ಸಬಲೆ

ಸಮಾನತೆಯ ಆಶಯ, ಶೋಷಣೆ ಮುಕ್ತ ಬದುಕಿಗೆ ಎದುರಾಗುವ ಅಡೆತಡೆ ನಿವಾರಣೆಗೆ ಕಾನೂನು ಅರಿವಿನ ಕೊರತೆಯೇ? ಹಾಗಿದ್ದರೆ ನಿಮ್ಮ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಿ. ಈ ಅಂಕಣ ಪ್ರತಿ 15 ದಿನಗಳಿಗೊಮ್ಮೆ ಪ್ರಕಟವಾಗುತ್ತದೆ.

ಲಲಿತಾ, ಬೆಂಗಳೂರು
ಪ್ರಶ್ನೆ: ನನ್ನ ಅತ್ತೆಯ (ಗಂಡನ ತಾಯಿ) ಹೆಸರಿನಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ಒಂದು ಮನೆ ಇತ್ತು. ಅತ್ತೆಯ ನಿಧನಾನಂತರ ಆ ಮನೆಯ ಒಡೆತನ ನನ್ನ ಮಾವನ ಹೆಸರಿಗೆ, (ನನ್ನ ಗಂಡ ಸಹ ಸಾವಿಗೀಡಾದ ಕಾರಣ ಉಳಿದ ಮಕ್ಕಳ ಸಹಮತಿಯ ಮೇರೆಗೆ) ವರ್ಗಾವಣೆ ಆಗಿದೆ. ನಾನು ತವರು ಮನೆಯಲ್ಲಿದ್ದೇನೆ. 20 ವರ್ಷದ ಮಗಳು ಪದವಿ ಓದುತ್ತಿದ್ದಾಳೆ. ಮದುವೆಯಾದಂದಿನಿಂದ ನಾನು ಗಂಡ ಮತ್ತು ಅವರ ಮನೆಯವರಿಂದ ಮಾನಸಿಕವಾಗಿ, ದೈಹಿಕವಾಗಿ ಮತ್ತು ನನ್ನ ಗಂಡನ ಸಾವಿನ ನಂತರ ಆಸ್ತಿಯ ವಿಷಯವಾಗಿ ಅವರ ಎರಡನೇ ಅಣ್ಣನಿಂದ ತುಂಬಾ ಮೋಸ ಹೋಗಿ ನಷ್ಟ, ಅವಮಾನ, ನೋವನ್ನು ಅನುಭವಿಸಿದ್ದೇನೆ. ಈಗ ಮಾವನ ಹೆಸರಿನಲ್ಲಿರುವ ಮನೆಯ ಭಾಗದಲ್ಲಿ ಸ್ವಲ್ಪ ಹಣ ಬಂದರೆ ಮಗಳ ಮುಂದಿನ ವಿದ್ಯಾಭ್ಯಾಸ ಮತ್ತು ಮದುವೆ  ಖರ್ಚುವೆಚ್ಚ ನಿಭಾಯಿಸಬಹುದು. ಹೀಗಾಗಿ ನಾನು ಗಂಡನ ಮನೆಯವರನ್ನು ಮನೆಯ ಪಾಲಿನ ಬದಲು, ಸ್ವಲ್ಪ ಹಣ ಸಹಾಯ ಮಾಡಿ ಎಂದು ಕೇಳಿದರೆ ಅವರು ಉಡಾಫೆಯಾಗಿ ಮಾತನಾಡುತ್ತಾರೆ. ಈಗ ನನ್ನ ಪ್ರಶ್ನೆ ಎಂದರೆ, ಮಾವನವರ ಹೆಸರಿನಲ್ಲಿ ಇರುವ ಮನೆಯನ್ನು ಅವರು ತಮಗೆ ಇಷ್ಟ ಬಂದ ಮಕ್ಕಳಿಗೆ ಕೊಡಬಹುದೇ? ನನ್ನ ಮಗಳಿಗೆ ಕಾನೂನಿನ ಪ್ರಕಾರ ಆ ಮನೆಯಲ್ಲಿ ಪಾಲಿದೆಯೇ?

