ಅತಿಥಿಗೆ ಕೊಡಿ ಈ ಗಿಫ್ಟ್...
ಸುಮಾ ಬಿ. (byline)
ಮದುವೆ ಮನೆಗಳು ಈಗ ಉಡುಗೊರೆಗಳ ತಾಣವಾಗಿವೆ. ನವಜೋಡಿಗೆ ಅತಿಥಿಗಳು ಕೊಡುವ ಉಡುಗೊರೆ, ಅತಿಥಿಗಳಿಗೆ ಮದುವೆ ಮನೆಯವರು ಕೊಡುವ ಉಡುಗೊರೆ... ಹೀಗೆ ಉಡುಗೊರೆಗಳ ಸಾಮ್ರಾಜ್ಯವೇ ಅಲ್ಲಿ ಸೃಷ್ಟಿಯಾಗಿರುತ್ತದೆ.
ನವಜೋಡಿಗಳನ್ನು ಹಾರೈಸಲು ಬಂದ, ಕುಟುಂಬದ ಮದುವೆ ಖುಷಿಯಲ್ಲಿ ಭಾಗಿಯಾಗಿದ್ದಕ್ಕೆ ಕೃತಜ್ಞತೆ ಸಲ್ಲಿಸುವ ಸೂಚಕವಾಗಿ ಅತಿಥಿಗಳಿಗೆ ‘ರಿಟರ್ನ್ ಗಿಫ್ಟ್’ಗಳನ್ನು ಕೊಡಲಾಗುತ್ತದೆ. ನವಜೋಡಿಗೆ ಅತಿಥಿಗಳು ಕೊಡುವ ಉಡುಗೊರೆಯಷ್ಟೇ ಪ್ರಾಮುಖ್ಯವನ್ನು ‘ವೆಡ್ಡಿಂಗ್ ರಿಟರ್ನ್ ಗಿಫ್ಟ್’ ಪಡೆದುಕೊಂಡಿದೆ. ಈಗೀಗ ಅದು ಪ್ರತಿಷ್ಟೆಯ ಸೂಚಕವಾಗೂ ಮರುಸೃಷ್ಟಿ ಪಡೆದಿದೆ.
ನವ ದಂಪತಿಗಳ, ಮತ್ತವರ ಕುಟುಂಬದ ಸಂತೋಷದಲ್ಲಿ ಪಾಲ್ಗೊಂಡ ಸವಿನೆನಪಿಗಾಗಿ ಕೊಡುವ ರಿಟರ್ನ್ ಗಿಫ್ಟ್‌ಗಳು ‘ನೆನಪಿನ ಕಾಣಿಕೆ’ಯಾಗಿ ಪಾತ್ರ ವಹಿಸುತ್ತವೆ. ಇವು ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿಬಿಂಬಿಸುವ ಹಾಗೂ ಸಂಬಂಧಗಳ ಬಾಂಧವ್ಯವನ್ನು ಗಟ್ಟಿಗೊಳಿಸುವ ವಾಹಕಗಳಾಗಿವೆ ಎಂದರೂ ಅತಿಶಯೋಕ್ತಿಯಲ್ಲ. ಮದುವೆಯ ಆ ಸಂಭ್ರಮದ ದಿನವನ್ನು ದೀರ್ಘಕಾಲದವರೆಗೂ ಅತಿಥಿಗಳ ನೆನಪಿನಲ್ಲಿ ಉಳಿಯುವಂತೆ ಮಾಡುವ ಸಾಧನಗಳಾಗಿಯೂ ಇವು ಅಚ್ಚು ಮೆಚ್ಚು.
ಕೃತಜ್ಞತಾಪೂರ್ವಕವಾಗಿ ಅತಿಥಿಗಳಿಗೆ ಉಡುಗೊರೆ ನೀಡುವ ಸಂಪ್ರದಾಯ ಇಂದು ನಿನ್ನೆಯದಲ್ಲ. ಪೂರ್ವಿಕರ ಕಾಲದಿಂದಲೂ ಈ ಸಂಪ್ರದಾಯ ಅನೂಚಾನವಾಗಿ ನಡೆದುಕೊಂಡುಬಂದಿದೆ. ವೈವಾಹಿಕ ಸಾಂಪ್ರದಾಯಗಳು ಅದ್ದೂರಿತನ, ವೈಭವೋಪೇತವನ್ನು ಮೇಳೈಸಿಕೊಂಡಂತೆ ಉಡುಗೊರೆಗಳೂ ಸಹಜವಾಗಿ ಅದ್ದೂರಿತನಕ್ಕೆ ತೆರೆದುಕೊಂಡಿವೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಒಂದು ಮಧ್ಯಮ ವರ್ಗದ ಕುಟುಂಬದ ವಿವಾಹ ಮಹೋತ್ಸವದಲ್ಲಿ ಜಾಕೀಟಿನ ಬಟ್ಟೆ, ತಟ್ಟೆ, ಲೋಟ, ಬಟ್ಟಲು, ಬಾಕ್ಸ್ ಹೀಗೆ ಸೀಮಿತ ಉಡುಗೊರೆಗಳನ್ನು ಅತಿಥಿಗಳಿಗೆ ನೀಡಲಾಗುತ್ತಿತ್ತು. ಬದಲಾದ ವಿವಾಹ ಮಹೋತ್ಸವದ ಆಚರಣೆಗಳಲ್ಲಿ ಉಡುಗೊರೆಗಳೂ ಅದ್ದೂರಿತನವನ್ನೂ, ವೈವಿಧ್ಯವನ್ನೂ ಪೂಸಿಕೊಂಡು ಆಕರ್ಷಣೀಯವಾಗಿ ಮೈದಳೆದಿವೆ.
‘ರಿಟರ್ನ್ ಗಿಫ್ಟ್’ ಇಂದು ನಿನ್ನೆಯದ್ದಲ್ಲ:
ಅತಿಥಿಗಳಿಗೆ ನೀಡುವ ಉಡುಗೊರೆಯ ಸಂಪ್ರದಾಯ ಅನಾದಿ ಕಾಲದಿಂದಲೂ ರೂಢಿಗತವಾಗಿದೆ. ಮದುವೆಯ ಸಂಪ್ರದಾಯದಿಂದ ಇದು ಆರಂಭವಾಗಿಲ್ಲದಿದ್ದರೂ ಇತ್ತೀಚಿನ ದಶಕಗಳಲ್ಲಿ ಮದುವೆ ಸಮಾರಂಭಗಳಲ್ಲಿ ತನ್ನ ಪಾರಮ್ಯ ಮೆರೆಯುವುದನ್ನು ಕಾಣಬಹುದು. ರಿಟರ್ನ್ ಗಿಫ್ಟ್‌ಗಳ ಇತಿಹಾಸ ಅರಿಯಲು ಪ್ರಾಚೀನ ಯೂರೋಪ್‌ಗೆ ಹಿಂದಿರುಗಬೇಕು. ಆಗ ರಾಜರು, ರಾಣಿಯರು, ರಾಜ ಮನೆತನದವರು ಅತಿಥಿಗಳಿಗೆ ‘ಬೋನ್‌ಬೋನಿಯರ್’ ಎಂಬ ಸಣ್ಣ ಪೆಟ್ಟಿಗೆಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಈ ಚಿಕ್ಕ ಪೆಟ್ಟಿಗೆಗಳಲ್ಲಿ ಹರಳುಗಳು, ರತ್ನಗಳು, ಅಮೂಲ್ಯ ಸ್ಟೋನ್‌ಗಳು, ಕೆಲವು ವಿಶೇಷ ಸಂದರ್ಭಗಳಲ್ಲಿ ಚಿನ್ನವನ್ನೂ ಇಟ್ಟು ಕೊಡಲಾಗುತ್ತಿತ್ತು.
ಕಾಲಾನಂತರ ಶ್ರೀಮಂತರು ತಮ್ಮ ಮನೆಗೆ ಅಥವಾ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಉಡುಗೊರೆ ನೀಡುವ ಪದ್ಧತಿಯನ್ನು ಅನುಸರಿಸತೊಡಗಿದರು. ಆ ಬಳಿಕ ಈ ಸಂಪ್ರದಾಯ ಸಾಮಾನ್ಯ ಕುಟುಂಬವರ್ಗಕ್ಕೂ ಕಾಲಿರಿಸಿತು. ತಮ್ಮ ಶಕ್ತ್ಯಾನುಸಾರ ಅತಿಥಿಗಳಿಗೆ ಉಡುಗೊರೆ ನೀಡುವ ಸಂಪ್ರದಾಯ ಗಟ್ಟಿಯಾಗಿ ನೆಲೆಗೊಳ್ಳುತ್ತಾ ಬಂದಿತು.
ಈಗ ವಿವಾಹ ಸಮಾರಂಭಗಳಲ್ಲಿ ಮಾತ್ರವಲ್ಲದೇ ಮಗುವಿನ ನಾಮಕರಣ, ಜವುಳ, ಸೀಮಂತ, ನಿಶ್ಚಿತಾರ್ಥ, ಆರತಿ ಕಾರ್ಯಕ್ರಮ, ಹುಟ್ಟಿದಟ್ಟಿ, ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ, ಸಂತೋಷ ಕೂಟ, ಔತಣ ಕೂಟ ಹೀಗೆ ಎಲ್ಲ ಸಮಯಕ್ಕೂ ‘ರಿಟರ್ನ್ ಗಿಫ್ಟ್’ ಹಾಜರಿ ಇದ್ದೇ ಇರುತ್ತದೆ. ರಿಟರ್ನ್ ಗಿಫ್ಟ್ ಇಲ್ಲದೆ ಸಮಾರಂಭ ಪೂರ್ಣಗೊಳ್ಳದು ಎನ್ನುವಷ್ಟರ ಮಟ್ಟಿಗೆ ತನ್ನ ಛಾಪನ್ನು ಮೂಡಿಸಿದೆ.
ಆಯ್ಕೆಗಳು ಹಲವು:
ಸಾಧಾರಣವಾದ ಕರಕುಶಲ ವಸ್ತುಗಳಿಂದ ಹಿಡಿದು ಬೆಳ್ಳಿಯ ವಸ್ತುಗಳು ಅಥವಾ ಬಟ್ಟೆಗಳವರೆಗೆ ಆರ್ಥಿಕ ಸಾಮರ್ಥ್ಯದ ಅನುಸಾರ ರಿಟರ್ನ್ ಗಿಫ್ಟ್‌ಗಳನ್ನು ನೀಡಬಹುದು. ಅತಿಥಿಗಳು ನಿತ್ಯ ಬಳಸಬಹುದಾದ ಅಥವಾ ನಿತ್ಯ ಅವರ ಕಣ್ಣೋಟಕ್ಕೆ ನಿಲುಕಬಹುದಾದ ಉಡುಗೊರೆಗಳು ಹೆಚ್ಚು ಸೂಕ್ತ. ಉಡುಗೊರೆಗಳು ಅತಿಥಿಗಳಿಗೆ ಆಗಾಗ ಕಾಣುತ್ತಿದ್ದರೆ ಅಥವಾ ನಿತ್ಯ ಬಳಸುತ್ತಿದ್ದರೆ ನಿಮ್ಮ ಸಂಭ್ರಮವನ್ನು ಹೆಚ್ಚುದಿನ ನೆನಪಿಟ್ಟುಕೊಳ್ಳುತ್ತಾರೆ. ಈ ಕಾರಣಕ್ಕಾಗೇ ರಿಟರ್ನ್ ಗಿಫ್ಟ್‌ಗಳಲ್ಲಿ ನಿತ್ಯ ಬಳಕೆಯ ವಸ್ತುಗಳು ಅಗ್ರಗಣ್ಯ ಸ್ಥಾನ ಪಡೆದಿವೆ.
ಡಿಸೈನರ್ ಕೀ ಬಂಚ್, ನಿತ್ಯ ಬಳಸುವ ಬೌಲ್, ಗ್ಲಾಸ್ ಸೆಟ್ ಅನ್ನು ಉಡುಗೊರೆಯಾಗಿ ನೀಡಬಹುದು. ಚಾಕೊಲೆಟ್ ಬಾಕ್ಸ್ ಅನ್ನೂ ಉಡುಗೊರೆಯಾಗಿ ನೀಡಬಹುದು. ಇದು ಬಹುದಿನಗಳವರೆಗೆ ಇರದಿದ್ದರೂ ಚಾಕೊಲೆಟ್ ಸವಿಯುವಾಗ ತಮ್ಮ ಬಾಲ್ಯದ ದಿನಗಳ ನೆನಪುಗಳತ್ತ ಜಾರಬಹುದು. ಆಗ ನೀವು ಕೊಟ್ಟ ಉಡುಗೊರೆ ಹೆಚ್ಚು ಆಪ್ಯಾಯಮಾನವಾಗಿ ಕಾಣುತ್ತದೆ.

