ಹಾರುವ ಕಣ್ಣು

ಹಾರುವ ಕಣ್ಣಿನ ಸುತ್ತ ಸುಖ-ದುಃಖಗಳ ಮೂಢನಂಬಿಕೆಯ ಹುತ್ತ ಬೆಳೆಯುತ್ತ ಸಾಗಿದೆ. ಆದರೆ ಅದಕ್ಕಿರುವ ವೈಜ್ಞಾನಿಕ ಕಾರಣವಾದರೂ ಏನು...

ಕಣ್ಣು ಹಾರತೊಡಗಿದರೆ ಶುಭ-ಅಶುಭ ಫಲಗಳ ಲೆಕ್ಕಚಾರ ಪ್ರಾರಂಭವಾಗುತ್ತದೆ. ಎಡಗಣ್ಣು ಹಾರಿದರೆ ಏನು ಗ್ರಹಚಾರ ಕಾದಿದೆಯೋ ಎಂಬ ಆತಂಕ.  ಬಲಗಣ್ಣು ಬಡಿದುಕೊಂಡರೆ ಶುಭ ಸುದ್ದಿಯ ಖುಷಿ.  ಹೀಗೆ ಹಾರುವ ಕಣ್ಣಿನ ಸುತ್ತ ಸುಖ-ದುಃಖಗಳ ಮೂಢನಂಬಿಕೆಯ ಹುತ್ತ ಬೆಳೆಯುತ್ತ ಹೋಗುತ್ತದೆ.

ಎಡಗಣ್ಣು ಹಾರುವುದಕ್ಕೂ ಕೆಟ್ಟ ಘಟನೆ ನಡೆಯುವುದಕ್ಕೂ ಸರಿಹೊಂದಿದರೆ ನಂಬಿಕೆ ಇನ್ನಷ್ಟು ಬಲಿತು ಬೇರುಬಿಡುತ್ತದೆ. ಲಿಂಗಭೇದದಿಂದ `ಹಾರುವ ಕಣ್ಣಿನ~ ಫಲಗಳು ಭಿನ್ನವಾಗಿವೆ.  ಗಂಡಸರಿಗೆ ಎಡಗಣ್ಣು ಹಾರಿದರೆ ಕೇಡು, ಬಲಗಣ್ಣು ಹಾರಿದರೆ ಒಳ್ಳೆಯದು.  ಹಾಗೆ ಹೆಣ್ಣು ಮಕ್ಕಳಿಗೆ ಎಡಗಣ್ಣು ಹಾರಿದರೆ ಶುಭ ಮತ್ತು ಬಲಗಣ್ಣು ಹಾರಿದರೆ ಅಶುಭ. 

ಬೇರೆ ಬೇರೆ ದೇಶಗಳಲ್ಲಿಯೂ ಸಹ ಹಾರುವ ಕಣ್ಣಿನ ಸುತ್ತ ಮೂಢನಂಬಿಕೆಗಳು ಅಂಟಿಕೊಂಡಿವೆ. ಚೀನಿಯರ ನಂಬಿಕೆ ಭಾರತೀಯರಿಗಿಂತ ಭಿನ್ನವಾದದ್ದು ಮತ್ತು ವಿರುದ್ಧವಾದದ್ದು. ಎಡಗಣ್ಣು ಹಾರಿದರೆ ಒಳ್ಳೆಯದು, ಬಲಗಣ್ಣು ಹಾರಿದರೆ ಕೆಟ್ಟದ್ದು. ಹೆಣ್ಣುಮಕ್ಕಳಲ್ಲಿ ಬಲಗಣ್ಣು ಅದುರಿದರೆ ಶುಭ.  ಎಡಗಣ್ಣು ಅದುರಿದರೆ ಅಶುಭ. ಹಾಗೆಯೇ ಎಡಕಣ್ಣಿನ ಕೆಳಗಿನ ರೆಪ್ಪೆ ಅದುರಿದರೆ ಅಳುವ ಸನ್ನಿವೇಶ ಸೃಷ್ಟಿಯಾಗುವುದು ಎಂದು ನಂಬಿದ್ದಾರೆ.

