ಉತ್ತರ ಕರ್ನಾಟಕದ ಮದುವೆಯ ಸಂಪ್ರದಾಯಗಳು
ಮದುವೆಯ ಈ ಬಂಧ..!
ಎರಡು ಮನಸುಗಳ ಮಿಲನವೇ ಮದುವೆ. ಎರಡು ಮನೆತನಗಳು ಬೆರೆತು, ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ಗುರು ಹಿರಿಯರ ಸಮಕ್ಷಮದಲ್ಲಿ ಮದುವೆ ಎಂಬ ಪವಿತ್ರ ಬಂಧನಕ್ಕೆ ಸಾಕ್ಷಿಯಾಗಿ ಹರಸಿ ಹಾರೈಸುತ್ತಾರೆ. ಮದುವೆಯ ಆಚಾರ–ವಿಚಾರಗಳು ಊರಿಂದ ಊರಿಗೆ ಅನೇಕ ಬದಲಾವಣೆಗಳು ಇರುತ್ತವೆ. ಉತ್ತರ ಕರ್ನಾಟಕದ ಮದುವೆಯ ಕಾರ್ಯಕ್ರಮಗಳು ಮದುವೆಗೆ 15 ದಿನಗಳು ಇರುವಾಗಲೇ ಪ್ರಾರಂಭವಾಗುತ್ತವೆ.
ಮೊದಲಿಗೆ ಮನೆಯ ದೇವರಿಗೆ ಪೂಜೆ ಪುನಸ್ಕಾರ ಮಾಡಿದ ಬಳಿಕ ಲಗ್ನ ಪತ್ರಿಕೆಗಳನ್ನು ಹಂಚುವುದು ವಾಡಿಕೆ. ಮದುವೆಯ ಹಿಂದಿನ ದಿನ ಮನೆಯ ಮುಂದೆ ತೆಂಗಿನಗರಿಯ ಚಪ್ಪರ ಹಾಕಿಸುತ್ತಾರೆ. ಮಣ್ಣಿನ ಪುಟ್ಟ ಮಡಕೆಗೆ ( ಮಗಿ ) ಕೆಂಪು ಮಣ್ಣಿನಿಂದ ಚಿತ್ರ ಬರೆದು ನೀರು ತುಂಬಿಸಿ ಅದನ್ನು ಚಪ್ಪರದ ಕಂಬಕ್ಕೆ ಕಟ್ಟುವರು.
ಅದರ ಮೇಲೆ ಮಣ್ಣಿನ ಪ್ರಣತೆಯನ್ನಿಟ್ಟು ಅದಕ್ಕೆ ಎಣ್ಣೆ ಹಾಕಿ ಐದು ಬತ್ತಿ ಹೊಸೆದು ದೀಪ ಹಚ್ಚುವರು. ಐದು ಜನ ಮುತ್ತೈದರು ಚಪ್ಪರವನ್ನು ಪೂಜಿಸುವರು. ಬಳಿಕ ಚಪ್ಪರದ ಅಡಿಯಲ್ಲಿ ಹೆಣ್ಣುಮಕ್ಕಳೆಲ್ಲರೂ ಹಸಿರು ಬಳೆ ಹಾಕಿಸಿಕೊಳ್ಳುವರು. ಇದನ್ನು ‘ಬಳಗದ ಬಳೆ’ ಎಂದು ಕರೆಯುವರು. ಮದುಮಗಳ ಮನೆಯಲ್ಲೂ ಇದೇ ರೀತಿ ನಡೆಯುತ್ತದೆ.
ವರನ ಕಡೆಯವರು ವಧುವಿನ ಕಡೆಯವರ ಬಳೆ ಖರ್ಚನ್ನು ಕೊಡುವುದು ವಾಡಿಕೆ. ಬಳೆ ಶಾಸ್ತ್ರ ಮುಗಿಯುತ್ತಿದ್ದಂತೆ ಒಳಕಲ್ಲು ಪೂಜೆ ಮಾಡಲು ಸಜ್ಜಾಗುತ್ತಾರೆ. ಗೋದೂಳಿ ಸಮಯದಲ್ಲಿ ಬೀಸುವ ಕಲ್ಲು ಮತ್ತು ಒರಳು ಕಲ್ಲಿಗೆ ಪೂಜೆ ಮಾಡುತ್ತಾರೆ. ಮುತ್ತೈದೆಯರು ಬೀಸುಕಲ್ಲು ಪದಗಳನ್ನು ಹಾಡುತ್ತಾ ಜೋಳ, ಗೋಧಿ ಅರಿಸಿನದ ಬೇರುಗಳನ್ನು ಅದರಲ್ಲಿ ಹಾಕಿ ಕುಟ್ಟಿ, ಬೀಸುತ್ತಾರೆ. ನಂತರ ಅರಿಸಿನ ಶಾಸ್ತ್ರ ನೆರವೇರುತ್ತದೆ. ವರನ ಮನೆ ಕಡೆಯಿಂದ ಮದುಮಗಳಿಗೆ ಎಣ್ಣಿ ಪತ್ಲ(ಧಾರೆ ಸೀರೆ) ಕಳಿಸಲಾಗುತ್ತದೆ. ಎರಡೂ ಮನೆಗಳಲ್ಲಿ ವಧು ವರನಿಗೆ ಶನಿ ತೆಗೆಯುವ ಶಾಸ್ತ್ರ ರಾತ್ರಿ ಮಾಡುತ್ತಾರೆ.
ಮರುದಿನ ವಧು ವರರನ್ನು ಜೊತೆಯಾಗಿ ಕೂಡಿಸಿ ಅರಿಸಿನ ಹಚ್ಚುತ್ತಾರೆ. ಬಳಿಕ ಎಣ್ಣೆ ಶಾಸ್ತ್ರ ಮಾಡುತ್ತಾರೆ. ನಂತರ ಚಪ್ಪರದಡಿಯಲ್ಲಿ ಇಬ್ಬರು ಮುತ್ತೈದೆಯರು, 4 ಜನ ಮದುವೆಯಾದ ಪುರುಷರು ಚೌಕಾಕಾರವಾಗಿ ಕುಳಿತುಕೊಳ್ಳುತ್ತಾರೆ. ಅವರ ಮುಂದೆ ನೀರು ತುಂಬಿದ ತಂಬಿಗೆಯಿರಿಸಿ ಅರಿಸಿನದ ದಾರವನ್ನು ಐದು ಸುತ್ತು ತಂಬಿಗೆಗಳ ಸುತ್ತುತ್ತಾರೆ. ಅದರೊಳಗಡೆ ವರ ಅವನ ಚಿಕ್ಕಮ್ಮ, ಅವಳ ಚಿಕ್ಕಮ್ಮ ಅಥವಾ ದೊಡ್ಡಮ್ಮ ಒಬ್ಬರ ಹಿಂದೆ ಒಬ್ಬರು ಬರುತ್ತಾರೆ. ಎಲ್ಲರಿಗೂ ವೀಳ್ಯದೆಲೆ ಮೇಲೆ ಅಕ್ಕಿಯನ್ನು ಹಾಕಿ ಅದನ್ನು ಕುಳಿತವರ ತಂಬಿಗೆಗೆ ಹಾಕಲು ತಿಳಿಸುತ್ತಾರೆ. ಐದು ಸುತ್ತು ಬರಬೇಕು. ಇದನ್ನು ಸುರಗಿ ಸುತ್ತುವುದು ಎನ್ನುತ್ತಾರೆ. ಬಳಿಕ ಮತ್ತೊಮ್ಮೆ ವಧು ವರನಿಗೆ ಅರಿಸಿನ ಹಚ್ಚಿ, ಕಲಶ ಬೆಳಗಿ ನೀರು ಹಾಕುತ್ತಾರೆ. ಸುತ್ತಿದ ದಾರವನ್ನು ಜೋಡಿಸಿಕೊಳ್ಳುತ್ತಾರೆ. ಮಾಂಗಲ್ಯ ಧಾರಣೆಗೆ ಸಜ್ಜಾಗುತ್ತಾರೆ.
ದೇವರ ಸಮ್ಮುಖದಲ್ಲಿ ಮಾಂಗಲ್ಯ ಧಾರಣೆ ಮಾಡುವುದಕ್ಕೆ ‘ದೇವರ ಅಕ್ಕಿಕಾಳು’ ಎಂದು ಕರೆಯುತ್ತಾರೆ. ಅದಾದ ಬಳಿಕ ವಧು ವರರು ಉಡುಗೆ ಬದಲಾಯಿಸಿಕೊಂಡು ಮಂಟಪಕ್ಕೆ ಬಂದು ಗುರು ಹಿರಿಯರ, ಬಂಧು ಬಳಗದವರ ಎದುರಿಗೆ ಹಾರ ಬದಲಾಯಿಸಿಕೊಳ್ಳುವುದನ್ನು ‘ದೈವದ ಅಕ್ಕಿಕಾಳು’ ಎಂದು ಕರೆಯುತ್ತಾರೆ. ಹೊಸ ಜೋಡಿಗೆ ಆಶೀರ್ವಾದ ಮಾಡಿ, ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಎಣ್ಣಿಗಾಯಿ ಪಲ್ಲೆ, ಬೂಂದಿ, ಮೊಳಕೆಕಾಳು ಪಲ್ಯ, ಅನ್ನ, ಸಾರು, ಮಜ್ಜಿಗೆಯ ಸುಗ್ರಾಸ ಭೋಜನ ಸವಿದು ಮದುಮಗಳನ್ನು ಮನೆ ತುಂಬಿಸಿಕೊಳ್ಳುತ್ತಾರೆ. ಮದುಮಗಳಿಗೆ ಹೊಸ ಸಂಸಾರಕ್ಕೆ ಬೇಕಾಗುವ ಸಾಮಾನುಗಳನ್ನು ಸುರಗಿ ಸಾಮಾನು ಎನ್ನುತ್ತಾರೆ. ಅದನ್ನು ಭಾಜಾ ಭಜಂತ್ರಿಯೊಂದಿಗೆ ವರನ ಕಡೆಯವರಿಗೆ ಒಪ್ಪಿಸುತ್ತಾರೆ. ವಧುವಿನ ಅಣ್ಣ ಅಥವಾ ತಮ್ಮ ಆಕೆಯ ಕಾಲು ತೊಳೆದು ಅರಿಸಿನ, ಕುಂಕುಮ ಹಚ್ಚಿ ವರನಿಗೆ ಒಪ್ಪಿಸುವುದರೊಂದಿಗೆ ಮದುವೆಯ ಶಾಸ್ತ್ರಗಳು ಮುಗಿಯುತ್ತವೆ.