ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಾಗೃಹದಲ್ಲಿ ಭ್ರಷ್ಟಾಚಾರ ತನಿಖೆಗೆ ಸರ್ಕಾರದ ಆದೇಶ

ಅಕ್ರಮ ಸಾಮಾನ್ಯ * ಡಿಐಜಿ ಪತ್ರದಲ್ಲಿ ಹೊಸದೇನೂ ಇಲ್ಲವೆಂದ ಡಿಜಿಪಿ
Last Updated 13 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ₹ 2 ಕೋಟಿ ಮೊತ್ತದ ಭ್ರಷ್ಟಾಚಾರ ಪ್ರಕರಣ ಕುರಿತು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಿಂದ ವಿಚಾರಣೆ ನಡೆಸಲು ಸರ್ಕಾರ ನಿರ್ಧರಿಸಿದೆ.

‘ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದು ನಿವೃತ್ತರಾದ ಮೂವರನ್ನು ಸಂಪರ್ಕಿಸಿ ಅಭಿಪ್ರಾಯ ಕೇಳಲಾಗಿದೆ.  ಅವರು ಸಮ್ಮತಿ ಸೂಚಿಸಿದ ಕೂಡಲೇ ಒಬ್ಬರ ಹೆಸರನ್ನು ಮುಖ್ಯಮಂತ್ರಿ ಅಂತಿಮಗೊಳಿಸಲಿದ್ದಾರೆ. ಶುಕ್ರವಾರ (ಇದೇ 14) ಸಂಜೆಯೊಳಗೆ ಅಧಿಕೃತ ಆದೇಶ ಹೊರಬೀಳಲಿದೆ  ಎಂದು ಗೃಹ ಇಲಾಖೆ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಈ ವಿಷಯವನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿದ್ದಾರೆ. ವಿಚಾರಣೆಗೆ ಕಾಲಮಿತಿ ನಿಗದಿಪಡಿಸಲು ಸೂಚಿಸಿದ್ದಾರೆ. ಹೀಗಾಗಿ ತ್ವರಿತವಾಗಿ ವರದಿ ಪಡೆಯಲಾಗುವುದು’ ಎಂದು ಮೂಲಗಳು ಹೇಳಿವೆ.

‘ಕಾರಾಗೃಹದಲ್ಲಿ ಬಂದಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ವ್ಯವಸ್ಥೆ ಮಾಡಲು ಕಾರಾಗೃಹಗಳ ಇಲಾಖೆ ಡಿಜಿಪಿ ಎಚ್.ಎನ್. ಸತ್ಯನಾರಾಯಣರಾವ್‌ ಅವರು ₹ 2 ಕೋಟಿ ಲಂಚ ಪಡೆದಿದ್ದಾರೆ ಎಂಬ ಮಾತಿದೆ. ಈ ಬಗ್ಗೆ   ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಇಲಾಖೆಯ ಡಿಐಜಿ ಡಿ. ರೂಪಾ  ಬರೆದಿದ್ದ ಪತ್ರ ವಿವಾದ ಎಬ್ಬಿಸಿದೆ. ಈ ಸಂಬಂಧ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್‌.ಕೆ. ದತ್ತಾ ಅವರ ಜತೆ ಗುರುವಾರ ಬೆಳಿಗ್ಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರಣೆಗೆ ಆದೇಶಿಸಿದರು.

ಅಂಥ ಅಕ್ರಮ ತಡೆಗಟ್ಟುವ ಹೊಣೆಗಾರಿಕೆ ತಮಗೂ ಇದೆ ಎಂಬುದನ್ನು ಅವರು ಮರೆಯಬಾರದು’ ಎಂದು ಸತ್ಯನಾರಾಯಣ್‌ ರಾವ್ ಆಕ್ರೋಶದಿಂದ ನುಡಿದರು.

‘ಅಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳ ಬಳಿ ಚರ್ಚಿಸಬಹುದಿತ್ತು. ತಪ್ಪಿತಸ್ಥ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ ಅಮಾನತಿಗೆ ಶಿಫಾರಸು ಮಾಡಬಹುದಿತ್ತು. ಅದನ್ನು ಬಿಟ್ಟು ನೇರವಾಗಿ ಮಾಧ್ಯಮಕ್ಕೆ ವರದಿ ಕೊಟ್ಟಿದ್ದಾರೆ. ಇವರಿಗೆ ಪ್ರಚಾರ ಮುಖ್ಯವಾ ಅಥವಾ ಕ್ರಮ ಮುಖ್ಯವಾ’ ಎಂದು ಪ್ರಶ್ನಿಸಿದರು.

ಲಂಚ ಆರೋಪಕ್ಕೆ ತಲೆಬುಡವಿಲ್ಲ: ‘ಶಶಿಕಲಾಗೆ  ವಿಶೇಷ ಆತಿಥ್ಯ ನೀಡಲು ₹2 ಕೋಟಿ ಲಂಚ ಪಡೆಯಲಾಗಿದೆ’ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ‘ಸಾಮಾನ್ಯ ಕೈದಿಗಳಿಗೆ ನೀಡುವ ಊಟವನ್ನೇ ಶಶಿಕಲಾಗೂ ನೀಡುತ್ತಿದ್ದೇವೆ. ವಿಶೇಷ ಅಡುಗೆ ಮನೆ ಇಲ್ಲವೇ ಇಲ್ಲ’ ಎಂದರು.

‘ಶಶಿಕಲಾರನ್ನು ಭೇಟಿಯಾಗಲು ಹಲವರು ಬರುತ್ತಾರೆ. ಆದರೆ, 15 ದಿನಕ್ಕೊಮ್ಮೆ ಮಾತ್ರ ಭೇಟಿಗೆ ಅವಕಾಶ ನೀಡುತ್ತಿದ್ದೇವೆ. ಜತೆಗೆ ಡಿಐಜಿ ರೂಪಾ ಜುಲೈ 10ರಂದು ಜೈಲಿಗೆ ಭೇಟಿ ಕೊಟ್ಟಾಗ ಶಶಿಕಲಾ ಕೊಠಡಿಗೆ ಹೋಗೇ ಇಲ್ಲ. ಯಾರೋ ಹೇಳಿದರೂ ಎಂದು ಅವರು ಈ ಆರೋಪ ಮಾಡಿದ್ದಾರೆ’ ಎಂದು ಕಿಡಿಕಾರಿದರು.

‘ಗುರುವಾರ ಬೆಳಿಗ್ಗೆ ಪತ್ರ ನನ್ನ ಕೈಸೇರಿದೆ. ₹2 ಕೋಟಿ ಲಂಚವೆಂದಷ್ಟೇ ಬರೆಯಲಾಗಿದೆ. ಯಾರು? ಯಾರಿಗೆ ಕೊಟ್ಟರು? ಯಾವಾಗ ಕೊಟ್ಟರು ಎಂಬ ಬಗ್ಗೆ ಉಲ್ಲೇಖಿಸಿಲ್ಲವೇಕೆ. ಇದು ತಲೆಬುಡವಿಲ್ಲದ ಆರೋಪ’ ಎಂದು ಹೇಳಿದರು.

‘ಅಬ್ದುಲ್‌ ಕರಿಂಲಾಲ್‌ ತೆಲಗಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ನ್ಯಾಯಾಲಯದ ನಿರ್ದೇಶನದಂತೆ ಆತನಿಗೆ ಒಬ್ಬ ಸಹಾಯಕನನ್ನು ನೀಡಲಾಗಿದೆ.  ಆತ ವಾಯುವಿಹಾರ ಮಾಡುತ್ತಾನೆ ಎಂಬ ಮಾತ್ರಕ್ಕೆ, ಆರೋಗ್ಯವಾಗಿದ್ದಾನೆ ಎಂಬ ನಿರ್ಧಾರಕ್ಕೆ ಬರುವುದು ತಪ್ಪು. ಈ ಬಗ್ಗೆಯೂ ಡಿಐಜಿ ಮಾಡಿರುವ ಆರೋಪ ಸುಳ್ಳು’ ಎಂದರು.

ಜೈಲು ಅಧೀಕ್ಷಕ ವರ್ಗಾವಣೆಗೆ ಶಿಫಾರಸು: ‘ಜೈಲಿನಲ್ಲಿ ನಡೆದ ಅಕ್ರಮದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಈ ಹಿಂದೆ  ಅಧೀಕ್ಷಕ ಕೃಷ್ಣಕುಮಾರ್‌ ಮೇಲೆ ದೂರು ಬಂದಿತ್ತು. ಅದನ್ನು ಪರಿಶೀಲಿಸಿ ಅವರನ್ನು ವರ್ಗಾವಣೆ ಮಾಡುವಂತೆ ಗೃಹ ಇಲಾಖೆಗೆ ಶಿಫಾರಸು ಮಾಡಿದ್ದೆ. ಅವರು ಮಾಡಲಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತನಿಖೆಗೆ ಸಹಕಾರ: ‘ನನ್ನ ವೃತ್ತಿ ಜೀವನದಲ್ಲಿ ಬೇರೆಯವರಿಂದ ಒಂದು ಬಿಸ್ಕತ್ತನ್ನೂ ಪಡೆದು ತಿಂದಿಲ್ಲ.  ಅಕ್ರಮ ಕುರಿತು ಭ್ರಷ್ಟಾಚಾರ ನಿಗ್ರಹ ದಳ ಸೇರಿದಂತೆ ಯಾವುದೇ ಉನ್ನತ ಮಟ್ಟದ ಸಂಸ್ಥೆ ತನಿಖೆ ನಡೆಸಿದರೂ ಸಹಕರಿಸುತ್ತೇನೆ. ಸತ್ಯ ಏನೆಂಬುದು ಜನರಿಗೂ ಗೊತ್ತಾಗಲಿ’ ಎಂದು ಡಿಜಿಪಿ ಹೇಳಿದರು.

ಮುಖ್ಯಮಂತ್ರಿ ಸಭೆಗೆ ಡಿಐಜಿ ಗೈರು: ‘ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ಜುಲೈ 10ರಂದು ನಡೆದ ಮುಖ್ಯಮಂತ್ರಿಯವರ ಸಭೆಗೆ ಡಿಐಜಿ ರೂಪಾ ಗೈರಾಗಿದ್ದರು. ಅದೇ ದಿನ ಜೈಲಿಗೆ ಹೋಗಿದ್ದಾರೆ. ಸಭೆಗೆ ಗೈರಾಗಿದ್ದಕ್ಕಾಗಿ ಮೆಮೊ ಕೊಟ್ಟಿದ್ದೆ’ ಎಂದು ಡಿಜಿಪಿ ಹೇಳಿದರು.

‘ಮೆಮೊಗೆ ಅವರು ಯಾವುದೇ  ಪ್ರತಿಕ್ರಿಯೆ ನೀಡಿಲ್ಲ. ಇಷ್ಟು ದಿನಗಳಲ್ಲಿ ಅವರು ಎರಡು ಬಾರಿ ಮಾತ್ರ ನನ್ನ ಕೊಠಡಿಗೆ ಬಂದು ಹೋಗಿದ್ದಾರೆ. ಇನ್ನೇನು 18 ದಿನದಲ್ಲಿ ನಿವೃತ್ತಿಯಾಗಲಿದ್ದೇನೆ. ಇಂಥ ಸಮಯದಲ್ಲಿ ಈ ಆರೋಪ ನೋವು ತಂದಿದೆ. ಈ ಬಗ್ಗೆ  ಗೃಹ ಇಲಾಖೆಗೂ ವರದಿ ಸಲ್ಲಿಸುತ್ತೇನೆ’ ಎಂದರು.

ಫೇಸ್‌ಬುಕ್‌ಗೆ ಫೋಟೊ; ನಿಯಮ ಉಲ್ಲಂಘನೆ: ‘ರೂಪಾ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಳ್ಳುವುದು, ಮಾಧ್ಯಮಗಳಿಗೆ ಹೇಳಿಕೆ ನೀಡುವುದು ಸಾಮಾನ್ಯವಾಗಿ ಬಿಟ್ಟಿದೆ. ಕಾರಾಗೃಹದಲ್ಲಿ ಚಿತ್ರ ತೆಗೆದು ಫೇಸ್‌ಬುಕ್‌ಗೆ ಹಾಕ್ತಾರೆ. ಕಾರಾಗೃಹ ನಿಯಮಗಳ ಪ್ರಕಾರ ಇದು ನಿಯಮ ಉಲ್ಲಂಘನೆ’ ಎಂದು  ಡಿಜಿಪಿ ಸತ್ಯನಾರಾಯಣರಾವ್‌ ತಿಳಿಸಿದರು.