ಆಫ್ರಿಕಾದ ಕೆಲವು ಭಾಗಗಳಲ್ಲಿ ಕಣ್ಣಿನ ಕೆಳರೆಪ್ಪೆ ಹಾರಿದರೆ ಬಹುಬೇಗ ಕಣ್ಣೀರಿಡುವ ಸಂದರ್ಭ ಬರುವುದು. ಕಣ್ಣಿನ ಮೇಲಿನ ರೆಪ್ಪೆ ಹಾರಿದರೆ ಅಪರಿಚಿತರನ್ನು ಭೇಟಿಯಾಗಬಹು ಎಂಬ ನಂಬಿಕೆ ಇದೆ.

ಕಣ್ಣು ಹಾರುವುದು, ಅದುರುವುದು, ಬಡಿದುಕೊಳ್ಳುವುದು ಮತ್ತು ನಡುಗುವುದು ಒಂದು ಸಾಮಾನ್ಯ ಸಂಗತಿ. ಜಗತ್ತಿನಾದ್ಯಂತ ಮಿಲಿಯನ್‌ನಷ್ಟು ಜನರು ಈ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ವೈದ್ಯಭಾಷೆಯಲ್ಲಿ ಹಾರುವ ಕಣ್ಣಿಗೆ `ಮೈಯೊಕಿಮೀಯ~ ಎನ್ನುವರು. ಇದೊಂದು ನರಸಂಬಂಧಿ ಚಲನೆ.  ಕಣ್ಣಿನ ಮಾಂಸಖಂಡಗಳ ಅನಿಯಂತ್ರಿತ ಆಕುಂಚನವೆ ಇದಕ್ಕೆ ಕಾರಣ.

ಕಾರಣವೇನು?
ಕಣ್ಣು ಹಾರುವುದಕ್ಕೆ ನಿಖರವಾದ ಕಾರಣ ಗೊತ್ತಿಲ್ಲ ಎನ್ನುತ್ತಲೇ ವೈದ್ಯ ವಿಜ್ಞಾನ ಕೆಲವು ಕಾರಣಗಳನ್ನು ಕೂಡಿಹಾಕಿದೆ.

* ಉದ್ವೇಗ ಮತ್ತು ಒತ್ತಡ- ಒತ್ತಡ, ಉದ್ವೇಗ ಹೆಚ್ಚಾದಾಗ ದೇಹದ ಕೆಲಭಾಗಗಳು ಅದುರುವುದು ಸಾಮಾನ್ಯ.

ದಣಿವು- ಮನೋದೈಹಿಕ ದಣಿವು, ವಿಶ್ರಾಂತಿ ಇಲ್ಲದ ಜೀವನ.

ಕಣ್ಣಿನ ಬಳಲಿಕೆ- ತುಂಬಾ ಹೊತ್ತು ಟಿ.ವಿ ನೋಡುವುದು, ಕಂಪ್ಯೂಟರಿನಲ್ಲಿ ಕೆಲಸ ಮಾಡುವುದು, ಸೂಕ್ಷ್ಮದರ್ಶಕ ಯಂತ್ರಗಳಲ್ಲಿ ನೋಡುವುದು, ಅತಿಸೂಕ್ಷ್ಮ ವಸ್ತುಗಳನ್ನು ತಯಾರಿಸುವುದು.

ಶುಷ್ಕನೇತ್ರ- ಕಣ್ಣಿನ ಆರ್ದ್ರತೆಯು ಕಡಿಮೆಯಾಗುವುದರಿಂದ ಕಣ್ಣು ಒಣಗಿದಂತಾಗುವುದೇ ಶುಷ್ಕನೇತ್ರ.

ಅತಿ ಮದ್ಯಪಾನ, ಕಾಫಿಸೇವನೆ

* ಅನಿದ್ರೆ- ನಿದ್ರೆಯಿಂದ ಆರೋಗ್ಯ. ನಿದ್ರಾಹೀನತೆಯಿಂದ ರೋಗಗಳು ಬರುವವು.  ನಿದ್ರೆಯು ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುವುದು.

ಪೌಷ್ಟಿಕಾಂಶಗಳ ಕೊರತೆ- ಆಹಾರದಲ್ಲಿ ನಿಗದಿತ ಪೋಷಕಾಂಶಗಳ ಕೊರತೆಯು ರೋಗಕ್ಕೆ ಕಾರಣವಾಗಿವೆ.  ಪೊಟಾಷಿಯಂ, ಮ್ಯೋಗ್ನಿಸಿಯಂ, ಕ್ಯಾಲ್ಸಿಯಂ ಮತ್ತು ವಿಟಮಿನ್-ಬಿ-12ನೇ ಕೊರತೆಯಿಂದಲೂ ಕಣ್ಣು ಹಾರುವುದು.

ಹಾಗೆಯೇ ಕೆಲವೊಂದು ಔಷಧಿಗಳು, ಕಣ್ಣಿನ ಅಲರ್ಜಿ, ಕಣ್ಣಿನ ಆಘಾತ, ನರಸಂಬಂಧಿ ರೋಗಗಳು ಮತ್ತು ಮೆದುಳಿನ ತೊಂದರೆಗಳು ಹಾರುವ ಕಣ್ಣಿಗೆ ಮುಖ್ಯ ಕಾರಣಗಳಾಗಿವೆ.

ಪರಿಹಾರಗಳು
ಬಹುತೇಕ ಜನರಲ್ಲಿ ಕಣ್ಣು ಹಾರುವುದು ಸಾಮಾನ್ಯ.  ಸ್ವಲ್ಪ ದಿನಗಳ ನಂತರ ತಾನೇ ಸರಿಹೋಗುವುದು.  ಸಣ್ಣ ಪುಟ್ಟ ತೊಂದರೆಗೆ ಇಂದು ಸೂಪರ್ ಸ್ಪೆಷಾಲಿಸ್ಟ್ ನೋಡುವ ಕಾಲ.

ತುಂಬಾ ಮೃದು ಸ್ವಭಾವದವರಿಗೆ ಕಣ್ಣು ಹಾರುವುದು ಕೂಡ ದೊಡ್ಡ ಸಮಸ್ಯೆಯೆ.  ಪರಿಹಾರಕ್ಕೆ ಪರದಾಡುವ ಬದಲು ಹೀಗೆ ಮಾಡಿ.

ಉದ್ವೇಗ ಮತ್ತು ಒತ್ತಡವನ್ನು ಮೊದಲು ನಿಯಂತ್ರಿಸಿ. ರಿಲಾಕ್ಸ್ ಆಗಿ ಯೋಗ, ಪ್ರಾಣಾಯಾಮ ಮುಂತಾದವುಗಳ ಸಹಾಯ ಪಡೆಯಿರಿ.

ತುಂಬಾ ಹೊತ್ತು ಟಿ.ವಿ. ನೋಡುವುದು, ಕಂಪ್ಯೂಟರಿನಲ್ಲಿ ಕೆಲಸ ಮಾಡುವುದು ಮತ್ತು ಸೂಕ್ಷ್ಮವಸ್ತುಗಳನ್ನು ವಿಕ್ಷಿಸುವುದನ್ನು ಕಡಿತಗೊಳಿಸಬೇಕು. 

* ಅತಿಯಾದ ಮದ್ಯಸೇವನೆ, ಕಾಫಿಸೇವನೆ ಕಡಿಮೆ ಮಾಡಿ.

* ಕಣ್ಣಿನ ಶುಷ್ಕತೆಯನ್ನು ಹೋಗಲಾಡಿಸಲು, ಕಣ್ಣಿನ ತೇವಾಂಶವನ್ನು ಹೆಚ್ಚಿಸುವಂತೆ ನೇತ್ರ ಬಿಂದುಗಳನ್ನು ಬಳಸಿ. ಗುಲಾಬಿಯ ನೀರಿನಿಂದ ಕಣ್ಣುಗಳನ್ನು ತೊಳೆಯಿರಿ. 

* ಮನೋದೈಹಿಕ ವಿಶ್ರಾಂತಿಗೆ ನಿದ್ರೆ ಉತ್ತಮ ಔಷಧಿ. 

