ಹಾಸಿಗೆ ಹುಣ್ಣು

ಹಾಸಿಗೆ ಹುಣ್ಣು ಅಥವಾ ಬೆಡ್‌ಸೋರ್ ಸಾಮಾನ್ಯ ಗಾಯಗಳಿಗಿಂತ ಭಿನ್ನವಾದ ಹಾಗೂ ಗಂಭೀರವಾದ ಸಮಸ್ಯೆ. ಪ್ರಸ್ತುತ ಇದಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಇಲ್ಲವಾದ್ದರಿಂದ ಉಪಚಾರ ಮತ್ತು ಸೂಕ್ತ ನಿರ್ವಹಣೆಯೊಂದೇ ದಾರಿ.

ಹಾಸಿಗೆ ಹುಣ್ಣು ಅಥವಾ ಬೆಡ್‌ಸೋರ್ ಸಾಮಾನ್ಯ ಗಾಯಗಳಿಗಿಂತ ಭಿನ್ನವಾದ ಹಾಗೂ ಗಂಭೀರವಾದ ಸಮಸ್ಯೆ. ಪ್ರಸ್ತುತ ಇದಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಇಲ್ಲವಾದ್ದರಿಂದ ಉಪಚಾರ ಮತ್ತು ಸೂಕ್ತ ನಿರ್ವಹಣೆಯೊಂದೇ ದಾರಿ. ಇಲ್ಲಿ ವೈದ್ಯರಿಗಿಂತ ಕುಟುಂಬ ಸದಸ್ಯರ ಪಾತ್ರ ದೊಡ್ಡದು. ದೀರ್ಘಕಾಲದಿಂದ ಹಾಸಿಗೆ ಹಿಡಿದು, ಹಾಸಿಗೆ ಹುಣ್ಣಿನಿಂದ ನರಳುವ ರೋಗಿಗಳ ಜೀವನದ ಗುಣಮಟ್ಟ ಹಾಗೂ ಅವರ ಆಯುಷ್ಯವನ್ನು ನಿರ್ಧರಿಸುವವರು ಕುಟುಂಬದವರೇ.

*ಹಾಸಿಗೆ ಹುಣ್ಣಿನ ಬಗ್ಗೆ ತಿಳಿಸಿ
ದೀರ್ಘಕಾಲದಿಂದ ಹಾಸಿಗೆ ಹಿಡಿದ ರೋಗಿಗಳ ಚರ್ಮದ ಮೇಲೆ ನಿರಂತರವಾಗಿ ಬೀಳುವ ಒತ್ತಡದಿಂದ ಉಂಟಾಗುವ ಸ್ಥಿತಿಯೇ ಹಾಸಿಗೆ ಹುಣ್ಣು ಅಥವಾ ಬೆಡ್‌ಸೋರ್.

*ಹಾಸಿಗೆ ಹುಣ್ಣಿಗೆ ಹೆಚ್ಚಾಗಿ ಗುರಿಯಾಗುವ ದೇಹದ ಭಾಗ ಯಾವುದು?
ಸಾಮಾನ್ಯವಾಗಿ ಇದು ಹಿಮ್ಮಡಿ, ಕಣಕಾಲು, ಸೊಂಟದಂತಹ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮೊದಲು ಇದು ಕೇವಲ ಚರ್ಮದ ಮೇಲ್ಪದರದಲ್ಲಿ ಕಂಡುಬಂದರೂ ನಂತರ ಆಳಕ್ಕೆ ಇಳಿಯುತ್ತಾ ಹೋಗುತ್ತದೆ.

