ವೆಡ್ಡಿಂಗ್ ಫೋಟೊಗ್ರಾಫಿ– ಭಾವ, ಬಂಧಗಳ ಸೆರೆ
ಕಾಲ ಕಾಲಕ್ಕೆ ಅಭಿವೃದ್ಧಿ ಹೊಂದಿದ ತಂತ್ರಜ್ಞಾನ ನಮ್ಮ ಸಂಪ್ರದಾಯ, ಆಚರಣೆಗಳಲ್ಲೂ ನಾವೀನ್ಯತೆ ತಂದಿದೆ. ಬೆರಳ ತುದಿಯಲ್ಲಿ ಜಗತ್ತು ಕಾಣುವ ನಾವು ಟ್ರೆಂಡ್‌ಗಳಿಗೆ ಮಾರು ಹೋಗಿದ್ದಂತೂ ಸತ್ಯ. ಇದರ ಪರಿಣಾಮ ಈಗಿನ ವಿವಾಹ ಪದ್ಧತಿಯನ್ನೂ ಆವರಿಸಿದ್ದು ನಮಗೀಗ ಹೊಸತಲ್ಲ.
ಹೌದು. ಅಜ್ಜ- ಅಜ್ಜಿಯ ಮದುವೆಗೆ ಸಾಕ್ಷಿಯಾಗಿ ಅಜ್ಜಿಯ ಹಳೇ ಟ್ರಂಕ್‌ಲ್ಲಿಟ್ಟ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೊ, ಅಪ್ಪ- ಅಮ್ಮನ ಮದುವೆಗೆ ಸಾಕ್ಷಿಯಾದ ಆಲ್ಬಂಗಳು ಈಗ ಯಾವುದೋ ಪುರಾತನ ಕಾಲದ್ದು. ಈಗಿನ ಮದುವೆಗಳಲ್ಲಿ ಫೋಟೊ, ವಿಡಿಯೊಗಳ ಪಾತ್ರ ಕೇವಲ ನೆನಪಿಗೆ ಒಂದಿದ್ದರೆ ಸಾಕು ಎನ್ನುವಂತಿಲ್ಲ. ಅವುಗಳು ಮದುವೆಯ ಮುಖ್ಯ ಭಾಗ. ಪ್ರಿವೆಡ್ಡಿಂಗ್, ಪ್ರೋಮೊ ಶೂಟ್, ಫೊಟೊಶೂಟ್, ಕ್ಯಾಂಡಿಡ್ ಫೋಟೊಗ್ರಾಫಿ, ವಿಡಿಯೊಗ್ರಾಫಿ ರೀಲ್ಸ್... ಹೀಗೆ ನಿಶ್ಚಿತಾರ್ಥದಿಂದ ಆರಂಭವಾಗುವ ಫೋಟೊ, ವಿಡಿಯೊ ಹಾವಳಿ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡುತ್ತವೆ.
ಜೀವನದ ಸುಂದರ ಕ್ಷಣಗಳನ್ನು ಸೆರೆಹಿಡಿಯುವ ಫೋಟೊ, ವಿಡಿಯೊಗಳಿಗೆ ಮದುವೆಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ. ಫೋಟೊಗ್ರಾಫರ್ ಮತ್ತು ವಿಡಿಯೋಗ್ರಾಫರ್ ನೇಮಕಕ್ಕೂ ಈಗ ನಮಗೆ ಅನೇಕ ಆಯ್ಕೆಗಳಿವೆ. ಪರಿಚಯದ ಫೋಟೊಗ್ರಾಫರ್‌ಗಳನ್ನೇ ನೇಮಿಸಬಹುದು. ಪರಿಚಯವಿಲ್ಲದಿದ್ದರೂ ಆತಂಕವಿಲ್ಲ. ಫೋಟೊಗ್ರಾಫರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ತಾವು ತೆಗೆದ ಫೋಟೊ, ವಿಡಿಯೊಗಳನ್ನು ಹಂಚಿಕೊಂಡಿರುತ್ತಾರೆ. ಅವುಗಳಲ್ಲಿ ಹುಡುಕಿ, ಸರಿಯೆನ್ನಿಸುವ, ನಿಮ್ಮ ಬಜೆಟ್‌ಗೆ ಹೊಂದುವ ಫೋಟೊಗ್ರಾಫರ್‌ನ್ನು ನೇಮಿಸಬಹುದು.
‘ಪ್ರಿವೆಡ್ಡಿಂಗ್, ದೇವಕಾರ್ಯ, ಬಳೆಶಾಸ್ತ್ರ, ಹಳದಿ, ಸಂಗೀತ, ಮದುವೆ, ರಿಸಪ್ಶನ್ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಸೆರೆ ಹಿಡಿಯುತ್ತೇವೆ. ₹60 ಸಾವಿರದಿಂದ ಹಿಡಿದು ₹1 ಲಕ್ಷ, ₹3 ಲಕ್ಷದವರೆಗೆ ಪ್ಯಾಕೇಜ್‌ಗಳಿವೆ. ಒಂದು ಫೋಟೊಗ್ರಾಫರ್ ಟೀಮ್‌ನಲ್ಲಿ ಫೋಟೊಗ್ರಾಫರ್, ವಿಡಿಯೊಗ್ರಾಫರ್, ಡ್ರೋನ್ ಶೂಟ್ ಮಾಡುವವರು, ಕ್ಯಾಂಡಿಡ್ ಫೋಟೊಸ್ ಕ್ಲಿಕ್ ಮಾಡಲು ಸೇರಿದಂತೆ ಕನಿಷ್ಠ 5ರಿಂದ 10 ಜನರ ಗುಂಪು ಇರುತ್ತದೆ. ಫೋಟೊ, ವಿಡಿಯೊಗಳನ್ನು ಶೂಟ್ ಮಾಡಿ, ಎಡಿಟ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಪ್ರೊಮೊ ತಯಾರಿಸುವ, ಆಲ್ಬಂ ಮತ್ತು ವಿಡಿಯೊಗಳನ್ನು ತಯಾರಿಸಿ ಕೊಡುವ ಹೊಣೆ ನಮ್ಮದು’ ಎನ್ನುತ್ತಾರೆ ವೆಡ್ಡಿಂಗ್ ಫೋಟೊಗ್ರಾಫರ್ ಹರೀಶ್.
ಪ್ರಿವೆಡ್ಡಿಂಗ್ ಟ್ರೆಂಡ್:
ಮದುವೆಗೂ ಮೊದಲು ಪ್ರಿವೆಡ್ಡಿಂಗ್ ಶೂಟ್ ಮಾಡುವುದು ಈಗಿನ ಟ್ರೆಂಡ್. ನಿಸರ್ಗ ತಾಣಗಳಿಗೆ, ಐತಿಹಾಸಿಕ ತಾಣಗಳಿಗೆ, ಕಡಲ ತೀರಗಳಿಗೆ ತೆರಳಿ ಶೂಟ್ ಮಾಡಿ, ಚಂದದ ಕ್ಷಣಗಳನ್ನು ಸೆರೆ ಹಿಡಿಯಲಾಗುತ್ತದೆ. ಪ್ರಿವೆಡ್ಡಿಂಗ್ ಶೂಟ್ ಎಲ್ಲಿ ನಡೆಯಬೇಕು ಎಂಬ ಸ್ಥಳಗಳನ್ನು ವಧು–ವರರೇ ಆಯ್ಕೆ ಮಾಡಬಹುದು. ಇಲ್ಲದಿದ್ದರೇ ಫೋಟೊಗ್ರಾಫರ್ ಟೀಮ್ ನಿಮಗೆ ಸ್ಥಳಗಳನ್ನು ಆಯ್ಕೆ ಮಾಡಲು ಸಲಹೆ ನೀಡುತ್ತಾರೆ.
ಕೇರಳ, ಹೊನ್ನಾವರ, ಗೋವಾ, ಚಿಕ್ಕಮಗಳೂರು, ಉಡುಪಿ, ದಾಂಡೇಲಿ, ಆಲಮಟ್ಟಿ, ಗೋಕರ್ಣ, ಸಕಲೇಶಪುರ ಸೇರಿದಂತೆ ಅನೇಕ ಸ್ಥಳಗಳು ಪ್ರಿವೆಡ್ಡಿಂಗ್ ಶೂಟ್‌ಗೆ ಹೇಳಿ ಮಾಡಿಸಿದ ತಾಣಗಳು. ಯಾವ ಸ್ಥಳದಲ್ಲಿ, ಯಾವ ಬಟ್ಟೆ ತೊಡಬೇಕು, ಯಾವ ಪೊಸ್ ಕೊಡಬೇಕು ಎಂದು ಮಾರ್ಗದರ್ಶನ ಮಾಡುವ ಕಾರ್ಯ ಫೋಟೊಗ್ರಾಫ್ ಟೀಮ್‌ನದ್ದು.
ಡ್ರೋನ್ ಶೂಟ್‌ಗೆ ಹೆಚ್ಚಿದ ಆದ್ಯತೆ:
ಪ್ರಿವೆಡ್ಡಿಂಗ್, ವೆಡ್ಡಿಂಗ್ ಶೂಟ್‌ಗಳಲ್ಲಿ ಡ್ರೋನ್ ಶೂಟ್‌ಗೆ ಆದ್ಯತೆ ಹೆಚ್ಚಿದೆ. ಮೇಲಿಂದ ವಿಶಾಲ ವ್ಯಾಪ್ತಿಯನ್ನು ಕವರ್ ಮಾಡುವ ಡ್ರೋನ್‌ಗಳು ಸೆರೆಹಿಡಿಯುವ ಫೋಟೊ, ವಿಡಿಯೊ ಹೆಚ್ಚು ಆಕರ್ಷಕವಾಗಿರುತ್ತವೆ.
ಕ್ಯಾಂಡಿಡ್ ಶೂಟ್
ಸಂಗೀತ, ಹಳದಿ, ಶಾಸ್ತ್ರಗಳಲ್ಲಿ ಕ್ಯಾಂಡಿಡ್ ಫೋಟೊಗಳದ್ದೇ ರಾಯಭಾರಿ. ವಧು– ವರರ ಖುಷಿ, ಸಂಬಂಧಿಕರ, ಸ್ನೇಹಿತರ ಉತ್ಸಾಹ, ತವರು ಮನೆ ಬಿಟ್ಟು ಹೊರಟ ವಧುವಿನ ಕಣ್ಣೀರು, ಹೆತ್ತವರ ಕರುಳ ನೋವುಗಳನ್ನು ಶೂಟ್ ಮಾಡುವ ಕ್ಯಾಂಡಿಡ್ ಫೋಟೊಗಳು ಸೆರೆ ಹಿಡಿಯುವುದು ಕೇವಲ ನಮ್ಮ ಬಿಂಬವನ್ನಲ್ಲ. ನಮ್ಮ ಭಾವನೆಗಳನ್ನು.