* ಪೊಟಾಸಿಯಂ, ಮ್ಯೋಗ್ನಿಶಿಯಂ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ-12 ಯುಕ್ತ ಆಹಾರವನ್ನು ಹೆಚ್ಚು ಬಳಸಿ. ಬಾಳೆಹಣ್ಣು ತಿನ್ನುವುದರಿಂದ ಉತ್ತಮ ಪೊಟ್ಯಾಷಿಯಂ ಮತ್ತು ಝಿಂಕ್ ಅಂಶ ಸಿಗುವುದು.

* ಸೌತೆಕಾಯಿ ಅಥವಾ ಆಲೂಗೆಡ್ಡೆಯ ದುಂಡಾದ ತೆಳುವಾದ ಬಿಲ್ಲೆಯಾಕಾರದ ತುಂಡನ್ನು ಕಣ್ಣಿನ ಮೇಲಿಡಿ.

* ಕಣ್ಣಿಗೆ ಹೊಂದುವಂತೆ ತಣ್ಣನೆ ಅಥವಾ ಬಿಸಿ ಬಟ್ಟೆಯಿಂದ ಒತ್ತಿ.

* ಅತೀ ತಣ್ಣನೆಯ ನೀರನ್ನು ಮುಖಕ್ಕೆ ಮತ್ತು ಕಣ್ಣಿಗೆ ಎರಚಿಕೊಳ್ಳಿ.

* ವೈದ್ಯರ ಸಲಹೆ ಮೇರೆಗೆ ನೇತ್ರಬಿಂದು, ಮಿಟಮಿನ್, ಖನಿಜಾಂಶಗಳ ಮತ್ತು ಮಾಂಸಖಂಡಗಳನ್ನು ವಿಶ್ರಾಂತಗೊಳಿಸುವ ಮಾತ್ರೆ ತೆಗೆದುಕೊಳ್ಳಬಹುದು.

* ನೇತ್ರದ ವ್ಯಾಯಾಮ ಕೂಡ ಉತ್ತಮ ಪರಿಹಾರ. ನೇತ್ರದ ಮಾಂಸಖಂಡಗಳಿಗೆ ಉತ್ತಮ ವ್ಯಾಯಾಮ ಅಗತ್ಯ. ಕಣ್ಣನ್ನು ನಿಧಾನವಾಗಿ ಮುಚ್ಚಿ ನಿಧಾನವಾಗಿ ತೆರೆಯಿರಿ.

ಔಷಧಿಗಳು ಇತರೆ ಉಪಾಯಗಳು ಪರಿಣಾಮ ಬೀರದಿದ್ದಾಗ, ಕಣ್ಣು ಹಾರುವುದು ಬಹುವರ್ಷಗಳಿಂದ ಕಾಡುತ್ತಿದ್ದರೆ ಮತ್ತು ಕಣ್ಣಿನ ಇತರೆ ತೊಂದರೆಗಳು ಕಾಣಿಸಿಕೊಂಡಾಗ ಅಂತಿಮವಾಗಿ ನೇತ್ರ ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು. 

ಹಾರುವ ಕಣ್ಣು ಮುಂಬರುವ ಶುಭ-ಅಶುಭಗಳನ್ನು ತಿಳಿಸುವ ಸಂಕೇತ ಎಂದು ಹಲವರು ನಂಬಿದ್ದಾರೆ.  ವಿಜ್ಞಾನ ಏನೇ ವಿವರಿಸಿದರೂ ಮೂಢನಂಬಿಕೆಯ ಮನಸ್ಸು  ಸುಖ-ದುಃಖಗಳ ಲೆಕ್ಕ ಹಾಕುತ್ತಿರುತ್ತದೆ.  ವೈದ್ಯ ವಿಜ್ಞಾನದ ಪರಿಮಿತಿಯಲ್ಲಿ ಕೂತು ಕಣ್ಣು ಹಾಯಿಸಿದರೆ ಹಾರುವ ಕಣ್ಣಿಗೂ ಒಂದು ಪರಿಹಾರ ಕಾಣುತ್ತದೆ.
(ಲೇಖಕರ ಸಂಪರ್ಕ ಸಂಖ್ಯೆ:  9731353737)  

Comments