ಅದ್ದೂರಿಯೂ ಇಲ್ಲುಂಟು ಆಪ್ತವೂ ಹೌದು...
ಮದುವೆ ಅದ್ದೂರಿಯಾಗಿಯೂ ಇರಬೇಕು ಮತ್ತಷ್ಟೇ ಆಪ್ತವಾಗಿರಲೂಬೇಕು ಎಂದು ಬಯಸುವವರಿಗೆ ಥಟ್ಟನೆ ನೆನಪಾಗುವುದೇ ‘ಡಿಸ್ಟಿನೇಷನ್ ವೆಡ್ಡಿಂಗ್’. ಮನೆ, ಊರಿನಿಂದ ದೂರದ ಸುಂದರ ತಾಣದಲ್ಲಿ ತಮ್ಮಿಷ್ಟದ ಸೆಟ್ ಹಾಕಿ ಯಾವುದೇ ಗದ್ದಲ–ಗೊಂದಲಗಳಿಲ್ಲದೆ ವಿವಾಹವಾಗುವ ಈ ಬಗೆ ಇತ್ತೀಚೆಗೆ ಹೆಚ್ಚು ಜನಪ್ರಿಯ.
ಅರ್ಧ ಶತಮಾನದ ಹಿಂದೆ ತೀರಾ ಆಪ್ತೇಷ್ಟರ ಸಮ್ಮುಖದಲ್ಲಿ ನಡೆಯುತ್ತಿದ್ದ ಮದುವೆ ನಂತರದ ದಶಕಗಳಲ್ಲಿ ಆಡಂಬರದತ್ತ ಹೊರಳಿಕೊಂಡಿತು. ಅಬ್ಬರ, ಭರಾಟೆ, ಜನಜಂಗುಳಿಯಿಂದ ಕೂಡಿದ ಮದುವೆಗಳು ಸಾಮಾನ್ಯವಾದವು. ಆದರೆ ತೀರಾ ಇತ್ತೀಚಿನ ದಿನಗಳಲ್ಲಿ ನವ ವಧು–ವರರು ಆಪ್ತತೆಯೊಂದಿಗೆ ಅದ್ದೂರಿಯನ್ನು ಬಯಸುತ್ತಿದ್ದಾರೆ. ಇದಕ್ಕೆ ರೂಪುಗೊಂಡ ಮಾದರಿಯೇ ಡಿಸ್ಟಿನೇಷನ್ ವೆಡ್ಡಿಂಗ್.
ಪಾಶ್ಚತ್ಯ ರಾಷ್ಟಗಳಲ್ಲಿ ಜಯಪ್ರಿಯವಾಗಿದ್ದ ಈ ಮದುವೆ ಮಾದರಿ ಭಾರತದಲ್ಲಿ ಸಿನಿಮಾ ನಟ– ನಟಿಯರು ಸೇರಿದಂತೆ ತಾರಾ ಜೋಡಿಗಳ ಮದುವೆಯಿಂದ ಹೆಚ್ಚು ಮುನ್ನಲೆಗೆ ಬಂದಿದೆ.
ಕೇರಳ, ರಾಜಸ್ಥಾನ, ಗೋವಾ, ದೆಹಲಿ ಇವು ದೇಶದ ಜನರ ನೆಚ್ಚಿನ ಮದುವೆ ತಾಣಗಳು. ಈ ಪಟ್ಟಿಯಲ್ಲಿ ಕರ್ನಾಟಕದ ಹಂಪಿಯೂ ಜಾಗ ಗಿಟ್ಟಿಸಿದೆ. ಭಾರತದ ಕೆಲ ಪ್ರಸಿದ್ಧರು ಮಾತ್ರ ಅಂತರರಾಷ್ಟ್ರೀಯ ಮಟ್ಟದ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಆಸಕ್ತಿ ತೋರುತ್ತಾರೆ. ದೀಪಿಕಾ ಪಡುಕೋಣೆ–ರಣವೀರ್ ಸಿಂಗ್, ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ವಿದೇಶದ ಮದುವೆ ಇದಕ್ಕೆ ನಿದರ್ಶನದಂತಿವೆ. ಇನ್ನೂ ಅನೇಕ ಬಾಲಿವುಡ್ ನಟ– ನಟಿಯರು ದೇಶಿಯ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ರೇರಣೆ ನೀಡಿದ್ದಾರೆ.
ಭಾರತದಂತಹ ವೈವಿಧ್ಯಮಯ ಸುಂದರ ತಾಣಗಳನ್ನು ಒಳಗೊಂಡ ದೇಶದಲ್ಲಿ ವಿವಾಹ ಸಮಾರಂಭಕ್ಕೆ ಗಮ್ಯಸ್ಥಾನವನ್ನು ನಿರ್ಧರಿಸುವುದು ಒಂದು ಸವಾಲೇ ಸರಿ. ಆದಾಗ್ಯೂ ಕೆಲ ಸ್ಥಳಗಳಲ್ಲಿ ಹೆಚ್ಚೆಚ್ಚು ವಿವಾಹಗಳು ನಡೆಯುತ್ತಿವೆ.
ಪಾರ್ಟಿ ಹಬ್ ಗೋವಾ: ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಬಹುತೇಕರ ಕನಸು. ಪಾರ್ಟಿ ಹಬ್ ಎಂದೇ ಗುರುತಿಸಿಕೊಳ್ಳುವ ಗೋವಾ ಭಾರತೀಯರಿಗೆ ಮಾತ್ರವಲ್ಲದೆ ಜಗತ್ತಿನಾದ್ಯಂತ ಇರುವ ಜನರಿಗೆ ಮೆಚ್ಚಿನ ತಾಣ. ನಗರದ ಗಡಿಬಿಡಿಯಿಂದ ಬಿಡುವು ಮಾಡಿಕೊಳ್ಳುವ ಇರಾದೆ ಇರಲಿ ಅಥವಾ ಸುಂದರವಾದ ಕಡಲತೀರಗಳಲ್ಲಿ ಮದುವೆಯಾಗುವ ಬಯಕೆಯಿರಲಿ, ಜನರ ಮನದ ಮುಂಚೂಣಿಯಲ್ಲಿ ಗೋವಾ ಇದ್ದೇ ಇರುತ್ತದೆ.
ಐತಿಹಾಸಿಕ ಹಂಪಿ: ಸುಂದರ ಬೆಟ್ಟಗಳು ಮತ್ತು ಕಣಿವೆಗಳ ನಡುವೆ ನೆಲೆಗೊಂಡಿರುವ ಹಂಪಿಯು ಹತ್ತಾರು ಸ್ಮಾರಕಗಳು ಮತ್ತು ದೇವಾಲಯಗಳನ್ನು ಒಳಗೊಂಡಿದೆ. ಸಾಂಸ್ಕೃತಿಕ ಸಿರಿವಂತಿಕೆಯಿಂದ ಕೂಡಿರುವ ಈ ಪ್ರದೇಶ ಸುಂದರ ಮದುವೆ ಸ್ಥಳವಾಗಿ ಮಾರ್ಪಟ್ಟಿವೆ.
ಹಿಮ ಬೀಳುವ ಶಿಮ್ಲಾ: ಭಾರತದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಶಿಮ್ಲಾದಲ್ಲಿನ ಹಸಿರು ಬೆಟ್ಟಗಳು, ಆಕರ್ಷಕ ಸೂರ್ಯಾಸ್ತ ಮತ್ತು ಹಿತವೆನಿಸುವ ವಾತಾವರಣವು ಮದುವೆಯ ಘಳಿಗೆಯನ್ನು ಮತ್ತಷ್ಟು ಸ್ಮರಣೀಯವಾಗಿಸುತ್ತದೆ.
ನೈನಿತಾಲ್: ಉತ್ತರಾಖಂಡದ ಈ ಆಕರ್ಷಕ ತಾಣಕ್ಕೆ ಸಾಟಿಯೇ ಇಲ್ಲ. ಸುಂದರ ಸರೋವರಗಳಿಂದ ಸುತ್ತುವರೆದಿರುವ ಹಚ್ಚ ಹಸಿರಿನ ಬೆಟ್ಟಗಳ ಈ ತಾಣ ಕನಸಿನ ಮದುವೆಗೆ ಹೇಳಿಮಾಡಿಸಿದಂತಿದೆ.
ಜೈಪುರ: ‘ಪಿಂಕ್ ಸಿಟಿ’ ಎಂದು ಕರೆಸಿಕೊಳ್ಳುವ ಈ ರಾಜಸ್ಥಾನದ ರಾಜಧಾನಿಯು ದೇಶದ ಕೆಲವು ಸುಂದರವಾದ ಮದುವೆಗಳಿಗೆ ಸಾಕ್ಷಿಯಾಗಿದೆ. ಐತಿಹಾಸಿಕ ನೆನಪುಗಳ ಜೊತೆಗೆ ಅದ್ಭುತ ರಾಜಸ್ಥಾನಿ ಆಹಾರ ಮತ್ತು ಆತಿಥ್ಯವನ್ನು ಇಲ್ಲಿ ಅನುಭವಿಸಬಹುದು.
ಕೇರಳದ ಹಿನ್ನೀರು: ದಕ್ಷಿಣ ಭಾರತದ ಪ್ರಮುಖ ಮದುವೆ ತಾಣಗಳಲ್ಲಿ ಕೇರಳ ಅಗ್ರಮಾನ್ಯ. ತಣ್ಣನೆಯ ಹಿನ್ನೀರಿನ ಜೊತೆಗೆ ಮೋಡಿಮಾಡುವ ಹಸಿರು, ದೋಣಿ ವಿಹಾರವು ಮದುವೆಯನ್ನು ಮಧುರವಾಗಿಸುತ್ತದೆ. ಒಳ್ಳೆಯ ಫೋಟೊ, ವಿಡಿಯೊಳಿಗೂ ಪೂರಕ ತಾಣವಿದು.
ನೀಮ್ರಾನಾ ಕೋಟೆ-ಅರಮನೆ: ರಾಷ್ಟ್ರ ರಾಜಧಾನಿಯಿಂದ ಕೆಲವು ಗಂಟೆಗಳ ಪ್ರಯಾಣ ದೂರದಲ್ಲಿರುವ ಈ ಅರಮನೆಯನ್ನು 15ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದನ್ನು ಅತ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾಗಿ ಪರಿವರ್ತಿಸಲಾಗಿದೆ. ಬೆಟ್ಟದ ನೋಟಗಳು ಮತ್ತು ರಾಜಸ್ಥಾನಿ ಶೈಲಿಯ ಒಳಾಂಗಣಗಳು ಈ ಸ್ಥಳವನ್ನು ನಿಮ್ಮ ಮೆಚ್ಚಿನ ಸ್ಥಳವಾಗಿಸುವುದರಲ್ಲಿ ಗುಮಾನಿ ಇಲ್ಲ.
ಆಗ್ರಾದ ಅದ್ಭುತದಲ್ಲಿ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್, ಪ್ರೀತಿಯ ಸಂಕೇತವೂ ಹೌದು. ಮೊಘಲ್ ಕಲಾಕೃತಿಯ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಯಲ್ಲಿನ ವಿವಾಹ ಬಂಧವೂ ಪ್ರೀತಿಯ ಬಂಧವಾಗುವುದರಲ್ಲಿ ಸಂದೇಹವೇ ಬೇಡ. ಇದು ದೇಶದಲ್ಲಿನ ಬಜೆಟ್ ಸ್ನೇಹಿ ವಿವಾಹ ತಾಣವೂ ಹೌದು.