‘ಹೂ ಹುಡುಗಿ’ಗೂ ವಿಶೇಷ ವಸ್ತ್ರವಿನ್ಯಾಸ
ತುಂಬಾ ಹಿಂದೆಲ್ಲ ಮದುವೆಯಲ್ಲಿ ಮದುಮಕ್ಕಳು ಧರಿಸುವ ವಸ್ತ್ರಕ್ಕೆ ಇಲ್ಲದ ವಿಶೇಷ ಆಸ್ತೆ ಇತ್ತೀಚೆಗೆ ಹೆಚ್ಚುತ್ತಿದೆ. ಅದು ಹಿಂದೂ, ಕ್ರಿಶ್ಚಿಯನ್, ಮುಸಲ್ಮಾನ್ ಹೀಗೆ ಯಾವುದೇ ಧರ್ಮಿಯರೇ ಇರಲಿ. ಮದುವೆ ಅಂದರೆ ಅಲ್ಲಿ ವಧು–ವರರು ಧರಿಸುವ ದಿರಿಸಿಗೆ ವಿಶೇಷ ಮಹತ್ವ ನೀಡಲಾಗುತ್ತಿದೆ. ಮದುವೆ ಸಮಾರಂಭದಲ್ಲಿ ವಧು–ವರರೇ ಕೇಂದ್ರಬಿಂದುವಾಗುವುದರಿಂದ ಅವರನ್ನು ಮತ್ತಷ್ಟು ಆಕರ್ಷಕವಾಗಿಸುವಲ್ಲಿ ದಿರಿಸು ಕೂಡ ಕಾರಣವಾಗಲಿದೆ. ವಧು–ವರರ ವಸ್ತ್ರ ಕೂಡ ಇಂದು ಟ್ರೆಂಡಿಂಗ್ ಮೂಡಿಸುತ್ತಿದೆ. ಇಂಥ ಟ್ರೆಂಡಿಂಗ್‌ನಲ್ಲಿ ಕ್ರೈಸ್ತ ಮದುವೆ ಕೂಡ ಹೊರತಾಗಿಲ್ಲ.
ಕ್ರಿಶ್ಚಿಯನ್ ಸಮುದಾಯದ ಮದುವೆ ಸಮಾರಂಭದಲ್ಲಿ ಬಿಳಿ ಮುತ್ತಿನ ಬಣ್ಣದ ಶುಭ್ರ, ವೈಭವದ ಉಡುಗೆಯೊಂದಿಗೆ ಮೃದುವಾಗಿ ಮೆಲ್ಲನೆ ನಡೆದು ಬರುವ ವಧುವನ್ನು ಕಣ್ತುಂಬಿಕೊಳ್ಳುವುದೇ ಒಂದು ಸುಂದರ ಅನುಭೂತಿ. ವಧುವಿನ ಸ್ನಿಗ್ಧಸೌಂದರ್ಯವನ್ನು ಇಮ್ಮಡಿಗೊಳಿಸುವಲ್ಲಿ ದಿರಿಸಿನ ಪಾಲೂ ಇರಲಿದೆ. ಕ್ರೈಸ್ತರ ಸಂಪ್ರದಾಯದಲ್ಲಿ ವಧುವಿನ ಹಾಜರಿಗೆ ಮೊದಲು ಪುಟ್ಟ ಹುಡುಗಿಯೊಬ್ಬಳು ಹೂಹುಡುಗಿಯಾಗಿ ವಧು ನಡೆವ ಹಾದಿಯಲ್ಲಿ ಹೂವುಗಳ ಚೆಲ್ಲಿ ಬರುವಳು. ಅವಳೇ ‘ಫ್ಲವರ್ ಗರ್ಲ್’ ಅಂದರೆ ಹೂ ಹುಡುಗಿ. ಬದಲಾದ ಮದುವೆ ಟ್ರಂಡಿಂಗ್‌ನಲ್ಲಿ ಕ್ರಿಶ್ಚಿಯನ್ ವಧುವಿನ ಜತೆಜತೆಗೆ ಫ್ಲವರ್ ಗರ್ಲ್‌ಗೂ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಅಂದರೆ ಫ್ಲವರ್ ಗರ್ಲ್ ಧರಿಸುವ ದಿರಿಸಿಗೂ ಕೂಡ.
‘ಮದುವೆ ಸಮಾರಂಭ, ವಸ್ತ್ರ ವಿಚಾರದಲ್ಲೂ ಇತ್ತೀಚೆಗೆ ಹೊಸತನ ಕಾಣಬಹುದು. ಕ್ರಿಶ್ಚಿಯನ್ ಧರ್ಮದಲ್ಲೂ ಸಂಪ್ರದಾಯವನ್ನು ಬಿಟ್ಟುಕೊಡದೆ ಅದ್ಧೂರಿ ಮದುವೆಯಾಗುವವರು ವಧುವಿನ ಜತೆ ಫ್ಲವರ್ ಗರ್ಲ್‌ಗೂ ಹೆಚ್ಚು ಮಹತ್ವ ಪಡೆಯುವುದರಿಂದ ವಸ್ತ್ರವಿನ್ಯಾಸದಲ್ಲಿ ಅವರಿಗೂ ಆದ್ಯತೆ ನೀಡಲಾಗುತ್ತಿದೆ. ಈ ಕಾರಣಕ್ಕೆ ಫ್ಲವರ್ ಗರ್ಲ್ (ಹೂ ಹುಡುಗಿಯರು) ಎಂಬ ಕಾನ್ಸೆಪ್ಟ್‌ನಡಿ ವಸ್ತ್ರವಿನ್ಯಾಸ ಸಿದ್ಧಪಡಿಸಿದ್ದು, ಹೆಚ್ಚಿನ ಬೇಡಿಕೆಯಿದೆ’ ಎನ್ನುತ್ತಾರೆ ಹುಬ್ಬಳ್ಳಿಯ ಫ್ಯಾಷನ್ ಡಿಸೈನರ್ ಸೀಮಾ ಎಸ್. ಖಟಾವ್ಕರ್.
ವಧುವಿನ ಮುಗ್ಧತೆ ಮತ್ತು ಭರವಸೆಯನ್ನು ವಿವರಿಸುವ ಬಿಳಿ ಬಣ್ಣದಲ್ಲಿ ವಸ್ತ್ರವನ್ನು ವಿನ್ಯಾಸಗೊಳಿಸಿದ್ದಾರೆ. ಬಿಳಿ ಹೂವುಗಳು, ಸ್ಫಟಿಕ ಮಣಿಗಳು ಮತ್ತು ಮುತ್ತುಗಳೊಂದಿಗೆ ವಿಶಿಷ್ಟವಾದ ‘ಹೂ ಹುಡುಗಿ’ ಹಾಗೂ ಕ್ರಿಶ್ಚಿಯನ್ ವಧುವಿನ ದಿರಿಸಿನ ಸಂಗ್ರಹ ಕ್ರಿಶ್ಚಿಯನ್ ಯುವತಿಯರನ್ನು ಮಾತ್ರವಲ್ಲದೆ ಎಲ್ಲ ಧರ್ಮದ ಯುವತಿಯರನ್ನೂ ಆಕರ್ಷಿಸಲಿದೆ.