*ಇದಕ್ಕೆ ಕಾರಣವೇನು?
ದೌರ್ಬಲ್ಯ, ನಿಶ್ಶಕ್ತಿ, ಪಾರ್ಶ್ವವಾಯು, ಕೋಮಾ ಸ್ಥಿತಿ, ಅಪಘಾತ, ಗಾಯ ಮುಂತಾದ ಸ್ಥಿತಿಯಲ್ಲಿರುವ ರೋಗಿ ಸಾಮಾನ್ಯವಾಗಿ ಎದ್ದು ಓಡಾಡುವ ಹಾಗಿರುವುದಿಲ್ಲ. ಮಲಗಿದ ಭಂಗಿಯನ್ನೂ ಬದಲಿಸದ ಸ್ಥಿತಿಯಲ್ಲಿ ಅವರು ಇರುತ್ತಾರೆ. ಹೀಗಾಗಿ ದೇಹದ ಒಂದೇ ಭಾಗದ ಮೇಲೆ ನಿರಂತರವಾಗಿ ಒತ್ತಡ ಬೀಳುವುದರಿಂದ ಹಾಸಿಗೆ ಹುಣ್ಣು ಆಗುತ್ತದೆ. ವೃದ್ಧರು ಹಾಗೂ ಮಧುಮೇಹಿಗಳಿಗೆ ಇದು ಇನ್ನೂ ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತದೆ.

*ಹಾಸಿಗೆ ಹುಣ್ಣಿನ ಹಂತಗಳಾವುವು?
ಒಟ್ಟು ನಾಲ್ಕು ಹಂತಗಳನ್ನು ಗುರುತಿಸಲಾಗಿದೆ:
ಮೊದಲನೇ ಹಂತದಲ್ಲಿ ಅದು ಇನ್ನೂ ಹುಣ್ಣಿನ ಆಕಾರ ಪಡೆದಿರುವುದಿಲ್ಲ. ಆದರೆ ಆ ಭಾಗ ಗಾಢ ಕಪ್ಪು ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಮುಟ್ಟಿದರೆ ನೋವಾಗುತ್ತದೆ ಮತ್ತು ಹೆಚ್ಚು ಮೃದುವಾದ, ತಂಪಾದ ಅನುಭವ ನೀಡುತ್ತದೆ.

ಎರಡನೇ ಹಂತದಲ್ಲಿ ತೆರೆದ ಗಾಯದಂತಹ ಹುಣ್ಣು ಕಾಣಿಸಿಕೊಳ್ಳುತ್ತದೆ. ಇದು ಬಿರುಕಿನಿಂದ ಕೂಡಿದ ದ್ರವ ತುಂಬಿದ ಬೊಕ್ಕೆ ಅಥವಾ ಗುಳ್ಳೆಯಂತೆ ಕಾಣಿಸಬಹುದು.

ಮೂರನೇ ಹಂತದಲ್ಲಿ ಈ ಹುಣ್ಣು ಆಳವಾದ ಗಾಯದಂತೆ ಅಥವಾ ಒಂದು ಕುಳಿಯಂತೆ ಕಾಣಿಸುತ್ತದೆ. ಗಾಯದ ಕೆಳಭಾಗದಲ್ಲಿ ಹಳದಿ ಬಣ್ಣದ ಸತ್ತ ಅಂಗಾಂಶ ಕಾಣಬಹುದು.

ನಾಲ್ಕನೇ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಜೀವಕೋಶಗಳ ನಷ್ಟ ಕಂಡುಬರುತ್ತದೆ. ಈ ಹಂತದಲ್ಲಿ ಗಾಯವು ಮೂಳೆ ಮತ್ತು ಸ್ನಾಯುಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಚರ್ಮದ ಒಳಪದರಕ್ಕೂ ಹಾನಿ ಮಾಡುತ್ತದೆ. ಗಾಯವು ಮೂಳೆಗಳನ್ನು ತಿನ್ನುತ್ತಾ ಬಂದು ರೋಗಿಯ ಸಾವಿಗೂ ಕಾರಣ ಆಗಬಹುದು.

ಒಂದರಿಂದ ಮೂರನೇ ಹಂತದವರೆಗೆ ನೋವು ಕ್ರಮೇಣ ಅನುಭವಕ್ಕೆ ಬರುತ್ತಾ ಹೋಗುತ್ತದೆ. ಆದರೆ ನಾಲ್ಕನೇ ಹಂತದ ನೋವನ್ನು ಸಹಿಸುವುದು ಕಷ್ಟವಾಗುತ್ತದೆ. ಸೋಂಕು ತಗುಲುವ ಸಾಧ್ಯತೆಯೂ ಈ ಹಂತದಲ್ಲಿ ಹೆಚ್ಚು.

*ಇದಕ್ಕೆ ಪರಿಹಾರವೇನು?
ಇದೊಂದು ಗಂಭೀರವಾದ ಸಮಸ್ಯೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಇದನ್ನು ಗುಣಮಾಡಬಲ್ಲ ನಿರ್ದಿಷ್ಟ ಔಷಧಿ ಲಭ್ಯ ಇಲ್ಲ. ಹುಣ್ಣಾದ ಜಾಗದಲ್ಲಿ ಡ್ರೆಸ್ಸಿಂಗ್ ಮಾಡುತ್ತಾರೆ. ಅದರಿಂದೇನೂ ಗಾಯ ಬೇಗ ಗುಣವಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಚರ್ಮ ಕಸಿ (ಸ್ಕಿನ್ ಗ್ರಾಫ್ಟಿಂಗ್) ಮಾಡಲಾಗುತ್ತದೆ. ಇದರಿಂದ ಗಾಯ ಗುಣ ಆಗಲೂಬಹುದು, ಆಗದೆಯೂ ಇರಬಹುದು.

ಇರುವ ಒಂದೇ ಪರಿಹಾರವೆಂದರೆ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದಷ್ಟೇ. ನೋವು ನಿವಾರಕ ಹಾಗೂ ಆ್ಯಂಟಿಬಯೊಟಿಕ್ಸ್ ಬಳಕೆ ಅನಿವಾರ್ಯ. ಕೆಲವು ಆಯುರ್ವೇದ ವೈದ್ಯರು ಗಿಡಮೂಲಿಕೆಗಳನ್ನು ಬಳಸಿ ಸ್ವಯಂ ತಯಾರಿಸಿಕೊಂಡ ಔಷಧಿಯನ್ನು ಸ್ಥಳೀಯವಾಗಿ ಬಳಸುತ್ತಾರೆ. ಇದು ನಿರೀಕ್ಷಿತ ಪರಿಣಾಮ ಬೀರಿದ ಉದಾಹರಣೆಗಳು ಇವೆ.

*ಗಿಡ ಮೂಲಿಕೆ ಔಷಧಿ ಎಷ್ಟು ಪರಿಣಾಮಕಾರಿ?
ಹಾಸಿಗೆ ಹುಣ್ಣಿಗೆ ಗಿಡಮೂಲಿಕೆ ಔಷಧಿ ನಿಜಕ್ಕೂ ಪರಿಣಾಮಕಾರಿ. ಆದರೆ ಅದನ್ನು ವೈಜ್ಞಾನಿಕವಾಗಿ ಸಂಶೋಧನೆಗೆ ಒಳಪಡಿಸಿ ಸಾರ್ವತ್ರಿಕವಾಗಿ ಅಳವಡಿಸಿಕೊಳ್ಳುವ ಕಾರ್ಯ ಆಗಬೇಕು. ಈ ಗಿಡಮೂಲಿಕೆಗಳಲ್ಲಿರುವ ಯಾವ ಸತ್ವ ಹುಣ್ಣಿನ ಕ್ರಿಮಿಯ ಬೆಳವಣಿಗೆಯನ್ನು ತಡೆಗಟ್ಟುತ್ತದೆ, ಅದರಲ್ಲಿರುವ ಯಾವ ಅಂಶ ಗಾಯ ಗುಣವಾಗಲು ನೆರವಾಗುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ದೃಢಪಡಿಸಬೇಕು.

ಹಿಂದಿನಿಂದ ನಮ್ಮ ಹಿರಿಯರು ಇಂತಹ ಸಮಸ್ಯೆಗಳ ಪರಿಹಾರಕ್ಕೆಲ್ಲ ಬಳಸುತ್ತಾ ಬಂದ ಗಿಡ ಮೂಲಿಕೆಗಳ ಸತ್ವದ ಮಹತ್ವವನ್ನು ಮೊದಲು ನಾವು ಅರಿಯಬೇಕು. ನಮ್ಮ ಈ ಔಷಧ ಪದ್ಧತಿಗೆ 5 ಸಾವಿರ ವರ್ಷಗಳ ಇತಿಹಾಸವೇ ಇದೆ. ಗಿಡಮೂಲಿಕೆಗಳ ಮಹತ್ವವನ್ನು ನಾವು ಅರಿಯದಿದ್ದರೂ ವಿದೇಶಿಯರು ಅರಿತಿದ್ದಾರೆ. ಚೀನಾದಲ್ಲಿ ಶೇ 80ರಷ್ಟು ಮಂದಿ ಎಲ್ಲ ಕಾಯಿಲೆಗಳಿಗೂ ಗಿಡಮೂಲಿಕೆ ಔಷಧಿಯನ್ನೇ ಬಳಸುತ್ತಿದ್ದಾರೆ. ಅಮೆರಿಕದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ನಮ್ಮ ಹಲವು ಗಿಡಮೂಲಿಕೆಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ನಮ್ಮ ವಿಶ್ವವಿದ್ಯಾಲಯಗಳು ಈ ವಿಷಯದಲ್ಲಿ ಈಗಷ್ಟೇ ಎಚ್ಚೆತ್ತುಕೊಳ್ಳುತ್ತಿವೆ.

*ಹಾಸಿಗೆ ಹುಣ್ಣು ಬೇಗ ಹರಡುವುದೇ ಅಥವಾ ಇದೊಂದು ನಿಧಾನಗತಿಯ ಪ್ರಕ್ರಿಯೆಯೇ?
ಇದು ಅತ್ಯಂತ ಶೀಘ್ರವಾಗಿ ಹರಡುವ ಗಾಯ. ಅದರಲ್ಲೂ ವಯಸ್ಸಾದವರಲ್ಲಿ ಕ್ಷಿಪ್ರಗತಿಯಲ್ಲಿ ಹರಡುತ್ತದೆ.

*ಹಾಸಿಗೆ ಹುಣ್ಣಿನ ನಿರ್ವಹಣೆ ಹೇಗೆ?
ಸರಿಯಾದ ಆಹಾರ ಕ್ರಮಕ್ಕೆ ಮೊದಲ ಆದ್ಯತೆ ನೀಡಬೇಕು. ಮಧುಮೇಹಿಗಳನ್ನು ಹೊರತುಪಡಿಸಿ ಇತರ ರೋಗಿಗಳು ಹೆಚ್ಚಾಗಿ ತಾಜಾ ಹಣ್ಣು ಹಾಗೂ ತರಕಾರಿಯನ್ನು ಸೇವಿಸಬೇಕು. ಆ್ಯಂಟಿ ಆಕ್ಸಿಡೆಂಟ್ ಸಮೃದ್ಧವಾಗಿರುವ ಹಾಗೂ ಪ್ರೊಟೀನ್ ಅಂಶ ಹೆಚ್ಚಾಗಿರುವ ಆಹಾರ ಸೇವನೆ ಉತ್ತಮ.

ಆಗಾಗ ರೋಗಿಗಳ ಮಲಗಿದ ಭಂಗಿಯನ್ನು ಬದಲಿಸುವುದು, ಸಾಧ್ಯವಾದರೆ ಗಾಲಿ ಕುರ್ಚಿಯ ಮೇಲೆ ಅವರನ್ನು ತಿರುಗಾಡಿಸುವುದು ಮಾಡಬೇಕು. ಮುಖ್ಯವಾಗಿ ರೋಗಿಯನ್ನು ಹಾಗೂ ಅವರ ಹಾಸಿಗೆಯನ್ನು ಸ್ವಚ್ಛವಾಗಿ ಇಡಬೇಕು. ಕೇವಲ ವೈದ್ಯರಷ್ಟೇ ಅಲ್ಲ, ಅವರನ್ನು ನೋಡಿಕೊಳ್ಳುವ ನರ್ಸ್ ಹಾಗೂ ಮನೆಯ ಸದಸ್ಯರು ಸಹ ರೋಗಿಯ ಆಯುಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

Comments