ಉತ್ತರ: ಹಿಂದೂ ವಾರಸಾ ಕಾಯಿದೆಯ ಪ್ರಕಾರ ಒಬ್ಬ ಹಿಂದೂ ಮಹಿಳೆ ಜೀವಿತಾವಧಿಯಲ್ಲಿ ತನ್ನ ಆಸ್ತಿಯನ್ನು ಹಂಚದೆ ಅಥವಾ ವಿತರಣೆ ಮಾಡದೆ ತೀರಿಕೊಂಡರೆ, ಆಕೆಯ ಆಸ್ತಿಯು ಮೊದಲನೆಯದಾಗಿ ಆಕೆಯ ಗಂಡು ಮತ್ತು ಹೆಣ್ಣು ಮಕ್ಕಳು (ಮಕ್ಕಳು ತಾಯಿಗಿಂತ ಮೊದಲೇ ತೀರಿಕೊಂಡರೆ ಅವರ ಮಕ್ಕಳಿಗೆ) ಮತ್ತು ಆಕೆಯ ಪತಿಗೆ ಸೇರಬೇಕಾಗುತ್ತದೆ. ಹೀಗಾಗಿ ನಿಮ್ಮ ಪತಿ ತಮ್ಮ ತಾಯಿಯ ಆಸ್ತಿಯಲ್ಲಿ ಹೊಂದಿದ್ದ ಭಾಗಕ್ಕೆ ನಿಮ್ಮ ಮಗಳು ಹಕ್ಕುದಾರಳಾಗುತ್ತಾಳೆ. ಹೀಗಾಗಿ ಮಗಳಿಗೆ ಆಕೆಯ ತಂದೆಯ ಭಾಗದ ಆಸ್ತಿ ಸೇರಬೇಕು. ಅವಳಿಗೆ ಆ ಭಾಗವನ್ನು ಕೊಡಲು ನಿರಾಕರಿಸಿದರೆ ನೀವು ಉಚಿತ ಕಾನೂನು ನೆರವು ಮಂಡಲಿಯ ಕಾನೂನು ಪ್ರಕ್ರಿಯಾಪೂರ್ವ ಸಂಧಾನ ಕಾರ್ಯಕ್ರಮದ ಸಹಾಯ ಪಡೆಯಬಹುದು. ಇಲ್ಲಿಯೂ ಸಂಧಾನ ವಿಫಲವಾದರೆ, ಸಿವಿಲ್ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಿ ದಾವೆ ಹೂಡಬಹುದು.
***

ಹೆಸರು ಬೇಡ, ಬೆಂಗಳೂರು
ಪ್ರಶ್ನೆ: ನನ್ನ ಅಕ್ಕ ತೀರಿಕೊಂಡು ಎರಡು ವರ್ಷಗಳಾದವು. ಅವಳು 1986ರಲ್ಲಿ ವಿವಾಹ ಆದಾಗಿನಿಂದ ಸಾಯುವವರೆಗೂ ಗಂಡನ ಮನೆಯವರ ಮಾನಸಿಕ, ದೈಹಿಕ ಕಿರುಕುಳಗಳಿಂದ ನೊಂದು ಕಡೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಆಕೆ ಸಾಯುವ ಮೊದಲು, ತನಗಾಗುತ್ತಿದ್ದ ನೋವನ್ನು ವಿವರಿಸಿ ಮಹಿಳಾ ಆಯೋಗ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದಳು. ಸಚಿವರಾಗಿದ್ದ ವಿ.ಎಸ್.ಆಚಾರ್ಯ ಅವಳ ಕೋರಿಕೆಯನ್ನು ಮನ್ನಿಸಿ, ಆಕೆಗೆ ಗಂಡನಿಂದ ಆಗುತ್ತಿದ್ದ ಕಿರುಕುಳದ ಬಗ್ಗೆ ಗಮನಹರಿಸುವಂತೆ ಮತ್ತು ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಪೊಲೀಸರಿಗೆ ಸೂಚಿಸಿದ್ದರು. ಆದರೆ ಪೋಲೀಸರು ಪಂಚಾಯಿತಿಯ ನಾಟಕವಾಡಿ ಗಂಡನಿಗೆ ಯಾವುದೇ ಕಷ್ಟ ನೀಡದೆ ಠಾಣೆಯಿಂದ ಸಾಗಹಾಕಿದರು. ನನ್ನ ಅಕ್ಕನಿಗೆ ಸಿಗಬೇಕಾದ ಸೌಲಭ್ಯಗಳು ಸಿಗದೆ ಆಕೆ ಪ್ರಾಣ ಕಳೆದುಕೊಂಡಳು.

ಆ ನಂತರ ನನ್ನ ತಾಯಿ ಪೋಲಿಸರಿಗೆ ದೂರು ನೀಡಿದರು. ಕಾನೂನು ತಿಳಿವಳಿಕೆ ಇಲ್ಲದ ಕಾರಣ, ಕಾಣದ ಕೈಗಳು ಪ್ರಕರಣವನ್ನು ತಿರುಚಿಬಿಟ್ಟವು. ಅಕ್ಕ ಸತ್ತ ಎರಡು ತಿಂಗಳ ನಂತರ ಮಾನವ ಹಕ್ಕು ಆಯೋಗದವರು ಮತ್ತೆ ನಮ್ಮ ತಾಯಿಯಿಂದ ದೂರು ಕೊಡಿಸಿದರು. ಈ ಪ್ರಕರಣ ಎರಡು ವರ್ಷ ನಡೆಯಿತು. ಭಾವನ ಮನೆಯವರು ಎಲ್ಲ ಸಾಕ್ಷಿಗಳನ್ನೂ ಅವರ ಪರವಾಗಿ ಹೇಳಿಸಿದರು. ನನ್ನ ಅಕ್ಕನ ಕಷ್ಟಗಳನ್ನು ಕಣ್ಣಾರೆ ಕಂಡಿದ್ದ ನಾನು, ನನ್ನ ತಾಯಿ ಮತ್ತು ತಮ್ಮನ ಮಾತನ್ನು ಕಡೆಗಣಿಸಲಾಯಿತು. ಅಕ್ಕ ಹೆತ್ತ ಮಗಳು ಸಹ ಅಪ್ಪನ ಮನೆಯವರಿಂದ ಹಣ ಪಡೆದುಕೊಂಡು, ತಾಯಿ ಕಾಲು ಜಾರಿ ಬಿದ್ದಳೆಂದು ಸಾಕ್ಷಿ ಹೇಳಿದಳು. ಇದನ್ನು `ಪ್ರತ್ಯಕ್ಷದರ್ಶಿ' ಎಂದು ಆಧರಿಸಿ ತ್ವರಿತಗತಿಯ ನ್ಯಾಯಾಲಯ ಕೇಸನ್ನು ವಜಾ ಮಾಡಿತು. ಸರ್ಕಾರಿ ವಕೀಲರು, `ನಿಮ್ಮ ಅಕ್ಕ ಸತ್ತ ಒಂದೆರಡು ತಿಂಗಳ ನಂತರ ಮರುಕೇಸು ದಾಖಲಾಗಿದೆ. ಸ್ವಂತ ಮಗಳೇ ಅಮ್ಮನ ವಿರುದ್ಧ ಸಾಕ್ಷಿ ಹೇಳಿದ್ದಾಳೆ. ಹಿಂದೆ ನಿಮ್ಮ ಅಕ್ಕ ನೀಡಿದ ಯಾವ ದೂರಿಗೂ ಬೆಲೆ ಇಲ್ಲ' ಎಂದು ಹೇಳುತ್ತಾರೆ. ವಯಸ್ಸಾದ ನನ್ನ ತಾಯಿ ಹೈಕೋರ್ಟ್‌ಗೆ ರಿಟ್ ಹಾಕಲು ಯೋಚಿಸುತ್ತಿದ್ದಾರೆ. ನಮ್ಮ ಪ್ರಕರಣ ಕಳೆದ ನವೆಂಬರ್ 20ರಂದು ವಜಾಗೊಂಡಿದೆ. 90 ದಿನಗಳೊಳಗೆ ರಿಟ್ ಹಾಕಬಹುದೆಂದು ಕಾನೂನು ತಜ್ಞರು ಹೇಳುತ್ತಾರೆ. ಸರ್ಕಾರಿ ವಕೀಲರು, ಸಾಧ್ಯವಾದರೆ ರಿಟ್ ಹಾಕುತ್ತೇನೆ ಎಂದು ಸಬೂಬು ಹೇಳುತ್ತಿದ್ದಾರೆ. ಗಂಡನ ತಿರಸ್ಕಾರಕ್ಕೆ ಗುರಿಯಾಗಿ ದುಃಖದಿಂದ ತೀರಿಕೊಂಡ ನನ್ನಕ್ಕನ ಜೀವಕ್ಕೆ ಬೆಲೆ ಇಲ್ಲವೇ? ಮೇಡಂ, ತಾವು ನೀಡುವ ಮಾರ್ಗದರ್ಶನಕ್ಕೆ ಕಾಯುತ್ತಿದ್ದೇವೆ. 
                                                  
ಉತ್ತರ: ಆರೋಪಿ ಬಿಡುಗಡೆಯಾದರೆ ಅಥವಾ ಕಡಿಮೆ ಶಿಕ್ಷೆಯಾದರೆ, ಅಕೃತ್ಯಗಳಿಗೆ ಬಲಿಯಾದವರು ಮೇಲ್ಮನವಿ ಸಲ್ಲಿಸಲು 2009ರ ಕ್ರಿಮಿನಲ್ ಕಾನೂನು ತಿದ್ದುಪಡಿಯ ಮೂಲಕ ಅವಕಾಶ ನೀಡಲಾಗಿದೆ. ತಮ್ಮ ಮೊಕದ್ದಮೆ ಈಗಾಗಲೇ ಅಧಿ ವಿಚಾರಣಾ ನ್ಯಾಯಾಲಯದಲ್ಲಿ ತೀರ್ಮಾನಗೊಂಡಿರುವುದರಿಂದ, ಸರ್ಕಾರಿ ವಕೀಲರು ಮೇಲ್ಮನವಿ ಸಲ್ಲಿಸಲಿ ಬಿಡಲಿ ಆರೋಪಿಯನ್ನು ಬಿಡುಗಡೆ ಮಾಡಿದ ತೀರ್ಪಿನಿಂದ ಸಮಾಧಾನ ಆಗದಿದ್ದರೆ ನೊಂದವರು/ ದೂರುದಾರರು ಅದನ್ನು ಪ್ರಶ್ನಿಸಿ ಪ್ರತ್ಯೇಕವಾಗಿ ಮೇಲ್ಮನವಿ ಸಲ್ಲಿಸಬಹುದು.

ತಪ್ಪಿತಸ್ಥರಲ್ಲದವರಿಗೆ ಶಿಕ್ಷೆ ಆಗಬಾರದೆಂಬುದು ಎಷ್ಟು ಮುಖ್ಯವೋ, ನೊಂದವರಿಗೆ ನ್ಯಾಯಾಘಾತ ಆಗದೆ ಸಮಾಧಾನಕರವಾದ ನ್ಯಾಯಮಂಡನೆ ಆಗಬೇಕಾದದ್ದೂ ಅಷ್ಟೇ ಮುಖ್ಯ. ಆದ್ದರಿಂದ ನಿಮ್ಮ ಪ್ರಯತ್ನ ಮುಂದುವರಿಸಿ. ಈಗ ಕೊಟ್ಟಿರುವ ತೀರ್ಪಿನಲ್ಲಿ ಇರುವ ಗುಣಾವಗುಣಗಳನ್ನು ನೀವು ಮೇಲ್ಮನವಿ ನ್ಯಾಯಾಲಯದ ಗಮನಕ್ಕೆ ತರಬಹುದು.
***

ಹೆಸರು ಬೇಡ, ಗೌರಿಬಿದನೂರು
ಪ್ರಶ್ನೆ: ನಮ್ಮ ತಂದೆ ತಾಯಿಗೆ ನಾವು ಮೂವರು ಹೆಣ್ಣು ಹಾಗೂ ಮೂವರು ಗಂಡು ಮಕ್ಕಳು. ನಮ್ಮ ತಂದೆ ತಾಯಿ ಈಗ ಸ್ವರ್ಗಸ್ಥರಾಗಿದ್ದಾರೆ. ನಾವು ಮೂವರೂ ಹೆಣ್ಣು ಮಕ್ಕಳು 1952ನೇ ಇಸವಿಗಿಂತ ಮೊದಲು ಹುಟ್ಟಿದವರು. ನಮಗೆ ಸುಮಾರು 40 ವರ್ಷಕ್ಕೂ ಮೊದಲೇ ವಿವಾಹವಾಗಿದ್ದು, ಗಂಡ, ಮಕ್ಕಳೊಂದಿಗೆ ವಾಸಿಸುತ್ತಿದ್ದೇವೆ. ತಂದೆ ತಾಯಿ ಇಲ್ಲದ ತವರು ಮನೆಯ ಆಸ್ತಿಯಲ್ಲಿ ನಮಗೆ ಎಷ್ಟು ಪಾಲು ಬರಬಹುದು ಅಥವಾ ಏನೂ ಬರುವುದೇ ಇಲ್ಲವೇ? ಸೋದರರು ನಮಗೆ ತವರಿನ ಆಸ್ತಿಯ ಪಾಲು ಕೊಡಲು ಆಸಕ್ತಿ ತೋರದೆ ನಮ್ಮನ್ನು ಗೊಂದಲದಲ್ಲಿ ಇರಿಸಿದ್ದಾರೆ. ಆದ್ದರಿಂದ ನಾವು ಆಸ್ತಿ ಪಡೆಯಲು ಅನುಸರಿಸಬೇಕಾದ ಮಾರ್ಗ ತೋರಿ.

ಉತ್ತರ: ನಿಮ್ಮ ತಂದೆ ತಾಯಿಯದು ಸ್ವಯಾರ್ಜಿತ ಆಸ್ತಿಯಾಗಿದ್ದು, ಅದನ್ನು ಹಂಚದೆ ಅಥವಾ ವಿತರಣೆ ಮಾಡದೆ ಅವರು ತೀರಿಕೊಂಡಿದ್ದರೆ, ಎಲ್ಲ ಮಕ್ಕಳಿಗೂ ಅದರಲ್ಲಿ ಸಮಭಾಗ ಇದೆ. ಅದು ಒಂದು ವೇಳೆ ಪಿತ್ರಾರ್ಜಿತ ಆಸ್ತಿಯಾಗಿದ್ದು, 2004ರ ಡಿಸೆಂಬರ್ 20ರ ಒಳಗೆ ಅದನ್ನು ನೋಂದಾಯಿತ ವಿಭಜನೆ ಮಾಡದಿದ್ದರೆ ಅಥವಾ ನ್ಯಾಯಾಲಯದ ಡಿಕ್ರಿಯ ಮೂಲಕ ವಿಭಜನೆ ಪೂರ್ಣಗೊಂಡಿರದಿದ್ದರೆ ನೀವು ಸಹ ನಿಮ್ಮ ಪಾಲನ್ನು ಕೇಳಬಹುದು. ಅದಕ್ಕೆ ನೀವು ರಾಜ್ಯ ಕಾನೂನು ನೆರವು ಮಂಡಲಿಯ ಕಾನೂನು ಪ್ರಕ್ರಿಯಾಪೂರ್ವ ಸಂಧಾನ ಕಾರ್ಯಕ್ರಮದ ಸಹಾಯ ಪಡೆಯಬಹುದು. ಅದರಿಂದ ಪ್ರಯೋಜನ ಆಗದಿದ್ದರೆ ನ್ಯಾಯಾಲಯದಲ್ಲಿ ವಿಭಜನೆಗಾಗಿ ದಾವೆ ಹೂಡಿ ಕಾನೂನು ಕ್ರಮ ಪ್ರಾರಂಭಿಸಬಹುದು.
***

ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ವಿಳಾಸ: ಪ್ರಜಾವಾಣಿ, ಭೂಮಿಕಾ ವಿಭಾಗ, ನಂ. 75, ಎಂ.ಜಿ ರಸ್ತೆ, ಬೆಂಗಳೂರು- 560 001. ಇ ಮೇಲ್-  bhoomika@prajavani.co.in
bhoomikapv@gmail.com

Comments