ಮದುವೆ ಅಲಂಕಾರದಲ್ಲಿ ಬದಲಾದ ಟ್ರೆಂಡ್
ವಿವಾಹ ಕುಟುಂಬಗಳ ಸಮ್ಮಿಲನ ಮತ್ತು ಪ್ರೀತಿಯ ಆಚರಣೆ. ಎರಡು ಹೃದಯಗಳ ಬೆಸುಗೆಗೆ ಮುನ್ನುಡಿ ಬರೆಯುವುದೇ ವಿವಾಹ. ಬಗೆ ಬಗೆಯ ವಿವಾಹಗಳು ಭಾರತೀಯ ಸಂಸ್ಕೃತಿಯೊಳಗೆ ಹಾಸುಹೊಕ್ಕಾಗಿವೆ. ಅದರಲ್ಲೂ ಕರ್ನಾಟಕದಲ್ಲಿ ವಿವಾಹ ಪದ್ಧತಿ ಸಾಂಪ್ರದಾಯಿಕ ಮತ್ತು ಆಧುನಿಕತೆ ಮೇಳೈಸಿಕೊಂಡು ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಭೂರಿ ಭೋಜನ ಜತೆಗೆ ಮದುವೆ ಮನೆ, ಕನ್ವೆನ್ಷನ್ ಹಾಲ್‌ಗಳ ಅಲಂಕಾರದಲ್ಲೂ ವಿಭಿನ್ನ ಬಗೆಯನ್ನು ಕಾಣಬಹುದು.
ಮದುವೆಯ ಅದ್ದೂರಿ ಕಾಸ್ಟೂಮ್‌ಗೆ ಅನುಗುಣವಾಗಿ ಅಲಂಕಾರ ಮಾಡೋದು ಇವೆಂಟ್ ಮ್ಯಾನೇಜ್‌ಮೆಂಟ್‌ಗಳ ಹೊಸ ಟ್ರೆಂಡಿಯಾಗಿದೆ. ಹಿಂದೆಲ್ಲ ಸಾಂಪ್ರದಾಯಿಕತೆಗೆ ಅನುಗುಣವಾಗಿ ಮನೆ ಮುಂದೆ ಚಪ್ಪರದಲ್ಲೇ ವಧು–ವರರು ಹಸೆಮಣೆ ಏರುತ್ತಿದ್ದರು. ಮದುವೆ ಚಪ್ಪರ ಹಾಗೂ ಮಂಟಪವನ್ನು ಬಾಳೆ, ಮಾವು, ಮಲ್ಲಿಗೆ, ಚೆಂಡು, ಸ್ಥಳೀಯವಾಗಿ ಸಿಗುತ್ತಿದ್ದ ಹೂವುಗಳಲ್ಲೇ ಮಂಟಪ ಸಿಂಗಾರ ಮಾಡುತ್ತಿದ್ದ ಕಾಲವೊಂದಿತ್ತು. ಅದು ಅವರವರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ನಡೆಯುತ್ತಿತ್ತು ಕೂಡ.
ಹಳೆ ಕಾಲದಲ್ಲಿ ಮದುವೆ ದಿಬ್ಬಣಗಳಿಗೆ ಉರಿಯುವ ಪಂಜುಗಳು ಕಳೆಕಟ್ಟುತ್ತಿದ್ದವು. ನಂತರ ಪೆಟ್ರೊ ಮಾಕ್ಸ್‌ಗಳು ಆ ಜಾಗವನ್ನು ತುಂಬಿದವು. ಈಗ ಜಗಮಗಿಸುವ ವಿದ್ಯುತ್ ದೀಪಾದಲಂಕಾರ ಕಾಣಬಹುದು. ದಿಬ್ಬಣದ ಕಾಲ ಹೋಯ್ತು. ಈಗ ಏನಿದ್ದರೂ ಕಣ್ಣು ಕೋರೈಸುವ ವಿದ್ಯುತ್ ಬೆಳಕಿನಲ್ಲಿ ಹೂವುಗಳಿಂದ ಸಿಂಗರಿಸಿದ ತೆರೆದ ಕಾರುಗಳಲ್ಲಿ ಮೆರವಣಿಗೆ ನಡೆಯೋಸದನ್ನ ನೋಡಬಹುದು.
ಪ್ರವೇಶ ಅಲಂಕಾರ: ಮದುವೆ ಮನೆ ಅಥವಾ ಕನ್ವೆನ್ಷನ್ ಹಾಲ್‌ಗಳ ಪ್ರವೇಶ ದ್ವಾರ ಅತಿಥಿಗಳಿಗೆ ಮೊದಲ ಆಕರ್ಷಣೆ. ಒಳಗಿನ ಆಚರಣೆಗಳಿಗೆ ಹೆಬ್ಬಾಗಿಲು. ಮಲ್ಲಿಗೆಯಂತಹ ಸಾಂಪ್ರದಾಯಿಕ ಹೂವುಗಳಿಂದ ಪ್ರವೇಶ ಅಲಂಕಾರಿಕ ಮಾಡಲಾಗುತ್ತದೆ. ಇಲ್ಲವೇ ಗುಲಾಬಿ ಮತ್ತು ಆರ್ಕಿಡ್‌ಗಳಂತಹ ಸಮಕಾಲೀನ ಹೂವುಗಳಿಂದ ಸಿಂಗರಿಸಲಾಗುತ್ತದೆ. ನವ ವಧು–ವರ, ಕುಟುಂಬದವರ ಅನನ್ಯ ಅಭಿರುಚಿ ಮತ್ತು ಆದ್ಯತೆಗೆ ಅನುಸಾರವಾಗಿ ಪ್ರವೇಶ ಅಲಂಕಾರ ಕಾಣಬಹುದು.
ಸಾಂಪ್ರದಾಯಿಕ ಅಲಂಕಾರ
*ಮಂಟಪ: ಹೂವುಗಳು, ಎಲೆಗಳು ಮತ್ತು ಸಾಂಪ್ರದಾಯಿಕ ವಸ್ತುಗಳಿಂದ ಅಲಂಕರಿಸಲ್ಪಟ್ಟ ವರ್ಣರಂಜಿತ ಮೇಲಾವರಣ ಈಗಿನ ಮದುವೆ ಮಂಟಪಗಳ ಅಕರ್ಷಣೆ ಆಗಿದೆ.
*ತೋರಣ: ಹೂವುಗಳು, ಮಾವಿನ ಎಲೆಗಳು ಮತ್ತು ತೆಂಗಿನ ಎಲೆಗಳಿಂದ ಅಲಂಕರಿಸಲ್ಪಟ್ಟ ಅಲಂಕಾರಿಕ ಪ್ರವೇಶ ಕಮಾನು ಮದುವೆ ಮತ್ತೊಂದು ಆಕರ್ಷಣೆ.
*ರಂಗೋಲಿ: ಅಕ್ಕಿ ಹಿಟ್ಟು, ಬಣ್ಣದ ಪುಡಿ, ಅಥವಾ ಹೂವುಗಳಿಂದ ಮಾಡಿದ ಸಂಕೀರ್ಣವಾದ ನೆಲದ ವಿನ್ಯಾಸಗಳು ಮದುವೆ ಸಂಭ್ರಮವನ್ನು ಹಿಮ್ಮಡಿಗೊಳಿಸುವ ಬಗೆಯನ್ನು ನೋಡಬಹುದು.
ಹೂವಿನ ಅಲಂಕಾರ
*ಹೂವಿನ ಹಾರಗಳು: ಮಲ್ಲಿಗೆ, ಮಾರಿಗೋಲ್ಡ್ ಅಥವಾ ಗುಲಾಬಿ ಹೂವುಗಳಿಂದ ಮಾಡಿದ ತಾಜಾ ಹೂವಿನ ಹಾರಗಳು.
*ಹೂವಿನ ಕಮಾನು: ಹೂವುಗಳು, ಹಸಿರು ಮತ್ತು ಸಾಂಪ್ರದಾಯಿಕವಾಗಿ ಅಲಂಕರಿಸಲ್ಪಟ್ಟ ಸುಂದರವಾದ ಕಮಾನು ಮದುವೆ ಅತಿಥಿಗಳನ್ನು ಗಮನ ಸೆಳೆಯುವಂತೆ ನಿರ್ಮಿಸಲಾಗುತ್ತದೆ.
ಲೈಟಿಂಗ್ ಅಲಂಕಾರ
*ದಿಯಾ: ಸಾಂಪ್ರದಾಯಿಕ ಮಣ್ಣಿನ ದೀಪಗಳನ್ನು ಎಣ್ಣೆ ಅಥವಾ ತುಪ್ಪದಿಂದ ಬೆಳಗಿಸಿ ಮದುವೆ ಮನೆ ಅಥವಾ ಹಾಲ್ ಸಿಂಗರಿಸುವ ವಿಧಾನವನ್ನು ಕೆಲ ಸಾಂಪ್ರದಾಯಗಳಲ್ಲಿ ಕಾಣಬಹುದು.
*ಸ್ಟ್ರಿಂಗ್ ಲೈಟ್‌ಗಳು: ವರ್ಣರಂಜಿತ ಸ್ಟ್ರಿಂಗ್ ಲೈಟ್‌ಗಳು ಅಥವಾ ಫೇರಿ ಲೈಟ್‌ಗಳನ್ನು ಬೆಳಗಿಸಿ ಹಬ್ಬದ ವಾತಾವರಣ ಸೃಷ್ಟಿಸುವ ಸಂಭ್ರಮ ಈಗಿನ ಮದುವೆಗಳ ವೈಶಿಷ್ಯ ಆಗಿದೆ.
ಆಧುನಿಕ ಅಲಂಕಾರ
*ಆಕಾಶಬುಟ್ಟಿಗಳು: ವಿವಿಧ ಆಕಾರಗಳು ಮತ್ತು ಗಾತ್ರಗಳಲ್ಲಿ ವರ್ಣರಂಜಿತ ಆಕಾಶಬುಟ್ಟಿಗಳು ಮದುವೆ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ.
* ಎಲ್ಇಡಿ ದೀಪಗಳು: ಮದುವೆ ಮನೆಗಳು, ಹಾಲ್‌ಗಳಲ್ಲಿ ಆಧುನಿಕ ಎಲ್ಇಡಿ ದೀಪಗಳನ್ನು ಬೆಳಗಿಸುವ ಮೂಲಕ ಅತ್ಯಾಧುನಿಕ ಮತ್ತು ಸೊಗಸಾದ ವಾತಾವರಣ ಸೃಷ್ಟಿಸಲಾಗುತ್ತದೆ. ಮದುವೆಗೆ ಬರುವ ಅತಿಥಿಗಳಿಗೆ ದೀಪದ ವ್ಯವಸ್ಥೆ ಮನೋಲ್ಲಾಸ ತುಂಬುತ್ತದೆ.
ತಾಜಾ ಹೂವಿನ ಆಭರಣ: ಮದುವೆಗೆ ಮುನ್ನ ಮಾಡುವ ಅರಿಸಿನ ಹಚ್ಚುವ ಶಾಸ್ತ್ರದಲ್ಲಿ ಕೆಲವೊಂದು ಸಮುದಾಯಕ್ಕೆ ಸೇರಿದವರು ಅರಿಸಿನ ದಿನ ವಧುವಿಗೆ ಚಿನ್ನದ ಆಭರಣಗಳ ಬದಲಾಗಿ ತಾಜಾ ಹೂವಿನ ಆಭರಣಗಳನ್ನು ಹಾಕುತ್ತಾರೆ. ಅದಕ್ಕಾಗಿಯೇ ತಾಜಾ ಹೂವಿನಿಂದ ಫ್ಯಾಷನಬಲ್ ಕತ್ತಿನಹಾರ, ಕಿವಿಯೋಲೆ, ಬಳೆ, ಉಂಗುರ, ಬೈತಲೆ ಬೊಟ್ಟು, ಬ್ರೇಸ್‌ಲೆಟ್ ಹೀಗೆ ವಿವಿಧ ರೀತಿಯ ಆಭರಣಗಳನ್ನು ತಯಾರಿಸುತ್ತೇವೆ. ಕೆಲವರಂತೂ ಅರಿಸಿನ ಶಾಸ್ತ್ರದೊಂದಿಗೆ ಮೆಹೆಂದಿ ಶಾಸ್ತ್ರಕ್ಕೂ ಹೂವಿನ ಆಭರಣಗಳನ್ನು ಬಯಸುತ್ತಾರೆ. ಇತ್ತೀಚೆಗೆ ಹೂವಿನ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ.
ತೆಂಗಿನ ಕಾಯಿ ಮೇಲೆ ಚಿತ್ತಾರ: ಮದುವೆಗಳಲ್ಲಿ ವಧು ಮಂಟಪಕ್ಕೆ ಬರುವಾಗ ಕೈಯಲ್ಲಿ ತರುವ ತೆಂಗಿನ ಕಾಯಿಗೂ ಹೊಸ ಲುಕ್ ನೀಡಿರುವುದು ಈಗಿನ ಫ್ಯಾಷನ್ ಆಗಿದೆ. ತೆಂಗಿನ ಕಾಯಿ ಮೇಲೆ ವಧು–ವರರ ಚಿತ್ರ, ಇಷ್ಟ ದೇವರ ಚಿತ್ರ ಅಥವಾ ಲೋಹ ಹಾಗೂ ಚಿಕ್ಕ ಚಿಕ್ಕ ಆಕರ್ಷಕ ಕಲ್ಲುಗಳಿಂದ ಅಲಂಕಾರ ಮಾಡಿರುವ ಹೊಸತನ ಮದುವೆಗಳಲ್ಲಿ ನೋಡಬಹುದಾಗಿದೆ.
ಅಂತರ್ಪಟಕ್ಕೆ ನ್ಯೂ ಲುಕ್: ಮಂಟಪದಲ್ಲಿ ಬಳಸುವ ಅಂತರ್ಪಟದ ಮೇಲೂ ವಧು–ವರರ ಚಿತ್ರಗಳು, ದೇವರ ಚಿತ್ರಗಳು ಅಥವಾ ಮದುವೆ ದಿಬ್ಬಣದ ಚಿತ್ರಗಳನ್ನು ಬಿಡಿಸಿ ಅದನ್ನು ಮತ್ತಷ್ಟು ಆಕರ್ಷಕ ಹಾಗೂ ಸುಂದರವಾಗಿ ಕಾಣುವಂತೆ ಮಾಡಲಾಗುತ್ತದೆ.
ಮುತ್ತಿನ ಅಕ್ಷತೆ: ವಿವಾಹದ ಸಮಯದಲ್ಲಿ ವಧು–ವರರು ಮಾಡುವ ಅಕ್ಕಿ ಸುರಿಯುವ ಶಾಸ್ತ್ರದಲ್ಲಿ ಕೆಲವರು ಈ ಅಕ್ಕಿಯೊಂದಿಗೆ ಚಿನ್ನ, ಬೆಳ್ಳಿಯ ಪುಟ್ಟ ಪುಟ್ಟ ಆಭರಣಗಳನ್ನೂ ಸೇರಿಸುತ್ತಾರೆ. ಅದರ ಬದಲಾಗಿ ಮುತ್ತುಗಳು ಹಾಗೂ ಕುಂದನ್‌ಗಳಿಂದ ಮಾಡಿದ ಅಕ್ಷತೆಯನ್ನು ಇಡುವ ವಾಡಿಕೆ ಈಗ ಹೆಚ್ಚುತ್ತಿದೆ.
ಸಿಂಗರಿಸಿದ ಬುಟ್ಟಿ, ಕುಡಿಕೆ: ಮದುಮಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು ಮಂಟಪಕ್ಕೆ ಕರೆ ತರುವ ಸಮುದಾಯದವರಿಗಾಗಿ ಬಣ್ಣ ಬಣ್ಣದ ಬಟ್ಟೆ ಲೇಸ್, ಮುತ್ತುಗಳಿಂದ ಸಿಂಗರಿದ ಬುಟ್ಟಿಗಳನ್ನು ಕಾಣಬಹುದಾಗಿದೆ. ಜತೆಗೆ ಮದುವೆ ಮಂಟಪದಲ್ಲಿ ಬಳಸುವ ಮಣ್ಣಿನ ಕುಡಿಕೆಗಳಿಗೆ ವಿವಿಧ ಬಣ್ಣಗಳನ್ನು ಲೇಪಿಸಿ ಅಲಂಕಾರವಾಗಿ ಬಳಸುವುದು ಸಾಮಾನ್ಯವಾಗಿದೆ.
ಮದುವೆ ಹಾಲ್‌ಗಳ ಒಳಾಂಗಣ ಮತ್ತು ಹೊರಾಂಗಣ ಅಲಂಕಾರ ಮದುವೆಗಳ ಅದ್ದೂರಿತನ ಮತ್ತು ಅಭಿರುಚಿಯನ್ನು ಬಿಂಬಿಸುತ್ತವೆ. ಬರುವ ಅತಿಥಿಗಳು ಇದೆಲ್ಲವನ್ನು ಕಣ್ಣು ತುಂಬಿಕೊಂಡು ವ್ಹಾವ್ ಎನ್ನುವ ಉದ್ಗಾರದೊಂದಿಗೆ ಮನತುಂಬಿ ಹರಿಸಿ ಹೋಗುವ ಸಾಮಾನ್ಯ ನೋಟಗಳು ಕಾಣಸಿಗುತ್ತವೆ.