ಕಲ್ಲಡ್ಕ: ಬೀಡಿ ಕಾರ್ಮಿಕರಿಂದ ಪ್ರತಿಭಟನೆ

`ಆಧಾರ್ ಕಾರ್ಡ್' ಕಡ್ಡಾಯಕ್ಕೆ ವಿರೋಧ

ವಿದ್ಯಾರ್ಥಿವೇತನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮ ಖಂಡನೀಯ.  ನಗರ ಪ್ರದೇಶಕ್ಕೆ ಸೀಮಿತವಾಗಿರುವ ಆಧಾರ್ ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು ಗ್ರಾಮೀಣ ಮಟ್ಟಕ್ಕೂ ವಿಸ್ತರಿಸಬೇಕು ಎಂದು ಜಿಲ್ಲಾ ಬೀಡಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಪಿ.ಸಂಜೀವ ಆಗ್ರಹಿಸಿದ್ದಾರೆ.

ಬಂಟ್ವಾಳ: ವಿದ್ಯಾರ್ಥಿವೇತನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮ ಖಂಡನೀಯ.  ನಗರ ಪ್ರದೇಶಕ್ಕೆ ಸೀಮಿತವಾಗಿರುವ ಆಧಾರ್ ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು ಗ್ರಾಮೀಣ ಮಟ್ಟಕ್ಕೂ ವಿಸ್ತರಿಸಬೇಕು ಎಂದು ಜಿಲ್ಲಾ ಬೀಡಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಪಿ.ಸಂಜೀವ ಆಗ್ರಹಿಸಿದ್ದಾರೆ.

ವಿದ್ಯಾರ್ಥಿ ವೇತನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ, ಬಂಟ್ವಾಳ ತಾಲ್ಲೂಕಿನ ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್ ಮತ್ತು ಪಾಣೆಮಂಗಳೂರು ಫಿರ್ಕಾ ಬೀಡಿ ಆಂಡ್ ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ನೇತೃತ್ವದಲ್ಲಿ ಕಲ್ಲಡ್ಕದ ಬೀಡಿ ಕಾರ್ಮಿಕರ ಚಿಕಿತ್ಸಾಲಯ ಎದುರು  ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

`ಬೀಡಿ ಕಾರ್ಮಿಕರಿಗೆ ಸಮರ್ಪಕವಾಗಿ ಕ್ಷೇಮನಿಧಿ ನೀಡುವಲ್ಲಿ ವಿಫಲವಾಗಿರುವ ಸರ್ಕಾರ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದಕ್ಕೂ ವಿಳಂಬ ಧೋರಣೆ ಅನುಸರಿಸುತ್ತಿದೆ' ಎಂದು ಅವರು ಆರೋಪಿಸಿದರು.

ಯೂನಿಯನ್ ಪ್ರಧಾನ ಕಾರ್ಯದರ್ಶಿ ಬಿ.ಶೇಖರ್, ಅಧ್ಯಕ್ಷೆ ಉಮಾವತಿ ಕುರ್ನಾಡು ಮತ್ತಿತರರು ಮಾತನಾಡಿ, `ಕಾರ್ಮಿಕರು ಮೂಲಸೌಕರ್ಯ ಪಡೆಯಲು ಸಂಘಟಿತ ಹೋರಾಟ ನಡೆಸಬೇಕಿದೆ' ಎಂದರು.

ಮಂಗಳೂರಿನಲ್ಲಿ ಬೀಡಿ ಕಾರ್ಮಿಕರ ಕಲ್ಯಾಣ ಇಲಾಖೆ ಯೋಜನೆಯಡಿ ಸುಸಜ್ಜಿತ ಆಸ್ಪತ್ರೆ ಮತ್ತು ಉಪಕಚೇರಿ ಆರಂಭಿಸಬೇಕು. ಸ್ವಾಸ್ಥ್ಯ ವಿಮೆ ಯೋಜನೆಯಡಿ ಸ್ಮಾರ್ಟ್ ಕಾಡ್ ವಿತರಿಸಬೇಕು. ವಿದ್ಯಾರ್ಥಿವೇತನ ಅವಧಿ ವಿಸ್ತರಿಸಬೇಕು. ವೈದ್ಯಕೀಯ ವೆಚ್ಚಕ್ಕೆ ಮತ್ತು ಮನೆ ನಿರ್ಮಾಣಕ್ಕೆ ತ್ವರಿತ ಸಹಾಯಧನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಂದಿ ಮಹಿಳೆಯರು ಘೋಷಣೆ ಕೂಗಿದರು. ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಹೆನ್ರಿ ಲೋಬೊ, ಉಪಾಧ್ಯಕ್ಷ ಕೆ.ಈಶ್ವರ, ಪ್ರಧಾನ ಕಾರ್ಯದರ್ಶಿ ಸುರೇಶ ಕುಮಾರ್, ಪ್ರಮುಖರಾದ  ಸುನಿತಾ ಗೋಪಾಲ, ಕವಿತಾ ದಿನೇಶ, ಸರಸ್ವತಿ ಕಡೇಶ್ವಾಲ್ಯ, ಶಮಿತ, ರತಿ ಎಸ್.ಭಂಡಾರಿ, ಕೆ.ಜಯಂತ  ಮತ್ತಿತರರಿದ್ದರು.

Comments