ಕೊಠಡಿಯಲ್ಲೇ ದಿನಕಳೆದರು: ಶೇಷಾದ್ರಿ ರಸ್ತೆಯಲ್ಲಿರುವ ಕಾರಾಗೃಹ ಇಲಾಖೆಯ ಪ್ರಧಾನ ಕಚೇರಿಗೆ ಬೆಳಿಗ್ಗೆ ಎಂದಿನಂತೆ ಬಂದ ಡಿಜಿಪಿ ಸತ್ಯನಾರಾಯಣರಾವ್‌ ಹಾಗೂ ಡಿಐಜಿ ಡಿ.ರೂಪಾ, ಕೊಠಡಿಯಲ್ಲೇ ದಿನಕಳೆದರು.

ಡಿಜಿಪಿ ಹಾಗೂ ಡಿಐಜಿ, ಇಬ್ಬರೂ ಏಕಕಾಲದಲ್ಲೇ ತಮ್ಮ ತಮ್ಮ ಕಚೇರಿಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಆ ನಂತರ ಕೂಡ ಅವರು ಒಬ್ಬರನ್ನೊಬ್ಬರೂ ಭೇಟಿಯಾಗಲಿಲ್ಲ. ಇಬ್ಬರೂ ಪ್ರತ್ಯೇಕವಾಗಿ ಸಿ.ಸಿ.ಟಿ.ವಿ ಕ್ಯಾಮೆರಾಗಳಿದ್ದ ಕೊಠಡಿಗೆ ಹೋಗಿ, ಕಾರಾಗೃಹದ ಕೆಲವು ದೃಶ್ಯಗಳನ್ನು ಅವರು ಪರಿಶೀಲಿಸಿದರು. 

ಮುಂದುವರಿದ ಕಿತ್ತಾಟ: ಇದರ ಮಧ್ಯೆಯೇ ಸತ್ಯನಾರಾಯಣರಾವ್‌ ಹಾಗೂ ರೂಪಾ ಅವರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಪರಸ್ಪರ ಆರೋಪ–ಪ್ರತ್ಯಾರೋಪ ಮಾಡಿದರು.

‘ಕೇಂದ್ರ ಕಾರಾಗೃಹದಲ್ಲಿ 4,000 ಕೈದಿಗಳಿದ್ದು, ಅಲ್ಲಿ ಅಕ್ರಮ ಸಾಮಾನ್ಯ.  ಈ ಬಗ್ಗೆ ಡಿಐಜಿ ಬರೆದಿರುವ ಪತ್ರದಲ್ಲಿ ಹೊಸದೇನೂ ಇಲ್ಲ.

‘ಎಲ್ಲ ಆರೋಪಕ್ಕೆ ಪುರಾವೆ ಇದೆ’
‘ಪತ್ರದಲ್ಲಿ ಮಾಡಿರುವ 7 ಆರೋಪಗಳಿಗೆ ಪುರಾವೆ ಇದೆ. ₹2 ಕೋಟಿ ಲಂಚ ಪಡೆದ ಬಗೆಗಿನ 8ನೇ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ. ಎಲ್ಲ ಪುರಾವೆಗಳನ್ನು ಗೃಹ ಇಲಾಖೆ ಕೇಳಿದರೆ ಕೊಡಲು ಸಿದ್ಧ’ ಎಂದು ಡಿಐಜಿ ಡಿ.ರೂಪಾ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೈಲಿನ ಅಕ್ರಮದ ಬಗ್ಗೆ 4 ಪುಟದ ಪತ್ರ ಬರೆದಿದ್ದೇನೆ. ವರದಿಯಲ್ಲಿ ಸತ್ಯಾಂಶವಿದೆಯೋ ಇಲ್ಲವೋ ಎಂಬುದು ಡಿಜಿಪಿ ಅವರಿಗೇ ಗೊತ್ತು’ ಎಂದರು.

