ಮದುವೆಯಾಗಲು ಪ್ರಶಸ್ತ ಸ್ಥಳದ ಹುಡುಕಾಟದಲ್ಲಿ ನವಜೋಡಿಗಳ ಕಸರತ್ತು
ಮನೆ ಮುಂದೆ ಅಂಗಳ. ಅಂಗಳದ ಆರಂಭದಲ್ಲಿ ಮಾವಿನ ಎಲೆಗಳ ಕಮಾನು, ದಾಟಿದರೆ ಮಾವು, ಹಲಸು, ಗುಲ್‌ಮೊಹರ್ ಹೂವಿನ ಗುಚ್ಚಗಳ ಇಳಿಬಿಟ್ಟ ಚಪ್ಪರ, ಅದರೊಳಗೆ ಹೂ ಆಲಂಕೃತ ಮಂಟಪ... ಸುತ್ತಲೂ ಸೇರಿದ ಬಂಧು ಬಳಗ. ಇದು ಅರ್ಧ ಶತಮಾನ ಹಿಂದನ ಮದುವೆಮನೆಯ ಸಡಗರದ ದೃಶ್ಯ. ನಂತರದಲ್ಲಿ ಇದು ಸ್ಥಳಾಂತರಗೊಂಡಿದ್ದು ಕಲ್ಯಾಣ ಮಂಟಪಗಳಿಗೆ. ಆದರೆ ಇಂದಿನ ಮದುವೆಗಳು ಹೇಗೆ ನಡೆಯಬೇಕು ಎಂಬುದಷ್ಟೇ ಅಲ್ಲ, ಎಲ್ಲಿ ನಡೆಯಬೇಕು ಎಂಬುದೂ ಬಹುಮುಖ್ಯವಾದ ಒಂದು ವಿಷಯವಾಗಿದೆ.
ಶತಮಾನಗಳ ಹಿಂದಿನ ದೇವಾಲಯ, ಸಮುದ್ರ ತೀರ, ಕೋಟೆಗಳು, ವಿನ್‌ಯಾರ್ಡ್‌ಗಳು, ರೆಸಾರ್ಟ್, ಪ್ರಸಿದ್ಧ ವಸ್ತು ಸಂಗ್ರಹಾಲಯ, ಪುರಾತನ ಬಂಗಲೆ ಹೀಗೆ ತಮ್ಮ ಕಲ್ಪನೆಯಲ್ಲಿ ವಿವಾಹ ಹೇಗೆ ನಡೆಯಬೇಕೆಂದು ಬಯಸಿದವರು ಅದನ್ನು ಸಾಕಾರಗೊಳಿಸಲು ಹಲವು ಅವಕಾಶಗಳಿವೆ. ತಮ್ಮ ವಿವಾಹ ಸಮಾರಂಭ ವಿಶೇಷವಾಗಿರಬೇಕು ಎಂದು ಬಯಸುವವರಿಗೆ ಬಹಳಷ್ಟು ತಾಣಗಳ ಆಯ್ಕೆಗಳಿವೆ. ಆದರೆ ಕೈಯಲ್ಲಿ ಸಾಕಷ್ಟು ದುಡ್ಡಿದ್ದರೆ ಸಾಕು.
ಇತ್ತೀಚೆಗೆ ವಿವಾಹವಾದ ನಟ ಸಿದ್ಧಾರ್ಥ ಹಾಗೂ ನಟಿ ಅದಿತಿ ರಾವ್ ಹೈದರಿ ಅವರು ತೆಲಂಗಾಣದ ವನಪಾರ್ಥಿಯಲ್ಲಿರುವ 400 ವರ್ಷ ಹಳೆಯದಾದ ಶ್ರೀ ರಂಗನಾಯಕ ಸ್ವಾಮಿ ದೇವಾಲಯದಲ್ಲಿ ಮದುವೆಯಾದರು. ಇಲ್ಲಿ ವರ್ಷಕ್ಕೆ ಕನಿಷ್ಠ 200 ಮದುವೆಯಾಗುತ್ತವೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಜೋಡಿ ಹಾಗೂ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಇಟಲಿಯಲ್ಲಿ ವಿವಾಹವಾದರು. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನ್ಸ್ ಅವರು ಜೋಧಪುರದ ಅರಮನೆಯಲ್ಲಿ ಹಾಗೂ ಕತ್ರಿಕಾ ಕೈಫ್ – ವಿಕ್ಕಿ ಕೋಶಲ್ ಅವರು ರಾಜಸ್ಥಾನದಲ್ಲಿ, ಕಿಯಾರಾ ಅಡ್ವಾಣಿ – ಸಿದ್ಧಾರ್ಥ್ ಮಲ್ಹೋತ್ರಾ ಅವರು ಜೈಸಲ್ಮೇರ್ ಅರಮನೆಯಲ್ಲಿ ಹೀಗೆ ಪಟ್ಟಿಗಳು ಬೆಳೆಯುತ್ತಲೇ ಹೋಗುತ್ತವೆ.
ವರ್ಷಗಳು ಕಳೆದಂತೆ ವಿವಾಹ ಮಹೋತ್ಸವಗಳ ಸ್ವರೂಪದ ಜತೆಗೆ, ಮದುವೆ ನಡೆಯುವ ತಾಣಗಳೂ ಬದಲಾಗುತ್ತಿವೆ. ನಾಲ್ಕು ಗೋಡೆಗಳ ನಡುವಿನ ಬೃಹತ್ ಕಲ್ಯಾಣ ಮಂಟಪಗಳಿಗಿಂತ, ಹಸಿರು ಚಾದರ ಹೊತ್ತ ನಿಸರ್ಗದ ನಡುವೆ ಮದುವೆಯಾಗಬೇಕೆಂದು ಬಯಸುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಇದು ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಕೋವಿಡ್ ನಂತರದಲ್ಲಿ. ಕೊರೊನಾ ಸೋಂಕು ಹರಡುವ ಭೀತಿಯಿಂದ ಒಳಾಂಗಣಕ್ಕೆ ನಿಷೇಧ ಹೇರಲಾಗಿತ್ತು. ಅನುಮತಿ ನೀಡಿದರೂ, ಹೆಚ್ಚು ಜನರನ್ನು ಕರೆಯುವಂತಿಲ್ಲ, ಅಂತರ ಕಾಪಾಡಬೇಕು, ಮಾಸ್ಕ್ ಧರಿಸಬೇಕು ಎಂಬಿತ್ಯಾದಿ ಷರತ್ತುಗಳು ಇದ್ದಾಗ, ಬಹಳಷ್ಟು ಜನ ಡೆಸ್ಟಿನೇಷನ್ ವೆಡ್ಡಿಂಗ್ ಅನ್ನೇ ಆಯ್ಕೆ ಮಾಡಿಕೊಂಡರು. ನಂತರದಲ್ಲಿ ರೆಸಾರ್ಟ್ ಹಾಗೂ ಇನ್ನಿತರ ಪ್ರಸಿದ್ಧ ತಾಣಗಳಿಗೆ ಎಲ್ಲಿಲ್ಲದ ಬೇಡಿಕೆಗಳು ಹೆಚ್ಚಾದವು.
ಇಂಥ ತಾಣಗಳ ಹುಡುಕಾಟ, ಅವುಗಳನ್ನು ವಿಭಿನ್ನವಾಗಿ ಸಜ್ಜುಗೊಳಿಸುವುದು, ವಿವಾಹ ಸಮಾರಂಭವನ್ನು ಎಲ್ಲರಿಗಿಂತ ಭಿನ್ನವಾಗಿ ಆಯೋಜಿಸುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ವೆಡ್ಡಿಂಗ್ ಪ್ಲಾನರ್‌ಗಳೂ ಮುಳುಗಿಹೋದರು.
ಪೂರ್ವ ಹಾಗೂ ಪಶ್ಚಿಮ ಕರಾವಳಿಯ ಅಪರೂಪದ ತೀರ ಪ್ರದೇಶಗಳು ಈಗ ಡೆಸ್ಟಿನೇಷನ್ ವೆಡ್ಡಿಂಗ್ ತಾಣಗಳಾಗಿ ಬದಲಾಗಿವೆ. ಆರ್ಕಿಡ್ ಹಾಗೂ ಟುಲಿಪ್ ಹೂವುಗಳಿಂದ ಆಲಂಕೃತ ಆವರಣ. ಜರ್ಮನ್ ಟೆಂಟ್ ಬಳಸಿದ ಸಭಾಂಗಣ, ಬಂದ ಅತಿಥಿಗಳಿಗೆ ಉಳಿದುಕೊಳ್ಳಲು ಕೋಠಡಿಗಳು, ಎದುರಿಗೆ ಅಲೆಯುಕ್ಕಿಸುವ ಸಮುದ್ರ ಮದುವೆಯ ರಂಗನ್ನು ಹೆಚ್ಚಿಸಲಿವೆ. ಇದರಲ್ಲಿ ಗೋವಾ, ಪುದುಚೇರಿ ನೆಚ್ಚಿನ ತಾಣಗಳಾಗಿವೆ.
ರಾಜಸ್ಥಾನದ ಅರಮನೆ, ಕೋಟೆ ಕೊತ್ತಲಗಳೂ ಪಾರಂಪರಿಕ ಕಟ್ಟಡಗಳಾಗಿರುವುದರಿಂದ ಇವುಗಳನ್ನು ತಮ್ಮ ವಿವಾಹಕ್ಕೆ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯೂ ದೊಡ್ಡದಿದೆ. ಆಲಂಕೃತ ಆನೆ, ಒಂಟೆಗಳು, ವಿಂಟೇಜ್ ಕಾರುಗಳು, ಸೈನಿಕರ ಪೋಷಾಕಿನ ಕಾವಲುಗಾರರ ನಡುವೆ ಗಾಢ ಬಣ್ಣದ ಉಡುಪುಗಳೊಂದಿಗೆ ರಾಜ ರಾಣಿಯರಂತೆ ಕಂಗೊಳಿಸುವ ನವ ಜೋಡಿಗಳು. ರಾಜಸ್ಥಾನದಲ್ಲಿರುವ ಪ್ರತಿಷ್ಠಿತ ಹೋಟೆಲು ಕಂಪನಿಗಳು ಈಗ ಇಂಥ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ತಮ್ಮ ಆವರಣಗಳನ್ನು ಸಜ್ಜುಗೊಳಿಸುತ್ತಿವೆ.
ಪರ್ವತ ಪ್ರದೇಶ ಬಯಸುವ ಹಲವರು ಶಿಮ್ಲಾ, ಶ್ರೀನಗರಗಳತ್ತ ಮುಖ ಮಾಡುವವರೂ ಇದ್ದಾರೆ. ಬೆಂಗಳೂರಿನ ನಂದಿ ಬೆಟ್ಟ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿರುವ ಕೆಲ ರೆಸಾರ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವವರೂ ಇದ್ದಾರೆ. ಕೇರಳ ಹಿನ್ನಿರ ಪ್ರದೇಶಗಳಲ್ಲಿ, ರೆಸಾರ್ಟ್‌ಗಳಾಗಿ ಬದಲಾದ ಹಳೆಯ ಅರಮನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇವುಗಳು ಪರಿಸರ ಸ್ನೇಹಿಯ ಜತೆಗೆ, ಖರ್ಚೂ ಕಡಿಮೆ ಎನ್ನುವುದು ಕೆಲವರ ಅನಿಸಿಕೆ.
ಇಷ್ಟೇ ಏಕೆ, ಚೆನ್ನೈನ ಎವಿಎಂ ಸ್ಟುಡಿಯೊ, ಹೈದರಾಬಾದ್‌ನ ರಾಮೋಜಿರಾವ್ ಫಿಲ್ಮ್ ಸಿಟಿಯೂ ಡೆಸ್ಟಿನೇಷನ್ ವೆಡ್ಡಿಂಗ್‌ನ ತಾಣಗಳಾಗಿವೆ. ಇತ್ತೀಚೆಗೆ ನಡೆದ ಅಕ್ಕಿನೇನಿ ನಾಗಾರ್ಜುನ ಪುತ್ರ ನಾಗಚೈತನ್ಯ ಹಾಗೂ ಶೋಭಿತಾ ದೂಲಿಪಾಲ ಅವರ ವಿವಾಹವೂ ಅವರದ್ದೇ ಕುಟುಂಬದ ಸ್ಟುಡಿಯೊದಲ್ಲಿ ನಡೆದಿದೆ. ಇಂಥ ಫಿಲ್ಮ್ ಸಿಟಿಗಳಲ್ಲಿ ಹಾಕಲಾಗಿರುವ ವಿಭಿನ್ನ ಬಗೆಯ ಸೆಟ್‌ಗಳು, ಅವರವರ ಅಪೇಕ್ಷೆಗೆ ತಕ್ಕಂತ ತಾಣಗಳಲ್ಲಿ ವಿವಾಹವಾಗುವ ಕನಸನ್ನು ತಕ್ಕಮಟ್ಟಿಗೆ ಈಡೇರಿಸುತ್ತವೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಸುಲಾ ವಿನ್‌ಯಾರ್ಡ್, ಗ್ರೋವರ್‌ನ ಝಂಪಾ ವಿನ್‌ಯಾರ್ಡ್, ಬೆಂಗಳೂರಿನ ಬಿಗ್ ಬನ್ಯಾನ್‌ಗಳು ಇಂಥ ಡೆಸ್ಟಿನೇಷನ್ ವೆಡ್ಡಿಂಗ್‌ನ ನೆಚ್ಚಿನ ತಾಣಗಳಾಗಿವೆ.
ಇವೆಲ್ಲಕ್ಕಿಂತಲೂ ಭಿನ್ನವಾಗಿ ರೈಲು ಹಾಗೂ ಹಡಗುಗಳೂ ಈಗ ವಿವಾಹ ಮಹೋತ್ಸವದ ತಾಣಗಳಾಗಿವೆ. ಗಾಲಿಗಳ ಮೇಲೆ ಅರಮನೆ, ಮಹಾರಾಜಾ ಎಕ್ಸ್‌ಪ್ರೆಸ್, ಡೆಕ್ಕನ್ ಒಡಿಸ್ಸಿ, ಗೋಲ್ಡನ್ ಚಾರಿಯಟ್‌ಗಳಲ್ಲೂ ವೆಡ್ಡಿಂಗ್ ಪಾರ್ಟಿಗಳ ಆಯೋಜನೆಗೊಂಡ ಉದಾಹರಣೆಗಳಿವೆ. ರೈಲಿನಲ್ಲಿ 40 ಕ್ಯಾಬಿನ್‌ಗಳನ್ನು ಅತಿಥಿಗಳಿಗೆ ಮೀಸಲಡಲಾಗುತ್ತದೆ. 80 ಅತಿಥಿಗಳು ಇದರಲ್ಲಿ ಪ್ರಯಾಣಿಸಬಹುದು. ಮೂರು ದಿನಗಳ ಈ ಪ್ಯಾಕೇಜ್‌ಗೆ ಸುಮಾರು ₹1.5 ಕೋಟಿ ಖರ್ಚಾಗಲಿದೆ.
ವಿವಾಹಗಳು ನಡೆಯುವ ತಾಣಗಳು ದೊಡ್ಡದೋ ಅಥವಾ ಚಿಕ್ಕದೋ, ಅದು ಅರ್ಥಪೂರ್ಣವಾಗಿರಬೇಕು, ವಿಭಿನ್ನವಾಗಿರಬೇಕು ಎಂದಿನ ನವಜೋಡಿಗಳ ಬಯಕೆ. ತಂಗಾಳಿ ಬೀಸುವ ಸಮುದ್ರದ ತಾಣ, ಹಸರು ಹೊದ್ದ ಮಲೆನಾಡ ಮಡಿಲು, ಇತಿಹಾಸ ನೆನಪಿಸುವ ಅರಮನೆ, ಕೋಟೆಗಳು ಅಥವಾ ಆಧುನಿಕತೆ ಬಯಸುವ ರೈಲು, ಹಡಗುಗಳು ನವಜೋಡಿಗಳ ಬದುಕಿನ ಅತ್ಯಂತ ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಲಿವೆ.