ಬಂಧ ಬೆಸೆಯುವ ಸಂಗೀತ್

ಬಂಧ ಬೆಸೆಯುವ ಸಂಗೀತ್

Published on

ಸಂಗೀತ ಆಯೋಜನೆ ಈಗೀಗ ಮದುವೆ ಮನೆಯ ಟ್ರೆಂಡ್. ಅರಿಶಿನ, ಬಳೆಶಾಸ್ತ್ರ, ಸಂಗೀತ್, ಮೆಹಂದಿ ಹೀಗೆ ಕನಿಷ್ಠ ಐದು ದಿನಗಳವರೆಗೆ ಸಂಭ್ರಮವಿರುತ್ತದೆ.ಸಂಗೀತ್‌ನಲ್ಲಿ ಬಂಧು ಬಳಗವೆಲ್ಲ ಹಾಡಿ ಕುಣಿಯಲು ಇರುವ ಸದವಕಾಶ. ಅದನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ.

ಸಂಗೀತದ ಅಲೆಗಳು ಸಂಬಂಧದಲ್ಲಿರುವ ಎಂಥ ಬಿರುಕನ್ನು ಮುಚ್ಚಿ ಹಾಕಲು ಮದ್ದಾಗಬಹುದು. ಸಂಗೀತ್ ಕಾರ್ಯಕ್ರಮದಲ್ಲಿ ನಿಮ್ಮ ಆಪ್ತರಿಗೆ ಹೇಳಿಕೊಳ್ಳಲಾರದ ಭಾವನೆಗಳನ್ನು ಹಾಡಿನ ಮೂಲಕ ಹಾಡಿ ತೋರಿಸಬಹುದು. ಹಾಗಾಗಿ ಮದುವೆ ಮನೆಯಲ್ಲಿ ಸಂಗೀತ್‌ಗೆ ವಿಶೇಷವಾದ ಸ್ಥಾನವಿದೆ. ಮೈ ಛಳಿ ಬಿಟ್ಟು ಹೆಜ್ಜೆ ಹಾಕಲು, ಹಾಡಲು, ಕುಣಿಯಲು ಮದುವೆಯ ಸಂಗೀತ್‌ಗಿಂತ ಮತ್ತೊಂದು ವೇದಿಕೆ ಇಲ್ಲ. 

ಹಾಡುಗಳ ಆಯ್ಕೆ ಹೀಗಿರಲಿ:

ಸಾಮಾನ್ಯವಾಗಿ ಮದುವೆ ಎಂದರೆ ಸಂಭ್ರಮ. ಅದರಲ್ಲಿಯೂ ಸಂಗೀತ್‌ ಎಂದರೆ ಇನ್ನಷ್ಟು ಸಂಭ್ರಮ. ಹಾಗಾಗಿ ಸಂಭ್ರಮ ಹೆಚ್ಚಿಸುವ, ಸಡಗರ ತರುವ ಹಾಡುಗಳನ್ನು ಹೆಚ್ಚಾಗಿ ಆಯ್ಕೆ ಮಾಡಿ. ಮದುವೆ, ಮೆಹಂದಿ, ವರ ಮತ್ತು ವಧುವಿನ ಕುರಿತು ಇರುವ ಕನ್ನಡ, ಹಿಂದಿ ಹಾಡುಗಳ ಆಯ್ಕೆಗೆ ಹೆಚ್ಚಿನ ಆದ್ಯತೆ ನೀಡಿ.

ಸಂಗೀತ್‌ನ ಆರಂಭದಲ್ಲಿ ಮಕ್ಕಳಿಗೆ ಹೆಜ್ಜೆ ಹಾಕಲು ಅವಕಾಶ ಕೊಡಿ. ಚಿಣ್ಣರೆಂದರೆ ಉತ್ಸಾಹದ ಬುಗ್ಗೆಗಳು. ಆರಂಭದಲ್ಲಿ ಚಿಣ್ನರು ನೃತ್ಯ ಮಾಡಿದರೆ, ಸಂಗೀತ್‌ನ ಉತ್ಸಾಹ ಇನ್ನಷ್ಟು ಹೆಚ್ಚುತ್ತದೆ. ದೊಡ್ಡವರ ನೃತ್ಯದ ನಡುವೆಯೂ ಚಿಣ್ಣರ ನೃತ್ಯಗಳಿರಲಿ. ಸಂಗೀತ್‌ ಉತ್ಸಾಹ ಕಳೆದುಕೊಳ್ಳುತ್ತಿದೆ ಎನಿಸಿದಾಕ್ಷಣ ಚಿಣ್ಣರು ಉತ್ಸಾಹ ತುಂಬಬಲ್ಲರು

ನಿಮ್ಮ ಬಂಧುಗಳಲ್ಲಿಯೇ ಅತ್ಯುತ್ತಮ ನೃತ್ಯಪಟುಗಳು, ಪರ್ಫಾಮರ್‌ ಇರಬಲ್ಲರು. ಅವರನ್ನು ಮೊದಲೇ ಗುರುತಿಸಿಟ್ಟುಕೊಳ್ಳಿ. ಅವರಿಂದ ನಾಲ್ಕಾರು ಹೆಜ್ಜೆಗಳಿಗೆ ನೃತ್ಯ ಮಾಡಿಸುವುದು ಕಷ್ಟವಾಗದು. ಇದರಿಂದ ಬಂಧು–ಬಾಂಧವರಲ್ಲಿನ ಪ್ರತಿಭೆಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಬಂಧ ಬೆಸೆಯಲು ಇದೊಂದು ದಾರಿಯಾಗುತ್ತದ

ಸಾಧ್ಯವಾದಷ್ಟು ರಿಮಿಕ್ಸ್‌ ಗೀತೆಗಳಿರಲಿ. ಟಪ್ಪಾಂಗುಚ್ಚಿ, ರಿಧಂ ಹಾಡುಗಳಿದ್ದರೆ ಕೊನೆಗೆ ಎಲ್ಲರೂ ಸೇರಿ ಕುಣಿಯಲು ಬರುತ್ತದೆ. 

ಪ್ಯಾಥೋ ಹಾಗೂ ಶೋಕ ಗೀತೆಗಳಿಂದ ಸಾಧ್ಯವಾದಷ್ಟು ದೂರವಿರಿ. ವಧು–ವರರಿಗಾಗಿ ರೋಮ್ಯಾಂಟಿಕ್ ಹಾಡುಗಳೇ ಹೆಚ್ಚಾಗಿರಲಿ.

  ಅಪ್ಪ ಅಮ್ಮನಿಗೆ ವಿಶೇಷ ಗೌರವ ಹಾಗೂ ಅಭಿನಂದನೆ ಸಲ್ಲಿಸಲು ಹಾಡೊಂದನ್ನು ರೂಪಿಸಬಹುದು. ಜತೆಗೆ ಅಪ್ಪ ಅಮ್ಮನ ಜತೆ ನೃತ್ಯ ಮಾಡಲು ವಧು–ವರರಿಬ್ಬರಿಗೂ ಅವಕಾಶ ಕಲ್ಪಿಸಬಹುದು. ವಧು ಮತ್ತು ವರನು ಜತೆಯಾಗಿ ಹೆಜ್ಜೆ ಹಾಕಲು ಒಂದಷ್ಟು ಹಾಡುಗಳನ್ನು ರಿಮಿಕ್ಸ್ ಮಾಡಿಟ್ಟುಕೊಳ್ಳಬಹುದು. ಈ ಸುಮಧುರ ಕ್ಷಣಗಳು ಎಂದೆಂದಿಗೂ ನಿಮ್ಮ ಮದುವೆಯ ಆಲಂನಲ್ಲಿ ಉಳಿಯುತ್ತದೆ.  

Maduve Habba
www.prajavani.net