*ಪೂರ್ವ ಷರತ್ತುಗಳು ಅನ್ವಯಿಸುವುದಿಲ್ಲ

ವಾಸ್ತು ಜೊತೆ ದೋಷ ಫ್ರೀ!*

ಪ್ರಸ್ತುತ ವಿಜ್ಞಾನಕ್ಕೂ ಸಂಪ್ರದಾಯಕ್ಕೂ ಅತಿ ಹೆಚ್ಚು ಜಟಾಪಟಿ ನಡೆಯುತ್ತಿದ್ದರೆ ಅದು ವಾಸ್ತುಕ್ಷೇತ್ರದಲ್ಲಿ. ಮನೆ ಮಾಲೀಕರು ವಾಸ್ತುವಿನ ಮೊರೆ ಹೋದರು. ವಾಸ್ತುಪಂಡಿತರಿಗೆ ಇದೇ ಬಂಡವಾಳವಾಯಿತು. ಆದರೆ ಇವರಿಬ್ಬರ ಮಧ್ಯೆ ಸಿಲುಕಿದ್ದು ವಾಸ್ತುಶಿಲ್ಪಿಗಳು. ಅತ್ತ ದರಿಯನ್ನೂ ಇತ್ತ ಪುಲಿಯನ್ನೂ ಕಂಡ ಇವರ ಹಾಡು-ಪಾಡನ್ನು ವಾಸ್ತುಪುರುಷನೇ ಬಲ್ಲ!

ವಾಸ್ತು ಜೊತೆ ದೋಷ ಫ್ರೀ!*

ಮನೆಗೆ ಗಾಳಿ ಬೆಳಕು ಚೆನ್ನಾಗಿ ಬರಲಿ ಎಂಬ ಆಶಯ ಹೊಂದಿದ್ದ ವಾಸ್ತುಶಾಸ್ತ್ರಕ್ಕೆ ಈಗ ಹೊಸ ರೂಪ, ಹೊಸ ವೇಷ. ಅನುಕೂಲಕ್ಕೆ ತಕ್ಕಂತೆ ವಾಸ್ತುಶಾಸ್ತ್ರದ ವಾಸ್ತುವನ್ನೇ ಕೆಲವು ಭೂಪರು ಬದಲಿಸಿದರು. ಇತ್ತ ಕಟ್ಟಡಗಳ ಒಡೆಯರು ಹೇಳಿದಂತೆ ವಾಸ್ತುಶಿಲ್ಪಿಗಳು ಕೇಳಲೇಬೇಕಾದ ಸ್ಥಿತಿ ತಲೆದೋರಿತು. ಹಾಗೆ ಕೇಳಲು ಹೋದವರಿಗೆ ಅಡಕತ್ತರಿಯಲ್ಲಿ ಸಿಲುಕಿದ ಅನುಭವ.

ಮನೆ ಕಟ್ಟುವಾಗ ಸರ್ಕಾರದ ಅನುಮತಿ ಪಡೆಯಲು ಮಂಜೂರಾತಿ ನಕ್ಷೆ ಸಿದ್ಧಪಡಿಸುತ್ತಾರೆ. ವಾಸ್ತವವಾಗಿ ಅದರಂತೆಯೇ ಮನೆ ಕಟ್ಟುವುದಿಲ್ಲ. ಮನೆಯೊಡೆಯರ ಅಭಿಲಾಷೆ, ನಿವೇಶನದ ಅಳತೆಗೆ ತಕ್ಕಂತೆ ಸಾಕಷ್ಟು ಬದಲಾವಣೆಗಳಾಗುತ್ತವೆ. ಅದೇ ಕಾರ್ಯಕಾರಿ ನಕ್ಷೆ. ಆದರೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಆದದ್ದೇ ಬೇರೆ. ನಿರ್ಮಾಣ ಕಾರ್ಯ ಶುರುವಾದ ಮೇಲೆ ಅಧಿಕಾರಿಯ ಪತ್ನಿ ಹಳೆಯ ನಕ್ಷೆಯಂತೆ ಮನೆಕಟ್ಟಲು ಪಟ್ಟು ಹಿಡಿದರು. ಕಾರಣ ಹುಡುಕುತ್ತ ಹೋದಾಗ ಆಕೆ ಬಾಬಾ ಭಕ್ತೆ ಎಂಬುದು ತಿಳಿಯಿತು.

ಮೊದಲು ಮಂಜೂರಾದ ನಕ್ಷೆಗೆ ಬಾಬಾ `ಅನುಮತಿ' ನೀಡಿದ್ದರು. ಎರಡನೇ ನಕ್ಷೆಗೆ ಅನುಮತಿ ಪಡೆಯಲು ಹೋದಾಗ ಅವರು ಆಶ್ರಮದಲ್ಲಿ ಇರಲಿಲ್ಲ. ಭಕ್ತರು ಹಾಗೆಲ್ಲಾ ದೇವಮಾನವರನ್ನು ಸುಮ್ಮನೆ ಬಿಡುವುದುಂಟೆ? ಎರಡನೇ ನಕ್ಷೆ ಹಿಡಿದು ಆಕೆ ದೇವರಮನೆಗೇ ಹೋದರು. ಆದರೆ ಬಾಬಾರ ಫೋಟೊ ಜಪ್ಪಯ್ಯ ಅನ್ನಲಿಲ್ಲ. ಬಾಬಾ ಅನುಮತಿ ಕೊಟ್ಟಿದ್ದರೆ ನಕ್ಷೆಯಲ್ಲಿ ಬೂದಿ ಉದುರುತ್ತಿತ್ತು ಎನ್ನುವುದು ಆಕೆಯ ವಾದ!

ಮನೆ `ಮುರಿದು' ಕಟ್ಟುವ ವಾಸ್ತುಪಂಡಿತರಂತೆ ಕೊಂಚವೂ ಬದಲಾವಣೆ ಮಾಡದೆ ವಾಸ್ತುದೋಷ ಪರಿಹರಿಸುವ ಮೇಧಾವಿ ವಾಸ್ತುತಜ್ಞರೂ ಇದ್ದಾರೆ. ಈಶಾನ್ಯ ಮೂಲೆಯಲ್ಲಿ ತೊಟ್ಟಿ ತಗ್ಗಿನಲ್ಲಿರಬೇಕು ಎನ್ನುವುದು ಒಂದು ನಂಬಿಕೆ. ಒಂದು ವೇಳೆ ಇರಲಿಲ್ಲವೋ ಅದಕ್ಕೆ ಇವರ ಬಳಿ ಪರಿಹಾರ ಉಂಟು. ಅಲ್ಲೇ ಬೋರ್‌ವೆಲ್ ಮಾದರಿಯಲ್ಲಿ ಒಂದು ರಂಧ್ರ ಕೊರೆಯುತ್ತಾರೆ. ಅಷ್ಟು ದೊಡ್ಡ ರಂಧ್ರಕ್ಕೆ ಪಾದರಸ ತುಂಬಿದರೆ ಗ್ರಹಗತಿಗಳು ಕಾಡುವುದಿಲ್ಲ ಎಂದು ಸಾರುತ್ತಾರೆ. ಜೀವಿಗಳ ಪಾಲಿಗೆ ಪಾದರಸದಷ್ಟು ಖಳ ಲೋಹ ಮತ್ತೊಂದಿಲ್ಲ. ಅದು ನೀರಿಗೆ ಬೆರೆತರೆ ಮನೆಯ ಕತೆ ಇರಲಿ ಮನೆಯಲ್ಲಿದ್ದವರ ಕತೆಯೂ ಮುಗಿಯುತ್ತದೆ ಎನ್ನುವುದು ಬೇರೆ ಮಾತು. ಅಲ್ಲದೆ `ಬೆಳ್ಳಿನೀರು' ಎಂದೂ ಕರೆಯಲಾಗುವ ಪಾದರಸದ ಬೆಲೆ ದುಬಾರಿ. ದೋಷ ಪರಿಹಾರಕ್ಕೆ ಎಂಥ ಶೋಷಣೆಗೂ ಜನ ರೆಡಿ ಇರುತ್ತಾರೆ ಎನ್ನುವುದಕ್ಕೆ ಇದೊಂದು ಎಕ್ಸಾಂಪಲ್ಲು. ಈಶಾನ್ಯ ಮೂಲೆಗೆ ಹೆಚ್ಚು ಭಾರ ಹಾಕಬಾರದು ಎಂಬುದು ಮತ್ತೊಂದು ನಂಬಿಕೆ. ಆದರೆ ಅಲ್ಲಿಯೇ ನೀರಿನ ಸಂಪು ಇರುತ್ತದೆ. ಅಲ್ಲಿ ತೊಟ್ಟಿಗೆ ಜಾಗ ಅಗೆದಿರುವುದರಿಂದ ಭಾರ ಕಡಿಮೆಯಾಗುತ್ತದೆ ಎಂದು ವಾದಿಸುವ ಅಳಲೆಕಾಯಿ ಪಂಡಿತರೂ ಇದ್ದಾರೆ. ನೀರಿನ ಭಾರದ ಬಗ್ಗೆ ಅವರದು ಜಾಣ ಕುರುಡು!

ಮತ್ತೊಂದು ಘಟನೆ. ಮನೆ ಅಂತಿಮ ಹಂತಕ್ಕೆ ಬಂದಿತ್ತು. ಆಗ ವಾಸ್ತು ಪಂಡಿತರೊಬ್ಬರು ಅಡುಗೆ ಮನೆ ಇರಬೇಕಿದ್ದ ಜಾಗದಲ್ಲಿ ಟಾಯ್ಲೆಟ್ ಇದೆ ಎಂದು ತಗಾದೆ ತಗೆದರು. ಈಗ ಏನು ಮಾಡುವುದೆಂದು ಮನೆ ಮಾಲೀಕರಿಗೆ ತೋಚಲಿಲ್ಲ. ಆದರೆ ಮುರಿದು ಕಟ್ಟುವವರಿಗೆ ಹೋಲಿಸಿದರೆ ಈ ಪಂಡಿತರು ತುಂಬಾ ನಾಜೂಕಿನವರು. `ಪರವಾಗಿಲ್ಲ ಬಿಡಿ. ಉಳಿದ ಅಡುಗೆಯನ್ನು ಈಗಿರುವ ಕಿಚನ್‌ನಲ್ಲೇ ಮಾಡಿಕೊಳ್ಳಿ. ಆದರೆ ಒಂದು ಕಂಡೀಷನ್ನು. ಪ್ರತಿದಿನ ಬೆಳಗಿನ ಕಾಫಿಯನ್ನು ಟಾಯ್ಲೆಟ್ಟಿನಲ್ಲಿಯೇ ತಯಾರಿಸಬೇಕು. ಆಗ ಮಾತ್ರ ದೋಷ ಪರಿಹಾರ' ಎಂದರು. ಈಗಲೂ ಆ ಮನೆಯಲ್ಲಿ ಕಾಫಿ ತಯಾರಾಗುವುದು ಟಾಯ್ಲೆಟ್ಟಿನಲ್ಲಿ! ಊಟ ಸೇರುವ ಹೊಟ್ಟೆಯೂ, ಅದೇ ಆಹಾರ ತ್ಯಾಜ್ಯವಾಗುವ ಮತ್ತೊಂದು ಅಂಗವೂ ಅಕ್ಕಪಕ್ಕದಲ್ಲಿಯೇ ಇರುವುದು ಬಹುಶಃ ವಾಸ್ತು ಜಗತ್ತಿನ ಅರಿವಿಗೆ ಬಂದಿಲ್ಲ. ಅದೇನಾದರೂ ತಿಳಿದು ಹೋದರೆ ವೈದ್ಯಕೀಯ ಲೋಕಕ್ಕೂ ವಾಸ್ತು ಪ್ರವೇಶಿಸಬಹುದು. ವಾಸ್ತುವಿನ ಪ್ರಕಾರ ಹೊಟ್ಟೆಯ ಸ್ಥಾನ ಬದಲಿಸುವ ದಿನಗಳು ಬಂದರೇನು ಗತಿ!

`ಹುಡುಕುತ್ತ ಹೋದರೆ ವಾಸ್ತು ಪ್ರಚಾರ ಪಡೆದದ್ದಕ್ಕೆ ದೊಡ್ಡ ಇತಿಹಾಸವೇನೂ ಇಲ್ಲ. ವೇದ ಪುರಾಣಗಳಲ್ಲಿ ಇದ್ದಿರಬಹುದಾದ ವಾಸ್ತುವಿನ ಉಲ್ಲೇಖ ಸಮೂಹ ಸನ್ನಿಯಂತೆ ಆವರಿಸತೊಡಗಿದ್ದು ಎಪ್ಪತ್ತರ ದಶಕದಲ್ಲಿ. ಕೇವಲ ಒಂದು ದಶಕದ ಒಳಗಾಗಿ ತಾಲ್ಲೂಕು ಮಟ್ಟಕ್ಕೂ ಅದರ ಗಾಳಿ ಬೀಸತೊಡಗಿತು. ನಮ್ಮ ಅಜ್ಜಂದಿರು ಮುತ್ತಾತಂದಿರು ಕಟ್ಟಿದ ಮನೆಗಳು ಈಗಿನಂತೆ ವಾಸ್ತು ಪ್ರಚೋದಿತವೂ ಆಗಿರಲಿಲ್ಲ.  ನಗರೀಕರಣದ ಗಾಳಿ ಬೀಸತೊಡಗಿದಂತೆ, ದಿಢೀರ್ ಶ್ರೀಮಂತರಾಗುವ ಪ್ರವೃತ್ತಿ ಹೆಚ್ಚಿದಂತೆ ಜನರಲ್ಲಿ ಭಯ ಕಾಡತೊಡಗಿತು. ವಾಸ್ತು ಪರಿಹಾರ ಉಪಾಯವಾಯಿತು' ಎನ್ನುತ್ತಾರೆ ವಾಸ್ತುಶಿಲ್ಪಿ ನಾಗರಾಜ ವಸ್ತಾರೆ.

ಸರ್ಕಾರಿ ಮಂತ್ರ...
ನಮ್ಮಲ್ಲಿ ವಿಧಾನಸೌಧ ಇದ್ದಂತೆ ಭೋಪಾಲದಲ್ಲಿ `ವಿಧಾನ ಸಭಾ' ಇದೆ. ಪ್ರತಿಯೊಬ್ಬ ವಾಸ್ತುಶಿಲ್ಪಿಯೂ ವಿದ್ಯಾರ್ಥಿ ದೆಸೆಯಲ್ಲಿ ಅಧ್ಯಯನ ಮಾಡುವ ಶ್ರೇಷ್ಠ ವಾಸ್ತು ವಿನ್ಯಾಸ ಇದರದು. ಭಾರತದ ಖ್ಯಾತ  ವಾಸ್ತುಶಿಲ್ಪಿಯೊಬ್ಬರು ಅದನ್ನು ವಿನ್ಯಾಸಗೊಳಿಸಿದ್ದರು. ಆದರೆ ವಾಸ್ತುದೋಷದ ನೆಪವೊಡ್ಡಿ ಅಲ್ಲಿನ ರಾಜಕಾರಣಿಗಳು ಈಗಲೂ ಕಟ್ಟಡಕ್ಕೆ ಕಾಲಿಡುತ್ತಿಲ್ಲ. ಅಲ್ಲಿಗೆ ಸಾರ್ವಜನಿಕರ ತೆರಿಗೆ ಹಣ ಮಣ್ಣುಪಾಲಾಯಿತು. ವಾಸ್ತು ದೋಷಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಮುಖ್ಯಮಂತ್ರಿ ಮನೆಯಾದಿಯಾದ ಸರ್ಕಾರಿ ಕಟ್ಟಡಗಳು, ಜ್ಞಾನ ಕೇಂದ್ರಗಳಾದ ಶಾಲಾ ಕಾಲೇಜುಗಳು ಸೇರಿವೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಆಡಳಿತ ಮಂಡಳಿ ಮುಖ್ಯಸ್ಥರಿಗೆ ಅಪಾರ ದೈವ ಭಕ್ತಿ. ವಾಸ್ತು ದೋಷವಿದೆಯೆಂದು ಇಡೀ ಕಾಲೇಜನ್ನೇ ತಿರುಗು-ಮುರುಗು ಮಾಡಿ ಕಟ್ಟಿದರು. ಅಷ್ಟಾದರೂ ಆ ಕಾಲೇಜಿನ ಏಳಿಗೆ ಆಗಲಿಲ್ಲ. ಯಾಕೆ ಆಗಲಿಲ್ಲ ಎಂದು ಕೇಳಿದರೆ ಅವರ ಉತ್ತರ: ವಾಸ್ತು ಪರಿಹಾರ ತಕ್ಷಣಕ್ಕೆ ಪರಿಣಾಮ ಬೀರುವಂಥದ್ದಲ್ಲ. ನಿಧಾನಕ್ಕೆ ಅದರ ಶಕ್ತಿ ಗೊತ್ತಾಗುತ್ತೆ!

ಬಿಬಿಎಂಪಿ ಕೌನ್ಸಿಲ್ ಕಟ್ಟಡದ ವಾಸ್ತು ಸರಿ ಇಲ್ಲದ ಕಾರಣ ಸದಸ್ಯರ ಕೊಲೆಗಳಾಗುತ್ತಿವೆ ಎಂದು ಅಧ್ಯಕ್ಷರ ಬಳಿ ಕೆಲವರು ದೂರು ಕೊಟ್ಟಿದ್ದರು. (ವಾಸ್ತವವಾಗಿ ಇಬ್ಬರು ಸದಸ್ಯರು ಹತ್ಯೆಗೀಡಾಗಿದ್ದು ಹಗೆತನದ ಕಾರಣಕ್ಕೆ). ದೋಟಿಹಾಳದ ಸಮೀಪದ ಗ್ರಾಮ ಪಂಚಾಯ್ತಿ ಕಟ್ಟಡವೊಂದರಲ್ಲಿ ದೋಷ ಕಂಡು ಬಂದಿದ್ದರಿಂದ ಅಧ್ಯಕ್ಷೆ ಕಟ್ಟಡದೊಳಗೆ ಕಾಲಿಡದೆ ಆಡಳಿತ ನಡೆಸಿದರು. 

ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ಉತ್ತರ ಭಾರತದ ಪ್ರಖ್ಯಾತ ವಾಸ್ತುಪಂಡಿತರೊಬ್ಬರು ದೊಡ್ಡ ದನಿಯಲ್ಲಿ ಹೇಳಿದರು: ಹೊಸದಾಗಿ ಬಳಸುತ್ತಿರುವ ರೂಪಾಯಿ ಚಿಹ್ನೆಯ ವಾಸ್ತು ಸರಿ ಇಲ್ಲ. ಇಂಗ್ಲಿಷ್‌ನ `ಆರ್' ಹಾಗೂ ದೇವನಾಗರಿ ಲಿಪಿಯ `ರ' ಅಕ್ಷರದ ಕತ್ತು ಸೀಳಿ ಚಿಹ್ನೆ ಮಾಡಲಾಗಿದೆ ಎಂಬುದು ಅವರ ದೂರು. ಆದರೆ ದೇವನಾಗರಿ ಲಿಪಿಗಾಗಲೀ, ಇಂಗ್ಲಿಷ್‌ನ `ಆರ್' ಅಕ್ಷರಕ್ಕಾಗಲೀ `ಅದು ಹಾಗಲ್ಲ' ಎಂದು ಹೇಳಲು ಬಾಯಿಲ್ಲವಲ್ಲ!

ದೇವಮಾನವರೊಬ್ಬರ ಸಾವಿಗೆ ಆಸ್ಪತ್ರೆ ವಾಸ್ತುದೋಷವೇ ಕಾರಣ ಎಂದು ದೊಡ್ಡದೊಂದು ಗುಲ್ಲು ಹಬ್ಬಿತ್ತು. ವಯಸ್ಸಾದ ಕಾರಣಕ್ಕೋ, ರೋಗರುಜಿನಗಳ ಕಾರಣಕ್ಕೋ ಆ ದೇವಮಾನವ ತೀರಿಕೊಂಡಿದ್ದರು. ದೇವಮಾನವನಿಗೆ ಕೂಡ ಸಾವಿದೆ ಎಂಬ ಕಲ್ಪನೆ ಭಕ್ತರಿಗೆ ಇರಲಿಲ್ಲ. ಕಾಯಿಲೆಯಿಂದ ಅವರು ಸತ್ತದ್ದಾಗಿ ವೈದ್ಯರು ಹೇಳಿದ್ದರು. ಆದರೂ ಆಸ್ಪತ್ರೆಯ ವಾಸ್ತುದೋಷ ಇವರನ್ನು ಕಾಡಿದ್ದೇಕೆ ಎಂದು ವಿಚಾರವಾದಿಗಳು ಅನೇಕ ದಿನ ತಲೆಕೆಡಿಸಿಕೊಂಡಿದ್ದು ಸುದ್ದಿಯಾಗಲಿಲ್ಲ.

ಈಗೀಗ ವಾಸ್ತು ಕಬಂಧಬಾಹು ಎಲ್ಲಿಯವರೆಗೆ ಹರಡಿದೆ ಎಂದು ಒಮ್ಮೆ ನೋಡಿ. ತಾಜ್‌ಮಹಲ್ ಚಿತ್ರವನ್ನು ಮನೆಯಲ್ಲಿ ಹಾಕಿಕೊಳ್ಳುವಂತಿಲ್ಲ. ಅದು ಸಮಾಧಿಯಾಗಿರುವುದರಿಂದ ಆ ಚಿತ್ರ ಇದ್ದರೆ ಮನೆಗೆ ಸ್ಮಶಾನ ಕಳೆ ಎನ್ನುತ್ತಾರೆ. ಅದೇ ವಾಸ್ತುತಜ್ಞರು ಮಠಾಧೀಶರ ಗದ್ದುಗೆಯ ಚಿತ್ರಕ್ಕೆ, ಕೋತಿಮರಿ ಸಮಾಧಿ ಮೇಲೆ ಕಟ್ಟಿದ ದೇಗುಲದ ಚಿತ್ರಕ್ಕೆ ಈ ಅಪವಾದ ಹೊರಿಸುವುದಿಲ್ಲ. ನಗುವ ಬುದ್ಧ, ಗಾಳಿಗಂಟೆ, ಚೀನಿ ಸಂಕೇತಗಳಿರುವ ವಸ್ತುಗಳು, ಮೀನು, ಹಾವು ಸಾಕಾಣಿಕೆ ಮೂಲಕವೂ ವಾಸ್ತು ಪರಿಹಾರ ಕಂಡುಕೊಳ್ಳುವವರಿದ್ದಾರೆ.

ವಾಸ್ತುವನ್ನು ನಂಬುವವರಲ್ಲಿ ಹಣವುಳ್ಳ ಆಂಧ್ರದವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ವಾಸ್ತುವಿನ ಪರವಾಗಿ ವಾದಿಸುತ್ತ ಅವರು ತಿರುಪತಿ ಹಾಗೂ ಶ್ರೀಶೈಲದ ಉದಾಹರಣೆ ಕೊಡುತ್ತಾರೆ. ವಾಸ್ತು ಪ್ರಕಾರ ಕಟ್ಟಿರುವುದರಿಂದಲೇ ತಿರುಪತಿ ದೇವಸ್ಥಾನ ಶ್ರೀಶೈಲದ ದೇಗುಲಕ್ಕಿಂತಲೂ ಶ್ರೀಮಂತವಾಗಿದೆ. ಇಷ್ಟು ಹೇಳಿದ ಮೇಲೆ ಯಾರಾದರೂ ನಂಬದೇ ಇರುತ್ತಾರೆಯೇ? ಯಾವುದು ಸತ್ಯವಲ್ಲದಿದ್ದರೂ ಕಣ್ಣು ಕೋರೈಸುವ ತಿರುಪತಿಯ ಐಶ್ವರ್ಯ ಸತ್ಯ ತಾನೇ!

ಮನೆಯೇ ದೇವಾಲಯ! 
ವಾಸ್ತುಶಿಲ್ಪಿ ಮೈತ್ರಿ ಬರಗೂರು ಅವರ ಪ್ರಕಾರ ಮೊದಲು ವಾಸ್ತು ಚಾಲ್ತಿಯಲ್ಲಿದ್ದದ್ದು ದೇವಾಲಯ ನಗರಿಗಳಲ್ಲಿ ಅಥವಾ ರಾಜರ ಅರಮನೆಗಳಲ್ಲಿ. ಅಲ್ಲೆಲ್ಲಾ ವಿಶಾಲ ಜಾಗ ಇರುತ್ತಿತ್ತು. ಹೇಗೆ ಬೇಕೆಂದರೂ ವಿನ್ಯಾಸ ಸಾಧ್ಯವಿತ್ತು. ಮದುರೆ ಮೀನಾಕ್ಷಿ ದೇವಾಲಯ 42 ಎಕರೆ ವಿಸ್ತೀರ್ಣದಲ್ಲಿದೆ. 14 ದ್ವಾರಗಳಿವೆ. ರಾಜ ಮನೆತನದವರ ಪ್ರವೇಶಕ್ಕಾಗಿಯೇ ಒಂದು ದ್ವಾರವಿದೆ. ಇಂಥ ದೇವಸ್ಥಾನ, ಅರಮನೆಗಳಂಥ ಮಹಲುಗಳಿಗೆ ಒಪ್ಪಿಗೆಯಾಗುತ್ತಿದ್ದ ವಾಸ್ತುಪುರುಷನಿಗೆ ಇದ್ದಕ್ಕಿದ್ದಂತೆ ಇಕ್ಕಟ್ಟಿನ ನಿವೇಶನಗಳಲ್ಲಿ ಅನಿವಾರ್ಯವಾಗಿ ನೆಲೆಕಂಡುಕೊಳ್ಳುವ ಸ್ಥಿತಿ ಬಂತು. ದೇಗುಲದ ವಾಸ್ತುವನ್ನೇ ಮನೆಗೆ ಹೊಂದಿಸಲು ಹೊರಟ ಗಂಡ ಹೆಂಡತಿಯ ಕತೆಯೊಂದು ಹೀಗಿದೆ.
40/60 ವಿಸ್ತೀರ್ಣದಲ್ಲಿ ಒಂದು ಮನೆ ನಿರ್ಮಾಣವಾಯಿತು. ಮನೆಯೊಡತಿ ಬಹಳ ಆಸ್ತಿಕರು. ವಾಸ್ತು ಪ್ರಕಾರ ಮನೆ ಕಟ್ಟಲು ಹೋಗಿ ಇಡೀ ಮನೆಗೆ ಹಲವು ಬಾರಿ ಆಕೆ ಪೆಟ್ಟು ಕೊಟ್ಟಿದ್ದರು. ಡೈನಿಂಗ್ ಹಾಲ್ ಸರಿ ಇಲ್ಲ. ಅಡುಗೆ ಮನೆ ಸರಿ ಇಲ್ಲ ಎಂದು ಒಂದೇ ವರಾತ.

ಸಾಲದ್ದಕ್ಕೆ ಪರಿಹಾರ ಕೋರಿ ದೇಗುಲಗಳಿಗೂ ಹೋಗಿ ಬರುತ್ತಿದ್ದರು. ದೋಷ ಪರಿಹಾರ ಮಾಡಿಕೊಂಡು ಬಂದಿದ್ದರೆ ತೊಂದರೆ ಇರುತ್ತಿರಲಿಲ್ಲ. ಬರುಬರುತ್ತ ಅವರು `ಆ ದೇವಸ್ಥಾನದ ವಾಸ್ತು ಹೀಗಿದೆ, ಈ ಗುಡಿಯ ವಾಸ್ತು ಹಾಗಿದೆ' ಎಂದು ಗಂಡನ ಕಿವಿಯೂದತೊಡಗಿದರು. ಇದರಿಂದ ರೋಸಿ ಹೋದ ಆ ಪತಿಮಹಾಶಯ ಕಡೆಗೆ `ಸರಿ, ನೀನಿನ್ನು ಮನೆಯಲ್ಲಿರೋದು ಬೇಡ ಹೋಗಿ ದೇವಸ್ಥಾನದಲ್ಲೇ ಇರು. ಅಥವಾ ಈ ಮನೆ ಮಾರಿ ಒಂದು ದೇವಸ್ಥಾನ ಕಟ್ಟಿಕೋ' ಎಂದುಬಿಟ್ಟರು. ಅಂದಿನಿಂದ ದೇವಸ್ಥಾನದ ವಾಸ್ತು ಆ ಮನೆಯಿಂದ ದೂರ ಉಳಿದಿದೆ.

ಈಗೀಗ ವಾಸ್ತುದೋಷ ದೇಶಕ್ಕೂ ವ್ಯಾಪಿಸಿದೆ.
`ಜಲದೇವ ಯಾವ ದಿಕ್ಕಿಗಿರಬೇಕು?
`ಈಶಾನ್ಯ ದಿಕ್ಕಿಗೆ'.
`ಆದರೆ ಭಾರತದಲ್ಲಿ?'
`ಪಶ್ಚಿಮ, ದಕ್ಷಿಣ, ಹಾಗೂ ಪೂರ್ವ ದಿಕ್ಕಿನಲ್ಲಿದೆ'

`ಅದಕ್ಕೆ ಅಲ್ಲವೇ ದೇಶ ಉದ್ಧಾರ ಆಗುತ್ತಿಲ್ಲ. ಅಮೆರಿಕ ನೋಡಿ. ಈಶಾನ್ಯ ದಿಕ್ಕಿಗೆ ನೀರಿರೋದು. ಹಾಗಾಗಿ ಅದು ಜಗತ್ತಿನ ದೊಡ್ಡಣ್ಣ' ಎನ್ನುವುದು ವಾಸ್ತುವಾದಿಗಳ ಲೆಕ್ಕಾಚಾರ. ಆದರೆ ತನ್ನ ಸುತ್ತಲೂ ಗಿರಗಿರ ಸುತ್ತುತ್ತ ಸೂರ್ಯನನ್ನೂ ಪ್ರದಕ್ಷಿಣೆ ಹಾಕುವ ಭೂಮಿಗೆ ಯಾವ ದಿಕ್ಕು? ಹಾಗೆಂದೇ ಇಡೀ ಭೂಮಿಯ ವಾಸ್ತುದೋಷ ಏನೆಂಬುದು ಇಂತಹವರಿಗೆ ಇನ್ನೂ ಕಂಡುಹಿಡಿಯಲಾಗಿಲ್ಲ!

ಬೆಂಗಳೂರು ಈಶಾನ್ಯ ದಿಕ್ಕಿಗೆ ಬೆಳೆಯದೇ ಇರುವುದರಿಂದ ರಾಜಕೀಯ ವೈಷಮ್ಯ, ಅಂತಃಕಲಹ ಉಂಟಾಗುತ್ತಿದೆ. ಆಗಾಗ ಬೆಂಕಿ ಅವಘಡಗಳು ಸಂಭವಿಸುತ್ತಿವೆ. ಅಲ್ಲದೆ ಮಹಾನಗರ ಪಾಲಿಕೆ ಹಣಕಾಸಿನ ತೊಂದರೆ ಉಂಟಾಗುತ್ತಿದೆ ಎಂದು ವಾಸ್ತು ಪಂಡಿತರೊಬ್ಬರು ಹೇಳಿದರು. ಅವರ ಪ್ರಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಾಸ್ತುವಿನಂತೆ ನಗರವನ್ನು ಬೆಳೆಸಬೇಕು. ಉತ್ತರ, ಈಶಾನ್ಯ ಹಾಗೂ ಪೂರ್ವ ದಿಕ್ಕಿನ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ಶ್ರಮಿಸಬೇಕು. ಸದ್ಯ ಅದಿನ್ನೂ ಬಿಡಿಎ ಕಿವಿಗೆ ಬೀಳದಿರುವುದು ಪುರದ ಪುಣ್ಯ!

ಧರ್ಮದ ಹಂಗಿಲ್ಲ
ಯಾವುದೇ ಧರ್ಮ, ಜಾತಿಯವರಾಗಿರಲಿ ತನ್ನವರೆಂದು ಅಪ್ಪಿಕೊಳ್ಳುತ್ತದೆ ವಾಸ್ತು. ಈ ವಿಚಾರದಲ್ಲಿ ಅದು ತರತಮ ತೋರುವುದಿಲ್ಲ. ಕ್ರೈಸ್ತರು, ಮುಸಲ್ಮಾನರು ಸೇರಿದಂತೆ ಅನ್ಯಧರ್ಮೀಯರನ್ನೂ ವಾಸ್ತು ಮಾಯಾಂಗನೆ ಕಾಡಿದೆ. ಇವರೆಲ್ಲಾ ವಾಸ್ತುವನ್ನು ಪರಿಪೂರ್ಣವಾಗಿ ನಂಬಿದವರಲ್ಲ. ಆದರೆ ತಮ್ಮ ಆಸ್ತಿ ಮರು ಮಾರಾಟ ಮಾಡಬೇಕಾದಾಗ `ವಾಸ್ತು' ಸರಿ ಇಲ್ಲ ಎಂಬ ಕಾರಣಕ್ಕೆ ತಿರಸ್ಕೃತವಾಗಬಾರದಲ್ಲಾ? ಹಾಗಾಗಿ `ಬೇಸಿಕ್ ವಾಸ್ತು'ವಾದರೂ ಇರಲಿ ಎಂಬ ಆಸೆ ಇವರದು. ಏನಿದು ಬೇಸಿಕ್ ವಾಸ್ತು? ಈಶಾನ್ಯ ಮೂಲೆಗೆ ಹೆಚ್ಚು ಭಾರ ಇರಬಾರದು. ಏಕೆಂದರೆ ವಾಸ್ತುಪುರುಷ ಆ ದಿಕ್ಕಿಗೆ ತಲೆ ಇರಿಸಿರುತ್ತಾನೆ. ಉತ್ತರ ದಿಕ್ಕಿಗೋ, ಪೂರ್ವ ದಿಕ್ಕಿಗೋ ಬಾಗಿಲು ಇರಲಿ. ಆಗ್ನೇಯ ಅಥವಾ ವಾಯವ್ಯ ಮೂಲೆಯಲ್ಲಿ ಅಡುಗೆ ಮನೆ, ನೈರುತ್ಯ ಮೂಲೆಯಲ್ಲಿ ಮಾಸ್ಟರ್ ಬೆಡ್‌ರೂಂ ಇರಲಿ ಎಂಬ ಸರಳಾತಿ ಸರಳ ವಾಸ್ತು.

ಇಂಥ ಸರಳಾತಿ ಸರಳ ವಾಸ್ತುವೇ ಸಾಕು ಎಂದೊಬ್ಬರು ಬಂದರು. ಮೊದಲು ಮನೆಯೊಡೆಯ ಹೇಳಿದ್ದು: ನನಗೆ ವಾಸ್ತುವಿನಲ್ಲಿ ನಂಬಿಕೆಯೇ ಇಲ್ಲ. ಬೇರೆಯವರು ಆಡಿಕೊಳ್ಳುತ್ತಾರೆ ಎನ್ನುವ ಭಯ ಇದೆ. ವಾಸ್ತು ಸಿಂಪಲ್ಲಾಗಿರಲಿ... ವಾಸ್ತುಶಿಲ್ಪಿಗಳಿಗೋ ಇಂಥವರು ಸಿಗುವುದೇ ಅಪರೂಪ. ಅದೇ ಖುಷಿಯಲ್ಲಿ ಮನೆ ಕಟ್ಟಲು ತೊಡಗಿದರು. ದಿನಗಳೆದಂತೆ ಮನೆಯ ಇತರೆ ಸದಸ್ಯರ ಒಂದೊಂದೇ ಬೇಡಿಕೆ ಶುರುವಾದವು. ನೀರಿನ ನಳ ಯಾವ ದಿಕ್ಕಿಗೆ ಇರಬೇಕು ಎನ್ನುವುದಕ್ಕೂ ವಾಸ್ತು ತಲೆ ತೂರಿಸತೊಡಗಿತು. ಫ್ಲೋರಿಂಗ್ ಮಾಡುವಾಗ ಈಶಾನ್ಯ ದಿಕ್ಕು ಇಳಿಜಾರಾಗಿರಲಿ. ಆ ತಗ್ಗಿನಲ್ಲೇ ಮನೆಯನ್ನು ಒರೆಸಿದ ನೀರು ಹೊರಹೋಗಬೇಕು ಇತ್ಯಾದಿ ವಿಚಾರಗಳು ಮುತ್ತಿಕೊಂಡವು. ಹಾಗೆಲ್ಲಾ ಇಳಿಜಾರು ಮಾಡಲು ಸಾಧ್ಯವಿಲ್ಲ. ಮನೆಯಲ್ಲಿದ್ದವರು ಜಾರುವ ಅಪಾಯವಿರುತ್ತದೆ. ಸಮವಾಗಿ ಮಲಗಲು ಆಗದು ಎಂದರೂ ಕೇಳಲು ತಯಾರಿರಲಿಲ್ಲ.

ಮನೆಯೊಂದು ಎರಡು ಬಾಗಿಲು
ಯುವ ವಾಸ್ತುಶಿಲ್ಪಿ ಸಹನಾ ಅವರು ಕಂಡ ಮನೆಯಲ್ಲಿ ಮುಖ್ಯದ್ವಾರಗಳೇ ಎರಡು ಇದ್ದವು! ಒಂದೇ ಮನೆಗೆ ಎರಡು ಹೆಬ್ಬಾಗಿಲೇ ಎಂದು ಅನೇಕರು ಮೂಗಿನ ಮೇಲೆ ಬೆರಳಿಡುತ್ತಿದ್ದರು. ಆದರೆ ಮಾಲೀಕರು ಅದಾಗಲೇ ತಮ್ಮ ತಲೆಯನ್ನು ವಾಸ್ತುತಜ್ಞರಿಗೆ ಅರ್ಪಿಸಿಯಾಗಿತ್ತು. `

ಮೊದಲಿದ್ದ ಪೂರ್ವದ ಬಾಗಿಲು ನಿಮ್ಮ ಜಾತಕಕ್ಕೆ ಆಗಿ ಬರುತ್ತಿಲ್ಲ. ಹೀಗಾಗಿ ನಿಮಗೆ ತೊಂದರೆ ಹೆಚ್ಚು. ಪೂರ್ವದಲ್ಲಿ ಬಾಗಿಲಿರುವುದು ಉತ್ತಮವೇ. ಅದನ್ನು ತೆಗೆಸುವುದು ಬೇಡ. ಅಲ್ಲದೆ ಗೃಹಪ್ರವೇಶ ಮಾಡಿದ ಬಾಗಿಲು ಕೂಡ ಅದೇ ಆಗಿದೆ. ನಿಮ್ಮ ಜಾತಕಕ್ಕೆ ಅನುಗುಣವಾಗಿ ಈಶಾನ್ಯ ಮೂಲೆಗೆ ಸಮೀಪದಲ್ಲಿ ಮತ್ತೊಂದು ಬಾಗಿಲು ಇಡಿಸಿಬಿಡಿ' ಎಂದು ಸಲಹೆಕೊಟ್ಟರು. ಅದರಂತೆಯೇ ಅವರ ಮನೆ ಎರಡು ಹೆಬ್ಬಾಗಿಲುಗಳನ್ನು ಹೊಂದಿ ನೆರೆ ಹೊರೆಯವರ ಆಕರ್ಷಣೆಯ ಕೇಂದ್ರವಾಗಿದೆ.

ಹೀಗೆ ಬಾಗಿಲುಗಳ ದಿಕ್ಕು ಬದಲಿಸಿದವರಿಗೆ ಲೆಕ್ಕವೇ ಇಲ್ಲ. ಒಮ್ಮೆ ಒಬ್ಬರಿಗೆ ಸಕ್ಕಲೆ ಕಾಯಿಲೆ ಬಂತು. ಅದಕ್ಕೆ ಅವರು ಕಂಡುಕೊಂಡ ಪರಿಹಾರ ದಕ್ಷಿಣದಲ್ಲಿದ್ದ ಬಾಗಿಲನ್ನು ತೆಗೆಸಿ ಉತ್ತರಕ್ಕೆ ಇಡಿಸುವುದು. ಸರಿ ಹಾಗೆಯೇ ಮಾಡಿದರು. ಆದರೆ ದಕ್ಷಿಣಕ್ಕೆ ಮುಖ ಮಾಡಿತ್ತು ಅವರ ನಿವೇಶನ. ಈಗ ಅವರು ತಮ್ಮ ಮನೆಗೆ ಮುಂದಿನಿಂದ ಪ್ರವೇಶಿಸುವುದಿಲ್ಲ. ಓಣಿಯ ಇಕ್ಕಟ್ಟಿನಲ್ಲಿ ಸಾಗಿ ಹಿತ್ತಲಿನಲ್ಲಿರುವ ಉತ್ತರ ದಿಕ್ಕಿನ ಬಾಗಿಲು ತಟ್ಟುತ್ತಾರೆ. ಹಾಗಾದರೆ ಸಕ್ಕರೆ ಕಾಯಿಲೆ ಮಾಯವಾಯಿತೇ? ವೈದ್ಯರು ಹೇಳಿದ್ದು: ಮಧುಮೇಹ ಮನುಷ್ಯರಿಗೆ ಬರುತ್ತದೆ. ಹೊರಟು ಹೋಗುವುದಿಲ್ಲ!

ವಾಸ್ತುಶಾಸ್ತ್ರದ ಉತ್ತಮ ಅಂಶಗಳನ್ನು ವಾಸ್ತುಶಿಲ್ಪಿಗಳು ಗೌರವಿಸುತ್ತಾರೆ. ಆದರೆ ಅದರ ಹೆಸರಿನಲ್ಲಿ ನಡೆಯುತ್ತಿರುವ ಮೌಢ್ಯಗಳನ್ನು ಅಲ್ಲಗಳೆಯುತ್ತಾರೆ. `ಕಟ್ಟುವೆವು ನಾವು ಹೊಸ ನಾಡೊಂದನು' ಎಂದರೂ ವಾಸ್ತು ಪ್ರಕಾರವೇ ಕಟ್ಟಿ ಎಂದು ಹಟ ಹಿಡಿವವರ ಬಗ್ಗೆ ಅವರಿಗೆ ರೇಜಿಗೆ!

ವಾಸ್ತುಪುರುಷ...
ಕೆಲ ಊರುಗಳಲ್ಲಿ ಜನವಸತಿಯೇ ಒಂದು ನಿರ್ದಿಷ್ಟ ದಿಕ್ಕಿನಲ್ಲಿರುತ್ತದೆ. ಹುಬ್ಬಳ್ಳಿಯ ವಾಸ್ತುಶಿಲ್ಪಿ ವಸಂತ ಹೆಗಡೆ ಅವರು ಇಂಥ ಬೆಳವಣಿಗೆಯ ಹಿಂದಿರುವ ಕಾರಣವನ್ನು ಗುರುತಿಸುತ್ತಾರೆ. ಎಂಬತ್ತರ ದಶಕದಲ್ಲಿ ಸೊಸೈಟಿಗಳ ಮೂಲಕ ಮನೆ ಕಟ್ಟುವ ಪರಿಪಾಠ ರೂಢಿಯಲ್ಲಿತ್ತು. ಒಂದು ಸಂಘ ಮಾಡಿಕೊಂಡು ಅದಕ್ಕೆ ಇಂತಿಷ್ಟು ಹಣ ಕಟ್ಟಿ ಆ ಹಣದಲ್ಲಿ ಸೈಟು ಪಡೆಯುವ ಪದ್ಧತಿ ಅದು. ಆದರೆ ರಿಯಲ್ ಎಸ್ಟೇಟ್ ವ್ಯವಹಾರ ಸೊಸೈಟಿ ವ್ಯವಸ್ಥೆಯನ್ನು ಸರ್ಕಾರದ ಮಟ್ಟದಲ್ಲಿ ಒಡೆದು ಹಾಕಿತು. ಅಲ್ಲಿಯವರೆಗೂ ರಿಯಲ್ ಎಸ್ಟೇಟ್ ಏಜೆಂಟ್‌ಗಳಾಗಿದ್ದವರು ರಿಯಲ್ ಎಸ್ಟೇಟ್ ಒಡೆಯರಾದರು. ಅಂಥವರು ಯಾವುದೋ ನಗರದ ಒಂದು ಮೂಲೆಯಲ್ಲಿ ನಿವೇಶನಗಳನ್ನು ರೂಪಿಸುತ್ತಿದ್ದರು. ಅಷ್ಟು ದೂರ ನಿವೇಶನಾಕಾಂಕ್ಷಿಗಳನ್ನು ಕರೆತರಬೇಕಿತ್ತಲ್ಲಾ? ಹಾಗಾಗಿ ಒಂದು ಉಪಾಯ ಹುಡುಕಿದರು. ಅವರ ನಿವೇಶನಗಳು ಈಶಾನ್ಯದಲ್ಲಿದ್ದರೆ ನಗರದ ಈಶಾನ್ಯ ದಿಕ್ಕು ಎಲ್ಲ ದಿಕ್ಕುಗಳಿಗಿಂತಲೂ ಹೆಚ್ಚು ಪ್ರಶಸ್ತ. ಒಂದು ವೇಳೆ ನೈರುತ್ಯ ದಿಕ್ಕಿನಲ್ಲಿದ್ದರೆ ಅದು ಕುಬೇರನ ಆವಾಸ ಸ್ಥಾನ ಮುಂತಾದ ವದಂತಿಗಳನ್ನು ಹರಡಿಬಿಡುತ್ತಿದ್ದರು. ಹಣ ತರುವ, ಮನೆ-ಮನಗಳನ್ನು ನೆಮ್ಮದಿಯಾಗಿಡುವ ಅಂಥ ದಿಕ್ಕುಗಳನ್ನು ಯಾರಾದರೂ ಬೇಡ ಎನ್ನುವುದುಂಟೆ? ನಿವೇಶನಾರ್ಥಿಗಳಿಗೆ ದಿಕ್ಕಿನ ಶುಭ. ರಿಯಲ್ ಎಸ್ಟೇಟ್ ಪ್ರಚಂಡರಿಗೆ ಎಲ್ಲಿಯೂ ಸಲ್ಲದ ಜಾಗಕ್ಕೆ ಜನರನ್ನು ಕರೆತಂದ ಲಾಭ. `ನಿಜವಾದ ವಾಸ್ತುಪುರುಷ ಅಂತಿದ್ದರೆ ಅದು ರಿಯಲ್ ಎಸ್ಟೇಟ್ ಉದ್ಯಮಿ ಮಾತ್ರ' ಎಂದು ವಿಷಾದದ ನಗೆ ಚೆಲ್ಲುತ್ತಾರೆ ಹೆಗಡೆ.

ಮಲೆನಾಡಿನ ಕಡೆಯ ವ್ಯಕ್ತಿಯೊಬ್ಬರು ಸ್ಮಶಾನದ ಎದುರು ಕೈಗಾರಿಕೆ ಸ್ಥಾಪಿಸಿದ್ದರು. ಅವರ ಯೌವನದ ಹೊತ್ತಿನಲ್ಲಿ ಕಾರ್ಖಾನೆ ಚೆನ್ನಾಗಿ ನಡೆಯಿತು. ಹೆಚ್ಚು ಲಾಭ ಬಂತು. ಆಗ ಅವರಿಗೆ ಕೈಗಾರಿಕೆಯ ಎದುರೇ ಸ್ಮಶಾನ ಇರುವುದು ಕಣ್ಣಿಗೆ ಬಿದ್ದೇ ಇರಲಿಲ್ಲ. ಮುಪ್ಪು ಆವರಿಸಿತು. ಬೇರೆಯವರ ಪೈಪೋಟಿ ಕೂಡ ಹೆಚ್ಚಿತು. ಸಹಜವಾಗಿಯೇ ವ್ಯವಹಾರದಲ್ಲಿ ಕುಸಿತ. ಆಗ ಯಾರೋ ಪುಣ್ಯಾತ್ಮರು ಈ ಅವನತಿಗೆ ಸ್ಮಶಾನವೇ ಕಾರಣ ಎಂದು ಗುರುತಿಸಿದರು. ಅದಾದ ಕೆಲವೇ ತಿಂಗಳಲ್ಲಿ ಆ ವ್ಯಕ್ತಿ ಬೇರೊಬ್ಬ ಉದ್ಯಮಿಗೆ ತಮ್ಮ ಕಾರ್ಖಾನೆ ಮಾರಿದರು. ಹೊಸಬರು ಬಂದ ಮೇಲೆ ಕಾರ್ಖಾನೆ ಲಾಭದ ಹಳಿಯಲ್ಲಿದೆ. ಉದ್ಯಮಿ ಮತ್ತಷ್ಟು ಶ್ರಿಮಂತರಾಗಿದ್ದಾರೆ. ಹೀಗಾಗಿ ಅವರ ಕಣ್ಣಿಗೆ ಎದುರಿನ ಸ್ಮಶಾನ ಇನ್ನೂ ಕಂಡಿಲ್ಲ!

Comments
ಈ ವಿಭಾಗದಿಂದ ಇನ್ನಷ್ಟು
ಕನ್ನಡ ಪುಸ್ತಕೋದ್ಯಮದ ಕೊಲಂಬಸ್

ಮಹತ್ವದ ಕೊಡುಗೆ
ಕನ್ನಡ ಪುಸ್ತಕೋದ್ಯಮದ ಕೊಲಂಬಸ್

19 Feb, 2017
ವಿಜ್ಞಾನ ಜಗತ್ತು–  ಎಷ್ಟು ಗೊತ್ತು?

ತಿಳುವಳಿಕೆ
ವಿಜ್ಞಾನ ಜಗತ್ತು– ಎಷ್ಟು ಗೊತ್ತು?

19 Feb, 2017
ಬಡ್ಡಿ ಬಾವಿ

ಮಕ್ಕಳ ಕಥೆ
ಬಡ್ಡಿ ಬಾವಿ

19 Feb, 2017
ಒಲೆ ಬದಲಾಗಿದೆ ಉರಿ ಬದಲಾಗಿಲ್ಲ...

ಅಂತರಂಗದ ವ್ಯತ್ಯಯ
ಒಲೆ ಬದಲಾಗಿದೆ ಉರಿ ಬದಲಾಗಿಲ್ಲ...

19 Feb, 2017
ಬದಲಾವಣೆಯಷ್ಟೇ ಶಾಶ್ವತ!

ವಿಘಟಿತ ಸಂಸಾರ
ಬದಲಾವಣೆಯಷ್ಟೇ ಶಾಶ್ವತ!

19 Feb, 2017