ವಿಮಾನದಲ್ಲೂ ಕಾಮ ಕ್ರಿಮಿ

ರೈಲು, ಬಸ್ಸಿನ ಮಹಿಳಾ ಪ್ರಯಾಣಿಕರಿಗೆ ಸಾಮಾನ್ಯವಾಗಿರುವ ಲೈಂಗಿಕ ಕಿರುಕುಳ ವಿಮಾನದಲ್ಲೂ ನಡೆಯುತ್ತದೆ! ಈ ಕುರಿತ ವಿವರ ಮತ್ತು ಮುನ್ನೆಚ್ಚರಿಕಾ ಕ್ರಮದ ಮಾಹಿತಿ ಇಲ್ಲಿದೆ.    

ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ರೈಲಿಗಿಂತ ಬಸ್ ಹೆಚ್ಚು ಸುರಕ್ಷಿತ ಎನ್ನುತ್ತಾರೆ. ಅಲ್ಲದೆ, ಸಮುದ್ರಯಾನಕ್ಕಿಂತ ವಿಮಾನಯಾನದಲ್ಲಿ ಮಹಿಳೆಯರು ನೆಮ್ಮದಿಯಿಂದ ಪ್ರಯಾಣಿಸಬಹುದು ಎಂಬ ಮಾತಿದೆ. ಆದರೆ ಇಂತಹ ನಂಬಿಕೆಗಳಿಗೆ ಅಪವಾದ ಎನಿಸುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ.

ಇತ್ತೀಚೆಗೆ ನವದೆಹಲಿಯ ಬಸ್‌ನಲ್ಲಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ನೆನೆಸಿಕೊಂಡಾಗ ಬಸ್ ಎಂದರೂ ಹಲವರು ಗಾಬರಿ ಬೀಳುವಂತೆ ಆಗಿದೆ. ವಿಮಾನಯಾನ ಹೆಚ್ಚು ಸುರಕ್ಷಿತ ಎಂಬ ಮಾತು ಸಹ ಸುಳ್ಳು ಎಂಬುದು ಈಗೀತ ಸಾಬೀತಾಗುತ್ತಿದೆ. ಇತ್ತೀಚೆಗೆ ನಡೆದ ಕೆಲವು ಘಟನೆಗಳೇ ಇದಕ್ಕೆ ಸಾಕ್ಷಿ.

ವಿಮಾನಗಳಲ್ಲಿ ನಡೆಯುವ ಇಂತಹ ಪಿಡುಗಿಗೆ ಆಕಾಶಯಾನ ಲೈಂಗಿಕ ಕಿರುಕುಳ (ಮಿಡ್ ಫ್ಲೈಟ್ ಸೆಕ್ಸ್ ಅಬ್ಯೂಸ್, ಫ್ಲೈಟ್ ಸೆಕ್ಷುಯಲ್ ವಯೊಲೆನ್ಸ್) ಎನ್ನಲಾಗುತ್ತದೆ. ಅಂತರ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ (ಐ.ವಿ.ಟಿ.ಎ) ಸಮೀಕ್ಷೆ ಪ್ರಕಾರ, 2007ರಲ್ಲಿ ಅಸಭ್ಯ ವರ್ತನೆಯ 500 ಪ್ರಕರಣಗಳು ದಾಖಲಾಗಿದ್ದವು. ಆದರೆ 2011ರಲ್ಲಿ ಈ ಸಂಖ್ಯೆ 4500 ತಲುಪಿರುವುದು ಕಳವಳಕಾರಿ.

ರಕ್ಷಣೆ ಹೇಗೆ?
ಈಗಿನ ವೇಗದ ಯುಗದಲ್ಲಿ ವಿಮಾನಯಾನ ಅನಿವಾರ್ಯ. ವೃತ್ತಿ, ಉದ್ಯೋಗ, ಶಿಕ್ಷಣಕ್ಕಾಗಿ ವಿಮಾನ ಅತ್ಯವಶ್ಯಕ. ಮಹಿಳೆ ಸೇರಿದಂತೆ ಹಲವರು ಒಂಟಿಯಾಗಿ ಪ್ರಯಾಣಿಸುವುದು ಸಾಮಾನ್ಯ. ಆದರೆ ವಿಮಾನದಲ್ಲಿ ಏನೂ ಆಗುವುದಿಲ್ಲ ಎಂದು ನಿರ್ಲಕ್ಷಿಸದೆ ನಮ್ಮ ಎಚ್ಚರಿಕೆಯಲ್ಲಿ ನಾವು ಇರುವುದು ಎಂದಿಗೂ ಒಳ್ಳೆಯದು. ಅದಕ್ಕಾಗಿ ನಿಮ್ಮ ಸಿದ್ಧತೆ ಹೀಗಿರಲಿ.

-ಪುರುಷ ಪ್ರಯಾಣಿಕರನ್ನು ಕಣ್ಣಲ್ಲಿ ಕಣ್ಣಿಟ್ಟು ಪದೇ ಪದೇ ನೋಡಬೇಡಿ. ಇದು ಸ್ನೇಹಕ್ಕೆ ಆಹ್ವಾನ ಎಂದು ಅವರು ತಪ್ಪಾಗಿ ಅರ್ಥೈಸುವ ಅಪಾಯ ಇರುತ್ತದೆ.

-ಸಹ ಪ್ರಯಾಣಿಕರ ಮೇಲೆ ಒಮ್ಮೆ ತ್ವರಿತವಾಗಿ ಕಣ್ಣಾಡಿಸಿ. ಇದರಿಂದ ದುಷ್ಟ ಶಕ್ತಿಗಳನ್ನು ಊಹಿಸಲು ಸಾಧ್ಯ.

-ನಿಮ್ಮ ಬ್ಯಾಗಿನಲ್ಲಿ ಯಾವಾಗಲೂ ಪೀಪಿ (ವಿಶಲ್), ಮೊಬೈಲ್ ಫೋನ್, ಮೆಣಸು ಅಥವಾ ಖಾರದ ಪುಡಿಯ ಸ್ಪ್ರೇ ಇಟ್ಟುಕೊಳ್ಳಿ. ಪೊಲೀಸ್, ರೈಲ್ವೆ ಸ್ಟೇಷನ್ ಹಾಗೂ ಮಹಿಳಾ ಸಹಾಯವಾಣಿ ದೂರವಾಣಿ ವಿವರ ನಿಮ್ಮ ಫೋನಿನಲ್ಲಿ ಇರಲಿ.

-ಮದ್ಯಪಾನ, ನಿದ್ರೆ ಮಾತ್ರೆ ಸೇವಿಸದಿರಿ.

-ಕೆಲವರು ಐ-ಪ್ಯಾಡ್ ಅಥವಾ ಮೊಬೈಲ್‌ನಲ್ಲಿ ಸದಾ ಮಗ್ನರಾಗಿ ಸುತ್ತಲಿನ ಜನ ಮತ್ತು ಆಗುಹೋಗುಗಳನ್ನು ಗಮನಿಸುವುದಿಲ್ಲ. ಇಂಥವರನ್ನು ದುಷ್ಕರ್ಮಿಗಳು ಗುರಿಯಾಗಿಸುತ್ತಾರೆ. ಆದ್ದರಿಂದ, ಈ ಬಗೆಯ ಉಪಕರಣಗಳನ್ನು ಹಿತಮಿತವಾಗಿ ಬಳಸಿ.

-ಸರ್ಕಲ್ ಆಪ್ 6, ಲೈಫ್- 360 ಫ್ಯಾಮಿಲಿ ಲೊಕೇಟರ್, ಎಸ್.ಒ.ಎಸ್.ವಿಶಲ್ ಮುಂತಾದ ಅತ್ಯಾಧುನಿಕ ಉಚಿತ ಸುರಕ್ಷತಾ ಸಾಫ್ಟ್‌ವೇರ್‌ಗಳು ಲಭ್ಯ ಇರುತ್ತವೆ. ಇವನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಿ. ಹೀಗೆ ಮಾಡಿದರೆ ಮೊಬೈಲ್‌ನ ಒಂದು ಕೀ ಒತ್ತಿದರೆ ನಿಮ್ಮ ಆತ್ಮೀಯರು ಅಥವಾ ಸಂಬಂಧಿಗೆ ನೀವು ಅಪಾಯದಲ್ಲಿ ಇರುವ ಮಾಹಿತಿ, ಇರುವ ಸ್ಥಳದ ಮಾಹಿತಿ ತಕ್ಷಣವೇ ರವಾನೆಯಾಗುತ್ತದೆ. ಇದಲ್ಲದೆ ನಿಮ್ಮ ಮೊಬೈಲ್‌ನಿಂದ ಸತತವಾಗಿ ಅಲಾರಾಂ ಹೊರಹೊಮ್ಮಿ ಸಹ ಪ್ರಯಾಣಿಕರನ್ನು ಜಾಗೃತಗೊಳಿಸುತ್ತದೆ.

-ನಂಬಿಕೆಯಿಂದ ನೆಟ್ಟಗೆ ನಡೆಯಿರಿ. ನಾನು ಧೈರ್ಯಶಾಲಿ, ಈ ಸಂದರ್ಭ ಎದುರಿಸಬಲ್ಲೆ ಎಂದು ವರ್ತಿಸಿ. ಅಸಹಾಯಕರ ಮೇಲೆ ಹಂತಕರ ಕಣ್ಣು ಹೆಚ್ಚಾಗಿ ಬೀಳುತ್ತದೆ.

ಕಿರುಕುಳ ನಡೆದಾಗ ಹೀಗೆ ಮಾಡಿ
ಗಗನಸಖಿಯ ಅನುಮತಿ ಪಡೆದು ಮೊದಲು ಆಸನ ಬದಲಾಯಿಸಿ, ಹೆಚ್ಚು ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಡಿ. ಮುಂದೇನು ಮಾಡಬೇಕೆಂದು ಕೂಡಲೇ ಮನಸ್ಸಿನಲ್ಲೇ ಯೋಜಿಸಿ. ನಿಮ್ಮಲ್ಲಿರುವ ಪೀಪಿಯಿಂದ ಜೋರಾಗಿ ಸಿಳ್ಳು ಹಾಕಿ. ಸ್ಪ್ರೇಯನ್ನು ಕಣ್ಣಿಗೆ ಸಿಂಪಡಿಸಿ. ನಿಮ್ಮಲ್ಲಿರುವ ಕೊಡೆ ಅಥವಾ ವಾನಿಟಿ ಬ್ಯಾಗನ್ನು ರಕ್ಷಣಾತ್ಮಕ ಆಯುಧವಾಗಿ ಬಳಸಿ. ವಿಮಾನದ ಮೇಲ್ವಿಚಾರಕರಿಗೆ, ಕ್ಯಾಪ್ಟನ್ ಹಾಗೂ ವಿಮಾನ ಸಂಸ್ಥೆಯ ಮುಖ್ಯಸ್ಥರಿಗೆ ದೂರು ನೀಡಿ.

ಕಾನೂನು
ಮಾನಭಂಗ, ಕೊಲೆ, ಮಹಿಳೆಗೆ ನೀಡುವ ಕಿರುಕುಳಕ್ಕೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 354, 304ರ ಪ್ರಕಾರ ಒಟ್ಟು 12 ವರ್ಷ ಶಿಕ್ಷೆ ಇದೆ. ಮದ್ಯಪಾನ ನಿಷೇಧಿತ ವಿಮಾನದಲ್ಲಿ ಪಾನಮತ್ತರಾಗಿ ಅಶಿಸ್ತಿನಿಂದ ವರ್ತಿಸಿದರೆ 75 ಸಾವಿರ ರೂಪಾಯಿ ದಂಡ ಹಾಗೂ 11 ತಿಂಗಳು ಜೈಲು ಶಿಕ್ಷೆ, ಅಸಭ್ಯ ವರ್ತನೆಯಿಂದ ಸಹ ಪ್ರಯಾಣಿಕರು ನಿಲ್ಲುವಂತೆ ಮಾಡಿದರೆ 14 ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶ ಇದೆ.

ಲೈಂಗಿಕ ಕಿರುಕುಳ

ವಿಮಾನದಲ್ಲಿ ಈಚೆಗೆ ನಡೆದಿರುವ ಲೈಂಗಿಕ  ಕಿರುಕುಳದ ಪ್ರಮುಖ ಪ್ರಕರಣಗಳು:
2010, ಮೇ, 24- ಹಾಂಕಾಂಗ್‌ನಿಂದ ನೆವಾರ್ಕ್‌ಗೆ (ನ್ಯೂಜಿಲ್ಯಾಂಡ್) ಚಲಿಸುತ್ತಿದ್ದ ವಿಮಾನದಲ್ಲಿ 63 ವರ್ಷದ ವ್ಯಕ್ತಿಯಿಂದ ಪಕ್ಕದ ಮಹಿಳೆಯ ಹೊದಿಕೆಒಳಗೆ ಕೈತೂರಿ ಮಾನಭಂಗಕ್ಕೆ ಯತ್ನ.

2011, ಫೆ. 24- ಶಾರ್ಜಾದಿಂದ ನವದೆಹಲಿಗೆ ಬರುತ್ತಿದ್ದ ವಿಮಾನ. ಇದರಲ್ಲಿನ ಇಬ್ಬರೂ ಗಗನಸಖಿಯರು ಕಾರ್ಯನಿಮಿತ್ತ ಕಾಕ್‌ಪಿಟ್‌ಗೆ ತೆರಳಿದ್ದಾಗ ಸಹ ಪೈಲಟ್‌ನಿಂದ ಲೈಂಗಿಕ ಕಿರುಕುಳದ ಆರೋಪ. ವಿಚಾರಣೆಗೆ ಆದೇಶ. ಒಬ್ಬ ಗಗನಸಖಿ ಮತ್ತು ಪೈಲಟ್ ಭಾರತೀಯರು ಎಂಬುದು ಗಮನಾರ್ಹ.

2011, ಸೆಪ್ಟೆಂಬರ್ 28- ಡಲ್ಲಾಸ್‌ನಿಂದ ಅಟ್ಲಾಂಟಾಗೆ ತೆರಳುತ್ತಿದ್ದ ವಿಮಾನ. ಪಕ್ಕದ ಸೀಟಿನಲ್ಲಿ ನಿದ್ರೆಯಲ್ಲಿದ್ದ 20 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ 61 ವರ್ಷದ ಉದ್ಯಮಿಗೆ 6 ತಿಂಗಳು ಜೈಲು ಮತ್ತು 2 ಲಕ್ಷ ರೂಪಾಯಿ ದಂಡ.
2012, ಸೆಪ್ಟೆಂಬರ್, 19- ಸ್ವಿಟ್ಜರ್‌ಲೆಂಡ್‌ನಿಂದ ಗ್ಯಾಟ್‌ವಿತ್‌ಗೆ ಪ್ರಯಾಣಿಸುತ್ತಿದ್ದ 23 ವರ್ಷದ ಸ್ಪ್ಯಾನಿಶ್ ಪ್ರಯಾಣಿಕನಿಗೆ ಜೈಲು. ಅಪರಾಧ- ಪಾನಮತ್ತನಾಗಿ ಮಹಿಳಾ ಪ್ರಯಾಣಿಕಳ ಪೃಷ್ಠ ಮರ್ಧನ.

ವಿಮಾನ ನಿಲ್ದಾಣದಲ್ಲಿ: ವಿಮಾನ ಪ್ರವೇಶಿಸುವ ಮುನ್ನ ಮಹಿಳಾ ಯಾತ್ರಿಗಳ ಸುರಕ್ಷತಾ ತಪಾಸಣೆ ವೇಳೆ ಕೆಲವು ಸಿಬ್ಬಂದಿಯಿಂದ ಅಸಭ್ಯ ವರ್ತನೆ. ಸ್ತನ, ಜನನೇಂದ್ರಿಯ, ಒಳ ಉಡುಪು ಸ್ಪರ್ಶದ ಆರೋಪ.

 

 

Comments