ಪಡಿತರ ಚೀಟಿ: ಅರ್ಜಿ ಸಲ್ಲಿಕೆಗೆ ಚಾಲನೆ

ಹೊಸದಾಗಿ ಪಡಿತರ ಚೀಟಿ ಪಡೆಯುವ ಸಂಬಂಧ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಮರುಚಾಲನೆ ಸಿಕ್ಕಿದೆ. ವಿಧಾನಸಭೆ ಚುನಾವಣೆಯ ನೀತಿಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಗ್ರಾಮೀಣರು ಆಯಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಚಾಮರಾಜನಗರ: ಹೊಸದಾಗಿ ಪಡಿತರ ಚೀಟಿ ಪಡೆಯುವ ಸಂಬಂಧ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಮರುಚಾಲನೆ ಸಿಕ್ಕಿದೆ.
ವಿಧಾನಸಭೆ ಚುನಾವಣೆಯ ನೀತಿಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಗ್ರಾಮೀಣರು ಆಯಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನಗರ ಹಾಗೂ ಪಟ್ಟಣ ಪ್ರದೇಶದವರು RCNEW ಎಂದು ಟೈಪ್ ಮಾಡಿ ಪಕ್ಕದಲ್ಲಿ ಅವರ ಹೆಸರು ನಮೂದಿಸಿ ಮೊಬೈಲ್ 9212357123ಕ್ಕೆ ಎಸ್‌ಎಂಎಸ್ ಕಳುಹಿಸಬೇಕು.

ಕೂಡಲೇ, ಟೋಕನ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ ಕಳುಹಿಸಲಾಗುತ್ತದೆ. ಇದನ್ನು ಪಡೆದು ಚಾಲ್ತಿಯಲ್ಲಿರುವ ಕಾಯಂ ಪಡಿತರ ಚೀಟಿ ಹೊಂದಿದ ಕುಟುಂಬದ ಸದಸ್ಯರೊಬ್ಬರ ಜತೆಗೆ ಅರ್ಜಿದಾರರು ತಮ್ಮ ಮನೆಯ ವಿದ್ಯುತ್ ಬಿಲ್, ಗುರುತಿನಚೀಟಿ (ಚಾಲನಾ ಪರವಾನಗಿ, ಮನೆಯ ಕರಾರು ಪತ್ರ, ಚುನಾವಣಾ ಗುರುತಿನಚೀಟಿ, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಕೂಡ ಬಳಸಬಹುದು)ಯೊಂದಿಗೆ ಹತ್ತಿರದ ಫೋಟೊ ಬಯೊಸೇವಾ ಕೇಂದ್ರಕ್ಕೆ     ಹೋಗಿ ಅಗತ್ಯ ಮಾಹಿತಿ ನೀಡಿ ಸ್ವೀಕೃತಿ ಪಡೆಯಬಹುದು.

ಪಡಿತರ ಚೀಟಿ ಸಿದ್ಧವಾದ ಕೂಡಲೇ ಮೊಬೈಲ್ ಫೋನ್‌ಗೆ ಎಸ್‌ಎಂಎಸ್ ಸಂದೇಶ ರವಾನೆಯಾಗಲಿದೆ. ಅರ್ಜಿದಾರರ ಪಡಿತರ ಚೀಟಿಯ ಸ್ಥಿತಿಗತಿ ಮತ್ತು ಫೋಟೊ ಬಯೊ ಕೇಂದ್ರಗಳ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲೂ ಪಡೆಯಬಹುದು ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಸಂಬಯ್ಯ ತಿಳಿಸಿದ್ದಾರೆ.

ಸೆಕ್ಯುರಿಟಿ ಕೋಡ್ ಕಡ್ಡಾಯ: ಖಾಸಗಿ ಸಂಸ್ಥೆಯವರು 2010ಕ್ಕಿಂತ ಹಿಂದೆ ನೀಡಿರುವ ಕಾಯಂ ಪಡಿತರ ಚೀಟಿಗಳಲ್ಲಿರುವ ಬೆರಳಚ್ಚು ಮುದ್ರೆ (ಬಯೊಮೆಟ್ರಿಕ್) ದೋಷಪೂರಿತವಿದೆ. ಇಂತಹ ಪಡಿತರ ಚೀಟಿದಾರರು ತಮ್ಮ ಕುಟುಂಬದ ಸದಸ್ಯರ ಫೋಟೊ ಮತ್ತು ಬಯೊಮೆಟ್ರಿಕ್ ಪಡೆಯಲು ಇಲಾಖೆಯ ವೆಬ್‌ಸೈಟ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ದೋಷಪೂರಿತ ಕಾಯಂ ಪಡಿತರ ಚೀಟಿ ಹೊಂದಿರುವವರು RCNEW ಎಂದು ಬರೆದು ರೇಷನ್ ಕಾರ್ಡ್ ನಂ ನಮೂದಿಸಿ ಮೊಬೈಲ್ 9212357123ಕ್ಕೆ ಎಸ್‌ಎಂಎಸ್ ಕಳುಹಿಸಬೇಕು. ಈ ರೀತಿ ಎಸ್‌ಎಂಎಸ್  ಮೂಲಕ ನೋಂದಣಿ ಮಾಡಿದವರಿಗೆ ಟೋಕನ್ ಸಂಖ್ಯೆ ಮತ್ತು ಸೆಕ್ಯುರಿಟಿ ಕೋಡ್ ನೀಡಲಾಗುತ್ತದೆ. ಇದನ್ನು ತೋರಿಸಿ ಮೇ ತಿಂಗಳ ಪಡಿತರ ಪಡೆಯಬೇಕು.

ಎಸ್‌ಎಂಎಸ್ ಕಳುಹಿಸಿ ನೋಂದಣಿ ಮಾಡಿಸಿ ಟೋಕನ್ ನಂಬರ್ ಮತ್ತು ಸೆಕ್ಯುರಿಟಿ ಕೋಡ್ ಸಂಖ್ಯೆ ಪಡೆದುಕೊಂಡು ತೋರಿಸಿದರೆ ಮಾತ್ರವೇ ಪಡಿತರ ಮತ್ತು ಸೀಮೆಎಣ್ಣೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಗ್ರಾಮೀಣ ಪ್ರದೇಶದವರು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಪಡಿತರ ಚೀಟಿ ಸಂಬಂಧ ಮಾಹಿತಿ ನೀಡಬೇಕು. ಈ ತಿಂಗಳೊಳಗೆ ಪಡಿತರ ಚೀಟಿ ಪಡೆದವರು ತಮ್ಮ ಕುಟುಂಬದ ಸದಸ್ಯರ ಫೋಟೊ ಮತ್ತು ಸಮೀಪದ ಫೋಟೊ ಬಯೊಸೇವಾ ಕೇಂದ್ರಕ್ಕೆ ನೀಡಬೇಕು. ತಪ್ಪಿದರೆ ಪಡಿತರ ಚೀಟಿಯನ್ನು ರದ್ದುಪಡಿಸಲಾಗುತ್ತದೆ.

ಈ ಹಿಂದೆ ನೀಡಿದ ತಾತ್ಕಾಲಿಕ ಪಡಿತರ ಚೀಟಿ ಹೊಂದಿರುವವರು ಕಾಯಂ ಪಡಿತರ ಚೀಟಿಯನ್ನು ಈ ತಿಂಗಳೊಳಗೆ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಇಲ್ಲವಾದರೆ ತಾತ್ಕಾಲಿಕ ಕಾರ್ಡ್‌ಗಳನ್ನು ಅನರ್ಹವೆಂದು ಪರಿಗಣಿಸಿ ರದ್ದುಪಡಿಸಲಾಗುತ್ತದೆ ಎಂದು ಉಪ ನಿರ್ದೇಶಕ ಸಂಬಯ್ಯ ತಿಳಿಸಿದ್ದಾರೆ.

Comments