ್ಯಾಹ್ನ ಅಥವಾ ರಾತ್ರಿ ಇಟ್ಟುಕೊಳ್ಳುತ್ತಾರೆ‌. ಮಸೀದಿಯಿಂದ ಮೌಲ್ವಿಗಳನ್ನು ಕರೆಸಿ ಪ್ರವಾದಿ ಸ್ತುತಿ (ಮೌಲಿದ್) ಓಡಿಸುತ್ತಾರೆ. ಮರಣಹೊಂದಿದ ತಮ್ಮ ಕುಟುಂಬದವರ ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಾರೆ.

ಗಂಡಿನ‌ ಮನೆಯಲ್ಲಿ ಶಾಸ್ತ್ರಗಳು ಇಲ್ಲದೇ ಇದ್ದರೂ, ಬುರ್ದಾ (ಪ್ರವಾದಿ ಕೀರ್ತನೆ) ಕಾರ್ಯಕ್ರಮ‌ ಇರುತ್ತದೆ. ಉಭಯ ಕಡೆಗಳಲ್ಲೂ ಸಂಬಂಧಿಕರಿಗೆ, ನೆಂಟರಿಗೆ, ಸ್ನೇಹಿತರಿಗೆ ಮತ್ತು ನೆರೆಹೊರೆಯವರಿಗೆ ಮಾತ್ರ ಅಂದು ಆಮಂತ್ರಣ ಇರುತ್ತದೆ. ಅಪ್ಪಟ ಬ್ಯಾರಿ ಶೈಲಿಯ ನೈಚೋರು (ತುಪ್ಪದೂಟ), ಎರ್ಚಿಡೆ ಕರಿ (ಕೋಳಿ, ಆಡು ಆಥವಾ ದನದ ಮಾಂಸ), ಕಬಾಬ್ ಸಹಿತ ಮಾಂಸದೂಟ ಇರುತ್ತದೆ.

ಅಂದು ಸ್ನೇಹಿತರೆಲ್ಲಾ ಸೇರಿ ವಧು-ವರರ ಕೋಣೆಗಳನ್ನು ಸಿಂಗರಿಸುವುದು ಮಜ ಕೊಡುವ ಸಂಗತಿ. ಇದನ್ನು ಬ್ಯಾರಿಗಳು ‘ರೂಮು ಚಮೆಯಿಕ್ಕ್‌ರೆ’ ಎನ್ನುತ್ತಾರೆ‌.

ಮದುವೆ (ಮಂಙಿಲ)

ಆ ದಿನ ಬೆಳಿಗ್ಗೆ ವಧು-ವರರನ್ನು ಸ್ನೇಹಿತರು ಎಣ್ಣೆ ಹಾಗೂ ಅರಿಶಿನ ನೀರಿನಿಂದ ಸ್ನಾನ‌ ಮಾಡಿಸುವುದಿದೆ. ಈಗ ಆ ಸಂಪ್ರದಾಯ ವಿರಳ.

ಛತ್ರದಲ್ಲೇ ಮದುವೆಗಳು ನಡೆಯುವುದರಿಂದ ಸೋಗೆ, ಹಾಗೂ ತೆಂಗು ಗರಿಯಲ್ಲಿ ನಿರ್ಮಿಸಿದ ಚಪ್ಪರ, ಬಣ್ಣದ ಕಾಗದಗಳ ಅಲಂಕಾರ ಕಾಣುವುದು ಅಪರೂಪ.

ವಧು ವರರು ತಂದೆ ತಾಯಿ ಹಾಗೂ ಹಿರಿಯರ ಆಶೀರ್ವಾದ ಪಡೆದು ಅವರಿಗಾಗಿಯೇ ವಿಶೇಷವಾಗಿ ಅಲಂಕರಿಸಿದ ವಾಹನದಲ್ಲಿ ಮಂಟಪಕ್ಕೆ ಹೊರಡುತ್ತಾರೆ. ಮಂಟಪದಲ್ಲಿ ಮಧುವರರನ್ನು ಅವರ ಸ್ನೇಹಿತರು ಹೊಸ ಬಟ್ಟೆ ಹಾಕಿಸಿ ತಯಾರು ಮಾಡುತ್ತಾರೆ‌. ವಧುವಿಗೆ ಸೀರೆ ಅಥವಾ ಲೆಹಂಗಾ ತೊಡಿಸುತ್ತಾರೆ‌. ಆಭರಣದಿಂದ ಸಿಂಗರಿಸುತ್ತಾರೆ. ಮದುವೆಯ ಶಾಸ್ತ್ರಕ್ಕೆ ವರ ಜುಬ್ಬಾ ಪೈಜಾಮ ಹಾಗೂ ತಲೆಗೊಂದು ಬಿಳಿ ಟೋಪಿ ಧರಿಸಿ ಬರುತ್ತಾನೆ.

ನಿಖಾಹ್ (ಮದುವೆಯ ಶಾಸ್ತ್ರ)

ಇಸ್ಲಾಮಿಕ್ ಸಂಪ್ರದಾಯಂತೆ ಮದುವೆಯ ಶಾಸ್ತ್ರಗಳು ನಡೆಯುತ್ತದೆ‌. ಇಲ್ಲಿ ಮದುವೆ ಗಂಡು ಹಾಗೂ ಹೆಣ್ಣಿನ ತಂದೆಯ ನಡುವೆ ನಡೆಯುವ ಒಪ್ಪಂದದ ಸಂಬಂಧ. ನಿಖಾಹ್ ನಡೆಯುವ ಮೊದಲು ವಧುವಿನ ತಂದೆ ಅವಳ ಬಳಿ ತೆರಳಿ, ‘ನಿನನ್ನು ನಿಖಾಹ್ ಮಾಡಿಕೊಡುತ್ತೇನೆ’ ಎಂದು ಸಮ್ಮತಿ ಕೇಳುವುದಿದೆ.

ಧಾರ್ಮಿಕ ಗುರುಗಳು ನಿಖಾಹ್ ನೆರವೇರಿಸುತ್ತಾರೆ. ನಿಖಾಹ್‌ಗೂ ಮುನ್ನ‌ ದಂಪತಿಗೆ ಕಿವಿಮಾತು ಹೇಳುವುದಿದೆ. ನಿಖಾಹ್ ನಡೆಯುವುದಕ್ಕಿಂತ ಮೊದಲು ಕಡ್ಡಾಯವಾಗಿರುವ ಮಹರ್ (ವಧು ದಕ್ಷಿಣೆ) ಗಂಡನ ಕಡೆಯವರು ನಿಖಾಹ್ ನಡೆಯುವ ಸ್ಥಳದಲ್ಲಿ ಇಡಬೇಕು. ಅದನ್ನು ನೆರೆದವರಿಗೆ ಪ್ರದರ್ಶಿಸುವುದೂ ಉಂಟು. ವಧು ದಕ್ಷಿಣೆ ಸಾಮಾನ್ಯವಾಗಿ ಬಂಗಾರದ ಆಭರಣ ಇರುತ್ತದೆ. ನಿಖಾಹ್ ಮುಗಿದ ಬಳಿಕ ಮಸೀದಿಯ ಆಡಳಿತ ಸಮಿತಿಯವರು ವಿವಾಹ ನೋಂದಣಿಯ ಸಹಿ ಪಡೆಯುತ್ತಾರೆ. ಬಳಿಕ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿ ಪಾರ್ಥನೆ ಮಾಡಲಾಗುತ್ತದೆ.

ವಧುವಿನ ತಂದೆ ವರನಿಗೆ ವಾಚು ಕಟ್ಟುವ ಪದ್ಧತಿ ಚಾಲ್ತಿಯಲ್ಲಿದೆ. ಸಂತರ ಪರಸ್ಪರ ಕೈ ಮೈ ಜೋಡಿಸಿ ಶುಭ ಹಾರೈಸುತ್ತಾರೆ. ವರನಿಗೆ ವಧುವಿನ ಸಹೋದರರು ಹೂ ಮಾಲೆ ಹಾಕಿ ‘ಬಾರಕಲ್ಲಾಹು ಲಕುಮಾ ವಬಾರಕ ಅಲೈಕುಮಾ’ ಎಂದು ಹಾರೈಸುತ್ತಾರೆ. ಆ ದಿನ ಬಿರಿಯಾನಿ ಊಟ ವಿಶೇಷ.

ಬೀಟ್

ಮದುವೆಯ ದಿನದ ಕೊನೆಯ ಶಾಸ್ತ್ರ ಬೀಟ್. ನಿಖಾಹ್ ಬಳಿಕ ಮೊದಲ ಬಾರಿ ಗಂಡು ಹೆಣ್ಣನ್ನು ಸಂದರ್ಶಿಸಲು ಹೋಗುವುದು. ನಾಲ್ಕೈದು ಆಪ್ತ ಸ್ನೇಹಿತರೊಂದಿಗೆ ತೆರಳಿ, ಆಕೆಯ ಹಣೆಗೆ ಕೈಯಿಟ್ಟು ಮಂತ್ರ ಪಠಿಸುತ್ತಾನೆ. ಬಳಿಕ ಹಾರ ಬದಲಾಯಿಸಿ, ಒಂದೇ ಲೋಟದಲ್ಲಿ ಹಾಲು ಕುಡಿಯುವುದು ಇದೆ. ಈಗ ಇವುಗಳ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿರುವ ಸಂಪ್ರದಾಯಗಳು ಸೇರಿಕೊಂಡಿವೆ.

ಇದಾದ ಬಳಿಕ ವಧುವನ್ನು ಗಂಡಿನ ಕೈಗೊಪ್ಪಿಸುವ ಸಂಪ್ರದಾಯ ಇದೆ. ಆಕೆಯ ತಂದೆ ಇವಳನ್ನು ಆತನ ಕೈಗೊಪ್ಪಿಸಿ ‘ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳು’ ಎಂದು ಹೇಳುವಾಗ ಜಾರುವ ಕಣ್ಣೀರು ಅಲ್ಲಿರುವ ಎಲ್ಲರನ್ನು ಆರ್ದ್ರಗೊಳಿಸುತ್ತದೆ. ದುಃಖ ಮಡುಗಟ್ಟಿರುತ್ತದೆ. ಇದನ್ನು ‘ಇಲ್ಚಿ‌ ಕೊಡುಕ್ಕುರೆ’ ಎನ್ನುವರು.

ಮಂಟಪದಿಂದ ಗಂಡನ ಮನೆಗೆ ಬರುವ ವಧುವಿಗೆ ದೃಷ್ಟಿ ತೆಗೆದು ಹೊಸ್ತಿಲು ದಾಟಿಸುತ್ತಾರೆ.

ತಾಲ‌

ಮದುವೆಯ ಬಳಿಕ ವಧುವಿನ ಮನೆಗೆ ಮೊದಲ ಬಾರಿ ಬರುವಾಗಿನ ಸಂಪ್ರದಾಯವೇ ತಾಲ. ವರ ತನ್ನ ಸ್ನೇಹಿತರೊಂದಿಗೆ ವಧುವಿನ ಮನೆಗೆ ಬರುತ್ತಾನೆ. ಬರುವಾಗ ವಿವಿಧ ಬಗೆ ತಿಂಡಿ, ತನಿಸುಗಳನ್ನು ತರುವುದುಂಟು. ಆ ದಿನ ಕನಿಷ್ಠ 50 ಬಗೆಯ ಭೋಜನಗಳು ಇರುತ್ತವೆ. ಊಟ‌ ಮುಗಿಸಿ, ವಧು-ವರರ ಕೋಣೆಯಲ್ಲಿ ಆತನ ಸ್ನೇಹಿತರ ಹಾಡು, ಹರಟೆ, ನೃತ್ಯ, ಕೀಟಲೆಗಳು ಇರುತ್ತವೆ. ಅವರೆಲ್ಲರೂ ತೆರಳಿದ ಬಳಿಕ ವಧುವಿನ‌ ಸ್ನೇಹಿತರು ಆತನಿಂದ ಹಣ ಪೀಕಿಸಲು ಕೊಡುವ ಕಾಟ ತಮಾಷೆಯಾಗಿರುತ್ತದೆ. ಅಲ್ಲಿಗೆ ಮದುವೆಯ ಸಂಪ್ರದಾಯಗಳು ಮುಗಿದಂತೆ.

Maduve Habba
www.prajavani.net