ತಿರುಮಲರಾಯರ `ಜ್ಯೋತಿಶ್ಶಾಸ್ತ್ರ'

`ಆಕಾಶದೊಳಗಿನ ಅದ್ಭುತ ಚಮತ್ಕಾರಗಳು' ಅಥವಾ `ಜ್ಯೋತಿಶ್ಶಾಸ್ತ್ರ' ಪ್ರೊ. ಪಾಟೀಲ ತಿರುಮಲರಾವ ಮಧ್ವರಾವ ಅವರ ಕೃತಿ.  ಅಷ್ಟಮ ಡೆಮಿ ಆಕಾರದ 8+104 ಪುಟಗಳ, 1 ರೂಪಾಯಿ 2 ಆಣೆ ಕ್ರಯದ ಈ ಪುಸ್ತಕವು 1931ರಲ್ಲಿ ಪ್ರಕಟಗೊಂಡಿದೆ. ಬೆಂಗಳೂರು ಸಿಟಿಯ ಬೆಂಗಳೂರು ಪ್ರೆಸ್‌ನಲ್ಲಿ ಮುದ್ರಣಗೊಂಡ ಈ ಕೃತಿಯನ್ನು ಧಾರವಾಡದ ನವಜೀವನ ಸಂಘದ ಪರವಾಗಿ, ಆ ಸಂಸ್ಥೆಯ ಸಂಪಾದಕರು ಮತ್ತು ಪ್ರಕಾಶಕರಾದ ಆಲೂರ ವೆಂಕಟರಾಯರು ಪ್ರಕಟಿಸಿರುತ್ತಾರೆ.

`ಆಕಾಶದೊಳಗಿನ ಅದ್ಭುತ ಚಮತ್ಕಾರಗಳು' ಅಥವಾ `ಜ್ಯೋತಿಶ್ಶಾಸ್ತ್ರ' ಪ್ರೊ. ಪಾಟೀಲ ತಿರುಮಲರಾವ ಮಧ್ವರಾವ ಅವರ ಕೃತಿ.  ಅಷ್ಟಮ ಡೆಮಿ ಆಕಾರದ 8+104 ಪುಟಗಳ, 1 ರೂಪಾಯಿ 2 ಆಣೆ ಕ್ರಯದ ಈ ಪುಸ್ತಕವು 1931ರಲ್ಲಿ ಪ್ರಕಟಗೊಂಡಿದೆ. ಬೆಂಗಳೂರು ಸಿಟಿಯ ಬೆಂಗಳೂರು ಪ್ರೆಸ್‌ನಲ್ಲಿ ಮುದ್ರಣಗೊಂಡ ಈ ಕೃತಿಯನ್ನು ಧಾರವಾಡದ ನವಜೀವನ ಸಂಘದ ಪರವಾಗಿ, ಆ ಸಂಸ್ಥೆಯ ಸಂಪಾದಕರು ಮತ್ತು ಪ್ರಕಾಶಕರಾದ ಆಲೂರ ವೆಂಕಟರಾಯರು ಪ್ರಕಟಿಸಿರುತ್ತಾರೆ. ಈ ಕೃತಿಯ ಎಲ್ಲ ಹಕ್ಕುಬಾಧ್ಯತೆಗಳು ವೆಂಕಟರಾಯರಿಗೆ ಸೇರಿವೆ. ಪುಸ್ತಕದ ಮುಖಪುಟದಲ್ಲಿ ಬೃಹತ್‌ಸಂಹಿತೆಯಿಂದ ಆಯ್ದ ಒಂದು ಶ್ಲೋಕವಿದೆ.

ಖಗೋಳ ವಿಜ್ಞಾನಕ್ಕೆ ಮೊದಲಿಗೆ ಜ್ಯೋತಿಶ್ಶಾಸ್ತ್ರವೆಂಬ ಹೆಸರಿತ್ತು. ಕನ್ನಡ ಭಾಷೆಯಲ್ಲಿ ಖಗೋಳ ವಿಜ್ಞಾನವನ್ನು ಕುರಿತು 1874ರಿಂದಲೇ ಪುಸ್ತಕಗಳು ಹೊರಬಂದಿವೆ. 1874ರಲ್ಲಿ ಚಿಂತಾಮಣಿ ರಘೂನಾಥಾಚಾರಿ ಎನ್ನುವವರು `ಶುಕ್ರಗ್ರಸ್ತ ಸೂರ್ಯಗ್ರಹಣ' ಹೆಸರಿನ ಕೃತಿ ರಚಿಸಿದ್ದು ಅವರು ಇದರ ಇಂಗ್ಲಿಷ್ - ಉರ್ದು ಅವತರಣಿಕೆಗಳನ್ನೂ ಹೊರತಂದಿರುತ್ತಾರೆ.

ಇದರ ಕನ್ನಡ ಮತ್ತು ಇಂಗ್ಲಿಷ್ ಅವತರಣಿಕೆಗಳನ್ನು ದೀರ್ಘ ವಿವರಣೆಗಳೊಂದಿಗೆ ಬೆಂಗಳೂರಿನ ಜವಹರಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ. ಬಿ.ಎಸ್. ಶೈಲಜ ಅವರು ಬೆಂಗಳೂರ್ ಅಸೋಸಿಯೇಷನ್ ಆಫ್ ಸೈನ್ಸ್ ಎಜುಕೇಷನ್ ವತಿಯಿಂದ 2012ರಲ್ಲಿ ಪ್ರಕಟಿಸಿರುತ್ತಾರೆ. 1884ರಲ್ಲಿ ಮಂಗಳೂರಿನ ಬಾಸೆಲ್ ಮಿಷನ್ ಬುಕ್ ಅಂಡ್ ಟ್ರಾಕ್ಟ್ ಡೆಪಾಸಿಟರಿಯಿಂದ `ಗ್ರಹಣಗಳಾಗುವುದು ಹ್ಯಾಗೆ', `ಗ್ರಹಗಳೆಂದರೇನು?' ಹಾಗೂ 1891ರಲ್ಲಿ `ಚುಕ್ಕಿಗಳೂ ಬಾಲಚುಕ್ಕಿಗಳೂ' ಎಂಬ 3 ಪುಸ್ತಕಗಳು, 1895ರಲ್ಲಿ ವೆಸ್ಲಿಯನ್ ಮಿಷನ್ ಪ್ರೆಸ್‌ನಿಂದ `ಗ್ರಹಣಗಳು' (ಸಚಿತ್ರ).

1914ರಲ್ಲಿ ಸಿ. ಚಿಕ್ಕಣ್ಣ ಅವರ `ದೃಕ್ ಸಿದ್ಧಾಂತ ದರ್ಪಣಂ', 1918ರಲ್ಲಿ ನಂಗಪುರಂ ವೆಂಕಟೇಶ ಅಯ್ಯಂಗಾರ್ ಅವರ `ಸೂರ್ಯ ಸಚಿತ್ರ' 1921ರಲ್ಲಿ ಎಂ. ರಾಮಬ್ರಹ್ಮ ಅವರ ಸೃಷ್ಟಿವ್ಯಾಪಾರಗಳ ನಿರೀಕ್ಷಣೆ ಹೊರಬಂದಿದೆ. 1928ರಲ್ಲಿ ಎಚ್.ಈ. ಲಿಂಗಣ್ಣ ಅವರ `ಸಚಿತ್ರ ಖಗೋಳ ಬಾಲಬೋಧೆ', 1930ರಲ್ಲಿ ಸಿ. ಚಿಕ್ಕಣ್ಣ ಅವರ `ಖಗೋಳ ವಿನೋದಗಳು', 1931ರಲ್ಲಿ ನಂಗಪುರಂ ವೆಂಕಟೇಶ ಅಯ್ಯಂಗಾರ್ `ಜೋತಿರ್ವಿನೋದಿನಿ', ಮುಂತಾದ ಹಲವಾರು ಕೃತಿಗಳು ಖಗೋಳ ವಿಜ್ಞಾನವನ್ನು ಕುರಿತು ಪ್ರಕಟವಾಗಿವೆ.

  ಪ್ರಸ್ತಾವನೆಯಲ್ಲಿ ಆಲೂರ ವೆಂಕಟರಾಯರು “ಶ್ರೀ ಪರಮಾತ್ಮನ ಕೃಪೆಯಿಂದ ನವಜೀವನ ಗ್ರಂಥಭಂಡಾರದ ಮೊದಲನೆಯ ಗ್ರಂಥವಾದ `ಆಕಾಶದೊಳಗಿನ ಅದ್ಭುತ ಚಮತ್ಕಾರಗಳು' ಎಂಬೀ ಜ್ಯೋತಿಶ್ಶಾಸ್ತ್ರದ ಗ್ರಂಥವು ಈಗ ಹೊರಟಿದೆ. ಗಹನವಾದ ವಿಷಯಗಳನ್ನು ಅತ್ಯಂತ ಸುಲಭವಾಗಿಯೂ ಮನೋರಂಜಕವಾಗಿಯೂ ತಿಳಿಹಿಸುವುದೇ ಈ ಗ್ರಂಥಭಂಡಾರದ ಮುಖ್ಯ ಉದ್ದೇಶ.

ದೊಡ್ಡ ಗ್ರಂಥಗಳನ್ನು ಬರೆಯುವುದಕ್ಕಿಂತಲೂ ಇಂತಹ ಸಣ್ಣ ಪುಸ್ತಕಗಳನ್ನು ಬರೆಯುವುದು ಬಹಳ ಬಿಗಿಯಾದ ಕೆಲಸವೆಂಬುದನ್ನು ಸುಶಿಕ್ಷಿತರಿಗೆ ಹೇಳಬೇಕಾದುದಿಲ್ಲ. ಅದರಲ್ಲಿಯೂ ಕರ್ನಾಟಕದಂಥ ಶಿಕ್ಷಣ ಪ್ರಸಾರವು ತೀರ ಕಡಿಮೆಯಿರುವ ಪ್ರಾಂತದಲ್ಲಿ ಸಾಮಾನ್ಯರಿಗೂ ಸುಬೋಧವಾಗುವಂತೆ ಬರೆಯುವುದು ಬಹಳ ಕಠಿಣ ಕೆಲಸ. ನಾವೇನೋ ಅದನ್ನು ಆದಷ್ಟು ಮಟ್ಟಿಗೆ ತೃಪ್ತಿಕರವಾಗುವಂತೆ ಮಾಡುವುದಕ್ಕೆ ಪ್ರಯತ್ನಿಸಿರುವೆವು” ಎಂದು ತಮ್ಮ ಸಂಸ್ಥೆಯ ಉದ್ದೇಶವನ್ನು ಸ್ಪಷ್ಟೀಕರಿಸಿರುತ್ತಾರೆ.

ಮುನ್ನುಡಿಯಲ್ಲಿ ತಿರುಮಲರಾಯರು- “ವಿಷಯವನ್ನು ಏನೂ ಅರಿಯದವರಿಗೆ ಕೂಡ ವಿಷಯ ಜ್ಞಾನವುಂಟಾಗಬೇಕೆಂದು ತಿಳಿದು ಈ ಗ್ರಂಥವು ಆದಷ್ಟು ಸುಲಭವಾಗಿ ಬರೆಯಲ್ಪಟ್ಟಿದೆ. ಜ್ಯೋತಿಶ್ಶಾಸ್ತ್ರದ ಜ್ಞಾನವನ್ನು ವಿಶೇಷವಾಗಿ ಮಾಡಿಕೊಡುವುದಕ್ಕಿಂತ ಜಿಜ್ಞಾಸೆ ಹುಟ್ಟಿಸುವುದೇ ಮುಖ್ಯ ಧ್ಯೇಯವಾಗಿದೆ. `ಆಕಾಶರಾಜ ಪಟ್ಟಣ ಅಥವಾ ಖಗೋಳ' ಎಂಬೊಂದು ಪ್ರಕರಣದಲ್ಲಿ ಮಾತ್ರ ತತ್ವಗಳನ್ನು ತಿಳಿಸುವ ಪ್ರಯತ್ನ ಮಾಡಲ್ಪಟ್ಟಿದೆ. ಅದು ತುಸು ಬಿಗಿಯಾಗಿದ್ದರೂ ಅಪರಿಹಾರ್ಯವಾಗಿದೆ. ಮಿಕ್ಕವುಗಳು ಮನೋರಂಜಕವಾಗಿವೆ.

ಜಿಜ್ಞಾಸೆಯು ಜ್ಞಾನದ ಮೂಲವು, ಜ್ಞಾನದಿಂದ ಪ್ರಗತಿಯು, ಪ್ರಗತಿಯಿಂದ ಸೌಖ್ಯವುಂಟಾಗುವುದು. ಈ ಗ್ರಂಥವು ಹೀಗೆ ಸೌಖ್ಯಸಾಧನದ ಒಂದು ಮಾರ್ಗ ಆಗಲೆಂಬುದಿಷ್ಟೆ ನನ್ನ ಬೇಡಿಕೆ” ಎಂದು ತಮ್ಮ ಕೃತಿಯ ಧ್ಯೇಯೋದ್ದೇಶಗಳನ್ನು ಹೇಳಿರುತ್ತಾರೆ.

ಮುನ್ನುಡಿಯಲ್ಲಿ ಇನ್ನೊಂದೆಡೆ ಗ್ರಂಥಕರ್ತರು- “ಈ ಪುಸ್ತಕದ 4ನೇ ಅಧ್ಯಾಯದಲ್ಲಿ ಜ್ಯೋತಿರ್ದೇವಿಯ ಮುಂದೆ ಆಕೆಯ ಭಕ್ತರು ಮಾಡಿದ ತಪಶ್ಚರ್ಯವು ವರ್ಣಿಸಲ್ಪಟ್ಟಿರುವುದು. ಆಲೂರ ವೆಂಕಟರಾಯರು ಕರ್ನಾಟಕ ಶಾರದೆಯನ್ನು ಕುರಿತು ಮಾಡಿದ ಕಡುತರ ತಪಶ್ಚರ್ಯದ್ದೇ ಈ ಪುಸ್ತಕವು ದೃಶ್ಯಫಲವಾಗಿದೆ” ಎಂದು ಹೃದಯಪೂರ್ವಕವಾಗಿ ಆಲೂರ ವೆಂಕಟರಾಯರ ಪ್ರೇರಣೆ ಸ್ಮರಿಸಿಕೊಂಡಿದ್ದಾರೆ.

ಈ ಪುಸ್ತಕದ ಅನುಕ್ರಮಣಿಕೆಯಲ್ಲಿನ 16 ಪ್ರಕರಣಗಳು ಹೀಗಿವೆ: ಅದ್ಭುತವಾದ ಆನಂದ, ಹಳೆಯ ಜ್ಞಾನಸಂಪತ್ತು, ಇಂದಿನ ಸ್ಥಿತಿ, ತಪಶ್ಚರ್ಯ, ಆಕಾಶರಾಜ ಪಟ್ಟಣ ಅಥವಾ ಖಗೋಳ, ಆಕಾಶರಾಜ ಅಥವಾ ಸೂರ್ಯ, ಚಂದ್ರ, ನಮ್ಮ ಮನೆ, ಸೂರ್ಯನ ಸಂಸಾರ ಅಥವಾ ಗ್ರಹಗಳು, ಗ್ರಹಣಗಳು, ನಕ್ಷತ್ರಗಳು, ವಿಶ್ವದ ಉತ್ಪತ್ತಿ, ಆಧುನಿಕ ವೇದಯಂತ್ರಗಳು, ಪ್ರಾಚೀನ ಇತಿಹಾಸ, ಭವಿಷ್ಯ ಪುರಾಣ, ಅಖಿಲಾಂಡ ಕೋಟಿ ಬ್ರಹ್ಮಾಂಡನಾಯಕ ಹಾಗೂ ಪರಿಶಿಷ್ಟ-1- ರಾಶಿಗಳು, ನಕ್ಷತ್ರಗಳು.

6ನೆಯ ಆಕಾಶರಾಜ ಅಥವಾ ಸೂರ್ಯ ಎಂಬ ಪ್ರಕರಣದಲ್ಲಿ ಮಾತ್ರ ಎರಡು ಪೂರಕ ಚಿತ್ರಗಳನ್ನು ನೀಡಲಾಗಿದೆ. ಅದ್ಭುತವಾದ ಆನಂದ ಎನ್ನುವ ಪ್ರಕರಣದ ಒಂದು ವಾಕ್ಯವೃಂದ ಇಂತಿದೆ: `ಜ್ಯೋತಿಶ್ಶಾಸ್ತ್ರವೆಂದರೆ ಈ ನಭೋಮಂಡಲದ ಗೂಢವನ್ನು ಅರಿತುಕೊಳ್ಳುವ ಶಾಸ್ತ್ರವು. ಇದು ನಮ್ಮ ವಿಶ್ವದ ಕಲ್ಪನೆಯನ್ನು ವಿಶಾಲವಾಗಿ ಮಾಡಿದೆ.

ಪೃಥ್ವಿಯೆಂದರೆ ದೊಡ್ಡದೊಂದು ಲೋಕ: ಅದರ ಸುತ್ತಲೂ ತಿರುಗುವ ಸೂರ್ಯಚಂದ್ರರೆಂದರೆ ತೇಜಃಪುಂಜವಾದ ಎರಡು ಚಿಕ್ಕ ಗೋಲಗಳು: ತಾರಕೆಗಳೆಂದರೆ ಆಕಾಶದಲ್ಲಿ ಹೊನ್ನೆಯ ಹುಳುಗಳಂತೆ ಮಿಣಿಮಿಣಿ ಮಿನುಗುವ ಚಿಕ್ಕ ಜ್ಯೋತಿಗಳು- ಎಂಬ ಕಲ್ಪನೆಯು ಈಗ ಹೋಗಿದೆ, ಜ್ಯೋತಿಶ್ಶಾಸ್ತ್ರದ ಶೋಧಗಳಿಂದ ಈ ವಿಶ್ವವೆಂಬುದು ಅನಂತವಾದುದೂ ಅಪಾರವಾದುದೂ ಆಗಿರುತ್ತದೆಂಬ ಮಾತು ನಮಗೆ ಗೊತ್ತಾಗಿದೆ. ಮೊದಲು ವಾಮನಮೂರ್ತಿಯಾಗಿದ್ದು ಈಗ ಅದು ಬೆಳೆದು ಪೃಥ್ವಿ, ಅಂತರಿಕ್ಷ ಮತ್ತು ಆಕಾಶಗಳನ್ನು ಅಳೆಯುವ ತ್ರಿವಿಕ್ರಮಮೂರ್ತಿಯಾಗಿದೆ.

ಹಿರಿಯರು ಮಕ್ಕಳಿಗೆ ದೊಡ್ಡವರಾಗಿರೆಂದೂ ಆಯುಷ್ಮಂತರಾಗಿರೆಂದೂ ಆಶೀರ್ವದಿಸುವುದಿಲ್ಲವೇ? ಹಾಗೆ ನಮ್ಮ ಜ್ಯೋತಿಶ್ಶಾಸ್ತ್ರವು ನಮ್ಮ ವಿಶ್ವವನ್ನು ದೊಡ್ಡದಾಗಿರಲೆಂದು ಹರಸಿರುವುದು. ಭೂಗರ್ಭ ಶಾಸ್ತ್ರವು ಅದಕ್ಕೆ ಆಯುಷ್ಮಂತವಾಗೆಂದು ಹರಸುವುದು. ಎಂದರೆ ಜ್ಯೋತಿಶ್ಶಾಸ್ತ್ರದ ಶೋಧಗಳಿಂದ ನಮ್ಮ ವಿಶ್ವದ ಕಲ್ಪನೆಯು ಈಗ ಮಿತಿಮೀರಿ ಬೆಳೆದಿದೆ. ಭೂಮಿಯ ಹೊಟ್ಟೆಯೊಳಗಿರುವ ಪದಾರ್ಥಗಳ ಶೋಧಗಳಿಂದ ಪೃಥ್ವಿಯ ಆಯುಷ್ಯವು ಬೆಳೆದು, ಅದು ಹುಟ್ಟಿ ಲಕ್ಷಾವಧಿ ವರುಷಗಳಾಗಿರಬೇಕೆಂದು ಸಿದ್ಧವಾಗಿದೆ.

ಈ ಪ್ರಕಾರವಾಗಿ ನಮ್ಮ ವಿಶ್ವದ ಆಕಾರವನ್ನು ಅಸಂಖ್ಯವಾಗಿ ಬೆಳೆಸಿದ ಈ ಜ್ಯೋತಿಶ್ಶಾಸ್ತ್ರವನ್ನು ತಿಳಿದುಕೊಳ್ಳುವ ಇಚ್ಛೆಯು ಯಾರಿಗೆ ಉಂಟಾಗಲಿಕ್ಕಿಲ್ಲ'. ಇಲ್ಲಿನ ಕನ್ನಡದ ಬರವಣಿಗೆಯ ಶೈಲಿಯು ಒಳ್ಳೆಯ ಸೃಜನಶೀಲ ನಿರೂಪಣೆಯ ರೀತಿಯಲ್ಲಿದ್ದು ವಿಷಯ ಮನನ ಮಾಡಿಕೊಳ್ಳುವವರಿಗೆ ಸುಲಭವಾಗಿ ಗ್ರಹಿಕೆಗೆ ದಕ್ಕುತ್ತದೆ. ಭಾಷೆಯು ಉಲ್ಲಾಸದಾಯಕವಾಗಿರುವಂತೆ ನಿರೂಪಿಸಿರುವುದು ಪಾಟೀಲ ತಿರುಮಲರಾಯರ ವೈಶಿಷ್ಟ್ಯ.

ಪರಿಶಿಷ್ಟದಲ್ಲಿ ಮೇಷ, ವೃಷಭ ಮುಂತಾದ 12 ರಾಶಿಗಳಿಗೂ ಅಶ್ವಿನಿ, ಭರಣಿ ಮುಂತಾದ 27 ನಕ್ಷತ್ರಗಳಿಗೆ ಇಂಗ್ಲಿಷ್ ಪರ್ಯಾಯಗಳನ್ನೂ ನೀಡಿರುವುದಲ್ಲದೆ ತಾವು ಅಧ್ಯಯನ ಮಾಡಿದ ಹಲವಾರು ಇಂಗ್ಲಿಷ್ ಕೃತಿಗಳ ಪಟ್ಟಿಯನ್ನು ಲೇಖಕರು ನೀಡಿರುತ್ತಾರೆ. 20ನೇ ಶತಮಾನದ ಆರಂಭದ ಕಾಲಘಟ್ಟದಲ್ಲಿ ಕನ್ನಡದಲ್ಲಿ ಬಂದ ವಿಜ್ಞಾನಗ್ರಂಥಗಳ ಸಾಲಿನಲ್ಲಿ ಖಗೋಳ ವಿಜ್ಞಾನವನ್ನು ಓದುಗರಿಗೆ ಸರಳವಾಗಿ ನಿರೂಪಿಸಿರುವ ಈ ಕೃತಿಯು ಕನ್ನಡ ವಾಜ್ಞಯಕ್ಕೆ ಒಂದು ಮೌಲಿಕ ಸೇರ್ಪಡೆ.

Comments