‘ಜುಲೈ 10ರಂದು ಜೈಲಿಗೆ ಭೇಟಿ ನೀಡಿದ್ದಾಗ ಅಲ್ಲಿಯ ಸಿಬ್ಬಂದಿ ಕಡೆಯಿಂದ ಚಿತ್ರೀಕರಣ ಮಾಡಿಸಿದ್ದೆ. ಅಂದೇ ಆ ದೃಶ್ಯಗಳನ್ನು ಕೊಡುತ್ತೇನೆ ಎಂದಿದ್ದ ಜೈಲು ಅಧೀಕ್ಷಕ, ಅದನ್ನು ಡಿಜಿಪಿಗೆ ತೋರಿಸಿದ್ದಾರೆ. ನಾನು ಹೆಚ್ಚು ಒತ್ತಾಯ ಮಾಡಿದ್ದಕ್ಕೆ ದಾಖಲೆಗಳೇ ಇಲ್ಲದ ಪೆನ್‌ಡ್ರೈವ್‌ ಕೊಟ್ಟಿದ್ದರು. ಅದನ್ನು ಪ್ರಶ್ನಿಸಿ ಪುನಃ ಎಲ್ಲ ವಿಡಿಯೋ ಪಡೆದುಕೊಂಡಿದ್ದೇನೆ’ ಎಂದು ಹೇಳಿದರು.

ಡಿಜಿಪಿ ಬೆಂಬಲಿಸಿ ಕೈದಿಗಳ ಧರಣಿ
ಬೆಳಗಾವಿ:
ಡಿಜಿಪಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಡಿಐಜಿ ಡಿ.ರೂಪಾ ಸಿದ್ಧಪಡಿಸಿರುವ ವರದಿಯನ್ನು ಖಂಡಿಸಿ ಬೆಳಗಾವಿ ಹಾಗೂ ಕಲಬುರ್ಗಿ ಕಾರಾಗೃಹಗಳಲ್ಲಿ ಜೈಲು ಸಿಬ್ಬಂದಿ ಹಾಗೂ ಕೈದಿಗಳು  ಗುರುವಾರ ಪ್ರತ್ಯೇಕ ಧರಣಿ ನಡೆಸಿದರು. ಹಿಂಡಲಗಾ ಜೈಲಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರಾಗೃಹದ ಹೊರ ಆವರಣದಲ್ಲಿ ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕುಳಿತಿದ್ದರೆ, ಕೈದಿಗಳು ಒಳ ಆವರಣದಲ್ಲಿ ಸಾಂಕೇತಿಕಧರಣಿ ನಡೆಸಿದರು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅಧೀಕ್ಷಕ ಟಿ.ಪಿ.ಶೇಷ, ‘ಸತ್ಯನಾರಾಯಣರಾವ್‌ ಒಳ್ಳೆಯ ಕೆಲಸಗಾರರು. ಯಾರಿಂದಲೂ ಲಂಚ ಪಡೆಯುವವರಲ್ಲ. ವಿನಾಕಾರಣ ಅವರನ್ನು ತೇಜೋವಧೆ ಮಾಡಲಾಗುತ್ತಿದೆ. ಈ ಮೂಲಕ ರೂಪಾ ಅವರು ಇಲಾಖೆಯ ಘನತೆಗೆ ಧಕ್ಕೆ ತಂದಿದ್ದಾರೆ’ ಎಂದರು.

‘ಒಂದೂವರೆ ವರ್ಷದಿಂದಲೂ ಡಿಜಿಪಿಯವರು ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೈದಿಗಳ ಮನಪರಿವರ್ತನೆಗೆ ಶ್ರಮಿಸುತ್ತಿದ್ದಾರೆ. ಅವರ ವರ್ಚಸ್ಸು ಸಹಿಸದೆ ಸುಳ್ಳು ಆರೋಪ ಮಾಡಿರುವುದು ಸರಿಯಲ್ಲ. ವರದಿಯನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ಕೊಡಬೇಕಿತ್ತು. ಅದು ಸೋರಿಕೆ ಆಗದಂತೆ ನೋಡಿಕೊಳ್ಳಬೇಕಾಗಿತ್ತು ಎಂದು ಹೇಳಿದರು.

ಕಾರಾಗೃಹದಲ್ಲಿ ಕಾನೂನು ಬಾಹಿರ ಚಟುವಟಿಕೆ: ಶೆಟ್ಟರ್

‘ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ  ವ್ಯಾಪಕ ಭ್ರಷ್ಟಾಚಾರ, ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿರುವುದಕ್ಕೆ ಐಪಿಎಸ್ ಅಧಿಕಾರಿ  ರೂಪಾ ಬರೆದಿರುವ ಪತ್ರವೇ ಸಾಕ್ಷಿ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಎಂದು ಹೇಳಿದರು.

‘ಲಂಚಕ್ಕಾಗಿ ಜೈಲಿನಲ್ಲಿ ಮಾದಕ ವಸ್ತು ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ. ದುಡ್ಡು ಕೊಟ್ಟವರಿಗೆ ವಿಶೇಷ ಆತಿಥ್ಯದ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ ಎಂದು ರೂಪಾ ಸಲ್ಲಿಸಿದ ಪತ್ರದಲ್ಲಿ ಉಲ್ಲೇಖವಿದೆ. ಗೃಹ ಖಾತೆ  ಹೊಂದಿರುವ ಸಿದ್ದರಾಮಯ್ಯ ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆ’ ಎಂದು ಪ್ರಶ್ನಿಸಿದರು. ‘ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯ ಅವರು ಅಧಿಕಾರಿಗಳು ದಕ್ಷತೆಯಿಂದ ಕೆಲಸ  ಮಾಡಲು ಬಿಡುತ್ತಿಲ್ಲ. ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮುಖ್ಯಮಂತ್ರಿಗಳು ಪೊಲೀಸ್‌ ಅಧಿಕಾರಿಗಳ ಸಭೆ ನಡೆಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಆರೋಪ ಸಾಬೀತಾದರೆ ತನಿಖೆ
‘ರೂಪಾ ಬರೆದ ಪತ್ರದಲ್ಲಿ ₹2 ಕೋಟಿ ತೆಗೆದುಕೊಂಡಿದ್ದೀರಿ ಎಂಬ ಮಾತಿದೆ ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ ಸತ್ಯ ಎನಿಸುವ ಯಾವುದೇ ಸಾಕ್ಷ್ಯ ಅಥವಾ ಪುರಾವೆಗಳನ್ನು ಅವರು ನೀಡಿಲ್ಲ. ಇದೊಂದು ಜಾರು ಹೇಳಿಕೆಯಾಗಿದೆ. ಹಾಗಿದ್ದರೂ ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವಿಚಾರಣಾ ವರದಿಯಲ್ಲಿ ಸತ್ಯ ಎಂದು ಸಾಬೀತಾದರೆ, ಸಿಐಡಿ ಅಥವಾ ಲೋಕಾಯುಕ್ತ ತನಿಖೆಗೆ ನಡೆಸಲಾಗುವುದು’ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.

ಡಿಐಜಿ ರೂಪಾ ಪರ ಕಿರಣ್‌ ಬೇಡಿ ಟ್ವೀಟ್‌

ಬೆಂಗಳೂರು: ಕೇಂದ್ರ ಕಾರಾಗೃಹದ ಅಕ್ರಮಗಳ ಬಗ್ಗೆ ವರದಿ ನೀಡಿರುವ ಡಿಐಜಿ ಡಿ. ರೂಪಾ ಪರವಾಗಿ ನಿವೃತ್ತ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ಗುರುವಾರ ಟ್ವೀಟ್‌ ಮಾಡಿದ್ದಾರೆ.

‘ರೂಪಾ ಅವರಂಥ ಅಧಿಕಾರಿಗಳು ನಮಗೆ ಹೆಚ್ಚೆಚ್ಚು ಬೇಕು’ ಎಂದು ಟ್ವಿಟರ್‌ ಖಾತೆಯಲ್ಲಿ  ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT