ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ತಾಯ್ತನ: ದೋಷಪೂರ್ಣ ಮಸೂದೆ ಪುನರ್ವಿಮರ್ಶೆಯಾಗಲಿ

Last Updated 29 ಆಗಸ್ಟ್ 2016, 7:04 IST
ಅಕ್ಷರ ಗಾತ್ರ

ಬಾಡಿಗೆ ತಾಯ್ತನ ನಿಯಂತ್ರಿಸುವ ಭರದಲ್ಲಿ ಮತ್ತೊಂದು ಅತಿರೇಕಕ್ಕೆ ಹೋಗಿರುವುದು  ಕೇಂದ್ರ ಸಂಪುಟ ಅಂಗೀಕರಿಸಿರುವ 2016ರ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಯಲ್ಲಿ ವ್ಯಕ್ತ.  ಮಸೂದೆಯ ಉದ್ದೇಶ ಒಳ್ಳೆಯದಿರಬಹುದು, ಆದರೆ ಅದು ದೋಷಪೂರ್ಣವಾಗಿದೆ. 

ಬಾಡಿಗೆ ತಾಯ್ತನಕ್ಕೆ ನಿಯಂತ್ರಣ ಬೇಕು ನಿಜ. ಆದರೆ ಆಯ್ಕೆಯನ್ನೇ ಸೀಮಿತಗೊಳಿಸುವಂತಹ ಕ್ರಿಯೆ, ಮಸೂದೆ ರಚನೆಯ ಹಿಂದಿರುವ ಪೂರ್ವಗ್ರಹಗಳನ್ನು ಢಾಳಾಗಿ ಬಿಂಬಿಸುತ್ತಿದೆ.  ಶ್ರೀಮಂತ ಹಾಗೂ ವಿದೇಶಿ ಗ್ರಾಹಕರಿಗೆ ಬಾಡಿಗೆ ತಾಯಿಯಾಗುವ ಬಡಮಹಿಳೆಯರನ್ನು ರಕ್ಷಿಸುವ ದೃಷ್ಟಿಕೋನ ಇಲ್ಲಿದೆ ಎಂದು ಈ ಮಸೂದೆಯನ್ನು ಸರ್ಕಾರ ಸಮರ್ಥಿಸಿಕೊಂಡಿದೆ.

ಆದರೆ   ಸಂತಾನೋತ್ಪತ್ತಿ ನೆರವು ತಂತ್ರಜ್ಞಾನದ (ಎಆರ್‌ಟಿ) ಪ್ರಯೋಜನಗಳಿಗೆ ಈ ಮಸೂದೆ ಸಂಪೂರ್ಣ ಕುರುಡಾಗಿದೆ. 2002ರಲ್ಲಿ ವಾಣಿಜ್ಯ ಬಾಡಿಗೆ ತಾಯ್ತನ ಕಾನೂನುಬದ್ಧವಾದ ನಂತರ, ಬಾಡಿಗೆ ತಾಯ್ತನ ವಹಿವಾಟು,  ₹ 900 ಕೋಟಿಗಳ ಅನಿಯಂತ್ರಿತ ಉದ್ಯಮವಾಗಿ ಬೆಳೆದಿದೆ.

ನೀತಿನಿಯಮಗಳಿಲ್ಲದ ಮಧ್ಯವರ್ತಿಗಳು ಹಾಗೂ ವೈದ್ಯರಿಂದ  ಬಡ ಮಹಿಳೆಯರು ಶೋಷಿತರಾಗುವ ಪ್ರಕರಣಗಳು ನಡೆಯುತ್ತಿವೆ ಎಂಬುದೂ ನಿಜ. ಆದರೆ ಈ ಉದ್ಯಮವನ್ನು ನಿಯಂತ್ರಣಕ್ಕೆ ಒಳಪಡಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಹುಡುಕಬೇಕಾದುದು ಅಗತ್ಯ. ಬದಲಿಗೆ, ಇಡಿಯಾಗಿ ವಾಣಿಜ್ಯೀಕೃತ ಬಾಡಿಗೆ ತಾಯ್ತನವನ್ನೇ ನಿಷೇಧಿಸುವುದರಿಂದ ಏನೂ ಸಾಧ್ಯವಾಗದು.

ಇಂತಹ ಕ್ರಮ ಈ ವ್ಯವಹಾರವನ್ನು ಭೂಗತವಾಗಿಸುತ್ತದೆ. ಇದರಿಂದ ಮಗು ಪಡೆಯುವ ದಂಪತಿಗೆ ಈ ಸೇವೆ ಪಡೆದುಕೊಳ್ಳುವುದು ಇನ್ನೂ ದುಬಾರಿಯಾಗುತ್ತದೆ.  ಜೊತೆಗೆ ಬಾಡಿಗೆ ತಾಯಂದಿರಿಗೂ ಹೆಚ್ಚು ಅಪಾಯಕಾರಿಯಾಗಲಿದೆ. ಸಂಪೂರ್ಣ ಪಾನ ನಿಷೇಧ ಅಥವಾ ಅಂಗಾಂಗ ಜೋಡಣೆ ನಿಷೇಧದಂತಹ ವಿಚಾರಗಳಲ್ಲಾಗಿರುವುದೂ ಇದೇ.

ಬಾಡಿಗೆ ತಾಯಂದಿರ ನೋಂದಣಿ, ಪರಿಹಾರ ಹಣ ನಿಗದಿ, ಮಧ್ಯವರ್ತಿಗಳ ನಿವಾರಣೆ ಇತ್ಯಾದಿ ನಿರ್ದಿಷ್ಟ ಕ್ರಮಗಳ ಮೂಲಕವೇ ಈ ವಲಯವನ್ನು ನಿಯಂತ್ರಿಸಬೇಕು. ಸರಿಯಾದ ಕಾನೂನು ಇಲ್ಲದೆ ಈ ಹಿಂದೆ ಬಾಡಿಗೆ ತಾಯಿಯಿಂದ ಪಡೆದ ಮಕ್ಕಳು ಅಂತರರಾಷ್ಟ್ರೀಯ ಕಾನೂನಿನ ಜಟಿಲತೆಗಳಲ್ಲಿ ಸಿಕ್ಕಿಕೊಂಡಿದ್ದಿದೆ. ಕೆಲವೊಮ್ಮೆ ಮಕ್ಕಳನ್ನು ತೊರೆದ ಪ್ರಕರಣಗಳೂ ಇವೆ. ಹೀಗಾಗಿ ಕಾನೂನು ಅತ್ಯಗತ್ಯವಾಗಿ ಬೇಕು.

ಬಾಡಿಗೆ ತಾಯಿಯಿಂದ ಪಡೆದ ಮಗುವಿಗೆ ಕಾನೂನಾತ್ಮಕ ಹಕ್ಕುಗಳು ನೀಡಿರುವುದು ಹಾಗೂ ಪದೇ ಪದೇ ಬಾಡಿಗೆ ತಾಯ್ತನಕ್ಕಾಗಿ ಗರ್ಭಿಣಿಯಾಗುವುದನ್ನು ನಿಷೇಧಿಸಿರುವುದು ಸಕಾರಾತ್ಮಕ ನಡೆ. ಆದರೆ ಪರೋಪಕಾರಕ್ಕಾಗಿ ಹಣವಿಲ್ಲದೆ ಮಹಿಳೆ ಮಗು ಹೆತ್ತು ಕೊಡುತ್ತಾಳೆಂದು ನಿರೀಕ್ಷಿಸುವುದು ಕಷ್ಟ. 

ಈಗಾಗಲೇ  ಒಂದು ಆರೋಗ್ಯಕರ ಮಗು ಹೊಂದಿರುವ ವಿವಾಹಿತ ಮಹಿಳೆ ಮತ್ತೊಂದು ಮಗುವನ್ನು ಸಂಬಂಧಿಗಳಿಗೆ ಹೆತ್ತುಕೊಡುವಂತಹ ಉದಾರ ಮನಸ್ಸು ಮಾಡುತ್ತಾಳೆ ಎಂಬುದು ಸದ್ಯದ ಸಾಮಾಜಿಕ ವಾತಾವರಣದಲ್ಲಿ ಕ್ಲಿಷ್ಟಕರ. ಇಂತಹದೊಂದು ಷರತ್ತು, ಭಾರತೀಯ ತತ್ವಗಳಿಗೆ ಸಂಬಂಧಿಸಿದ್ದು ಎಂದು ಮಸೂದೆ ಪರಿಶೀಲಿಸಿದ ಸಚಿವರ ತಂಡದ ನೇತೃತ್ವ ವಹಿಸಿದ್ದ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. 

ಆದರೆ ಈ ತತ್ವ ಓಬೀರಾಯನ ಕಾಲದ ಮನಸ್ಥಿತಿಯನ್ನು ಬಿಂಬಿಸುವಂತಹದ್ದು.  ಜೊತೆಗೆ, ಪರೋಪಕಾರದ ಬಾಡಿಗೆ ತಾಯ್ತನ ತರಬಹುದಾದ  ಸಂಬಂಧಗಳ ಸಮಸ್ಯೆಯನ್ನೂ ಪರಿಗಣಿಸಿಲ್ಲ. ಕುಟುಂಬದ ವ್ಯಕ್ತಿಯಿಂದಲೇ ಮಗು ಪಡೆದುಕೊಂಡಾಗ, ಕುಟುಂಬದ ಪರಿಸರದಲ್ಲಿ ಜೈವಿಕ ತಾಯಿ, ಜನ್ಮ ನೀಡಿದ ತಾಯಿ ನಡುವೆ ಉಂಟಾಗಬಹುದಾದ ಭಾವನಾತ್ಮಕ ಗೊಂದಲಗಳನ್ನು ಈ ಮಸೂದೆ ಪರಿಗಣಿಸಿಲ್ಲ.

ಕುಟುಂಬದ ಪರಿಕಲ್ಪನೆಗಳು ಬದಲಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕುಟುಂಬ ಎಂದರೆ ಹೀಗೆ ಇರಬೇಕು ಎಂಬುದನ್ನೂ ಈ ಮಸೂದೆ ಸೂಚಿಸುವಂತಿದೆ. ಹೀಗಾಗಿ ವಿದೇಶೀಯರು, ಅನಿವಾಸಿ ಭಾರತೀಯರಷ್ಟೇ ಅಲ್ಲ ಅವಿವಾಹಿತರು, ವಿಚ್ಛೇದಿತರು ಸೇರಿದಂತೆ ಏಕಪೋಷಕರು (ಸಿಂಗಲ್ ಪೇರೆಂಟ್), ಲಿವ್ ಇನ್ ದಂಪತಿ, ಸಲಿಂಗ ದಂಪತಿಗಳನ್ನು ಈ ಮಸೂದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಲೈಂಗಿಕ ಅಲ್ಪಸಂಖ್ಯಾತ (ಎಲ್‌ಜಿಬಿಟಿ) ಸಮುದಾಯದ ಹಕ್ಕುಗಳ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿರಬಹುದು. ಆದರೆ ಲಿವ್ ಇನ್ ದಂಪತಿಯ ಹಕ್ಕುಗಳನ್ನು  ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಅಲ್ಲದೆ ಅವರನ್ನು ವಿವಾಹಿತರೆಂದು ಹಾಗೂ ಅವರ ಮಕ್ಕಳನ್ನು  ನ್ಯಾಯಬದ್ಧವೆಂದು ಪರಿಗಣಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ನೆನಪಿಸಿಕೊಳ್ಳಬೇಕು.

ಅಷ್ಟೇ ಅಲ್ಲ,  ಅವಿವಾಹಿತರಿಗೂ ಮಗು ದತ್ತು ಪಡೆದುಕೊಳ್ಳಲು ಭಾರತದ ಕಾನೂನಿನಲ್ಲಿ ಅವಕಾಶ ಇದ್ದೇ ಇದೆ.  ಹಾಗೆಯೇ ಈ ಮಸೂದೆಯಲ್ಲಿ ಅಂಗವಿಕಲ ಮಕ್ಕಳು ಹೊಂದಿದ ತಂದೆತಾಯಿಗಳಿಗೆ ಬಾಡಿಗೆ ತಾಯ್ತನದ ಮೂಲಕ ಮತ್ತೊಮ್ಮೆ ಮಗು ಪಡೆಯುವ ಆಯ್ಕೆ ನೀಡಲಾಗಿದೆ.

ಎಂದರೆ  ವಿವಿಧ ವರ್ಗಗಳ ಜನಸಮುದಾಯಗಳ ಬಗ್ಗೆ ಈ ಮಸೂದೆ  ಎಷ್ಟೊಂದು ಪೂರ್ವಗ್ರಹಪೀಡಿತವಾಗಿದೆ ಎಂಬುದನ್ನು ಗ್ರಹಿಸಬಹುದು. ಒಟ್ಟಾರೆ ಮಕ್ಕಳಿಲ್ಲದ ದಂಪತಿಗೆ ಈ ಮಸೂದೆ ದೊಡ್ಡ ಪೆಟ್ಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT