ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಬಿಕ್ಕಟ್ಟು: ಒಕ್ಕಲುತನ ತೊರೆದ ಲಕ್ಷಾಂತರ ಕುಟುಂಬಗಳು

ಪಂಜಾಬಿನಲ್ಲಿ ಪ್ರಜಾವಾಣಿ
Last Updated 24 ಆಗಸ್ಟ್ 2016, 19:44 IST
ಅಕ್ಷರ ಗಾತ್ರ

ಅಕಾಲಿಗಳ ಮತ್ತು ತೀವ್ರಪಂಥೀಯ ಸಿಖ್ಖರ ಭದ್ರ ಕೋಟೆಯಾಗಿದ್ದ ತಾರಣ ಕ್ಷೇತ್ರ ತರಣ್‌ ಅವರ ಕೈ ಬಿಡುವ ಎಲ್ಲ ಸೂಚನೆಗಳನ್ನೂ ತೋರತೊಡಗಿದೆ. ತೀವ್ರವಾದಿಯಾಗಿದ್ದ ಸಿಮ್ರನಜಿತ್ ಸಿಂಗ್ ಮಾನ್ ತರಣ್ ಅವರು ತಾರಣದಿಂದ ಪಂಜಾಬಿನಲ್ಲೇ ಎರಡನೆಯ ಅತಿ ಹೆಚ್ಚು ಮತಗಳಿಂದ ಲೋಕಸಭೆಗೆ ಆರಿಸಿ ಬಂದಿದ್ದರು.

ಅವರು ಈಗ ಸ್ಪರ್ಧಿಸಿದರೆ ಪುರಸಭೆಗೂ ಆಯ್ಕೆಯಾಗುವುದು ದುಸ್ತರ ಎನ್ನುತ್ತಾರೆ  ಇಲ್ಲಿನ ಹಿರಿಯ ಪತ್ರಕರ್ತ ಗುರುಬಕ್ಷ್ ಸಿಂಗ್. ಅವರ ಪ್ರಕಾರ ಜನಗಳ ಉತ್ಸಾಹ ಪೊರಕೆ ಪಾರ್ಟಿಯ ಪರವಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಗಡಿಬಿಡಿ ಆದರೆ ಕಷ್ಟ. ಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿ ದಳದ ಆಧಾರಸ್ತಂಭ ಪ್ರಕಾಶ್ ಸಿಂಗ್ ಬಾದಲ್ ಅವರು ಚತುರ ರಾಜಕಾರಣಿ. ರಾಜಕಾರಣಕ್ಕೆ ಹೊಸಬರಾದ ಕೇಜ್ರಿವಾಲರನ್ನು ಸುಲಭವಾಗಿ ದಾರಿ ತಪ್ಪಿಸುವ ಜಾಣತನ ಅವರಲ್ಲಿದೆ. ಕೇಜ್ರಿವಾಲ್ ಅವರ ಮೂಲ ರಾಜ್ಯ ಹರಿಯಾಣ.

ಸೂಯೆಜ್ ಕಾಲುವೆ ಕುರಿತು ಪಂಜಾಬ್ ಮತ್ತು ಹರಿಯಾಣ ನಡುವೆ ತೀವ್ರ ಜಟಾಪಟಿ ಬಗೆಹರಿಯುವುದೇ ಇಲ್ಲ ಎಂಬ ಜಟಿಲ ಸ್ವರೂಪ ಧರಿಸಿಬಿಟ್ಟಿದೆ. ಬಾದಲ್ ಉರುಳಿಸಿದ ರಾಜಕೀಯ ದಾಳಗಳಿಂದಾಗಿ ಈ ವಿವಾದ ಕುರಿತು ಕೇಜ್ರಿವಾಲ್ ತಮ್ಮ ಹೇಳಿಕೆಯನ್ನು ಮೂರು ಸಲ ಬದಲಿಸಬೇಕಾಯಿತು.

ಎಲ್ಲ ಅವಕಾಶವಾದಿಗಳೂ ಇದೀಗ ಆಮ್ ಆದ್ಮಿ ಪಕ್ಷದ ಟಿಕೆಟ್ಟಿಗೆ ಮುಗಿ ಬಿದ್ದಿದ್ದಾರೆ. ಹುಷಾರಾಗಿಲ್ಲದೆ ಹೋದರೆ ಮುಗ್ಗರಿಸುವ ಸಾಧ್ಯತೆಯೇ ದಟ್ಟವಾಗಿದೆ. ಕಾಂಗ್ರೆಸ್ಸು ಮತ್ತು ಆಮ್ ಆದ್ಮಿ ಪಕ್ಷದ ನಡುವೆ ವಿರೋಧಿ ಮತಗಳು ಹಂಚಿ ಹೋಗುವುದೊಂದೇ ಅಕಾಲಿ-ಬಿಜೆಪಿ ಮೈತ್ರಿಯ ಪರವಾಗಿ ಹೊಮ್ಮಬಹುದಾದ ಬೆಳವಣಿಗೆ ಎಂದು ಅವರು ವ್ಯಾಖ್ಯಾನಿಸಿದರು.

ಅಂದಿನ ದಿನಗಳಲ್ಲಿ ಲಾಹೋರಿನ ರಾಜ ರಣಜಿತ್ ಸಿಂಗ್ ವಿರುದ್ಧ ಬ್ರಿಟಿಷರ ಜೊತೆ ಕೈ ಕಲೆಸಿದ್ದ ಅರಸೊತ್ತಿಗೆ ಪಟಿಯಾಲಾದ್ದು.  1870ರಲ್ಲೇ ಪದವಿ ಕಾಲೇಜಿದ್ದ ಅಗ್ಗಳಿಕೆ ಈ ನಗರದ್ದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪಟಿಯಾಲಾದ ಮಹಾರಾಣಿ ಅವರನ್ನು ಸೋಲಿಸಿದವರು ಆಮ್ ಆದ್ಮಿ ಪಕ್ಷದ  ಡಾ.ಧರಂವೀರ್ ಗಾಂಧಿ.  ಕೇಜ್ರಿವಾಲ್ ಅವರನ್ನು ಸರ್ವಾಧಿಕಾರಿ ಎಂದು ಜರೆದ ಕಾರಣ ಅವರು ಪಕ್ಷದಿಂದ ಅಮಾನತಿನ ಶಿಕ್ಷೆಯಲ್ಲಿದ್ದಾರೆ.

ರೈತ ಸಂಘಟನೆ ಲೋಕಸಂಗ್ರಾಮ ಮೋರ್ಚಾದ ತಲೆಯಾಳು ಪ್ರೊ. ದರ್ಶನಪಾಲ್ ಸಿಂಗ್ ಇದೇ ನಗರದ ನಿವಾಸಿ. ಜನಪರ ಹೋರಾಟಗಳಲ್ಲಿ ಬದುಕನ್ನೇ ತೊಡಗಿಸಿಕೊಂಡವರು. ಪಂಜಾಬಿನ ಎಡಪಂಥೀಯ ಹೋರಾಟದ ಮೈಲುಗಲ್ಲು ಅವರು. ‘ಪ್ರಜಾವಾಣಿ’ ಜೊತೆ ಚಹಾ ಸೇವಿಸುತ್ತ ಮಾತಿಗೆ ದಕ್ಕಿದ ಅವರು ಇಡೀ ಪಂಜಾಬಿನ ಇಂದಿನ ಇರಸ್ಥಿತಿಯ ಹಕ್ಕಿ ನೋಟವನ್ನೇ ಕಟ್ಟಿಕೊಟ್ಟರು.

ಪ್ರೊ. ದರ್ಶನಸಿಂಗ್ ಮಾತಿನಲ್ಲಿ ಹೇಳುವುದಾದರೆ ರಾಜ್ಯದ ಎಲ್ಲ ವರ್ಗಗಳ ಅತೃಪ್ತಿ ಇದೀಗ ಮುಗಿಲು ಮುಟ್ಟಿದೆ.  ಆಮ್ ಆದ್ಮಿ ಪಕ್ಷ   ಅಧಿಕಾರಕ್ಕೆ ಬಂದರೆ ಆ ಪಕ್ಷ ಪಂಜಾಬಿನ ಈ ಬಿಕ್ಕಟ್ಟುಗಳನ್ನು ಪರಿಹರಿಸುವುದು ಅಸಾಧ್ಯ. ಜನ ಆರ್ಥಿಕವಾಗಿ ತತ್ತರಿಸಿ ಹೋಗಿದ್ದಾರೆ. ಕೃಷಿ ಬಿಕ್ಕಟ್ಟಿನ ಆಳ –ಅಗಲಗಳು ಹೆಚ್ಚುತ್ತಲೇ ಹೋಗುತ್ತಿವೆ. ಕಳೆದ ಹದಿನೈದು ವರ್ಷಗಳಲ್ಲಿ ಸುಮಾರು ಎರಡು ಲಕ್ಷ ಎಕರೆ ಕುಟುಂಬಗಳು ಒಕ್ಕಲುತನ ತೊರೆದಿವೆ. ಸಿರಿವಂತ ರೈತರ ಸಂಖ್ಯೆ ಒಂದು ಲಕ್ಷ ಮಂದಿ. ಉಳಿದವರೆಲ್ಲ ಬಡವರು, ಮಧ್ಯಮ ಹಿಡುವಳಿ ದಾರರು. ಈ ವರ್ಗದ ರೈತರ  ಹಿಡುವಳಿಗಳು ಇನ್ನಷ್ಟು ಮತ್ತಷ್ಟು ಒಡೆಯುತ್ತ ಪಾಲಾಗುತ್ತಲೇ  ಹೋಗುತ್ತಿವೆ. ಭೂಹೀನರ ಸಂಖ್ಯೆ ಹೆಚ್ಚುತ್ತಿದೆ.

ಮಾಲ್ವಾ ಸೀಮೆಯಲ್ಲಿ ಹತ್ತಿ ಬೆಳೆಯುವ ರೈತರ ಆತ್ಮಹತ್ಯೆಗಳು ವಿಷಣ್ಣ ಬೆಳವಣಿಗೆ. ಬಾಸ್ಮತಿ ಭತ್ತ ಅರ್ಧ ಬೆಲೆಗೆ ಬಿಕರಿಯಾಗುತ್ತಿದೆ. ಮಾದಕ ವ್ಯಸನದ ಕಬಂಧ ಬಾಹುಗಳು ನಿರ್ವಿಣ್ಣಗೊಳಿಸಿರುವ ಕುಟುಂಬಗಳ ಸಂಖ್ಯೆ ಲಕ್ಷಗಳಲ್ಲಿದೆ. ಸುಶಿಕ್ಷಿತ ನಿರುದ್ಯೋಗಿಗಳು ಬೀದಿ ಅಲೆಯುತ್ತಿದ್ದಾರೆ.

ಕೃಷಿ ಉತ್ಪಾದಕತೆ ತಗ್ಗಿಲ್ಲ. ಇನ್ನು. ಲಭ್ಯವಿರುವ ಪ್ರತಿ ಅಂಗುಲ ಜಮೀನೂ ಉಳುಮೆಯಲ್ಲಿದೆ.  ಉತ್ಪಾದಕತೆ ಹೆಚ್ಚುತ್ತಿದ್ದರೆ ಅದು ಕೇಜಿಗಳ ಲೆಕ್ಕದಲ್ಲೇ ವಿನಾ ಕ್ವಿಂಟಲ್ ಲೆಕ್ಕದಲ್ಲಿ ಅಲ್ಲ. ಜಮೀನು ಬಾಡಿಗೆ (ಪಂಜಾಬಿನಲ್ಲಿ ಕೃಷಿ ಜಮೀನು ಬಾಡಿಗೆಗೆ ಲಭ್ಯ. ನಮ್ಮಲ್ಲಿ ಗುತ್ತಿಗೆ ಕೊಡುವುದು ಎಂದಂತೆ). ಕೂಲಿ, ಗೊಬ್ಬರ, ಟ್ರ್ಯಾಕ್ಟರ್, ನೀರು, ಬೀಜ, ಕೀಟನಾಶಕಗಳ ಬೆಲೆ ಹೆಚ್ಚಿದೆ. ಒಂದು ಎಕರೆ ಜಮೀನು ಬಾಡಿಗೆ ನಲವತ್ತು ಸಾವಿರ ರೂಪಾಯಿ. ಉತ್ಪಾದನಾ ವೆಚ್ಚ ಏರಿದೆ. ಉತ್ಪನ್ನಗಳ ದರಗಳು ಕುಸಿದಿವೆ.

ಉತ್ಪಾದನಾ ವೆಚ್ಚದ ಲೆಕ್ಕಾಚಾರದ ವಿಧಾನವೇ ತಪ್ಪು. ಶೇ 89-91ರಷ್ಟು ರೈತ ಕುಟುಂಬಗಳು ಸಾಲದ ಸುಳಿಯಲ್ಲಿವೆ. ಆದರೂ ಒಕ್ಕಲುತನವನ್ನೇ ಮುಂದುವರೆಸಿದ್ದಾರೆ.ಬೇರೆ ದಾರಿಯಿಲ್ಲ. ಶೇ 35ರಷ್ಟು ಕೃಷಿ ಕುಟುಂಬಗಳು ಸಾಲಕ್ಕಾಗಿ ಖಾಸಗಿ ಲೇವಾದೇವಿಗಾರರನ್ನೇ ನೆಚ್ಚಿವೆ. ಕೃಷಿ ಮಾರುಕಟ್ಟೆಗಳಲ್ಲಿ  ಏಜೆಂಟರ ರೂಪದಲ್ಲಿ ರೈತರ ರಕ್ತ ಹೀರುವ ಇವರನ್ನು ಹೊರ ಹಾಕದೆ ರೈತನ ಉದ್ಧಾರ ಆಗುವುದಿಲ್ಲ. ರಾಜ್ಯ ಸರ್ಕಾರ ಒಂದೂವರೆ ಲಕ್ಷ ಕೊಳವೆ ಬಾವಿಗಳನ್ನು ಮಂಜೂರು ಮಾಡಿ­ರುವುದು ಕಾಗದದಿಂದ ಕ್ಷೇತ್ರಕ್ಕೆ ಇಳಿದಿಲ್ಲ. 

ಕಳೆದ ಸಂಪುಟ ಸಭೆಯಲ್ಲಿ ಉದ್ಯಮಿಗಳ ಸಾಲವನ್ನು  ಮನ್ನಾ ಮಾಡಿದ್ದಾರೆ. ಹೆಚ್ಚು ರಿಯಾಯಿತಿಗಳನ್ನು ನೀಡಿದ್ದಾರೆ.  ಸರ್ಕಾರಿ ಅಥವಾ ಖಾಸಗಿ ನೌಕರಿ ಹಿಡಿದಿರುವ ಸದಸ್ಯರಿರುವ ರೈತ ಕುಟುಂಬಗಳು ಮತ್ತು ಹತ್ತು ಎಕರೆ ಹಿಡುವಳಿ ಹೊಂದಿರುವವರು ಹೇಗೋ ಬದುಕಿದ್ದಾರೆ.

ಆಮ್ ಆದ್ಮಿ ಪಕ್ಷ ಕೂಡ ಅಧಿಕಾರಕ್ಕೆ ಬಂದರೆ ರೈತ ಆಂದೋಲನವನ್ನು ತುಳಿಯುತ್ತದೆ ಎನ್ನುವಲ್ಲಿ ನಮಗೆ ಯಾವ ಅನುಮಾನವೂ ಇಲ್ಲ. ಬಾದಲ್ ನರಿಯಂತಹ ರಾಜಕಾರಣಿಯಾದರೆ ಕೇಜ್ರಿವಾಲ್ ಏನೂ ಕಮ್ಮಿ ಇಲ್ಲ. ಆಮ್ ಆದ್ಮಿ ಪಕ್ಷ  ಕಳೆದ ಒಂದೂವರೆ ವರ್ಷದಲ್ಲಿ ಪಂಜಾಬಿನ ಉದ್ದ ಅಗಲಕ್ಕೆ ಉತ್ತಮ ಸಂಘಟನಾ ಜಾಲವನ್ನು ಕಟ್ಟಿ ಬೆಳೆಸಿದೆ. ಈಗಿನ ಜನಾನುರಾಗವೇ ಮುಂದುವರೆದರೆ ಈ ಹೊಸ ಪಕ್ಷದ ಗೆಲುವಿನ ಯಾತ್ರೆಯನ್ನು ಯಾರೂ ತಡೆದು ನಿಲ್ಲಿಸಲಾರರು ಎನ್ನುತ್ತಾರೆ ದರ್ಶನ ಪಾಲ್.

ಖುದ್ದು ಎಡಪಂಥಿಯಾಗಿರುವ ಅವರ ಪ್ರಕಾರ ಎಡಪಕ್ಷಗಳ ಅವನತಿ ಈ ರಾಜ್ಯದಲ್ಲಿ ಒಂದು ಶೂನ್ಯವನ್ನು ಸೃಷ್ಟಿಸಿದೆ. ತಳಹದಿ ಈಗಲೂ ಸೊರಗಿಲ್ಲ. ಆದರೆ ರಾಜಕೀಯ ಶಕ್ತಿಯಾಗಿ ಹೊಮ್ಮುವಲ್ಲಿ ಎಡಪಕ್ಷಗಳು ಸೋತಿವೆ. ರಾಜಕೀಯ ಶಕ್ತಿಯಾಗಿ ಗಳಿಸಬೇಕಾದ ವಿಶ್ವಾಸಾರ್ಹತೆ ಮತ್ತು ಅಸ್ಮಿತೆಯನ್ನು ಅವುಗಳು ಗಳಿಸಿಲ್ಲ. 

ಹುತಾತ್ಮ ಭಗತ್ ಸಿಂಗ್ ಮತ್ತು ಘದರ್ ಆಂದೋಲನವನ್ನು  ಪಂಜಾಬಿಗೆ ಪರಿಚಯಿಸಿದ್ದ ಎಡಪಂಥೀಯ ಪಕ್ಷಗಳ ರಾಜಕಾರಣ ಸೊರಗಿದೆ. ಒಂದು ಕಾಲಕ್ಕೆ (1977) ಪಂಜಾಬಿನ ವಿಧಾನಸಭೆಯಲ್ಲಿ ಎಡಪಕ್ಷಗಳ ಹದಿನೈದು ಮಂದಿ ಶಾಸಕರಿದ್ದರು. ಮತಗಳಿಕೆ ಶೇ16ರಿಂದ ಇದೀಗ ಶೇ 0.82 (ಸಿಪಿಐ), ಶೇ 0.16ಕ್ಕೆ (ಸಿಪಿಐ-ಎಂ) ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT