ಸರಳ ಮದುವೆಯ ಸೂತ್ರ ಮಂತ್ರ–ಮಾಂಗಲ್ಯ
‘ಸಖಿ ನಮ್ಮ ಸಖ್ಯದ ಆಖ್ಯಾನ ಕಟು–ಮಧುರ’ ಎನ್ನುತ್ತಾರೆ ಬೇಂದ್ರೆ. ಹೆಣ್ಣು ಗಂಡು ಒಬ್ಬರಿಗೊಬ್ಬರು ಆಸರೆಯಾಗಿ ಬದುಕುವ ಸಾಂಗತ್ಯಕ್ಕೆ ಮದುವೆ ಒಂದು ನೆಪ. ಅದು ಸಹಬಾಳ್ವೆಯ ಸಹನೀಯ ಮಾಡುವುದಕ್ಕಿಂತ ಸರೀಕರ ಎದುರು ಸಿರಿಮಂತಿಕೆಯ ಪ್ರದರ್ಶನಕ್ಕೆ ವೇದಿಕೆಯಾಗುತ್ತಿದೆ. ಇದೇ ಪ್ರತಿಷ್ಠೆಗೆ ಅನೇಕ ಕುಟುಂಬಗಳು ಸಾಲದ ಶೂಲಕ್ಕೆ ಬಲಿಯಾಗಿವೆ. ಇಲ್ಲವೇ ಆ ಸಾಲಕ್ಕೆ ಜೀವನದುದ್ದಕ್ಕೂ ಹೆಣಗಾಡಿ ದುಡಿದಿದ್ದೂ ಇದೆ. ಸಮಕಾಲೀನ ಅದ್ದೂರಿ ಮದುವೆಗಳಿಗೆ ನೀಡುವ ಪ್ರಾಮುಖ್ಯತೆ ದಾಂಪತ್ಯದ ಆಖ್ಯಾನವನ್ನೇ ತಿರುಗಿ ನೋಡುವಂತೆ ಮಾಡುತ್ತಿದೆ. ಇದರಿಂದ ರೈತ–ಪ್ರಗತಿಪರ–ಶರಣ ಚಳವಳಿಯ ಆದರ್ಶ ಮದುವೆಗಳು ನೇಪತ್ಯಕ್ಕೆ ಸರಿದಂತೆ ಕಾಣಿಸುತ್ತಿವೆ. ಆದರೂ ಪ್ರೇಮಿಸುವ ಯುವ ಮನಸುಗಳಿಗೆ ಸರಳ ಮದುವೆಯ ಆಸರೆ ನಾಡಿನ ಉದ್ದಗಲಕ್ಕೂ ಆತುಕೊಳ್ಳಲು ಅಣಿಯಿದೆ ಎನ್ನುವುದು ಸತ್ಯ.
ಇತ್ತೀಚೆಗೆ ಉಡುಪಿ ಬಳಿಯ ಮಲ್ಪೆಯ ಮುಸ್ಲಿಂ ಕುಟಂಬ ಸರಳ ಮದುವೆ ಏರ್ಪಡಿಸಿದ ವಿವರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತು. ಮೊದಲ ಮಗಳ ಮದುವೆಯನ್ನು ವಿಜೃಂಭಣೆಯಿಂದ ಮಾಡಿದ್ದ ಪೋಷಕರು ಎರಡನೇ ಮಗಳ ಮದುವೆಯನ್ನು ಸರಳವಾಗಿ ನೆರವೇರಿಸಿದರು. ಅದರಿಂದ ಉಳಿಸಿದ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗ ಮಾಡಿದ ಲೆಕ್ಕಾಚಾರಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಹಣದ ವೈಭವ, ಸಂಪ್ರದಾಯದ ಗೋಜು ಗದ್ದಲ ಇಲ್ಲದೆ ದಾಂಪತ್ಯ ಬದುಕಿಗೆ ವಧು–ವರರನ್ನು ಹಾರೈಸುವುದಕ್ಕೆ ಇಂತಹ ಹಲವು ಮಾದರಿಗಳು ದೇಶದಾದ್ಯಂತ ಸಿಗುತ್ತವೆ. ಅದರಲ್ಲಿ ಮಂತ್ರಮಾಂಗಲ್ಯ ಜನಪ್ರಿಯ.
‘ಮದುವೆಯ ಈ ಬಂಧಾ ಅನುರಾಗದ ಅನುಬಂಧ ಏಳೇಳು ಜನುಮದಲೂ ತೀರದ ಸಂಬಂಧ...’ ಆರ್.ಎನ್. ಜಯಗೋಪಾಲ ರಚನೆಯ ಈ ಜನಪ್ರಿಯ ಸಿನಿಮಾ ಗೀತೆಗೆ ತಲೆದೂಗದ ಕನ್ನಡಿಗರು ಇರಲಾರರು. ಅಂತಹ ಮಾಧುರ್ಯದ ಈ ಗೀತೆ ತರುಣರ ಮನದ ಹಂದರದಲ್ಲಿ ಕನಸಿನ ಲೋಕವನ್ನೇ ಸೃಷ್ಟಿಸುತ್ತದೆ. ಮದುವೆ ಎಂಬುದು ಮನುಷ್ಯನ ಜೀವನದಲ್ಲಿ ಬಹುದೊಡ್ಡ ಘಟ್ಟ. ಅದಕ್ಕಾಗಿ ದೊಡ್ಡ ಸಂಭ್ರಮದ ಸನ್ನಿವೇಶವನ್ನೇ ಸೃಷ್ಟಿಸಲಾಗುತ್ತಿದೆ. ಯಾವುದೇ ಸಿನಿಮಾ ಅಥವಾ ಟೀವಿಯ ಧಾರಾವಾಹಿಯನ್ನು ನೋಡಿದರೂ ಅಲ್ಲಿ ಮದುವೆಯದೇ ಪಾರುಪತ್ಯ. ಅಲ್ಲಿಯ ಸಂಭ್ರಮದ ಮೆರುಗು ವೀಕ್ಷಕರ ಕಣ್ಣನ್ನು ತನ್ನತ್ತ ಸೆಳೆಯುತ್ತದೆ. ಅಂತಹ ವೈಭವ ಇಲ್ಲದೆ, ಹಣದ ಹೊಳೆ ಹರಿಸದೆ ಮಾಡುವ ಸರಳ ಮದುವೆಯೂ ಸಾಕಷ್ಟಿ ಇವೆ.
ಮಂತ್ರಮಾಂಗಲ್ಯದ ತೇಜಸ್ಸು
ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) ಅವರು ತಮ್ಮ ಹಿರಿಯ ಮಗ ಪೂರ್ಣಚಂದ್ರ ತೇಜಸ್ವಿ ಅವರ ಮದುವೆಯನ್ನು ಮಾಡುವ ಸಮಯಕ್ಕೆ ‘ಮಂತ್ರ ಮಾಂಗಲ್ಯ’ ಎಂಬ ಕಿರುಹೊತ್ತಿಗೆಯನ್ನು ಪ್ರಕಟಿಸುತ್ತಾರೆ. ಕರ್ನಾಟಕದಲ್ಲಿ ಸರಳ ಮದುವೆಗೆ ಅದು ಹೊಸ ತೇಜಸ್ಸನ್ನು ತುಂಬಿತು. ಅದ್ದೂರಿ ಮದುವೆಗಳು ಜನರ ಬಡತನದ ಮಟ್ಟವನ್ನು ಹೆಚ್ಚಿಸುವುದಲ್ಲದೇ ಮೌಢ್ಯದ ಕೂಪಕ್ಕೆ ತಳ್ಳುತ್ತದೆ ಎನ್ನುವುದು ವೈಚಾರಿಕ ಚಿಂತನೆ. ವಿಪರೀತ ಖರ್ಚು ಮನುಷ್ಯನ ಮನೋಸ್ಥಿತಿಯನ್ನ ಭ್ರಷ್ಟಗೊಳಿಸುತ್ತದೆ ಎನ್ನುವ ವಿಶ್ಲೇಷಣೆಯನ್ನು ನೋಡಿದ್ದೇವೆ. ಹೀಗಿರುವಾಗ ಖರ್ಚಿಲ್ಲದೆ ನೆರವೇರುವ ಮದುವೆಗಳು ವಿಚಾರವಂತ ಯುವಪ್ರೇಮಿಗಳಿಗೆ ಆಪ್ತವೂ ಆಕರ್ಷಕವೂ ಆಗಿರುವುದರಿಂದ ಆಗಾಗ ಕ್ರಾಂತಿಯ ಕಿಡಿ ಮಿಂಚುತ್ತಿವೆ. ಇಂತಹ ಮದುವೆ ಸಮಾಜದ ಆರೋಗ್ಯದ ದೃಷ್ಟಿಯಿಂದಲೂ ಅಗತ್ಯ ಅನ್ನಿಸುತ್ತದೆ. ಪೋಷಕರಿಗೆ ಮಕ್ಕಳ ಮದುವೆ ಮಾಡುವ ದೊಡ್ಡ ಹೊಣೆಗಾರಿಕೆ ಇರುತ್ತದೆ. ತಮ್ಮ ಮಕ್ಕಳ ಪಾಲನೆ, ಅವರಿಗೆ ನೀಡುವ ಶಿಕ್ಷಣದ ವೆಚ್ಚಕ್ಕಿಂತ ಮದುವೆಗೆ ಅಧಿಕ ಹಣ ಖರ್ಚು ಮಾಡುವ ಪೋಷಕರು ಹೆಚ್ಚು. ಇಂತಹ ಅನಪೇಕ್ಷೇಯ ದುಂದುಗಾರಿಕೆಯನ್ನು ತಪ್ಪಿಸಲು ಮಂತ್ರಮಾಂಗಲ್ಯ ಸಹಕಾರಿ ಆಗುತ್ತದೆ.
ಸರಳ ಮದುವೆ ಕುರಿತು ಕುವೆಂಪು ‘ನೀವು ಲೋಕವನ್ನಾಗಲಿ ಸಮಾಜವನ್ನಾಗಲಿ ಬದಲಾಯಿಸುವ ಯತ್ನ ಅಗತ್ಯ ಇಲ್ಲ. ನೀವು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ. ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ, ನಾನು ಹೇಳುವ ಸಣ್ಣ ಸುಧಾರಣೆ ನಿಮ್ಮ ಜೀವನದಲ್ಲಿ ಮಾಡಿಕೊಳ್ಳಿ. ನಿಮ್ಮ ಮದುವೆಯನ್ನು ವರದಕ್ಷಿಣೆ ತೆಗೆದುಕೊಳ್ಳದೆ ಶಾಸ್ತ್ರ ಆಚಾರಗಳಿಗೆ ಕಟ್ಟು ಬೀಳದೆ ನಿಮ್ಮ ಅಂತಸ್ತಿನ ಪ್ರದರ್ಶನ ಮಾಡದೆ ಸರಳವಾಗಿ ಮದುವೆ ಮಾಡಿಕೊಳ್ಳಿ. ಇದ್ಯಾವ ಮಹಾಕ್ರಾಂತಿ ಎಂದು ನಿಮಗನಿಸಬಹುದು. ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ನೀವು ನಂಬಿದ ಆದರ್ಶಗಳ ಮೌಲ್ಯಗಳ ಪರವಾಗಿ ನಿಂತು ಗೊಡ್ಡು ಸಂಪ್ರದಾಯಗಳನ್ನು ಎದುರಿಸಿ ನಾವು ನಂಬಿದ ಆದರ್ಶಗಳ ಪರವಾಗಿ ನಿಲ್ಲುವ ಅದ್ಭುತ ಅನುಭವ ಆನಂದ ಎಂದಾದರೂ ನಿಮಗೆ ಗೊತ್ತಾಗುತ್ತದೆ’ ಎಂದು ವಿವರಿಸುತ್ತಾರೆ.
ಸರಳ ಮದುವೆಗೆ ಮಾದರಿ ಸೂತ್ರ
ಸರಳ ಮದುವೆಗಳು ಏರ್ಪಡಿಸಬೇಕು. ಈ ವಿಷಯದಲ್ಲಿ ಇರುವ ಜನರ ಮೌಢ್ಯವನ್ನು ದೂರ ಮಾಡಬೇಕು ಎನ್ನುವ ದೃಷ್ಟಿಯಿಂದಲೇ ಕುವೆಂಪು ಇಪ್ಪತ್ತು ಅಂಶಗಳ ಸೂತ್ರವನ್ನೇ ಬರೆದಿದ್ದಾರೆ. ಅದು ಮಂತ್ರಮಾಂಗಲ್ಯ ವಿವಾಹ ಸಂಹಿತೆ ಎಂದು ಜನಪ್ರಿಯವಾಗಿದೆ. ಅದು ಕಿರುಹೊತ್ತಿಗೆಯ ರೂಪದಲ್ಲಿ ಆಗಾಗ ಮುದ್ರಣವಾಗುತ್ತಲೇ ಇರುತ್ತದೆ. ಅದು ದಾಂಪತ್ಯದ ವೇದಿಕೆ ಏರಿದ ತರುಣ–ತರುಣಿಯರಿಗೆ ತಮ್ಮ ಬದುಕು ಹೇಗಿರಬೇಕು ಎನ್ನುವುದನ್ನು ಹೇಳುತ್ತದೆ. ಅದನ್ನು ಮದುವೆ ಮಾಡಿಸುವ ಹಿರಿಯರೊಬ್ಬರು ನವ ದಂಪತಿಗೆ ಬೋಧಿಸುತ್ತಾರೆ.
ಬೋಧನೆಯ ಸ್ವರೂಪ ‘ಈ ದಿನ ಇಲ್ಲಿ ಈ ರೀತಿ ಮದುವೆಯಾಗುವುದರ ಮೂಲಕ ನೀವು ನಿಮ್ಮ ಎಲ್ಲ ಮಾನಸಿಕ ಮತ್ತು ಆಧ್ಯಾತ್ಮಿಕ ಸಂಕೋಲೆ ಮತ್ತು ದಾಸ್ಯಗಳಿಂದ ವಿಮುಕ್ತರಾಗಿ ಸ್ವತಂತ್ರರಾಗುತ್ತಿದ್ದೀರಿ. ನೀವು ಇನ್ನು ಮುಂದೆ ಯಾವುದೇ ಜಾತಿ ಮತ್ತು ಜನಾಂಗಗಳಿಗಿಂತ ಮೇಲಾದವರಲ್ಲ. ಯಾವ ಜಾತಿ ಮತ್ತು ಜನಾಂಗಗಳಿಗಿಂತ ಕೀಳಾದವರೂ ಅಲ್ಲ. ನಿಮ್ಮನ್ನು ಇಂದು ಮನುಷ್ಯ ಸಮಾಜದ ಎಲ್ಲ ಕೃತಕ ಜಾತಿಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ. ನಿಮ್ಮನ್ನು ಇಂದು ಎಲ್ಲಾ ಸಂಕಚಿತ ಮತಧರ್ಮಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ. ನಿಮ್ಮನ್ನು ಅಸತ್ಯ ಮತ್ತು ಮೂಢನಂಬಿಕೆಗಳಿಂದ ಮುಕ್ತರನ್ನಾಗಿ ಮಾಡಿದ್ದೇವೆ. ಮನುಷ್ಯನ ಜೀವಿತ ಕಾಲವೇ ಒಂದು ಸುಮುಹೂರ್ತ. ಇದರೊಳಗೆ ಮುಹೂರ್ತ, ರಾಹುಕಾಲ, ಗುಳಿಕಕಾಲಗಳನ್ನೂ ನೋಡುವ ಅಗತ್ಯವಿಲ್ಲ. ಕಾಲವು ನಿರ್ಗುಣ. ಎಂದೂ ಸಂಪಾದಿಸಲು, ಸೃಷ್ಟಿಸಲು, ಕೂಡಿಡಲು ಸಾಧ್ಯವೇ ಇಲ್ಲದ, ಮನುಷ್ಯನ ಜೀವಿತ ಕಾಲದ ಪ್ರತಿ ಕ್ಷಣವೂ ಅತ್ಯಮೂಲ್ಯ. ಯಾರು ಈ ಸತ್ಯವನ್ನು ಅರಿಯುತ್ತಾರೋ ಅವರು ತಮ್ಮ ಕರ್ತವ್ಯ ಮತ್ತು ನಡವಳಿಕೆಗಳಿಂದ ಕಾಲವನ್ನು ಒಳ್ಳೆಯ ಅಥವಾ ಕೆಟ್ಟ ಕಾಲವನ್ನಾಗಿ ಪರಿವರ್ತಿಸಬಲ್ಲರು. ನೀವು ಯಾವುದೇ ದೇವರ ಅಡಿಯಾಳಾಗಿ ಬದುಕಬೇಕಾಗಿಲ್ಲ. ಮನುಷ್ಯ ಸಮಾಜದ ಮಾನವೀಯ ಮೌಲ್ಯಗಳೇ ಮನುಷ್ಯನ ಮೊದಲನೆಯ ಹಾಗೂ ಕೊನೆಯ ದೇವರು. ಮಾನವರೆಲ್ಲರೂ ಸಮಾನರು. ಪುರುಷನು ಸ್ತ್ರೀಗಿಂತ ಮೇಲು ಎಂದು ಹೇಳುವ ಎಲ್ಲ ಧರ್ಮಗಳನ್ನೂ, ಎಲ್ಲ ಸಂಪ್ರದಾಯಗಳನ್ನೂ ನೀವು ಇಂದು ತಿರಸ್ಕರಿಸಿದ್ದೀರಿ. ಹೆಂಡತಿಯಾಗಲೀ ಗಂಡನಾಗಲೀ ಪರಸ್ಪರ ಅಧೀನರೂ ಅಲ್ಲ, ಆಜ್ಞಾನುವರ್ತಿಯೂ ಅಲ್ಲ. ಹೆಂಡತಿಯೂ ಗಂಡನಷ್ಟೇ ಸ್ವತಂತ್ರಳೂ ಸಮಾನತೆಯುಳ್ಳವಳೂ ಆಗಿರುತ್ತಾಳೆ. ಗಂಡ–ಹೆಂಡತಿಯನ್ನು ಒಟ್ಟಿಗೆ ಬದುಕುವಂತೆ ಮಾಡುವ ಸಾಧನ ಪ್ರೀತಿ ಒಂದೇ. ಒಬ್ಬರನ್ನೊಬ್ಬರು ಪ್ರೀತಿಸದವರು ತಾಳಿ ಕಟ್ಟಿಕೊಂಡರೂ ವ್ಯರ್ಥ, ಅಗ್ನಿಯನ್ನು ಸುತ್ತಿದರೂ ವ್ಯರ್ಥ, ಯಾವ ಯಾವ ಶಾಸ್ತ್ರ ಆಚಾರದ ಪ್ರಕಾರ ಮದುವೆಯಾದರೂ ವ್ಯರ್ಥ. ದೇವರ ಬಗ್ಗೆ ಎಂದೂ ಸುಳ್ಳು ಹೇಳಕೂಡದು. ನಿಮ್ಮ ಅನುಭವ, ನಿಮಗೆ ದೇವರು ಇಲ್ಲವೆಂದು ತಿಳಿಸಿದರೆ ದೇವರು ಇಲ್ಲವೆಂದು ಹೇಳಿ. ನಿಮ್ಮ ಅನುಭವ, ನಿಮಗೆ ದೇವರು ಇದ್ದಾನೆಂದು ತಿಳಿಸಿದರೆ ದೇವರು ಇದ್ದಾನೆಂದು ಹೇಳಿ. ನಿಮ್ಮ ಅನುಭವ, ದೇವರು ಇದ್ದಾನೆಯೋ ಇಲ್ಲವೋ ತಿಳಿಯದೆಂದು ತಿಳಿಸಿದರೆ, ದೇವರು ಇದ್ದಾನೆಯೋ ಇಲ್ಲವೋ ತಿಳಿಯದೆಂದು ಹೇಳಿ. ನಮ್ಮ ಅನುಭವವನ್ನು ಸುಳ್ಳು ಹೇಳದೆ ಒಪ್ಪಿಕೊಳ್ಳುವುದು, ನಿರ್ಭೀತಿಯಿಂದ ವಾಸ್ತವ ಸ್ಥಿತಿಯನ್ನು ನೋಡುವುದು ಸತ್ಯಾನ್ವೇಷಣೆಯ ಮೊದಲನೆಯ ಹಂತ. ಜ್ಞಾನ ಯೋಗದ ಮೊದಲ ಪಾಠ. ಪರವಂಚನೆ ಮತ್ತು ಆತ್ಮವಂಚನೆ ಮಾಡಿಕೊಳ್ಳುವವನಿಗೆ ತಮಸ್ಸಿನಿಂದಲೂ, ಅಜ್ಞಾನದಿಂದಲೂ ವಿಮುಕ್ತಿಯೇ ಇಲ್ಲ. ದೇವರ ಹೆಸರಿನಲ್ಲಿ ಸುಳ್ಳು ಹೇಳುವ ಮಠಾಧಿಪತಿಗಳನ್ನು ಆಚಾರರನ್ನೂ ಜಗದ್ಗುರುಗಳನ್ನೂ ತಿರಸ್ಕಸಿ. ದೇವರ ಹೆಸರಿನಲ್ಲಿ ಧನಾರ್ಜನೆ ಮಾಡುವ ತೀರ್ಥಕ್ಷೇತ್ರಗಳನ್ನೂ, ದೇವಸ್ಥಾನಗಳನ್ನೂ ತಿರಸ್ಕರಿಸಿ, ದೇವರ ಹೆಸರಿನಲ್ಲಿ ದರೋಡೆ ಮಾಡುವ ಯಾತ್ರಾಸ್ಥಳಗಳನ್ನು ತಿರಸ್ಕರಿಸಿ. ವರದಕ್ಷಿಣೆ ಅಥವಾ ವಧುದಕ್ಷಿಣೆ ವ್ಯವಹಾರಗಳಿಗೆ ಒಳಗಾಗದೆ, ನೀವು ನಿಮ್ಮ ಸ್ವಂತ ಪ್ರಯತ್ನದಿಂದ ನಿಮ್ಮ ತಂದೆ ತಾಯಿಗಳಿಗೆ ಯಾವ ರೀತಿಯ ಆರ್ಥಿಕ ಹೊರೆಯಾಗದಂತೆ ವಿವಾಹ ಮಾಡಿಕೊಳ್ಳುತ್ತಿದ್ದೀರಿ.
ಎಲ್ಲ ಮತಧರ್ಮ, ಕಂದಾಚಾರ, ಅಜ್ಞಾನಗಳಿಂದ ವಿಮುಕ್ತರಾಗಿರುವ ವಧೂವರರೇ, ಮಾನವ ಕೋಟಿಯನ್ನು ನಿಮ್ಮಂತೆಯೇ ವಿಮುಕ್ತರನ್ನಾಗಿ ಮಾಡುವ ಪವಿತ್ರ ಕರ್ತವ್ಯವನ್ನು ನೀವು ಮಾಡಿರಿ. ಇನ್ನು ನೀವು ಯಾವುದೇ ಧರ್ಮಕ್ಕೂ ಸೇರುವ ಅಗತ್ಯವಿಲ್ಲ. ಯಾವುದೇ ಮತಕ್ಕೂ ಸೇರುವ ಅಗತ್ಯವಿಲ್ಲ. ಯಾವುದೇ ಶಾಸ್ತ್ರಾಚಾರವನ್ನೂ ಅನುಸರಿಸಬೇಕಾದ ಅಗತ್ಯವಿಲ್ಲ. ಮೇಲೆ ಬೋಧಿಸಿರುವ ಪ್ರತಿಜ್ಞಾವಿಧಿಗಳೇ ನಿಮ್ಮ ಜೀವನದ ದಾರಿದೀಪವಾಗಲಿ. ಮೌಢ್ಯ, ಅಜ್ಞಾನ, ಅಂಧಕಾರಗಳ ವಿರುದ್ಧ ಭಾರತೀಯರಾದ ನಾವೆಲ್ಲ ಹೂಡಿರುವ ಈ ಮಹಾ ಹೋರಾಟದಲ್ಲಿ ನೀವೂ ಭಾಗಿಗಳಾಗಬೇಕೆಂದು ನಾವು ವಿನಂತಿಸಿಕೊಳ್ಳುತ್ತೇವೆ. ನೀವು ಇಲ್ಲಿ ಈ ದಿನದಿಂದ ದಂಪತಿಗಳೆಂದು ನಾವು ಘೋಷಿಸುತ್ತೇವೆ’ ಎಂದು ಹೇಳಿ ಪ್ರಮಾಣವನ್ನು ದಂಪತಿ ಸ್ವೀಕರಿಸುತ್ತಾರೆ. ಅದಕ್ಕೆ ವಧೂವರರ ಪೋಷಕರೂ ಸಮ್ಮತಿಯ ಮೊಹರನ್ನು ಒತ್ತುತ್ತಾರೆ. ಇದನ್ನು ನಮ್ಮ ಪರಂಪರೆಯ ಶರಣ ಚಳವಳಿಯ ಬಳವಳಿಯಂತಿರುವ ವಚನ ಮಾಂಗಲ್ಯದ ರೂಪದಂತೆಯೂ ನೋಡಬಹುದು.
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ.
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ
ಎಂದು ಆದ್ಯ ವಚನಕಾರ ಜೇಡರ ದಾಸಿಮಯ್ಯ ಭಕ್ತಿ ಮತ್ತು ದಾಂಪತ್ಯದ ಅವಿನಾಭಾವ ಸಂಬಂಧದ ಬೆಸುಗೆ ದೇವರು ಮೆಚ್ಚುವಂತೆ ಇರಬೇಕು ಎನ್ನುವ ಆಶಯವನ್ನು ಪ್ರಕಟಿಸುತ್ತಾರೆ. ಇದು ಮದುವೆಯ ಸಂಭ್ರಮಕ್ಕಿಂತ ಬದುಕುವ ರೀತಿ, ಪರಸ್ಪರ ಪ್ರೀತಿಯ ದಾಂಪತ್ಯದ ಮಹತ್ವವನ್ನು ಹೇಳುತ್ತದೆ. ಇಲ್ಲಿ ಬದುಕು ಮುಖ್ಯ ಆಗುತ್ತದೆಯೇ ಹೊರತು ಮದುವೆಯನ್ನು ಮಾಡುವ ರೀತಿ ನೀತಿಗಳಲ್ಲ ಎನ್ನುವ ಅಂಶವನ್ನು ಗುರುತಿಸಬಹುದು.